ಅವಿಸ್ಮರಣೀಯ ಅಮೆರಿಕ – ಎಳೆ 69
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಕರಿ ಜನಾಂಗದವರ ಮೇಲಿನ ಕೀಳು ಭಾವನೆಯು ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಸ್ಮಾರಕದಲ್ಲಿ ದಟ್ಟವಾಗಿ ಎದ್ದು ತೋರುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾ; ಹಲವು ಮೈಲಿಗಳ ವರೆಗೆ ಕಾಣುವಂತಹ, ಅತ್ಯಂತ ಎತ್ತರದ ಗೋಪುರದ ವೀಕ್ಷಣೆಗೆ ಹೊರಟಿತು…ನಮ್ಮ ಗುಂಪು. ಈ ಗೋಪುರವು ಪ್ರವಾಸಿಗರ ಅತ್ಯಂತ ಕುತೂಹಲಕಾರಿ ಹಾಗೂ ಆಶ್ಚರ್ಯಜನಕ ತಾಣವಾಗಿದೆ.
ಜಾರ್ಜ್ ವಾಷಿಂಗ್ಟನ್ ಸ್ಮಾರಕ(George Washigton Monument)
1775ರಿಂದ 1784ರ ವರೆಗಿನ ಕ್ರಾಂತಿಕಾರಿಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು; ಬಳಿಕ, 1789ರಿಂದ 1797ರ ವರೆಗೆ ಅಮೆರಿಕದ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗ್ಟನ್ ಅವರ ಗೌರವಾರ್ಥವಾಗಿ ನಿರ್ಮಾಣಗೊಂಡ 555ಅಡಿ ಎತ್ತರದ ಈ ಗೋಪುರಾಕೃತಿಯು ಚೌಕ ಸೂಜಿ ಮೊನೆಯಂತಿದ್ದು; ಇದರ ನಿರ್ಮಾಣವಾಗಿ ಹಲವು ವರ್ಷಗಳ ಕಾಲ ಜಗತ್ತಿನಲ್ಲೇ ಅತೀ ಎತ್ತರದ ರಚನೆಯೆಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಗೋಪುರದ ಎತ್ತರವು ತಳಭಾಗದ ಸುತ್ತಳತೆಯ ಹತ್ತುಪಟ್ಟು ಮಾತ್ರ ಇರಬಹುದೆಂಬ ವಾಸ್ತು ಶಾಸ್ತ್ರಜ್ಞರ ನಿಯಮದಂತೆ ಇದರ ಎತ್ತರವನ್ನು ನಿಗದಿಪಡಿಸಲಾಗಿದೆ. 106ಎಕರೆ ಪ್ರದೇಶದ ಪಾರ್ಕಿನ ಮಧ್ಯಭಾಗದಲ್ಲಿರುವ ದಿಬ್ಬದ ಮೇಲಿರುವ ಇದರ ಅಡಿಪಾಯವು 37ಅಡಿ ದಪ್ಪಗಿದ್ದು, ತಳಭಾಗದ ಗೋಡೆಯು 15 ಅಡಿ ದಪ್ಪವಿದೆ. ತುತ್ತ ತುದಿಯ ಗೋಡೆಯ ದಪ್ಪ ಕೇವಲ ಒಂದೂವರೆ ಅಡಿಗಳಷ್ಟಿದ್ದು ಫಿರಮಿಡ್ ಆಕೃತಿಯನ್ನು ಹೋಲುತ್ತದೆ. ಅದರ ಮೇಲ್ಭಾಗದಲ್ಲಿ ಅಲ್ಯುಮಿನಿಯಂನ ಮಿಂಚು ನಿರೋಧಕಗಳನ್ನು ಅಳವಡಿಸಲಾಗಿದೆ.
ಈ ಗೋಪುರದ ನಿರ್ಮಾಣಕ್ಕೆ, ಜಾರ್ಜ್ ವಾಷಿಂಗ್ಟನ್ ಅವರು ದೇಶದ ಅಧ್ಯಕ್ಷರಾಗುವ ಮೊದಲೇ ಯೋಜನೆ ರೂಪುಗೊಂಡಿತ್ತು ಎಂಬುದು ನಿಜಕ್ಕೂ ಆಶ್ಚರ್ಯದ ವಿಷಯವಾಗಿದೆ. ಅಮೃತ ಶಿಲೆ, ಗ್ರಾನೈಟ್ ಮತ್ತು ವಿಶೇಷವಾದ ನೀಲಿ ಶಿಲೆಗಳಿಂದ ರೂಪುಗೊಂಡ ಈ ಗೋಪುರದ ನಿರ್ಮಾಣ ಕಾರ್ಯವು 1848ರಲ್ಲಿ ಪ್ರಾರಂಭವಾಗಿ 1854ರ ವರೆಗೆ, 150ಅಡಿಗಳಷ್ಟು ಎತ್ತರದಲ್ಲಿ ಆರ್ಥಿಕ ಮುಗ್ಗಟ್ಟಿನಿಂದಾಗಿ ನಿಂತುಹೋಯಿತು. ಆ ಬಳಿಕ, ದೀರ್ಘವಾದ 23ವರ್ಷಗಳ ಅಂತರದ ಬಳಿಕ 1879ರಲ್ಲಿ ಪುನ: ಪ್ರಾರಂಭವಾಗಿ 1884ರಲ್ಲಿ ಪೂರ್ಣಗೊಂಡಿತು. ಇನ್ನೊಂದು ವಿಚಿತ್ರವೆಂದರೆ, ಈ ಗೋಪುರವು ಮೂಲ ನಕ್ಷೆಗಿಂತ ತೀರಾ ಭಿನ್ನವಾಗಿ ರೂಪುಗೊಂಡಿದೆ! 2011ರಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಹೆಚ್ಚಿನ ಅನಾಹುತವೇನೂ ಸಂಭವಿಸದೆ ಉಳಿದುದು ಇದರ ದೃಢತೆಯನ್ನು ಸೂಚಿಸುತ್ತದೆ.
ನಮ್ಮ ವಾಹನದಲ್ಲಿ ಹತ್ತು ನಿಮಿಷಗಳ ದೂರ ಪಯಣಿಸಿದಾಗ, ಗೋಪುರದ ಸಮೀಪದ ವರೆಗೆ ವಾಹನದಲ್ಲಿ ಹೋಗುವಂತಿಲ್ಲ ಎಂದು ತಿಳಿಯಿತು. ವಾಹನ ನಿಲುಗಡೆಗಾಗಿ ಇರುವ ತಾಣದಲ್ಲಿ ಕಂಪ್ಯೂಟರೀಕೃತ ಯಂತ್ರದ ಸಹಾಯದಿಂದ ನಿಗದಿತ ಹಣ ರವಾನಿಸಿ, ನಿಗದಿತ ಸಮಯದ ವರೆಗೆ ಮಾತ್ರ ವಾಹನ ನಿಲ್ಲಿಸಲು ಅವಕಾಶವಿದೆ. ಒಂದು ನಿಮಿಷ ಹೆಚ್ಚಾದರೂ ವಾಹನವನ್ನು ತೆಗೆಯುವಂತಿಲ್ಲ, ದಂಡ ಕಟ್ಟಲೇಬೇಕು. ಹಾಗೆಯೇ ವಾಹನವನ್ನಿರಿಸಿ, ಸ್ಮಾರಕದತ್ತ ಇನ್ನೂ ಸ್ವಲ್ಪ ದೂರ ನಡೆಯಬೇಕಿತ್ತು. ಅದಾಗಲೇ ನಡೆದು ಆಯಾಸಗೊಂಡಿದ್ದ ನಮ್ಮವರು ಮತ್ತು ಮಗಳು, ಪುಟ್ಟ ಮೊಮ್ಮಗನ ಜೊತೆ ಅಲ್ಲಿಯ ಪಾರ್ಕಿನಲ್ಲಿ ಆರಾಮದಲ್ಲಿ ಕುಳಿತರು. ನಾನು ಮತ್ತು ಮೊಮ್ಮಗಳು ಅಳಿಯನ ಜೊತೆ ದೌಡಾಯಿಸಿದೆವು…ಯಾಕೆಂದರೆ, ಒಂದು ಗಂಟೆಯ ಸಮಯದ ಒಳಗೆ ನಾವು ಅಲ್ಲಿ ಎಲ್ಲವನ್ನೂ ವೀಕ್ಷಿಸಿ ಹಿಂತಿರುಗಿ ವಾಹನವನ್ನು ಪಡೆಯಬೇಕಿತ್ತು.
ಅತೀ ವಿರಳ ಪ್ರವಾಸಿಗರು ಅದರತ್ತ ನಡೆದಿದ್ದರು. ಸ್ವಚ್ಛ, ಸುಂದರ ಬಟ್ಟ ಬಯಲಿನ ನಡುವೆ ಗೆರೆ ಎಳೆದಂತಿರುವ ಚಂದದ ರಸ್ತೆಯಲ್ಲಿ ನಡೆದಷ್ಟು ಎತ್ತರದ ದಿಬ್ಬದತ್ತ ತಲಪುತ್ತಿಲ್ಲ… ಹತ್ತಿರವೆಂದು ತೋರುತ್ತಾ ದೂರ ಸರಿಯುವಂತೆ ಕಾಣುತ್ತಿದೆ! ನಡು ಮಧ್ಯಾಹ್ನದ ಬಿಸಿಲ ಝಳ ಬೇರೆ. ಆಯಾಸದಿಂದ, ನನಗೂ ಒಮ್ಮೆ ಯಾಕಾಗಿ ಬಂದೆನೋ ಅನಿಸಿದ್ದು ಸುಳ್ಳಲ್ಲ. ಆದರೂ ಸ್ಮಾರಕವನ್ನು ಸಮೀಪದಿಂದ ನೋಡಬೇಕೆನ್ನುವ ಉತ್ಸಾಹವು ಕುಗ್ಗಲಿಲ್ಲವೆನ್ನಿ. ಪುಟ್ಟ ಮೊಮ್ಮಗಳ ಕೈಹಿಡಿದು ಓಡು ನಡಿಗೆಯಲ್ಲಿ ಹೋದರೂ ಸುಮಾರು ಇಪ್ಪತ್ತು ನಿಮಿಷಗಳು ಆಗಲೇ ಕಳೆದಿತ್ತು. ನಮ್ಮ ಮುಂಭಾಗದಲ್ಲಿ ಸಪಾಟಾದ, ಚೂಪು ಮೊನೆಯ ಪೆನ್ಸಿಲಿನಂತಿರುವ ಸ್ಮಾರಕ ಗೋಪುರವು ಆಗಸದೆತ್ತರ ನಿಂತಿತ್ತು. ಗೋಪುರದಿಂದ ಸುಮಾರು ನೂರು ಮೀಟರ್ ದೂರಕ್ಕೆ ವೃತ್ತಾಕಾರದಲ್ಲಿ ಅದರ ಸುತ್ತಲೂ ಇರುವ ಬಲವಾದ ಕಬ್ಬಿಣದ ಬೇಲಿಯ ಹೊರಭಾಗದಲ್ಲಿರುವ ರಸ್ತೆಯಲ್ಲಿ ಸಾಗುತ್ತಾ, ಸ್ಮಾರಕದ ಬಳಿಗೆ ಹೋಗುವ ಸಣ್ಣ ಗೇಟಿನ ಬಳಿ ತಲಪಿದಾಗ ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿದಂತೆ, ಅದಕ್ಕೆ ಬಲವಾದ ಬೀಗ ಜಡಿಯಲಾಗಿತ್ತು. ರಿಪೇರಿ ಕೆಲಸ ನಡೆಯುತ್ತಿದ್ದುದರಿಂದ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧವಿರುವುದು ತಿಳಿದುಬಂತು. ಬಹಳ ನಿರಾಸೆಯಾದರೂ, ಹೊರಗಿನಿಂದಲಾದರೂ ನೋಡಿದೆವಲ್ಲಾ ಎನ್ನುವ ತೃಪ್ತಿಯಿಂದ ಸ್ಮಾರಕಕ್ಕೆ ಸುತ್ತುವರಿದ ರಸ್ತೆಯಲ್ಲಿ ಸಾಗಿ ಹಿಂತಿರುಗಲು ನಿರ್ಧರಿಸಿದೆವು. ಹಾಗೆಯೇ ಹತ್ತು ನಿಮಿಷ ನಡೆದಾಗ ಅಲ್ಲಿಯೂ ರಸ್ತೆ ತಡೆ ಇರಿಸಿದ್ದರು. “ಅಯ್ಯೋ.. ಇದೇನು? ಪಾಪಿ ಹೋದಲ್ಲಿ ಮೊಣಕಾಲು ನೀರು ಎಂಬಂತೆ ವಿಘ್ನಗಳು!!” ಎಂದುಕೊಂಡು, ಬಂದ ದಾರಿಯಲ್ಲೇ ಹಿಂತಿರುಗಿದೆವು..ಬಂದ ದಾರಿಗೆ ಸುಂಕವಿಲ್ಲ ಅಲ್ಲವೇ? ಅಂತೂ ಇಂತೂ ಸುಸ್ತಾಗಿ ಹಿಂತಿರುಗುವಾಗ ಎರಡು ಬಾಟಲಿ ನೀರು ಖಾಲಿಯಾಗಿತ್ತು!
ಪಾರ್ಕಿನೊಳಗೆ ವಿಶಾಲವಾದ ಹುಲ್ಲುಹಾಸು, ಎತ್ತರಕ್ಕೆ ಬೆಳೆದ ಮರಗಳು, ಪೊದೆ ಗಿಡಗಳು, ಬಳ್ಳಿಗಳು ಎಲ್ಲವೂ ಹಚ್ಚಹಸಿರು ಬಣ್ಣದಿಂದ ಕಂಗೊಳಿಸುತ್ತಿದ್ದರೆ, ಅವುಗಳಲ್ಲಿ ಅರಳಿದ ಹೂಗಳು ಮನಸೂರೆಗೊಳ್ಳುವಂತಿದ್ದವು. ಈ ಪಾರ್ಕಿನ ಒಳಗೆ ಪ್ರವಾಸಿಗರಿಗೆ ಪ್ರವೇಶವಿಲ್ಲವಾದ್ದರಿಂದ ಸುತ್ತಲೂ ಬಲವಾದ ಬೇಲಿ ಹಾಕಲಾಗಿದೆ. ಆದರೂ ಹೊರಗಿನಿಂದಲೇ ಇದನ್ನು ಕಂಡಾಗ ಆಯಾಸವೆಲ್ಲಾ ಪರಿಹಾರವಾದಂತೆನಿಸಿತು. ಮರಗಳ ನೆರಳು ತಂಪು ನೀಡುತ್ತಿದ್ದರೂ ಹೊಟ್ಟೆ ಕೇಳಬೇಕಲ್ಲ? ಸುತ್ತಲೂ ನೋಡಿದರೆ ಬಳಿಯಲ್ಲಿರುವ ಎಲ್ಲಾ ಆಸನಗಳೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಊಟಕ್ಕಾಗಿ ಎಲ್ಲಿ ಕುಳಿತುಕೊಳ್ಳೋಣ ಎಂದುಕೊಳ್ಳುತ್ತಾ ನೋಡುತ್ತಿರುವಾಗ, ನಮ್ಮ ಮುಂಭಾಗದಲ್ಲಿ ಪಾರ್ಕಿನ ಅರೆತೆರೆದ ಸಣ್ಣ ಗೇಟ್ ಒಂದು ಕಣ್ಣಿಗೆ ಬಿತ್ತು. ಕಾವಲುಗಾರ ಎಲ್ಲೂ ಕಾಣಿಸಲಿಲ್ಲ….ಜೊತೆಗೆ ಬಹು ಚಂದದ ಹುಲ್ಲು ಹಾಸು ಕೈಬೀಸಿ ಕರೆದೇ ಬಿಟ್ಟಿತು. ಅದರ ಮೇಲೆ, ಯಾರೂ ಪಾರ್ಕಿನೊಳಗೆ ಬರಬಾರದೆಂಬ ಫಲಕ ನೇತಾಡುತ್ತಿದ್ದುದನ್ನು ಲೆಕ್ಕಿಸದೆ, ಗೇಟನ್ನು ಸರಿಸಿ ಒಳಗೆ ಆರಾಮವಾಗಿ ಕುಳಿತು ನಮ್ಮ ಕೆಲಸ ಮುಂದುವರಿಸಿದೆವು…ದೇವರ ದಯದಿಂದ..! ಕೊನೆಯಲ್ಲಿ ಎಲ್ಲವನ್ನೂ ಚೀಲಕ್ಕೆ ತುಂಬಿಸುವ ಹಂತದಲ್ಲಿ, ಎಲ್ಲಿದ್ದನೋ ಕಾವಲುಗಾರ ಮಹಾನುಭಾವ… ದೂರದಿಂದಲೇ ವಿಜಿ಼ಲ್ ಹೊಡೆಯುತ್ತಾ ನಮ್ಮನ್ನು ತಕ್ಷಣ ಹೊರಡಲು ಆದೇಶಿಸಿದ. ನಮಗೋ.. ಎಲ್ಲಿ ದಂಡ ವಸೂಲಿ ಮಾಡುವರೋ ಎಂಬ ಭಯ ಸುರುವಾಯ್ತು. ಹಾಗೇನೂ ನಡೆಯದೆ ನಮ್ಮನ್ನು ಬಿಟ್ಟದ್ದೇ ಪುಣ್ಯ ಎಂದು ಸಮಾಧಾನ ಮಾಡಿಕೊಳ್ಳುತ್ತಾ, ಸ್ವಲ್ಪ ಇರುಮುರುಸಾದರೂ, ಸೊಗಸಾದ ವನಭೋಜನ ಮುಗಿಸಿದ ಸಂತಸದಲ್ಲಿ ಹೊರಬಂದೆವು….ಮುಂದಿನ ವೀಕ್ಷಣೆಗೆ ಮುಂದಾದೆವು…
ವಾಯುಯಾನದ ವಸ್ತುಸಂಗ್ರಹಾಲಯ (Aviation Museum)
ಸುಮಾರು 7,60,000 ಚ.ಅಡಿ ವಿಸ್ತಾರವುಳ್ಳ ಈ ಸಂಗ್ರಹಾಲಯವು 1946ರಲ್ಲಿ ಪ್ರಾರಂಭಗೊಂಡಿದ್ದು, ಜಗತ್ತಿನಲ್ಲಿಯೇ ಅತೀ ದೊಡ್ಡದೆಂಬ ಹೆಗ್ಗಳಿಕೆ ಪಡೆದಿದೆ. ಇಲ್ಲಿ 150ಕ್ಕಿಂತಲೂ ಹೆಚ್ಚು ನಿಜಗಾತ್ರದ ವಿಮಾನಗಳು, ನೂರಾರು ವಿವಿಧ ರೀತಿಯ ರಾಕೆಟ್ ಗಳು, ಮಿಸೈಲ್ ಗಳು, ವ್ಯೋಮ ನೌಕೆಗಳು, ಚಂದ್ರಯಾನದಲ್ಲಿ ಭಾಗವಹಿಸಿದ ವ್ಯಕ್ತಿಗಳ ಉಡುಪು ಇತ್ಯಾದಿಗಳು ಅತ್ಯಂತ ಕುತೂಹಲಕಾರಿಯಾಗಿವೆ.
ಒಳಗಡಿಯಿಟ್ಟೊಡನೆ, ಈ ಸಂಗ್ರಹಾಲಯದ ಮುಂಭಾಗದ ವರಾಂಡದಲ್ಲಿರುವ ಬೃಹದ್ಗಾತ್ರದ ದ್ವಿವ್ಯಕ್ತಿ ವಿಮಾನವು ನಮ್ಮನ್ನು ಸ್ವಾಗತಿಸುತ್ತದೆ… ಜೊತೆಗೆ ಯಾವುದೋ ವಿಮಾನದ ಕಾರ್ಖಾನೆಯೊಳಗೆ ಹೋದಂತಹ ಅನುಭವವಾಗುತ್ತದೆ. ನೆಲದ ಮೇಲೆ, ಛಾವಣಿ ಮೇಲೆ, ಎಲ್ಲಿ ನೋಡಿದರಲ್ಲಿ ಕಂಡು ಕೇಳರಿಯದ ವಾಯು ವಾಹನಗಳು ಅತ್ಯಂತ ಅಚ್ಚುಕಟ್ಟಾಗಿ ಪ್ರದರ್ಶಿಸಲ್ಪಟ್ಟಿವೆ. ಕ್ಷೇತ್ರಗಳಲ್ಲಿ ಹಲವಾರು ವರ್ಷ ಸರಿಯಾಗಿ ಕಾರ್ಯ ನಿರ್ವಹಿಸಿ, ಏನಾದರೂ ಕಾರಣಗಳಿಂದ ಹಾಳಾದ ಇವುಗಳನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಅಂತರಿಕ್ಷ ಯಾನಿಗಳು ಉಪಯೋಗಿಸಿದ ವ್ಯೋಮ ನೌಕೆಗಳು ನಿಜಕ್ಕೂ ಅದ್ಭುತ ಅನುಭವಗಳನ್ನು ನೀಡಿದವು. ಅತ್ಯಂತ ಕುತೂಹಲದಾಯಕವಾದ ಈ ಸಂಗ್ರಹಾಲಯವು ಜಗತ್ತಿನೆಲ್ಲೆಡೆಯ ಆಸಕ್ತ ಸಂಶೋಧಕರಿಗೆ ಯೋಗ್ಯ ಮಾಹಿತಿಗಳನ್ನು ಒದಗಿಸಲು ನೆರವಾಗುತ್ತಿದೆ. ಇವುಗಳೆಲ್ಲವನ್ನು ಸರಿಯಾಗಿ ವೀಕ್ಷಿಸಲು ಸುಮಾರು ಮೂರು ಗಂಟೆಗಳಾದರೂ ಬೇಕಾಗುತ್ತದೆ. ಅದರೆ, ಅದಾಗಲೇ ಸಮಯ ಮೀರಿದುದರಿಂದ ಒಂದು ತಾಸಲ್ಲಿ ಬೇಗ ಬೇಗನೆ ನೋಡಿ ಮುಗಿಸಿದೆವೆನ್ನಿ.
ರಸ್ತೆಯಲ್ಲಿ ಸಾಗುತ್ತಾ, ಅರ್ಧ ತಾಸಿನ ಪಯಣದ ಬಳಿಕ, ನನಗೆ ಆಶ್ಚರ್ಯವೊಂದು ಕಾದಿತ್ತು. ನಮ್ಮ ಕಾರು ಹೋಗಿ ನಿಂತ ಹೋಟೇಲಿನ ಹೆಸರು…ವುಡ್ ಲ್ಯಾಂಡ್ಸ್! ಒಳಗೆ ಹೋದೊಡನೆ ಕನ್ನಡ ಮಾತುಗಳನ್ನು ಕೇಳಿ ಕುತೂಹಲ, ಯಾರಿರಬಹುದು? ಎಂದು. ಅಳಿಯನ ಬೆಂಗಳೂರು ಗೆಳೆಯನ ಕುಟುಂಬದವರು ತಮ್ಮ ಮಕ್ಕಳೊಂದಿಗೆ ನಮಗಾಗಿ ಕಾಯುತ್ತಿದ್ದರು. ಆತ್ಮೀಯ ವಾತಾವರಣ, ಕನ್ನಡದ ಮಾತುಗಳು ಬೆಂಗಳೂರಲ್ಲೇ ಇರುವೆನೆಂಬ ಭಾವನೆಯನ್ನು ಮೂಡಿಸಿತು. ಅಲ್ಲಿ ಹೊಡೆದ ಮೀಟರ್ ಉದ್ದದ ಮಸಾಲೆದೋಸೆಯನ್ನು ನಾನೆಂದೂ ಮರೆಯುವ ಹಾಗಿಲ್ಲ!
ಮರುದಿನ…ಜೂನ್ 13ನೇ ಗುರುವಾರ. ಕಳೆದ ದಿನಗಳಲ್ಲಿ ಜಗತ್ಪ್ರಸಿದ್ಧ ತಾಣಗಳನ್ನು ಕಂಡು ಮನ ಸಂತಸಗೊಂಡಿತ್ತು. ನಾವು ಈ ದಿನ ಬೆಳಗ್ಗೆ ಹೊರಡಬೇಕಿತ್ತಾದ್ದರಿಂದ. ಹತ್ತು ಗಂಟೆಗೆ ವಾಷಿಂಗ್ಟನ್ ವಿಮಾನ ನಿಲ್ದಾಣಕ್ಕೆ ತಲಪಿದೆವು. ಅಲ್ಲಿಂದ ಡಲ್ಲಾಸ್ ಮತ್ತು ಹೂಸ್ಟನ್ ಮೂಲಕ, ಹತ್ತು ದಿನಗಳ ದೀರ್ಘ ಪ್ರವಾಸದ ಅಸಂಖ್ಯ ಸುಂದರ ಅನುಭವಗಳ ಮೂಟೆ ಹೊತ್ತು ನಮ್ಮ ಮನೆ ತಲಪಿದಾಗ ರಾತ್ರಿ ಹತ್ತು ಗಂಟೆ. ಎಷ್ಟಾದರೂ ಹೋಂ ಸ್ವೀಟ್ ಹೋಂ ಅಲ್ಲವೇ? ಸವಿನೆನಪುಗಳ ಅಲೆಗಳಲ್ಲಿ ತೇಲುತ್ತಾ ನೆಮ್ಮದಿಯ ಸುಖನಿದ್ರೆಗೆ ಜಾರಿದೆವು….
(ಮುಂದುವರಿಯುವುದು…..)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=38942
-ಶಂಕರಿ ಶರ್ಮ, ಪುತ್ತೂರು
ಎಂದಿನಂತೆ ಸೊಗಸಾಗಿದೆ ಪ್ರವಾಸ ಕಥನ
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು….ನಯನಾ ಮೇಡಂ
ಎಂದಿನಂತೆ ಸೊಗಸಾದ ಪ್ರವಾಸ ಕಥನ ಓದಿಸಿಕೊಂಡು ಹೋಯಿತು.. ಅದಕ್ಕೆ ಪೂರಕ ಚಿತ್ರಗಳು ಮನಸೆಳೆದವು..ಶಂಕರಿ ಮೇಡಂ..
ನಾಗರತ್ನ ಮೇಡಂ ಅವರಿಗೆ ಧನ್ಯ ನಮನಗಳು.