ನೆನೆ ಮನವೆ ಕನ್ನಡಕ್ಕಾಗಿ ಮಡಿದವರ, ದುಡಿದವರ….

Share Button

ಈ “ಕನ್ನಡ” ಎನ್ನುವ ಮೂರಕ್ಷರ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಮೈಮನಗಳು ರೋಮಾಂಚನಗೊಳ್ಳುತ್ತವೆ! ನಮ್ಮ ಕನ್ನಡದ ನಾಡು ಚಂದ ಕನ್ನಡದ ನುಡಿ ಇನ್ನೂ ಚೆಂದ!. ಇಡೀ ಕರುನಾಡನ್ನು ಒಮ್ಮೆ ಸುತ್ತಿ ಬಂದರೆ ವಿಶ್ವವನ್ನೇ ಸುತ್ತಿದ ಅನುಭವ ನಮಗಾಗುತ್ತದೆ. ಕರ್ನಾಟಕದಲ್ಲಿ ಎಲ್ಲವೂ ಅಡಗಿದೆ.ಕನ್ನಡ ನಾಡು ಬಹು ಎತ್ತರಕ್ಕೆ ಬೆಳೆದಿದೆ. ಕನ್ನಡ ನಾಡು-ನುಡಿ ಸಂಸ್ಕೃತಿಗಾಗಿ ದುಡಿದ, ದಣಿದ ಅನೇಕರು ನಮ್ಮನ್ನಗಲಿದ್ದಾರೆ. ಮತ್ತಷ್ಟು ಜನರು ಈಗಲೂ ಕೂಡ ಕನ್ನಡದ ಸೇವೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಮಾಡುತ್ತಾ ಬರುತ್ತಿದ್ದಾರೆ. ಅಂತಹ ಎಲ್ಲಾ ಮಹನೀಯರನ್ನು ನಾವು ನೆನೆದುಕೊಳ್ಳುವ ದಿನ ನವೆಂಬರ್ 1.
ಆದರೆ….. ಈ ಒಂದು ದಿನ ಮಾತ್ರ ಅಲ್ಲಾ ವರ್ಷ ಪೂರ್ತಿ ಕನ್ನಡದ ಬಗ್ಗೆ ಅಭಿಮಾನದ ಮಾತುಗಳನ್ನು ಹಾಡುವುದರ ಮೂಲಕ ಕನ್ನಡ ಭಾಷೆಯ ಪ್ರೀತಿಯನ್ನು ವ್ಯಕ್ತಪಡಿಸಬೇಕು.

ವ್ಯವಹಾರಕ್ಕೆ ಪರಭಾಷೆಗಳು ಮುಖ್ಯ.ಆದರೆ ನಮ್ಮ ಮನೆಯಂಗಳದಲ್ಲಿ ಮೂಲದಲ್ಲಿ ಕನ್ನಡದ ಬೇರು ಇರಲೇಬೇಕು.ಈಗ ನಮ್ಮ ಕನ್ನಡ ನೆಲದಲ್ಲಿ ಏನಿಲ್ಲ? ಎಲ್ಲವೂ ಅಡಗಿದೆ!ಕನ್ನಡ ನಾಡಿನ ಒಳ-ಹೊರಗಿನಲ್ಲೂ ಕೂಡ ಶ್ರೀಮಂತಿಕೆ ತುಂಬಿ ತುಳುಕುತ್ತಿದೆ.ಕನ್ನಡದ ಸುದೀರ್ಘ ಇತಿಹಾಸ, ವಿಶಿಷ್ಟ ಶೈಲಿಯ ಪರಂಪರೆ, ಚಾರಿತ್ರಿಕ ಹಿನ್ನೆಲೆ, ಭಾರತ ಮಾತೆಯ ತನುಜಾತೆಯಾಗಿ ನಮ್ಮ ಕನ್ನಡ ಎಲ್ಲಾ ಭಾಷೆಗಳಿಗಿಂತ ಒಂದು ಕೈ ಮೇಲು ಎನ್ನುವಂತಾಗಿದೆ.

ನಮ್ಮದು ಅತ್ಯಂತ ಶ್ರೀಮಂತ ಸಂಸ್ಕೃತಿ ಪರಂಪರೆಗಳ ತಾಣ.ನಾವು ಅವನ್ನೆಲ್ಲ ಸದಾ ನೆನಪಿಸಿಕೊಳ್ಳಬೇಕು.ಜೊತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಸಹ್ಯಾದ್ರಿಯ ಗಿರಿಶಿಖರಗಳು,ಕರಾವಳಿಯ ವಿಸ್ತಾರ ತಾಣ, ಬಯಲುಸೀಮೆ ಪ್ರದೇಶ, ಖನಿಜ ಪದಾರ್ಥಗಳು, ನದಿ ಸರೋವರಗಳು, ಗುಡಿ ಗೋಪುರಗಳು, ಕೋಟೆ ಕೊತ್ತಲಗಳು,ಪ್ರವಾಸಿ ತಾಣಗಳು, ಹೀಗೆ ಎಲ್ಲೆಡೆ ಪ್ರಕೃತಿಯ ಸೌಂದರ್ಯ ಕೈಬೀಸಿ ಕರೆಯುತ್ತದೆ. “ನಾ ನೋಡಿ ನಲಿದ ಕಾರವಾರ” ಎನ್ನುವ ಸುಮಧುರ ಗೀತೆ ನೆನಪಾಗುತ್ತದೆ. ಜೊತೆಗೆ ”ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ” ಎಂದು ಪ್ರವಾಸಿಗರನ್ನು ಕರೆಯುವ ಗೀತೆ ನಿತ್ಯ ಹರಿದ್ವರ್ಣದ ಭಾವನೆ ಮೂಡಿಸುತ್ತದೆ.

ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡ ಹೆಚ್ಚಾಗಿ ಬೆಳೆದಿದೆ ಎಂದು ಹೇಳಬೇಕು.ಕೇವಲ ಇಂಗ್ಲಿಷ್ ಶಿಕ್ಷಣ ಇದ್ದ ಕಾಲ ಹೊಂದಿತ್ತು.ಈಗ ಕನ್ನಡದಲ್ಲಿ ಕೂಡ ಎಲ್ಲಾ ವಿಷಯಗಳ ಶಿಕ್ಷಣ ನಮಗೆ ಸುಲಭವಾಗಿ ದೊರೆಯುತ್ತಿದೆ.ಜೊತೆಗೆ ಮೊಬೈಲ್ ನಲ್ಲೂ ಕೂಡ ಕನ್ನಡದ ಕೀಲಿಮಣೆ ಇರುವುದರಿಂದ ಕನ್ನಡ ಸರಾಗವಾಗಿ ಓದಲು, ಬಳಸಲು ಅನುಕೂಲವಾಗಿದೆ.ಕನ್ನಡ ನಾಡು- ನುಡಿ ಸಂಸ್ಕೃತಿ ನಾ ಮೊದಲೇ ಹೇಳಿದಂತೆ ವಿಶಾಲವಾದದ್ದು. ಕಲೆ, ಸಾಹಿತ್ಯ, ಸಂಗೀತ, ಶಿಲ್ಪ, ಶೌರ್ಯ, ಎಲ್ಲದರಲ್ಲೂ ಕನ್ನಡ ಮುಂದಿದೆ.

ರಾಜರಾಳಿದ ನಾಡು ನಮ್ಮದು. ಗಂಗರು, ರಾಷ್ಟ್ರಕೂಟರು, ಕದಂಬರು, ಚೋಳರು, ಚಾಲುಕ್ಯರು, ಪಲ್ಲವರು… ಒಟ್ಟರೆ ವಿಜಯನಗರದ ಅರಸರಿಂದ ಹಿಡಿದು ಮೈಸೂರಿನ ಅರಸರವರೆಗೆ ಆಳ್ವಿಕೆಯ ಪರಂಪರೆ ಅತ್ಯಂತ ಶ್ರೀಮಂತವಾಗಿ ಬೆಳೆದು ಬಂದಿದೆ. ರಾಜರುಗಳ ಕೊಡುಗೆಗಳನ್ನು ನಾವು ಕೂಡ ಈ ದಿನ ನೆನೆದುಕೊಳ್ಳಲೇಬೇಕು. ತಮ್ಮ ದೂರ ದೃಷ್ಟಿ, ಚಿಂತನ ಮಂಥನ, ಮುಂದಾಳತ್ವ, ಯೋಚನೆ, ಯೋಜನೆಯ ಮೂಲಕ ನಾಡಿನ ಜನರಿಗೆಲ್ಲ ಉತ್ತಮ ಆಡಳಿತ ನೀಡುವುದರ ಜೊತೆಗೆ ನಮ್ಮ ನಾಡು ನುಡಿ ಸಂಸ್ಕೃತಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ.ಅಲ್ಲದೆ ನಮ್ಮ ಕನ್ನಡದ ನೆಲದಲ್ಲಿ ಅನೇಕ ಶಾಸನಗಳು ಇವೆ.
ನಮ್ಮ ಕನ್ನಡ ನಾಡು ವೀರ ವನಿತೆಯರ ಬೀಡು. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಅತ್ತಿಮಬ್ಬೆ, ಬೆಳವಡಿ ಮಲ್ಲಮ್ಮ ಮೊದಲಾದವರು.

ಕವಿ ಪರಂಪರೆ ಮಾತ್ರ ದೀರ್ಘವಾದದ್ದು. ಪಂಪ, ರನ್ನ, ಪೊನ್ನ, ಜನ್ನ, ನಾಗವರ್ಮ, ನಾಗಚಂದ್ರ, ಕುಮಾರವ್ಯಾಸ, ಸರ್ವಜ್ಞ, ಮುದ್ದಣ್ಣ, ಲಕ್ಷ್ಮೀಶ, ಹರಿಹರ, ರಾಘವಾಂಕ, ಡಿವಿಜಿ, ಬೇಂದ್ರೆ, ಕುವೆಂಪು, ಮಾಸ್ತಿ, ಕಾರಂತರು, ರಾಜರತ್ನಂ, ಅನಂತಮೂರ್ತಿ, ಕಂಬಾರರು, ಹೀಗೆ ನೂರಾರು ಕವಿಗಳಿದ್ದಾರೆ. ಇವರು ಸೃಷ್ಟಿಸಿರುವ ಕನ್ನಡ ಸಾಹಿತ್ಯ ಉತ್ಕೃಷ್ಟವಾದುದು. ಅದಕ್ಕಲ್ಲವೇ ಹುಯಿಲಗೋಳ ನಾರಾಯಣರಾವ್ ಅವರು “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂದದ್ದು. ಕುವೆಂಪುರವರು “ಬಾರಿಸು ಕನ್ನಡ ಡಿಂಡಿಮವ” “ಎಲ್ಲಾದರೂ ಇರು ಎಂತಾದರು ಇರು” ಎಂದರು… ಹೊತ್ತಿತೋ ಹೊತ್ತಿತು ಕನ್ನಡದ ದೀಪ ಎಂದು ಸಿದ್ದಯ್ಯ ಪುರಾಣಿಕರು ಹೇಳಿದರೆ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ”ಎಂದರು ನಮ್ಮ ಚೆನ್ನವೀರ ಕಣವಿ ಅವರು. ಈ ಎಲ್ಲಾ ಭಾವಗೀತೆಗಳನ್ನು ಕೇಳಿದರೆ ಸಾಕು ನಮಗೆ ಕನ್ನಡದ ಮೇಲೆ ಅಭಿಮಾನ ಮತ್ತಷ್ಟು ಉಕ್ಕುತ್ತದೆ.

ಅಷ್ಟೇ ಅಲ್ಲದೆ ನಮ್ಮ ಕನ್ನಡದ ನೆಲದಿಂದ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನೇಕ ವೀರ ಸ್ವಾತಂತ್ರ್ಯ ಹೋರಾಟಗಾರರು, ವೀರ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದು ಕೂಡ ಒಂದು ಅಭಿಮಾನದ ಮಾತು. ಸತ್ಯ ಅಹಿಂಸೆಯ ನೇಕಾರ ಮಹಾತ್ಮ ಗಾಂಧೀಜಿಯವರು ಕೂಡ ನಮ್ಮ ಕನ್ನಡದ ನೆಲದಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿ, ಇಲ್ಲಿಗೆ ಭೇಟಿಕೊಟ್ಟು ಕನ್ನಡ ನಾಡಿನ ಸಂಸ್ಕೃತಿಗೆ ಬೆರಗಾಗಿದ್ದಾರೆ.

ನಮ್ಮ ಕನ್ನಡದಲ್ಲಿ ಗ್ರಾಮದಿಂದ ಗ್ರಾಮಕ್ಕೆ…… ತಾಲೂಕಿನಿಂದ ತಾಲೂಕಿಗೆ…… ಜಿಲ್ಲೆಯಿಂದ ಜಿಲ್ಲೆಗೆ…… ನಮ್ಮ ಭಾಷಾ ಸೊಗಡಿನ ಸಂಸ್ಕೃತಿ ವಿಭಿನ್ನವಾದದ್ದು ಮತ್ತು ವಿಸ್ತಾರವಾದದ್ದು. ಕಾಸರಗೋಡು ಕನ್ನಡ, ಧಾರವಾಡ ಕನ್ನಡ, ಹುಬ್ಬಳ್ಳಿ ಕನ್ನಡ, ಚಾಮರಾಜನಗರ ಕನ್ನಡ, ಮೈಸೂರು, ಶಿವಮೊಗ್ಗ ಉಡುಪಿ ಬೇರೆ ಬೇರೆ ಪ್ರದೇಶದ ಕನ್ನಡಿಗರು ಮಾತನಾಡುತ್ತಿದ್ದರೆ ಅದನ್ನು ಕೇಳುವುದೇ ಒಂದು ರೀತಿಯಲ್ಲಿ ಖುಷಿ. ಹೀಗೆ ಅಡಿಯಿಂದ ಮುಡಿವರೆಗೆ ಎನ್ನುವಂತೆ ಕನ್ನಡದ ಬಗ್ಗೆ ಎಷ್ಟು ಮಾತನಾಡಿದರು ಸಾಲದು. ಕನ್ನಡ ಒಂದು ರೀತಿಯಲ್ಲಿ ಸರಳ ಸುಂದರ ಭಾಷಾ ಚೌಕಟ್ಟು ಹೊಂದಿರುವ ಭಾಷೆ.

ಕನ್ನಡ ನಾಡು- ನುಡಿ- ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕನ್ನಡದ ಸಾವಿರಾರು ಚಲನ ಚಿತ್ರಗಳು ನಮ್ಮ ಕಣ್ಮುಂದೆ ಕಾಣಸಿಗುತ್ತವೆ. ಆ ಚಿತ್ರಗಳಲ್ಲಿ ನಮ್ಮ ಕನ್ನಡ ನಾಡಿನ ಪ್ರಕೃತಿಯ ಸೌಂದರ್ಯ, ಕನ್ನಡ ನಾಡಿನ ಪ್ರಾಮುಖ್ಯತೆ ಬಗ್ಗೆ, ಕನ್ನಡದ ಹಾಡುಗಳು ಒಂದಲ್ಲ ಒಂದು ರೀತಿಯಲ್ಲಿ ಮೈಮನಗಳಿಗೆ ಮುದ ನೀಡುತ್ತವೆ. ಈ ನಿಟ್ಟಿನಲ್ಲಿ ನಾವು ಪ್ರತಿಯೊಬ್ಬ ನಟ, ನಟಿ, ನಿರ್ದೇಶಕ, ಸಂಗೀತಗಾರರು, ಗೀತರಚನಕಾರರು, ನಿರ್ಮಾಪಕರು, ಸಹ ಕಲಾವಿದರು ಹೀಗೆ ಒಂದು ಚಿತ್ರ ಯಶಸ್ವಿಯಾಗಿ ತೆರೆಯ ಮೇಲೆ ಕಾಣಬೇಕಾದರೆ ಶ್ರಮವಹಿಸುವ ಪ್ರತಿಯೊಬ್ಬರಿಗೂ ಕೂಡ ವಿಶೇಷ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಈ ಸಂದರ್ಭದಲ್ಲಿ ನಾವು ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ರವರನ್ನು ನೆನಪಿಸಿಕೊಡಲೇಬೇಕು. ಅವರು ಪರಭಾಷೆ ಚಿತ್ರಗಳಲ್ಲಿ ನಟಿಸದೆ ಕೊನೆಯವರೆಗೂ ಕೂಡ ಕನ್ನಡದಲ್ಲಿ ಇದ್ದು ಎಲ್ಲರಿಗೂ ಮಾದರಿಯಾದರು. ಇದೇ ರೀತಿ ಅನೇಕ ನಟರು ನಟಿಯರು ತಮ್ಮ ಪ್ರತಿಭೆ ಮೆರೆದಿದ್ದಾರೆ. ಕನ್ನಡ ಚಲನ ಚಿತ್ರಗಳು ಕೂಡ ಕನ್ನಡ ನಾಡು ನುಡಿಗೆ ಉತ್ತಮ ಕೊಡುಗೆ ನೀಡಿವೆ.

‘ಕನ್ನಡ ರೋಮಾಂಚನವೀ ಕನ್ನಡ’ , ‘ಕನ್ನಡ ಹೆಣ್ಣನ್ನು ಮರಿಬೇಡ ಅಭಿಮಾನಿ’ , ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕನ್ನಡ ಹೊನ್ನುಡಿ ದೇವಿಯನು ಪೂಜಿಸುವೆ ಆರಾಧಿಸುವೆ’, ‘ಕನ್ನಡದ ನಾಡು ಚೆಂದ ಕನ್ನಡದ ನುಡಿ ಚೆಂದ’, ‘ಕನ್ನಡ ನಾಡಿನ ರನ್ನದ ರತುನ’, ‘ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ’, ‘ಕನ್ನಡಮ್ಮನ ದೇವಾಲಯ’, ‘ಇದೇ ನಾಡು ಇದೇ ಭಾಷೆ, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’, ‘ಕರುನಾಡ ತಾಯಿ ಸದಾ ಚಿನ್ಮಯಿ’, ‘ನಾವಾಡುವ ನುಡಿಯೇ ಕನ್ನಡ ನುಡಿ’, ‘ಜೇನಿನ ಹೊಳೆಯೋ ಹಾಲಿನ ಮಳೆಯೋ’, ‘ಕನ್ನಡ ನಾಡಿನ ವೀರರಮಣಿಯ’, ‘ಹೇಳೆ ಕನ್ನಡತಿ ನೀ ಯಾಕೆ ಇಂಗಾಡ್ತಿ’, ‘ಕರುನಾಡೆ, ನಮ್ ಕಡೆ ಸಾಂಬಾರ್ ಅಂದ್ರೆ ನಿಮ್ ಕಡೆ’, ‘ಸಿರಿವಂತನಾದರೂ ಕನ್ನಡ ನಾಡಲ್ಲೆ’, ‘ಒಂದೇ ನಾಡು ಒಂದೇ ಕುಲ’, ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’,’ ‘ಅಪ್ಪ ಕಣೋ ಕನ್ನಡ’,’ ಕನ್ನಡಕ್ಕಾಗಿ ಜನನ’, ‘ಕನ್ನಡದ ರವಿ ಮೂಡಿ ಬಂದ’, ‘ಕಲ್ಲಾದರೆ ನಾನು‘, ಹೀಗೆ ಒಂದೆ? ಎರಡೇ?? ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ.! ಚರಣ ಹಾಗೂ ಪಲ್ಲವಿಯಲ್ಲಿ ಕನ್ನಡ ಬರುವಂತಹ ಹಾಡುಗಳು ಇವೆ. ಇದೇ ರೀತಿ ಕನ್ನಡ ಚಿತ್ರಗೀತೆಗಳ ಚಿತ್ರೀಕರಣ ನಾಡಿನ ತುಂಬೆಲ್ಲ ಆಗಿವೆ. ಇದರಿಂದಾಗಿ ಆ ಸ್ಥಳದ ಹಿರಿಮೆ ನಮಗೆ ಪರಿಚಯವಾಗುತ್ತದೆ.ಇಂತಹ ಗೀತೆಗಳನ್ನು ಬರೆದ ಗೀತ ರಚನೆಕಾರರು, ಜೊತೆಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕರು, ಇವರೆಲ್ಲರ ನಡುವೆ ಕೇಳುವ ನಾವೇ ಪುಣ್ಯವಂತರು!.

ಇದೇ ರೀತಿ ಅನೇಕ ಕವಿಗಳಿಂದ ಅನೇಕ ಭಾವಗೀತೆಗಳು ಕನ್ನಡಾಂಬೆಯ ಕೊರಳಿಗೆ ಮಾಲೆಯಾಗಿಸಿವೆ.ಅದಕ್ಕಲ್ಲವೇ ಕನ್ನಡಕ್ಕೆ ಎಂಟು ಜ್ಞಾನಪೀಠಗಳು ಬಂದಿರುವುದು.ಕನ್ನಡದ ನೆಲದಲ್ಲಿ ಅನೇಕ ಪತ್ರಿಕೆಗಳು ಕೂಡ ಕನ್ನಡದ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ನಾಡಿನ ಜನರ ಸಮಸ್ಯೆಗಳು, ಇತಿಹಾಸ ಪ್ರಸಿದ್ಧ ತಾಣಗಳು ಜೊತೆಗೆ ನಮ್ಮ ಕನ್ನಡದ ಶ್ರೀಮಂತಿಕೆಯನ್ನು ವಿವಿಧ ಲೇಖಕರುಗಳ ಮೂಲಕ ಬರೆಯಿಸಿ ಮತ್ತಷ್ಟು ಪ್ರಚಾರವಾಗಲು ಸಹಾಯ ಮಾಡಿವೆ.

ಇನ್ನು ದೂರದರ್ಶನ ಕನ್ನಡದ ಚಂದನ ಟಿವಿ ನಮ್ಮ ಕರುನಾಡ ಸುತ್ತಮುತ್ತ ಅಂತರಂಗದಲ್ಲಿ ಅಡಗಿರುವ ಅನೇಕ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಜೊತೆಗೆ ನಮ್ಮ ನಾಡು — ಸಂಸ್ಕೃತಿಗೆ ಒಂದಲ್ಲ ಒಂದು ರೀತಿಯಲ್ಲಿ ಪೂರಕ ಕೆಲಸ ಮಾಡಿದೆ. ಅದೇ ರೀತಿ ಆಕಾಶವಾಣಿಗಳು ಕೂಡ ಅನಕ್ಷರಸ್ಥರು, ಜನಸಾಮಾನ್ಯರು ಕೂಡ ಕೇಳುವಂತಹ ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿವೆ.

ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ವಿಶಿಷ್ಟ ಕಳೆ ಬಂದಿದೆ. ಅದೇನೆಂದರೆ ಕರ್ನಾಟಕ ಎಂದು ಅಧಿಕೃತ ನಾಮಕರಣವಾಗಿ ಇದೀಗ 50 ವರ್ಷಗಳ ಸಂಭ್ರಮದಲ್ಲಿ ಇರುವುದು! ಇದರಿಂದಾಗಿ ಸ್ವರ್ಣ ಕರ್ನಾಟಕವಾಗಿದೆ. ಕರ್ನಾಟಕ ಎಂಬ ಪದಕ್ಕೆ ಸುಮಾರು 5000 ವರ್ಷಗಳ ಇತಿಹಾಸವಿದೆ. ಕನ್ನಡಕ್ಕೆ ತನ್ನದೇ ಆದಂತಹ ಪುರಾತನತೆ ಮತ್ತು ಪ್ರಾದೇಶಿಕ ಹಾಗೂ ಸಾಹಿತ್ಯದ ಸನಾತನತೆಯು ಇದೆ.

ಕರ್ ನಾಡು-ಕರುನಾಡು- ಕಮಿತು ನಾಡು-ಕಪ್ಪು ನಾಡು-ಎತ್ತರದ ನಾಡು-ಕಂಪಿನ ನಾಡು ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಪ್ರಪ್ರಥಮವಾಗಿ ಹುಯಿಲಗೋಳ ನಾರಾಯಣರಾವ್ ರವರು ಬರೆದಿರುವ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”- ಈ ಗೀತೆ ನಾಡಗೀತೆಯಾಗಿ ಪರಿಗಣಿಸಲಾಗಿತ್ತು. ತದನಂತರ ರಾಷ್ಟ್ರೀಯ ಭಾವೈಕ್ಯತೆಯ ದ್ಯೋತಕವಾಗಿ ರಾಷ್ಟ್ರಕವಿ ಕುವೆಂಪುರವರು ಬರೆದಿರುವ “ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ”-ಯನ್ನು ಮರು ಪರಿಗಣಿಸಿದರು. ಇದು ಅಧಿಕೃತವಾಗಿ ಕರ್ನಾಟಕದ ನಾಡಗೀತೆ ಆಗಿದೆ.

ಹಾಗೆಯೇ ಕರ್ನಾಟಕ ರಾಜ್ಯದ ಲಾಂಛನ:- ಗಂಡ ಬೇರುಂಡ, ಕನ್ನಡ ಕುಲದೇವತೆಯಾಗಿ:- ಶ್ರೀ ಭುವನೇಶ್ವರಿ ದೇವಿ, ಹಳದಿ ಮತ್ತು ಕೇಸರಿ ಬಣ್ಣಗಳಿಂದ ಸಂಯುಕ್ತವಾಗಿರುವುದನ್ನು ಕನ್ನಡದ ಧ್ವಜವಾಗಿ ರಾಜ್ಯದ ನಾಡ ಹಬ್ಬವಾಗಿದೆ. ನವರಾತ್ರಿಯ ಪರಂಪರಿಕ ಮೈಸೂರು ದಸರಾ ಉತ್ಸವ, ರಾಜ್ಯದ ಮರವಾಗಿ ಶ್ರೀಗಂಧ, ರಾಜ್ಯದ ಪುಷ್ಪವಾಗಿ ಕಮಲ, ಹಾಗೂ ರಾಜ್ಯದ ನೃತ್ಯವಾಗಿ ಯಕ್ಷಗಾನ- ಇವುಗಳನ್ನು ನಾಡಿನ ಸಂಸ್ಕೃತಿಯ ಪ್ರತೀಕವೆಂದು ಅಧಿಕೃತವಾಗಿ ಪರಿಗಣಿಸಲಾಗಿದೆ.

ಈ ಹಂತದಲ್ಲಿ ಕನ್ನಡ ನಾಡು ಇಷ್ಟು ಶ್ರೀಮಂತವಾಗಿರಲು ನಮ್ಮ ಹಿರಿಯರು ಅನೇಕ ಕಷ್ಟಗಳನ್ನು ಅನುಭವಿಸಿ, ಕನ್ನಡವನ್ನು ಅತ್ಯಂತ ಶ್ರೀಮಂತ ಗೊಳಿಸಿದ್ದಾರೆ. ನಾವು ಈ ಸಂದರ್ಭದಲ್ಲಿ ಅವರನ್ನೆಲ್ಲ ನೆನೆದು ಅವರು ನಾಡು- ನುಡಿಗೆ ನೀಡಿದ ಕೊಡುಗೆಯನ್ನು ಗೌರವಿಸಿ, ನಾವು ಕೂಡ ಅವರಂತೆ ಸೇವೆ ಮಾಡಬೇಕು. ಕನ್ನಡಾಂಬೆಯನ್ನು ಉಳಿಸಿ ಬೆಳೆಸಬೇಕು.ಕನ್ನಡ ನಾಡಿನ ಸಂರಕ್ಷಣೆಗಾಗಿ ಕನ್ನಡ ನೆಲದಲ್ಲೇ ಕನ್ನಡ ಕಾವಲು ಸಮಿತಿ ಇವತ್ತಿಗೂ ಇದೆ ಎಂದರೆ ಅಚ್ಚರಿಯಾಗಬಹುದು!. ಕನ್ನಡದ ಮೇಲೆ ಪರಕೀಯರ ದಾಳಿ ನಡೆಯುತ್ತಲೇ ಇದೆ. ಮೊದಲು ಕನ್ನಡ ಮನೆ ಮಾತಾಗಬೇಕು. ಬೇರೆ ಭಾಷೆಗಳಿಂದಲೂ ಕೂಡ ಕನ್ನಡ ಶ್ರೀಮಂತವಾಗಿದೆ ನಿಜ ಆದರೆ ಕನ್ನಡಕ್ಕೆ ಕನ್ನಡದ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು. ನಾವು ಈಗ ಹೊಸದಾಗಿ ಏನನ್ನು ಮಾಡದಿದ್ದರೂ ಕೂಡ ಈಗಾಗಲೇ ನಮ್ಮ ಕನ್ನಡದ ಶ್ರೀಮಂತಿಕೆ ವಿಸ್ತಾರವಾಗಿದ್ದು ಅದನ್ನು ಉಳಿಸಿದರೆ ಸಾಕು! ಜೊತೆಗೆ ಈ ಎಲ್ಲಾ ಸಂಸ್ಕೃತಿ ಪರಂಪರೆಗಳನ್ನು ನಮ್ಮ ಮುಂದಿನ ಪೀಳಿಗೆಗೂ ವಿಸ್ತರಿಸುವಂತೆ ನೋಡಿಕೊಳ್ಳಬೇಕು.

50 ವರ್ಷಗಳ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವರ್ಷಪೂರ್ತಿ ಕನ್ನಡ ನಾಡು- ನುಡಿ -ಸಂಸ್ಕೃತಿಗೆ ಹೊಸ ಆದ್ಯತೆಗಳನ್ನು, ಆಶಯಗಳನ್ನು ವ್ಯಕ್ತಪಡಿಸಿದೆ. ನಾವು ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡವನ್ನು ಪ್ರೀತಿಸಿ, ಗೌರವಿಸುವುದರ ಜೊತೆಗೆ ವರ್ಷಪೂರ್ತಿ ಕನ್ನಡ ನಮ್ಮ ಅಂತರಂಗದಲ್ಲಿ ಇರಬೇಕು. ಕನ್ನಡ ನೆಲದಲ್ಲಿ ಅನೇಕ ಧೀಮಂತ ಪ್ರತಿಭೆಗಳು ಇದ್ದಾರೆ. ಅವರೆಲ್ಲರಿಗೂ ಕೂಡ ನಾವು ಪ್ರೋತ್ಸಾಹಿಸಿ, ಕನ್ನಡಕ್ಕೆ ಮತ್ತಷ್ಟು ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು. ಅವರೆಲ್ಲರಿಗೂ ಶುಭಾಶಯಗಳು.

ಜೊತೆಗೆ ಕನ್ನಡಕ್ಕೆ ಕನ್ನಡ ನೆಲಕ್ಕೆ ತೊಂದರೆಯಾದರೆ ಹೋರಾಡುವ ಮನೋಭಾವವನ್ನು ಕೂಡ ನಾವು ಹೊಂದಿರಬೇಕು. “ನಾವು ನವೆಂಬರ್ ಕನ್ನಡಿಗರಾಗದೆ, ನಂಬರ್ ಒನ್ ಕನ್ನಡಿಗರಾಗೋಣ”!!. ಇದೇ ನಮ್ಮೆಲ್ಲರ ಆಶಯ.

ಸಮಸ್ತರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

9 Responses

  1. ಮಾಹಿತಿ ಪೂರ್ಣ ಲೇಖನ… ಚೆನ್ನಾಗಿ ಮೂಡಿಬಂದಿದೆ..ಸಾರ್…

  2. ನಯನ ಬಜಕೂಡ್ಲು says:

    ಸವಿಸ್ತಾರವಾದ ಸೊಗಸಾದ ಲೇಖನ

  3. Padmini Hegde says:

    ತಲೆಬರಹ ನೋಡಿ ಇದು ನಿಮ್ಮದೇ ಲೇಖನ ಎಂದುಕೊಂಡೆ. ಊಹೆ ಸರಿಯಾಗಿಯೇ ಇದೆ! ಬರಹ ದೀರ್ಘವಾಗಿ ಚೆನ್ನಾಗಿ ಇದೆ

  4. ಶಂಕರಿ ಶರ್ಮ says:

    ಕನ್ನಾಡಾಂಬೆಯ ಹಿರಿಮೆ ಗರಿಮೆಗಳನ್ನು ಹಿಡಿದೆತ್ತಿದ ಸೊಗಸಾದ ಲೇಖನ.

  5. Padmini Hegde says:

    ತಲೆಬರಹ ನೋಡಿ ನಿಮ್ಮದೇ ಲೇಖನ ಎಂದುಕೊಂಡೆ. ಊಹೆ ಸರಿಯಾಗಿಯೇ ಇದೆ. ಬಹಳ ದೀರ್ಘವಾಗಿ ಚೆನ್ನಾಗಿ ಬರೆದಿದ್ದೀರಿ!

  6. ಕನ್ನಡದ ಬಗ್ಗೆ ಅಭಿಮಾನ ಪೂರ್ವಕವಾದ ಸೊಗಸಾದ ಲೇಖನ ವಂದನೆಗಳು

  7. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

  8. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    jayakumarcsj@gmail.com

  9. ಕನ್ನಡ ಕನ್ನಡಿಗರು ಕರ್ನಾಟಕತ್ವಗಳು ನಮ್ಮ ನಮ್ಮೆಲ್ಲರ ಉಸಿರಲ್ಲಿ ಉಸಿರಾಗಿ ಜೀವ ಜೀವಾಳವಾಗಬೇಕು.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: