ಹಬ್ಬ ಬಂತು ಹಬ್ಬ
ಅಮ್ಮಾ, ನವರಾತ್ರಿ ಹಬ್ಬಕ್ಕೆ ತೇಜುಗೆ ಹತ್ತು ದಿನ ರಜಾ ಕೊಟ್ಟಿದ್ದಾರೆ, ಬಾಲು, ನಾನು ಇಬ್ಬರೂ ಆಸ್ಪತ್ರೆಗೆ ಮೂರು ದಿನ ರಜಾ ಹಾಕುತ್ತೀವಿ, ಸಕಲೇಶಪುರದ ಹತ್ತಿರ ಚಿನ್ನಹಡ್ಲು ಎಂಬ ರೆಸಾರ್ಟ್ ಇದೆ, ಸುತ್ತಲೂ ಸುಂದರವಾದ ಚಾರಣ ಪಥಗಳಿವೆ ಬರ್‍ತೀಯಾ ಎಂದಾಗ, ಹಬ್ಬ ಅಂತ ರಾಗ ಎಳೆದು ಯಜಮಾನರ ಮುಖ ನೋಡಿದೆ. ನಮ್ಮವರು – ಮಕ್ಕಳು, ಮೊಮ್ಮಕ್ಕಳ ಜೊತೆ ಸಂತೋಷವಾಗಿ ಕಾಲ ಕಳೆಯುವುದೇ ಹಬ್ಬ ಅಲ್ವಾ ಎಂದಾಗ ಮರುಮಾತಾಡದೆ ತಲೆಯಾಡಿಸಿದೆ.
ಹಬ್ಬ ಎಂದಾಕ್ಷಣ ನನ್ನ ಬಾಲ್ಯದ ದಿನಗಳ ಕಡೆ ಮನಸ್ಸು ಓಡಿತ್ತು. ನನ್ನ ತಂದೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಹೆಚ್ಚಾಗಿ ಹಳ್ಳಿಗಳಲ್ಲಿಯೇ ಸೇವೆ ಸಲ್ಲಿಸುತ್ತಿದ್ದರು. ಹಬ್ಬ ಬಂತೆಂದರೆ ಹಳ್ಳಿಯವರ ಸಂಭ್ರಮ ಸಡಗರ ನೋಡಬೇಕು. ಹಬ್ಬ ಇನ್ನೂ ಹದಿನೈದು ದಿನ ಇರುವಾಗಲೇ ಮನೆ ಮಂದಿಗೆಲ್ಲಾ ಕೈ ತುಂಬಾ ಕೆಲಸ. ಕಾಡಿಗೆ ಹೋಗಿ ಕೆಂಪು ಮಣ್ಣು ತಂದು ಪಡಸಾಲೆ, ಕೊಟ್ಟಿಗೆ, ಅಂಗಳವನ್ನೆಲ್ಲಾ ಸಾರಿಸುವುದು, ಮನೆಯ ಗೋಡೆಗಳಿಗೆಲ್ಲಾ ಸುಣ್ಣ ಬಣ್ಣ ಹಚ್ಚುವುದು. ಹೆಣ್ಣು ಮಕ್ಕಳು ಚಕ್ಕುಲಿ, ಉಂಡೆ, ಖರ್ಜಿಕಾಯಿ ಇತ್ಯಾದಿ ತಿನಿಸುಗಳನ್ನು ವಾರದ ಮೊದಲೇ ತಯಾರಿಸಿಡುತ್ತಿದ್ದರು. ಹಬ್ಬದ ಮುನ್ನಾದಿನ ಮನೆಯ ಮುಂಬಾಗಿಲನ್ನು ಮಾವಿನ ತೋರಣ, ಬಾಳೆಕಂದು, ಅಡಿಕೆ ಸಿಂಗಾರದಿಂದ ಸಿಂಗರಿಸುತ್ತಿದ್ದರು. ಹದಿಹರೆಯದ ಹುಡುಗಿಯರು, ಹಬ್ಬದ ಒಂಭತ್ತು ದಿನವೂ ಅಂಗಳದಲ್ಲಿ ಬಗೆ ಬಗೆಯ ರಂಗೋಲಿಗಳನ್ನು ಹಾಕಿ ಬಣ್ಣಗಳನ್ನು ತುಂಬಿಸುತ್ತಿದ್ದರು. ಮನೆಯ ಹಿತ್ತಿಲಲ್ಲಿ ಪುಟ್ಟ ಪುಟ್ಟ ಮಡಿಕೆಗಳಲ್ಲಿ ನವಧಾನ್ಯಗಳನ್ನು ಬಿತ್ತಿ, ದಿನವೂ ನೀರುಣಿಸಿ, ಬೆಳೆದ ಪೈರನ್ನು ಗೊಂಬೆಗಳ ಬಳಿ ಇಟ್ಟು ಪೂಜಿಸುತ್ತಿದ್ದರು.
ಮನೆಯ ಅಟ್ಟದ ಮೇಲೆ ಪೆಟ್ಟಿಗೆಗಳಲ್ಲಿ ಭದ್ರವಾಗಿ ತುಂಬಿಸಿಟ್ಟಿದ್ದ ಗೊಂಬೆಗಳನ್ನು ಹೊರತೆಗೆದು ಮೆಟ್ಟಿಲು ಮೆಟ್ಟಿಲಾಗಿ ಜೋಡಿಸಿಟ್ಟ ಮೇಜು, ಬೆಂಚುಗಳ ಮೇಲೆ ಓರಣವಾಗಿ ಜೋಡಿಸಿಡುವರು – ದಿನಸಿ ಅಂಗಡಿಯ ಮುಂದೆ ಕುಳಿತಿರುವ ಶೆಟ್ಟಿ ದಂಪತಿಗಳ ಜೋಡಿ, ಗೋಪಿಕಾ ಸ್ತ್ರೀಯರ ಜೊತೆ ನರ್ತಿಸುತ್ತಿರುವ ಕೃಷ್ಣ ರಾಧೆಯರು, ವನವಾಸಕ್ಕೆ ಹೊರಟು ನಿಂತ ರಾಮ, ಸೀತೆ , ಲಕ್ಷ್ಮಣ, ಅಲ್ಲೊಂದು ಮದುವೆ ದಿಬ್ಬಣ, ಮಧ್ಯೆ ನವದುರ್ಗೆಯರು, ದಸರಾ ಮೆರವಣಿಗೆಯ ದೃಶ್ಯ, ಹಿಂದೆ ಮುಂದೆ ತಲೆ ಆಡಿಸುತ್ತಾ ಸೊಂಟ ತಿರುಗಿಸುತ್ತಿರುವ ಚೆಲುವೆಯರು, ಪಾರ್ಕಿನಲ್ಲಿ ಆಟವಾಡುತ್ತಿರುವ ಹುಡುಗರು – ಹೀಗೆ ಅವರವರ ಕಲ್ಪನೆಗೆ ತಕ್ಕಂತೆ ಗೊಂಬೆಗಳ ಜೋಡಣೆ. ನಾವು ಎಲ್ಲರ ಮನೆಗೂ ಗೊಂಬೆ ನೋಡಲಿಕ್ಕೇ ಹೋಗುತ್ತಿದ್ದೆವು. ಮಕ್ಕಳಿಗೆ ಕೊಡಲೆಂದೇ ವಿಶೇಷವಾದ ತಿನಿಸುಗಳನ್ನು ಮಾಡುತ್ತಿದ್ದರು. ಪ್ರತಿನಿತ್ಯ ಅಮ್ಮ ದೇವಿ ಪುರಾಣದ ಒಂದು ಅಧ್ಯಾಯವನ್ನು ಓದುತ್ತಿದ್ದಳು, ದೇವಿಯ ಮುಂದಿರುವ ನಂದಾದೀಪ ಇಡೀ ದಿನ ಉರಿಯುವಂತೆ ನೋಡಿಕೊಳ್ಳುವುದು ನನ್ನ ಕೆಲಸವಾಗಿತ್ತು. ಅಷ್ಟಮಿಯಂದು ಸರಸ್ವತೀ ಪೂಜೆ, ನಾವೆಲ್ಲಾ ಮಕ್ಕಳು ನಮ್ಮ ಪುಸ್ತಕಗಳನ್ನು ದೇವಿಯ ಮುಂದೆಯಿಟ್ಟು ಪ್ರಾರ್ಥಿಸುತ್ತಿದ್ದೆವು. ಒಂಭತ್ತನೆಯ ದಿನ ಆಯುಧ ಪೂಜೆ, ಹಳ್ಳಿಯ ರೈತರು ತಮ್ಮ ವ್ಯವಸಾಯದ ಸಲಕರಣಗಳನ್ನೆಲ್ಲಾ ಶ್ರದ್ಧೆಯಿಂದ ಪೂಜಿಸಿದರೆ, ವೈದ್ಯರಾಗಿದ್ದ ತಂದೆಯವರು ತಮ್ಮ ಆಸ್ಪತ್ರೆಯ ಉಪಕರಣಗಳನ್ನೆಲ್ಲಾ ಸಾಲಾಗಿ ಜೋಡಿಸಿ ಪೂಜಿಸುತ್ತಿದ್ದರು. ಎಲ್ಲರ ಮನೆಯಲ್ಲಿದ್ದ ವಾಹನಗಳಿಗೆ ವಿಶೇಷವಾದ ಪೂಜೆ, ಅಂದು ಮಕ್ಕಳಿಗೆಲ್ಲಾ ಬಸ್‌ಗಳಲ್ಲಿ ಉಚಿತ ಸವಾರಿ. ಬೀದಿಯಲ್ಲೆಲ್ಲಾ ಬೂದುಗುಂಬಳ ಕಾಯಿಯ ಚೂರುಗಳು, ನಿಂಬೆ ಹಣ್ಣಿನ ಹೋಳುಗಳು ಚೆಲ್ಲಾಡಿರುತ್ತಿದ್ದವು. ಇನ್ನು ವಿಜಯದಶಮಿಯಂದು ಮುರುಘಾ ಮಠದ ಸ್ವಾಮಿಗಳ ಮರವಣಿಗೆ, ಬನ್ನಿ ಮುಡಿಯುವ ಕಾರ್ಯಕ್ರಮ ಇರುತ್ತಿತ್ತು. ನಂತರ ನಾವಿಲ್ಲಾ ಹಿರಿಯರಿಗೆ ಬನ್ನಿ ಕೊಟ್ಟು ಅವರ ಕಾಲಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುತ್ತಿದ್ದೆವು.
ಹತ್ತಾರು ವರ್ಷಗಳು ಉರುಳಿದ್ದವು, ಗೃಹಸ್ಥಾಶ್ರಮಕ್ಕ್ಕೆ ಕಾಲಿಟ್ಟೆದ್ದೆವು. ಅಮ್ಮನ ಹಾಗೆ ಮನೆಯಲ್ಲಿ ಕುಳಿತವರಲ್ಲ, ವಿದ್ಯಾವಂತರಾಗಿ ಉದ್ಯೋಗ ಅರಸಿ ಮನೆಯ ಹೊಸಿಲು ದಾಟಿದವರು. ಮನೆ, ಮಕ್ಕಳು, ಉದ್ಯೋಗ ಅಂತ ಎರಡೆರಡು ಕಡೆ ಜವಾಬ್ದಾರಿ ಹೊತ್ತು ಧಾವಂತದ ಬದುಕು ನಡೆಸುತ್ತಿರುವರು. ಕಾಲೇಜಿಗೆ ರಜಾ ಕೊಟ್ಟಾಗಗ ಮಾತ್ರ ಸಂಕ್ಷಿಪ್ತವಾಗಿ ಹಬ್ಬದ ಆಚರಣೆ, ಹಬ್ಬಕ್ಕೆಂದು ಮಾಡುವ ವಿಶೇಷ ಸಿಹಿ ಎಂದರೆ ಶ್ಯಾವಿಗೆ ಪಾಯಸ ಅಥವಾ ಜಾಮೂನ್. ನವರಾತ್ರಿಯ ಆಯುಧಪೂಜೆಯಂದು ದೇವರ ಕೋಣೆಯಲ್ಲಿ ಒಂದೆರೆಡು ಪುಸ್ತಕ ಪೆನ್ನು ಇಟ್ಟು, ಅಮ್ಮ ಮದುವೆಯ ಸಮಯದಲ್ಲಿ ಕೊಟ್ಟಿದ್ದ ಗಂಡು ಹೆಣ್ಣಿನ ಎರಡು ಚಂದನದ ಗೊಂಬೆ ಇಟ್ಟರೆ ಆಯಿತು.
ಕಾಲಚಕ್ರ ಉರುಳುತ್ತಿತ್ತು, ಮಕ್ಕಳು ದೊಡ್ಡವರಾದರು. ಇಂದಿನ ಯುವಪೀಳಿಗೆಯಂತೂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿರುವರು. ಬಹಳಷ್ಟು ಜನ ಅಮೆರಿಕಾ, ಯು.ಕೆ., ಆಸ್ಟ್ರೇಲಿಯಾ, ಕೆನಡಾ ಎಂದು ರೆಕ್ಕೆ ಕಟ್ಟಿಕೊಂಡು ಹಾರಿಹೋದವರು. ಎರಡು ಮೂರುವರ್ಷಕ್ಕೊಮ್ಮೆ ಅಮ್ಮ ಅಪ್ಪನನ್ನು ನೋಡಲು ಬರುವರು. ಸದಾ ಗಾಣದೆತ್ತಿನಂತೆ ದುಡಿಯುತ್ತಾ, ತಾವು ಗಳಿಸಿದ್ದನ್ನೆಲ್ಲಾ ಮಕ್ಕಳಿಗಾಗಿ ಸಂಗ್ರಹಿಸುತ್ತಾ ಜೀವನ ಸವೆಸಿದ್ದ ತಂದೆ ತಾಯಿಗಳನ್ನು ಹಬ್ಬದಲ್ಲಿ ರೆಸಾರ್ಟ್, ಹೋಮ್ ಸ್ಟೇಗಳಿಗೆ ಕರೆದೊಯ್ಯುವ ಮಕ್ಕಳು, ‘ಸಾಕು ನೀವು ದುಡಿದದ್ದು, ಇನ್ನಾದರೂ ಲೈಫ್ ಎಂಜಾಯ್ ಮಾಡಿ’ ಎನ್ನುವರು. ನಾವು, ‘ಹಬ್ಬ ಆಚರಿಸೋದು ಬೇಡ್ವಾ?’ ಎಂದರೆ ಹಬ್ಬಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡುವರು – ‘ಹಬ್ಬ ಎಂದರೆ ಎಲ್ಲರೂ ಒಟ್ಟಾಗಿ ಸೇರಿ ಖುಷಿಯಾಗಿರೊದು ಅಲ್ವಾ’ ಎಂದು ನಮ್ಮ ಬಾಯಿ ಮುಚ್ಚಿಸುವರು. ನಮಗಿಂತ ಹೆಚ್ಚು ಕಲಿತವರು, ದೇಶ ವಿದೇಶಗಳನ್ನು ಸುತ್ತಿ ಬಂದವರ ಮುಂದೆ ಮೌನವೇ ನಮ್ಮ ಉತ್ತರ.
ಈ ವರ್ಷದ ನವರಾತ್ರ್ರಿ ಹಬ್ಬವನ್ನು ಮಗಳ ಕುಟುಂಬದ ಜೊತೆಗೆ ಆಚರಿಸಿದ್ದು ವಿಶೇಷವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಚಿನ್ನಹಡ್ಲು ರೆಸಾರ್ಟ್‌ನಲ್ಲಿ ನಮ್ಮ ವಾಸ್ತವ್ಯ. ಹೆಸರಿಗೆ ತಕ್ಕಂತೆ ಬೆಟ್ಟದ ನೆತ್ತಿಯ ಮೇಲಿರುವ ಈ ರೆಸಾರ್ಟ್ ಮಲೆನಾಡಿನ ಗಿರಿಶಿಖರಗಳ ಮಧ್ಯೆ ಚಿನ್ನದಂತೆಯೇ ಕಂಗೊಳಿಸುತ್ತಿದೆ. ಸುಸಜ್ಜಿತವಾದ ಕೊಠಡಿಗಳು, ಈಜುಕೊಳ, ಮಕ್ಕಳಿಗೆಂದೇ ನಿರ್ಮಿಸಲಾಗಿರುವ ಪಾರ್ಕ್, ಬಣ್ಣ ಬಣ್ಣದ ಹೂಗಳು ಅರಳಿ ನಿಂತಿರುವ ಉದ್ಯಾನವನ, ರಾತ್ರಿ ಮರಗಳ ಸುತ್ತ ಮುತ್ತ ಹಾರಾಡುವ ಮಿಂಚು ಹುಳಗಳು, ಇನ್ನು ಕ್ಯಾಂಪ್‌ಫೈರ್ ಸುತ್ತ ಕುಣಿಯುವ ಯುವಕ ಯುವತಿಯರು. ಮುಂಜಾನೆ ಉದಯಿಸುವ ಸೂರ್ಯನ ಚೆಲುವನ್ನು ಕಣ್ತುಂಬಾ ತುಂಬಿಕೊಂಡೆವು, ಸಂಜೆ ಅಸ್ತಮಿಸುವ ರವಿಯ ಸೊಬಗನ್ನು ವರ್ಣಿಸಲು ನನ್ನ ಬಳಿ ಪದಗಳೇ ಇಲ್ಲ. ಈ ರೆಸಾರ್ಟ್‌ನ ಸಮೀಪದಲ್ಲಿದ್ದ ಬೆಟ್ಟದ ಬೈರವೇಶ್ವರ, ಪಾಂಡವರ ಬೆಟ್ಟ, ಎತ್ತಿನ ಭುಜ, ನಾಣ್ಯದ ಬೈರವೇಶ್ವರ ದೇಗುಲ, ದೇವರ ಮನೆ ಹಾಗೂ ಜೇನುಕಲ್ಲು ಗುಡ್ಡ ನೋಡಿದೆವು. ಎಲ್ಲಿ ನೋಡಿದರೂ ಹಸಿರು ಹೊದ್ದು ನಲಿಯುತ್ತಿದ್ದ ಪ್ರಕೃತಿ ಮಾತೆ, ಏರಿದಷ್ಟೂ ಇನ್ನೂ ಬಾ ಎಂದು ಸವಾಲು ಹಾಕುವ ಗಿರಿಶಿಖರಗಳು, ಸುಸ್ತಾಗಿ ಒಂದೆಡೆ ಕುಳಿತರೆ ಕೇಳುವ ಹಕ್ಕಿಗಳ ಇಂಪಾದ ಕಲರವ, ಕೀಚಲು ಧ್ವನಿಯಲ್ಲಿ ಕೂಗುವ ನವಿಲುಗಳು, ಮುಗಿಲ ರಾಜನಂತೆ ಗಂಭೀರವಾಗಿ ಎತ್ತರದಲ್ಲಿ ಹಾರುವ ಹದ್ದುಗಳು, ಮನಸ್ಸಿಗೆ ಮುದ ನೀಡುವ ದೃಶ್ಯಗಳು.
ಹಬ್ಬವನ್ನು ನಾವು ಆಚರಿಸುವುದಾದರೂ ಏಕೆ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತ್ತು – ಅಮ್ಮನ ಕಾಲದಲ್ಲಿ ಹಬ್ಬದ ಎಲ್ಲಾ ಆಚರಣೆಗಳನ್ನೂ ಶಾಸ್ತ್ರೋಕ್ತವಾಗಿ ಶ್ರದ್ಧೆಯಿಂದ ಆಚರಿಸುತ್ತಿದ್ದ ಸಡಗರ, ಉದ್ಯೋಗಸ್ಥಳಾದ ನಾನು ಹಬ್ಬದ ಆಚರಣೆಗಳನ್ನು ಸಂಕ್ಷಿಪ್ತವಾಗಿ ಮಾಡಿ ಮುಗಿಸುವ ಪದ್ಧತಿ, ವೈದ್ಯಳಾದ ಮಗಳು ಹಬ್ಬ ಬಂದಾಕ್ಷಣ ರಜೆ ಹಾಕಿ ಪ್ರಕೃತಿಯ ಮಡಿಲಲ್ಲಿರುವ ರೆಸಾರ್ಟ್‌ಗಳಿಗೆ ತೆರಳಿ ಬೆಟ್ಟ ಗುಡ್ಡಗಳನ್ನೇರಿ ಸಂಭ್ರಮಿಸುವ ಪರಿ. ಎಲ್ಲವೂ ಅವರವರ ಭಾವಕ್ಕೆ, ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ / ಹರಿಯ ಭಕ್ತರಿಗೆ ಹರಿ, ಹರನ ಭಕ್ತರಿಗೆ ಹರ ನರರೇನು ಭಾವಿಪರೋ ಅದರಂತೆ ತೋರುವನು ಈ ಹಬ್ಬಗಳ ಆಚರಣೆಯೂ ಅಷ್ಟೇ ಅಲ್ಲವೇ? ಅವರವರ ಭಾವಕ್ಕೆ ಸರಿತೋರುವಂತೆ ಆಚರಿಸುವ ಹಬ್ಬಗಳ ದಶಾವತಾರ ಬಲ್ಲವರಾರು?
– ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ
Enjoyed a lot new version of festival. But different festivals have their own traditions and meanings . How will you do them in ultra modern version?
ಹಬ್ಬದ ಆಚರಣೆ ಯಲ್ಲಿ..ಹೊಸತು ಹಳತಿನ ..ತೋರಣ..ಅಂತಿಮದಲ್ಲಿ ಅವರವರ ಭಾವ.. ಖಂಡಿತ… ಮೇಡಂ.
ಚೆನ್ನಾಗಿದೆ
ಹಬ್ಬವನ್ನು ಆಚರಿಸುವ ಹುಮ್ಮನಸ್ಸಿಗಿಂತ, ದಿನವನ್ನು ಸಂತೋಷವಾಗಿ ಕಳೆಯುವ ಮನೋಭಾವದ ಮುಂದೆ ತಲೆಬಾಗಿ, ಎಲ್ಲವನ್ನೂ ಅವರವರ ಭಾವಕ್ಕೆ ಬಿಟ್ಟ ಲೇಖನದ ಭಾವ ಇಷ್ಟವಾಯ್ತು.
ವಂದನೆಗಳು ನಾಗರತ್ನ ಮೇಡಂ,
ನಯನ ಹಾಗೂ ಶಂಕರಿ ಮೇಡಂ ರವರಿಗೆ
ನಿಮ್ಮ ಪ್ರತಿಕ್ರಿಯೆ ನನ್ನ ಬರವಣಿಗೆಗೆ ಅಮೃತ ಸಿಂಚನ ವಿದ್ದಂತೆ
Very meaningful article