ಅವಿಸ್ಮರಣೀಯ ಅಮೆರಿಕ – ಎಳೆ 63
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಫಿಲಡೆಲ್ಫಿಯಾ
Princeton ವಿಶ್ವವಿದ್ಯಾನಿಲಯದಿಂದ ಮಹಾನಗರ ವಾಷಿಂಗ್ಟನ್ ಗೆ ಹೋಗುವ ಮಾರ್ಗ ಮಧ್ಯ, ಅಂದರೆ ಸುಮಾರು 10 ಮೈಲಿ ದೂರದಲ್ಲಿರುವ, ಚಾರಿತ್ರಿಕ ಪೆನ್ಸಿಲ್ವೇನಿಯಾ ರಾಜ್ಯದಲ್ಲೇ ಅತ್ಯಂತ ದೊಡ್ಡ ಪಟ್ಟಣವಾದ ಫಿಲಡೆಲ್ಫಿಯಾದಲ್ಲಿ ರಾತ್ರಿ ನಾವು ಉಳಕೊಳ್ಳುವುದಿತ್ತು. ಸುಮಾರು 16 ಲಕ್ಷ ಜನಸಂಖ್ಯೆ ಹೊಂದಿರುವ ಈ ನಗರವು ಅಮೆರಿಕದ ಪೂರ್ವ ಕರಾವಳಿಯ ರಾಜ್ಯಗಳಲ್ಲಿಯೇ ಜನಸಂಖ್ಯೆಯಲ್ಲಿ ನ್ಯೂಯಾರ್ಕ್ ನಂತರದ ಎರಡನೇ ಸ್ಥಾನವನ್ನು ಪಡೆದಿದೆ. ಇದು ಸುಮಾರು 367ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು 1682ನೇ ಇಸವಿಯಲ್ಲಿ ಹೊರಜಗತ್ತಿಗೆ ಇದರ ಪರಿಚಯವಾಯಿತು. ಈ ಪಟ್ಟಣವು ರಾಜ್ಯದ ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರವೂ ಹೌದು.
ಲಿಬರ್ಟಿ ಬೆಲ್
ಅಮೆರಿಕ ದೇಶದ ಸ್ವಾತಂತ್ರ್ಯ ಘೋಷಣೆ ಮತ್ತು ಸಂವಿಧಾನ ರಚನೆಗಳಿಗೆ ಸಹಿಯಾದಂತಹ ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿದೆ ಇಲ್ಲಿಯ Independence Hall. ಇದು ಜಗತ್ತಿನ ಬಹುಮುಖ್ಯ ಚಾರಿತ್ರಿಕ ಹೆಗ್ಗುರುತಾಗಿ UNESCO ದಿಂದ ಗುರುತಿಸಲ್ಪಟ್ಟಿದೆ. ಹಾಗೆಯೆ, ಇದೇ ಕಟ್ಟಡದಲ್ಲಿರುವ ಲಿಬರ್ಟಿ ಬೆಲ್ (Liberty Bell), ಸ್ವಾತಂತ್ರ್ಯ ಘೋಷಣೆಗೆ ಸಾಕ್ಷಿಯಾಗಿ, ಸ್ವಾತಂತ್ರ್ಯದ ಹೆಗ್ಗುರುತಾಗಿ ನಿಂತಿದೆ. ಈ ಬೃಹದಾಕಾರದ ಗಂಟೆಯು 1752ರಲ್ಲಿ ಲಂಡನ್ ನಲ್ಲಿ ತಯಾರಿಸಲ್ಪಟ್ಟಿದ್ದು, ಅಲ್ಲಿಂದ ಫಿಲಡೆಲ್ಫಿಯಾಕ್ಕೆ ಕಳುಹಿಸಲ್ಪಟ್ಟಿತು. 4 ಅಡಿ ಎತ್ತರದ, 12ಅಡಿ ಸುತ್ತಳತೆಯ ತಾಮ್ರ , ಸತು ಅಲ್ಲದೆ ಇನ್ನೂ ಹಲವಾರು ಲೋಹಗಳನ್ನು ಸೇರಿಸಿ ಮಾಡಿದ ಮಿಶ್ರಲೋಹದಿಂದ ತಯಾರಿಸಿದ, ಸುಮಾರು 940 ಕೆ.ಜಿ ಭಾರದ ಈ ಗಂಟೆಯನ್ನು, Independence Hallನಲ್ಲಿರುವ 168 ಅಡಿ ಎತ್ತರದ ಗೋಪುರದಲ್ಲಿ ನೇತು ಹಾಕಲಾಯಿತು. ಇದನ್ನು ಪ್ರತಿ ಒಂದು ಗಂಟೆಗೊಮ್ಮೆ ಬಾರಿಸಲಾಗುತ್ತದೆ. ಆದರೆ ಈ ಐತಿಹಾಸಿಕ ಗಂಟೆಯು ಈಗ ಬಿರುಕು ಬಿಟ್ಟ ಸ್ಥಿತಿಯಲ್ಲಿರುವುದು ಸ್ವಲ್ಪ ಖೇದಕರ ಸಂಗತಿ. ಇದು ಬಿರುಕು ಬಿಡಲು ನಿಜವಾದ ಕಾರಣವು ಅರಿಯದಿದ್ದರೂ, ಕಾಲ ಕಾಲಕ್ಕೆ ಬಾರಿಸುವ ಸಮಯದಲ್ಲಿ ಈ ಅನಾಹುತ ಸಂಭವಿಸಿರಬಹುದೆಂದು ಊಹಿಸಲಾಗಿದೆ. ಈ ಗಂಟೆಯನ್ನು State House Bell ಅಥವಾ State Bell ಎಂದೂ ಕರೆಯಲಾಗುವುದು.
ನಾವು ಅಲ್ಲಿಗೆ ತಲಪಿದಾಗ ಸಂಜೆ 7ಗಂಟೆ.. ಆದರೆ ಇನ್ನೂ ಸಂಜೆ ಬೆಳಕು ಎಲ್ಲೆಡೆ ಪಸರಿಸಿತ್ತು. ನಮ್ಮ ವಾಹನವು ನಗರದೊಳಗೆ ಪ್ರವೇಶಿಸುತ್ತಿದ್ದಂತೆಯೇ ರಸ್ತೆ ಪೂರ್ತಿ ಜನರಿಂದ ತುಂಬಿ ವಾಹನವು ಚಲಿಸಲು ಸಾಧ್ಯವಿಲ್ಲದಂತಾಯಿತು. ಎಲ್ಲೆಲ್ಲೂ ವಿಶೇಷವಾದ ಕಾಮನಬಿಲ್ಲಿನ ಬಣ್ಣದಿಂದ ಮಾಡಿದ ಅಲಂಕಾರ, ಎಲ್ಲರ ದಿರುಸುಗಳೂ ಅದೇ ಬಣ್ಣದವು.. ಬಣ್ಣ ಬಣ್ಣದ ರಿಬ್ಬನ್ ಗಳು …ಅಂತೂ ಅದೊಂದು ಬಣ್ಣದ ಲೋಕವಾಗಿ ವಿಜೃಂಭಿಸುತ್ತಿತ್ತು. ಎಲ್ಲರೂ ಗಟ್ಟಿ ಧ್ವನಿಯಲ್ಲಿ ಏನೋ ಹೇಳುತ್ತಾ, ಹಾಡುತ್ತಾ, ಕುಣಿಯುತ್ತಾ ಮೆರವಣಿಗೆ ಸಾಗಿತ್ತು. ಅವರು ಎಲ್ಲರಿಗೂ ಕಾಮನಬಿಲ್ಲಿನ ಬಣ್ಣದ ಕರಪತ್ರಗಳನ್ನು ಹಂಚುತ್ತಿದ್ದರು. ನಾನು ಇದೇನೆಂದು ತಿಳಿಯದೆ ಅಳಿಯನ ಬಳಿ ಕೇಳಿದಾಗ ತಿಳಿದು ಬಂದ ವಿಷಯ ನಿಜಕ್ಕೂ ಆಘಾತಕಾರಿಯಾಗಿತ್ತು. ಇದು ತೃತೀಯ ಲಿಂಗಿಗಳು ತಮ್ಮ ಮೂಲಭೂತ ಹಕ್ಕಿಗಾಗಿ ಮಾಡುತ್ತಿರುವ ಹೋರಾಟವಾಗಿತ್ತು! ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದ ಇವರ ಬದುಕು, ನಮ್ಮಲ್ಲಿಯಂತೆಯೇ ಅತಂತ್ರವಾಗಿರುವುದು ತಿಳಿದು ಮನ ನೊಂದಿತು… ಹಾಗೆಯೇ ಅವರು ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇರುವುದು ಆಶ್ಚರ್ಯವನ್ನುಂಟು ಮಾಡಿತು.
ಅಗಲವಾದ, ಸೊಗಸಾದ ರಸ್ತೆಯ ಇಕ್ಕೆಲಗಳಲ್ಲಿ ಮಧ್ಯಮ ಗಾತ್ರದ ಮರಗಳು ತಂಪಾದ ನೆರಳನ್ನೀಯುತ್ತಿದ್ದವು. ಇಲ್ಲಿ, ಗಗನಚುಂಬಿ ಕಟ್ಟಡಗಳು ಎಲ್ಲೂ ಕಾಣಸಿಗಲಿಲ್ಲ. ಸೂರ್ಯಾಸ್ತದ ಸಮಯವಾದ್ದರಿಂದ ಕತ್ತಲೆ ಆವರಿಸಲು ಪ್ರಾರಂಭವಾಯಿತು. ಅಳಿಯ, ವಾಹನವನ್ನು ನೇರವಾಗಿ ಲಿಬರ್ಟಿ ಬೆಲ್ ಇರುವ ಗೋಪುರದ ಎದುರು ತಂದು ನಿಲ್ಲಿಸಿದ. ನಸುಗತ್ತಲೆಯಲ್ಲಿ, ಕುತೂಹಲದಿಂದ, ಗೋಪುರದ ಮೇಲ್ಭಾಗದಲ್ಲಿರುವ ಗಂಟೆಯನ್ನು ನೋಡಲು ಹರಸಾಹಸಪಟ್ಟೆ. ಅಲ್ಲೇ ಪಕ್ಕದಲ್ಲಿರುವ ಕಟ್ಟಡದ ಹೊರಭಾಗದಲ್ಲಿ ಪುಟ್ಟ ಆವರಣದೊಳಗೆ ಹೊಸದಾದ ಗಂಟೆಯೊಂದನ್ನು ನೆಲಮಟ್ಟದಲ್ಲಿ ನೇತುಹಾಕಿದ್ದರು. ಬಿರುಕು ಬಿಟ್ಟು ಹಳೆಯದಾದ ಗಂಟೆಯ ಬದಲು ಇದನ್ನು ಗೋಪುರದ ಮೇಲೆ ನೇತು ಹಾಕಲಾಗುವುದು ಎಂದು ತಿಳಿಯಿತು.
ಅದಾಗಲೇ ಕತ್ತಲಾವರಿಸಿತು…ಗೋಪುರದ ಮುಂಭಾಗದಲ್ಲಿ ಬಹು ದೊಡ್ಡದಾದ ಮೈದಾನದ ಸುತ್ತಲೂ ಸೊಗಸಾದ ಮರ ಪೊದೆಗಳು, ಅವುಗಳಲ್ಲಿ ಅರಳಿ ನಿಂತ ಬಣ್ಣ ಬಣ್ಣದ ಹೂಗಳು… ಎಲ್ಲವನ್ನೂ ಸುತ್ತಾಡಿ ನೋಡುತ್ತಿದ್ದವರನ್ನು ಅಳಿಯ ಎಚ್ಚರಿಸಿ ಕರೆದೊಯ್ದು. ಅಲ್ಲೇ ಪಕ್ಕದಲ್ಲಿ ಉದ್ದಕ್ಕಿದ್ದ ಹಜಾರದ ಹೊರ ಗೋಡೆಗಳಲ್ಲಿ ಬಹು ವಿವರವಾಗಿ, ಚಿತ್ರ ಸಹಿತ, ಅವುಗಳಿಗೆ ತಕ್ಕುದಾದ ಬೆಳಕಿನ ವ್ಯವಸ್ಥೆಯೊಂದಿಗೆ ಇಲ್ಲಿಯ ಇತಿಹಾಸವನ್ನು ವಿವರಿಸಲಾಗಿತ್ತು. ಆ ದಿನ ಆದಿತ್ಯವಾರವಾದ್ದರಿಂದ ಒಳಗಡೆಗೆ ನೋಡುವ ಅವಕಾಶ ಸಿಗಲಿಲ್ಲ. ಮುಂದಕ್ಕೆ ಪೇಟೆ ಸುತ್ತಲು ಹೊರಟಾಗ ಜನರ ದಂಡು ಸಾಕಷ್ಟು ಕಡಿಮೆಯಾಗಿತ್ತು.
ಮುಖ್ಯಬೀದಿಗೆ ಬಂದಾಗ…ಆಹಾ…ನಾವು ಬೇರೆಯೇ ಲೋಕಕ್ಕೆ ಬಂದಿಳಿದಿದ್ದೆವು! ಈ ವರೆಗೆ ಕಂಡಿರದಷ್ಟು…ಅಂದರೆ, ಕ್ರಿಕೆಟ್ ಬಯಲಿನಂತೆ ಅತ್ಯಂತ ವಿಶಾಲವಾದ ರಸ್ತೆಗಳು!! ಇವು ಹೂದೋಟದ ನಡುವೆ ಹಾದು ಹೋಗಿವೆಯೋ ಎಂಬಂತೆ, ರಸ್ತೆ ವಿಭಾಜಕಗಳಲ್ಲಿ, ರಸ್ತೆ ಪಕ್ಕದ ಕಾಲುದಾರಿಯಲ್ಲಿ, ದೀಪದ ಕಂಬಗಳಲ್ಲಿ ಅತ್ಯಂತ ಸುಂದರ ಹೂಗಳು ಅರಳಿನಿಂತ ಹೂಕುಂಡಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರು. ಬಹುಅಂತಸ್ತಿನ ಕಟ್ಟಡಗಳು ಬಹಳ ವಿರಳವಾಗಿದ್ದರೂ; ಅವುಗಳು ಬಹುಬಣ್ಣ ವಿದ್ಯುದ್ದೀಪಗಳಿಂದ ಬೆಳಗಿ ಸ್ವರ್ಗ ಸೃಷ್ಟಿಸಿದ್ದವು! ಅದಾಗಲೇ ರಾತ್ರಿ ಎಂಟು ಗಂಟೆ…ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ವಾಹನಗಳ ಸಂಚಾರ. ಆದರೆ ಇವೆಲ್ಲವುಗಳ ನಡುವೆ ಕಾಲುದಾರಿಯಲ್ಲಿ ಅಪರೂಪಕ್ಕೆ ಕಾಣಸಿಕ್ಕಿದ, ಬಡವರಂತೆ ತೋರುತ್ತಿದ್ದ ಸ್ಥಳೀಯರು ನಶೆ ಏರಿಸಿಕೊಂಡು ಕಾಲುದಾರಿ ಪಕ್ಕದಲ್ಲಿರುವ ಬೆಂಚುಗಳಲ್ಲಿ, ಕತ್ತಲೆಯಲ್ಲಿ ಮೌನವಾಗಿ ಕುಳಿತಿರುವುದು ಕಂಡಿತು…ಬೆಳಕಿನ ಭವ್ಯಲೋಕದಲ್ಲಿ ಕಪ್ಪುಚುಕ್ಕೆಯಂತೆ! ಆದರೆ, ಅನುಪಾತಗಳಲ್ಲಿ ಹೆಚ್ಚು ಕಡಿಮೆ ಇದ್ದರೂ, ಬಡತನವೆಂಬುದು ಸಾರ್ವತ್ರಿಕ ಎನ್ನುವ ವಾಸ್ತವಿಕತೆಯನ್ನು ಒಪ್ಪಲೇಬೇಕಲ್ಲವೇ? ಅಹ್ಲಾದಕರ, ಸುಂದರ ವಾತಾವರಣದಲ್ಲಿ ಪಟ್ಟಣದ ಸೊಬಗನ್ನು ವೀಕ್ಷಿಸುತ್ತಾ, ಮೊದಲೇ ಕಾದಿರಿಸಿದ ಭವ್ಯ ಹೋಟೆಲ್… Holiday Inn Express ಒಳಹೊಕ್ಕೆವು. ಬೇರೆಲ್ಲೂ ಇಲ್ಲದಿದ್ದ ಅತ್ಯಂತ ವಿಶಾಲವಾದ, ಸುಸಜ್ಜಿತ ರೂಮುಗಳನ್ನು ಕಂಡಾಗ ಬೆರಗಾಗಿ ಹೋದೆ! ಇದೇನು ಹೀಗೆ ಎಂದು ಕೇಳಿದಾಗ; ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆಯಾದ್ದರಿಂದ ಹಾಗೂ ಈ ಪ್ರದೇಶದ ಜೀವನ ವೆಚ್ಚವು ಮಿಕ್ಕೆಲ್ಲಾ ಪ್ರದೇಶಗಳಿಗಿಂತ ಬಹಳ ಕಡಿಮೆಯಾಗಿರುವುದರಿಂದ ಇವುಗಳ ಲಭ್ಯತೆ ಸುಲಭ ಹಾಗೂ ಅಗ್ಗ ಎಂಬುದು ತಿಳಿಯಿತು. ಸುತ್ತಾಟದ ಆಯಾಸ, ದೀರ್ಘ ಪ್ರಯಾಣ, ಸೊಗಸಾದ ಹೋಟೇಲ್ ಸವಲತ್ತುಗಳು, ನಮ್ಮನ್ನು ಬಹುಬೇಗ ನೆಮ್ಮದಿಯ ನಿದ್ದೆಗೆ ಜಾರಿಸಿದವು.
ಮರುದಿನ ಜೂನ್ 10, ಸೋಮವಾರ. ಬೆಳಗ್ಗಿನ ಉಪಾಹಾರ ಮುಗಿಸಿ ನಗರ ಸುತ್ತಲು ಹೊರಟೆವು. ಇದೇ ದಿನ ಪ್ರಯಾಣವನ್ನು ಮುಂದುವರಿಸಬೇಕಿದ್ದರಿಂದ ಚಂದದ ರೂಮನ್ನು ಮನಸ್ಸಿಲ್ಲದ ಮನಸ್ಸಿನಿಂದ ಬಿಟ್ಟುಕೊಡಲೇ ಬೇಕಾಯ್ತು. ನಮ್ಮೆಲ್ಲಾ ಸಾಮಾನುಗಳ ಸಹಿತ ಹೊರಟೆವು… ನಮ್ಮ ಎರಡನೇ ದಿನದ ವೀಕ್ಷಣೆಗೆ. ಹಿಂದಿನ ದಿನ ರಾತ್ರಿ ಹೊತ್ತಲ್ಲಿ ಕಂಡ ದೃಶ್ಯಗಳಿಗಿಂತ ತೀರಾ ಭಿನ್ನವಾದ ದೃಶ್ಯಗಳಾಗಿದ್ದವು… ನಾವು ನೋಡುತ್ತಿರುವ ರಸ್ತೆಗಳು ಹಾಗೂ ಅವುಗಳ ಪಕ್ಕಗಳಲ್ಲಿರುವ ಕಟ್ಟಡಗಳು. ಅತ್ಯಂತ ಪುರಾತನ ಮಾದರಿಯ ಪಾರಂಪರಿಕ ಕಲಾಪ್ರಕಾರದಲ್ಲಿ ರಚಿಸಿದ ಮನೆಗಳು, ಸ್ವಚ್ಛ ಸಾದಾ ರಸ್ತೆಗಳು, ಎಲ್ಲಿ ನೋಡಿದರಲ್ಲಿ ಕಾಣಸಿಗುವ ವಿಶಾಲವಾದ ಅಂದದ ಪಾರ್ಕ್ ಗಳು, ಅವುಗಳಲ್ಲಿ ಹಾಗೂ ಪ್ರತಿ ಮನೆಯ ಮುಂದುಗಡೆಯೂ ಹೂಕುಂಡಗಳಲ್ಲಿ ಮತ್ತು ಇರುವ ಪುಟ್ಟದಾದ ಜಾಗದಲ್ಲೇ ನೆಲದ ಮೇಲೆ ಬೆಳೆಸಿದ ಗಿಡಗಳಲ್ಲಿ ಹೂವುಗಳರಳಿ ನಿಂತ ಪರಿ.. ನಾವೆಲ್ಲೋ ಹಳ್ಳಿಯ ಹಳೆಯ ಚಾರಿತ್ರಿಕ ಕಲಾಗ್ರಾಮದೊಳಗಿನ ಸೊಬಗಿನಲ್ಲಿ ಬೆರೆತುಹೋದಂತೆ ಭಾಸವಾಯಿತು. ಮನೆ ಗೋಡೆಗಳು, ಕಾಲುದಾರಿ ಎಲ್ಲವೂ ಕೆಂಪು ಇಟ್ಟಿಗೆಗಳನ್ನು ಬಳಸಿ ರಚಿಸಲಾಗಿದ್ದು, ಈಗಲೂ ಹೊಚ್ಚ ಹೊಸದರಂತೆ ಕೆಂಬಣ್ಣದಿಂದ ಹೊಳೆಯುತ್ತಿರುವುದು ಬಹಳ ಕುತೂಹಲದಾಯಕವಾಗಿದೆ. ಬಾಗಿಲು ಜಡಿದಿದ್ದ ಮನೆಗಳ ಸಣ್ಣ ಮೆಟ್ಟಿಲುಗಳ ಮೇಲೆ ಧೈರ್ಯದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು.
ಹೀಗೆ ನಡೆದು ಹೋಗುತ್ತಿರುವಾಗ, ಪುಟ್ಟ ಕಾಲುದಾರಿಯ ಪಕ್ಕದಲ್ಲಿ ಪ್ರತಿಯೊಂದು ಮನೆಯ ಮುಂಭಾಗದಲ್ಲಿ; ಹಿಡಿಕೆಯಿರುವ ಮುಚ್ಚಳವೊಂದನ್ನು ಗಮನಿಸಿದಾಗ ಕುತೂಹಲವು ಹೆಚ್ಚಾಯಿತು. ಇದು ಯಾವುದಕ್ಕಾಗಿ ಉಪಯೋಗವಾಗಿರಬಹುದೆಂದು ವಿಚಾರಿಸಲಾಗಿ; ಅದು ರಸ್ತೆಯಲ್ಲಿ ವಾಹನ ಮೂಲಕ ಬರುವ ಇದ್ದಿಲು ಮೂಟೆಗಳನ್ನು ನೇರವಾಗಿ ಮನೆಯ ಮಾಲೀಕರಿಗೆ ಸುಲಭ ರೂಪದಲ್ಲಿ ತಲಪಿಸುವ ಮಾರ್ಗವಾಗಿತ್ತು! ಅಲ್ಲಿಯ ರಂಧ್ರದ ಮೂಲಕ ಸಾಗಿದ ಮೂಟೆಗಳು ಮನೆಯ ನೆಲಮಾಳಿಗೆಯ ಬೆಚ್ಚನೆಯ ಕೋಣೆಯನ್ನು ಸೇರುತ್ತಿತ್ತು. ಈಗ ಇವುಗಳು ಉಪಯೋಗದಲ್ಲಿಲ್ಲದೆ, ಬರೇ ಪಳೆಯುಳಿಕೆಯಾಗಿ ಉಳಿದಿದ್ದರೂ, ಸುಸ್ಥಿತಿಯಲ್ಲಿವೆ.
ಸುತ್ತಾಡಿ ದಣಿದಾಗ ಮುಂಭಾಗದಲ್ಲೇ ಗೋಚರಿಸಿತು…ಬಹು ವಿಶಾಲವಾದ ಸುಂದರ ಪಾರ್ಕ್. ಎತ್ತರೆತ್ತರ ಮರಗಳು, ಹುಲ್ಲು ಹಾಸು, ಅಲ್ಲಲ್ಲಿ ಸೊಗಸಾದ ಹೂಗಿಡಗಳು, ಆರಾಮಾಸನಗಳು ಸ್ವಚ್ಛ ಪರಿಸರದಲ್ಲಿ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದ್ದವು. ಎತ್ತರದ ವೇದಿಕೆಯಲ್ಲಿ ಯೋಧನೊಬ್ಬನ ಲೋಹದ ಮೂರ್ತಿಯೆದುರು ಬೆಳಗುವ ಜ್ಯೋತಿಯು ಗಮನ ಸೆಳೆಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಸೈನಿಕರಿಗಾಗಿ ಸಾರ್ವಜನಿಕರೇ ಬೆಳಗುತ್ತಿರುವ ಅಮರಜ್ಯೋತಿಯಾಗಿತ್ತದು. ಅಲ್ಲಿ ಸ್ವಲ್ಪ ಸಮಯವನ್ನು ಕಳೆದು, ಯೋಧರಿಗೆ ಮನದಲ್ಲೇ ಶ್ರದ್ಧಾಂಜಲಿಯನ್ನರ್ಪಿಸಿದೆವು. ಮಧ್ಯಾಹ್ನ ಎರಡು ಗಂಟೆಯ ಹೊತ್ತು… ಮೊಸರನ್ನು ತುಂಬಿದ ಡಬ್ಬಗಳು ನಮ್ಮನ್ನು ಕೂಗಿ ಕರೆಯತೊಡಗಿದವು… ಉಪ್ಪಿನಕಾಯಿ ಪಕ್ಕದಲ್ಲಿ ಕಾದುಕುಳಿತಿತ್ತು! ಬಾಳೆಕಾಯಿ ಚಿಪ್ಸ್ ಹಳದಿ ಅಂಗಿ ತೊಟ್ಟು ಕುಣಿಯುತ್ತಿತ್ತು.. ಇನ್ನು ಕೇಳಬೇಕೇ …ಲಗುಬಗನೆ ಎಲ್ಲವೂ ಹೊಟ್ಟೆಸೇರಿದವು. ಜೊತೆಗೇ, ಅಮೆರಿಕದಲ್ಲಿ, ಯಾವುದೇ ಪಾರ್ಕ್ ಗಳಲ್ಲಿ ಈ ವರೆಗೆ ಕಾಣಸಿಗದ ಅಪರೂಪದ ಸಂಗತಿಯಾಗಿ, ದೊಡ್ಡ ನಾಯಿಯೊಂದು ನಮ್ಮ ಮುಂದೆ ಪ್ರತ್ಯಕ್ಷವಾಗಿಬಿಟ್ಟಿತು! ಅದರ ಗಾತ್ರ ನೋಡಿಯೇ ಭಯಗೊಂಡೆ. ನನಗೋ ಆಯೋಮಯ! ನಮ್ಮೂರಂತೆ ಕಲ್ಲು ಬೀರಿ “ಹಚ್..” ಎಂದು ಓಡಿಸಬೇಕೇ?..ಇಲ್ಲಾ, ಸ್ವಲ್ಪ ಚಿಪ್ಸ್ ಅದರ ಮುಂದೆ ಇಡಬೇಕೇ?? ಸುಮ್ಮನೆ ಕುಳಿತು ನೋಡಿದೆ…ಅದರ ಒಡತಿ, ನಮ್ಮ ಮುಂಭಾಗದ ದೊಡ್ಡ ಪೊದರಿನಾಚೆಯ ಬೆಂಚಿನಿಂದೆದ್ದು ಬಂದು ಅದನ್ನು ಕರೆದೊಯ್ದಾಗ ಮನಸ್ಸು ನಿರಾಳವಾಯ್ತೆನ್ನಿ! ಏನಾದರೂ ಕಲ್ಲು ಬೀರಿದ್ದರೆ ಅವಳ ಬೈಗಳು ಕೇಳಬೇಕಿತ್ತೇನೋ!!.. ಅಂತೂ ಅದರಿಂದ ಬಚಾವಾದೆ! ಉಂಡಲ್ಲಿ ಸ್ವಚ್ಛಗೊಳಿಸಿ, ನಮ್ಮ ಮುಂದಿನ ಪ್ರಯಾಣಕ್ಕೆ ಸಜ್ಜಾದೆವು…. ಇಲ್ಲಿಂದ ಸುಮಾರು ಎರಡೂವರೆ ಗಂಟೆಗಳ ಪ್ರಯಾಣದ 140 ಮೈಲುಗಳಷ್ಟು ದೂರದಲ್ಲಿರುವ ದೇಶದ ರಾಜಧಾನಿ, ವಾಷಿಂಗ್ಟನ್ ಡಿ. ಸಿ. ಯತ್ತ.
ನಮ್ಮ ವಾಹನವು ಅತ್ಯಂತ ವಿಶಾಲವಾದ ಸುಂದರ, ದೀರ್ಘ ರಸ್ತೆಯಲ್ಲಿ ಪಯಣಿಸುತ್ತಿದ್ದಂತೆ, ಹೊಟ್ಟೆಯಲ್ಲಿ ತಣ್ಣಗೆ ಕುಳಿತಿದ್ದ ಮೊಸರನ್ನವು ನನ್ನನ್ನು ತನ್ನ ನಿದ್ದೆಯ ಮಡಿಲಿಗೆ ಎಳೆದೊಯ್ದು ಬಿಟ್ಟಿತು. ಯಾವುದೋ ಕ್ಷಣದಲ್ಲಿ ಕಣ್ಣು ತೆರೆದಾಗ ನಮ್ಮ ಕಾರು ಯಾವುದೋ ಪುಟ್ಟ ಹಳ್ಳಿಯಲ್ಲಿರುವಂತೆ ಕಂಡುಬಂತು. ಎದುರುಗಡೆಗೆ ಟ್ಯಾಂಕರಿನಂತಹ ಯುದ್ಧ ಸಾಮಗ್ರಿಗಳು ತನ್ನ ಕೆಲವು ಅವಯವಗಳನ್ನು ಕಳೆದುಕೊಂಡು ಅನಾಥವಾಗಿ ನಿಂತಿದ್ದವು. ಒಂದು ಟ್ಯಾಂಕರ್ ಅಂತೂ, ತನ್ನೆಲ್ಲಾ ಯಶೋಗಾಥೆಗಳನ್ನು ನಮ್ಮೆದುರು ಹೆಮ್ಮೆಯಿಂದ ಕೊಚ್ಚಿಕೊಂಡಿತು! ಜೊತೆಗೆ ತನ್ನ ಸುತ್ತಲೂ ಹೇರಳವಾಗಿ ಬೆಳೆದ ಹುಲ್ಲಿನ ಜೊತೆಗೆ ಗೆಳೆತನ ಗಟ್ಟಿಗೊಳಿಸುವ ಯತ್ನ ನಡೆಸಿತ್ತು! ಪಕ್ಕದಲ್ಲೇ ಪ್ರಾಕೃತಿಕವಾಗಿ ಬೆಳೆದ ದಟ್ಟ ಹಸಿರು ಮರಗಳು, ಬಳ್ಳಿಗಳು ಪೊದೆಗಳು, ಸಣ್ಣಗೆ ಜುಳು ಜುಳು ಹರಿಯುವ ಸಣ್ಣ ತೊರೆ.. ನಮ್ಮನ್ನು ಅಲ್ಲಿಂದ ಕದಲದಂತೆ ಮಾಡಿಬಿಟ್ಟಿದ್ದವು. ದೂರದಲ್ಲಿ ಕೆಲವು ಕಟ್ಟಡಗಳಿದ್ದು, ಮನುಷ್ಯರ ಇರವನ್ನು ಪುಷ್ಟೀಕರಿಸಿದವು. ಎಲ್ಲಾ ಕಡೆ ಸಾಕಷ್ಟು ಸಮಯ ಸುತ್ತಾಡಿ, ಫೋಟೋ ಕ್ಲಿಕ್ಕಿಸಿ ವಾಹನ ಏರಿದಾಗ ಸಂಜೆ ನಾಲ್ಕು ಗಂಟೆ… ರಸ್ತೆ ಪಕ್ಕದ ಸುಂದರ ದಟ್ಟ ಹಸಿರುಸಿರಿಯನ್ನು ಮನದಣಿಯೆ ವೀಕ್ಷಿಸುತ್ತಾ ಕುತೂಹಲದಿಂದ ಕುಳಿತವಳಿಗೆ ರಾಜಧಾನಿ ತಲಪುವ ಕಾತರ ಹೆಚ್ಚಿತ್ತು…
(ಮುಂದುವರಿಯುವುದು…..)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://surahonne.com/?p=38727
-ಶಂಕರಿ ಶರ್ಮ, ಪುತ್ತೂರು.
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು…ಪೂರಕ ಚಿತ್ರ ಗಳು..ಚೆನ್ನಾಗಿ ಮೂಡಿಬಂದಿವೆ..ವಂದನೆಗಳು ಮೇಡಂ
ತಮ್ಮ ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು ನಾಗರತ್ನ ಮೇಡಂ
ಚೆನ್ನಾಗಿದೆ
ನಯನಾ ಮೇಡಂ ಅವರಿಗೆ. ಧನ್ಯವಾದಗಳು
ಚೆನ್ನಾಗಿದೆ ಅಕ್ಕಾ
ಧನ್ಯವಾದಗಳು ಆಶಾ.
ಪ್ರವಾಸ ಕಥನ ಚೆನ್ನಾಗಿದೆ
ಧನ್ಯವಾದಗಳು ಪದ್ಮಿನಿ ಮೇಡಂ.
ಎಂದಿನಂತೆ ಪ್ರವಾಸ ಕಥನ ಅಮೆರಿಕಾದ ಹಲವಾರು ಪ್ರದೇಶಗಳನ್ನು ಕಣ್ಣಿಗೆ ಕಟ್ಟುವಂತೆ ಪರಿಚಯಿಸುತ್ತಾ ಸಾಗುತ್ತಿದೆ.