ಅಲ್ಪಾಯುಷಿಯಾದ ಟೈಟಾನಿಕ್
‘ಅಮ್ಮಾ, ಈ ದಿನ ಆರ್.ಎಮ್.ಎಸ್. ಟೈಟಾನಿಕ್ ನೋಡಲು ಹೋಗೋಣ ಬನ್ನಿ’ ಎಂದು ಮಗ ಕರೆದಾಗ, ಥಟ್ಟನೇ ಮನದಲ್ಲಿ ಮೂಡಿದ್ದು ಟೈಟಾನಿಕ್ ಸಿನೆಮಾದಲ್ಲಿ ಹಡಗಿನ ಮುಂಭಾಗದಲ್ಲಿ ಹಾರುವ ಹಕ್ಕಿಗಳ ಭಂಗಿಯಲ್ಲಿ ನಿಂತ ಹೀರೊ ಮತ್ತು ಹೀರೋಯಿನ್. 1997 ರಲ್ಲಿ ತೆರೆಕಂಡ ಈ ಸಿನೆಮಾ ಇಡೀ ಜಗತ್ತಿನ ಮನೆಮಾತಾಗಿತ್ತು. ಹಾಗೆಯೇ ಸೆಲಿನ್ ಡಿಯೋನ್ ಹಾಡಿದ ಗೀತೆ My heart will go on …. ಎಲ್ಲರ ಮೆಚ್ಚುಗೆ ಗಳಿಸಿತ್ತು.
ಟೈಟಾನಿಕ್ ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ವೈಭವೋಪೇತವಾದ ಹಡಗು ಎಂದು ಖ್ಯಾತಿ ಪಡೆದಿತ್ತು. ಈ ಹಡಗು ಅವಿನಾಶಿ, ಯಾವ ಅವಘಡವೂ ಸಂಭವಿಸಲು ಸಾಧ್ಯವೇ ಇಲ್ಲ ಎಂದಿದ್ದರು ಹಡಗನ್ನು ಕಟ್ಟಿದ ಕುಶಲಕರ್ಮಿಗಳು. ಉತ್ತರ ಐರ್‌ಲ್ಯಾಂಡಿನ ರಾಜಧಾನಿಯಾದ ಬೆಲ್‌ಫಾಸ್ಟ್‌ನಲ್ಲಿ ಕಟ್ಟಲಾದ ಟೈಟಾನಿಕ್ ಹಡಗು ಸಾವಿರಾರು ಜನರನ್ನು ತನ್ನ ಮಡಿಲಲ್ಲಿ ಕುಳ್ಳಿರಿಸಿಕೊಂಡು ಏಪ್ರಿಲ್ 10, 1912 ರಂದು ಇಂಗ್ಲೆಂಡಿನ ಸೌತ್‌ಆಮ್‌ಟನ್‌ನಿಂದ ಹೊರಟು ಅಮೆರಿಕಾದ ನ್ಯೂಯಾರ್ಕ್‌ಗೆ ಸಂಭ್ರಮದಿಂದ ಹೊರಟಿತ್ತು. ಈ ಅಭೂತಪೂರ್ವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನ ನೆರೆದಿದ್ದರು. ಸಾಗರವನ್ನು ಇಬ್ಭಾಗ ಮಾಡುತ್ತಾ ರಾಜಗಾಂಭೀರ್ಯದಿಂದ ಮುನ್ನುಗ್ಗುತ್ತಿದ್ದ ಟೈಟಾನಿಕ್ ಹಡಗನ್ನು ನೋಡುತ್ತಿದ್ದ ಜನರ ಹರ್ಷ ಮುಗಿಲು ಮುಟ್ಟಿತ್ತು. ದುರದೃಷ್ಟವಶಾತ್, ಏಪ್ರಿಲ್ 14, 1912 ರ ರಾತ್ರಿ 11.40 ಗಂಟೆಗೆ ಒಂದು ದೊಡ್ಡ ಹಿಮಬಂಡೆಗೆ ಡಿಕ್ಕಿ ಹೊಡೆದಾಗ ಹಡಗಿಗೆ ಹಾನಿಯುಂಟಾಗಿ, ಸಮುದ್ರದ ನೀರು ಹಡಗಿನೊಳಗೆ ತುಂಬಿ ನಿಧಾನವಾಗಿ ಮುಳುಗತೊಡಗಿತ್ತು. ಕೇವಲ ಎರಡೂವರೆ ಗಂಟೆಗಳಲ್ಲಿ ಅತ್ಯದ್ಭುತವಾದ ಹಡಗು ಟೈಟಾನಿಕ್ ಅಟ್ಲಾಂಟಿಕ್ ಸಾಗರದ ತಳ ಸೇರಿತ್ತು. ತಮ್ಮ ಜೀವವನ್ನು ಉಳಿಸಿಕೊಳ್ಳಲು ನುಗ್ಗಿದ ಹಲವು ಪ್ರಯಾಣ ಕರು ಶೀತಲವಾದ ಸಾಗರದಲ್ಲಿ ಮುಳುಗಿ ಮರಣ ಹೊಂದಿದರು. ಸುಮಾರು 1,512 ಜನರು ಈ ದುರಂತದಲ್ಲಿ ಬಲಿಯಾದರು. ಹಡಗಿನ ಕಪ್ತಾನನು ಕಳುಹಿಸಿದ ಅಪಾಯದ ಕರೆಗಂಟೆ ಸನಿಹದಲ್ಲಿದ್ದ ಬೇರೆ ಹಡಗುಗಳಿಗೆ ತಡವಾಗಿ ಕೇಳಿಸಿತ್ತು. ನಾಲ್ಕು ತಾಸು ತಡವಾಗಿ ಬಂದ ಹಡಗು ಲೈಫು ಬೋಟ್‌ಗಳಲ್ಲಿದ್ದ 710 ಜನರನ್ನು ರಕ್ಷಿಸುವುದರಲ್ಲಿ ಸಫಲರಾದರು.
ಅಂದು ಟೈಟಾನಿಕ್ ಯಶಸ್ವಿಯಾಗಿ ತನ್ನ ಚೊಚ್ಚಲ ಪಯಣವನ್ನು ಮುಗಿಸಿದ್ದಿದ್ದರೆ, ಇಷ್ಟುಕಾಲ ನಮ್ಮ ನೆನಪಿನಲ್ಲಿ ಉಳಿಯುತ್ತಿರಲಿಲ್ಲವೇನೋ? ಇಂಗ್ಲಿಷ್ ಕವಿ ಪಿ.ಬಿ. ಶೆಲ್ಲಿ ಬರೆದ ಟು ಎ ಸ್ಕೈಲಾರ್ಕ್ ಕವನದಲ್ಲಿ ಬರುವ ಸಾಲುಗಳು ಮನದಲ್ಲಿ ರಿಂಗುಣ ಸಿದವು -”Our Sweetest songs are those that tell of saddest thoughts.”. ದುರಂತಕ್ಕೀಡಾದ ಟೈಟಾನಿಕ್ ಬಗ್ಗೆ ಅದ್ಭುತವಾದ ಸಿನೆಮಾ ಪ್ರದರ್ಶನಗೊಂಡಿತು, ನೂರಾರು ಕಥೆ, ಕವನ ಹಾಗೂ ನಾಟಕಗಳನ್ನು ರಚಿಸಲಾಯಿತು, ಇಂದು ಟೈಟಾನಿಕ್ ಬೆಲ್‌ಫಾಸ್ಟ್‌ನ ಸಾಂಸ್ಕೃತಿಕ ಅಸ್ಮಿತೆಯಾಗಿ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.
ಟೈಟಾನಿಕ್‌ನ ರೂಪು ರೇಷೆಗಳನ್ನು ರಚಿಸಿದ್ದು, ನಿರ್ಮಿಸಿದ್ದು ಉತ್ತರ ಐರ್‌ಲ್ಯಾಂಡಿನಲ್ಲಿರುವ ಬೆಲ್‌ಫಾಸ್ಟ್‌ನಲ್ಲಿಯೇ. ಹಾಗಾಗಿ ಟೈಟಾನಿಕ್ ಬೆಲ್‌ಫಾಸ್ಟ್ ಎಂಬ ಹೆಸರು ಹೊತ್ತ ಪ್ರಖ್ಯಾತ ಮ್ಯೂಸಿಯಂನ್ನು ಇದೇ ಸ್ಥಳದಲ್ಲಿ ನಿರ್ಮಿಸಲಾಗಿದೆ. ಸುಮಾರು 126 ಅಡಿ ಎತ್ತರವಿರುವ ಈ ಕಟ್ಟಡ ಹಡಗಿನ ಆಕಾರವನ್ನು ಹೋಲುತ್ತಿತ್ತು, ಆದರೆ ಕೆಲವು ಸ್ಥಳಿಯರು, ಈ ಕಟ್ಟಡ ಟೈಟಾನಿಕ್‌ಗೆ ಡಿಕ್ಕಿ ಹೊಡೆದ ಹಿಮಬಂಡೆಯನ್ನು ಹೋಲುವುದು ಎನ್ನುತ್ತಾರೆ. ಟೈಟಾನಿಕ್ ದುರಂತ ಸಂಭವಿಸಿ ನೂರು ವರ್ಷಗಳು ಉರುಳಿದ ಸಂದರ್ಭದಲ್ಲಿ ಈ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು. 2016 ನೇ ಸಾಲಿನ ಜಾಗತಿಕ ಪ್ರವಾಸೀ ಕೇಂದ್ರ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಟೈಟಾನಿಕ್ ಎಂದರೆ ಅಜೇಯ, ಅಮರ, ಯಾವುದೇ ಅವಘಡ ಸಂಭವಿಸುವುದು ಅಸಂಭವ ಎಂದು ಬಿಂಬಿಸಲಾಗಿತ್ತು. ಐಷಾರಾಮಿ ಸೌಲಭ್ಯಗಳನ್ನುಳ್ಳ ಅರಮನೆಯಂತಿದ್ದ ಬೃಹತ್ತಾದ ಈ ಹಡಗನ್ನು ಬಹಳ ವಿಶೇಷವಾಗಿ ರಚಿಸಲಾಗಿತ್ತು. ಟೈಟಾನಿಕ್ ತನ್ನ ಮೊದಲ ಪಯಣದಲ್ಲಿಯೇ ಹೀಗೆ ದುರಂತಕ್ಕೀಡಾಗಬಹುದೆಂದು ಯಾರೂ ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಇಂತಹ ಭವ್ಯವಾದ ಹಡಗಿನ ಕಥೆಯನ್ನು ಪ್ರವಾಸಿಗರಿಗೆ ತಿಳಿಸಲೆಂದೇ ನಿರ್ಮಿಸಲಾಗಿದೆ ಟೈಟಾನಿಕ್ ಬೆಲ್‌ಫಾಸ್ಟ್. ಇಪ್ಪತ್ತನೇ ಶತಮಾನದ ಆದಿಯಲ್ಲಿ ಹಲವು ಕೈಗಾರಿಕೆಗಳಿದ್ದ ರಾಜ್ಯ ಬೆಲ್‌ಫಾಸ್ಟ್, ಅವುಗಳಲ್ಲಿ ಪ್ರಮುಖವಾದುವು – ಹತ್ತಿಯ ಕಾರ್ಖಾನೆ, ಹೊಗೆಸೊಪ್ಪಿನ ಸಂಸ್ಕರಣಾ ಘಟಕಗಳು, ಹಗ್ಗವನ್ನು ತಯಾರಿಸುವ ಮಿಲ್‌ಗಳು ಹಾಗೂ ಹಡಗು ನಿರ್ಮಾಣ ಮಾಡುವ ಬೃಹತ್ ಕೈಗಾರಿಕೆಗಳು. ಇವುಗಳಲ್ಲಿ ಪ್ರಸಿದ್ಧವಾದ ಕೈಗಾರಿಕೆ ಹಾರ್‌ಲ್ಯಾಂಡ್ ಮತ್ತು ವೂಲ್ಫ್ ಹಡಗು ನಿರ್ಮಿಸುವ ಕೇಂದ್ರ. 1911 ರಲ್ಲಿ ಒಲಿಂಪಿಕ್ ಎಂಬ ಹಡಗನ್ನೂ, 1912 ರಲ್ಲಿ ಟೈಟಾನಿಕ್ ಎಂಬ ಹಡಗನ್ನೂ, 1913 ರಲ್ಲಿ ಬ್ರಿಟಾನಿಕಾ ಎಂಬ ಹಡಗನ್ನೂ ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುವುದು. ಅತ್ಯಂತ ಸುಭದ್ರವಾದ, ದೊಡ್ಡದಾದ ಹಾಗೂ ಭವ್ಯವಾದ ಹಡಗು ಟೈಟಾನಿಕ್. ಇದರ ಅಳತೆ ಎಂತಹವರನ್ನೂ ಚಕಿತಗೊಳಿಸುವುದು – 882 ಅಡಿ ಉದ್ದ, 92 ಅಡಿ ಅಗಲ ಹಾಗೂ 104 ಅಡಿ ಎತ್ತರವಿದ್ದು, ಇದರ ತೂಕ 46,328 ಟನ್‌ಗಳು. ಈ ಹಡಗಿನಲ್ಲಿ ವೈಭವೋಪೇತವಾದ ಕೊಠಡಿಗಳೂ, ಊಟದ ಕೋಣೆಗಳೂ, ಪ್ರಯಾಣಿಕರನ್ನು ರಂಜಿಸಲು ವಾದ್ಯ ಸಂಗೀತದವರೂ, ನೃತ್ಯ ಮಾಡಲು ಪ್ರತ್ಯೇಕ ಸಭಾಂಗಣಗಳೂ, ಈಜುಕೊಳಗಳೂ ಇದ್ದವು. ಪ್ರಥಮ ದರ್ಜೆಯ ಪ್ರಯಾಣಿಕರಿಗೆ ಇರುವ ಸೌಲಭ್ಯಗಳು ರಾಜ ಮಹಾರಾಜರ ಅರಮನೆಯನ್ನೂ ಮೀರಿಸುವಂತಿದ್ದವು. ಈ ಹಡಗಿನ ನಿರ್ಮಾಣದ ವೆಚ್ಚ ನೂರಾ ಒಂದು ಮಿಲಿಯನ್ ಪೌಂಡ್‌ಗಳು.
1,30,000 ಚದರ ಅಡಿ ವಿಸ್ತೀರ್ಣವಿದ್ದ ಟೈಟಾನಿಕ್ ಬೆಲ್‌ಫಾಸ್ಟ್ ಮ್ಯೂಸಿಯಂನ ಮುಂಭಾಗದಲ್ಲಿ ಎತ್ತರವಾದ ವೇದಿಕೆಯ ಮೇಲಿನಿಂದ ನೀರಿಗೆ ಜಿಗಿಯುವ ಭಂಗಿಯಲ್ಲಿದ್ದ ಟೈಟಾನಿಕಾ ಎಂಬ ಸ್ತ್ರೀಯ ಪ್ರತಿಮೆ ನಮ್ಮನ್ನು ಸ್ವಾಗತಿಸಿತ್ತು. ರೊವಾನ್ ಜಿಲೆಸ್ಪಿ ಎಂಬ ಪ್ರಖ್ಯಾತ ಶಿಲ್ಪಿ ನಿರ್ಮಿಸಿರುವ ಈ ಶಿಲ್ಪ ಭರವಸೆ ಮತ್ತು ಧನಾತ್ಮಕ ಆಲೋಚನೆಗಳ ರೂಪಕವಾಗಿ ನಿಂತಿರುವುದು. 2012 ರಲ್ಲಿ ಎರಿಕ್ ಕುನ್ಹೆ ಹಾಗೂ ಅವನ ಸಂಗಡಿಗರು ನಿರ್ಮಿಸಿದ ಈ ಮ್ಯೂಸಿಯಂನಲ್ಲಿ ಟೈಟಾನಿಕ್ ಎಂಬ ನತದೃಷ್ಟ ಹಡಗಿನ ಕಥೆಯನ್ನು ಆದಿಯಿಂದ ಅಂತ್ಯದವರೆಗೆ ವಿಡಿಯೋಗಳ ಮೂಲಕ ಕಣ ಗೆ ಕಟ್ಟುವಂತೆ ಪ್ರದರ್ಶಿಸಲಾಗಿದೆ. ಈ ಹಡಗು ಕಟ್ಟಿದ ವಿವಿಧ ಹಂತಗಳನ್ನು, ಸುಮಾರು ಒಂಭತ್ತು ಗ್ಯಾಲರಿಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಸ್ವಯಂ ಮಾರ್ಗದರ್ಶಿಯಾದ ಫೋನನ್ನು ಕಿವಿಗೆ ಸಿಕ್ಕಿಸಿಕೊಂಡು ನಾವು ಲಿಫ್ಟ್ ಮೂಲಕ ಈ ಒಂಭತ್ತು ಗ್ಯಾಲರಿಗಳನ್ನೂ ನೋಡಲು ಹೊರಟೆವು. ಇಡೀ ಹಡಗು ಕಟ್ಟುವ ಪ್ರಕ್ರಿಯೆಯ ಪಕ್ಷಿನೋಟವನ್ನು ನಮ್ಮ ಕಣ್ಣ ಮುಂದೆ ಒಂದೊಂದಾಗಿ ತೆರೆದಿಡುತ್ತಾ ಹೋಗುತ್ತಾರೆ. ಆಡಿಯೋ ಕೇಳುತ್ತಾ ಅಲ್ಲಿ ಕಂಡ ವಿಡಿಯೋಗಳನ್ನು ನೋಡುತ್ತಾ ಹೋಗುವಾಗ ಒಂದು ಶತಮಾನದ ಹಿಂದೆ ಪಯಣಿಸಿದ ಅನುಭವವಾಗಿತ್ತು. ಮೇ 11, 1910 ರಲ್ಲಿ, ಈ ಹಡಗು ಕಟ್ಟುವ ಕಾರ್ಯ ಆರಂಭ, ನೂರಾರು ಜನ ಕುಶಲಕರ್ಮಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುತ್ತಾರೆ. ಹಲಗೆಗಳನ್ನು ಜೋಡಿಸುವ ಕೆಲಸ, ಕಾರ್ಮಿಕರಿಗೆ ಮಾರ್ಗದರ್ಶನ ಮಾಡುತ್ತಿರುವ ಮೇಸ್ತ್ರಿಗಳು, ಕುಲುಮೆಯಲ್ಲಿ ಕಬ್ಬಿಣದ ಉಪಕರಣಗಳನ್ನು ಮಾಡುತ್ತಿರುವ ಕಮ್ಮಾರರು, ಇಂಜಿನ್‌ಗಳಲ್ಲಿ ಬರ್ರೋ ಎಂಬ ಶಬ್ದ ಹೊರಡಿಸುತ್ತಿರುವ ಮೆಕ್ಯಾನಿಕ್‌ಗಳು. ಹಡಗು ನಿರ್ಮಾಣ ಮುಗಿಯುತ್ತಾ ಬಂದಾಗ ಟೈಟಾನಿಕ್ ಪೀಠೋಪಕರಣಗಳಿಂದ ಸಜ್ಜಾಗತೊಡಗಿತ್ತು. ನೋಡ ನೋಡುತ್ತಿದ್ದಂತೆ ಭವ್ಯವಾದ ಬೃಹತ್ತಾದ ಹಡಗು ನಮ್ಮ ಕಣ್ಣಮುಂದೆ ನಿಂತಿತ್ತು. ಅಬ್ಬಾ, ಏನು ಅದರ ಗಾತ್ರ, ವೈಭವ, ಠೀವಿ!. ಟೈಟಾನಿಕ್ ಅರಮನೆಯಂತೆ ಗೋಚರಿಸತೊಡಗಿತ್ತು. ಟೈಟಾನಿಕ್ ನ ಭೂತೋ ನ ಭವಿಷ್ಯತಿ ಎನ್ನುವ ಸಂಸ್ಕೃತ ನಾಣ್ಣುಡಿಯಂತೆ ತೋರುವುದು. ಹಿಂದೆಯೂ ಇಂತಹ ಹಡಗನ್ನು ಕಟ್ಟಿದವರಿಲ್ಲ, ಮುಂದೆಯೂ ಇಂತಹ ಭವ್ಯವಾದ ಹಡಗನ್ನು ಕಟ್ಟಲು ಅಸಾಧ್ಯ. ಮುಂದೆ ಒಂದು ಪುಟ್ಟ ಕೇಬಲ್ ಕಾರ್‌ನಲ್ಲಿ ನಮ್ಮನ್ನು ಕರೆದೊಯ್ದಾಗ ನಾವು ಟೈಟಾನಿಕ್‌ನಲ್ಲಿ ಓಡಾಡಿದ ಭಾವ ಆವರಿಸಿತ್ತು. ಮೇ 11, 1911 ರಂದು ಈ ಹಡಗನ್ನು ಪ್ರಯೋಗಾರ್ಥವಾಗಿ ನಡೆಸಲಾಯಿತು. ಏಪ್ರಿಲ್ 10, 1912 ರಂದು ಟೈಟಾನಿಕ್ ಇಂಗ್ಲೆಂಡಿನಿಂದ ಯೂರೋಪ್ ಮಾರ್ಗವಾಗಿ ಅಮೆರಿಕಾಗೆ ಹೊರಡುವ ದಿನ – ನೂರಾರು ಜನ ಹಡಗನ್ನು ಏರುತ್ತಿದ್ದರು, ನ್ಯೂಯಾರ್ಕಿಗೆ ವ್ಯಾಪಾರ ವಹಿವಾಟಿಗಾಗಿ ಹೊರಟವರು, ಶುಭ ಸಮಾರಂಭಗಳಿಗೆ ಹೊರಟವರು, ಉದ್ಯೋಗ ಅರಸಿ ಹೊರಟವರು, ಅವರನ್ನು ಬೀಳ್ಕೊಡಲು ನೆರೆದಿದ್ದ ಬಂಧು ಬಾಂಧವರು, ಇಂತಹ ಬೃಹತ್ ಗಾತ್ರದ ಹಡಗನ್ನು ನೋಡಲೆಂದೇ ಬಂದ ಜನಸಮೂಹ ಎಲ್ಲರನ್ನೂ ಕಂಡೆವು. ಹಡಗು ಸಂಭ್ರಮದಿಂದ ಮುನ್ನೆಡೆದಿತ್ತು. ಬೆಲ್‌ಫಾಸ್ಟ್‌ನಿಂದ ಪಯಣ ಆರಂಭಿಸಿದ ಟೈಟಾನಿಕ್, ಸೌತ್‌ಆಂಪ್ಟನ್ ಮೂಲಕ ಚೆರ್‌ಬುರ್ಗ್ ನಗರಗಳನ್ನು ದಾಟಿ ಪಶ್ಚಿಮದತ್ತ ಹೊರಟಿತ್ತು.
14 ಏಪ್ರಿಲ್ 1912 ರ ರಾತ್ರಿ ಹಾಯಾಗಿ ನಿದ್ರಿಸುತ್ತಿದ್ದ ಪ್ರಯಾಣಿಕರು, ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು, ಹಡಗನ್ನು ಓಡಿಸುತ್ತಿದ್ದ ಕಪ್ತಾನರು ಎಲ್ಲರೂ ನಮ್ಮ ಕಣ್ಣ ಮುಂದೆ ಹಾದು ಹೋದರು. ಇದ್ದಕ್ಕಿದ್ದಂತೆ ಹಡಗಿನ ಸನಿಹದಲ್ಲಿಯೇ ಭಾರೀ ಗಾತ್ರದ ಹಿಮಬಂಡೆಯೊಂದು ತೇಲಿ ಬರುವುದನ್ನು ಕಂಡು ಹಡಗಿನ ಕಪ್ತಾನರು ದಿಗ್ಭ್ರಾಂತರಾದರು. ಈ ಅವಘಡವನ್ನು ತಪ್ಪಿಸಲು ಹಡಗಿನ ದಿಕ್ಕನ್ನೇ ಬದಲಿಸಲು ಯತ್ನಿಸಿದರು, ಆದರೆ ರಭಸವಾಗಿ ನುಗ್ಗಿ ಬರುತ್ತಿದ್ದ ಭಾರೀ ಗಾತ್ರದ ಹಿಮಬಂಡೆಯ ಮುಂದೆ ಇವರ ಪ್ರಯತ್ನಗಳೆಲ್ಲಾ ವಿಫಲವಾದವು. ಸಮಯ 11.40 ಗಂಟೆ, ಹಡಗಿನ ಕೆಳಭಾಗದ ಹಲಗೆಗಳಲ್ಲಿ ಬಿರುಕು ಮೂಡಿ ಸಮುದ್ರದ ನೀರು ಒಳಗೆ ನುಗ್ಗಲಾರಂಭಿಸಿತು, ಅಪಾಯದ ಕರೆಗಂಟೆಯನ್ನು ಬಾರಿಸಲಾಯಿತು, ಪ್ರಯಾಣಿಕರೆಲ್ಲಾ ಜೀವಭಯದಿಂದ ಹಡಗಿನ ಮೇಲ್ಭಾಗಕ್ಕೆ ಧಾವಿಸಲಾರಂಭಿಸಿದರು. ಆ ಹಡಗಿನಲ್ಲಿ ಇದ್ದದ್ದು ಕೇವಲ ಇಪ್ಪತ್ತು ಲೈಫ್ ಬೋಟುಗಳು. ಹೆಂಗಸರು ಮತ್ತು ಮಕ್ಕಳನ್ನು ಆ ಪುಟ್ಟ ಪುಟ್ಟ ದೋಣಿಗಳಲ್ಲಿ ಕೂರಿಸಿ ಸುರಕ್ಷಿತವಾಗಿ ಕಳುಹಿಸಲಾಯಿತು. ಕಪ್ತಾನರು ಹತ್ತಿರದಲ್ಲಿದ್ದ ಹಡಗುಗಳಿಗೆ ಮೋರ್ಸ್‌ಕೋಡ್ ಮೂಲಕ ದುರಂತದ ತುರ್ತು ಸಂದೇಶವನ್ನು ರವಾನಿಸಿದರು. ದುರದೃಷ್ಟವಶಾತ್, ಅವರಿಗೆ ಸಂದೇಶ ತುಸು ತಡವಾಗಿ ತಲುಪಿದ್ದರಿಂದ, ನಾಲ್ಕು ಗಂಟೆಗಳ ನಂತರವೇ ನೆರವು ಕಳುಹಿಸಲು ಸಾಧ್ಯವಾಗಿತ್ತು. ಸುಮಾರು 1,512 ಜನರು ಜಲಸಮಾಧಿಯಾಗಿದ್ದರು. ಬಹಳಷ್ಟು ಜನರ ಶವಗಳೂ ಸಿಗಲಿಲ್ಲ, ಸಿಕ್ಕ ಶವಗಳ ಸಂಖ್ಯೆ ಕೇವಲ 209.
ನಮಗೆ ಮೋರ್ಸ್‌ಕೋಡಿನ ಸದ್ದು ಹಿಮ್ಮೇಳದಂತೆ ಕೇಳಿಸುತ್ತಿತ್ತು, ಕಣ್ಣ ಮುಂದೆಯೇ – ಮುಳುಗುತ್ತಿರುವ ಟೈಟಾನಿಕ್ ಹಡಗು, ಅಮೆರಿಕಾ ಮತ್ತು ಇಂಗ್ಲೆಂಡಿನ ಪತ್ರಿಕಾ ವರದಿಗಾರರ ಸುದ್ದಿ ಪ್ರಸಾರ, ಅಪಘಾತದಲ್ಲಿ ಬದುಕುಳಿದ ಪ್ರಯಾಣಿಕರ ಹೃದಯವಿದ್ರಾವಕ ಕಥೆಗಳ ವಿಡಿಯೋಗಳು ನಮಗೆ ಆಘಾತವನ್ನುಂಟು ಮಾಡಿದವು. ಟೈಟಾನಿಕ್ ದುರಂತದಲ್ಲಿ ಮಡಿದವರ ಫೋಟೋಗಳನ್ನೆಲ್ಲಾ ಸವಿವರಗಳೊಂದಿಗೆ ಸಾಲು ಸಾಲಾಗಿ ಪ್ರದರ್ಶಿಸಿದ್ದರು, ಅಪಘಾತದ ಸಮಯದಲ್ಲಿ ದೊರೆತ ವಸ್ತುಗಳನ್ನೆಲ್ಲಾ ಜೋಡಿಸಿದ್ದರು. ಅಪಘಾತವನ್ನು ಹೇಗೆ ತಡೆಯಬಹುದಿತ್ತು ಎಂಬ ಎಚ್ಚರಿಕೆಯನ್ನೂ ನೀಡಿದ್ದರು. 1997 ರಲ್ಲಿ ಉತ್ತರ ಅಂಟಾರ್ಟಿಕಾ ಸಾಗರದ ತಳದಲ್ಲಿ ಟೈಟಾನಿಕ್ ಅವಶೇಷಗಳನ್ನು ಪತ್ತೆ ಹಚ್ಚಿದ ರಾಬರ್ಟ್ ಬಲ್ಲಾರ್ಡ್ ಬಗ್ಗೆಯೂ ಸವಿಸ್ತಾರವಾದ ಮಾಹಿತಿ ಅಲ್ಲಿತ್ತು, ಜೊತೆಗೇ ಆ ಹಡಗಿನಲ್ಲಿ ದೊರೆತ ಕಲಾತ್ಮಕ ವಸ್ತುಗಳು ಸುಮಾರು 16.5 ಮಿಲಿಯನ್ ಪೌಂಡ್‌ಗಳಿಗೆ ಮಾರಾಟವಾಯಿತೆಂಬ ಮಾಹಿತಿಯೂ ದೊರಕಿತು.
ಟೈಟಾನಿಕ್ ಹಡಗು ಅಪಘಾತಕ್ಕೀಡಾದ ಮೇಲೆ ಅದೊಂದು ಅಪಶಕುನವೆಂದು ಪರಿಗಣಿಸಿ ಬೆಲ್‌ಫಾಸ್ಟ್‌ನ ಜನರು ಈ ಘಟನೆಯನ್ನು ತಮ್ಮ ಸ್ಮೃತಿಪಟಲದಿಂದ ಅಳಿಸಿಹಾಕಲು ಯತ್ನಿಸಿದರು. ನಂತರದಲ್ಲಿ ನಡೆದ ಎರಡು ಪ್ರಪಂಚದ ಮಹಾಯುದ್ಧಗಳು, ಐರ್‌ಲ್ಯಾಂಡಿನ ವಿಭಜನೆ, ಹಡಗು ಕಟ್ಟುವ ಉದ್ಯಮದ ಅವನತಿ ಮುಂತಾದ ಘಟನೆಗಳು, ಈ ದುರಂತವನ್ನು ಸಂಪೂರ್ಣವಾಗಿ ಮರೆಸಿದವು. ಆದರೆ 1997 ರಲ್ಲಿ ಸಮುದ್ರದ ತಳಭಾಗದಲ್ಲಿ ಅನ್ವೇಷಣೆ ಮಾಡುತ್ತಿದ್ದ ರಾಬರ್ಟ್ ಬಲ್ಲಾರ್ಡ್ ಎಂಬ ವಿಜ್ಞಾನಿಯು ಟೈಟಾನಿಕ್ ಅವಶೇಷಗಳನ್ನು ಪತ್ತೆ ಹಚ್ಚಿದಾಗ ಮತ್ತೆ ಈ ದುರಂತ ಮುನ್ನೆಲೆಗೆ ಬಂತು, ಈ ಹಡಗನ್ನು ಕಟ್ಟಿದ ಸ್ಥಳವನ್ನು ಪ್ರವಾಸೀ ಕೇಂದ್ರವನ್ನಾಗಿ ಮಾಡುವ ಆಲೋಚನೆ ಮೂಡಿದ್ದು ಮ್ಯಾರಿಟೈಮ್ ಬೆಲ್‌ಫಾಸ್ಟ್ ಟ್ರಸ್ಟ್‌ಗೆ. ಇಂದು ಈ ಮ್ಯೂಸಿಯಂ ಬೆಲ್‌ಫಾಸ್ಟ್‌ನ ಖ್ಯಾತ ಪ್ರವಾಸೀ ಆಕರ್ಷಣೆಯಾಗಿ ನಿಂತಿದೆ. 2012 ರಲ್ಲಿ ಆರಂಭವಾದ ಟೈಟಾನಿಕ್ ಬೆಲ್‌ಫಾಸ್ಟ್ಗೆ ಸುಮಾರು ಹದಿನೈದು ಪ್ರಶಸ್ತಿಗಳು ಲಭಿಸಿವೆ. ಆನೆ ಇದ್ದಾಗಲೂ ಲಕ್ಷ, ಸತ್ತಾಗಲೂ ಲಕ್ಷ ಎಂಬ ಕನ್ನಡದ ನಾಣ್ಣುಡಿಯಂತೆ ಟೈಟಾನಿಕ್ ಹಡಗು ಇದ್ದಾಗಲೂ ಪ್ರಖ್ಯಾತವಾಗಿತ್ತು, ದುರಂತಕ್ಕೆ ಈಡಾದ ಮೇಲೂ ಲಕ್ಷಗಟ್ಟಲೆ ಪ್ರವಾಸಿಗರು ಈ ಮ್ಯೂಸಿಯಂನ್ನು ವೀಕ್ಷಿಸಲು ಬರುತ್ತಾರೆ.
ಟೈಟಾನಿಕ್ ಬೆಲ್‌ಫಾಸ್ಟ್ ನೋಡಿ ಮನೆಗೆ ಹಿಂದಿರುಗುವಾಗ ಎಲ್ಲರೂ ಮೌನಕ್ಕೆ ಶರಣಾಗಿದ್ದೆವು. ಭವ್ಯವಾದ ಟೈಟಾನಿಕ್, ಸಂಭ್ರಮದಿಂದ ಈ ಹಡಗಿನಲ್ಲಿ ಪಯಣ ಸಿದ ಪ್ರಯಾಣಿಕರು, ನಾಲ್ಕೇ ದಿನಗಳಲ್ಲಿ ದುರಂತಕ್ಕೀಡಾದ ಹಡಗು, ತಮ್ಮ ಪ್ರೀತಿಪಾತ್ರರನ್ನು ಲೈಫ್ ಬೋಟುಗಳಲ್ಲಿ ಕೂರಿಸಿ ಕಣ್ಣೊರೆಸಿಕೊಳ್ಳುತ್ತಿದ್ದವರು, ಹಡಗಿನ ಜೊತೆಗೇ ಜಲಸಮಾಧಿಯಾದವರು, ಪತ್ರಿಕಾ ವರದಿಗಳು, ಬಂಧುಬಾಂಧವರ ಸುದ್ಧಿ ತಿಳಿಯಲು ಕಾತುರರಾಗಿ ನಿಂತ ಜನಸಮೂಹ ಈ ಎಲ್ಲಾ ದೃಶ್ಯಗಳೂ ಒಂದೊಂದಾಗಿ ಮನಃಪಟಲದಲ್ಲಿ ಮೂಡುತ್ತಿದ್ದವು.
–ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ವಾವ್.. ನಮ್ಮ ಕಣ್ಣಮುಂದೆ…ನೆಡೆಯುತಿದ್ದೇನೆಂಬಂತೆ…ಬರದಿರುವ ಲೇಖನ ಮನಕ್ಕೆ ಬಹಳ ಮುದಕೊಟ್ಟಿತು… ಮೇಡಂ..
Thanks a lot for yr response
Nice
Thank you
ಚಂದದ ಲೇಖನ ಮೇಡಂ ..ಓದಿ ಬಹಳ ಖುಷಿ ಆಯಿತು .
ಟ್ಯಟಾನಿಕ್ ಸಿನೆಮಾದ ದೃಶ್ಯಾವಳಿಗಳು ಕಣ್ಣ ಮುಂದೆ ಬಂದವು
Thank you dear friends
ಟೈಟಾನಿಕ್ ಹಡಗಿನ ದುರಂತವನ್ನು ಅತ್ಯಂತ ಯಶಸ್ವಿಯಾಗಿ ಜನರೆದುರು ತಂದ ಕೀರ್ತಿ ಅದರದೇ ಹೆಸರಿನ ಸಿನಿಮಾದ ನಿರ್ಮಾಪಕರಿಗೆ ಸಲ್ಲುತ್ತದೆ. ಅದರ ಜೀವಂತ ಸಾಕ್ಷಿಗಳ ವೀಕ್ಷಕ ವಿವರಣೆ ನೀಡಿದ ಗಾಯತ್ರಿ ಮೇಡಂ ಅವರಿಗೆ ವಂದನೆಗಳು.
Thanks madam