ಪುಸ್ತಕ ಪರಿಚಯ : ಮಲೆಯಾಳದ ಪೆಣ್ ಕಥನ …
ಪುಸ್ತಕ :– ಮಲೆಯಾಳದ ಪೆಣ್ ಕಥನ (ಮಲೆಯಾಳದ ಖ್ಯಾತ ಲೇಖಕಿಯರ ಕಥೆಗಳು)
ಅನುವಾದಕರು :- ಡಾ. ಕಮಲಾ ಹೆಮ್ಮಿಗೆ
ಪ್ರಕಾಶಕರು :- ಸೃಷ್ಟಿ ಪ್ರಕಾಶನ.
ಪ್ರತಿಯೊಂದು ಭಾಷೆಯೂ ಅದನ್ನು ಆಡುವವರ ಮಟ್ಟಿಗೆ ವಿಶಿಷ್ಟವಾದುದೇ. ಯಾವ ಭಾಷೆಗೂ ಮೇಲು ಕೀಳು ಎಂಬುದು ಇಲ್ಲ . ಎಲ್ಲವೂ ಆಯಾಯ ಪ್ರದೇಶಕ್ಕೆ ತಕ್ಕಂತೆ ಶ್ರೇಷ್ಠವೇ. ಒಂದು ಭಾಷೆಯ ಸಾಹಿತ್ಯವನ್ನು ಮತ್ತೊಂದು ಭಾಷೆಗೆ ಅನುವಾದ ಮಾಡುವುದು ಸಾಮಾನ್ಯ ವಿಚಾರವಲ್ಲ. ಇಲ್ಲಿ ಬಹಳ ಪ್ರಬುದ್ಧತೆ, ಭಾಷೆಯ ಮೇಲೆ ಹಿಡಿತ, ವ್ಯಾಕರಣಗಳ ಕುರಿತು ಜ್ಞಾನ ಇವೆಲ್ಲವೂ ಸುಲಲಿತವಾಗಿ ತಿಳಿದಿರಬೇಕಾಗುತ್ತದೆ. ಹೀಗಿದ್ದಾಗ ಮಾತ್ರ ಅನುವಾದಗೊಂಡ ಕೃತಿ ಓದುಗರ ಮನಸ್ಸನ್ನು ಮುಟ್ಟುತ್ತದೆ. ಹೀಗೆ ಬೇರೆ ಭಾಷೆಯ ಸಾಹಿತ್ಯವನ್ನು ಅನುವಾದ ಮಾಡುವುದು ಕೂಡ ಒಳ್ಳೆಯ ಕೆಲಸವೇ. ಇದರಿಂದ ಬೇರೆ ಭಾಷೆಯ ಬರಹಗಾರರ ವಿಚಾರಧಾರೆಗಳು ಓದುಗರನ್ನು ತಲುಪುತ್ತವೆ. ಈ ನಿಟ್ಟಿನಲ್ಲಿ ಮಲೆಯಾಳದ ಪೆಣ್ ಕಥನ ಕಮಲಾ ಹೆಮ್ಮಿಗೆಯವರು ಮಾಡಿದ ಅದ್ಭುತ ಹಾಗೂ ಶ್ಲಾಘನೀಯ ಕೆಲಸ.
ಕೇರಳ ವಿಭಿನ್ನ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರ, ಮಲೆಯಾಳಂ ಭಾಷೆಯನ್ನು ಹೊಂದಿದ ರಾಜ್ಯ. ಇಲ್ಲಿಯ ಜನರ ಜೀವನ ಶೈಲಿಯೂ ವಿಭಿನ್ನ. ಈ ರಾಜ್ಯದ ಸಂಸ್ಕೃತಿ, ಪದ್ಧತಿಗಳಲ್ಲಿ ಏನೋ ಒಂದು ಸೆಳೆತ, ಆಕರ್ಷಣೆ, ಅಚ್ಚರಿ ಇದೆ. ಈ ರಾಜ್ಯಕ್ಕೆ ಕಾಲಿರಿಸಿದಾಗಿನಿಂದಲು ಇಲ್ಲಿನ ಇತಿಹಾಸ, ಆಚರಣೆಗಳು, ಸಂಸ್ಕೃತಿಯನ್ನು ಬಹಳ ಆಳವಾಗಿ ಅರಿಯಬೇಕು ಅನ್ನುವ ಕುತೂಹಲ ನನ್ನಲ್ಲಿ. ಈಗ ಇದಕ್ಕೆ ಪೂರಕವಾಗಿ ದೊರೆತ ಕಮಲಾ ಹೆಮ್ಮಿಗೆಯವರ ಕೃತಿಯಲ್ಲಿ ಕೆಲವೊಂದು ಮಾಹಿತಿಗಳು ಲಭ್ಯ. ಪ್ರವೇಶಿಕೆಯಲ್ಲಿ ಈ ಕೃತಿಯ ವೈಶಿಷ್ಟ್ಯತೆ ಏನು ಅನ್ನುವುದು ಲಭ್ಯ.
ಕೃತಿಯ ಹೆಸರೇ ಸೂಚಿಸುವಂತೆ ಇಲ್ಲಿರುವುದು ಹೆಣ್ಣಿನ ಒಳ ಧ್ವನಿ, ಅವಳ ಬದುಕಿನ ಅನಾವರಣ, ಅವಳು ಕಟ್ಟುಪಾಡುಗಳಲ್ಲಿ ಬಂಧಿಯಾದ ರೀತಿ, ಅವಳು ಕಳೆದುಕೊಂಡ ಸ್ವರ, ಒಬ್ಬಳು ಹೆಣ್ಣು ಒಬ್ಬನನ್ನು ಪ್ರೀತಿಸಿ ಅವನು ಓದು, ಉದ್ಯೋಗದ ನೆಪದಲ್ಲಿ ದೂರವಾದ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಇವಳು ಬೇರೊಬ್ಬನನ್ನು ವರಿಸಬೇಕಾಗಿ ಬಂದಾಗ ತನ್ನ ಹಳೆಯ ಪ್ರೀತಿಯನ್ನು ಒಳಗಡೆಯೇ ಹೂತು ಹಾಕುತ್ತಾಳೆ. ಇಲ್ಲಿ ಒಂದು ಸಮುದಾಯದಲ್ಲಿ ಹೆಣ್ಣು ಒಬ್ಬನನ್ನ ಮನಸ್ಸಲ್ಲಿ ಇಟ್ಟುಕೊಳ್ಳುವುದೆ ಅಪರಾಧ. ಆದರೆ ಈ ನಿಯಮ ಆ ಗಂಡಿಗೆ ಅನ್ವಯಿಸುವುದಿಲ್ಲ. ಅವನು ಏನೂ ಆಗಿಲ್ಲ ಎನ್ನುವಂತೆ ಎಲ್ಲವನ್ನೂ ಮರೆತು ಚಿಟ್ಟೆಯಂತೆ ಒಂದಲ್ಲದಿದ್ದರೆ ಇನ್ನೊಂದು ಹೂವು ಅನ್ನುವಂತೆ ಬದುಕುತ್ತಾನೆ. ಆದರೆ ಪ್ರೀತಿಸಿದ ಹೆಣ್ಣು ಮಾತ್ರ ಮೊದಲು ಪ್ರೀತಿಸಿದವನ ನೆನಪಲ್ಲೇ ಎಲ್ಲವನ್ನು ತೊರೆದಂತೆ ಕೊರಗಿ ಕೊರಗಿ ಸಾಯುತ್ತಾಳೆ. ಇದು ಯಾವ ನ್ಯಾಯ ? ಇದನ್ನ ಯಾರಲ್ಲಿ ಪ್ರಶ್ನೆ ಮಾಡುವುದು? ಆತ್ಮೀಯತೆ ಅನ್ನುವುದು ಒಂದು ಮಧುರ ಬಾಂಧವ್ಯಕ್ಕೆ ಅಡಿಪಾಯ. ಇಲ್ಲಿ ಯಾವುದೇ ರೀತಿಯ ಹೇಳಿಕೊಳ್ಳುವಂತಹ ರಕ್ತ ಸಂಬಂಧ ಅಥವಾ ಬಂಧುತ್ವ ಇರುವುದಿಲ್ಲ. ಇಲ್ಲಿರುವುದು ಸ್ನೇಹ ಸಂಬಂಧ, ಇದಕ್ಕೆ ಮನಸ್ಸೇ ಸೇತುವೆ. ಈ ಸಂಬಂಧದಲ್ಲಿ ಯಾರೊಂದಿಗೂ ಹಂಚಿಕೊಳ್ಳಲಾಗದ ಭಾವಗಳು ಸರಾಗವಾಗಿ ಬಯಲಾಗುತ್ತವೆ, ಸಾಂತ್ವನ ಪಡೆಯುತ್ತವೆ. ಇಲ್ಲಿರುವ ನಂಬಿಕೆ ಬೇರೆ ಸಂಬಂಧಗಳಲ್ಲಿ ಕಾಣಸಿಗದು. ತಲೆಮಾರಿನಿಂದ ತಲೆಮಾರಿಗೆ ಎಷ್ಟೇ ಬದಲಾದ ಕಾಲದಲ್ಲೂ ಬದಲಾಗದ ಒಂದು ವ್ಯಾಮೋಹ ನನ್ನ ವಂಶ, ನನ್ನ ವಂಶಸ್ಥರು ಅನ್ನುವ ಸೆಳಕು, ಒಂದು ಅನೂಹ್ಯ ಬಾಂಧವ್ಯ. ಇದೊಂದು ಮನುಷ್ಯನನ್ನು ಎಂದಿಗೂ ಬಿಡದ ಸೆಳೆತ.
ಒಂದು ಕಾಲವಿತ್ತು. ಹೆಣ್ಣು ಪೂರ್ತಿಯಾಗಿ ಅಪ್ಪ, ಗಂಡ, ಮಗ, ಅಂತ ಬದುಕಿನುದ್ದಕ್ಕೂ ಗಂಡನ್ನೇ ಆಶ್ರಯಿಸುತ್ತಿದ್ದ ಕಾಲ. ಆಗೆಲ್ಲ ಹೆಣ್ಣು ಒಂಟಿಯಾಗಿರುತ್ತಾಳೆ ಎಂದರೆ ಅವಳ ಮೇಲೆ ಹದ್ದಿನ ಕಣ್ಣು, ಅವಳನ್ನು ಕಾಡಲು ಹೊಂಚು ಹಾಕಿ ಕುಳಿತಿರುತ್ತಿದ್ದ ರಣಹದ್ದುಗಳು. ಆಗ ಹೆಣ್ಣಿನ ಪರಿಧಿ ಕೇವಲ ಅಡುಗೆಮನೆ, ಮನೆವಾರ್ತೆಗಳಿಗಷ್ಟೇ ಸೀಮಿತ. ಇಂದು ಬದಲಾದ ಕಾಲಘಟ್ಟದಲ್ಲಿ ಸ್ವಲ್ಪ ಮಟ್ಟಿಗಾದರೂ ಬದಲಾವಣೆಗಳಾಗಿವೆ.ಹೆಣ್ಣು ಸಬಲಳಾಗಿದ್ದಾಳೆ . ತನ್ನ ರಕ್ಷಣೆಯನ್ನು ಸ್ವತಃ ಮಾಡಿಕೊಳ್ಳುವಂತಹ ರಕ್ಷಣಾತ್ಮಕ ತಂತ್ರಗಳನ್ನು ಕಲಿತು ಗಟ್ಟಿಯಾಗಿದ್ದಾಳೆ. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡುತ್ತಿದ್ದಾಳೆ.
ಒಬ್ಬಳು ಬಡತನದ ಬೇಗೆಯಲ್ಲಿ ಸಿಲುಕಿ ಹಸಿವು ನೀಗಿಸುವ ಸಲುವಾಗಿ ಉಳ್ಳವರ ಮನೆಯ ಚಾಕರಿಯಲ್ಲಿ ತೊಡಗಿ ಎಲ್ಲಾ ರೀತಿಯಿಂದಲೂ ಉಪಯೋಗಿಸಲ್ಪಡುತ್ತಾಳೆ, ಕೊನೆಯವರೆಗೂ ಉಸಿರೆತ್ತದೆ ಬದುಕುತ್ತಾಳೆ, ಇನ್ನೊಬ್ಬಳು ಗಂಡೆಂಬ ಅಹಂಮಿಕೆಯ ಮುಂದೆ ಕುಹಕವಾಗುತ್ತಾಳೆ, ಮತ್ತೊಬ್ಬಳು ತನ್ನ ಅಸ್ತಿತ್ವವನ್ನೇ ಮರೆತಂತೆ ಬದುಕುತ್ತಾಳೆ. ಅಪ್ಪನೆಂಬ ಗಂಡಸಿನ ಹೃದಯದಲ್ಲಿ ತಾಯಿ ಪ್ರೀತಿ ಹುಟ್ಟಿಕೊಂಡು ಹೆಣ್ಣು ಮಗುವನ್ನು ಜೋಪಾನ ಮಾಡಬಹುದು. ಹಾಗಂತ ಜಗತ್ತಿನ ಎಲ್ಲಾ ಗಂಡು ಸಂಕುಲ ಹೀಗಿರುವುದಿಲ್ಲ ಹಾಗಾಗಿಯೇ ಅತ್ಯಾಚಾರದಂತಹ ದುರ್ಘಟನೆ ಪ್ರತಿದಿನ ಘಟಿಸುತ್ತಲೇ ಇರುತ್ತದೆ. ಹೆಣ್ಣೆಂಬ ಹೂವು ಬಾಡಿ ಮುದುಡಿ ರಾಕ್ಷಸನ ಕಾಲಡಿಯಲ್ಲಿ ನಲುಗಿ ಹೋಗುತ್ತಿರುತ್ತದೆ.
“ಮಲೆಯಾಳದ ಪೆಣ್ ಕಥನ “ ಪ್ರಸಿದ್ಧ ಮಲೆಯಾಳದ ಲೇಖಕಿಯರ ಕಥೆಗಳನ್ನು ಇಲ್ಲಿ ಕಮಲಾ ಅವರು ಅನುವಾದಿಸಿದ್ದಾರೆ. ಈ ಕಥೆಗಳನ್ನು ಓದುವಾಗ ಅನ್ನಿಸುವುದೇನೆಂದರೆ ಇದು ಕೇವಲ ಒಂದು ಸಮುದಾಯದ ಅಥವಾ ರಾಜ್ಯದ ಅಥವಾ ಊರಿನ ಹೆಣ್ಣು ಮಕ್ಕಳ ಕಥೆಯಲ್ಲ. ಇಡೀ ಹೆಣ್ಣುಕುಲದ ಕಥೆಗಳು. ಇಲ್ಲಿ ಲೇಖಕಿಯರು ಅವರವರು ಕಂಡದ್ದನ್ನು, ಕಲ್ಪನೆಗೆ ನಿಲುಕಿದ್ದನ್ನು ಸುತ್ತಲ ಪರಿಸರಕ್ಕೆ ಅನುಗುಣವಾಗಿ ಕತೆಯಾಗಿಸಿದ್ದಾರೆ. ಇದನ್ನು ಓದಿದ ಅದೆಷ್ಟೋ ಮಂದಿ ಕಮಲಾ ಅವರನ್ನು ಹಾಗೂ ಮೂಲ ಲೇಖಕಿಯರನ್ನು ಸ್ತ್ರೀವಾದಿಗಳೆಂದು ಜರೆದಿದ್ದಾರೋ ಏನೋ. ಇವರುಗಳು ಅದೆಷ್ಟು ಅಪವಾದಗಳನ್ನು ಹೊತ್ತಿದ್ದಾರೋ ಏನೋ. ಸ್ತ್ರೀವಾದವೆಂದರೂ ಸರಿಯೆ ಹೆಣ್ಣಿನ ಅಂತಃಕರಣ, ಅಸಹಾಯಕತೆ, ನೋವು, ಆಕ್ರೋಶ, ಹತಾಶೆ ಈ ಎಲ್ಲ ಭಾವಗಳನ್ನು ಹೊರಹಾಕುವ ಕಥೆಗಳು ನನಗಂತೂ ಇಷ್ಟವಾದವು. ಅಷ್ಟಕ್ಕೂ ವಾಸ್ತವವನ್ನು ಜಗತ್ತಿನಲ್ಲಿ ಒಪ್ಪಿಕೊಳ್ಳುವ ಮನಗಳು ಸಿಗುವುದು ಕೆಲವೇ ಕೆಲವು.
ಡಾ. ಕಮಲಾ ಹೆಮ್ಮಿಗೆಯವರು ದಿನಾಂಕ 24-09-2023 ರಂದು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ದಿವ್ಯಾತ್ಮಕ್ಕೆ ಶಾಂತಿ ಸಿಗಲಿ.
-ನಯನ ಬಜಕೂಡ್ಲು
ಉತ್ತಮ ಪರಿಚಯ
ಧನ್ಯವಾದಗಳು
ಓದುವೆ ಪಟ್ಟಿಗೆ ಸೇರಿಸಿದ್ದೇನೆ. ಸುಂದರವಾದ ಪರಿಚಯಕ್ಕೆ ಧನ್ಯವಾದಗಳು ಮೇಡಂ.
ಧನ್ಯವಾದಗಳು ಮೇಡಂ
ಪುಸ್ತಕ ಪರಿಚಯ ಚೆನ್ನಾಗಿ ಬಂದಿದೆ..
ಇತ್ತೀಚೆಗಷ್ಟೇ ಅಗಲಿದ ಲೇಖಕಿ ತಮ್ಮ ಕಾರ್ಯಬಾಹುಳ್ಯದಿಂದ ಜೀವಂತವಾಗಿದ್ದಾರೆ..ಅವರಿಗೆ ನಮ್ಮ ನಮನಗಳು..
ಪ್ರಸಿದ್ಧ ಬರಹಗಾರ್ತಿ ಕಮಲಾ ಹೆಮ್ಮಿಗೆಯವರು ಮಲೆಯಾಳದಿಂದ ಕನ್ನಡಕ್ಕೆ ಮಾಡಿದ ಅನುವಾದಿತ ಕಥೆಗಳ ಸಂಕಲನ ಕುರಿತ ವಿಮರ್ಶಾತ್ಮಕ ಲೇಖನ ಚೆನ್ನಾಗಿದೆ,,,ನಯನಾ ಮೇಡಂ.
ಪುಸ್ತಕ ಪರಿಚಯ ಸೊಗಸಾಗಿದೆ ಈ ಪುಸ್ತಕ ಎಲ್ಲಿ ದೊರೆಯುವುದು
ಚಂದದ ಪುಸ್ತಕ ಪರಿಚಯಮನಮುಟ್ಟುವಂತೆ ಮೂಡಿ ಬಂದಿದೆ.
ಅಗಲಿದ ಆತ್ಮಕ್ಕೆ ಅಶ್ರು ತರ್ಪಣ. ಓಂ ಶಾಂತಿ.