ವಾಟ್ಸಾಪ್ ಕಥೆ 33:ಕಲ್ಪನೆಗೂ ಮೀರಿದ ಮಮತೆ.
ಶಾಲೆಯಿಂದ ನಾಲ್ಕು ವರ್ಷದ ಬಾಲಕನೊಬ್ಬ ಮನೆಗೆ ಬಂದ. ತಾಯಿ ಮಗುವನ್ನು ಊಟ ಮಾಡೆಂದು ಹೇಳಿದಳು. ಅನ್ಯ ಮನಸ್ಕನಂತೆ ಕಾಣುತ್ತಿದ್ದ ಮಗು ಊಟಮಾಡಲು ನಿರಾಕರಿಸಿತು. ತಾಯಿಗೆ ಆತಂಕ. ಆಕೆ ಅದನ್ನು ಅನೇಕ ರೀತಿಯಲ್ಲಿ ಮುದ್ದುಮಾಡಿದಳು. ಬಿಸ್ಕತ್, ಚಾಕಲೇಟ್, ಸಿಹಿತಿಂಡಿಗಳನ್ನು ಕೊಡುತ್ತೇನೆಂದು ಆಮಿಷವೊಡ್ಡಿದಳು. ಆದರೂ ಮಗು ಜಗ್ಗಲಿಲ್ಲ. ಸಂಜೆ ಮಗನ ತಂದೆ ಕೆಲಸದಿಂದ ಮನೆಗೆ ಹಿಂದಿರುಗಿದರು. ತಾಯಿ ಎಲ್ಲವನ್ನೂ ವಿವರಿಸಿದಳು. ಅವರಿಗೂ ಏನೂ ತೋಚಲಿಲ್ಲ. ಮಗುವನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು ”ಪಾಪೂ ನಿನಗೆ ಏನುಬೇಕು ಹೇಳು ನಾನು ಖಂಡಿತ ಕೊಡಿಸುತ್ತೇನೆ. ನೀನು ಹೀಗೆ ಉಪವಾಸ ಮಾಡಬೇಡ. ಆರೋಗ್ಯಕ್ಕೆ ಒಳ್ಳೆಯದಲ್ಲ” ಎಂದು ಅನುನಯದಿಂದ ಹೇಳಿದರು. ಆಗ ಮಗು ಹೇಳಿತು, ”ನನಗೆ ಒಂದು ಚಿಕ್ಕದಾದ ಆಸೆಯಿದೆ. ಅದನ್ನು ಪೂರ್ತೀ ಮಾಡಿದರೆ ಸಾಕು” ಎಂದಿತು.
ತಂದೆ ಸಂತೋಷದಿಂದ ”ಅದೇನು ಹೇಳು ಮರಿ, ಖಂಡಿತ ಪೂರ್ತಿ ಮಾಡುತ್ತೇನೆ” ಎಂದು ಆಶ್ವಾಸನೆ ಕೊಟ್ಟನು.
ಮಗು ”ನೀನು ನನ್ನನ್ನು ನಾಳೆ ಬೆಳಗ್ಗೆ ಸೆಲೂನಿಗೆ ಕರೆದುಕೊಂಡು ಹೋಗಿ ನನ್ನ ತಲೆಯನ್ನು ನುಣ್ಣಗೆ ಬೋಳಿಸಬೇಕು” ಎಂದಿತು. ಇದೆಂತಹ ವಿಚಿತ್ರ ಬಯಕೆ ಎನ್ನುತ್ತಾ ತಂದೆ ತಾಯಿಗಳು ”ಹಾಗೆ ಮಾಡಿದರೆ ನೀನು ಚೆನ್ನಾಗಿ ಕಾಣಿಸುವುದಿಲ್ಲ ಕಣೋ” ಎಂದರು. ಮಗು ಮಾತ್ರ ”ನಾನು ಹೇಗೇ ಕಾಣಿಸಲಿ ಚಿಂತೆಯಿಲ್ಲ. ನನ್ನ ತಲೆಯನ್ನು ನುಣ್ಣಗೆ ಬೋಳಿಸಿಕೊಂಡು ಬರಬೇಕು. ಮಾತಿಗೆ ತಪ್ಪಬಾರದು” ಎಂದಿತು.
ಆಯಿತೆಂದು ಅದರ ಪೋಷಕರು ಒಪ್ಪಿದ ನಂತರ ಮಗುವು ಊಟಮಾಡಿತು. ಅದರಂತೆ ಮಾರನೆಯ ದಿನ ತಂದೆಯ ಜೊತೆಯಲ್ಲಿ ಹೋಗಿ ತಲೆ ಬೋಳಿಸಿಕೊಂಡು ಬಂದ ಮಗುವನ್ನು ನೋಡಿ ತಾಯಿಗೆ ಮನಸ್ಸು ಚುಳ್ಳೆಂದಿತು. ಆದರೂ ಸುಮ್ಮನಾದಳು.
ಶಾಲೆಗೆ ಕರೆದುಕೊಂಡು ಹೋದಾಗ ಒಂದು ವಿಚಿತ್ರವಾದದ್ದೇ ನಡೆಯಿತು. ಕಾರಿನಿಂದ ಇಳಿದದ್ದೇ ತಡ ಮಗುವು ಆನಂದದಿಂದ ಕಣ್ಣುಗಳನ್ನು ಅರಳಿಸಿಕೊಂಡು ತನ್ನಂತೆಯೇ ಬೋಳುತಲೆಯಿದ್ದ ಒಂದು ಹುಡುಗಿಯತ್ತ ನಡೆಯಿತು. ಇಬ್ಬರೂ ಕೈಕೈ ಹಿಡಿದುಕೊಂಡು ಶಾಲೆಯತ್ತ ಖುಷಿಯಾಗಿ ಹೆಜ್ಜೆ ಹಾಕಿದವು. ಆ ಹುಡುಗಿಯ ತಾಯಿ ಕಾರಿನ ಬಳಿಗೆ ನಡೆದು ಬಂದು ಹುಡುಗನ ತಂದೆಗೆ ತನ್ನ ಪರಿಚಯ ಹೇಳಿಕೊಂಡಳು. ”ನಿಮ್ಮ ಮಗನಂತಹ ಮಗುವನ್ನು ಪಡೆದ ನೀವು ತುಂಬ ಅದೃಷ್ಟವಂತರು” ಎಂದಳು.
ತಂದೆಗೆ ಕಾರಣ ತಿಳಿಯಲಿಲ್ಲ. ”ಏಕೆ?” ಎಂದರು. ಆ ಮಹಿಳೆ ಮಾತನ್ನು ಮುಂದುವರೆಸಿ ”ನನ್ನ ಮಗಳು ಕ್ಯಾನ್ಸರ್ ರೋಗ ಪೀಡಿತೆಯಾಗಿದ್ದಾಳೆ. ಆಕೆಗೆ ಚಿಕಿತ್ಸೆ ನಡೆಯುತ್ತಿದೆ. ಕೀಮೋತೆರಪಿ, ಮತ್ತು ರೇಡಿಯೇಷನ್ ಪ್ರಯೋಗದಿಂದ ಪರಿಣಾಮಗಳಾಗಿ ಆಕೆಯ ತಲೆಯ ಕೂದಲು ಪೂರ್ತಿ ಉದುರಿ ಹೋಗಿದೆ. ಅವಲಕ್ಷಣವಾಗಿ ಕಾಣುತ್ತೇನೆ. ನಾನು ಶಾಲೆಗೆ ಹೋಗುವುದಿಲ್ಲವೆಂದು ಮೊಂಡು ಹಿಡಿದಿದ್ದಳು. ಅಂತಹ ಸಮಯದಲ್ಲಿ ನಿಮ್ಮ ಮಗ ಅವಳನ್ನು ಸಮಾಧಾನ ಪಡಿಸಿ ನೀನು ನನ್ನ ಸ್ನೇಹಿತೆ. ಆದ್ದರಿಂದ ನಾನೂ ನಿನ್ನಂತೆಯೇ ತಲೆಯನ್ನು ಬೋಳಿಸಿಕೊಂಡರೆ ನಾವಿಬ್ಬರೂ ಒಂದೇ ರೀತಿಯಲ್ಲಿದ್ದು ನಿನಗೆ ಬೇಸರವಾಗುವುದಿಲ್ಲ. ಅಲ್ಲವೇ?’ ” ಎಂದು ಕೇಳಿದ್ದಕ್ಕೆ ನನ್ನ ಮಗಳು ಒಪ್ಪಿಕೊಂಡಳು. ಅವನ ಮಾತಿನಂತೆ ಈ ದಿನ ತನ್ನ ತಲೆ ಬೋಳಿಸಿಕೊಂಡು ತನ್ನ ಸ್ನೇಹಿತೆಗೆ ಸಂತೋಷವುಂಟಾಗುವಂತೆ ನಡೆದುಕೊಂಡಿದ್ದಾನೆ. ಈ ಚಿಕ್ಕ ವಯಸ್ಸಿಗೆ ಅವನದ್ದು ಎಂತಹ ಹೃದಯ ವೈಶಾಲ್ಯ ನೋಡಿ. ಅದಕ್ಕೆ ನಿಮಗೆ ನನ್ನ ಧನ್ಯವಾದಗಳು ಎಂದರು.
ಹುಡುಗನ ತಂದೆಯ ಮನಸ್ಸಿಗೆ ತನ್ನ ಮಗ ಹಿಂದಿನ ದಿನ ತನ್ನ ತೊಡೆಯಮೇಲೆ ಕುಳಿತು ಏಕೆ ಅಷ್ಟೊಂದು ಹಠ ಮಾಡಿದ ಎಂಬುದನ್ನು ನೆನಪು ಮಾಡಿಕೊಂಡು ಮನಸ್ಸು ತುಂಬಿಬಂತು. ಪುಟ್ಟ ಮಗುವಿನಲ್ಲಿ ಎಂತಹ ಕಲ್ಪನೆಗೂ ಮೀರಿದ ಮಮತೆಯಿದೆ. ನಾವು ದೊಡ್ಡವರೂ ಅವನ ಮುಂದೆ ಚಿಕ್ಕವರಾಗಿಬಿಟ್ಟೆವು ಎಂದುಕೊಂಡು ಹೆಮ್ಮೆಯಿಂದ ಮನೆಗೆ ಹೊರಟರು.
ಮಕ್ಕಳ ಮನಸ್ಸು ಅತ್ಯಂತ ಪರಿಶುದ್ಧವಾಗಿರುತ್ತವೆ. ಅವುಗಳಿಗೆ ಪ್ರೀತಿಯೊಂದೇ ತಿಳಿಯುವುದು. ಅವುಗಳು ಇನ್ನೊಬ್ಬರ ನೋವಿಗೆ, ಭಾವನೆಗಳಿಗೆ ತೆರೆದುಕೊಳ್ಳುವಷ್ಟು ವಿಶಾಲವಾಗಿ ನಾವೂ ಸ್ಪಂದಿಸಲಾರೆವು. ಇತ್ತೀಚೆಗೆ ತಂದೆ ತಾಯಿಗಳು ಮಕ್ಕಳೊಡನೆ ಸ್ವಲ್ಪ ಕಾಲ ಕಳೆದು ಅವುಗಳನ್ನು ಮಾತನಾಡಿಸುವಷ್ಟೂ ಪುರುಸೊತ್ತಿಲ್ಲವೆಂದು ಹೇಳುವುದನ್ನು ಕೇಳುತ್ತಿದ್ದೇವೆ. ಇದು ತಪ್ಪು. ನಾವು ನಮ್ಮ ಮಕ್ಕಳೊಡನೆ ಬೆರೆಯಲು ಅವಕಾಶ ಮಾಡಿಕೊಳ್ಳಲೇಬೇಕು. ಏಕೆಂದರೆ ಮೇಲೆ ಹೇಳಿದ ಕಥೆಯಂತೆ ಕೆಲವು ಸಾರಿ ಮಕ್ಕಳು ನಮಗಿಂತಲೂ ಮೇಲ್ಮಟ್ಟದಲ್ಲಿ ಆಲೋಚಿಸಬಹುದು. ಅಲ್ಲವೇ?
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಮಗುವಿನ ಅಂತಃಕರಣ ಬಹಳ ದೊಡ್ಡದು.
ಪ್ರತಿ ಕ್ರಿಯೆಗೆ ಧನ್ಯವಾದಗಳು ಗೆಳತಿ ಸುಚೇತಾ..
ಮನ ಮಿಡಿಯುವ ಕತೆ, ಮುಗ್ಧತೆಯ ಸ್ವರೂಪವೇ ಮಕ್ಕಳು…..
ಮುಗ್ದ ಮಗುವಿನ ಪರಿಶುದ್ದ ಮನಸ್ಸನ್ನು ಸೊಗಸಾಗಿ ಅನಾವರಣಗೊಳಿಸಿದ ಕಥೆಗಾಗಿ ಅಭಿನಂದನೆಗಳು.
ಧನ್ಯವಾದಗಳು ಗೆಳತಿ ವೀಣಾ
ಧನ್ಯವಾದಗಳು ಪದ್ಮಾ ಮೇಡಂ
ಎಂತಹ ಉದಾತ್ತವಾದ ಮನಸ್ಸು ಈ ಮಗುವಿನದು
ಧನ್ಯವಾದಗಳು ಗಾಯತ್ರಿ ಮೇಡಂ
ಹೃದಯ ಸ್ಪರ್ಶಿ ಕಥೆ. ಇವತ್ತು ನಾವೆಲ್ಲಾ ಎಷ್ಟು ನಮ್ಮದೇ ಪ್ರಪಂಚದಲ್ಲಿ ಕಳೆದು ಹೋಗಿದ್ದೇವೆ ಎಂದರೆ, ನಮಗೆ ನಮ್ಮ ಮಕ್ಕಳು ದಾರಿ ತಪ್ಪುವುದು ಕೂಡಾ ಅರಿವಾಗಲಾರದಷ್ಟು.
ಧನ್ಯವಾದಗಳು ನಯನಮೇಡಂ
ಕಪಟವರಿಯದ ಪರಿಶುದ್ಧ ಹೃದಯ ಮುದ್ದು ಮಕ್ಕಳದು. ಎಂದಿನಂತೆ, ಕಣ್ತೆರೆಸುವ ಪುಟ್ಟ ಕಥೆಯೊಂದಿಗೆ ಸುಂದರ ರೇಖಾಚಿತ್ರವು ಮನಸೆಳೆಯಿತು … ನಾಗರತ್ನ ಮೇಡಂ.