ಕಾದಂಬರಿ : ‘ಸುಮನ್’ – ಅಧ್ಯಾಯ 16

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)
ಗಿರೀಶ : ಹೊಸ ಜೀವನ

ಸುಮನ್ ಮನೆ ಬಿಟ್ಟು ಹೋದ ದಿನ ಗಿರೀಶಗೆ ಆಶ್ಚರ್ಯ ಆಗಿರಲಿಲ್ಲ. ಎಂದಾದರೂ ಒಂದು ದಿನ ಅವನ ಅನುಪಮಾಳ ಬಗ್ಗೆ ಅವಳಿಗೆ ಗೊತ್ತಾಗಿ ಅವಳು ಹೀಗೇ ಪ್ರತಿಕ್ರಿಯಿಸುತ್ತಾಳೆ ಎಂದು ನಿರೀಕ್ಷಿಸಿದ್ದ. ಅದರ ಬಗ್ಗೆ ಅವನು ತಲೆಯೂ ಕೆಡಿಸಿಕೊಳ್ಳಲಿಲ್ಲ. ಮಾರನೆಯ ದಿನ ಸೂಕ್ಷ್ಮವಾಗಿ ಅನುಪಮಾಗೆ ಅದರ ಬಗ್ಗೆ ಹೇಳಿದ್ದ. ಅನುಪಮಾ ಒಳಗೊಳಗೆ ಬಹಳ ಸಂತೋಷಪಟ್ಟಳು. ಇನ್ನು ಗಿರೀಶನ ಜೊತೆ ತನ್ನ ಮದುವೆ ಖಂಡಿತ ಎಂದು ವಿಜೃಂಭಿಸಿದ್ದಳು. ಅವಳು ಭಾರತಕ್ಕೆ ವಾಪಸ್ ಬಂದು ತನ್ನ ಗುರಿ ಸಾಧಿಸಿದ್ದಳು. ಗಿರೀಶ ಮನೆಗೆ ಬರುವುದು ರಾತ್ರಿ ಅಲ್ಲೇ ತಂಗುವುದು ಎಲ್ಲಾ ಸುಸೂತ್ರವಾಗಿತ್ತು. ರಂಗಪ್ಪನಿಗೆ  ಮಾತ್ರ ಅಳುಕು, ಕಸಿವಿಸಿ. ಆದರೆ ದೊಡ್ಡವರ ಜೀವನಶೈಲಿಯೇ ಇಷ್ಟು ಎಂದು ಸಮಾಧಾನಪಟ್ಟ.

ನಾಲ್ಕು ತಿಂಗಳ ನಂತರ ವಿಚ್ಛೇದನೆ ಕಾಗದವನ್ನು ಹಿಡಿದು ಬಂದ ಶ್ರೀಧರ್ ಮೂರ್ತಿ ಅವರನ್ನು ನೋಡಿ ವಿಸ್ಮಯಗೊಂಡಿದ್ದ ಗಿರೀಶ. ಸರಿ ಅವನಿಗೂ ಅದೇ ಬೇಕಾಗಿತ್ತು. ತಾನೂ ಒಬ್ಬ ವಕೀಲರನ್ನು ನೇಮಿಸಿ ಕಾಗದಕ್ಕೆ ಸಹಿ ಹಾಕಿದ್ದ. ಅವನಿಗೆ ಒಮ್ಮೆಯೂ ಅವಳನ್ನು ಸಂಪರ್ಕಿಸಬೇಕೆನಿಸಲಿಲ್ಲ. ತಾನು ಮಾಡಿದ್ದು ತಪ್ಪು ಎಂದೂ ಅನ್ನಿಸಲಿಲ್ಲ. ಅಷ್ಟು ದೂರ ಹೋಗಿದ್ದ ಅವನು, ಅವನ ಅಮ್ಮ ಅಪ್ಪ ಹೇಳಿಕೊಟ್ಟ ಸಂಸ್ಕಾರದಿಂದ. ಕೋರ್ಟು ಕರೆದಾಗಲೆಲ್ಲ ವಕೀಲರನ್ನು ಕಳಹಿಸುತ್ತ ಇದ್ದ. ಸುಮನ್ ಪರಿಹಾರ ಧನ ಬೇಡ ತನ್ನ ಸ್ತ್ರೀಧನ ವಾಪಸ್ ಬೇಕು ಎಂದಾಗಲೂ ಅವನಿಗೆ ಏನೂ ಅನ್ನಿಸಿರಲಿಲ್ಲ. ಅವಳ ಮೇಲೆ ಉಪಕಾರ ಮಾಡುತ್ತಿರುವ ಹಾಗೆ ತೆಗೆದುಕೊಂಡು ಹೋಗಲಿ ಎಂದಿದ್ದ. ಅದೇನು ಮಹಾ ತಂದಿದ್ದಾಳೆ ಎಂದಿತ್ತು ಅವನ ಮನಸು. ಸುಮನ್, ಅವರಮ್ಮ, ಅಪ್ಪ ಆ ತಮ್ಮಂದಿರ ಜೊತೆ ಬಂದು ರಾದ್ಧಾಂತ ಮಾಡ್ತಾಳೆ ಎಂದು ನಿರೀಕ್ಷಿಸಿದ್ದ. ಸ್ತ್ರೀಧನ ತೆಗೆದುಕೊಳ್ಳಲು ಬಂದಾಗ ಅವಳ ಗುಗ್ಗುತನದ ಬಗ್ಗೆ ಎಲ್ಲರಿಗೂ ಹೇಳುವುದು. ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳುವ ಎಂದು ಕೊಂಡಿದ್ದ. ಹಾಗೇ ತನ್ನ ವಾದವನ್ನು ತಯಾರು ಮಾಡಿದ್ದ. ಸುಮನ್ ಬಂದಿದ್ದಳು ಆದರೆ ಒಮ್ಮೆಯೂ ಕಣ್ಣೆತ್ತಿ ಅವನನ್ನು ನೋಡಿರಲಿಲ್ಲ. ಅವಳ ಪರಿವಾರದವರೂ ಅವನನ್ನು ಮಾತಾಡಿಸಲು ಪ್ರಯತ್ನಿಸಿರಲಿಲ್ಲ. ಅವರು ಮನೆಯೊಳಗೆ ಇದ್ದ ಅಷ್ಟು ಹೊತ್ತು ಮನೆಯಲ್ಲಿ ಏನೋ ಚಳಿ ಚಳಿ. ಮನೆಯ ತುಂಬ ಹವಾನಿಯಂತ್ರಣ ಹಾಕಿದ್ದು, ತಣ್ಣಗೆ  ಕೊರೆಯುವ ಅನುಭವ. ಬಂದವರು ಸುತ್ತ  ಹಿಮ  ಆವರಸಿದ ಅನುಭವ.

ಅವರು ಹೋದ ನಂತರ ಕುತೂಹಲದಿಂದ ಬೀರು ತೆಗೆದು ನೋಡಿದ್ದ. ಅವನು ಕೊಡೆಸಿದ್ದ ಉಡುಗೆಗಳು. ಸೀರೆಗಳು, ಒಡವೆ ಎಲ್ಲಾ ಹಾಗೇ ಇತ್ತು. ಬ್ಯಾಂಕ್ ಪಾಸ್‍ಬುಕ್, ಕ್ರೇಡಿಟ್ ಕಾರ್ಡ ಎಲ್ಲಾ ಲಾಕರಿನಲ್ಲಿ ಇದ್ದಲ್ಲೆ ಇದ್ದವು. ತವರುಮನೆಯಿಂದ ಅವಳು ತಂದಿದ್ದ ಒಂದು ಕಡ್ಡಿಯೂ ಅಲ್ಲಿರಲಿಲ್ಲ. ಸುಮನ್ ಅಲ್ಲಿ ನೆಲಸಿದ್ದಳು ಎನ್ನುವುದಕ್ಕೆ ಅನಾಥವಾಗಿ ನೇತಾಡುವ ಚುಡಿದಾರುಗಳು, ಮೂಲೆಯಲ್ಲಿದ್ದ ಪರ್ಸುಗಳು, ಚಪ್ಪಲಿ ಗೂಡಿನಲ್ಲಿದ್ದ ತರಾವರಿ ಚಪ್ಪಲಿಗಳೇ ಸಾಕ್ಷಿ. ಡ್ರೆಸಿಂಗ್ ಟೇಬಲ್ ಮೇಲೆ ಅವನು ತಂದಿದ್ದ ಸುಗಂಧದ ಬಾಟಲಿಗಳು ಅವನ ಹಣದಲ್ಲಿ ಕೊಂಡಿದ್ದ ಪೌಡರ್, ಕ್ರೀಮ್ ಬಾಚಣಿಗೆ ಮೊದಲುಗೊಂಡು ಎಲ್ಲಾ ಅಲ್ಲೆ ಇದ್ದವು ಪಳಯುಳಿಕೆಯಂತೆ. ಗಿರೀಶ ಒಂದು ಕ್ಷಣ ಸುಮ್ಮನೆ ನಿಂತ. ಅವನ್ನು ಈ ಜನ್ಮದಲ್ಲಿ ಯಾರೂ ಉಪಯೋಗಿಸುವುದಿಲ್ಲ. ಸುಮನಳನ್ನು ಜ್ಞಾಪಿಸುತ್ತ ಅವನನ್ನು ಅಣಕಿಸುತ್ತ ಹಾಗೇ ಇರುವವು. ರಂಗಪ್ಪನಿಗೆ ಹೇಳಿ ಎಲ್ಲಾ ಡಬ್ಬಗಳಿಗೆ ತುಂಬಿಡಲು ಹೇಳಬೇಕು ಎಂದುಕೊಂಡ ಇನ್ನೊಂದು ಕ್ಷಣದ ನಂತರ.

ನ್ಯಾಯಾಧೀಶರು ವಿಚ್ಛೇದನೆಯ ಆದೇಶ ಹೊರಡಿಸುತ್ತಿದ್ದ ಹಾಗೆ ಸುಮನ್ ಅವನಿಗೆ ಬೆನ್ನು ಮಾಡಿ ನಡೆದು ಬಿಟ್ಟಿದಳು. ಮತ್ತೆ ಇನ್ನೆಂದೂ ಅವರು ಭೇಟಿಯಾಗಲಿಲ್ಲ. ಒಂದು ತಿಂಗಳಲ್ಲಿ ಅವನು ಅನುಪಮಾಳನ್ನು ಮದುವೆಯಾಗಿದ್ದ.

************

ಸುಮನ್ : ಅಗಲಿಕೆ

ಮೂರನೆಯ ಸೆಮಿಸ್ಟರಿನಲ್ಲಿ ಒಂದು ಸೆಮಿನಾರ್ ಹಾಗೂ ಒಂದು ಇಂಡಸ್ಟ್ರಿಯಲ್  ಟ್ರೇನಿಂಗ್ ಮಾತ್ರ ಸುಮನ್‍ಗೆ. ಹೊಸ ವಿಷಯಗಳು ಇಲ್ಲವೇ ಇಲ್ಲ. ಎಮ್. ಟೆಕ್‍ನಲ್ಲಿ ಓದುತ್ತಿರುವ ವಿಷಯಗಳನ್ನು ಆಧರಿಸಿ ಬಿ.ಇ ಏಳನೇ ಸೆಮಿಸ್ಟರ್‌ಗೆ ಹೊಸ ವಿಷಯ ಪರಿಚಯಿಸಿದಾಗ ಸುರೇಶ ಅದನ್ನು ಸುಮನ್‍ಗೆ ಪಾಠ ಮಾಡಲು ಹೇಳಿ ನಿಶ್ಚಿಂತರಾದರು. ಸುಮನ್ ಬಹಳ ಉತ್ಸಾಹದಿಂದ ಅದನ್ನು ಒಪ್ಪಿಕೊಂಡಳು. ಈಗ ಬಿಡುವೋ ಬಿಡುವು ಅವಳಿಗೆ. ಕಾಲೇಜಿನಲ್ಲಿ ಬರಿ ಪಾಠ ಮಾಡುವುದು, ಪಾಠ ಹೇಳಿಸಿಕೊಳ್ಳುವ ಕೆಲಸವಿಲ್ಲ. ವಾರದಲ್ಲಿ ಮೂರು ದಿನ ಸುರೇಶ ಅವರ ಗೆಳೆಯನ ಕಂಪನಿಗೆ ಮಧ್ಯಾಹ್ನ ಹೋಗಿ ಬರುತ್ತಿದ್ದಳು. ಕಂಪನಿಯಲ್ಲಿ ಅವಳಿಗೆ ಒಂದು ಪುಟ್ಟ ಪ್ರಾಜೆಕ್ಟ್ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಕಂಪನಿಯ ವಾತಾವರಣದಲ್ಲಿ ದೊಡ್ಡ ಪ್ರಾಜೆಕ್ಟನ್ನು ಸಣ್ಣ ಸಣ್ಣ ತುಣುಕುಗಳನ್ನಾಗಿಸಿ ಬಿಡಿ ಭಾಗಗಳಂತೆ ಒಬ್ಬೂಬ್ಬರು ಮಾಡಿ ಎಲ್ಲವನ್ನು ಸೇರಿಸಿ ಒಂದಾಗಿಸುವ ಪರಿ. ಅದಕ್ಕೆ ಗುಂಪಿನ ಸದಸ್ಯರ ಮಧ್ಯ ಬೇಕಾಗುವ ಸಂಯೋಜನೆ ಮುಂತಾದ ಸಾಫ್ಟ್ ಸ್ಕಿಲ್‍ಗಳನ್ನೂ ಕಲೆತಳು. ಇವುಗಳ ಮಧ್ಯದಲ್ಲಿ ಹಿಂದಿನ ಪರೀಕ್ಷೆಯ ಫಲಿತಾಂಶ ಬಂದಿತ್ತು. ಅವಳು ನಿರೀಕ್ಷಿಸಿದ ಅಂಕಗಳು ಬಂದಿರಲಿಲ್ಲ, ಆದರೆ ಈ ಬಾರಿ ಅವಳು ಅಷ್ಟು ತಲೆ ಕೆಡಿಸಿಕೊಳಲಿಲ್ಲ. ಸುರೇಶ ಕರೆದು ಅವುಗಳ ಬಗ್ಗೆ ಕೇಳಿದಾಗ ನಿರ್ಲಿಪ್ತಳಾಗಿ ಅದರ ಬಗ್ಗೆ ಹೇಳಿದ್ದಳು. ಅವರು ಮುಖ್ಯಸ್ಥರ ಮೀಟಿಂಗಿನಲ್ಲಿ ಅದರ ಬಗ್ಗೆ ಚರ್ಚೆ ನಡೆಸಿರುವುದಾಗಿ ಹೇಳಲಿಲ್ಲ. ಹೋದ ಸಲಿಯ ಅವಳ ಮರುಮೌಲ್ಯಮಾಪನದ ಫಲಿತಾಂಶ ಬಂದಾಗಲೇ ಖಚಿತವಾಗಿತ್ತು ಅವರಿಗೆ ಮೌಲ್ಯಮಾಪನೆ ಸರಿಯಾಗಿ ಆಗುತ್ತಿಲ್ಲವೆಂದು.

ಇಷ್ಟರ ಮಧ್ಯ ಶ್ವೇತ ಪರಿವಾರ ಸಮೇತ ಅಮೆರಿಕಾಗೆ ವಲಸೆ ಹೋಗುವ ಅವರ ಪ್ರಯತ್ನ ಸಫಲವಾಯಿತು. ರಜತ್‍ಗೆ ಅವನ ಕಂಪನಿಯ ಮುಖ್ಯ ಆಫೀಸಿಗೆ ವರ್ಗವಾಗಿತ್ತು. ಹೋಗಲು ಅಣಿಯಾಗುತ್ತಿದ್ದರು. ಶ್ವೇತ ಹಾಗೂ ಮಕ್ಕಳ ಪಾಸ್ಪೋರ್ಟಿನಿಂದ ಹಿಡಿದು ಫ್ಲಾಟ್ ಮಾರುವ ತರಾತುರಿಯಲ್ಲಿದ್ದರು. ಮಕ್ಕಳು ಸುಮನಳನ್ನು ಹಚ್ಚಿಕೊಂಡಿದ್ದು ಒಳ್ಳೆಯದೇ ಆಯಿತು. ಕಾಲುಕಾಲಿಗೆ ಸಿಕ್ಕುವ ಅವರುಗಳನ್ನು ಅವಳ ಬಳಿ ಬಿಟ್ಟು ತಮ್ಮ ಕೆಲಸಗಳ ಮೇಲೆ ಓಡಾಡುತ್ತಿದ್ದರು. ದಿನಾ ಸಂಜೆ ಮಕ್ಕಳು ಸುಮನ್ ಮನೆಗೆ ಬರುತ್ತಿದ್ದರು. ಸಮನ್ ಅವರನ್ನು ಉದ್ಯಾನಕ್ಕೆ ಕರೆದುಕೊಂಡು ಹೋಗುತ್ತಿದ್ದಳು. ರಾತ್ರಿಯಾದರೇ ಕಥೆ ಹೇಳುತ್ತಿದ್ದಳು. ಅವರ ಜೊತೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ರಾತ್ರಿ ಏಳು ಅಥವಾ ಎಂಟು ಗಂಟೆಗೆ ಶ್ವೇತ ಅಥವಾ ರಜತ್ ಬಂದು ಅವರಿಬ್ಬರನ್ನು ಕರೆದೊಯ್ಯುತ್ತಿದ್ದರು. ಅವರುಗಳ ಮಧ್ಯ ನಕ್ಕು ನಲಿಯುವ ಸುಮನಳನ್ನು ನೋಡಿ ಅವರಮ್ಮನಿಗೆ ಅವಳಿಗೂ ಒಂದು ಮಗು ಇದ್ದರೇ ಚೆನ್ನಾಗಿರುತ್ತಿತ್ತೇನೋ ಎಂದೆನಿಸುತ್ತಿತ್ತು. ಮರುಕ್ಷಣ ಅಯ್ಯೋ ಅದೂ ಇದ್ದರೆ ಮತ್ತೆ ಮದುವೆಯಾಗುವುದು ಕಷ್ಟವಾಗುತ್ತಿತ್ತು ಎನಿಸುತ್ತಿತ್ತು.

ಸೆಮಿಸ್ಟರ್ ಇನ್ನೇನು ಮುಗಿಯಲು ಒಂದು ವಾರ. ರಾಜಲಕ್ಷ್ಮಿ ಹಾಗೂ ಅಶ್ವತನಾರಾಯಣರ ಪಾಸ್ಪೋರ್ಟು ಬಂತು. ಅವುಗಳ ಪ್ರತಿಗಳನ್ನು ಸಂಜುಗೆ ಕೊರಿಯರ್ ಮಾಡಿ ವೀಸಾ ಸಂಬಂಧಿಸಿದ ಕಾಗದ ಪತ್ರಗಳಿಗೆ ಕಾಯುತ್ತಿದ್ದರು. ಸುಮನ್  ಇಂಡಸ್ಟ್ರೀಯಲ್ ಟ್ರೇನಿಂಗ್ ರಿಪೋರ್ಟನ್ನು ಕಾಲೇಜಿಗೆ ಒಪ್ಪಿಸಿಯಾಗಿತ್ತು. ಸೆಮಿನಾರ್ ಕೂಡ ಆಗಿತ್ತು. ತನ್ನ ವಿದ್ಯಾರ್ಥಿಗಳಿಗೆ ಪಠ್ಯಸೂಚಿ ಮುಗಿಸಿ ಅವರ ಆಂತರಿಕ ಪರೀಕ್ಷೆಯ ಅಂಕಗಳ ಪಟ್ಟಿ  ಹಿಡಿದು ಸುರೇಶ ಅವರ ಬಳಿ ಹೋದಳು. ಸುರೇಶ ಅವರ ಗೆಳಯ ಸುಮನ್ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಒಂದು ದಿನವೂ ತಪ್ಪಿಸದೇ ಬಹಳ ನಿಷ್ಟೆಯಿಂದ ಕೆಲಸ ಮಾಡಿ ಪ್ರಾಜೆಕ್ಟ್ ಮುಗಿಸಿದ್ದಳು.

ಬಹಳ ಅಭಿಮಾನದಿಂದ “ಮುಂದಿನ ಸೆಮಿಸ್ಟರ್‍ಗೆ ಏನು ಪ್ರಾಜೆಕ್ಟ್ ಮಾಡಬೇಕುಂತ ಇದಿಯಾ ಸುಮನ್” ಕೇಳಿದರು ಸುರೇಶ.

“ಗೊತ್ತಿಲ್ಲ ಸರ್. ಇನ್ನು ಏನು ತೋಚಿಲ್ಲ.”

“ಐಟ್ರಿಪಲ್‍ಇ (ಇನ್‍ಸ್ಟಿಟ್ಯೂಟ್ ಆಫ್ ಎಲೆಕ್‍ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್  ಎಂಜಿನಿಯರ್ಸ್)  ಮಾಸಿಕ ನೋಡು. ನಿನ್ನ ವಿಷಯಕ್ಕೆ ಸಂಬಂಧಿಸಿದ ಮಾಸಿಕಗಳಲ್ಲಿ ಏನಾದ್ರು ನಿನಗೆ ಇಷ್ಟ ಆಗಬಹುದು. ನಮ್ಮ ಲ್ಯಾಬ್‍ನಲ್ಲಿ ಎಲ್ಲಾ ಸಾಫ್ಟ್ವೇರ್ ಇದೆ. ಇಲ್ಲೆ ಮಾಡು. ಬೇಕಾದ್ರೆ ರಜ ದಿನಗಳಲ್ಲೂ ಬಂದು ವರ್ಕ್ ಮಾಡು. ಹೇಗೂ ಡಿಪಾರ್ಟಮೆಂಟ್ ತೆಗೆದಿರುತ್ತೆ.”

 “ಹೂಂ ಸರ್ ನೋಡ್ತೀನಿ.”

“ನಾನೂ ನೋಡ್ತೀನಿ. ಐ.ಐ.ಎಸ್.ಸಿ ಯಲ್ಲಿ ನನ್ನ ಕೆಲವು ಗೆಳೆಯರಿದ್ದಾರೆ. ಅವರೇನಾದ್ರು ಪ್ರಾಜೆಕ್ಟ್ ಕೊಡ್ತಾರಾಂತ.”

“ಸರಿ ಸರ್.”

ಎಮ್.ಟೆಕ್ ಆದ ತಕ್ಷಣ ಪಿಹೆಚ್.ಡಿಗೆ ಸೇರ್ಕೊ ಅಂತ ಹೇಳಲಿಲ್ಲ ಸರ್ ಎಂದುಕೊಳ್ಳುತ್ತ ಹೊರ ನಡೆದಳು ಸುಮನ್. ಆದರೆ ಅವರ ಬೆಂಬಲಕ್ಕೆ ಅವಳು ಮನಸ್ಸು ಯಾವಗಲೂ ಕೃತಜ್ಞತೆ ಸಲ್ಲಿಸುತ್ತಿತ್ತು. ಒಮ್ಮೆಯಾದರೂ ಅವಳ ವೈಯಕ್ತಿಕ ವಿಷಯದ ಬಗ್ಗೆ ವಿಚಾರಿಸಿರಲಿಲ್ಲ ಅವರು, ಅವಳ ತಂದೆಯಿಂದ ಕೇಳಿ ತಿಳಿದುಕೊಂಡಿದ್ದಾರೆ ಎಂದು ಗೊತ್ತು ಅವಳಿಗೆ. ಅವರ ಈ ವರ್ತನೆ ಅವಳಿಗೆ ಬಹಳ ಹಿಡಿಸಿತ್ತು.

ಕಾಲೇಜಿಗೆ ರಜ. ಆದರೂ ದಿನದಲ್ಲಿ ಒಂದೆರಡು ಗಂಟೆ ಕಾಲೇಜಿನ ಗ್ರಂಥಾಲಯಕ್ಕೆ ಐಟ್ರಿಪಲ್‍ಇ ಮಾಸಿಕಗಳನ್ನು ಓದಲು ಹೋಗುತ್ತಿದ್ದಳು. ಮಿಕ್ಕ ಸಮಯ ಮನೆಯಲ್ಲಿ ಅವರಮ್ಮ ಅಪ್ಪನ ಅಮೆರಿಕಾ ಪ್ರವಾಸದ ತಯಾರಿ ಮಾಡುತ್ತಿದ್ದಳು. ಸಂಜು ಹಾಗೂ ಸಂದೀಪ ಬಿಡುವಿಲ್ಲದೇ ಇಮೇಲ್ ಕಳುಹಿಸುತ್ತಿದ್ದರು. ಏರಪೋರ್ಟಿನಲ್ಲಿ ಎಲ್ಲಿ ಹೋಗಬೇಕು, ಚೆಕ್ ಇನ್ ಮಾಡುವಾಗ ಏನೇನು ಪತ್ರಗಳನ್ನು ತೋರಿಸಬೇಕು, ವಿಮಾನದಲ್ಲಿ ಐ-20 ತುಂಬಬೇಕು, ಶಿಕಾಗೋದಲ್ಲಿ ಇಳಿದಾಗ ತಮ್ಮ ವೀಸಾ ಸ್ಟಾಂಪ್ ಮಾಡಿಸಬೇಕು ಹೀಗೇ ತರಾವರಿ ಸೂಚನೆಗಳು. ಎಲ್ಲವೂ ವಿಶೇಷ ಸೂಚನೆಗಳೇ.

ಇತ್ತ ರಾಜಲಕ್ಷ್ಮಿ ಚಟ್ನಿ ಪುಡಿ, ಸಾರಿನ ಪುಡಿ, ಹುಳಿ ಪುಡಿ ಅಂತ ನೂರೆಂಟು ಪುಡಿಗಳನ್ನು ಮಾಡಿ ಸುಮನ್‍ಗೆ ಅರ್ಧ ಅಮೆರಿಕಾಗೆ ಅರ್ಧ ಅಂತ ಇಟ್ಟರು. ಚಕ್ಕುಲಿ, ತೆಂಗೊಳಲು, ಕೋಡಬಳೆ ಹಿಟ್ಟುಗಳನ್ನು ಲಕ್ಷ್ಮಿ ಗಿರಣಿಗೆ ಹಾಕಿಸಿಕೊಂಡು ಬಂದಾಯಿತು. ಸಂಜುಗೆ ಬೆಣ್ಣೆ ಬಿಸ್ಕತ್ತು, ಸಂದೀಪಗೆ ಹುರಿಗಾಳು, ಹೀಗೆ ಜ್ಞಾಪಿಸಿಕೊಂಡು ಅಂಗಡಿಯಿಂದ ತರುವ ಸಾಮಾನಿನ ಪಟ್ಟಿ ಮಾಡಿದ್ದಾಯಿತು. ಅವರಿಬ್ಬರ ಸಂಭ್ರಮ ಹೇಳ ತೀರದು. ಕೆಲಸ ಮಾಡುತ್ತ ಮಧ್ಯದಲ್ಲಿ ಸುಮನಳನ್ನು ಬಿಟ್ಟು ಹೋಗಬೇಕಲ್ಲ ಅಂತ ಯೋಚನೆ ಬಂದು ಕೈ ಕಾಲಾಡದೆ ಸುಮ್ಮನೆ ಕುಳಿತುಬಿಡುತ್ತಿದ್ದರು. ಅದನ್ನೇ ಯೋಚಿಸಿ ಯೋಚಿಸಿ ಹಣ್ಣಾಗಿದ್ದ ಅಶ್ವತನಾರಾಯಣರಿಗೆ ಪದೇ ಪದೇ “ರೀ ನಾವು ಸುಮನ್ನ ಒಬ್ಬಳೇ ಬಿಟ್ಟು ಹೋಗೋದು ಸರೀನಾ?” ಎಂದು ಕೇಳಿ ಇನಷ್ಟು ತಲೆ ಕೆಡಸುತ್ತಿದರು. ಬಹಳವಾಗಿ ಯೋಚನೆ ಮಾಡಿ ಅಶ್ವತನಾರಾಯಣರು ಒಂದು ನಿರ್ಣಯಕ್ಕೆ ಬಂದಂತೆ “ಈ ಸೆಮಿಸ್ಟರ್ ಸುಮನ್ ಪ್ರಾಜೆಕ್ಟ್ ಕೆಲಸದ ಮೇಲೆ ಬ್ಯೂಸಿ ಆಗಿರ್ತಾಳೆ. ಅದೂ ಮುಗಿದ ಮೇಲೆ ಅವಳಿಗೆ ತುಂಬ ಬಿಡುವು. ಯೋಚನೆ, ಕೊರಗು ಶುರುವಾಗತ್ತೆ. ಅವಾಗ ಒಬ್ಬಳನ್ನೇ ಬಿಡೋಕ್ಕೆ ಆಗಲ್ಲ. ಹಾಗೆ ನೋಡಿದ್ರೆ ಇದೇ ಸರಿಯಾದ ಸಮಯ” ಹೆಂಡತಿಗೆ ಹೇಳಿ ಸಮಾಧಾನ ಮಾಡುತ್ತಿದ್ದರು. ರಾಜಲಕ್ಷ್ಮಿ ತಮ್ಮ ಮನಸ್ಸಿನ ಸಮಾಧಾನಕ್ಕೆ ಲಕ್ಷ್ಮಿಗೆ ರಾತ್ರಿ ಸುಮನ್ ಜೊತೆ ಮಲಗಲು ಹೇಳಿದರು. ಸುಮನ್ ಕಾಲೇಜಿಗೆ ಹೋಗುವವರೆಗೂ ಅವಳ ಜೊತೆ ಇರುವ ಹಾಗೆ ಲಕ್ಷ್ಮಿಗೆ ತಾಕೀತು ಮಾಡಿದರು. ಪಕ್ಕದ ಮನೆ ಗಿರಿಜಮ್ಮ ಮೂಲೆ ಮನೆ ಸರೋಜಮ್ಮ ಇಬ್ಬರಿಗೂ ಸುಮನ್ ಒಬ್ಬಳೆ ಇರ್ತಾಳೆ ಮನೆ ಕಡೆ ಗಮನ ಇರ್ಲಿ ಅಂತ ನೂರು ಸಲಿ ಹೇಳಿದರು.

ಅವರ ವೀಸಾ ಬಂದ ದಿನವೇ ಶ್ವೇತ ಸಂಸಾರಕ್ಕೂ ವೀಸಾ ಬಂತು. ಸರಿ ಎಲ್ಲರು ಒಟ್ಟಿಗೆ ಹೊರಡುವುದು, ನೇರವಾಗಿ ಸಂಜು ಮನೆ ಶಿಕಾಗೊಗೆ ಹೋಗಿ ಸುಮನಳ ತಂದೆ ತಾಯಿಯನ್ನು ಅಲ್ಲಿ ಬಿಟ್ಟು ಎರಡು ದಿನದ ನಂತರ ಶ್ವೇತ ಸಂಸಾರ ಮೆರಿಲ್ಯಾಂಡ್‍ಗೆ ಹೊರಡುವುದು ಎಂದು ತೀರ್ಮಾನವಾಯಿತು. ಹಾಗೇ ಟಿಕೆಟ್ ತೆಗೆದುಕೊಂಡರು. ಸುಮನ್‍ಗೆ  ಅರ್ಧ ಜೀವ ಬಂದಂತಾಯಿತು. ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿ ಅವಳಮ್ಮನ ಸಹಾಯಕ್ಕೆ ನಿಂತಳು. ಚಕ್ಕುಲಿ, ತೆಂಗೊಳಲು, ಕೋಡಬಳೆ ಮಾಡಿ ಕವರ್ ಗೆ ಹಾಕಿದರು. ಶಂಕರಪೋಳಿ ಆಯಿತು, ಕೊಬ್ಬರಿ ಒಬ್ಬಟ್ಟು ಆಯಿತು. ಪೇಪರ್ ಅವಲಕ್ಕಿ ಚೂಡ  ಎಲ್ಲಾ ಕವರ್ ಸೇರಿತು. ಸೂಟಕೇಸುಗಳು ತಯಾರಾಗಿ ನಿಂತವು.

ಹೊರಡುವ ದಿನ ಬಂದೇ ಬಿಟ್ಟಿತು. ಊರಿನಿಂದ ಬೆಂಗಳೂರಿಗೆ ಹೋಗಿ ಅಲ್ಲಿ ಊಟ ಮಾಡಿ  ಏರಪೋರ್ಟವರೆಗೂ ಹೋಗಲು ಟಾಟಾ ಸುಮೋ ಗೊತ್ತು ಮಾಡಿದ್ದರು. ಅಂದು ಶ್ವೇತ ಪರಿವಾರಕ್ಕೆ ಸುಮನ್ ಮನೆಯಲ್ಲಿ ಔತಣ. ಸುಮನ್ ಶ್ವೇತಾಗೆ ಸೀರೆ, ರಜತ್‍ಗೆ ಶರ್ಟು, ಪುಟ್ಟ ಅನು ಕಿವಿಗೆ ಪುಟ್ಟ ಪುಟ್ಟ ಚಿನ್ನದ ರಿಂಗು, ಅವಳ ಅಣ್ಣನಿಗೆ ಹುಲಿ ಉಗುರಿನ ಪದಕ ಎಲ್ಲಾ ತಂದಿದ್ದಳು. ಊಟ ಆಗಿ ಗೆಳತಿಗೆ ಕುಂಕುಮ ಕೊಟ್ಟಳು. ಶ್ವೇತಾಳ ಕಣ್ಣು ತುಂಬಿ ಬಂತು. ಗೆಳತಿಯ ಭುಜವನ್ನು ಬಳಸಿ ಒಂದ್ನಿಮಿಷ ಹಾಗೇ ನಿಂತಳು. ಇಬ್ಬರ ಕಣ್ಣಿಂದಲೂ ಕಣ್ಣೀರು ಧಾರಾಕರವಾಗಿ ಹರಿಯಿತು. ಮಕ್ಕಳಿಬ್ಬರು ಪೆಚ್ಚಾಗಿ ಇವರನ್ನು ನೋಡುತ್ತ ನಿಂತಿದ್ದರು. ಸುಮನ್ ಬಗ್ಗಿ ಅನುನ ಒಮ್ಮೆ ಎತ್ತಿ ಮೆತ್ತಗೆ ಕೆನ್ನೆಗಳಿಗೆ ಮುತ್ತಿಕ್ಕಿದಳು. ಕಣ್ಣು ಒರೆಸಿಕೊಳ್ಳುತ್ತ ಶ್ವೇತಾಳ ಕೈಗಿತ್ತಳು ಅವಳ  ಮಗಳನ್ನು. ಅನೂಪ ಕಾರು ಹತ್ತುವ ಮುಂಚೆ ಓಡಿ ಬಂದು ಸುಮನಳನ್ನು ಅಪ್ಪಿ ನಿಂತ. ಸುಮನ್ ಬಗ್ಗಿ ಅವನ ತಲೆನೇವರಿಸಿ ಸುಮೋ ಹತ್ತಿಸಿದಳು. ಗಿರಿಜಮ್ಮ “ಯೋಚನೆ ಮಾಡಬೇಡಿ. ನಾವು ನೋಡ್ಕೋತಿವಿ ಸುಮನಳನ್ನಾ”  ಅಂತ ಹೇಳಿ ರಾಜಲಕ್ಷ್ಮಿ ಅವರನ್ನು ಗಾಡಿ ಹತ್ತಿಸಿದರು.

ಅಶ್ವತನಾರಾಯಣರು “ಬರ್ತೀವಿ ಮರಿ” ಸುಮನಳ ತಲೆ ನೇವರಿಸಿ ಗಾಡಿ ಹತ್ತಿ ಬಾಗಿಲು ಹಾಕಿದರು. ಸುಮೋ ಹೊರಟಿತು. ಸುಮನ್ ಬೆನ್ನ ಹಿಂದೆ ಲಕ್ಷ್ಮಿ ಕಣ್ಣು ಒರಿಸಿಕೊಳ್ಳುತ್ತ ಕೈ ಬೀಸುತ್ತಿದ್ದಳು. ಮೂಲೆ ಮನೆ ಸರೋಜಮ್ಮ ತಮ್ಮ ಗೇಟಿನ ಆಚೆ ನಿಂತು ರಾಜಲಕ್ಷ್ಮಿಗೆ  ಕೈ ಬೀಸಿದರು.

ಇಷ್ಟು ಹೊತ್ತು ಕಲಕಲ ಎನ್ನುತ್ತಿದ್ದ ಮನೆ ಒಮ್ಮೆಲೆ ನಿಶಬ್ದ. ಸುಮನ್ ಏನೂ ತೋಚದೆ ಅರೆಘಳಿಗೆ ಸುಮ್ಮನೆ ಸೋಫಾ ಮೇಲೆ ಕುಳಿತಳು. ಲಕ್ಷ್ಮಿ ಪಾತ್ರೆ ತೊಳೆಯಲು ಹೋದಳು. ಅವಳು ಮಾಡುತ್ತಿದ್ದ ಶಬ್ದ ಸುಮನಳನ್ನು ಎಬ್ಬಿಸಿತು. ಅಡುಗೆಮೆನೆಗೆ ನಡೆದು ಮಿಕ್ಕ ಪಾತ್ರೆಗಳನ್ನು ಲಕ್ಷ್ಮಿಗೆ ಹಾಕಿದಳು. ಲಕ್ಷ್ಮಿಗೆ ಊಟ ಕೊಟ್ಟು ಅಡುಗೆಮನೆ ಸ್ವಚ್ಛಗೊಳಿಸಿದಳು. ಲಕ್ಷ್ಮಿ ಊಟ ಮಾಡಿ ಮನೆಯನ್ನೆಲ್ಲ ಒಮ್ಮೆ ಗುಡಿಸಿ ಹೊರಟಳು. ಅವಳು ಮಾಡುತ್ತಿದ್ದ ಶಬ್ದವೂ ಇಲ್ಲದೇ ಮನೆ ಇನ್ನೂ ನಿಶಬ್ದವಾಯಿತು. ಸುಮನ್ ಪತ್ರಿಕೆ ಹಿಡಿದು ಕುಳಿತಳು.

**************
ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: https://surahonne.com/?p=38586

(ಮುಂದುವರಿಯುವುದು)

-ಸುಚೇತಾ ಗೌತಮ್.‌

10 Responses

  1. Prathibha M M says:

    ಮೊದ ಮೊದಲು ಎಲ್ಲಾ ಕಥೆ ಗಳಂತೆಎನಿಸುತ್ತಿತ್ತು, ನಿಜವಾಗಿಯು ತುಂಬಾ ಚೆನ್ನಾಗಿ ಬರುತ್ತಾ ಇದೆ.

  2. ಎಂದಿನಂತೆ ಕಾದಂಬರಿ ಓದಿಸಿಕೊಂಡು ಹೋಯಿತು.. ತಾಳತಪ್ಪಿದ ತನ್ನ ಬದುಕಿನ ಬಗ್ಗೆ.. ಚಿಂತಿಸುತ್ತಾಕೂಡದೆ ಮತ್ತೆ ಬದುಕ ಕಟ್ಟಿ ಕೊಂಡು ಸಮಾಜಮುಖಿ ಯಾಗಿ ಬದುಕ ನೆಡೆಸಲು ಮನಸ್ಸನ್ನು ಸಿದ್ದ ಗೊಳಿಕೊಳ್ಳುವ ನಾಯಕಿ..ಮತ್ತೇನು ನಿರ್ದಾರ ತೆಗೆದು ಕೊಳ್ಳುತ್ತಾಳೋ ಕಾದು ನೋಡಬೇಕು… ಒಟ್ಟಾರೆ ಕುತೂಹಲವಿದೆ…ಗೆಳತಿ

  3. ನಯನ ಬಜಕೂಡ್ಲು says:

    Beautiful. ಮನಸ್ಸನ್ನು ಸೆಳೆಯುತ್ತ ಸಾಗುತ್ತಿದೆ ಕಥೆ.

  4. ಶಂಕರಿ ಶರ್ಮ says:

    ಛಿದ್ರಗೊಂಡ ವೈವಾಹಿಕ ಜೀವನಕ್ಕೆ ಬೆದರದೆ ತನ್ನ ದಾರಿಯನ್ನು ತಾನೇ ಕಂಡುಕೊಂಡ ಸುಮನಳ ವಿಶಿಷ್ಟ ನಡೆ ಮೆಚ್ಚುವಂತಹುದು. ಸೊಗಸಾದ ಕಥೆಗಾಗಿ ಸುಚೇತಾ ಮೇಡಂ ಅವರಿಗೆ ವಂದನೆಗಳು.

  5. Padma Anand says:

    ಸುಮನಳ ಬಾಳಬಂಡಿ ನೆಮ್ಮದಿಯೆಡೆಗೆ ಸಾಗುತ್ತಿರುವುದು ಪರಿಣಾಮಕಾರಿಯಾಗಿ ಬಿಂಬಿತವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: