ಒಳಗಿನ ಕಣ್ಣು ತೆರೆಸಿದ “ಶ್ರೀ ಕೃಷ್ಣ”.

Share Button


ಕಳೆದ ವಾರ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬ ಸಂಪನ್ನವಾಯಿತು. ಈ ಪ್ರಯುಕ್ತ ನಾವು ಎಲ್ಲೆಡೆ ಕೃಷ್ಣನ ಆರಾಧನೆಯನ್ನು ಭಕ್ತಿ ಪೂರ್ವಕವಾಗಿ ಅವರವರ ಶಕ್ತಿ ಅನುಸಾರ ಮಾಡುತ್ತಾ, ಮನೆ- ಮನಗಳಲ್ಲಿ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಭಕ್ತಿ- ಭಾವವನ್ನು ತುಂಬಿಕೊಳ್ಳುತ್ತಿದ್ದೇವೆ. ಶ್ರೀ ಕೃಷ್ಣ ಸಾಕ್ಷಾತ್ ನಾರಾಯಣನ ಅವತಾರ. ನಾರಾಯಣ ಕೃಷ್ಣನ ರೂಪದಲ್ಲಿ ಈ ಭೂಮಿಗೆ ಬಂದು ತನ್ನ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ ಅನುಗ್ರಹವನ್ನು ನೀಡುತ್ತಾ ಸಕಲರಿಗೂ ಸನ್ಮಂಗಳನ್ನುಂಟು ಮಾಡುವ “ಕೃಷ್ಣ ಜನ್ಮಾಷ್ಟಮಿ” ಹಬ್ಬ ಆಚರಣೆ ಬಹಳ ಮಹತ್ವಪೂರ್ಣದ್ದಾಗಿದೆ.

“ಕೃಷ್ಣ” ಎನ್ನುವ ಎರಡು ಅಕ್ಷರದಲ್ಲಿ ಇಡೀ “ಬ್ರಹ್ಮಾಂಡ” ಅಡಗಿದೆ. ದೇವಕಿ ಕಂದನಾಗಿ,ಧರ್ಮರಕ್ಷಕನಾಗಿ, ಭಗವದ್ಗೀತೆಯ ಬೋಧಕನಾಗಿ, ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ವಸ್ತ್ರವ ಧಾರೆ ಎರೆದವನಾಗಿ, ಪ್ರೇಮವನ್ನು ಅಮರ ಪ್ರೇಮವಾಗಿಸಿದವನಾಗಿ, ಯದುಕುಲ ನಂದನ ಶ್ರೀ ಮಧುಸೂದನನಾಗಿ, ಶ್ರೀ ಚಕ್ರಧಾರಿ ಸ್ತ್ರೀ ಲೋಲನಾಗಿ, ರಾಧಾಕೃಷ್ಣನಾಗಿ, ಲೋಕೋದ್ದಾರನಾಗಿ, ಶ್ರೀ ಗೋಪಾಲ ಗೋವರ್ಧನಗಿರಿ ಧಾರಿಯಾಗಿ…. ಮುಂದುವರೆದು ಶ್ರೀಕೃಷ್ಣ ನಮ್ಮ ಮನೆ -ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಸ್ನೇಹಿತನಾಗಿ, ಅಣ್ಣನಾಗಿ,ತಮ್ಮನಾಗಿ, ಮಗನಾಗಿ, ಸುಕುಮಾರನಾಗಿ, ಗುರುವಾಗಿ, ದೂತನಾಗಿ,ದನ ಕಾಯುವವನಾಗಿ,ಕಲಾವಿದನಾಗಿ, ವೀರನಾಗಿ..ಹೀಗೆ ಹಲವು ನೆಲೆಗಳಲ್ಲಿ ನಮಗೆ ಕಾಣಸಿಗುತ್ತಾನೆ.

ಮುಖ್ಯವಾಗಿ ಗೀತಾ ಅಧ್ಯಯನದಲ್ಲಿ ಶ್ರೀಕೃಷ್ಣನ ಪಾತ್ರ ಹಿರಿದಾದದ್ದು. ಶ್ರೀ ಕೃಷ್ಣನ ಸಂದೇಶ ನಿತ್ಯ ಜೀವನದಲ್ಲಿ ಸಂಜೀವಿನಿ ಯಾಗಿದೆ. ಮಹಾಭಾರತದ ಕಥನದಲ್ಲಿ ಶ್ರೀಕೃಷ್ಣನ ಪಾತ್ರ ಪ್ರಮುಖವಾದದ್ದು. ಭಗವಾನ್ ಶ್ರೀ ಕೃಷ್ಣನ ಜನ್ಮದಿನವನ್ನು ಭಾರತದ್ಯಂತ ಶ್ರದ್ಧೆ, ಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ.ಹಿಂದೂ ಪಂಚಾಂಗದ ಪ್ರಕಾರ ಅಥವಾ ಭಾದ್ರಪದದಲ್ಲಿ ಕೃಷ್ಣ ಪಕ್ಷದ ಎಂಟನೇ ದಿನ (ಅಷ್ಟಮಿ) ಆಚರಿಸಲಾಗುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ವ್ರತ ಕೂಡ ಮಹತ್ವಪೂರ್ಣವಾಗಿದೆ. ಈ ದಿನದಂದು ಮಹಿಳೆಯರು, ಮಕ್ಕಳು ಸಂಭ್ರಮ ಸಡಗರದಿಂದ ವೈವಿಧ್ಯಮಯ ರೀತಿಯಲ್ಲಿ ಪೂಜಾ ಕೈಂಕರ್ಯದಲ್ಲಿ ತೊಡಗಿರುತ್ತಾರೆ.

//ವಸುದೇವ ಸುತಂ ದೇವಂ.
ಕಂಸ ಚಾಣೂರ ಮರ್ಧನಂ.
ದೇವಕಿ ಪರಮಾನಂದಂ.
ಕೃಷ್ಣಂ ಒಂದೇ ಜಗದ್ಗುರುಂ.//

ಇನ್ನು ಅವಲಕ್ಕಿ ಕಥೆ ಗೊತ್ತೇ ಇದೆ. ಗೆಳೆಯ ಸುಧಾಮನ ಸ್ನೇಹ ಸಿಂಚನ, ಅಮರವಾದದ್ದು ಸಕಲ ಜೀವ ಚೈತನ್ಯ ಸ್ವರೂಪಿಯಾಗಿ, ದುಷ್ಟರ ವೈರಿ, ಶಿಷ್ಟರ ರಕ್ಷಕನಾಗಿ ಮೆರೆದವನು.ನಾನು ಮೊದಲೇ ಹೇಳಿದಂತೆ ಶ್ರೀ ಕೃಷ್ಣನ ಭೋದನಾ ಸಾರ ನಮ್ಮ ಬದುಕಿಗೆ ದಾರಿ ದೀಪ. ಹಾಗೂ ಮಾರ್ಗದರ್ಶನವಾಗಿದೆ.

//ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ //

ಶ್ರೀ ಕೃಷ್ಣನ ಕುರಿತಾಗಿ ಗೀತ ನಾಟಕಗಳು, ರೂಪಕಗಳು ಕೃಷ್ಣನ ಕುರಿತಾಗಿ ಇರುವ ಪುರಾಣ ಕಥೆಗಳು- ಎಲ್ಲವನ್ನು ಕೂಡ ವೇದಿಕೆ ಮೂಲಕ ಆಯೋಜನೆ ಮಾಡಿರುತ್ತಾರೆ.ಗ್ರಾಮೀಣ ಪ್ರದೇಶದಲ್ಲಿ ಶ್ರೀ ಕೃಷ್ಣನ ಜಯಂತಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ. ಸ್ಥಳೀಯವಾಗಿ ಸಿಗುವ ಹೂಗಳಿಂದ ಅಲಂಕರಿಸುತ್ತಾರೆ. ಅಕ್ಕ ಪಕ್ಕದ ಮನೆಯವರೆಲ್ಲರನ್ನು ಕರೆದು ಪ್ರಸಾದ ವಿತರಣೆ ಮಾಡುತ್ತಾರೆ. ಶ್ರೀಕೃಷ್ಣನ ಕುರಿತಾದ ಗೀತ ಗಾಯನ ಕಾರ್ಯಕ್ರಮವು ಕೂಡ ನಡೆಯುತ್ತದೆ. ಅಲ್ಲದೆ ಭಜನೆ ಕಾರ್ಯಕ್ರಮವು ಕೂಡ ನಡೆಯುತ್ತದೆ. ಇದರಲ್ಲಿ ಶ್ರೀ ಕೃಷ್ಣನ ಕುರಿತಾದ ಭಕ್ತಿ ಭಾವ ಗೀತೆಗಳು ಸಾಂಗವಾಗಿ ನಡೆಯುತ್ತವೆ.

ಎಲ್ಲೆಲ್ಲೂ ಕೃಷ್ಣನ ಬಾಲ್ಯದ ಲೀಲೆಗಳು, ಕೃಷ್ಣನ ಗುಣಗಾನ, ಕೃಷ್ಣನ ತುಂಟಾಟ, ಕುರಿತಾದ ಹಾಡುಗಳು ಒಂದಲ್ಲ ಒಂದು ರೀತಿಯಲ್ಲಿ ಮೈ-ಮನಗಳಿಗೆ ಮುದ ನೀಡುತ್ತವೆ.

ಹಲವು ಚಲನಚಿತ್ರ ಗಳಲ್ಲು ಸಹ ಕೃಷ್ಣನ ಕಥೆಯನ್ನಾದರಿಸಿದ….. ಸಂದೇಶ ಸಾರುವ …. ಚಿತ್ರಗಳೂ ಬೆಳ್ಳಿತೆರೆಯಲ್ಲಿ ಮೂಡಿಬಂದಿವೆ. ಜೊತೆಗೆ ಹರಿಕಥೆಗಳಲ್ಲೂ ಕೂಡ ಕೃಷ್ಣನದ್ದೇ ಕಾರುಬಾರು. ಕೃಷ್ಣ ಮುದ್ದು ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಕೂಡ ಇಷ್ಟವಾದ ದೇವರು. ದರಲ್ಲೂ ಚಲನಚಿತ್ರ ಗೀತೆಗಳಲ್ಲಿ ಕೃಷ್ಣನ ಕುರಿತಾದ ನೂರಾರು ಹಾಡುಗಳು ಇವೆ. ಹಬ್ಬದ ದಿನದಂದು ಬೆಳಗಿಂದ ಸಂಜೆವರೆಗೂ ಆಕಾಶವಾಣಿಯಲ್ಲಿ ಪ್ರಸಾರವಾಗುವ ಭಕ್ತಿ ಪ್ರಧಾನವಾದ ಚಿತ್ರಗೀತೆಗಳನ್ನು ಕೇಳುವುದೇ ಸೊಗಸು!. “ಅಲಾರೆ ಅಲಾರೆ ಮುಕುಂದ ಮುರಾರೆ”, “ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ”, “ಒಳಗಿನ ಕಣ್ಣನು ತೆರೆಸಿದೆಯೋ ಗೀತೆಯ ಮರ್ಮ ತಿಳಿಸಿದೆಯೋ”, “ನಾರಿಯ ಸೀರೆ ಕದ್ದ”, “ಕೃಷ್ಣ ನೀ ಬೇಗನೆ ಬಾರೋ”, “ಕೃಷ್ಣನಾ ಕೊಳಲಿನ ಕರೆ”, “ಕೃಷ್ಣ ಎನ ಬಾರದೆ”, “ಮೋಹನ ಮುರುಳಿಯ ನಾದಲೀಲೆಯೋ”, “ಗೋಪಿ ಲೋಲಾ ಎ ಗೋಪಾಲ”, “ಗುಮ್ಮನ ಕರೆಯದಿರು”, “ಶ್ರೀ ಕೃಷ್ಣ ಜನಿಸಿದ ದರೆಯಲ್ಲಿ”, “ಕೃಷ್ಣ ಎಂದರೆ ಭಯವಿಲ್ಲ”, “ಭೂಮಿಗೆ ಬಂದ ದೇವಕಿ ಕಂದ”, “ಶ್ರೀಕಾರನೇ ಸುಕುಮಾರನೇ”, “ನಗಿಸಲು ನೀನು ನಗುವೆನು ನಾನು”, “ಕೃಷ್ಣನ ಹೆಸರೇ ಲೋಕಪ್ರಿಯ”, “ಈ ರಾಧೆಗೆ ಗೋಪಾಲನಾ”, ‘ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ…’ ‘ತೂಗಿರೆ ರಂಗನಾ…. ತೂಗಿರೆ ಕೃಷ್ಣನಾ….’ ಹೀಗೆ ಬಹಳಷ್ಟು ಜನಪ್ರಿಯ ಹಾಡುಗಳಿವೆ.

ಎಲ್ಲರಿಗೂ ಶ್ರೀಕೃಷ್ಣನ ಅನುಗ್ರಹವಿರಲಿ.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

5 Responses

  1. Vijayasubrahmanya says:

    ಚೊಕ್ಕ ವಾದ ಬರಹ.

  2. ಮೆಲಕು ಹಾಕುವಂತಿದೆ ಕೃಷ್ಣನ ಬಗ್ಗೆ ಬರೆದಿರುವ ಲೇಖನ..ಶಿವಕುಮಾರ್ ಸಾರ್..

  3. ನಯನ ಬಜಕೂಡ್ಲು says:

    Nice

  4. ಶಂಕರಿ ಶರ್ಮ says:

    ಶ್ರೀಕೃಷ್ಣ ಜನ್ಮಾಷ್ಟಮಿಯ ಸವಿನೆನಪಿನೊಂದಿಗೆ ಸಮೃದ್ಧವಾದ ಬರಹ ಖುಷಿಕೊಟ್ಟಿತು.

  5. Padma Anand says:

    ಕೃಷ್ಣನ ಕುರಿತಾದ ಲೇಖನ ಅನೇಕ ಮಾಹಿತಿಗಳನ್ನು ಒಳಗೊಂಡು ಸುಂದರವಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: