ಸತ್ಯಕಾಮ ಜಾಬಾಲ
ಬಹುಕಾಲದ ಹಿಂದೆ ಪರ್ಣ ಶಾಲೆ ಕಟ್ಟಿಕೊಂಡು ಒಬ್ಬ ಮುನಿಯು ತನ್ನ ಪತ್ನಿಯೊಡನೆ ವಾಸಿಸುತ್ತಾ ತನ್ನ ವ್ರತ ನಿಷ್ಠೆಗಳಲ್ಲಿ ಕಾಲಕಳೆಯುತ್ತಿದ್ದನು. ಅವರಿಗೆ ಓರ್ವ ಪುತ್ರಿ ಜನಿಸಿದಳು. ಆಕೆಗೆ ಜಬಾಲಾ ಎಂದು ಹೆಸರಿಟ್ಟು ಆ ಮುನಿಯು ಅವಳಿಗೆ ತಪೋಧರ್ಮವನ್ನು ಬೋಧಿಸುತ್ತಿದ್ದನು. ಪುತ್ರಿಯು ಮಾತಾ-ಪಿತೃಗಳು ಉಪದೇಶಿಸಿದ ತತ್ವಗಳನ್ನು ಅನುಸರಿಸಿಕೊಂಡು ಜೀವನ ನಡೆಸುತ್ತಿದ್ದಳು, ‘ಅತಿಥಿ ದೇವೋ ಭವ’ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದ ಆಕೆ ಮನೆಗೆ ಬಂದವರಿಗೆ ಬಹಳ ನಿಷ್ಠೆಯಿಂದ ಅತಿಥಿ ಸತ್ಕಾರ ಮಾಡುತ್ತಿದ್ದಳು. ಹೀಗಿರಲು ಒಂದು ದಿನ ತರುಣ ಋಷಿಯೊಬ್ಬ ಆ ಆಶ್ರಮಕ್ಕೆ ಬಂದ. ವಿಧಿಯ ಸಂಕಲ್ಪದಂತೆ ಅವರಿಬ್ಬರಲ್ಲಿ ಅನುರಾಗವುಂಟಾಗಿ ಅವರು ಪತಿ-ಪತ್ನಿಯರಾದರು. ‘ನಿನಗೆ ಸತ್ಯನಿಷ್ಠನೂ ಬ್ರಹ್ಮಜ್ಞಾನಿಯೂ ಆದ ಪುತ್ರನು ಜನಿಸುವನು. ನೀನು ಋಷಿಮಾತೆಯಾಗುವೆ’ ಎಂದು ಆಶೀರ್ವಾದ ಮಾಡಿ ಆತನು ಕಠಿಣ ತಪಸ್ಸಿಗೆ ಹೊರಟು ಹೋದನು. ಒಂದು ದಿನ ಜಾಬಾಲೆಗೆ ಮಹಾತೇಜಸ್ವಿಯಾದ ಪುತ್ರನು ಜನಿಸಿದನು. ಶಿಶುವಿಗೆ ‘ಸತ್ಯಕಾಮ’ ಎಂದು ನಾಮಕರಣ ಮಾಡಿದರು.
ಸತ್ಯಕಾಮನು ಬಾಲಕನಾಗಿದ್ದಾಗ ಬಹಳ ತುಂಟಾಟ ಮತ್ತು ದುಷ್ಟ ಸಹವಾಸದ ಬಾಲಕನಾಗಿದ್ದ. ಅವನ ಇಂತಹ ವರ್ತನೆಗಳೆಲ್ಲ ತೊಲಗಿ ಒಳ್ಳೆಯ ಹುಡುಗನಾಗಬೇಕಿದ್ದರೆ ಅವನಿಗೆ ಉಪನಯನ ಮಾಡಿ ಗಾಯತ್ರಿ ಉಪದೇಶವಾಗಬೇಕೆಂದು ತಿಳಿದ ಜಾಬಾಲೆ ದೂರದ ಆಶ್ರಮದಲ್ಲಿದ್ದ ಮಹಾತಪಸ್ವಿ ಆಚಾರ್ಯ ‘ಗೌತಮ ಹಾರಿದ್ರುವತ’ರಲ್ಲಿಗೆ ಕಳುಹಿಸಬೇಕೆಂದು ನಿಶ್ಚಯಿಸಿ ‘ಆ ಮಹಾತ್ಮರಿಗೆ ನಮಸ್ಕಾರ ಮಾಡಿ ಅವರಿಂದ ಬ್ರಹೋಪದೇಶವನ್ನು ಪಡೆದು ಬಾ’ ಎಂದು ಹೇಳಿ ಕಳುಹಿಸಿದಳು. ಸತ್ಯಕಾಮನು ಮಿಂದು ಮಡಿಯುಟ್ಟು ಗೋಮಾತೆ, ಋಷಿಮುನಿಗಳಿಗೆ ನಮಸ್ಕರಿಸಿ ನದಿಯ ಆಚೆದಡದಲ್ಲಿರುವ ಗೌತಮನು ಹಾರಿದ್ರುಮತರ ಆಶ್ರಮಕ್ಕೆ ಅರಳಿ ಸಮಿತ್ತುಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋದನು. ತ್ರಿಕಾಲ ಜ್ಞಾನಿಗಳ ತ್ರಿಗುಣಾತೀತ ತತ್ವದ ಸಾಕ್ಷಾತ್ಕಾರಿಗಳೂ ಆದ ಗೌತಮರಿಗೆ ಸಾಷ್ಟಾಂಗ ‘ಪ್ರಾತಃ ಸ್ಮರಣೀಯರಾದ ಋಷಿವರ್ಯರೇ, ನನ್ನ ಹೆಸರು ಸತ್ಯಕಾಮ. ನನಗೆ ಜ್ಞಾನಾರ್ಜನೆಯಲ್ಲಿ ತುಂಬ ಆಸಕ್ತಿಯಿದೆ. ಗುರುಗಳಾದ ತಾವು ನನಗೆ ಅನುಗ್ರಹಿಸಬೇಕು’ ಎಂದನು. ಇದನ್ನು ಕೇಳಿದ ಅವರು ‘ವತ್ಸ, ನಿನ್ನ ಗೋತ್ರ ಯಾವುದು?’ ಎಂದು ಪ್ರಶ್ನಿಸಿದರು. ತನ್ನ ಗೋತ್ರದ ಬಗ್ಗೆ ತನಗೆ ತಿಳಿದಿಲ್ಲವೆಂದೂ ಸತ್ಯಕಾಮನಲ್ಲಿ ಅವನ ತಂದೆಯ ಹೆಸರನ್ನು ಕೇಳಿದನು.
‘ಗುರುಗಳೇ, ನನಗೆ ತಂದೆ ಯಾರೆಂದು ತಿಳಿದಿಲ್ಲ. ನನಗೆ ತಾಯಿ ಬಿಟ್ಟು ಇನ್ನು ಯಾರೂ ಇಲ್ಲ’ ಎಂದನು. ‘ವತ್ಸಾ, ನಿನ್ನ ತಾಯಿಗೆ ತಿಳಿದಿರುತ್ತದೆ. ಅವಳಲ್ಲಿ ಕೇಳಿಕೊಂಡು ಬಾ’ ಎಂದು ಕಳುಹಿಸಿದನು. ಅಮ್ಮನೆಡೆಗೆ ಬಂದ ಸತ್ಯಕಾಮನು ‘ಅಮ್ಮ! ನನ್ನ ಗೋತ್ರ ಮತ್ತು ತಂದೆಯ ಹೆಸರನ್ನು ಕುಲಪತಿಗಳು ಕೇಳಿದರು. ಅವೆರಡರ ಬಗ್ಗೆಯೂ ನಾನರಿಯದ ಕಾರಣ ನಿನ್ನಲ್ಲಿ ಕೇಳಿ ತಿಳಿದು ಬರಲು ಹಿಂತಿರುಗಿ ಬಂದಿದ್ದೇನೆ. ಈಗ ನೀನು ನನ್ನ ಗೋತ್ರ ಮತ್ತು ತಂದೆಯ ಹೆಸರನ್ನು ಹೇಳು ಎಂದನು. ಮಗನ ಮಾತನ್ನು ಕೇಳಿದ ಜಾಬಾಲೆ ವಿಚಲಿತಳಾದಳು.
ಪತಿಯ ಹೆಸರು ಮತ್ತು ಗೋತ್ರದ ಬಗ್ಗೆ ಆಕೆಯೂ ಕೇಳಿ ತಿಳಿದಿರಲಿಲ್ಲ. ಆತನೊಡನೆ ಆಕೆ ಇದ್ದ ಕಾಲವೂ ಅತ್ಯಲ್ಪ. ‘ವತ್ಸಾ ನನ್ನ ತಾರುಣ್ಯದಲ್ಲಿ ನಾನು ಅತಿಥಿ ಸತ್ಕಾರವನ್ನುಮಾಡುತ್ತಿದ್ದಾಗ ಒಬ್ಬ ಶ್ರೇಷ್ಠ ಅತಿಥಿಗೆ ನೀನು ಜನಿಸಿದೆ. ಅವರ ಹೆಸರಾಗಲೀ ಗೋತ್ರವಾಗಲೀ ನನಗೆ ತಿಳಿಯದು. ನನ್ನ ಹೆಸರು ‘ಜಬಾಲಾ’. ಆದ್ದರಿಂದ ನೀನು ‘ಸತ್ಯಕಾಮ ಜಾಬಾಲ’ ಎಂದು ಹೇಳಿ ಇವಿಷ್ಟೇ ಸತ್ಯ ಸಂಗತಿ ಎನ್ನುತ್ತಾ ಅವರಿಗೆ ಸಾಷ್ಟಾಂಗವೆರಗು. ನಿನ್ನ ಹಣೆಯಲ್ಲಿ ವಿದ್ಯೆ ಬರೆದಿದ್ದರೆ ನಿನಗೆ ದಕ್ಕುತ್ತದೆ ಹೋಗು’ ಎಂದು ಹರಸಿ ಕಳುಹಿಸಿದಳು. ಸತ್ಯಕಾಮನು ವಾಪಾಸು ಕುಲಪತಿಗಳ ಆಶ್ರಮಕ್ಕೆ ಬಂದು ತಾಯಿ ತಿಳಿಸಿದ ವಿಷಯವನ್ನುರುಹಿ ತಾನು ಜಾಬಾಲಳ ಮಗ ಸತ್ಯಕಾಮ, ನನ್ನನ್ನು ಗುರುಗಳು ಜಾಬಾಲ ಎಂದು ಕರೆಯಬಹುದು ಎಂದನು.
ಆಗ ಗುರುಗಳು ‘ಮಗೂ ನಿನ್ನ ಹೆಸರಿನಂತೆಯೇ ನೀನು ಸತ್ಯದಲ್ಲಿ ನಿಷ್ಠೆಯುಳ್ಳವನು. ನೀನು ಬ್ರಹ್ಮಜ್ಞಾನಕ್ಕೆ ಅರ್ಹನಾದ ಬ್ರಾಹ್ಮಣನೇ ಹೌದು. ಬ್ರಾಹ್ಮಣ್ಯವೆಂಬುದು ಜನ್ಮಕ್ಕೆ ಮಾತ್ರ ಸೀಮಿತವೆಲ್ಲ. ಯಾರಲ್ಲಿ ಸತ್ಯನಿಷ್ಠೆ, ಶಾಂತಿ, ತ್ಯಾಗ, ಪರೋಪಕಾರ ಬುದ್ಧಿ, ಸಹನೆ, ಇಂದ್ರಿಯ ನಿಗ್ರಹಗಳಿರುತ್ತವೆಯೋ ಅವನೇ ನಿಜವಾದ ಬ್ರಾಹ್ಮಣ. ನೀನು ಅಂತಹ ಸರಳ ಸತ್ಯನಿಷ್ಠ ನಿನಗೆ ಬ್ರಹ್ಮಪದೇಶ ಮಾಡುತ್ತೇನೆ’ ಎಂದು ಕುಳ್ಳಿರಿಸಿದನು. ಇಲ್ಲಿ ಇನ್ನೊಂದು ಪರೀಕ್ಷೆಗೆ ಒಡ್ಡಿದರು. ಒಂದು ವರ್ಷಕಾಲ ಕಳೆಯಿತು. ಆಶ್ರಮದಲ್ಲಿ ಗುರುಗಳು ಮತ್ತು ಗುರುಪತ್ನಿಗೆ ಸಹಾಯ ಮಾಡುವುದು ಬಿಟ್ಟರೆ ಗುರುಗಳು ತನಗೆ ವಿದ್ಯೆ ಕಲಿಸುವತ್ತ ಗಮನಹರಿಸಿಲ್ಲ. ತಾನು ಇಲ್ಲಿಂದ ಹೊರಡುವುದೇ ಸೂಕ್ತವೆಂದು ಒಂದು ದಿನ ಗುರುಗಳ ಸಮಯ ನೋಡಿಕೊಂಡು ತಾನು ತನ್ನ ತಾಯಿಯ ಬಳಿಗೆ ಹೊರಡಲು ಅನುಮತಿಯನ್ನು ಕೇಳಿದನು. ‘ನಿನ್ನ ನಿರ್ಗಮನಕ್ಕೆ ಕಾರಣವೇನೆಂದು ವಿಚಾರಿಸಿದಾಗ, ನಾನು ವಿದ್ಯೆಗೆ ಅನರ್ಹನಾಗಿದ್ದರೆ ಇನ್ನಿಲ್ಲಿ ಬರೀದೇ ಕಾಲಕಳೆಯುವುದು ಉಚಿತವಲ್ಲ ಹಿಂತಿರುಗುತ್ತೇನೆ’ ಎಂದನು. ‘ವತ್ಸ… ಶಿಕ್ಷಣವೆಂಬುದು ಕೇವಲ ಮಂತ್ರಗಳನ್ನು ಗಟ್ಟಿ ಮಾಡುವುದಲ್ಲ. ಅನ್ನ…. ಅನ್ನ….. ಎಂದು ಸಾವಿರ ಸಲ ಹೇಳಿದರೂ ಹಸಿವು ಇಂಗಬೇಕಾದರೆ ಊಟ ಮಾಡಿಯೇ ತೀರಬೇಕು. ಕೇಳಿದ್ದರಿಂದಲೇ ಜ್ಞಾನವು ಬರುವುದಿಲ್ಲ. ಕಂಡದ್ದು ನಮ್ಮ ಹೃದಯದ ಒಳಹೋಗಬೇಕು. ನಾನೊಬ್ಬ ಅಜ್ಞಾನಿ, ನನ್ನ ಜನ್ಮದ ವಿವರಗಳು ನನಗೆ ತಿಳಿದಿಲ್ಲ. ಆ ಕಾರಣಕ್ಕಾಗಿ ನಾನು ಜ್ಞಾನವನ್ನು ಪಡೆಯಲು ಅನರ್ಹನೋ ಎಂಬ ಅನುಮಾನ ಕಾಡುತ್ತಿದೆ’ ಎಂದನು. ಸತ್ಯಕಾಮ ವಿನೀತನಾಗಿ ತಿಳಿಸಿದ.
‘ಸತ್ಯಕಾಮ…… ನಿನಗೆ ಹುಟ್ಟಿನ ಬಗ್ಗೆ ಚಿಂತನೆ ಮೂಡಿದೆಯಲ್ಲವೆ? ಮುಂದೆ ಸಾವು ಎಂದರೇನು? ಸಾವಿನ ನಂತರ ಜೀವಿಯು ಏನಾಗುತ್ತಾನೆ ಎಂಬ ವಿಷಯದ ಬಗ್ಗೆಯೂ ಚಿಂತನೆ ಮೂಡುತ್ತದೆ. ಇಂತಹ ಚಿಂತನೆ ನಿನಗೆ ಮೂಡಿದ್ದು ಸಹಜ. ಇನ್ನು ನೀನು ಅರ್ಹವಾದ ವಿದ್ಯಾರ್ಥಿ, ನಾನು ನಿನ್ನನ್ನು ಎಂದೂ ತಿರಸ್ಕರಿಸಿಲ್ಲ. ಆದರೂ ಸೂಕ್ತ ಸಮಯಕ್ಕೆ ಕಾಯುತ್ತಿದ್ದೇನೆ. ನೀನು ಸತ್ಯಸಂಧ ಮಾತ್ರವಲ್ಲ. ವಿದ್ಯಾರ್ಹನಾದ ವಿದ್ಯಾರ್ಥಿಯಾಗಿದ್ದೀಯೇ’ ಎಂದು ಮಮತೆಯಿಂದ ಮೈದಡವಿದರು ಗೌತಮರು.
ಮುಂದೆ ಗುರುಗಳು ಅವನಿಗೆ ಸಕಲ ವಿದ್ಯೆಯನ್ನು ಕಲಿಸಿದರು. ಸತ್ಯಕಾಮ ಜಾಬಾಲ ವೇದ-ವೇದಾಂಗಗಳನ್ನು ಅಭ್ಯಾಸ ಮಾಡಿ ಮಹಾ ಮೇಧಾವಿಯಾಗಿ ಅದೇ ಹೆಸರಿನಿಂದ ಪ್ರಸಿದ್ಧನಾದನು. ಸತ್ಯಕಾಮನು ಸತ್ಯದಿಂದಲೇ ಸಾಧನೆ ಮಾಡುವುದಕ್ಕೆ ಆತನ ತಾಯಿ ಕಾರಣಕರ್ತಳು ಎಂಬುದರಲ್ಲಿ ಎರಡು ಮಾತಿಲ್ಲ.
-ವಿಜಯಾಸುಬ್ರಹ್ಮಣ್ಯ, ಕುಂಬಳೆ
ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಕೃತಜ್ಞತೆಗಳು.
ಎಂದಿನಂತೆ ಪುರಾಣಕಥೆ ಓದಿಸಿಕೊಂಡು ಹೋಯಿತು…ವಂದನೆಗಳು ವಿಜಯಾ ಮೇಡಂ
ಚೆನ್ನಾಗಿದೆ
ಗುರು ಶಿಷ್ಯರ ನಡುವಿನ ಅವಿನಾಭಾವ ಸಂಬಂಧವು ಎಲ್ಲಕ್ಕಿಂತ ಅತೀತ! ಒಳ್ಳೆಯ ಸಂದೇಶವನ್ನು ಹೊತ್ತ ಚಂದದ ಪೌರಾಣಿಕ ಕಥೆ. ಧನ್ಯವಾದಗಳು ವಿಜಯಕ್ಕ.