ಕಾದಂಬರಿ : ‘ಸುಮನ್’ – ಅಧ್ಯಾಯ 14

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)

ಅಂದು ರಾತ್ರಿ ಊಟವಾದ ನಂತರ ಅಶ್ವತನಾರಾಯಣರು ಸಂಜೆ ಶ್ರೀಧರ್ ಮೂರ್ತಿಗಳು ಬಂದಿದ್ದರು ಎಂದು ಮೆಲ್ಲಗೆ ಪೀಠಿಕೆ ಹಾಕಿದರು.

ಸುಮನ್ “ಹೂಂ” ತಲೆದೂಗಿದಳು.

“ಗಿರೀಶ ವಿಚ್ಛೇದನೆ ಪತ್ರಕ್ಕೆ ಸಹಿ ಹಾಕಿದಾಗ ಅಲಿಮೊನಿ ಎಷ್ಟುಬೇಕು ಅಂತ ಕೇಳಿದನಂತೆ.”

ಅವನ ಆ ಮಾತು ಕೇಳುವಾಗ ಅವನಲ್ಲಿದ್ದ ದರ್ಪ ಶ್ರೀಧರ ಮೂರ್ತಿ ಅವರಿಗೇ ಸಿಟ್ಟು ತರಸಿತ್ತು. ಅದನ್ನು ಅವರು ಅಶ್ವತನಾರಾಯಣರಿಗೆ  ಸೂಕ್ಷ್ಮವಾಗಿ ತಿಳಿಸಿದ್ದರು. ಸುಮನಳ ಅಭಿಪ್ರಾಯ ಕೇಳಿ ಬಿಡುವುದು ಎಂದುಕೊಂಡು ಆ ವಿಷಯ ಪ್ರಸ್ತಾಪ ಮಾಡಿದರು.

ಬೂದಿ ಮುಚ್ಚಿದ ಕೆಂಡದಂತ್ತಿದ್ದ ಗಿರೀಶನ ಮೇಲಿನ ರೋಷ ಹೆಡೆಯೆತ್ತಿತು  “ಯಾವುದಕ್ಕೆ ಕೊಡ್ತಾನಂತೆ ಅಲಿಮೊನಿ? ನನ್ನ ಜೀವನ ಹಾಳು ಮಾಡಿದ್ದಕ್ಕಾ ಅಥವಾ ನನ್ನ ಕನಸುಗಳ್ನಾ ಚೂರು ಮಾಡಿದಕ್ಕಾ? ಯಾರಿಗೆ ಬೇಕು ಅವನ ಹಣ? ನಮ್ಮ ಅಮ್ಮ ಅಪ್ಪ ನನ್ನ ಚೆನ್ನಾಗಿ ಓದಿಸಿದ್ದಾರೆ. ನನ್ನ ಕಾಲ ಮೇಲೆ ನಾನು ನಿಂತ್ಕೋಬಲ್ಲೆ. ಅವನ ಸೊಕ್ಕಿನ ಋಣದಲ್ಲಿ ನಾನು ಜೀವನ ನಡಿಸಬೇಕಾಗಿಲ್ಲ. ಏನೂ ಬೇಕಾಗಿಲ್ಲ ಅಂತ ಹೇಳ ಬಿಡಪ್ಪ” ಸುಮನಳ ಧ್ವನಿ ಸೂರು ಮುಟ್ಟಿತ್ತು.

ಅದರಲ್ಲಿ ಸಿಟ್ಟು, ನೋವು ಎಲ್ಲದರ ಮಿಲನ. ಅಲಿಮೊನಿ ಪದ ಅವಳ ಸ್ವಾಭಿಮಾನಕ್ಕೆ ಬರೆ ಎಳೆದಿತ್ತು. ಕೆಂಡಮಂಡಲವಾಗಿದ್ದಳು. ಅವಳು ಗಿರೀಶ ಮುಂದೆ ಅಲ್ಲಾ ಮಾತಾಡುತ್ತಿರುವುದು ತನ್ನ ತಂದೆ ತಾಯಿಯ ಎದುರಿಗೆ ಎಂದು ಮರೆತ್ತಿದಳು. ಮುಖ ಕೆಂಪಗಾಗಿತ್ತು. ಸಿಟ್ಟಿನಿಂದ ಬಿಸಿ ಕಣ್ಣೀರು ಕೆನ್ನೆಗಳನ್ನು ನೆನೆಸಿದವು. ಅಶ್ವತನಾರಾಯಣರು ಮಗಳ ಆ ರೌದ್ರಾವತಾರವನ್ನು ಮೊದಲ ಬಾರಿ ನೋಡಿದ್ದರು. ಅದರ ಹಿಂದಿನ ಭಾವನೆಗಳನ್ನು ಗುರುತಿಸಿ ಸುಮ್ಮನೆ ಕುಳಿತರು.

“ಹೊರ ಹಾಕು ಮರಿ ಕಿತ್ತು ಬಿಸಾಕು ನಿನ್ನ ಜೀವನದ ಈ ವಿಷಮಯ ಘಟನೆಯನ್ನು, ಆ ವಿಶ್ವಾಸ ಘಾತಕನನ್ನು” ಅಲ್ಲೆ ನಿಂತ ಅವಳಮ್ಮನ ಹೃದಯ ಚೀರಿ ಚೀರಿ ಹೇಳುತ್ತಿತ್ತು. 

ಎರಡು ನಿಮಿಷದ ನಂತರ ಸುಮನ್ ಸಾವರಿಸಿಕೊಂಡು “ಅಪ್ಪ ನಂಗೆ ಅವನ ಅಲಿಮೊನಿ ಬೇಡ. ಆದರೆ ನನ್ನ ಮದುವೇಲಿ ನೀವು ಇಟ್ಟ ಎಲ್ಲಾ ಒಡವೆ ವಸ್ತು ಬೇಕು” ಎಂದಳು. ಇದನ್ನು ಅವಳು ಮೊದಲೇ ನಿರ್ಧರಿಸಿದ್ದಳು. ಕಷ್ಟಪಟ್ಟು ನೈತಿಕವಾಗಿ ಸಂಪಾದಿಸಿ ಮಗಳ ಮದುವೆಗೆ ಅಂತ ಆಸೆಯಿಂದ ಪೈಸೆ ಪೈಸೆ ಕೂಡಿಟ್ಟ ಅವಳ ತಂದೆ  ತಾಯಿಯ ಹಣ ಅಮೂಲ್ಯ. ಅದನ್ನು ಅವಳು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ತಯಾರಿರಲಿಲ್ಲ. ಅವರು ಅವಳಿಗೆ ಕೊಟ್ಟ ವಸ್ತುಗಳ ಹಿಂದಿನ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಅಸಾಧ್ಯ. ಅದರ ಬೆಲೆ ಅವಳಿಗೆ ಮಾತ್ರ ಗೊತ್ತು.

“ಹೇಳ್ತೀನಿ. ಹಾಗೇ ಹೇಳ್ತೀನಿ ಶ್ರೀಧರ್ ಮೂರ್ತಿಗಳಿಗೆ” ಅಶ್ವತನಾರಾಯಣರಿಗೆ ಮಗಳ ನೈತಿಕ ನಿಲುವಿನ ಮೇಲೆ ಹೆಮ್ಮೆ. ಅವಳಮ್ಮ ಕೂಡ ಅವಳ ಮಾತಿಗೆ ತಲೆದೂಗಿದರು.

ಕನಸು ಬೀಳುವ ಹೊತ್ತಿಗೆ ದಿನಾ ಎದ್ದು ಪಾಠಕ್ಕೆ ತಯಾರಿ ಮಾಡುತ್ತಿದ್ದ ಸುಮನ್‍ಗೆ ಪಾಠಗಳು ಮುಗಿದಾಗಿನಿಂದ ಆ ಹೊತ್ತಿಗೆ ಏಳುವ ಪ್ರಮೇಯವಿಲ್ಲಾ. ಮಲಗಿದ್ದಳು. ಮತ್ತೆ ಆ ಕನಸು. ಮುದ್ದಾದ ಮಗು ಸುಮನ್ ಕೈ ತಪ್ಪಿಸಿಕೊಂಡು ನಗುತ್ತಿತ್ತು. ಅಳುತ್ತ ಎದ್ದು ಕುಳಿತಳು. ಮತ್ತೆ ಅವೇ ಉತ್ತರವಿಲ್ಲದ ಪ್ರಶ್ನೆಗಳು. ಯಾಕೆ ಹೀಗೆ ಮಾಡಿದೆ? ನನ್ನ ಜೀವನ ಹೀಗೆ ಬರಡು ಮಾಡಿದ್ದಾದರು ಯಾಕೆ? ಯಾವ ಜನ್ಮದ ತಪ್ಪಿಗೆ ಶಿಕ್ಷೆ ? ಹೀಗೆ ಮಾಡಬಹುದೇ ದೇವರೇ  ನೀನು ? ನನ್ನ ಜೀವನದ ಜೊತೆ ಆಟವಾಡಿ ಬಿಟ್ಟೆಯಲ್ಲ? ದೇವರೇ ಯಾಕೆ? ಯಾಕೆ? ಮಗಳು ಬಿಕ್ಕಳಿಸುವುದು ಕೇಳಿ ಪಕ್ಕದ ಕೋಣೆಯಲ್ಲ್ಲಿ ರಾಜಲಕ್ಷ್ಮಿ ಎದ್ದು ಕುಳಿತರು. ಹೊಟ್ಟೆಯಲ್ಲಿ ಸಂಕಟ. ಹೃದಯದಲ್ಲಿ ಸಿಟ್ಟು. ಮೆತ್ತಗೆ ಎದ್ದು ದೇವರ ಮನೆಗೆ ನಡೆದರು.

          ನೆತ್ತಾರು ಹರಿದಾವು ಕಂಬನಿಯಾಗಿ
          ಕುಳಿತಾನು ಶಿವ ಕಲ್ಲಾಗಿ.

ದೇವರನ್ನು ಪರಿಪರಿಯಾಗಿ ಪ್ರಶ್ನಿಸುತ್ತ ಅವನ ಮೇಲೆ ತಮ್ಮ ಕ್ರೋಧ ವ್ಯಕ್ತಪಡಿಸುತ್ತ ಕುಳಿತರು. ಬೆಳಗಾಗುವರೆಗು ಸುಮನ್ ಅಳುತ್ತಿದ್ದಳು. ಅವಳಮ್ಮ ದೇವರ ಮುಂದೆ ಕುಳಿತೇ ಇದ್ದರು.

**

ಸುಮನ್ ಕಾಲೇಜಿಗೆ ಬಂದು ತನ್ನ ವಿಷಯದಲ್ಲಿ ಹದಿನೈದಕ್ಕು ಕಮ್ಮಿ ಬಂದವರ ಪಟ್ಟಿಯನ್ನು ತಯಾರಿಸಿ ಮುಖ್ಯಸ್ಥರ ಕೋಣೆಗೆ ಹೋದಳು. ಅವಳ ಪಟ್ಟಿಯನ್ನು ನೋಡಿ ತುಸು ಗಡುಸಾಗಿ “ಎಲ್ಲರಿಗೂ ಹದಿನೈದು ಮಾಡಿ ಮಾರ್ಕ್‌ಶೀಟ್ ಕೊಡಿ” ಎಂದರು. ಸುಮನ್‍ಗೆ ಎಲ್ಲಿಲ್ಲದ ಕೋಪ “ಯಾಕ್ ಸರ್ ಕೊಡಬೇಕು? ಹದಿನಾರು ವಾರದ ಸೆಮಿಸ್ಟರ್‌ನಲ್ಲಿ ಸರಿಯಾಗ ನಲ್ವತೈದು ಗಂಟೆ ಸಿಗೋಲ್ಲ ಪಾಠ ಮಾಡೋಕ್ಕೆ. ಅಂತಾದ್ರಲ್ಲಿ ದಿನಾ ಬೆಳಗ್ಗೆ ಎಂಟು ಗಂಟೆಗೆ ಸ್ಪೆಶಲ್ ಕ್ಲಾಸ್ ತೊಗೊಂಡು ಪ್ರತಿ ಕ್ಲಾಸ್‍ಗೆ ಎಪ್ಪತ್ತು ಗಂಟೆ ಪಾಠ ಮಾಡಿದೀನಿ. ಅದು ಕಾಟಾಚಾರಕ್ಕೆ ಮಾಡಿಲ್ಲ ಪಾಠಾನಾ. ಸಿಲಬಸ್ ಮುಗಿಸಿದೀನಿ. ಅದರ ಮೇಲೆ ಯುನಿವರ್ಸಿಟಿ ಮೂರು ಆಂತರಿಕ ಪರೀಕ್ಷೆ ಹೇಳಿರುವಾಗ ಏನೋ ನೆವ ಮಾಡಿ ನಾಲ್ಕು ನಾಲ್ಕು ಸಲಿ ಪರೀಕ್ಷೆ ಬರದಿದಾರೆ. ಅಷ್ಟು ಮಾಡಿದ್ರು ಹದಿನೈದು ತೊಗೊಳ್ಳೊ ಯೋಗ್ಯತೆ ಇಲ್ಲ. ಜವಾಬ್ದಾರಿನೂ ಇಲ್ಲ. ಅಂತಹವರಿಗೆ ನಾನು ಹೀಗೆ ಅನೈತಿಕವಾಗಿ ಸುಮ್ಮಸುಮ್ಮನೆ ಅಂಕಗಳನ್ನ ತುಂಬಲ್ಲ”   ಒಂದೇ ಉಸಿರಿಗೆ ಎಲ್ಲಾ ಹೇಳಿ ತಯಾರಿ ಮಾಡಿದ್ದ ಮಾರ್ಕ್‌ಶೀಟ್ ಅದರ ಜೊತೆ ಇನ್ನೊಂದು ಹಾಳೆ ಇಟ್ಟು “ಸರ್ ನಂಗೆ ಇಂತಹ ವಾತಾವರ್ಣದಲ್ಲಿ ಕೆಲಸ ಮಾಡೋಕ್ಕೆ ಇಷ್ಟ ಇಲ್ಲ. ಇದು ನನ್ನ ರಾಜಿನಾಮೆ” ಹೇಳಿ ಹೊರಟೇ ಬಿಟ್ಟಳು. ಮುಖ್ಯಸ್ಥರು ನೋಡ್ತಾನೆ ಕುಳಿತಿದ್ದರು.

ಅಂದು ರಾತ್ರಿ ಊಟ ಮಾಡುತ್ತ ಸುಮನ್ ಅಂದಿನ ಘಟನೆಗಳನ್ನು ವಿವರಿಸಿದಳು ಅವರಮ್ಮ ಅಪ್ಪನಿಗೆ. ಮಗಳು ಮಾಡಿದ್ದು ಸರಿ ಇದು ಅವರಿಬ್ಬರ ಅಭಿಪ್ರಾಯ.

**

ಮರಳಿ ಗೂಡಿಗೆ

ಎರಡು ದಿನದ ನಂತರ ಹೊರಗಿನಿಂದ ಒಳಗೆ ಬರುತ್ತ ಅಶ್ವತನಾರಾಯಣರು “ಸುಮನ್ ಸುಮನ್” ಕೂಗಿದರು. “ಏನಪ್ಪ?” ಕೋಣೆಯಿಂದ ಆಚೆ ಬಂದ ಸುಮನ್ ವಿಚಾರಿಸಿದಳು.  “ಮಾರ್ಕೆಟ್‌ಅಲ್ಲಿ ನಿನ್ನ ಹಳೆ ಹೆಚ್.ಓ.ಡಿ (ಹೆಡ್ ಆಫ್ ಡಿಪಾರ್ಟ್ಮೆಂಟ್) ಸುರೇಶ ಸಿಕ್ಕಿದ್ರು. ನೀನು ಅವ್ರ ಕಾಲೇಜಿಗೆ ವಾಪಸ್ ಬರದೇ ಬೇರೆ ಕಾಲೇಜು ಸೇರಿಕೊಂಡಿದ್ದಕ್ಕೆ ತುಂಬ ಬೇಜಾರು ಮಾಡಿಕೊಂಡ್ರು. ನಾಳೆ ಕಾಲೇಜಿಗೆ ಬರೋಕ್ಕೆ ಹೇಳಿದಾರೆ. ಹತ್ತು ಗಂಟೆಗೆ ಅವರನ್ನು ನೋಡಬೇಕಂತೆ” ಅವರ ಧ್ವನಿಯಲ್ಲಿ ಉತ್ಸಾಹವಿತ್ತು. “ಹೂಂ” ತಲೆದೂಗಿದಳು ಸುಮನ್. ಇನ್ನು ಅಲ್ಲಿಗೆ ಹೋಗುವುದು ಆದರೇ ಎಲ್ಲರನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತಿದ್ದ ಸುಮನ್ ಈಗ ಈ ಕರೆಯನ್ನು ತಳ್ಳಿ ಹಾಕುವ ಹಾಗಿಲ್ಲ.

ಬೆಳಗ್ಗೆ ಬೇಗನೆ ತಯಾರಾಗಿ ಸುಮನ್ ಬಸ್ ಹಿಡಿದು ಕಾಲೇಜಿಗೆ ಬಂದಿಳಿದಳು. ಎರಡು ವರ್ಷದ ಹಿಂದೆ ಅವಳು ಪಾಠ ಮಾಡುತ್ತಿದ್ದ ಹುಡುಗರು ಎಲ್ಲಾ ಕಾಲೇಜು ಬಿಟ್ಟು ಹೋಗಿದ್ದರು. ಆದರೆ ಗೇಟಿನಲ್ಲಿದ್ದ ಕಾವಲುಗಾರ ಅವಳನ್ನು ಗುರುತಿಸಿ “ಚೆನ್ನಾಗಿದೀರಾ ಮೇಡಂ” ಎಂದಾಗ ಸುಮನಳ ಗಂಟಲುಬ್ಬಿ ಬಂತು. ಇದು ಅವಳು ಓದಿದ ಕಾಲೇಜು. ಇಲ್ಲೆ ಅವಳು ಮೊದಲು ಪಾಠ ಮಾಡಿದ್ದು. ಎಲ್ಲಾ ಪರಿಚಿತವಾದ ಆತ್ಮೀಯ ವಾತಾವರಣ. ಮೂಲೆಯಲ್ಲಿ ಕಟ್ಟುತ್ತಿದ್ದ ಹೊಸ ಕಟ್ಟಡ ಆರು ಅಂತಸ್ತಿನದು ಎಂದುಕೊಳ್ಳುತ್ತ ನೇರವಾಗಿ ಮುಖ್ಯಸ್ಥರ ಕೋಣೆಗೆ ನಡೆದಳು. ಅವಳು “ಮೇ ಐ ಕಮ್ ಇನ್ ಸರ್” ಎಂದಾಗ ಗಂಟೆ ಹತ್ತು. ಸುರೇಶ ತಲೆ ಎತ್ತಿ  “ಓ ಸುಮನ್ ಬಾಮ್ಮ. ಗಡಿಯಾರ ನೋಡಬೇಕಾಗಿಲ್ಲ. ನಿನ್ನ ನೋಡಿದ್ರೆ ಹತ್ತು ಗಂಟೆ ಅಂತ ಹೇಳಬಹುದು. ಬಾ ಕೂತ್ಕೋ ಬಾ” ಕಕ್ಕುಲತೆಯಿಂದ ಬರ ಮಾಡಿಕೊಂಡರು. ತನ್ನ ವಿಚ್ಛೇದನೆಯ ಬಗ್ಗೆ ಕೇಳದಿರಲಿ ಇವರು ಎಂದುಕೊಳ್ಳುತ್ತ ಸುಮನ್ ಮೇಜಿನ ಎದರುಗಡೆ ಕುರ್ಚಿಯಲ್ಲಿ ಕುಳಿತಳು.

“ಏನಮ್ಮ ಸುಮನ್ ಊರಿಗೆ ಬಂದ್ರೆ ನೀರಿಗೆ ಬರೋಲ್ವಾ ಅಂತ ನಾವಿದ್ರೆ ನೀನು ನಮ್ಮ ಕಾಲೇಜಿಗೆ ಬರದೇ ಅದ್ಯಾವುದೋ ಕಾಲೇಜಿಗೆ ಹೋಗಿದ್ಯಲ್ಲ” ಹೀಗೆ ಸಂಭಾಷಣೆ ಶುರು ಮಾಡಿ ಹತ್ತು ನಿಮಿಷದಲ್ಲಿ ಅವಳಿಂದ ಕೆಲಸಕ್ಕೆ ಅರ್ಜಿ ಬರಿಸಿಕೊಂಡು ಬಿಟ್ಟರು. ಒಮ್ಮೆಯೂ ಅವಳ ಮದುವೆಯ ಬಗ್ಗೆ ಕೇಳಲಿಲ್ಲ. ಆ ನೋವನ್ನು ಅವಳಪ್ಪ ಅವರಿಗೆ ಆಗಲೇ ತಿಳಿಸಿದ್ದರು. ಅರ್ಜಿ ಪತ್ರವನ್ನು ಹಿಡಿದು ತಾವೇ ಪ್ರಾಂಶುಪಾಲರ ಕಛೇರಿಗೆ ಹೋದರು, ಸುಮನ್‍ಗೆ ಅಲ್ಲೆ ಕುಳಿತಿರಲು ಹೇಳಿ. ಪ್ರಾಂಶುಪಾಲರಿಗೂ ಸುಮನ್ ಗೊತ್ತು. ಹೇಗೂ ಅಧ್ಯಾಪಕರ ಕೊರತೆ ಇತ್ತು. ಸುಮನಳನ್ನು ಸಂದರ್ಶನವಿಲ್ಲದೆ ನೇಮಿಸಿಕೊಳ್ಳುವುದ್ರಲ್ಲಿ ಅವರಿಗೆ ಯಾವ ಅಭ್ಯಂತರವಿರಲಿಲ್ಲ. ನೇಮಕಾತಿ ಪತ್ರ ತಯಾರು ಮಾಡಲು ಆಜ್ಞೆ ಹೊರಡಿಸಿದರು. ಅದು ತಯಾರ ಆಗುವದ್ರೊಳಗೆ ಸುರೇಶ ಅವರು ಸುಮನ್ ಕೈಯಲ್ಲಿ ಜಾಯ್ನಿಂಗ್ ಲೆಟರ್ ಬರೆಸಿ ನೇಮಕಾತಿ ಬಂದ ತಕ್ಷಣ ಅದರ ವಿವರಗಳನ್ನು ಅವಳ ಕಾಗದದಲ್ಲಿ ಸೇರಿಸಿ ಪ್ರಾಂಶುಪಾಲರಿಗೆ ಕಳುಹಿಸಿ ಬಿಟ್ಟರು. ಅವರು ಅವಳಿಗೆ ಮೊದಲು ಸಿಗುತ್ತಿದ್ದ ಸಂಬಳವನ್ನೆ ಕೊಡಿಸಿದ್ದರು. ಪ್ರಾಂಶುಪಾಲರ ಮುಂದೆ ಅವರದು ಒಂದೇ ವಾದ “ಸರ್ ಸುಮನ್ ಪ್ರತಿಭೆ ಹಾಗೂ ವೃತ್ತಿ ನಿಷ್ಠೆಯ ಬಗ್ಗೆ ನಿಮಗೆ ಅರಿವಿದೆ. ಇನ್ನು ಒಂದು ವರ್ಷದಲ್ಲಿ ನಮ್ಮ ಕಾಲೇಜಿಗೆ ಆಟೋನಮಿ ಬರುತ್ತೆ. ಅವಾಗ ಇಂತಹವರಿಲ್ಲದೇ ಉತ್ತಮ ಗುಣಮಟ್ಟ ಕಾಪಾಡಿಕೊಂಡು ಬರುವುದು ಕಷ್ಟ. ನೀವೇ ನೋಡ್ತಾ ಇದಿರಲ್ಲ ನಮ್ಮಲ್ಲಿ ಎಂಥವರು ಬರ್ತಾನೂ ಇದಾರೆ ಹೋಗ್ತಾನೂ ಇದಾರೆ. ಸುಮನ್ ಕೇಳಿದಷ್ಟು ಕೊಟ್ಟು ನೇಮಿಸಿಕೊಳ್ಳುವ ಕಾಲೇಜುಗಳು ನಮ್ಮೂರಲ್ಲಿ ಬೇಕಾದಷ್ಟಿವೆ” ಅಲ್ಲೆ ಇದ್ದ ಆಡಳಿತ ಮಂಡಳಿಯ ಕಾರ್ಯದರ್ಶಿ ಕೂಡ ಇದನ್ನು ಒಪ್ಪಿದರು.

ಸುಮನಳನ್ನು ಇಲ್ಲಿಗೇ ಬಿಡದೆ ಸುರೇಶ ಅವಳಿಗೆ ಎಮ್.ಟೆಕ್‍(ಮಾಸ್ಟರ್ ಆಫ್ ಟೆಕ್ನೋಲಜಿ) ಗೆ ಸೇರಲು ಸೂಚಿಸಿದರು “ಹೇಗೂ ಹೊಸ ವಿಷಯ ಶುರುವಾಗಿದೆ ನಮ್ಮ ಕಾಲೇಜಿನಲ್ಲಿ. ನೀನೂ ಸೇರ್ಕೊ ನಾನು ನಿನ್ನ ಟೈಮ್ ಟೇಬಲ್ ಅಡಜಸ್ಟ್ ಮಾಡಿಸ್ತೀನಿ” ಸುಮನ್ ಅವರ ಆ ಕಳಕಳಿಗೆ ತಲೆದೂಗಬೇಕಾಯಿತು. ತಾವೇ ಖುದ್ದಾಗಿ ಅವಳನ್ನು ಸ್ಟಾಫ್ ರೂಮಿಗೆ ಕರೆದೊಯ್ದು ಶ್ವೇತ ಬಳಿ ಬಿಟ್ಟಾಗ ಸುಮನಳ ಕಣ್ಣು ತುಂಬಿ ಬಂದವು.

“ಹೇ ಸುಮನ್ ನೀನು ಇಲ್ಲಿ? ಯಾವಾಗ ಬಂದೆ?” ಶ್ವೇತ ಅಚ್ಚರಿಯಿಂದ ಕೇಳಿದಳು.

“ಹತ್ತು ಗಂಟೆಗೆ.”

“ಈಗ ಲಂಚ್.  ಹೆಚ್. ಓ.ಡಿ ಹತ್ರ ಇದ್ಯಾ ಇಷ್ಟ ಹೊತ್ತು ?”

“ಹೂಂ.”

ಶ್ವೇತ ವಿಸ್ಮಯದಿಂದ ನೋಡುತ್ತಿರುವುದನ್ನು ಗಮನಿಸಿ “ಕೆಲಸಕ್ಕೆ ಸೇರಿಕೊಂಡೆ ಇಲ್ಲೆ” ಸುಮನ್ ಉತ್ತರಿಸಿದಳು.

ಇನ್ನು ವಿಸ್ಮಯದಿಂದ ಶ್ವೇತ “ಗಿರೀಶು, ಬೆಂಗಳೂರು ?” ಉಸಿರಿದಳು.

“ಅದು ಆಮೇಲೆ” ಸ್ಟಾಫ್ ರೂಮಿಗೆ ಯಾರೋ ಬರುತ್ತಿರುವುದನ್ನು ಗಮನಿಸಿ ಸುಮನ್ ಉತ್ತರಿಸಿದಳು.

“ಸರಿ. ಉಟಾ ಆಯ್ತಾ?  ಬಾ ಕ್ಯಾಂಟೀನ್‍ಗೆ ಹೋಗೋಣ” ಶ್ವೇತ ಗೆಳತಿಯನ್ನು ಹೊರಡಿಸಿಕೊಂಡು ಹೊರಟಳು.

ಊಟ ಮಾಡುತ್ತ ಶ್ವೇತ ಎರಡು ವರ್ಷದಲ್ಲಿ ಕಾಲೇಜಿನಲ್ಲಾದ ಬದಲಾವಣೆಗಳನ್ನು ವಿವರಿಸಿದಳು. ಸುಮನ್ ತನ್ನ ಹಳೆ ಸಹೋದ್ಯೋಗಿಗಳ ಬಗ್ಗೆ ವಿಚಾರಿಸಿಕೊಂಡಳು. ಊಟ ಮುಗಿಸ ಸುಮನ್ ಮನೆಗೆ ಕರೆ ಮಾಡಿ ವಿಷಯ ತಿಳಿಸಿ ತಡವಾಗಿ ಬರುವುದಾಗಿ ಅವರಮ್ಮನಿಗೆ ಹೇಳಿದಳು. ಊಟದಿಂದ ಬರುವಷ್ಟರಲ್ಲಿ ಅವಳಿಗಾಗಿ ಒಂದು ಮೇಜು, ಕುರ್ಚಿ, ಬೀರು ಎಲ್ಲಾ ಅಣಿಯಾಗಿತ್ತು ಸ್ಟಾಫ್ ರೂಮಿನಲ್ಲಿ. ಮೇಜಿನ ಮೇಲೆ ಎಮ್.ಟೆಕ್‍ಗೆ ಸೇರಿಕೊಳ್ಳಲು ತೆಗೆದುಕೊಳ್ಳಬೇಕಾದ ಪಿಜಿಸಿಇಟಿ (ಪೋಸ್ಟ್‌ಗ್ರಾಜುಏಟ್‌‌ಕಾಮನ್‌ಎನಟ್ರೆನ್ಸ್‌ಎಕ್ಸಾಮ್) ಪರೀಕ್ಷೆಯ ಪ್ರವೇಶ ಪತ್ರ. ಸುಮನ್‍ಗೆ ನಗು ಬಂತು “ಈ ಹೆಚ್.ಓ.ಡಿ ನನ್ನ ಎಮ್.ಟೆಕ್‍ಗೆ ಸೇರಸೇ ತೀರ್ತಾರೆ” ಎನ್ನುತ್ತ ಅದನ್ನು ಕೈಗೆತ್ತಿಕೊಂಡಳು. ಶ್ವೇತ ಪಾಠಕ್ಕೆ ಹೋದಳು.

ಕಾಲೇಜು ಮುಗಿಸಿ ಶ್ವೇತಾಳ ಬಲವಂತಕ್ಕೆ ಸುಮನ್ ಲತಾ ಮನೆಗೆ ಹೊರಟಳು. ಶ್ವೇತ, ಲತಾ, ಸುಮನ್ ಚಿಕ್ಕವರಿಂದ ಸ್ನೇಹಿತರು. ಒಟ್ಟಿಗೆ ಶಾಲೆ ಕಾಲೇಜಿಗೆ ಹೋಗಿದ್ದರು. ಲತಾ ವೈದ್ಯಕೀಯ ಓದಲು ಹೋದಾಗ ಬೇರೆಯಾಗಿದ್ದರು. ರಜೆಯಲ್ಲಿ ಮತ್ತೆ ಸೇರುವ ಪರಿಪಾಠ ಇಟ್ಟುಕೊಂಡಿದ್ದರು. ಲತಾ ಮನೆ ಪಕ್ಕಾನೇ ಅವಳ ಆಸ್ಪತ್ರೆ. ಅವಳದು ಅನ್ನುವುದಕ್ಕಿಂತ ಅವಳ ಮಾವನ ಆಸ್ಪತ್ರೆ. ಲತಾ ಹಾಗೂ ಅವಳ ಗಂಡ ಇಬ್ಬರೂ ಡಾಕ್ಟ್ರು. ಇಬ್ಬರು ಅಲ್ಲೆ ಕೆಲಸ ಮಾಡುತ್ತಿದ್ದರು. ಅವರ ಮಗಳು ನಿಧಿ. ಶ್ವೇತ ಗಂಡ ರಜತ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. ಅಮೆರಿಕಾದ  ಕಂಪನಿಯ ಒಂದು ವಿಭಾಗವನ್ನು  ನಡೆಸುತ್ತಿದ್ದ. ಅವಳಿಗೆ ಎರಡು ಮಕ್ಕಳು ಅನೂಪ ಹಾಗೂ ಅನುರಾಧ.

ಇಬ್ಬರನ್ನು ನೋಡಿ ಲತಾ ಬಹಳ ಸಂತೋಷಪಟ್ಟಳು. ಕಾಫಿ ತಿಂಡಿ ತಿನ್ನುತ್ತ ಮಾತಾಡುತ್ತ ಕುಳಿತರು. ಅಂದು ಮೊದಲ ಬಾರಿ ಸುಮನ್ ತನ್ನ ಮದುವೆ, ಗಿರೀಶ ಅವನ ವಿಚಿತ್ರ ಜೀವನಶೈಲಿ ಅದರಿಂದಾಗಿ ತನಗಾದ ಹಿಂಸೆ ಅವಮಾನ ಎಲ್ಲವನ್ನು ಹೇಳಿಕೊಂಡಳು. ಅವಳ ಮಾತನ್ನು ಕೇಳಿ “ಅಯ್ಯೋ ಇದೆಂತಹ ಮದುವೆ ಸುಮನ್” ಲತಾ ಹೌಹಾರಿದಳು. ಮನೆಯ ಆ ನಿಶಬ್ದದಲ್ಲಿ ಸುಮನ್ ನೀರಸವಾಗಿ ಮಾತಾಡುತ್ತಿದ್ದಳು. ಅದರಲ್ಲಿದ್ದ ಹತಾಶೆ ದುಃಖ ಅವರಿಬ್ಬರನ್ನು ನೋಯಿಸಿತು. ಕೊನೆಯಲ್ಲಿ ಅವರಿಬ್ಬರೂ ಕಣ್ಣು ಒರೆಸಿಕೊಂಡರು. ಸುಮನಳ ಕಣ್ಣುಗಳು ಮರುಭೂಮಿಯಂತೆ ಖಾಲಿ. ಅವಳ ಕಣ್ಣಿನಲ್ಲಿ ಕಣ್ಣೀರಿನ ಸೆಲೆ ಬತ್ತಿ ಹೋಗಿತ್ತು. ನೆಲ ನೋಡುತ್ತ ಸುಮ್ಮನೆ ಎಷ್ಟೋ ಹೊತ್ತು ಕುಳಿತ್ತಿದ್ದಳು. ಅವಳ ನೋವನ್ನು ಅನುಭವಿಸುತ್ತ ಕುಳಿತ್ತಿದ್ದರು ಶ್ವೇತ ಹಾಗೂ ಲತಾ. ಕೊನೆಗೆ ಗಡಿಯಾರ ಆರು ಹೊಡೆದಾಗ ಸುಮನ್ ತಾನೇ ಹೊರಡಲು ಎದ್ದು ನಿಂತಳು. ಏನು ಹೇಳುವುದು? ಯಾರಿಗೂ ಏನೂ ತೋಚದು. “ನೀನು ಮಾಡಿದ್ದು ಸರಿ ಸುಮನ್” ಲತಾ ಗೆಳತಿಯ ಭುಜದ ಸುತ್ತ ಕೈ ಬಳಸಿ ಅವಳನ್ನು ಒಮ್ಮೆ ಅಪ್ಪಿದಳು. ಎಲ್ಲರು ಹೊರ ನಡೆದರು. ಅವರಿಬ್ಬರ ಆಟೋ ಕಣ್ಮರೆಯಾಗುವವರೆಗು ನೋಡುತ್ತ ನಿಂತಿದ್ದಳು ಲತಾ. ಶ್ವೇತ ಸುಮನಳನ್ನು ಮನೆಯವರೆಗು ಬಿಟ್ಟು ತನ್ನ ಮನೆಗೆ ಹೋದಳು.

ಮನೆಗೆ ಬಂದ ಸುಮನ್ ಒಂದೇ ಉಸಿರಿನಲ್ಲಿ ಅವರಮ್ಮನಿಗೆ ವರದಿ ಒಪ್ಪಿಸಿದಳು. ಕೋಣೆಯಲ್ಲಿ ಕುಳಿತ ಅವರಪ್ಪನ ಮುಖದಲ್ಲಿ ಮಂದಹಾಸ. ಅವರಿಗೆ ಗೊತ್ತಿತ್ತು ಸುರೇಶ “ನೀವು ಅವಳನ್ನ ಕಾಲೇಜಿಗೆ ಕಳುಹಿಸಿ ನಾನು ನೋಡ್ಕೋತೀನಿ” ಎಂದ ಅವರ ಮಾತಿನ ಅರ್ಥ. ಸುಮನ್ ಮುಕ್ತ ಕಂಠದಿಂದ ಸುರೇಶ ಅವರ ಅಭಿಮಾನವನ್ನು ಹೊಗಳಿದಳು.

**

ಒಂದು ತಿಂಗಳಲ್ಲಿ ಸುಮನ್ ಪಿಜಿಸಿಇಟಿ ಓದಿ ಬರೆದದ್ದು ಆಯಿತು. ಇನ್ನು ಹದಿನೈದು ದಿನಕ್ಕೆ ಅದರ ಫಲಿತಾಂಶವೂ ಬಂತು. ಸುಮನ್‍ಗೆ  ನಾಲ್ಕನೇ ರಾಂಕ್ ಬಂದಿತ್ತು. ತನ್ನ ಕಾಲೇಜಿನಲ್ಲೆ ಪ್ರವೇಶ ಸಿಕ್ಕಿ ಬೆಳಗ್ಗಿನ ಹೊತ್ತು ಎಮ್.ಟೆಕ್ ಕ್ಲಾಸ್, ಮಧ್ಯಾಹ್ನ ಅವಳಿಗೆ ಪಾಠ ಹೇಳುವ ಹಾಗೆ ವೇಳಾಪಟ್ಟಿ ಸಿದ್ಧವಾಗಿತ್ತು. ಅವಳ ಮುಖ್ಯಸ್ಥರು ತಮ್ಮ ಮಾತು ಮರೆತಿರಲಿಲ್ಲ. ಸುಮನ್ ಅವರ ಅಭಿಮಾನಕ್ಕೆ ಮಾರ್ಯಾದೆ ಇತ್ತು ಕಷ್ಟಪಟ್ಟು ಓದುತ್ತಿದ್ದಳು. ಹಿಂದೆ ಒಮ್ಮೆ ಪಾಠ ಮಾಡಿದ್ದ ವಿಷಯವನ್ನೆ ಮತ್ತೆ ಪಾಠ ಮಾಡುತ್ತಿದ್ದರಿಂದ ತುಂಬ ತಯಾರಿ ಬೇಕಾಗುತ್ತಿರಲಿಲ್ಲ. ಈಗಲೂ ಅದೇ ಉತ್ಸಾಹದಿಂದ ಪಾಠ ಮಾಡುತ್ತಿದ್ದಳು. ತಾನು ಓದ ಬೇಕೆಂದು ವಿದ್ಯಾರ್ಥಿಗಳನ್ನು ಅವಳು ನಿರ್ಲಕ್ಷಿಸುತ್ತಿರಲಿಲ್ಲ. ಯಾವಗಲೂ ಅವಳನ್ನು ಹುಡುಗರು ಮುತ್ತಿರುತ್ತಿದ್ದರು. ಅಧ್ಯಾಪಕಿಯೂ ಹೌದು ಅವಳೀಗ ವಿದ್ಯಾರ್ಥಿಯೂ ಹೌದು. ಸುಮನ್ ಅವಳು ಬಿ.ಇ ಓದುವಾಗ ಹೇಗೆ ಎಲ್ಲವನ್ನು ಅರ್ಥ ಮಾಡಿಕೊಂಡು ಪಠ್ಯಸೂಚಿಯನ್ನು ಪೂರ್ತಿಯಾಗಿ ಓದುತ್ತಿದ್ದಳೋ ಈಗಲೂ ಹಾಗೇ ಓದುತ್ತಿದ್ದಳು. ಫುಲ್ ಟೈಮ್ ಆದ್ದರಿಂದ ಆ ಸೆಮಿಸ್ಟರಿನಲ್ಲಿ ಅವಳಿಗೆ ಐದು ವಿಷಯಗಳಿದ್ದವು. ವಾರದ ಐದು ದಿನ ಪಾಠಗಳಿದ್ದವು. ಆದರೇ ಎರಡು ವಿಷಯಗಳಿಗೆ ಬರುವ ಹೊರಗಿನ ಅಧ್ಯಾಪಕರನ್ನು ಬಿಟ್ಟರೆ ಮಿಕ್ಕ ಮೂರು ವಿಷಯಗಳಿಗೆ ಅವರದೇ ವಿಭಾಗದ ಅಧ್ಯಾಪಕರು. ಪಾಠವೇ ಮಾಡುತ್ತಿರಲಿಲ್ಲ. ಬೆಳಗಾದರೇ ತರಗತಿಗೆ ಹೋಗುವುದು ಐದು ನಿಮಿಷದಲ್ಲಿ ಸ್ಟಾಫ್ ರೂಮಿಗೆ ವಾಪಸ್ಸಾಗುವುದು. ಡಿ.ಟಿ.ಇ (ಡೈರೆಕ್ಟರೇಟ್ ಆಫ್ ಟೆಕ್ನಿಕಲ್ ಎಜುಕೇಶನ್)ಯಿಂದ ನೇಮಕಗೊಂಡ ಅಧ್ಯಾಪಕರನ್ನು ಯಾರೂ ಕೇಳುವ ಹಾಗಿಲ್ಲ. ಕೆಲವರಂತು ಮನೆಯಲ್ಲಿ ಇರುವ ಬದಲು ಕಾಲೇಜಿನಲ್ಲಿ ಕಾಲ ಕಳೆದು ಸಂಬಳ ಪಡೆಯುತ್ತಿದ್ದರು.  ಅವಳ ಎಮ್.ಟೆಕ್ ಕ್ಲಾಸಿನಲ್ಲಿ ಅವಳಂತೆ ಬೇರೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಅಧ್ಯಾಪಕರು ಹಾಗೂ ಗೇಟ್ ಬರೆದ ವಿದ್ಯಾರ್ಥಿಗಳ ಸಂಖ್ಯೆ ಅರ್ಧ ಅರ್ಧ. ಅವರಲ್ಲಿ ಬಹುತೇಕ ಜನರಿಗೆ ಅದೇ ಬೇಕಿತ್ತು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅನ್ನುವ ಹಾಗಿತ್ತು ಆ ಪರಿಸ್ಥಿತಿ. ಕಾಲೇಜಿಗೇ ಬರುತ್ತಿರಲಿಲ್ಲ. ಒಮ್ಮೆ ಆಂತರಿಕ ಪರೀಕ್ಷೆ ನಡೆದಾಗ ಅಧ್ಯಾಪಕರು ಹೊರಗೆ ಹೋದಾಗ ಕೆಲವರು ಪಠ್ಯಪುಸ್ತಕ ತೆಗೆದು ನಕಲು ಮಾಡಿದನ್ನು ನೋಡಿದ್ದಳು ಸುಮನ್. ಇವರೇ ನಕಲು ಮಾಡುವಾಗ ಇವರು ತಮ್ಮ ವಿದ್ಯಾರ್ಥಿಗಳಿಗೆ ಯಾವ ಮೌಲ್ಯ ಬೋಧಿಸುವರು. ಕೆಲವರಂತು ಈ ಪರೀಕ್ಷೆಯೇ ಬೇಡ ಕೆಲವು ಪ್ರಶ್ನೆಗಳನ್ನು ಕೊಟ್ಟು ಬಿಡಿ ನಾವು ಮನೆಯಲ್ಲೇ ಉತ್ತರಿಸಿ ತರುತ್ತೇವೆ ಎಂದು ಕೇಳುವಾಗ ಸುಮನ್ ಜಾಗ ಖಾಲಿ ಮಾಡಿದ್ದಳು. ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಕೊಡುವ ಮನೆ ಪಾಠದ ನೆನೆಪಾಗಿ. ಪಾಠವಿಲದಿದ್ದರೆ ಗ್ರಂಥಾಲಯದಲ್ಲಿ ತನ್ನ ಪಾಡಿಗೆ ತಾನು ಓದುತ್ತಿದ್ದಳು. ಊಟ ಶ್ವೇತಳ ಜೊತೆ. ಮಧ್ಯಾಹ್ನ ಪಾಠ ಮಾಡುವುದು. ಮನೆಗೆ ಬಂದು ಅಪ್ಪ ಅಮ್ಮನ ಜೊತೆ ಕಾಲ ಕಳೆಯುವುದು. ಇದೇ ಅವಳ ದಿನಚರಿ.

**

ಒಂದು ದಿನ ಗಿರೀಶ ಅವಳ ಇಷ್ಟದಂತೆ ಅವನ ಮನೆಯಲ್ಲಿದ್ದ ಅವಳ ಸಾಮಾನನ್ನು ತೆಗೆದುಕೊಂಡು ಹೋಗಲು ಒಪ್ಪಿಗೆ ನೀಡಿದ್ದಾನೆ ಎಂದು ಶ್ರೀಧರ ಮೂರ್ತಿಗಳು ತಿಳಿಸಿದರು. ಅದಕ್ಕೆ ಸರಿಯಾಗಿ ಅಕ್ಕನ ಕಷ್ಟವನ್ನು ಬರಿ ಫೋನಿನಲ್ಲಿ ಕೇಳಿ ಸಹಿಸಲಾಗದೆ ಸಂದೀಪ ರಜ ಹಾಕಿ ಬಂದಿದ್ದ. ಸರಿ ಸುಮನ್, ಸಂದೀಪ, ಅವರಪ್ಪ ಹಾಗೂ ಶ್ರೀಧರ ಮೂರ್ತಿಗಳು ಹೋಗುವುದು ಎಂದು ಇತ್ಯರ್ಥವಾಯಿತು. 

ಭಾನುವಾರ ಬೆಳಗ್ಗಿನ ಆರು ಗಂಟೆಗೆ ಹೊರಟರು. ಬೆಂಗಳೂರು ತಲುಪಿ ಹೋಟೆಲಿನಲ್ಲಿ ತಿಂಡಿ ತಿಂದು ಗಿರೀಶ ಮನೆಗೆ ಬಂದಿಳಿದರು. ಎಷ್ಟು ಪ್ರಯತ್ನಪಟ್ಟರು ಗೇಟಿನ ಮುಂದೆ ಕಾರು ನಿಂತಾಗ ಸುಮನಳಿಗೆ ಎದೆ ಡವಡವಗುಟ್ಟುವುದನ್ನು ನಿಲ್ಲಿಸಲಾಗಲಿಲ್ಲ, ಕಾಲು ಸಣ್ಣಗೆ ನಡಗುತ್ತಿತ್ತು. ಮನೆಯನ್ನು ನೋಡಿದರೇ ಎದೆಯಲ್ಲಿ ಏನೋ ನೋವು. ಇನ್ನು ಇವರುಗಳ ಮುಂದೆ ಅಧೈರ್ಯಗೊಳ್ಳುವುದು ಸರಿಯಲ್ಲ ಎಂದಿತು ಮನಸ್ಸು. ತಾನೇ ಮುಂದೆ ಹೊರಟಳು. ಸಂದೀಪ ಅವಳ ಪಕ್ಕ ಹೆಜ್ಜೆ ಹಾಕಿದ. ನನ್ನ ಅಕ್ಕನಿಗೆ ಇನ್ನು ನೋವು ಮಾಡಿದರೆ ಒಂದು ಕೈ ನೋಡಿ ಬಿಡುವೆ ಎನ್ನುವ ಮುಖಭಾವ ಅವನದು. ಅವರಪ್ಪ ಸಂಕಟದಿಂದ ಶ್ರೀಧರ ಮೂರ್ತಿಗಳ ಜೊತೆ ಅವರ ಹಿಂದೆ ನಡೆದರು. ಗೇಟು ತೆರೆದು ಅರೆಕ್ಷಣ ಟಾಮಿ ಮನೆಯ ಮುಂದೆ ಆಸೆಗಣ್ಣಿನಿಂದ ನೋಡಿದಳು. ಬಾಲ ಆಡಿಸುತ್ತ ಅವಳ ಹಿಂದೆ ಮುಂದೆ ಓಡಾಡುತ್ತಿದ್ದ ಟಾಮಿ ಅಲ್ಲಿಲ್ಲ. ಟಾಮಿ ಅವಳು ಮನೆ ಬಿಟ್ಟು ಹೋದ ಮೂರು ದಿನ ಅವಳಿಗಾಗಿ ಅತ್ತು ಅತ್ತು ಕೊನೆಗೆ ಒಮ್ಮೆ ಗೇಟ್ ತೆರದ್ದಿದ್ದಾಗ ಮನೆ ಬಿಟ್ಟು ಓಡಿ ಹೋಗಿತ್ತು. ಖಾಲಿ ಮನೆ ಅದರ ಬರುವಿಗಾಗಿ ಕಾದು ನಿಂತ್ತಿತ್ತು. ಗೇಟಿನ ಶಬ್ದ ಕೇಳಿ ಬಾಗಿಲು ತೆರೆದ ರಂಗಪ್ಪ ಸುಮನಳನ್ನು ನೋಡಿ ಗರಬಡಿದು ನಿಂತ. ಸುಮನ್ ಮೆಟ್ಟಲು ಹತ್ತಿ ತಲೆ ಎತ್ತಿ ಅವನ್ನನ್ನೊಮ್ಮೆ ನೋಡಿದಳು. ಅವಳ ನೋಟಕ್ಕೆ ಹೆದರಿ ಬಾಗಿಲು ಬಿಟ್ಟು ಒಳಗೆ ನಡೆದು ಬಿಟ್ಟ. ಒಳಗಿನಿಂದ ಗಿರೀಶನ ವಕೀಲರು ಎದ್ದು ಬಂದು ಎಲ್ಲರನ್ನು ಒಳಗೆ ಕರೆದರು. ಲಿವಿಂಗ್ ರೂಮಿನಲ್ಲಿ ಗಿರೀಶ ಭುಜಕ್ಕೆ ಜೋತು ಬಿದ್ದ ಅನುಪಮಾಳನ್ನು ಸಂದೀಪ ಕ್ಯಾಕರಿಸಿ ನೋಡಿದ. ಸುಮನ್ ಗಿರೀಶನ ಹಿಂದಿನ ಕಿಟಕಿಯಾಚೆ ನೋಡುತ್ತಿದ್ದಳು. ಅವಳ ಮುಖದಲ್ಲಿನ ಗಾಂಭೀರ್ಯ ಗಿರೀಶ ಗಮನಿಸಿದ. ನಿನ್ನ ಸಾಮಾನನ್ನು ತೆಗೆದುಕೊಂಡು ಹೋಗಲು ಬಿಟ್ಟಿರುವೆ ನೋಡು ನನ್ನ ಔದಾರ್ಯವನ್ನು ಎನ್ನುತ್ತಿತ್ತು ಅವನ ಮುಖಭಾವ. ಆ ದರ್ಪವನ್ನು ನೋಡಲು ಹೇಸಿಗೆಯಾಗಿ  ಅಶ್ವತನಾರಾಯಣರು ಹೊರ ನಡೆದರು. “ಹೋಗಮ್ಮ ಸುಮನ್ ನಿನ್ನ ಸಾಮಾನು ತೆಗೆದುಕೋ” ಶ್ರೀಧರ್ ಮೂರ್ತಿಗಳು ಹೇಳುತ್ತಿದ್ದಂತೆ ಸರಸರನೆ ಮೇಲೆ ಹತ್ತಿದಳು. ಸಂದೀಪ ಅವಳನ್ನು ಹಿಂಬಾಲಿಸಿದ.

ಪರ್ಸಿನಿಂದ ಚೀಟಿ ತೆಗೆದಳು. ಅದರಲ್ಲಿ ಅವಳಿಗೆ ತವರಿನಿಂದ ಬಂದ ಎಲ್ಲಾ ಸಾಮಾನುಗಳ ಪಟ್ಟಿ ಮಾಡಿದ್ದಳು. ಪ್ರೀತಿಯಿಂದ ಜೋಡಿಸಿದ ಜಾಗಗಳನ್ನು ಅವುಗಳ ಎದುರು ಗುರುತು ಮಾಡಿದ್ದಳು.  ಗಿರೀಶನ ವಕೀಲರು ಕೋಣೆಯ ಬಾಗಿಲಲ್ಲಿ ನಿಂತರು. ಅವಳು ತೋರಿಸುತ್ತಿದ್ದ ಹಾಗೆ ಸಂದೀಪ ಅಟ್ಟದ ಮೇಲಿಂದ ಅವಳ ಸೂಟಕೇಸುಗಳನ್ನು ಕೆಳಗಿಳಿಸಿದ. ವಕೀಲರಿಂದ ಬೀರುವಿನ ಬೀಗದ ಕೈಯನ್ನು ತೆಗೆದುಕೊಂಡು ಸರಸರನೆ ತನ್ನ ಒಡವೆಗಳನ್ನು ತೆಗೆದು ಹಾಸಿಗೆಯ ಮೇಲೆ ಜೋಡಿಸಿದಳು. ಬೆಳ್ಳಿ ಪಾತ್ರೆಗಳನ್ನು, ಸೀರೆಗಳನ್ನು, ಚುಡಿದಾರುಗಳನ್ನು ಎಲ್ಲಾ ತೆಗೆದಿಟ್ಟಳು. ಅವಳ ವೈಯಕ್ತಿಕ ವಸ್ತುಗಳನ್ನು ಒಂದೂ ಬಿಡದೇ ತೆಗೆದಿಟ್ಟಳು ಹಾಸಿಗೆಯ ಮೇಲೆ. ಗಿರೀಶ ಕೊಟ್ಟ ಒಂದು ಪಿನ್ನನ್ನು ತೆಗೆದುಕೊಳ್ಳಲಿಲ್ಲ. ವಕೀಲರಿಗೆ ಒಂದೊಂದು ಸಾಮಾನ್ನನ್ನು ತೆಗೆಯುವಾಗ ಅವಳ ಮುಖದಲ್ಲಿನ ನೋವು ಹಿಂಸೆ ನೋಡಲಾಗದೆ ಕೆಳಗೆ ಹೋಗಿ ಪತ್ರಿಕೆಯನ್ನು ಹಿಡಿದು ಕುಳಿತರು. ಕೆಳಗೆ ಯಾರೂ ಮಾತಾಡುತ್ತಿರಲಿಲ್ಲ. ಗಿರೀಶ ಹಾಗೂ ಅನುಪಮಾ ಟಿವಿ ನೋಡುತ್ತಿದ್ದರು. ಶ್ರೀಧರ್ ಮೂರ್ತಿ ಅಶ್ವತನಾರಾಯಣರ ಪಕ್ಕ ಕುಳಿತ್ತಿದ್ದರು ನೆಲ ನೋಡುತ್ತ. ಅನುಪಮಾ ಸುಮನಳನ್ನು ನೋಡಿ ದಂಗಾಗಿದ್ದಳು. ಅವಳ ಸರಳ ಸೌಂದರ್ಯಕ್ಕೆ ಬೆರಗಾಗಿದ್ದಳು. ಅದರ ಮೇಲೆ ಬಂದವರು ಹಾರಾಡುವರು, ರಾದ್ಧಾಂತ ಮಾಡುವರು ಎಂದುಕೊಂಡಿದ್ದಳು. ಇಲ್ಲಿ ನೋಡಿದರೆ ಸ್ಮಶಾನ ಮೌನ. ಸುಮನಳ ಘನತೆ ಅವರಿಬ್ಬರನ್ನು ತಿರಸ್ಕರಿಸಿದಂತೆ ಅನಿಸಿತು. ಸುಮನ್ ಅವಳನ್ನು ಕಣ್ಣೆತ್ತಿ ಕೂಡ ನೋಡಿರಲಿಲ್ಲ. ನಿನ್ನನ್ನು ನೋಡುವ ಆ ಒಂದು ನೋಟ ಕೂಡ ವ್ಯರ್ಥ ಎಂದಿತ್ತು ಅವಳ ವರ್ತನೆ.

ಸುಮನ್ ಸರಸರನೆ ಅಡುಗೆಮನೆಗೆ ನಡೆದಳು. ರಂಗಪ್ಪ ಒಂದೇ ನೆಗೆತಕ್ಕೆ ಹಿತ್ತಲನ್ನು ಸೇರಿದ. ಸಂದೀಪ ಅಟ್ಟದಿಂದ ಅವಳ ಪಾತ್ರೆಗಳ ರೊಟ್ಟಿನ ಡಬ್ಬವನ್ನು ಕೆಳಗಿಳಿಸಿದ. ಸುಮನ್ ದೇವರ ಗೂಡಿನ ಮುಂದೆ ನಿಂತಳು. ಲಕ್ಷ್ಮಿ ವೆಂಕಟೇಶ್ವರನ ವಿಗ್ರಹ ತೆಗೆಯಲು ಹೋದ ಸುಮನ್ ಕೈಗಳು ನಡಗುತ್ತಿದವು. ಅಲ್ಲಿಯವರೆಗೂ ಧೈರ್ಯವಾಗಿದ್ದ ಸುಮನಳ ಕಣ್ಣುಗಳಿಂದ ದಪ್ಪ ದಪ್ಪ ಹನಿಗಳು. ಅಳತೊಡಗಿದಳು. ನನ್ನ ಮನೆ, ನನ್ನ ಗಂಡ, ನನ್ನ ಸಂಸಾರ ಅಂತ ಬಂದ್ದಿದೆ  ಮನಸ್ಸು ಕೂಗಿ ಕೂಗಿ ದೇವರಿಗೆ ಹೇಳುತ್ತಿತ್ತು. ಅವಳ ಹಿಂಸೆಯನ್ನು ನೋಡಲಾಗದೆ ಸಂದೀಪ ಅವಳಿಗೆ ಬೆನ್ನು ಮಾಡಿ ಬಾಗಿಲಿಗೆ ಹೋಗಿ ನಿಂತ. ಬಿಕ್ಕುಗಳನ್ನು ನುಂಗಿ ಕಣ್ಣು ಒರೆಸಿಕೊಂಡು ದೇವರನ್ನು ಸಂಪುಟಕ್ಕೆ ಹಾಕಿ ಮೇಲೆ ನಡೆದಳು. ಸಂದೀಪ ಡಬ್ಬಗಳನ್ನು ತಂದು ಲಿವಿಂಗ್ ರೂಮಿನಲ್ಲಿಟ್ಟು ಅವಳ ಹಿಂದೆ ಮೇಲೆ ಹೋದ. “ಸಂದೀಪ ವಕೀಲರಿಗೆ ನೋಡಿ ಬಿಡಲು ಹೇಳು. ನಾನಿನ್ನು ಪ್ಯಾಕ್ ಮಾಡ್ತೀನಿ” ಎಂದಳು.

ವಕೀಲರು ಬಂದು ಒಮ್ಮೆ ಕಣ್ಣಾಡಿಸಿದರು ಈ ಹುಡುಗಿಗೆ ಆದ ಅನ್ಯಾಯದ ಮುಂದೆ ಗಿರೀಶನ ಮನೆ ದೋಚಿದರೂ ಏನೂ ಅಪರಾಧ ಇಲ್ಲ. ಯಾವಾಗ ಸುಮನ್ ನನಗೆ ಪರಿಹಾರ ಧನ ಬೇಡ ಆದರೆ ನನ್ನ ಸ್ತ್ರೀ ಧನ ಬೇಕು ಎಂದು ಹೇಳಿ ಕಳುಹಿಸಿದ್ದಳೋ ಅಂದೇ ಅವರ ಮನಸ್ಸನ್ನು ಗೆದಿದ್ದಳು. ಎಲ್ಲಾ ಸರಿ ಇದೆ ಎಂದು ತಲೆದೂಗಿದರು. ಸುಮನ್ ಎಲ್ಲವನ್ನು ಪ್ಯಾಕ್ ಮಾಡಿ ಒಂದು ಸೂಟಕೇಸ್ ಎಳೆದುಕೊಂಡು ಮೆಟ್ಟಲು ಇಳಿದು ಲಿವಿಂಗ್ ರೂಮ ದಾಟಿ ಹೊರ ನಡೆದು ಗೇಟಿನ ಮುಂದೆ ನಿಂತಳು ಮನೆಗೆ ಬೆನ್ನು ಮಾಡಿ. ಇಲ್ಲಿಗೆ ಮುಗಿಯಿತು ನಿನ್ನ ಋಣ ಎನ್ನುವಂತೆ. ಸಂದೀಪ  ಸಾಮಾನನ್ನು ತಂದು ಚಾಲಕನ ಸಹಾಯದಿಂದ ಕಾರಿಗೆ ತುಂಬಿದ. ಶ್ರೀಧರ ಮೂರ್ತಿ ಗಿರೀಶನ ವಕೀಲರಿಗೆ ಹೇಳಿ ಅಶ್ವತನಾರಾಯಣರನ್ನು ಕರೆದುಕೊಂಡು ಕಾರು ಹತ್ತಿದರು. ಕಾರು ಹೊರಟಿತು. ಒಮ್ಮೆಯೂ ಮಾತಾಡಿಸದೇ, ಮಾತಾಡುವುದು ಇರಲಿ ತನ್ನನ್ನು ನೋಡದೆಯೇ ಹೋದ ಸುಮನ್‍ಗೆ ಎಷ್ಟು ಕೊಬ್ಬು ಎಂದುಕೊಳ್ಳುತ್ತ ಟಿವಿ ಮುಂದೆ ಕುಳಿತ್ತಿದ್ದ ಗಿರೀಶ.

ಕಾರಿನಿಂದ ಡಬ್ಬಗಳನ್ನು ಇಳಿಸುತ್ತಿರುವುದನ್ನು ನೋಡುವುದು ರಾಜಲಕ್ಷ್ಮಿಯವರ ಕೈಯಲ್ಲಿ ಆಗಲಿಲ್ಲ. ಎಷ್ಟು ಅಕ್ಕರೆಯಿಂದ ಒಂದೊಂದು ಸಾಮಾನನ್ನು ಜೋಡಿಸಿದ್ದರು. ಅವುಗಳಲ್ಲಿ ಅವರ ಪ್ರೀತಿ ವಾತ್ಸಲ್ಯವೇ ತುಂಬಿ ತುಳುಕುತ್ತಿತ್ತು. ಸುಮನ್ ಸಂಪುಟ ಹಿಡಿದು ಹೊಸ್ತಿಲು ದಾಟಿ ಒಳಗೆ ಬಂದಾಗ ತಡೆಯಲಾಗದೆ ಬಿಕ್ಕಲಾರಂಭಿಸಿದರು. ಸುಮನ್ ಅವರನ್ನು ಬಳಸಿ ಒಳಗೆ ಕರೆದೊಯ್ದಳು. ಅಶ್ವತನಾರಾಯಣರು ಕಣ್ಣು ಒರೆಸುತ್ತ ಒಳಗೆ ಬಂದು ಕುರ್ಚಿಯ ಮೇಲೆ ಕುಸಿದರು. ಸಂದೀಪ ನೋವನ್ನು ನುಂಗುತ್ತ ಡಬ್ಬಗಳನ್ನು ತಂದು ರೂಮಿನಲ್ಲಿಟ್ಟ. ಸುಮನ್ ಸಂಪುಟದಿಂದ ವಿಗ್ರಹವನ್ನು ತೆಗೆದು ದೇವರ ಗೂಡಿನಲ್ಲಿಟ್ಟಳು.

**

ರಾತ್ರಿ ಹನ್ನೆರಡರ ಸಮಯ. ಮಳೆ ರಭಸವಾಗಿ ಬೀಳುತ್ತಿತ್ತು. ಗುಡುಗು ಮಿಂಚು ಗಾಳಿ ಎಲ್ಲಾ. ತೋಟದಲ್ಲಿ ಗೊನೆ ಹೊತ್ತ ಬಾಳೆ ಗಿಡ ಆ ಗಾಳಿ, ಮಳೆಯ ಹೊಡೆತದಿಂದ ರಕ್ಷಸಿಕೊಳ್ಳಲು ಒಮ್ಮೆ ಬಲಕ್ಕೆ ಇನ್ನೊಮ್ಮೆ ಎಡಕ್ಕೆ ಬಗ್ಗುತ್ತಿತ್ತು. ಅದರ ರಭಸ ಕಮ್ಮಿಯಾದಾಗ ಗಿಡ ಚೇತರಿಸಿಕೊಂಡು ಮತ್ತೆ ಎದ್ದು ನಿಲ್ಲುತ್ತಿತ್ತು. ಮತ್ತೆ ಸುಯ್ಯಿ ಎಂದು ಗಾಳಿ ಕೋಪದಲ್ಲಿ ಅದನ್ನು ಸುತ್ತುವರೆದಾಗ ತನ್ನ ಅಗಲವಾದ ಎಲೆಗಳನ್ನು ಹರಡಿ ನೆಟ್ಟಗೆ ನಿಲ್ಲುವ ಪ್ರಯತ್ನ ಮಾಡುತ್ತಿತ್ತು. ಗಾಳಿ ತನ್ನ ಮೊಂಡತನವನ್ನು ಬಿಡದೆ ಆ ಎಲೆಗಳನ್ನು ಹೇಗೇಗೋ ತಿರುಚಿ ಗಿಡವನ್ನು ಬಗ್ಗಿಸಿ ನಾನು ಗೆದ್ದೆ ಎನ್ನುತ್ತ ಅಟ್ಟಹಾಸದಿಂದ ತಾಂಡವ ಆಡುತ್ತಿತ್ತು. ಕಿಟಕಿಯಿಂದ ಪ್ರಕೃತಿಯ ಆ ಲೀಲೆಯನ್ನು ನೋಡುತ್ತ ಕುಳಿತ ಸುಮನ್ ಮುಖದಲ್ಲಿ ಬಾಳೆ ಗಿಡದ ನೋವು, ಅಸಾಹಯಕತೆ ವೇದನೆ ಎಲ್ಲಾ ಬಂದು ಹೋಗುತ್ತಿದ್ದವು. ಮಗಳು ಮಲಗಿಲ್ಲ. ಅವಳ ಕೋಣೆಯ ದೀಪವನ್ನೆ ನೋಡುತ್ತ ಕುಳಿತ್ತಿದ್ದರು ರಾಜಲಕ್ಷ್ಮಿ. ಹೆಂಡತಿಯ ಪಕ್ಕ ಅಶ್ವತನಾರಾಯಣ.

ಸಂದೀಪ ತನ್ನ ಕೋಣೆಯಿಂದ ಇಪ್ಪತ್ತು ಸಲಿ ಕೆಳಗೆ ಬಂದ್ದಿದ್ದ. ಅಕ್ಕನನ್ನು ಮಾತನಾಡಿಸಲು. ಏನು ಹೇಳುವುದು? ಪ್ರತಿಸಲಿ ಬಾಯಿ ಕಟ್ಟಿ ಮೇಲೆ ಹೋಗುತ್ತಿದ್ದ. ಒಂದು ವರ್ಷದಿಂದ ಆ ಮೂರು ಜೀವಗಳು ಹೀಗೇ ಆ ಮನೆಯಲ್ಲಿ ನೋವು ನುಂಗುತ್ತ ಜೀವಿಸುತ್ತಿದ್ದಾರೆ ಎಂಬ ಅರಿವು ಅವನನ್ನು ಅಸ್ಥಿರಗೊಳಿಸಿತ್ತು. ದೂರದಲ್ಲಿ ಕುಳಿತು ಫೋನಿನ ಮೇಲೆ ಅವರ ಮಾತುಗಳನ್ನು ಕೇಳಿದ್ದ ಅವನಿಗೆ ಈ ಅನುಭವ ಹೊಸದು. ಇದು ವಾಸ್ತವ. ಇದರ ತೀವ್ರತೆ ಅವನನ್ನು ಸುಡುತ್ತಿತ್ತು. ಒಮ್ಮೆ ಹೋಗಿ ಆ ಗಿರೀಶನನ್ನು ಸಿಗಿದು ಬಿಡುವಷ್ಟು ಕೋಪ. ಆದರೆ ಅದರಿಂದ ಏನೂ ಪ್ರಯೋಜನವಿಲ್ಲ ಎಂದಿತು ಮನಸು. ರಜೆ ಮುಗಿಸಿ ಹೋಗುವಾಗ ಅವರನ್ನು ಇಂತಹ ನೋವಿನಲ್ಲಿ ಬಿಟ್ಟು ಹೊರಟ್ಟಿದ್ದೇನೆ ಎಂಬ ತಪ್ಪಿತಸ್ಥ  ಭಾವನೆ.

**

ಪರೀಕ್ಷೆಗೆ ಇನ್ನು ಒಂದೇ ತಿಂಗಳು. ಬಿ.ಇ ಪಾಠಗಳು ಮುಗಿದ್ದಿದ್ದವು. ಈಗಲೂ ಸುಮನ್ ಬೆಳಗ್ಗಿನ ಎರಡು ಗಂಟೆಗೆ ಏಳುವಳು ತನ್ನ ಪರೀಕ್ಷೆಗೆ ಓದಲು. ಬಹಳ ನಿಷ್ಠೆಯಿಂದ ಓದುತ್ತಿದ್ದಳು. ಹೊಸ ವಿಷಯಗಳಾದರೂ ಏಳು ವರ್ಷದಿಂದ ಪಾಠ ಮಾಡಿ ಎಲ್ಲದರ ಮೂಲ ತತ್ವವನ್ನು ಚಿನ್ನಾಗಿ ಅರ್ಥ ಮಾಡಿಕೊಂಡಿದ್ದರಿಂದ ಎಲ್ಲಾ ಬಹಳ ಬೇಗ ಹಾಗೂ ಚೆನ್ನಾಗಿ ಅರ್ಥವಾಗುತ್ತಿತ್ತು. ಓದಿನಲ್ಲಿ ಮಗ್ನಾಳಾದ ಅವಳಿಗೆ ಇನ್ಯಾವುದರ ಬಗ್ಗೆ ಗಮನವಿರುತ್ತಿರಲಿಲ್ಲ. ಆದರೂ ಕೆಲವೊಮ್ಮೆ ವಿಚಿತ್ರ ಕನಸು. ಕನಸಿನಲ್ಲಿ ಅವಳೇ ಬಾಳೆ ಗಿಡವಾಗಿ ಗಾಳಿಯ ರಭಸಕ್ಕೆ ತೂಗಾಡುತ್ತಿದ್ದಳು. ಚಾಚಿದ ಅವಳ ಕೈಗಳು ಆಸರೆಗಾಗಿ ಹುಡುಕುತ್ತಿದ್ದವು. ಕೊನೆಗೆ ಆ ಬಾಳೆ ಗಿಡದಂತೆ ಅವಳೂ ನೆಲ ಕಚ್ಚುತ್ತಿದ್ದಳು. ಕನಸಿನಿಂದ ಅಳುತ್ತ ಎದ್ದು ಪುಸ್ತಕ ಹಿಡಿದು ಕೂರುತ್ತಿದ್ದಳು.

ಹದಿನೈದು ದಿನಗಳಲ್ಲಿ ಪರೀಕ್ಷೆ ಮುಗಿದ್ದಿದ್ದವು. ಬಹಳ ವರ್ಷಗಳ ನಂತರ ಪರೀಕ್ಷೆ ಬರೆಯುತ್ತಿದ್ದರಿಂದ ಹೆದರಿಕೆ ತುಸು ಜಾಸ್ತಿಯೇ. ಆದರೂ ಒಂದಕ್ಕಿಂತ ಒಂದು ಚೆನ್ನಾಗಿ ಮಾಡಿದ್ದಳು. ಅವಳ ಉತ್ತರ ಪತ್ರಿಕೆಯ ಮೇಲೆ ಅವಳಿಗೆ ಹೆಮ್ಮೆ.

**

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: surahonne.com/?p=38521

(ಮುಂದುವರಿಯುವುದು)

-ಸುಚೇತಾ ಗೌತಮ್.‌

6 Responses

  1. ಕಾದಂಬರಿಯ ನಾಯಕಿ..ತನ್ನ ಬಾಳು ಮೂರಾಬಟ್ಟೆಯಾದುದಕ್ಕೆ ಮನದಲ್ಲಿ.. ಬೆಟ್ಟದಷ್ಟು ನೋವಿದ್ದರೂ…ಕೈ ಹಿಡಿದ ಗಂಡನು ನೀಡುವ ಹಣವನ್ನು ದಿಕ್ಕರಿಸಿದರೂ..ಹೆತ್ತವರು ಕೊಟ್ಟಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಾಡಿದ ನಿರ್ಧಾರ ಅದರಂತೆ ..ಕಾರ್ಯಗತ ಮಾಡಿದ್ದು…ಭಲೆ…ಹುಡುಗಿ ಎನಿಸಿತು..ವಾಸ್ತವಿಕ ಬದುಕಿನ ಅನಾವರಣ ಗೊಳ್ಳುತ್ತಿರುವ ಕಾದಂಬರಿ ಓದಿಸಿಕೊಂಡು ಹೋಗುತ್ತಿದ್ದೆ..ಗೆಳತಿ

  2. ನಯನ ಬಜಕೂಡ್ಲು says:

    ಹಂತ ಹಂತವಾಗಿ ಹೊಸ ದಾರಿಯತ್ತ ಹೊರಳುತ್ತಿರುವ ನಾಯಕಿ. ಸೊಗಸಾಗಿ ಸಾಗುತ್ತಿದೆ ಕಥೆ

  3. ಶಂಕರಿ ಶರ್ಮ says:

    ವಿವಾಹವಾಗಿ ಸೋತರೂ ಅದನ್ನೇ ಗೆಲುವಿನ ಮೆಟ್ಟಲಾಗಿ ಪರಿವರ್ತಿಸಿದ ಸುಮನ್ ಸ್ವಾಭಿಮಾನ ಮೆಚ್ಚಿಗೆಯಾಯಿತು. ಸೊಗಸಾದ ಕಥಾಹಂದರ..ಧನ್ಯವಾದಗಳು…ಸುಚೇತಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: