ಕಾದಂಬರಿ : ‘ಸುಮನ್’ – ಅಧ್ಯಾಯ 13

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)
ಪದವಿಗಳೇ ದೊಡ್ಡಪ್ಪ

ಕೆಲಸಕ್ಕೆ ಸೇರಿ ಒಂದು ತಿಂಗಳು ಆಗಿತ್ತು. ನಾಲ್ಕನೆಯ ಸೆಮಿಸ್ಟರ್‌ಗೆ  ಗಣಿತ ಪ್ರಧಾನವಾಗಿದ್ದ ವಿಷಯ ಕೊಟ್ಟಿದ್ದರು. ಅದೂ ಎರಡು ತರಗತಿಗಳಿಗೆ. ಸುಮನ್ ಅದನ್ನು ಮೊದಲನೆಯ ಬಾರಿ ಪಾಠ ಮಾಡುತ್ತಿದ್ದಳು. ಒಂದು ಗಂಟೆಯ ಪಾಠಕ್ಕೆ ಮೂರು ಗಂಟೆಗಳಷ್ಟು ತಯಾರಿ ಮಾಡಬೇಕಿತ್ತು. ಹಲವಾರು ಪುಸ್ತಕಗಳನ್ನು ಓದಿ ಕ್ಲಿಷ್ಟವಾದ ವಿಚಾರಗಳನ್ನು ಎಲ್ಲರಿಗೂ ಅರ್ಥವಾಗುವ ಹಾಗೆ ತರಾವರಿ ಉದಾಹರಣೆಗಳನ್ನು ಕೊಟ್ಟು ಅರ್ಥೈಸುವ ಸುಮನ್ ಮ್ಯಾಮ್ ವಿಧ್ಯಾರ್ಥಿಗಳ ಅಚ್ಚುಮೆಚ್ಚು. ಪಾಠದ ಬಗ್ಗೆ ನೂರಾರು ಸಂಶಯಗಳನ್ನು ಸಿಡುಕದೇ ತಾಳ್ಮೆಯಿಂದ ವಿವರಿಸುವ ಸುಮನ್ ಮ್ಯಾಮ್ ಕ್ಲಾಸಿನಲ್ಲಿ ಅಥವಾ ಪ್ರಯೋಗಾಲಯದಲ್ಲಿ ಕಪಿ ಚೇಷ್ಟೆಯನ್ನು ಸಹಿಸಿವುದಿಲ್ಲ. ಚೆನ್ನಾಗಿ ಬಯ್ಯುತ್ತಾರೆ. ಆದ್ದರಿಂದ ಸ್ಟ್ರಿಕ್. ಅದರಿಂದಾಗಿಯೊ ಗೌರವ ಹಾಗೂ ಆದರ.  ಸೆಮಿಸ್ಟರ್ ಶುರುವಾಗಿ ಒಂದು ತಿಂಗಳ ನಂತರ ಅವಳ ಬಗ್ಗೆ ವಿದ್ಯಾರ್ಥಿಗಳು ಕೊಟ್ಟ ಪ್ರತಿಕ್ರಿಯೆ ನೋಡಿ ಅವಳ ಸಹೋದ್ಯೋಗಿಗಳಿಗೆ ಹೊಟ್ಟೆ ಉರಿದ್ದಿದ್ದು ನಿಜ.  ವಿದ್ಯಾರ್ಥಿಗಳಿಂದ ಅವಳಿಗೆ ಏನೂ ತೊಂದರೆ ಇರಲಿಲ್ಲ. ಆದರೆ ಕಾಲೇಜಿನ ವಾತಾವರಣವೇ ಒಂದು ಆಘಾತ ಅವಳಿಗೆ.

ಬೆಳಗ್ಗಿನ ಎರಡರ ಸಮಯ. ಉತ್ತರ ಪತ್ರಿಕೆಗಳ ಪುಸ್ತಕಗಳ ಮುಂದೆ ಕುಳಿತ್ತಿದ್ದಳು ಸುಮನ್. ಅದರ ಮೌಲ್ಯಮಾಪನ ಮಾಡುವ ಬದಲು ಬುಸುಗುಟ್ಟುತ್ತಿದ್ದಳು. ಹಿಂದಿನ ದಿನದ ಘಟನೆಯನ್ನು ಜ್ಞಾಪಿಸಿಕೊಂಡಳು. ವಾರದ ಹಿಂದೆ ಪರೀಕ್ಷೆ ಒಂದರ ಮೇಲ್ವಿಚಾರಣೆ ಮಾಡುವಾಗ ಒಂದು ಹುಡುಗ ನಕಲು ಮಾಡುವಾಗ ಇವಳ ಕೈಗೆ ಸಿಕ್ಕಿ ಬಿದ್ದಿದ್ದ. ಅವನ ಕೈಯಲ್ಲಿದ್ದ ಚೀಟಿ ತೆಗೆದುಕೊಂಡು ಅವನ ಪುಸ್ತಕದ ಮೇಲೆ “ಕಾಪೀಡ್” ಎಂದು ಬರೆದು ಅವನನ್ನು ಹೊರಗೆ ಹಾಕಿದ್ದಳು. ಅವನು ಹೊರಗೆ ಹೋದ ಮೇಲೆ ಆ ಚೀಟಿಯನ್ನು ಕೂಲಂಕಷವಾಗಿ ನೋಡಿದಾಗ ಏನೋ ಸಂಶಯ ಬಂದು ಪ್ರಶ್ನೆ ಪತ್ರಿಕೆಯನ್ನು ನೋಡಿ ಬೆಚ್ಚಿ ಬಿದ್ದಳು. ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳ ಸರಿಯಾದ ಸಂಖ್ಯೆ ಜೊತೆ ಉತ್ತರಗಳಿದ್ದವು ಆ ಚೀಟಿಯಲ್ಲಿ. ದೇವರೇ ಪ್ರಶ್ನೆ ಪತ್ರಿಕೆ ರಟ್ಟಾಗಿದೆ ಎಂದು ಗಾಬರಿಯಿಂದ ಪರೀಕ್ಷೆಯ ನಂತರ ನೇರವಾಗಿ ವಿಭಾಗದ ಮುಖ್ಯಸ್ಥರ ಮುಂದೆ ನಡೆದುದ್ದನ್ನು ವಿವರಿಸಿ ಎರಡನ್ನು ತೋರಿಸಿದಳು. ಆ ಹುಡುಗನನ್ನು ಕರೆದು ವಿಚಾರಿಸಿದಾಗ ಅವನು ಹೇಳಿದ ಮಾತು ಕೇಳಿ ಅವಳಿಗೆ ಇನ್ನೂ ದಿಗ್ಭ್ರಮೆಯಾಗಿತ್ತು. ತರಗತಿಯಲ್ಲಿ ಪ್ರಕಾಶ ಮೇಷ್ಟ್ರು ಇಪ್ಪತ್ತು ಬಹು ಮುಖ್ಯ ಪ್ರಶ್ನೆಗಳು ಕೊಟ್ಟಿದ್ದರು. ಅವಕ್ಕೆ ತಯಾರಿಸಿದ ಉತ್ತರಗಳ ಚೀಟಿ ಅದು ಎಂದು ಹೇಳಿದ್ದ ಆ ಹುಡುಗ. ಪ್ರಯೋಗಾಲಯಕ್ಕೆ ಇದು ತರಬೇಕು, ಅಡ್ಮಿನಿಸ್ಟ್ರೇಟರ್ ಕರಿತಾ ಇದಾರೆ ಅಂತ ನೆವ ಮಾಡಿ ಪಾಠ ಇಲ್ಲದ ಸಮಯ ತಮ್ಮ ಸ್ವಂತ ಕೆಲಸಕ್ಕೆ ಗಾಡಿ ಹತ್ತಿ ಓಡಾಡುವ ಪ್ರಕಾಶ ಮೇಷ್ಟ್ರು ಪಾಠ ಮಾಡಿಲ್ಲ ಅಂತ ವಿದ್ಯಾರ್ಥಿಗಳು ದೂರು ಸಲ್ಲಿಸದ ಹಾಗೆ, ಹೀಗೆ ಅಂಕ ತುಂಬುವ ಯೋಚನೆ ಅವರದು. ಇದು  ಮುಖ್ಯಸ್ಥರಿಗೆ ತಿಳಿಯದ ವಿಷಯವೇನೆಲ್ಲ ಆದರೆ ಪ್ರಕಾಶ ಅವರ ಗೆಳೆಯ ಈಗ ಬೇರೆಯವರ ಮುಂದೆ ಸಿಕ್ಕಿ ಹಾಕಿಕೊಂಡಿದ್ದ. ಏನು ಮಾಡುವುದು ತೋಚದೆ ಆ ತರಗತಿಯ ಜಾಣ ಹುಡುಗರನ್ನು ಕರಿಸಿ ತನಿಖೆ ಮಾಡುವ  ನಾಟಕ ಮಾಡಿದರು. ಆದರೆ ಆ ಹುಡುಗ ಹೇಳಿದ್ದು ನಿಜ ಎಂದು ಸಾಬೀತಾಗಿತ್ತು. ವಿಧಿಯಿಲ್ಲದೆ ಪ್ರಕಾಶ್‌ಗೆ ಇನ್ನೊಮ್ಮೆ ಹೊಸ ಪ್ರಶ್ನೆ ಪತ್ರಿಕೆ ತಯಾರಿಸಿ ಪರೀಕ್ಷೆ ಪುನಃ ನಡಿಸಲು ಹೇಳಿದರು. ಹೀಗೆ ಸಿಕ್ಕಿ ಬಿದ್ದ ಪ್ರಕಾಶ ಸರ್‌ಗೆ ಎಲ್ಲಿಲ್ಲದ ಸಿಟ್ಟು ಸುಮನ್ ಮೇಲೆ. ಹೇಗಾದರೂ ಮಾಡಿ ಅವಮಾನಿಸ ಬೇಕೆಂದು ಹಂಚು ಹಾಕುತ್ತಿದ್ದ. ಕೊನೆಯ ಸೆಮಿಸ್ಟರ್ ಪ್ರಾಜೆಕ್ಟ್ ಹಾಗೂ ಸೆಮಿನಾರ್‌ಗಳ ಮೇಲ್ವಿಚಾರಣೆ ಯಾರ ತಲೆಗೆ ಕಟ್ಟುವುದು ಎಂಬ ಚರ್ಚೆ ನಡೆದಾಗ “ಆ ಹೊಸ ಲೆಕ್ಚರರ್ ಸುಮನ್‍ಗೆ ಹಾಕಿ. ಹೇಗೂ ಗಂಡ, ಮಕ್ಕಳು ಅಂತ ಮನೆಲಿ ಕೆಲ್ಸಾ ಇಲ್ಲ. ಗಂಡ ಬಿಟ್ಟು ಬಂದವಳು.” ಅವನ ಬಾಯಿಂದ ಅದು ಬರುವುದಕ್ಕು ಪಾಠ ಮುಗಿಸಿ ಸ್ಟಾಫ್ ರೂಮು ಒಳಗೆ ಸುಮನ್ ಬರುವುದಕ್ಕು ಸರಿ ಹೋಯಿತು. ಅವನು ಹೇಳಿದ್ದಲ್ಲ ಕೇಳಿಸಿತ್ತು ಅವಳಿಗೆ. ಅವನ ಕೊನೆಯ ವಾಕ್ಯ ಅವಳ ಹಸಿ ಗಾಯಕ್ಕೆ ಬರೆ ಎಳೆಯಿತು. ಏನೋ ಹೇಳಲು ಹೊರಟ ಸುಮನ್ ಉಕ್ಕುವ ಅಳುವನ್ನು ತಡೆಯಲು ಕೋಣೆಯಾಚೆ ನಡೆದು ಬಿಟ್ಟಳು.

ತಾನು ಮಾಡುತ್ತಿದ್ದ ಅನ್ಯಾಯ ಬಹಿರಂಗವಾಗಿ ಅದರ ವಿಚಾರ ಪ್ರಾಂಶುಪಾಲರವರೆಗೂ ಹೋಗಿ ತನಗಾದ ಅವಮಾನವನ್ನು ಸುಮನ್ ಚಾರಿತ್ರ್ಯದ ಕಡೆಗೆ ಬೆಟ್ಟು ಮಾಡಿ ಅವಳ ಅವಹೇಳನ ಮಾಡಿದ್ದ ಪ್ರಕಾಶ. ಸುಮನ್ ಇದು ಸಮಾಜ ಅದರಲ್ಲೂ ಇದು ಇಂತಹ ಗಂಡಸರು ಉಪಯೋಗಿಸುವ ಹಳೇ ತಂತ್ರ. ಅವಳ ಮನಸ್ಸು ಇದನ್ನು ನೆನ್ನೆಯಿಂದ ಹೇಳುತ್ತಿತ್ತು. ಹೌದು ಗಂಡ ಬಿಟ್ಟು ಬಂದವಳು. ಆದರೆ ಯಾಕೆ? ಹಾಗೆ ಮಾಡಲು ಏನು ಕಾರಣ? ಅದು ಯಾರಿಗೂ ಬೇಡ. ಅಂತಹ ಗಂಡನನ್ನು ಬಿಡಬಾರದೆ? ಬಿಟ್ಟಿದ್ದೆ ತಪ್ಪಾ? ಅವನು ಮಾಡಿದ್ದು? ಸುಮನ್ ಯೋಚಿಸಿ ಯೋಚಿಸಿ ಕಂಗಾಲಾದಳು. ಅಲ್ಲಾ ಸುಮನ್ ಅವನ ದ್ರೋಹವನ್ನು ಯಾರ ಯಾರಿಗೆ ಹೇಳ್ತಿ? ಎಲ್ಲರ ಬಾಯಿ ಮುಚ್ಚಿಸಲು ಆಗದು. ಅದಿರಿಲಿ ಎಲ್ಲರಿಗೂ ಸಬೂಬು ನೀಡುವ ಯೋಚನೆ ನಿನಗೆ ಏಕೆ? ಅವರಿವರು ನೀನು ಮಾಡಿದ್ದು ಸರಿ ಎಂಬ ಸಮರ್ಥನೆ ನಿನಗೇಕೆಬೇಕು? ನೀನು ಮಾಡಿದ್ದು ನಿನಗೆ ಸರಿ ಅನಿಸಿದರೆ ಸಾಲದೆ? ನಿನಗೆ ಅವರ ಮಾತು ಕಟ್ಟಿಕೊಂಡು ಏನಾಗಬೇಕು? ಎಲ್ಲರು ತಮ್ಮ ಅರಿವಿಗೆ ತಿಳಿದಷ್ಟೇ ನಂಬುತ್ತಾರೆ. ಬಿಟ್ಟು ಬಿಡು ಇದರ ಯೋಚನೆ. ಒಳ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ಅವಳಿಗೆ ಧೈರ್ಯ ಹೇಳಿ ಸಮಾಧಾನಪಡಿಸುತ್ತಿತ್ತು.

ಆ ಕಾಲೇಜಿನ ವಾತಾವರಣದ ಬಗ್ಗೆ ಮೆಲಕು ಹಾಕತೊಡಗಿದಳು. ಎಲ್ಲಾ ಕಾಲೇಜುಗಳಲ್ಲಿನ ಅಧ್ಯಾಪಕರ ಬಿಕ್ಕಟ್ಟು ಇಲ್ಲೂ ಇತ್ತು. ಅದರಲ್ಲೂ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಂತೂ ಬಹುಪಾಲು ಜನ ಐಟಿ ಉದ್ಯಮ ಸೇರುವ ಆಸೆಯಲ್ಲೆ ಇರುವರು. ಅದಕ್ಕೆ ತಕ್ಕ ಉದಾಹರಣೆ ಅವಳ ವಿಭಾಗದ ಗೀತಾಂಜಲಿ ಹಾಗೂ ಸ್ವರೂಪ. ಅವರಿಬ್ಬರು ಇಂಜಿನಿಯರಿಂಗ್ ಮುಗಿಸಿ ಇನ್ನೂ ಆರು ತಿಂಗಳು ಆಗಿರಲಿಲ್ಲ. ಶನಿವಾರ ಭಾನುವಾರ ಬರಿ ವಾಕ್ ಇನ್ ಇಂಟರ್ವ್ಯೂಗಳಿಗೆ ಅಲಿಯುವರು. ಅದಕ್ಕೆ ವಾರವಿಡಿ ಕಂಪ್ಯೂಟರ್ ಮುಂದೆ ಕುಳಿತು ಅಂರ್ತಜಾಲದಲ್ಲಿ ಕಂಪನಿಗಳ ಹಾಗೂ ಅವುಗಳ ಪರೀಕ್ಷೆಗಳ ಬಗ್ಗೆ ಮಾಹಿತಿ ಹುಡುಕುವರು. ಪಾಠಕ್ಕೆ ಇನ್ನು ಅರ್ಧ ಗಂಟೆ ಇದೆ ಎಂದಾಗ ಏನೋ ಒಂದಿಷ್ಟು ಓದಿ ಸಂದೇಹಗಳನ್ನು ಬೇರೆಯವರ ಕೈಯಲ್ಲಿ ನಿವಾರಿಸಿಕೊಂಡು ಪಾಠಕ್ಕೆ ಹೋಗುವರು. ಅರ್ಧ ಗಂಟೆ ಪಾಠ, ಅರ್ಧ ಗಂಟೆ ಪಾಠದ ಸಾರಾಂಶವನ್ನು ಬರಿಸಿ ವಾಪಸ್.

ಇನ್ನು ರಾಧಿಕ ಹಾಗೂ ಜ್ಯೋತಿ ಅವರದು ಇನ್ನೊಂದು ವೈಖರಿ. ಅವರಿಬ್ಬರು ಕಾಲೇಜ ಆಡಳಿತ ಮಂಡಳಿ ಸದಸ್ಯರ ಸಂಬಂಧಿಗಳು. ಒಬ್ಬರಿಗೆ ಪ್ರಯೋಗಾಲಯದಲ್ಲಿ ಕೆಲಸವಿದ್ದರೇ ಇನ್ನೂಬ್ಬರು ಮೇಜಿನ ಪಕ್ಕ ಕುಳಿತು ಹರಟೆ ಹೊಡೆಯುವುದು. ತಪ್ಪು ತಪ್ಪಾಗಿ ಆದರೆ ಬಹಳ ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳಿಗೆ ಪ್ರಯೋಗಗಳ ಬಗ್ಗೆ ವಿವರಿಸುವುದು. ವಿದ್ಯಾರ್ಥಿಗಳು ಏನಾದ್ರು ಕೇಳಿದರೇ ಹೇಳಿದನ್ನೇ ಹೇಳಿ ಅವರನ್ನು ಗೊಂದಲದಲ್ಲಿ ಸಿಲುಕಿಸುವ ತಂತ್ರ. ಸುಮನ್ ಇದ್ದರೆ ಹುಡುಗರು ಅವಳ ಬಳಿಯೇ ಹೋಗುವರು. ಅವರು ಹೇಳಿದ್ದು ಅವರಿಗೆ ಅರ್ಥವಾಗದ್ದನ್ನು ಅವಳನ್ನು ಮತ್ತೆ ಕೇಳಿ ತಮ್ಮ ಸಂದೇಹಕ್ಕೆ ಸೂಕ್ತ ಉತ್ತರ ತಿಳಿದುಕೊಳ್ಳೂತ್ತಿದರು. ಅದಕ್ಕೆ ಅವರಿಗೆ ಅವಳ ಮೇಲೆ ಸಿಟ್ಟು. ಆದರೆ ಸರಿಯಾದ ಉತ್ತರ ತಿಳಿದುಕೊಳ್ಳಬೇಕು, ಅದು ಬೇಡ ಅವರಿಗೆ. ಅವಳಿದ್ದರೇ ಆದಷ್ಟು ಕಮ್ಮಿ ಕೆಲಸ ಮಾಡಿ ಕೈ ತೊಳೆದುಕೊಳ್ಳುವ ಜಾಣತನ. ಸಮಯ ಸಿಕ್ಕಾಗ ಕಣ್ಣು ತಪ್ಪಿಸಿ ಸ್ವಂತ ಕೆಲಸದ ಮೇಲೆ ಹೋಗುವರು.

ಇನ್ನು ರಾಜೇಶ ಬೇರೆ ರಾಜ್ಯದ ಪದವೀಧರ. ಬಿ.ಇ ಮುಗಿಸಿದ ತಕ್ಷಣ ಎಮ್.ಇ ಮಾಡಿದ್ದ. ಆದರೇ ವಿದ್ಯಾರ್ಥಿಗಳ ಮುಂದೆ ನಿಂತು ಪಾಠ ಮಾಡಲು ಧೈರ್ಯಾನೂ ಇಲ್ಲಾ ಇಂಗ್ಲಿಷ್ ಭಾಷೆ ಕೂಡ ಬರದು. ಆದರೆ ಸ್ಟಾಫ್ ರೂಮಿನಲ್ಲಿ  ಏನಾದರೂ ಕೇಳಲು ಬರುವ ಹುಡುಗರಿಗೆ ಹೇಳಿಕೊಡಬಲ್ಲ.  ಹೀಗೆ ಇನ್ನಿಬ್ಬರು ಮೂವರಿದ್ದರು. ಅವರಿಗೆ ತಂತ್ರಜ್ಞಾನದ ಅರಿವಿತ್ತು ಆದರೆ ಭಾಷೆಯ ಮೇಲೆ ಹಿಡಿತವಿರಲಿಲ್ಲ. ಅವರಲ್ಲಿ ಕೆಲಸ ಮಾಡುವ ಶ್ರದ್ದೆ ಇತ್ತು ಆದರೆ ಸಂವಹನೆಯ ಸಮಸ್ಯೆ.

ಸುಮನ್‍ಗೆ ಗಿರಿಜಾ ಪ್ರಸಾದ ಅವರನ್ನು ನೆನೆದು ನಗು ಬಂತು. ಅವರಿಗೆ ಹನ್ನೆರಡು ಹದಿನೈದು ವರ್ಷ ಕೆಲಸದ ಅನುಭವವಿತ್ತು. ಹತ್ತು ವರ್ಷ ಒಂದು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಆಮೇಲೆ ಏಳುತ್ತ ಬೀಳುತ್ತ ಎಮ್.ಟೆಕ್ (ಮಾಸ್ಟರ್ ಆಫ್ ಟೆಕ್ನೋಲಜಿ) ಮಾಡಿ ಈ ಕಾಲೇಜಿಗೆ ಸೇರಿದ್ದರು. ಅವರಿಗೆ ಬರುತ್ತಿದ್ದಿದು ಎರಡೇ ವಿಷಯ. ಆ ಸೆಮಿಸ್ಟರ್‌ಗೊಂದು ವಿಷಯ ಅದರ ನಂತರದ ಸೆಮಿಸ್ಟರ್‌ಗೊಂದು ವಿಷಯ. ಅವರು ಅವನ್ನು ಬಿಟ್ಟು ಬೇರೆಯದಕ್ಕೆ ಕೈ ಹಾಕುತ್ತಿರಲಿಲ್ಲ. ತಾತನ ಕಾಲದ ಜೀರ್ಣವಾದ ಒಂದು ಕಡತ, ಅದರೊಳಗೆ ಹಳೆಯದಾದ ನೋಟ್ಸ್. ಅದನ್ನೇ ಅವರು ಪಾಠ ಮಾಡುವುದು. ಪಠ್ಯಸೂಚಿ ಎಷ್ಟು ಸಲಿ ಬದಲಾದರೂ ಇದರಲ್ಲಿ ಇರುವುದೇ ಆ ವಿಷಯದ ಅಡಿಪಾಯ. ಇದನ್ನು ಕಲಿತರೆ ಸಾಕು ವಿದ್ಯಾರ್ಥಿಗಳು ಎಂಬುದು ಅವರ ವಾದ. ಒಂದು ಸಲಿಯೂ ಪಠ್ಯಸೂಚಿ ಮುಗಿಸುವುದಿಲ್ಲ. ಅಷ್ಟು ವರ್ಷ ಅದನ್ನು ಹೇಳಿಕೊಟ್ಟರೂ ಅದಕ್ಕೆ ಸಂಬಂಧಿಸಿದ ಪ್ರಯೋಗಗಳಲ್ಲಿ ತಪ್ಪುಗಳನ್ನು ತಿದ್ದಲು ಬರದು.

ಇವರುಗಳ ತಕ್ಕ ಹಾಗೆ ಆ ಕಾಲೇಜು ಪ್ರಯೋಗಾಲಯಗಳಲ್ಲಿ ಲ್ಯಾಬ್ ಅಸಿಸ್ಸೆಟಿಂಟಗಳು. ಇದ್ದು ಇಲ್ಲದ ಹಾಗೆ. ಅವರೇ ಇನ್ನೂ ಡಿಪ್ಲೊಮಾ ಓದುತ್ತಿದ್ದವರು. ಪ್ರಯೋಗಗಳನ್ನು ಮಾಡಿಸುವುದು ಇನ್ನು ದೂರವೇ ಉಳಿಯಿತು. ಕೆಲವೊಮ್ಮೆ ಪ್ರಯೋಗಕ್ಕೆ ಬೇಕಾದ ಸಾಮಾನುಗಳನ್ನು ಅಧ್ಯಾಪಕರೇ ವಿದ್ಯಾರ್ಥಿಗಳಿಗೆ ಕೊಡಬೇಕು, ವಾಪಸ್ ತೆಗೆದು ಕೊಳ್ಳಬೇಕು. ಏನೋ ನೆವ ಮಾಡಿ ಏಲ್ಲೋ ಹೋಗುತ್ತಿದ್ದರು. ಅದರ ಮೇಲೆ ಒಂದೊಂದು ಪ್ರಯೋಗಾಲಯಕ್ಕೆ ಇಬ್ಬರು ಅಧ್ಯಾಪಕರುಗಳ ಹೊಣೆಗಾರಿಕೆ. ಪ್ರಯೋಗಾಲಯವನ್ನು ಕಸ ಗುಡಿಸಿ ಧೂಳು ಹೊಡೆದಿದ್ದಾರಾ ಎಂದು ಆರಂಭಿಸಿ ಇನ್ನೆಲಾದಕ್ಕು ಅವರೇ ಜವಾಬ್ದಾರರು. ಬಿಡುವಿಲ್ಲದ ಸಮಯದಲೆಲ್ಲ ಮುಖ್ಯಸ್ಥರು ಏನಾದರೂ ಕೆಲಸ ಕೊಡುತ್ತಿದ್ದರು. ಅಂಕಗಳನ್ನು ಕಂಪ್ಯೂಟರ್‍ಗೆ ತುಂಬಬೇಕು, ಹಾಜರಾತಿ ತುಂಬಬೇಕು, ಹಿಂದಿನ ಪರೀಕ್ಷೆಯ ಫಲಿತಾಂಶದ ವಿಶ್ಲೇಷಣೆ ಮಾಡುವುದು ಹೀಗೇ ಏನಾದರೂ ಒಂದು. ಕಾಲೇಜಿನಲ್ಲಿ ಒಂದ್ನಿಮಿಷ ಓದಲು ಬಿಡುವಿರುತ್ತಿರಲಿಲ್ಲ ಸುಮನ್‍ಗೆ. ಜಾಣತನದಿಂದ ತಪ್ಪಿಸಿಕೊಳ್ಳಲು ಬರದ ಸುಮನ್ ಎಲ್ಲದಕ್ಕು ಸಿಕ್ಕಿ ಬೀಳುತ್ತಿದ್ದಳು. ಬರಿ ಗುಮಾಸ್ತರ ಕೆಲಸ ಎಂದು ಸಿಟ್ಟು ಬಂದರೂ ಮಾಡಬೇಕು.

ಇದಕ್ಕಿಂತ ಸಿಟ್ಟು ಬಂದದ್ದು ಅವಳ ಸಂಬಳದ ಬಗ್ಗೆ. ಹಿಂದಿನ ಕಾಲೇಜಿನಲ್ಲಿ ಅವಳ ಪ್ರತಿಭೆ ಹಾಗೂ ಶ್ರದ್ಧೆಯನ್ನು ಮೆಚ್ಚಿ ಅವಳಿಗೆ ಎಮ್.ಇ  ಇಲ್ಲದಿದ್ದರೂ ಎ.ಐ.ಸಿ.ಟಿ.ಇ (ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್‌) ನಿಗದಿ ಪಡಿಸಿದ ಅಧ್ಯಾಪಕರ ದರ್ಜೆಯ ಸಂಬಳ ಕೊಡುತ್ತಿದ್ದರು. ಮದುವೆ ಎಂದು ಬಿಡುವ ಹೊತ್ತಿಗೆ ಆರು ಸಲಿ ಬಡ್ತಿ ಬಂದಿತ್ತು. ಇಲ್ಲಿ ಅವಳು ಹತ್ತು ಸಾವಿರಕ್ಕೆ ಕೆಲಸ ಒಪ್ಪಿಕೊಂಡಿದ್ದಳು. ಸೇರಿದ ಮೇಲೆ ತಿಳಿಯಿತು ಈಗ ಬಿ.ಇ ಮುಗಿಸಿ ಏನೂ ಅನುಭವವಿಲ್ಲದ ಗೀತಾಂಜಲಿ ಹಾಗೂ ಸ್ವರೂಪಾಗೂ ಹತ್ತು ಸಾವಿರ ಸಂಬಳ. ಬಿ.ಇ ಸೆಕೆಂಡ್ ಕ್ಲಾಸಿನಲ್ಲಿ ಪಾಸ್ ಮಾಡಿ ಪಾಲಿಟೆಕ್ನಿಕ್ ಕಾಲೇಜು ಅನುಭವವವಿರುವ ಆ ಗಿರಿಜಾ ಪ್ರಸಾದ್ ಗೆ ಸಿನಿಯರ್ ಅಧ್ಯಾಪಕರ ಸಂಬಳ. ಯಾಕೆ ? ಎರಡು ವರ್ಷದಲ್ಲಿ ಮುಗಿಸ ಬೇಕಾಗಿದ್ದ ಎಮ್.ಇ ಡಿಗ್ರಿಯನ್ನು ಡುಮುಕಿ ಹೊಡೆದು ನಾಲ್ಕು ವರ್ಷದಲ್ಲಿ ಪಾಸ್ ಮಾಡಿದಕ್ಕೆ ಇದು ಬಹುಮಾನ. ಇನ್ನು ಪಾಠ ಮಾಡಲು ಬರದ ರಾಜೇಶಗೆ ಕೂಡ  ಎ.ಐ.ಸಿ.ಟಿ.ಇ ಅಧ್ಯಾಪಕರ ದರ್ಜೆ ಸಂಬಳ. ಇನ್ನು ವೃತ್ತಿಗೆ ದ್ರೋಹ ಮಾಡುವ ಪ್ರಕಾಶಗಂತು ಅಸ್ಸಿಸ್ಟೆಂಟ್ ಪ್ರೊಫೇಸರ್ ದರ್ಜೆ.

ಪಾಠ ಮಾಡುವುದು ಒಂದು ಕಲೆ. ಇನ್ನೂಬ್ಬರಿಗೆ ಅರ್ಥವಾಗುವ ಹಾಗೆ ವಿಷಯಗಳನ್ನು ತಿಳಿ ಹೇಳುವುದು ಒಂದು ಕಲೆ. ಒಳ್ಳೆಯ ಅಧ್ಯಾಪಕರಾಗಲು ಆ ವೃತ್ತಿಯ ಬಗ್ಗೆ ಶ್ರದ್ದೆ ಇರಬೇಕು. ಹುಡುಗರ ಬಗ್ಗೆ ಒಲವಿರಬೇಕು. ಜ್ಞಾನಾರ್ಜನೆ ಮಾಡಲು ಹಾಗೂ ಅದನ್ನು ಹಂಚಿಕೊಳ್ಳುವ ಬಯಕೆ ಹಾಗೂ ಮನೋಧರ್ಮವಿರಬೇಕು. ಹೆಸರಿನ ಮುಂದೆ ಉದ್ದಕ್ಕೆ ಪದವಿಗಳಿದ್ದರೆ ಒಳ್ಳೆಯ ಅಧ್ಯಾಪಕರು ಆಗಬಹುದು, ಇದು ಸುಳ್ಳು. ಅವರ ಸಾಮರ್ಥ್ಯ, ವೃತ್ತಿ ನಿಷ್ಟೆ ಹಾಗೂ ಕುಶಲತೆಯ ಮೇಲೆ ಅಧ್ಯಾಪಕರ ಮೌಲ್ಯ ಮಾಪನೆ ಆಗಬೇಕು. ಹೀಗೆ ಪದವಿ ಇದ್ದ ತಕ್ಷಣ ಅವರಿಗೆ ಹೆಚ್ಚಿನ ದರ್ಜೆ ಕೊಡುವುದು ತಪ್ಪು. ಪ್ರತಿಭೆಗೆ ಮನ್ನಣೆ ನೀಡಬೇಕು. ಈಗಲೇ ಈ ವೃತ್ತಿಗೆ ಬರುವವರು ಕಡಿಮೆ. ಇನ್ನು ಈ ರೀತಿಯ ಧೋರಣೆ ಬಂದವರನ್ನೂ ಇದರಿಂದ ಓಡಿಸುತ್ತದೆ. ಸುಮನಳ ಯೋಚನೆ ಎಲೆಲ್ಲೋ ಹರಿದೇ ಇತ್ತು. ಏನೂ ವಿಚಾರಿಸಿದೆ ಗಡಿಬಿಡಿಯಲ್ಲಿ ಅವತ್ತು ಈ ಸಂಬಳಕ್ಕೆ ಒಪ್ಪಿಕೊಂಡದ್ದು ತನ್ನದೇ ತಪ್ಪು, ಕೊನೆಗೆ ಈ ನಿರ್ಣಯಕ್ಕೆ ಬಂದಳು.

ಸಮಯ ನೋಡಿದಳು. ಬೆಳಗ್ಗಿನ ಆರು ಗಂಟೆ. ಎದ್ದು ಕೋಣೆಯಾಚೆ ನಡೆದಳು.

****************** 

ಅಂಕಗಳ ಜಾತ್ರೆ

ಮೊದಲ ಪರೀಕ್ಷೆಯ ಅಂಕಗಳು ಯಾಕೋ ತೃಪ್ತಿ ತರಲಿಲ್ಲ ಸುಮನ್‍ಗೆ. ಎರಡೂ ತರಗತಿಗಳನ್ನು ಸೇರಿ ಅವಳು ಪಾಠ ಮಾಡಿದ್ದು ನೂರು ಅರವತ್ತು ವಿದ್ಯಾರ್ಥಿಗಳಿಗೆ. ಅದರಲ್ಲಿ ಶೇಕಡ ನಲ್ವತ್ತು ವಿದ್ಯಾರ್ಥಿಗಳ ಅಂಕಗಳು ಚೆನ್ನಾಗಿದ್ದವು. ಇನ್ನು ಮಿಕ್ಕವರದು ಹೇಳಿಕೊಳ್ಳುವ ಹಾಗಿರಲಿಲ್ಲ. ಅದರ ಬಗ್ಗೆ ಸ್ಟಾಫ್ ರೂಮಿನಲ್ಲಿ ಚರ್ಚಿಸಿದಾಗ ಮತ್ತೊಂದು ಆಶ್ಚರ್ಯ ಕಾದಿತ್ತು. ಅವಳ ವಿಷಯದ ಪರೀಕ್ಷೆಯನ್ನಾದರು ತೆಗೆದುಕೊಂಡಿದ್ದರು ಎಲ್ಲರು. ಬೇರೆ ವಿಷಯಗಳಲ್ಲಿ ಶೇಕಡ ಐವತ್ತುರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನೇ ಬರೆದಿರಲಿಲ್ಲ. ಸೆಮಿಸ್ಟರಿನಲ್ಲಿ ಮೂರು ಆಂತರಿಕ ಪರೀಕ್ಷೆಗಳು. ಅದರಲ್ಲಿ ಉತ್ತಮ ಎರಡು ಪರೀಕ್ಷೆಯ ಅಂಕಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳುವುದು ನಿಯಮ. ಹಾಗಾಗಿ ಕೆಲ ವಿಷಯಗಳನ್ನು ಮೊದಲ ಎರಡು ಪರೀಕ್ಷೆ ಇನ್ನು ಕೆಲ ವಿಷಯಗಳನ್ನು ಎರಡನೇ ಹಾಗೂ ಮೂರನೆಯ ಪರೀಕ್ಷೆಗಳನ್ನು ಬರೆಯುವ ಪದ್ಧತಿ ರೂಡಿಸಿಕೊಂಡಿದ್ದರು ಅಲ್ಲಿಯ ವಿಧ್ಯಾರ್ಥಿಗಳು. ಅದೂ ದಿನಕ್ಕೆ ಬರೀ ಎರಡು ವಿಷಯಗಳ ಪರೀಕ್ಷೆ ಮಾತ್ರ ಇರುವ ಸೌಲಭ್ಯವಿದ್ದು.

ಸೆಮಿಸ್ಟರ್ ಮುಗಿಯುವ ಹೊತ್ತಿಗೆ ಪ್ರಾಂಶುಪಾಲರಿಗೆ ಏನೋ ನೆವ ಹೇಳಿ ಎಲ್ಲಾ ವಿಷಯಗಳಲ್ಲೂ ನಾಲ್ಕನೆಯ ಬಾರಿ ಪರೀಕ್ಷೆ ಮಾಡಿಸಿಕೊಂಡಿದ್ದರು ವಿದ್ಯಾರ್ಥಿಗಳು. ಅಷ್ಟು ಮಾಡಿದರೂ ಎಲ್ಲರಿಗೂ ಇಪ್ಪತೈದು ಅಂಕಗಳಿಗೆ ಕನಿಷ್ಟ ಹದಿನೈದು ಅಂಕಗಳೂ ಬಂದಿರಲಿಲ್ಲ. ಸುಮನ್ ಪಾಪ ಪಠ್ಯಕ್ರಮ ಚೆನ್ನಾಗಿ ಅರ್ಥವಾಗುವ ಹಾಗೆ ಪಾಠ ಮಾಡಬೇಕೆಂದು ದಿನಾ ಬೆಳಗ್ಗೆ ಯಾವುದಾದರೂ ಒಂದು ತರಗತಿಗೆ ವಿಶೇಷ ಪಾಠ ಮಾಡುತ್ತಿದ್ದಳು. ವಾರದ ಆರೂ ದಿನ ಬೆಳಗ್ಗೆ ಎಂಟಕ್ಕೆ ಪಾಠ, ಅದಕ್ಕಾಗಿ ಬೆಳಗ್ಗಿನ ಎರಡು ಗಂಟೆಗೆ ಎದ್ದು ತಯಾರಿ.

ವಿದ್ಯಾರ್ಥಿಗಳು ಈ ಕಥೆಯಾದರೇ ಅವರ ವಿಭಾಗದ್ದು ಇನ್ನೊಂದು ಹಿಂಸೆ. ಗೆಳೆಯ ಪ್ರಕಾಶನ ಅನೈತಿಕತೆ ಬಹಿರಂಗವಾದಾಗ ಪ್ರಾಂಶುಪಾಲರು ಮುಖ್ಯಸ್ಥರಿಗೂ ಸೂಕ್ಷ್ಮವಾಗಿ ತಾಕೀತು ಮಾಡಿದ್ದರು. ಮುಖ್ಯಸ್ಥರು ಸುಮನಳ ಮೇಲೆ ಆ ಕೋಪವನ್ನು ತೆಗೆಯುತ್ತಿದ್ದರು. ಅವಳ ಮೇಲೆ ಆದಷ್ಟು ಪಠ್ಯೇತರ ಕೆಲಸಗಳನ್ನು ಹೇರಲು ಶುರು ಮಾಡಿದರು. ಪ್ರತಿ ಪರೀಕ್ಷೆ ಆದ ಮೇಲೆ ಮೂವತ್ತು ವಿದ್ಯಾರ್ಥಿಗಳ ಎಲ್ಲಾ ವಿಷಯದ ಅಂಕಗಳನ್ನು ಹಾಗೂ ಹಾಜರಾತಿ ಕಲೆ ಹಾಕಿ ಅವುಗಳಲ್ಲಿ ಕನಿಷ್ಟ ಮಟ್ಟಕ್ಕಿಂತ ಕಡಿಮೆ ಇದ್ದವರ ತಂದೆ ತಾಯಿಗೆ ತಿಳಸುವ ಜವಬ್ದಾರಿ ಕೂಡ ಅಲ್ಲಿ ಅಧ್ಯಾಪಕರ ತಲೆಗೆ ಕಟ್ಟಿದ್ದರು. ಆ ಫಲಿತಾಂಶವನ್ನು ಲಿಖಿತ ರೂಪದಲ್ಲಿ ದಾಖಲಿಸುವ ಪತ್ರವನ್ನು ಇವರೇ ತಯಾರು ಮಾಡಬೇಕಿತ್ತು. ಸರಿ ಅದನ್ನು ಮಾಡಿದ್ದಳು. ಆದರೆ ತರಗತಿಗಳಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಪರೀಕ್ಷೆಯ ಅರ್ಜಿ ಫಾರ್ಮ್ ತುಂಬಿಸಿ ಅದು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ಆಫೀಸಿಗೆ ಒಪ್ಪಿಸುವ ಕೆಲಸವನ್ನೂ ಅಧ್ಯಾಪಕರಿಗೆ  ಹೇಳಿದಾಗ ಸುಮನ್ ಮುಖ್ಯಸ್ಥರ ಮುಂದೆ ತುಸು ಖಾರವಾಗಿ ಮಾತಾಡಿದಳು. ಆ ಪ್ರಕ್ರಿಯೆ ಅಲ್ಲಿಗೆ ನಿಂತಿರಲಿಲ್ಲ. ಹಾಲ್ ಟಿಕೆಟ್ ಕೂಡ  ಇವರೇ ಹಂಚ ಬೇಕಾದಾಗ ಸುಮನ್  “ಸರ್ ಆಫೀಸಿನ ಕ್ಲರ್ಕ್ ಇರುವುದು ಏನಕ್ಕೆ?” ಎಂದು ಕೇಳಿಯೇ ಬಿಟ್ಟಿದ್ದಳು.

ಮನೆಯಲ್ಲಿ ತನ್ನ ಯಾವುದೇ ಭಾವನೆಗಳನ್ನು ತೋರದೆ ನಗು ಮುಖದಿಂದ ಇರುತ್ತಿದ್ದ ಸುಮನ್ ಕಾಲೇಜಿನಲ್ಲಿ ಇಂತಹ ಸನ್ನಿವೇಶಗಳಲ್ಲಿ ಬಹಳ ಬೇಗ ತಾಳ್ಮೆ ಕಳೆದುಕೊಳ್ಳುತ್ತಿದ್ದಳು. ಮೊದಲೇ ಮೂಗಿನ ಮೇಲೆ ಕೋಪ ಅದರ ಮೇಲೆ ಇಂತಹ ವ್ಯವಹಾರಗಳಿಂದ ಅವಳಿಗೆ ಬಲೇ ಹಿಂಸೆಯಾಗುತ್ತಿತ್ತು. ಅವಳು ಎಷ್ಟು ಕಷ್ಟಪಟ್ಟು ಪಠ್ಯಪುಸ್ತಕಳಿಂದ ಪಾಠ ಮಾಡಿದರೂ ಹುಡುಗರ ಕೈಯಲ್ಲಿ ಯಾವುದೋ ಕಳಪೆ ಮಟ್ಟದ ಸ್ಥಳೀಯ ಪುಸ್ತಕಗಳು ಕಾಣುತ್ತಿದ್ದವು. ವಿದ್ಯಾರ್ಥಿಗಳ ಕೈಯಲ್ಲಿ ಏಕೆ ಕೆಲ ಅಧ್ಯಾಪಕರೂ ಅದರಿಂದ ಪಾಠ ಮಾಡುತ್ತಿದ್ದರು. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಸೆಮಿನಾರ್ ಅಂಕಗಳ ಪಟ್ಟಿ ಪ್ರಾಂಶುಪಾಲರ ಬಳಿ ಹೋಗಿ ಬಂದ ಮೇಲೆ ಅದರಲ್ಲಿ ಕೆಲ ವಿದ್ಯಾರ್ಥಿಗಳಿಗೆ ಐವತ್ತಕ್ಕೆ ಐವತ್ತು ಅಂಕಗಳಾಗಿ ಪರಿವರ್ತನೆಗೊಂಡಿದ್ದವು. ಇದು ಹೇಗಾದರೂ ಮಾಡಿ ಕಾಲೇಜಿಗೆ ರಾಂಕ್  ಗಿಟ್ಟಿಸುವ ತಂತ್ರ. ಸೆಮಿಸ್ಟರ್ ಮುಗಿಯಲು ಇನ್ನೇನು ಒಂದು ವಾರವಿದೆ ಎಂದಾಗ ಸ್ಟಾಫ್ ರೂಮು ಒಂದು ಜಾತ್ರೆಯಾಗಿತ್ತು. ಎಲ್ಲರಿಗೂ ಕನಿಷ್ಟ ಹದಿನೈದು ಅಂಕಗಳನ್ನು ಕೊಡಬೇಕು ಇದು ಅಲ್ಲಿಯ ನಿಯಮವಂತೆ. ನಾವು ಯಾಕೆ ಕೊಡಬೇಕು ಅವರು ಓದಿ ಗಿಟ್ಟಿಸಬೇಕು ಇದು ಸುಮನಳ ವಾದ. ಅದನ್ನು ಅಲ್ಲಿ ಯಾರೂ ಕೇಳುವವರಿಲ್ಲ. ಎರ್ರಾಬಿರ್ರಿ ಅಂಕಗಳನ್ನು ಕೊಡುತ್ತಿದ್ದರು. ಕೆಲವರು ವಿದ್ಯಾರ್ಥಿಗಳಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೊಟ್ಟು ಅವುಗಳಿಗೆ ಉತ್ತರಗಳನ್ನು ಬರೆಸಿ ಅದಕ್ಕೆ ಅಂಕಗಳನ್ನು ತುಂಬಿದರು. ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ನೋಡಿ ಅವಕ್ಕೆ ಉತ್ತರ ಬರೆದರೆ ಅವರಿಗೇನಂತೆ. ಇದನ್ನೆಲ್ಲ ನೋಡಿ ಸುಮನ್ ಹೌಹಾರಿದಳು.

ಸಿ.ಇ.ಟಿಯಲ್ಲಿ ಹತ್ತು ಹನ್ನೊಂದು ಸಾವಿರ ರಾಂಕ್ ಬಂದಿರುವ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಓದುವ ಸಾಮರ್ಥ್ಯವೂ ಇಲ್ಲ ಕಷ್ಟಪಡುವ ಮನೋಭಾವ ಅಂತು ಮೊದಲೇ ಇಲ್ಲ. ಹೇಗಾದರೂ ಮಾಡಿ ಉತ್ತೀರ್ಣವಾಗಬೇಕು ಸಾಫ್ಟ್ವೇರ್ ಇಂಜಿನಿಯರ್ ಆಗಬೇಕು. ಸರಿಯಾಗಿ ಪಾಠ ಮಾಡದೇ ಹುಡುಗರಿಗೆ ಸುಮ್ಮನೆ ಅಂಕಗಳನ್ನು ತುಂಬಿ ಒಳ್ಳೆಯವರು ಅನ್ನಿಸಿಕೊಳ್ಳುವ ಅಧ್ಯಾಪಕರು. ಅಲ್ಲಿ ಒಬ್ಬರಿಗಾದರೂ ತಾವು ವಿದ್ಯಾರ್ಥಿಗಳಿಗೆ ಏನು ಮೌಲ್ಯಗಳನ್ನು ಹೇಳಿಕೊಡುತ್ತಿದ್ದೇವೆ ಎಂಬ ಕಾಳಜಿ ಇಲ್ಲ. ತಂದೆ ತಾಯಿಯರು ಅಷ್ಟೊಂದು ದುಡ್ಡು ಕಾಲೇಜಿಗೆ ಶುಲ್ಕವಾಗಿ ಕಟ್ಟುತ್ತಿದ್ದಾರೆ ಅದಕ್ಕೆ ಒಳ್ಳೆ ಗುಣಮಟ್ಟದ ಅಧ್ಯಾಪಕರು ಇರಬೇಕು, ಚೆನ್ನಾಗಿ ಪಾಠ ಮಾಡಬೇಕು ಎಂದು ಕೇಳುವುದಿಲ್ಲ. ಇದು ಯಾರ ಹೊಣೆ? ಎಲ್ಲಾ ಅನೈತಿಕ. ಇಂತಹ ಚಕ್ರವ್ಯೂಹದಲ್ಲಿ ಸಿಕ್ಕಿದ್ದ ಸುಮನ್‍ಗೆ ಒಂದು ತರಹ ಹಿಂಸೆ,  ನೋವು. ಆದರೆ ಅವಳ ಪ್ರತಿಭಟನೆ ಯಾರ ಮೇಲೂ ಪ್ರಭಾವ ಬೀರುತ್ತಿರಲಿಲ್ಲ.

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ:surahonne.com/?p=38454

(ಮುಂದುವರಿಯುವುದು)

-ಸುಚೇತಾ ಗೌತಮ್.‌

5 Responses

  1. ಕಾದಂಬರಿಯ ನಾಯಕಿಯ ಮುಂದೆ ಬಂದಿದೆ…ಅಗ್ನಿ ಪರೀಕ್ಷೆ… ಸಮಾಜದಲ್ಲಿನ ವ್ಯಕ್ತಿ ಗಳ…ನಡವಳಿಕೆ ಯ ಅನಾವರಣ… ತುಂಬಾ ಚೆನ್ನಾಗಿ ಮೂಡಿಬಂದಿದೆ ಗೆಳತಿ…

  2. ಸುಚೇತಾ says:

    ಧನ್ಯವಾದಗಳು ಮೇಡಂ .

  3. ಶಂಕರಿ ಶರ್ಮ says:

    ಕಾಲೇಜುಗಳಲ್ಲಿ ನಡೆಯುವ ಅವ್ಯವಹಾರಗಳ ಅನಾವರಣ, ಸುಮನ್ ಳ ಗೊಂದಲದ ಗೂಡಾದ ಮನಸ್ಥಿತಿ ಎಲ್ಲವೂ ಯಥಾವತ್ತಾಗಿ ಮೂಡಿಬಂದಿದೆ…ಧನ್ಯವಾದಗಳು ಸುಚೇತಾ ಮೇಡಂ.

  4. ನಯನ ಬಜಕೂಡ್ಲು says:

    ಹೊಸ ತಿರುವು ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: