ಪುಸ್ತಕನೋಟ :’ಅಂತರಾಳ’, ಕಥಾಸಂಕಲನ ,ಲೇಖಕರು: ಶ್ರೀಮತಿ ಸಿ.ಎನ್.ಮುಕ್ತಾ.
ಶ್ರೀಮತಿ ಸಿ.ಎನ್.ಮುಕ್ತಾರವರು ಹದಿನಾಲ್ಕು ಕಥಾಸಂಕಲನಗಳನ್ನು ಪ್ರಕಟಿಸಿ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಅವರ ಉತ್ಸಾಹ, ಸೃಜನಶೀಲತೆ ಇನ್ನೂ ಹೆಚ್ಚು ಕಥೆಗಳನ್ನು ಬರೆಯಲು ಅವರನ್ನು ಪ್ರೇರೇಪಿಸುತ್ತಿದೆ. ಇದಕ್ಕಾಗಿ ಅವರು ಅಭಿನಂದನೀಯರು. ಅಂತರಾಳ ಅವರ ಹದಿನೈದನೆಯ ಕಥಾಸಂಕಲನ. ಇದರಲ್ಲಿ ಹದಿನಾರು ಕಥೆಗಳಿವೆ. (ಕ್ರಮ ಸಂಖ್ಯೆ ತಪ್ಪಾಗಿ ಹದಿನೈದು ಎಂದಾಗಿದೆ.) ಇವರ ಕಥೆಗಳ ಓದಿನಿಂದ ಪ್ರಭಾವಿತಳಾಗಿ ನಾನೂ ಕೂಡ ಒಬ್ಬ ಬರಹಗಾರಳಾಗಿ ಮುಂದುವರಿದೆನು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಅವರ ಮಾರ್ಗದರ್ಶನ, ಒಡನಾಟ ನನಗೆ ಬಹಳಷ್ಟು ಹೊಸದನ್ನು ಕಲಿಯಲು ನೆರವಾಗಿದೆ. ಈಗ ಅವರ ಅಂತರಾಳ ಕೃತಿಯ ಓದುಗಳಾಗಿ ನನ್ನ ಅನಿಸಿಕೆಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದೇನೆ.
ಅಂತರಾಳ:
ಇತ್ತೀಚಿನ ದಿನಗಳಲ್ಲಿ ಹೊಸದಾಗಿ ಮದುವೆಯಾದ ಗಂಡಹೆಂಡಿರು ಇಬ್ಬರೂ ಕೆಲಸ ಮಾಡುತ್ತಿದ್ದರೆ ತಮ್ಮ ಅನುಕೂಲಕ್ಕೆ ತಕ್ಕಂತೆ ದಿನಚರಿಗಳನ್ನು ಬದಲಾಯಿಸಿಕೊಂಡು ಬದುಕು ನಡೆಸುತ್ತಾರೆ. ಅಂತಹವರಿಗೆ ಮನೆಯ ಹಿರಿಯರು ತಾವು ಹಿಂದಿನಿಂದ ನಡೆದುಬಂದ ರೀತಿಯಲ್ಲೇ ಇರಬೇಕೆಂದು ಬಯಸಿ ಒತ್ತಾಯಿಸಲು ಹೊರಟರೆ ಅವರ ನಡುವೆ ಹೊಂದಾಣಿಕೆ ಸಾಧ್ಯವಾಗದು. ಬದಲಾಗಿ ಕಿರಿಯರಿಗೆ ಅವರು ಬಯಸಿದ ಸ್ವಾತಂತ್ರ್ಯ ನೀಡಿ, ಅವರ ಸುಖದುಃಖಗಳಿಗೆ ಅಗತ್ಯವಾದಾಗ ಮಾತ್ರ ಸಮೀಪವಾಗಿ ನಡೆದುಕೊಂಡಾಗ ಪರಸ್ಪರ ನಂಟೂ, ವಿಶ್ವಾಸವೂ ಹಾಗೇ ಉಳಿಯುತ್ತದೆ. ಇದೇ ವಿಷಯವನ್ನಾಧರಿಸಿ ಲೇಖಕಿ ಈ ಕಥೆಯನ್ನು ಬರೆದಿದ್ದಾರೆ. ಮುದ್ದಾಗಿ ಬೆಳೆದ ಮಗಳು ತನ್ನ ತಾಯಿಯ ಮನೆಯಲ್ಲಿ ಮಾಡಿದಂತೆ ಮೊಂಡುತನ ಮಾಡಿ ಸೇರಿದ ಮನೆಯ ಕುಟುಂಬದ ಸಂಬಂಧಗಳಿಗೆಲ್ಲಿ ಕುತ್ತು ತರುತ್ತಾಳೋ ಎಂಬ ಆತಂಕ ಅವಳ ತಂದೆ ರಘೋತ್ತಮ್ ಮತ್ತು ತಾಯಿ ಪುಷ್ಪಾರಿಗೆ ಇದೆ. ಆದರೆ ಇದರ ಬಗ್ಗೆ ಅವರಿಗಿಂತಲೂ ತೀಕ್ಷ್ಣವಾಗಿ ಮುಂದಾಲೋಚಿಸಿ ಅವರ ಬೀಗರು ಪದ್ಮಮ್ಮ ದಂಪತಿಗಳು ಅದಕ್ಕೊಂದು ದಿವ್ಯವಾದ ಪರ್‍ಯಾಯ ವ್ಯವಸ್ಥೆಯ ಪ್ರಸ್ತಾಪವನ್ನು ರಘೋತ್ತಮ್ ಪುಷ್ಪಾರ ಮುಂದಿಡುತ್ತಾರೆ. ಅವರಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವೇ ಇಲ್ಲದಂತೆ ಮಾಡುತ್ತಾರೆ. ಇದರಿಂದ ಎಲ್ಲರ ಹಿತವನ್ನು ಕಾಯ್ದುಕೊಂಡಂತಾಯಿತು. ಆತುರಪಟ್ಟು ತನ್ನ ಅತ್ತೆ ಮಾವಂದಿರ ಬಗ್ಗೆ ತಾನೇ ಅನುಚಿತವಾದ ಅಭಿಪ್ರಾಯವನ್ನು ಹೊರ ಹಾಕಿದ್ದ ಬಕುಳಾಳಿಗೆ ಅವರ ಮೇರು ವ್ಯಕ್ತಿತ್ವದ ಎದುರು ತಾನು ಕುಬ್ಜಳಾದಂತಾಗುತ್ತದೆ. ಇದರಿಂದ ಕುಟುಂಬ ಸಾಮರಸ್ಯ ಆರೋಗ್ಯಕರವಾಗಿ ಉಳಿಯುತ್ತದೆ. ಈ ಕಥೆ ಈಗನ ಹಿರಿಯರು, ಕಿರಿಯರಿಬ್ಬರಿಗೂ ಕಿವಿ ಮಾತಿನಂತಿದೆ.
ಅನುಬಂಧ :
ಇದೊಂದು ಹೃದಯಸ್ಪರ್ಶಿ ಕಥೆ. ಅಕ್ಕಪಕ್ಕದ ಮನೆಯಲ್ಲಿದ್ದ ವೃದ್ಧ ದಂಪತಿಗಳು ವಾಮನರಾವ್, ಪುಷ್ಪಾ ಮತ್ತು ರಾಜಗೋಪಾಲ್, ಕಾಮಾಕ್ಷಿ. ನೆರಹೊರೆಯವರ ಕಷ್ಟಗಳಿಗೆ ಸ್ಪಂದಿಸಬೇಕೆನ್ನುವ ಹಂಬಲ ವಾಮನರಾವ್‌ರದ್ದು. ಅವರದ್ದೇ ಪಕ್ಕದ ಮನೆಯಲ್ಲಿ ಬಾಡಿಗೆದಾರರಾಗಿದ್ದ ರಾಜಗೋಪಾಲರವರ ಮಗಳು ಚಾರುಲತಾ ಕಾಲೇಜೊಂದರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಅವಳನ್ನು ಅಪ್ಪ ಅಮ್ಮ ಪ್ರತಿಯೊಂದು ಕೆಲಸಗಳಿಗೂ ಆಶ್ರಯಿಸುತ್ತಿದ್ದರು. ಒಂದೇ ಕೊರತೆಯೆಂದರೆ ಚಾರುಲತಾಗೆ ಪ್ರಾಪ್ತ ವಯಸ್ಸಾಗಿದ್ದರೂ ಮದುವೆಯಾಗಿರಲಿಲ್ಲ. ಅವಳಿಗೆ ವಿವಾಹ ಮಾಡುವ ಯಾವುದೇ ಪ್ರಯತ್ನಗಳು ಅವರ ಮನೆಯಲ್ಲಿ ನಡೆಯುತ್ತಿರಲಿಲ್ಲ. ದುಡಿಯುವ ಮಗಳು ಮದುವೆಯಾಗಿ ಹೋದರೆ ತಮಗೆ ಆರ್ಥಿಕ ಸಬಲತೆ ಮತ್ತು ಶುಶ್ರೂಷೆ ಮಾಡುವರರಿಲ್ಲದಂತಾಗುತ್ತದೆ ಎಂಬ ಸ್ವಾರ್ಥ ಆಲೋಚನೆಯಿಂದ ಮುದುಕ ರಾಜಗೋಪಾಲ್ ದಂಪತಿಗಳು ಪ್ರಯತ್ನ ಮಾಡುತ್ತಿಲ್ಲ. ಇದು ಅನ್ಯಾಯವೆಂಬುದು ವಾಮನರಾವ್‌ರವರ ಊಹೆ. ಒಂದು ಸಂಜೆ ಕಾಲೇಜಿನಿಂದ ಚಾರುಲತಾಳನ್ನು ಡ್ರಾಪ್ ಮಾಡಲು ಆಕೆಯ ಗೆಳೆಯ ರಾಹುಲ್ ಗಿರಿಧರ್ ಎಂಬುವನು ಬಂದದ್ದನ್ನು ವಾಮನರಾವ್ ಕಂಡಿದ್ದರು. ಆತನೂ ಇನ್ನೊಂದು ಕಾಲೇಜಿನಲ್ಲಿ ಕೆಲಸದಲ್ಲಿದ್ದಾನೆಂದು ತಿಳಿಯಿತು. ಅವನು ಚಾರುಲತಾಗೆ ಅನುರೂಪ ವರನೆಂದು ವಾಮನರಾವ್ ದಂಪತಿಗಳಿಗೆ ಅನ್ನಿಸಿತು. ಹಾಗಾಗಿ ಒಮ್ಮೆ ತಾವೇ ರಾಜಗೋಪಾಲ್ ದಂಪತಿಗಳನ್ನು ಭೇಟಿಮಾಡಿ ಅವನೊಡನೆ ಚಾರುಲತಾಳ ಮದುವೆ ಮಾಡಲು ಸಲಹೆ ನೀಡಬೇಕೆಂದು ನಿರ್ಧರಿಸಿದರು. ಈ ನಡುವೆ ಸಂಜೆಯವೇಳೆ ಪಕ್ಕದ ಮನೆಯಲ್ಲಿ ಜೋರಾದ ಮಾತುಕತೆ ಮತ್ತು ಚಾರುಲತಾಳ ಅಳು ಕೇಳಿಬಂತು. ಇನ್ನು ತಡಮಾಡುವುದು ಬೇಡವೆಂದು ತಮ್ಮದೇ ಚೌಕಟ್ಟಿನ ಆಲೋಚನೆ ಹೊತ್ತು ರಾಜಗೋಪಾಲರ ಮನೆಗೆ ಹೋದಾಗ ಅವರಿಗೆ ಅರಿವಾಗಿದ್ದೇ ಬೇರೆ. ಚಾರುಲತಾ ಅವರ ಸ್ವಂತ ಮಗಳಲ್ಲ ಬದಲಾಗಿ ಅವರ ಮಗನಿಂದ ಅನ್ಯಾಯಕ್ಕೊಳಗಾದ ಸೊಸೆ ಎಂಬುದು ತಿಳಿಯುತ್ತದೆ. ಮಗನಿಂದ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಆಕೆಯನ್ನು ತಮ್ಮ ಮಗಳಂತೆ ಸಾಕಿ, ವಿದ್ಯಾಭ್ಯಾಸ ಮುಂದುವರಿಸಿ ಆಕೆ ಬದುಕಿಗೆ ಭದ್ರತೆ ಒದಗಿಸಿರುತ್ತಾರೆ. ಆಕೆಯ ಮಾತಾಪಿತೃಗಳೇ ಆಗಿರುತ್ತಾರೆ. ಗೆಳೆಯ ರಾಹುಲನೊಡನೆ ಮದುವೆಯಾದ ನಂತರವೂ ತನ್ನ ಪೋಷಕರು ತನ್ನೊಡನೆಯೇ ಇರಬೇಕೆಂಬುದು ಆಕೆಯ ನಿಬಂಧನೆ. ಇದನ್ನೊಪ್ಪದ ರಾಜಗೋಪಾಲ್ ದಂಪತಿಗಳು ತಾವು ವೃದ್ಧಾಶ್ರಮದಲ್ಲಿರುವ ನಿರ್ಧಾರ ಹೇಳಿದಾಗ ಅವರಿಬ್ಬರ ನಡುವೆ ಮಾತುಕತೆ, ಆಕೆಯ ಅಳುವಿನ ಶಬ್ಧಗಳನ್ನೇ ವಾಮನರಾವ್ ಕೇಳಿದ್ದು. ಸಲಹೆ ಕೊಡಲು ಬಂದ ವಾಮನರಾಯರಿಗೆ ಈ ಸಮಸ್ಯೆಗೊಂದು ಪರಿಹಾರ ನೀಡುವುದು ತಮ್ಮ ಕರ್ತವ್ಯವೆಂದು ಅನ್ನಿಸುತ್ತದೆ. ಅವರಿದ್ದ ಮನೆಯ ಮೇಲೆ ಇನ್ನೊಂದು ಮಹಡಿಯ ಕಟ್ಟಡವನ್ನು ಕಟ್ಟಿಸಿ ನವದಂಪತಿಗಳು ಮೇಲಿನ ಮನೆಯಲ್ಲಿದ್ದರೆ ತಂದೆತಾಯಿಗಳು ಕೆಳಗಿನ ಮನೆಯಲ್ಲಿ ವಾಸವಿರುವಂತೆ ಸೂಚಿಸುತ್ತಾರೆ. ಇದು ಇಬ್ಬರಿಗೂ ಒಪ್ಪಿಗೆಯಾಗುತ್ತದೆ. ನಿಜಕ್ಕೂ ಅಪರೂಪದ ನೆರೆಹೊರೆಯವರ ಮತ್ತು ಆದರ್ಶ ಸಂಬಂಧಗಳ ಸುಂದರ ಚಿತ್ರಣ ಇಲ್ಲಿದೆ.
ಕಳವಳ:
ಇದು ಆಕಸ್ಮಿಕ ಘಟನೆಯೊಂದರ ಹಿನ್ನೆಲೆಯಲ್ಲಿ ಬರೆದಿರುವ ಕಥೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯ ಗಂಡು ಹೆಣ್ಣುಗಳು ತಮ್ಮ ಅಪ್ರಬುದ್ಧ ವಯಸ್ಸಿನಲ್ಲಿ ಯಾವುದೋ ವಿಲಕ್ಷಣ ಆಕರ್ಷಣೆಗೊಳಗಾಗಿ ಮನೆಯಿಂದ ಓಡಿಹೋಗಿ ದುರಂತಗಳಿಗೆ ಒಳಗಾಗಿರುವ ಸುದ್ಧಿಗಳನ್ನು ಓದುತ್ತಲೇ ಇರುತ್ತೇವೆ. ಇಲ್ಲಿ ಕೂಡ ಪ್ರಿಯಾ ಎಂಬ ಹುಡುಗಿ ತನ್ನ ಹದಿನೇಳರ ಪ್ರಾಯದಲ್ಲಿ ಒಬ್ಬ ಹುಡುಗನ ಆಕರ್ಷಣೆಗೊಳಗಾಗಿ ಮುಂದಾಲೋಚನೆಯಿಲ್ಲದೆ ಅವನೊಡನೆ ಮನೆ ತೊರೆದು ಓಡಿಹೋಗುವ ಪ್ರಯತ್ನದಲ್ಲಿರುತ್ತಾಳೆ. ಅದೃಷ್ಟವಶಾತ್ ಅವಳನ್ನು ರಕ್ಷಿಸಿ ಸುರಕ್ಷಿತವಾಗಿ ಮನೆ ಸೇರುವಂತೆ ಮಾಡುತ್ತಾರೆ ಹೃದಯವಂತೆ ಮಾಳವಿಕಾ. ನಂತರ ಬಹಳ ವರ್ಷಗಳ ನಂತರ ಮಾಳವಿಕಾರ ತಮ್ಮನೊಡನೆ ಪ್ರಿಯಾಳ ಮದುವೆ ಗೊತ್ತಾಗುತ್ತದೆ. ವಧುವನ್ನು ಮೊದಲು ನೋಡದೇ ಇದ್ದ ಮಾಳವಿಕಾರಿಗೆ ತಮ್ಮನು ಫೋಟೋ ತೋರಿಸಿದಾಗ ಹಿಂದಿನ ಘಟನೆ ನೆನಪಾಗಿ ಅದೇ ಹುಡುಗಿಯಿವಳು ಎಂದರಿವಾಗುತ್ತದೆ. ಆಗ ಮಾಳವಿಕಾರ ತಮ್ಮ ಹುಡುಗಿಯೊಡನೆ ತಾನು ಮಾತನಾಡಿದಾಗ ಆಕೆ ಪ್ರಾಮಾಣ ಕವಾಗಿ ತಾನು ಹಿಂದೆ ಮಾಡಿದ್ದ ತಪ್ಪಿನ ಬಗ್ಗೆ ತಿಳಿಸಿ ತನ್ನನ್ನು ಯಾರೋ ಒಬ್ಬ ದೇವತೆ ಕಾಪಾಡಿದ್ದಳು ಎಂದು ಹೇಳಿಕೊಂಡಿದ್ದಳು ಎಂದು ಹೇಳುತ್ತಾನೆ. ಆಕೆ ಮಾಳವಿಕಾಳಿಗೆ ಹಿಂದೆ ಮಾತು ಕೊಟ್ಟಂತೆ ಬಿ.ಇ. ಪಾಸು ಮಾಡಿ ತನ್ನ ಆಶಯವನ್ನು ಪೂರ್ತಿಗೊಳಿಸಿರುತ್ತಾಳೆ. ಪ್ರಿಯಾ ಮತ್ತು ಮಾಳವಿಕಾ ಭೇಟಿಯಾದಾಗ ಆ ದೇವತೆಯ ತಮ್ಮನೇ ತನ್ನನ್ನು ಕೈ ಹಿಡಿಯಲಿರುವನೆಂಬ ವಿಷಯ ಅರಿವಾಗಿ ಪ್ರಿಯಾ ಮಾಳವಿಕಾರ ಕಾಲಿಗೆರಗುತ್ತಾಳೆ. ಅಂದು ತಪ್ಪಿದ ಅನಾಹುತ ಇಂದು ಸುಖಾಂತ್ಯಕ್ಕೆ ಕಾರಣವಾಯಿತು.
ಚಕ್ರವ್ಯೂಹ:
ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ತಾರಮ್ಮನವರು ತಾವು ಪ್ರಾರಂಭಿಸಿದ್ದ ಅಮ್ಮ ಮಕ್ಕಳ ಕೂಟ ಮತ್ತು ವೃದ್ಧಾಶ್ರಮದ ಜೊತೆಗೆ ತಮ್ಮಲ್ಲೇ ದೊಡ್ಡವರಾಗಿ ಬೆಳೆದು ವಯಸ್ಕರಾದ ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆಯೂ ಆಲೋಚಿಸುತ್ತಾರೆ. ಹುಡುಗಿಯರು ಹದಿನಾರು ವಯಸ್ಸಿನವರಾದಾಗ ಅವರಿಗಾಗಿ ಉದ್ಯೋಗ ತರಬೇತಿ ಕೊಡಿಸಿ ಅವರು ಸ್ವಂತ ಕಾಲಮೇಲೆ ನಿಲ್ಲುವ ಸಾಮರ್ಥ್ಯ ಒದಗಿಸುವತ್ತಲೂ ಪ್ರಯತ್ನಮಾಡುತ್ತಾರೆ. ಅವರನ್ನು ಯಾರಾದರೂ ಇಷ್ಟಪಟ್ಟು ವಿವಾಹವಾಗಲು ಮುಂದಾದರೆ ಅವರಿಗೆ ಮದುವೆಗಳನ್ನೂ ಮಾಡಿಸುತ್ತಾರೆ. ಮದುವೆಯ ನಂತರ ಆ ಹುಡುಗಿಯರ ಗಂಡಂದಿರು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಯೇ ಎಂಬುದು ಅವರಿಗೆ ತಿಳಿಯದು. ಅವರೇ ಮದುವೆ ಮಾಡಿಸಿದ್ದ ಹುಡುಗಿ ರಮಾ. ಅವಳ ಗಂಡನ ತಮ್ಮ ಅನಾಥಾಶ್ರಮದ ನಂದಿನಿಯೆಂಬ ಹುಡುಗಿಯನ್ನು ಮದುವೆಯಾಗಲು ಒಪ್ಪಿದ್ದಾನೆಂದು ತಿಳಿದುಬಂದಾಗ ತಾರಮ್ಮನವರನ್ನು ತಾನೇ ಭೇಟಿಯಾಗುತ್ತಾಳೆ. ನಂದಿನಿಯನ್ನು ಯಾವುದೇ ಕಾರಣಕ್ಕೂ ತನ್ನ ಮೈದುನನಿಗೆ ಕೊಡಬೇಡಿ ಎಂದು ಒತ್ತಾಯಿಸುತ್ತಾಳೆ. ಕಾರಣ ಕೇಳಿದಾಗ ವಿವಾಹದ ನಂತರದ ರಮಾಳ ಬದುಕಿನ ಕರುಣಾಜನಕ ಕಥೆಯನ್ನು ಅವರಿಗೆ ತಿಳಿಸುತ್ತಾಳೆ. ಶೋಷಣೆಗೆ ಒಳಗಾದವಳಿಂದ ಈ ಮಾತುಗಳನ್ನು ಕೇಳಿ ತಿಳಿದ ನಂತರ ತಾರಮ್ಮ ಮುಂದಿನ ಆಲೋಚನೆಯಲ್ಲಿ ಮುಳುಗಿರುತ್ತಾರೆ. ಆಗಲೇ ಕತೆ ಅನಿರೀಕ್ಷಿತ ನಾಟಕೀಯ ತಿರುವನ್ನು ಪಡೆಯುತ್ತದೆ. ಡಾ. ನಿತ್ಯಾನಂದರ ಪುತ್ರ ಡಾ. ಸದಾನಂದ ತಾನಾಗಿಯೇ ನಂದಿನಿಯ ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಇದರಿಂದ ಸಮಸ್ಯೆ ಪರಿಹಾರವಾಗಿ ನಂದಿನಿಯ ಮದುವೆ ಸರಳವಾಗಿ ನಡೆಯುತ್ತದೆ. ಓದುಗರಿಗೆ ಡಾ.ಸದಾನಂದ ನಂದಿನಿಯನ್ನು ಯಾವ ವಿಶೇಷ ಕಾರಣಗಳಿಂದಾಗಿ ಒಪ್ಪಿಕೊಂಡ ಎಂಬುದು ತಿಳಿದು ಬರುವುದಿಲ್ಲ.
ಲಾಕ್‌ಡೌನ್ :
ದೇಶಕ್ಕೆಲ್ಲಾ ಹರಡಿದ್ದ ಕೊರೋನಾ ಪಿಡುಗಿನ ಲಾಕ್‌ಡೌನ್ ಕಾಲದಲ್ಲಿ ಮೂಡಿಬಂದ ಕಥೆಯಿರಬೇಕು. ಕಾರ್ತೀಕ್ ಮತ್ತು ನಿಶ್ಚಲ ಪರಸ್ಪರ ಮೆಚ್ಚಿ ಮದುವೆಯಾದವರು. ಕಾರ್ತೀಕ್ ನೋಡಲು ಸುಂದರ ಪುರುಷ ಆದರೆ ಹಣವಂತನಲ್ಲ. ನಿಶ್ಚಲ ಅತ್ಯಂತ ಶ್ರೀಮಂತರ ಪುತ್ರಿ. ಆಕೆ ತುಂಬ ಹಠವಾದಿ. ಹಾಗಾಗಿ ತಂದೆತಾಯಿಗಳು ಅವಳ ಬಯಕೆಗೆ ಅನುಮತಿಸಿದ್ದರು. ಆರಂಭದ ದಿನಗಳಲ್ಲಿ ಅವರ ವೈವಾಹಿಕ ಜೀವನ ಮಧುರವಾಗಿತ್ತು. ಎರಡು ಮಕ್ಕಳಾಗುವಷ್ಟರಲ್ಲಿ ಸಂಬಂಧಗಳಲ್ಲಿ ಬಿರುಕು ಮೂಡಿತ್ತು. ಕಾರ್ತೀಕನ ತಾಯಿ ಭವಾನಮ್ಮ ಬಿದ್ದು ಅವರ ಕಾಲು ಫ್ರಾಕ್ಚರ್ ಆಗಿ ಚಿಕಿತ್ಸೆಯ ನಂತರ ವೀಲ್‌ಛೇರಿನಲ್ಲಿ ಓಡಾಡಬೇಕಾಯಿತು. ತಾಯಿಯ ಆರೈಕೆಯ ದಿನಗಳಲ್ಲಿ ಕಾರ್ತೀಕ್ ಕೆಲಸಕ್ಕೂ ಹೋಗದೆ ಅವರನ್ನು ನೋಡಿಕೊಳ್ಳುತ್ತಿದ್ದ. ಆ ಸಮಯದಲ್ಲಿ ಮಕ್ಕಳೊಡನೆ ತಂದೆಯ ಮನೆ ಸೇರಿದ್ದ ನಿಶ್ಚಲ ಮತ್ತೆ ಗಂಡನ ಮನೆಗೆ ಹಿಂದಿರುಗಲಿಲ್ಲ. ಅತಿ ಹೆಚ್ಚುಕಾಲ ಕಾಲೇಜಿಗೆ ರಜೆ ಹಾಕಿದ್ದರಿಂದ ಖಾಸಗಿ ಕಾಲೇಜಿನ ಆಡಳಿತ ಮಂಡಳಿಯವರು ಕಾರ್ತೀನಿಗೆ ರಾಜೀನಾಮೆ ನೀಡುವಂತೆ ಸಲಹೆ ಮಾಡಿದ್ದರು. ಅದರಿಂದ ಅವನ ಕೆಲಸ ಹೋಗಿ ಮುಂದೇನು ಎಂಬ ಪ್ರಶ್ನೆ ಎದುರಾಗಿತ್ತು. ಆಗ ನಿಶ್ಚಲ ಗಂಡನೊಡನೆ ಜಗಳವಾಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದಳು. ಅದು ಮುಂಜೂರಾದ ನಂತರ ಉದರಂಭರಣಕ್ಕಾಗಿ ಗೆಳೆಯನೊಬ್ಬನ ನೆರವಿನಿಂದ ಮನೆಯ ಮುಂದಿನ ಭಾಗದಲ್ಲೇ ಸಣ್ಣದಾಗಿ ಕಿರಾಣ ಅಂಗಡಿಯೊಂದನ್ನು ತೆರೆದು ವ್ಯಾಪಾರದಲ್ಲಿ ತೊಡಗಿದ. ಅದೂ ಅರ್ಧ ದಿನ ಮಾತ್ರ ಅಂಗಡಿ ತೆರೆಯಬೇಕಾಗಿತ್ತು. ವಿಚ್ಛೇದನದ ನಂತರ ಮಕ್ಕಳನ್ನು ವಾರಾಂತ್ಯದಲ್ಲಿ ಭೇಟಿಮಾಡಲು ನ್ಯಾಯಾಲಯ ಅನುಮತಿಯಿತ್ತಿತ್ತು. ಹೀಗಾಗಿ ಮಕ್ಕಳನ್ನು ಕಂಡು ಬರುತ್ತಿದ್ದ. ತಾಯಿ ಆತನನ್ನು ಬೇರೆ ಮದುವೆಯಾಗೆಂದು ಸಲಹೆ ನೀಡಿದಾಗ ತನಗೆ ಮಕ್ಕಳ ಜವಾಬ್ದಾರಿಯಿದೆ ಎಂದು ಕಾರಣ ನೀಡಿ ಅದನ್ನು ನಿರಾಕರಿಸಿದ. ಅದೃಷ್ಟ ಒಲಿದು ಬಂದಂತೆ ವಿದೇಶದಲ್ಲಿದ್ದ ಅವನ ಚಿಕ್ಕಪ್ಪ ತಮ್ಮ ಪತ್ನಿಯ ಚಿಕಿತ್ಸೆಗಾಗಿ ಹಿಂದಿರುಗಿದ್ದರು. ಅವರನ್ನು ತನ್ನ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿದ. ಅವರ ಪತ್ನಿ ಮರಣ ಹೊಂದಿದ ಬಳಿಕ ಅವನ ಚಿಕ್ಕಪ್ಪ ತನ್ನೆಲ್ಲ ಆಸ್ತಿಪಾಸ್ತಿಗಳನ್ನು ಅಣ್ಣತಮ್ಮಂದಿರ ಮಕ್ಕಳಿಗೆ ಹಂಚಿ ಪುಣ್ಯಕ್ಷೇತ್ರಗಳಿಗೆ ಯಾತ್ರಿಕರಾಗಿ ಹೊರಟುಹೋದರು. ಅದರಲ್ಲಿ ಕಾರ್ತೀಕನಿಗೆ ಎರಡು ಕೋಟಿ ರೂಪಾಯಿಗಳ ಜೊತೆಗೆ ಶ್ರೀರಂಗಪಟ್ಟಣದ ಬಳಿಯ ಜಮೀನು ದೊರಕಿತ್ತು. ಜಮೀನನ್ನು ಸಾಗುವಳಿ ಮಾಡಿಸಿ ಉಸ್ತುವಾರಿಗಾಗಿ ಒಬ್ಬನನ್ನು ಅಲ್ಲಿರಲು ಅನುಕೂಲ ಮಾಡಿಕೊಟ್ಟ. ಅಧುನಿಕ ರೀತಿಯಲ್ಲಿ ವಿಶಾಲವಾದ ಮನೆ ಮತ್ತು ಅಂಗಡಿಯನ್ನು ನಿರ್ಮಿಸಿ ವ್ಯಾಪಾರವನ್ನು ವೃದ್ಧಿಸಿಕೊಂಡ. ಮಕ್ಕಳ ಹೆಸರಿನಲ್ಲಿ ಐವತ್ತು ಲಕ್ಷ ರೂಪಾಯಿಗಳನ್ನು ಇಡುಗಂಟಾಗಿರಿಸಿದ. ಕೊರೋನಾದಿಂದ ನೊಂದವರಿಗೆ, ಬಡವರಿಗೆ ಸಾಕಷ್ಟು ದಾನಧರ್ಮಗಳನ್ನು ಮಾಡಿದ.ಶ್ರೀರಂಗಪಟ್ಟಣದಲ್ಲಿ ಧಾರ್ಮಿಕ ಕಾರ್ಯಗಳಿಗೆ ಕೊಡುಗೈಯಾದ. ಸಾವಿರಾರು ಜನರಿಗೆ ಆಹಾರ ಧಾನ್ಯಗಳನ್ನು ನೀಡಿದ. ಸಮಾಜದಲ್ಲಿ ಗಣ್ಯವ್ಯಕ್ತಿಯೂ ಆದ, ವ್ಯಾಪಾರದಲ್ಲಿಯೂ ಮುಂದುವರಿದು ಹಣವಂತನಾದ. ಆದರೆ ಅವನ ತಾಯಿ ನಿಧನರಾಗಿದ್ದರು. ಇದನ್ನು ಅವರು ಕಾಣಲಾಗಲಿಲ್ಲ.
ನಿಶ್ಚಲಳ ತಂದೆಯೂ ನಿಧನರಾಗಿ ತಾಯಿ ತಮ್ಮ ಮಗನೊಡನೆ ಇರಲು ಹೋಗುವವರೆಂದಾಗ ಮಗಳು ನಿಶ್ಚಲ ತನ್ನ ಮನೆಯಲ್ಲಿ ಒಂಟಿಯಾಗಿರುತ್ತಾಳೆಂದು ಕಾರ್ತೀಕನನ್ನು ಅವಳಿಗೆ ಒತ್ತಾಸೆಯಾಗಿರುವಂತೆ ಮನವಿ ಮಾಡಿಕೊಂಡರು. ಮಕ್ಕಳಂತೂ ಅವನೊಡನೆ ವಾರಾಂತ್ಯದಲ್ಲಿ ಮತ್ತು ರಜಾಕಾಲದಲ್ಲಿ ತುಂಬ ಸಂತೋಷವಾಗಿರುತ್ತಿದ್ದರು ಆ ಕ್ಷಣಗಳನ್ನು ತಾಯಿಯೊಡನೆ ಹಂಚಿಕೊಳ್ಳುತ್ತಿದ್ದರು. ಅವರ ನಡವಳಿಕೆಗಳಲ್ಲಿಯೂ ಧನಾತ್ಮಕ ಬದಲಾವಣೆಗಳು ತಲೆದೋರಿದ್ದವು. ಕ್ರಮೇಣ ನಿಶ್ಚಲಳಿಗೆ ಕಾರ್ತೀಕನ ಬಗ್ಗೆ ಮೃದು ಭಾವನೆ ಮೂಡತೊಡಗಿತ್ತು. ಒಮ್ಮೆ ಬಹಳ ಕಾಲದ ನಂತರ ಅವನ ಹೊಸಮನೆ ಮತ್ತು ಅಂಗಡಿಯನ್ನು ನೋಡಲು ಬಂದಾಗ ಅಲ್ಲಿ ಆಗಿದ್ದ ಬದಲಾವಣೆಗಳು ಅವಳಿಗೆ ಆಶ್ಚರ್ಯ ಉಂಟುಮಾಡಿದವು. ಅವಳು ಬಯಸುವ ಐಷಾರಾಮಿ ಜೀವನ ನಡೆಸಲು ಎಲ್ಲವೂ ಅಲ್ಲಿ ದೊರೆಯುವಂತಿದ್ದವು. ಆಗ ತನ್ನ ತಾಯಿಯು ಹಿಂದಿನದೆಲ್ಲವನ್ನು ಮರೆತು ಮಕ್ಕಳಿಗಾಗಿ ಕಾರ್ತೀಕನೊಡನೆ ಒಂದಾಗಿರುವಂತೆ ಹೇಳಿದ್ದ ಒತ್ತಾಯದ ಮಾತುಗಳಿಗೆ ಮಣ ಯಲು ಅವಳ ಮನಸ್ಸು ಸಿದ್ಧವಾಯಿತು. ಅದಕ್ಕೆ ಕಾರ್ತೀಕನ ಅನುಮತಿ ದೊರೆಯುತ್ತದೆಯೋ ಇಲ್ಲವೋ ಎಂಬ ಆತಂಕ ಅವನೊಡನೆ ಮಾತನಾಡಿದಾಗ ದೂರಾಯಿತು. ಲಾಕ್‌ಡೌನ್ ಪರಿಸ್ಥಿತಿಯಿಂದಾಗಿ ಅವರಿಬ್ಬರಲ್ಲಿ ರಾಜಿಯಾಗಿ ಮಕ್ಕಳು ಮತ್ತು ಕಾರ್ತೀಕನೊಡನೆ ಬಾಳಲು ಸಿದ್ಧಳಾದಳು.
ಪ್ರೀತಿಯ ಕರೆ:
ಇದು ಭಾವನಾತ್ಮಕವಾದ ಮನಸ್ಸುಗಳ ಸಂಬಂಧದ ಕಥೆ. ಚಾರುಲತಾ ಪುರುರವ ಕಾಲೇಜಿನ ಸಹಪಾಠಿಗಳು, ಇಬ್ಬರೂ ಕನ್ನಡಾಭಿಮಾನಿಗಳು. ಪಠ್ಯೇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಪರಸ್ಪರ ಅಭಿಮಾನಿಗಳೂ ಆಗಿದ್ದರು. ಪುರೂರವ ಚೆಲುವಾದ ಹುಡುಗ. ಅವನನ್ನು ಮನಸಾರೆ ಚಾರುಲತಾ ಪ್ರೀತಿಸಲು ತೊಡಗಿದಳು. ಆದರೆ ಅವನೊಬ್ಬ ಕಂಡಕ್ಟರನ ಮಗ. ಚಾರುಲತಾ ಶ್ರೀಮಂತ ಎಂ.ಎಲ್.ಎ. ಗುಣಶೇಖರರ ಪುತ್ರಿ. ಬಯಸಿದರೂ ಅವರಿಬ್ಬರ ಜೋಡಿ ಸಾಧ್ಯವಾಗುವಂತಿರಲಿಲ್ಲ. ಗುಣಶೇಖರ್ ಮುಂದೆ ಮಂತ್ರಿಯಾಗುವ ಆಕಾಂಕ್ಷೆ ಹೊತ್ತವರು. ಹೀಗಾಗಿ ತಮ್ಮ ಮಗಳನ್ನು ವಿದ್ಯಾಮಂತ್ರಿಗಳಾಗಿದ್ದ ಪ್ರಭಾವಿ ರಾಜಕಾರಣ ಜಯಕುಮಾರರ ಪುತ್ರ ವಿಜಯಕುಮಾರನೊಡನೆ ನಿಶ್ಚಯಿಸಿದರು. ಮಗಳು ಒತ್ತಾಯಕ್ಕೆ ಮದುವೆಯಾದರೂ ಅವರಪ್ಪ ಮಂತ್ರಿ ಪದವಿ ಗಳಿಸಿಕೊಂಡರು. ಅವಳ ಪತಿ ಮುಂದೆ ಮುಖ್ಯಮಂತ್ರಿಯಾದ. ಇದಕ್ಕಿಂತ ಹೆಗ್ಗಳಿಕೆಯೇನು ಬೇಕು ಎಂದು ಬೀಗಿದರು.
ಲೋಕಾರೂಢಿ ಚಾರುಲತಾಳಿಗೆ ಇಬ್ಬರು ಮಕ್ಕಳೂ ಆಗಿ ಅವರು ಬೆಳೆದು ಓದುಮುಗಿಸಿ ತಮಗೆ ಇಷ್ಟವಾದವರನ್ನು ಮದುವೆಯಾಗಿ ವಿದೇಶದಲ್ಲಿ ನೆಲೆಸಿದರು. ಆಕೆಯ ಗೆಳೆಯನಾಗಿದ್ದ ಪುರೂರವ ಓದು ಮುಗಿಸಿ ಒಳ್ಳೆಯ ಉದ್ಯೋಗಹೊಂದಿ ಭುವನಳನ್ನು ಮದುವೆಯಾಗಿ ಅಮೆರಿಕಾದಲ್ಲಿ ಕೆಲಸಮಾಡುತ್ತಿದ್ದ. ಆತನಿಗೆ ಎರಡು ಗಂಡು ಮಕ್ಕಳಾದ ಮೇಲೆ ಗಂಡಹೆಂಡತಿ ಬೇರೆಯಾಗಿದ್ದರು. ಒಂಟಿಯಾಗಿದ್ದ ಪುರೂರವನಿಗೆ ಇತ್ತೀಚೆಗೆ ಬ್ಲಡ್‌ಕ್ಯಾನ್ಸರ್ ಖಾಯಿಲೆ ಬಂದಿದ್ದು ಅವನು ತಾನು ಸಾಯುವುದಿದ್ದರೆ ಭಾರತದಲ್ಲಿಯೇ ಸಾಯುವುದಾಗಿ ನಿರ್ಧರಿಸಿ ಹಿಂದಿರುಗಿ ಬಂದಿದ್ದ. ಅವನ ಬಂಧುವಾದ ಕೃಷ್ಣವೇಣ ಅವನನ್ನು ಮಡಿಕೇರಿಯಲ್ಲಿ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವ್ಯವಸ್ಥೆ ಮಾಡಿದ್ದಳು. ಈ ವಿಷಯ ಚಾರುಲತಾಗೆ ತಿಳಿದುಬಂದಾಗ ಅವಳ ಹೃದಯ ತಲ್ಲಣ ಸಿತು. ಆತನನ್ನು ಕಾಣಲು ಮಡಿಕೇರಿಗೆ ಬಂದಳು. ಅಲ್ಲದೆ ಅವನ ಶುಶ್ರೂಷೆಯ ಜವಾಬ್ದಾರಿಯನ್ನೂ ಅವಳೇ ವಹಿಸಿಕೊಂಡಳು. ಕೆಲವು ದಿನಗಳು ಹಳೆಯ ಪ್ರೇಮಿಗಳು ಸಾಮೀಪ್ಯದ ಮಧುರ ಕ್ಷಣಗಳನ್ನು ಕಳೆಯುತ್ತಾರೆ. ಮುಂದಿನ ಜನ್ಮದಲ್ಲಿಯಾದರೂ ತಮ್ಮಿಬ್ಬರ ಸಮಾಗಮ ಸಾಧ್ಯವಾಗಲೆಂದು ಬಯಸುತ್ತಾರೆ. ಕೊನೆಗೆ ಪುರೂವಿನ ಅಂತ್ಯವಾದ ಮರುಕ್ಷಣವೇ ಚಾರುಲತಾಳ ಪ್ರಾಣಪಕ್ಷಿಯೂ ಹಾರಿಹೋಗುತ್ತದೆ. ಹಿಂದಿನ ಕಾಲದಲ್ಲಿ ನಾವು ನೋಡಿದ ಸೆಂಟಿಮೆಂಟಲ್ ಚಲನಚಿತ್ರದಲ್ಲಿ ಪ್ರೇಮಿಗಳಿಬ್ಬರೂ ಸಾಯುತ್ತಿದ್ದಂತೆ ದೃಶವಿಲ್ಲಿ ಮೂಡಿಬಂದಿದೆ.
ಬಾಳಗೆಳತಿ:
ರಾಜೀವನ ತಂದೆಯಯವರು ಕಂಟ್ರಾಕ್ಟರ್ ವಿಶ್ವನಾಥಯ್ಯನವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ವಿಶ್ವನಾಥಯ್ಯನವರ ಪುತ್ರಿ ಮೇನಕಾ ರಾಜೀವನ ಕಾಲೇಜ್ ಸಹಪಾಠಿ. ಆಕೆ ಶ್ರೀಮಂತಿಕೆಯನ್ನು ಅಸ್ತ್ರವಾಗಿರಿಸಿಕೊಂಡು ರಾಜೀವನನ್ನು ತನ್ನ ಗುಲಾಮನಂತೆ ನಡೆಸಿಕೊಳ್ಳುತ್ತಿದ್ದಳು. ಅವಳಿಗೆ ಓದಿನಲ್ಲಿ ಆಸಕ್ತಿಯಿರಲಿಲ್ಲ. ಬಣ್ಣದ ಚಿಟ್ಟೆಯಂತೆ ಮೆರೆಯುವುದೊಂದೇ ಅವಳ ಬಯಕೆ. ಬಲವಂತವಾಗಿ ರಾಜೀವನ ಮೇಲೆ ತನ್ನ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿದ್ದಳು. ಅವನ ತಂದೆ ಮೇನಕಾಳ ಮನೆಯಲ್ಲಿ ದುಡಿಯುತ್ತಿದ್ದು ಆ ದಾಕ್ಷಿಣ್ಯದಿಂದ ಅವನು ಅವಳನ್ನು ಎದುರು ಹಾಕಿಕೊಳ್ಳಲೂ ಸಾಧ್ಯವಿರಲಿಲ್ಲ. ರಾಜೀವನ ತಂದೆ ತೀರಿಕೊಂಡಾಗ ವಿಶ್ವನಾಥಯ್ಯನವರು ತಾವೇ ಮುಂದಾಗಿ ನಿಂತು ಎಲ್ಲ ಕಾರ್ಯಗಳನ್ನೂ ಮಾಡಿಸಿದ್ದರು. ಈ ಉಪಕಾರದ ಭಾರವೂ ಅವನ ಮೇಲಾಯ್ತು. ಮಗಳ ಒತ್ತಾಯಕ್ಕೆ ಮಣ ದು ವಿಶ್ವನಾಥಯ್ಯನವರೇ ರಾಜೀವನ ತಾಯಿಯ ಬಳಿಗೆ ಬಂದು ರಾಜೀವನನ್ನು ತಮ್ಮ ಮನೆ ಅಳಿಯನಾಗುವಂತೆ ಒಪ್ಪಿಸಲು ಪ್ರಸ್ತಾಪಿಸಿದರು. ಆದರೆ ರಾಜೀವನ ತಾಯಿ ಶಂಕರಮ್ಮ ದಾಕ್ಷಿಣ್ಯದ ಉರುಳಿಗೆ ಮಗ ಬಲಿಯಾಗಬಾರದೆಂದು ಮುಂದಾಲೋಚಿಸಿ ಧಿಢೀರ್ ಎಂದು ತಮ್ಮ ಅಣ್ಣ ಜಗನ್ನಾಥನ ಮಗಳು ಮೀನಾಕ್ಷಿಯನ್ನು ಮಗನಿಗೆ ಮದುವೆ ಮಾಡಿಸಿಬಿಟ್ಟರು.
ಮೀನಾಕ್ಷಿ ಗಟ್ಟಿಗಿತ್ತಿ, ಕೆಲಸಗಾರ್ತಿ. ಸಣ್ಣ ಕೆಲಸದಲ್ಲಿದ್ದ ರಾಜೀವನ ಕೆಲಸ ಹೋದಾಗ ಅವನಿಗೆ ಧೈರ್ಯತುಂಬಿ ತಾನೇ ಮುಂದಾಗಿ ಸಣ್ಣದಾಗಿ ಹೋಟೆಲ್ ವ್ಯಾಪಾರ ಪ್ರಾರಂಭಿಸಿದಳು. ಗಂಡ ಹೆಂಡತಿ ಅದರಲ್ಲಿಯೇ ಮುಂದುವರಿದು ದೊಡ್ಡ ಹೋಟೆಲಿನ ಮಾಲೀಕನಾಗಿ ಹಣ ಗಳಿಸಿ ಶ್ರೀಮಂತನಾದ. ಆದರೆ ಅವನ ಅದೃಷ್ಟ ದೇವತೆ ಮೀನಾಕ್ಷಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾದಳು. ರಾಜೀವನಿಗೆ ತನ್ನ ಮಕ್ಕಳನ್ನು ನೋಡಿಕೊಳ್ಳುವುದು ಹೆಚ್ಚಿನ ಜವಾಬ್ದ್ದಾರಿಯಾಗಿತ್ತು. ಈ ಸಮಯದಲ್ಲಿ ಎಂದೋ ಕಳೆದುಹೋಗಿದ್ದ ಪಿಡುಗು ಮರುಕಳಿಸಿದಂತೆ ಮತ್ತೆ ಮೇನಕಾ ಕಾಣಿಸಿಕೊಂಡಳು. ರಾಜೀವನನ್ನು ತಾನು ಮದುವೆಯಾಗುತ್ತೇನೆ ಹಾಗೂ ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿನಲ್ಲಿ ಕಲಿಯುವಂತೆ ಮಾಡಿ ಆತನಿಗಾಗಿ ವೈಭವೋಪೇತ ಹೋಟೆಲ್ ತೆರೆಯೋಣವೆಂದು ಆಮಿಷವೊಡ್ಡಿ ಆತನ ಪ್ರತಿಕ್ರಿಯೆ ನಿರೀಕ್ಷಿಸಿದಳು. ಈಗ ರಾಜೀವ ಎಚ್ಚೆತ್ತುಕೊಂಡು ತನ್ನ ಮಕ್ಕಳಿಗೂ ತಾಯಿಯಾಗುವಂತಹ ಸೋದರ ಮಾವನ ಮಗಳು ಕಾಮಾಕ್ಷಿಯನ್ನು ದಿಢೀರ್ ಎಂದು ಮದುವೆಯಾಗಿ ತನ್ನ ತಾಯಿ ಹಿಂದೆ ಮಾಡಿದಂತೆಯೇ ಉಪಾಯಮಾಡಿದ. ನಿಜವಾದ ಬಾಳ ಗೆಳತಿಯೆಂದರೆ ಪತ್ನಿಯಷ್ಟೇ ಅಲ್ಲ ತನ್ನ ಮಕ್ಕಳಿಗೆ ಪ್ರೀತಿ ಕೊಡುವ ತಾಯಿಯೂ ಆಗಿರಬೇಕೆಂಬುದೇ ಆಶಯ.
ಮನದೊಳಗಿನ ಕಿಚ್ಚು:
ಭುವನ ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ತುಂಬಾ ಚೆಲುವೆ. ಮಧ್ಯಮ ವರ್ಗದ ಕುಟುಂಬದವಳಾದ್ದರಿಂದ ಅವರ ಮನೆಯವರೆಗೆ ಹುಡುಕಿ ಬಂದ ಶ್ರೀಮಂತ ವಕೀಲ ಕಿಶೋರನ ವಿವಾಹ ಸಂಬಂಧವನ್ನು ಖುಷಿಯಿಂದಲೇ ಒಪ್ಪಿದ್ದಳು. ಅವಳು ದುಡಿಯುವ ಕೆಲಸ ಬಿಟ್ಟರೂ ಬಯಸಿದ ಐಷಾರಾಮಗಳೆಲ್ಲವೂ ಅವಳಿಗೆ ದೊರಕಿದ್ದವು. ಇಬ್ಬರು ಮಕ್ಕಳೂ ಜನಿಸಿ ಅವಳ ಬದುಕು ಸುಖೀ ಕುಟುಂಬವಾಗಿತ್ತು. ಆದರೆ ಆಕೆ ಮನವೆಂಬ ಮರ್ಕಟದ ಬೆನ್ನುಹತ್ತಿ ಪ್ರೀತಿಯ ಗಂಡನನ್ನು ಬಿಟ್ಟು ಮೋಜುಗಾರ ರಾಮಪ್ರಸಾದನ ಹಿಂದೆ ಹೋದಳು. ತಾನಾಗಿಯೇ ಬದುಕಿಗೆ ಕೊಳ್ಳಿಯಿಟ್ಟುಕೊಂಡಳು. ಅಲ್ಪ ಕಾಲದ ಶೋಕಿಲಾಲನ ಸಹವಾಸದ ನಂತರ ಅವನಿಂದ ಪಾಪಕೂಪಕ್ಕೆ ತಳ್ಳಲ್ಪಟ್ಟಳು. ಕೆಟ್ಟಮೇಲೆ ಬುದ್ಧಿಬಂತೆನ್ನುವಂತೆ ಅಲ್ಲಿಂದ ಪಾರಾಗಿ ಗೆಳತಿಯೋರ್ವಳ ಆಶ್ರಯದಲ್ಲಿದ್ದಳು. ಆಗ ತನ್ನ ಪತಿಯಾಗಿದ್ದ ಕಿಶೋರನನ್ನು ಸಂಪರ್ಕಿಸಿದಳು. ಆತನೊಡನೆ ಮಾತನಾಡಲು ಬಯಸಿದಳು. ಅದಕ್ಕಾಗಿ ಸಮಯವನ್ನು ನಿಗದಿಪಡಿಸಿಕೊಂಡಿದ್ದಳು. ಆದರೆ ಆ ಸಮಯಕ್ಕೆ ಸರಿಯಾಗಿ ಅವಳನ್ನು ಭೇಟಿಯಾಗಲು ಕಿಶೋರ ಬರಲಿಲ್ಲ ಬದಲಾಗಿ ಅವಳ ಮಗಳಾದ ಸುರಭಿ ಬಂದಳು. ಆಕೆ ಭುವನಳನ್ನು ತಮ್ಮನ್ನೆಲ್ಲಾ ವಿನಾಕಾರಣ ತೊರೆದು ಹೋಗಿ ಕುಟುಂಬದವರನ್ನು ಅನೇಕ ರೀತಿಯ ಅವಮಾನಗಳಿಗೆ ಗುರಿಯಾಗುವಂತೆ ಮಾಡಿದವಳು ಯಾವುದೇ ಕಾರಣಕ್ಕೂ ತಮ್ಮ ಮನೆಗೆ ತನ್ನ ತಂದೆ ಒಪ್ಪಿದ್ದರೂ ಬರಕೂಡದೆಂದು ನಿರ್ದಾಕ್ಷಿಣ್ಯವಾಗಿ ಹೇಳಿದಳು. ಬೇಕಿದ್ದರೆ ಅವಳ ಆರ್ಥಿಕ ಮುಗ್ಗಟ್ಟಿಗೆ ತಂದೆಯಿಂದ ಪ್ರತಿ ತಿಂಗಳೂ ಇಷ್ಟೆಂದು ಹಣ ಕೊಡಿಸುವುದಾಗಿ ಹೇಳಿದಳು. ಭುವನಳಿಗೆ ಕಿಶೋರನ ಕರುಣೆಯ ಆಶಾಕಿರಣವೂ ಇದರಿಂದಾಗಿ ಮಾಯವಾಯಿತು. ಆಗ ಆಕೆಯನ್ನು ಕಾಪಾಡಿದ್ದ ಡಾ. ಆನಂದಿಯವರು ಸಂಕಟ ಸಮಯದಲ್ಲಿ ಸಂಪರ್ಕಿಸಲು ನೀಡಿದ್ದ ಫೋನ್ ನಂಬರ್ ನೆರವಾಯಿತು. ಅದೊಂದು ಅನಾಥಾಲಯ. ಅಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಸಿಕ್ಕಿ ಅವಳಿಗೆ ಬದಕಲು ನೆಲೆಯಾಯಿತು. ಸ್ಯಯಂಕೃತ ಅಪರಾಧದಿಂದ ಚಂದದ ಬದುಕನ್ನು ಹಾಳು ಮಾಡಿಕೊಂಡ ಹೆಣ್ಣಿನ ಕಥೆಯಿದು.
ಮನವೆಂಬ ಮರ್ಕಟ:
ಸುರಭಿ ಎಂಬ ಶ್ರೀಮಂತ ಯುವತಿಯ ಚಂಚಲ ಚಿತ್ತದ ಅನಾವರಣವಿಲ್ಲಿದೆ. ಅವಳು ಅವರ್‍ನ ಬಿಟ್ಟು ಇವರ್‍ನ, ಇವರ್‍ನ ಬಿಟ್ಟು ಮತ್ಯಾರನ್ನೋ ಮದುವೆಯಾಗುವ ಚಪಲದೊಂದಿಗೆ ಮಂಗನಾಟ ಆಡುತ್ತಾಳೆ. ಇದರಿಂದಾಗಿ ಅವಳನ್ನು ಯಾರೂ ಮದುವೆಯಾಗಲಿಲ್ಲ. ಅವಳು ಏನೇನೋ ಕೊಂಕು ತೆಗೆದು ತಿರಸ್ಕರಿಸಿದ ಗಂಡುಗಳು ಇವಳಿಗಿಂತ ಉತ್ತಮವಾದ ಹುಡುಗಿಯರನ್ನು ಮದುವೆಯಾಗಿ ಸುಖವಾಗಿದ್ದರು. ಅಂಥಹವರಲ್ಲಿ ಅವಳ ಗೆಳತಿ ಅಲಕಾ ಕೂಡ ಒಬ್ಬಳು. ಸುರಭಿ ಬೇಡವೆಂದ ಪುಷ್ಕರನನ್ನು ವರಿಸಿ ನೆಮ್ಮದಿಯಾಗಿದ್ದಳು. ಸುರಭಿಗೆ ಯಾರು ಸಲಹೆ ಕೊಟ್ಟರೂ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಅವಳ ಜೂಟಾಟ ಮುಂದುವರಿದಿತ್ತು. ಅದನ್ನು ನೋಡಿ ಅವಳ ಗೆಳತಿ ಅಲಕಾ ತನ್ನ ಕೊನೆಯ ಪ್ರಯತ್ನವಾಗಿ ಒಳ್ಳೆಯ ಅವಕಾಶಗಳು ಪದೇಪದೇ ಸಿಗುವುದಿಲ್ಲ. ದಿನಗಳು ಉರುಳಿದಂತೆ ನಿನಗೂ ವಯಸ್ಸು ಮುಂದಕ್ಕೆ ಹೋಗುತ್ತಿರುತ್ತದೆ. ಇದನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಎಚ್ಚರಿಕೆಯ ಮಾತುಗಳನ್ನು ತಿಳಿಸುತ್ತಾಳೆ. ಆಗ ಸುರಭಿಗೆ ನಿಜದರಿವು ಮೂಡಿ ಸಾತ್ವಿಕ್ ಎಂಬ ವರನನ್ನು ತಿರುಪತಿಯಲ್ಲಿ ವಿವಾಹವಾಗಿ ಗೆಳತಿಯ ಮನೆಗೆ ಪತಿಯೊಡನೆ ಆಗಮಿಸುತ್ತಾಳೆ. ಮಂಗನಾಟಕ್ಕೂ ಜೀವನದ ಪಾಠಕ್ಕೂ ಹೊಂದಾಣಿಕೆಯಾಗದು ಎಂಬುದು ಇಲ್ಲಿನ ತತ್ವ.
ತೊಡಕು:
ಕೆಲವು ಜನರ ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳು ನಡೆದು ಅವುಗಳಿಂದ ನಿರಂತರವಾಗಿ ಅನೇಕ ರೀತಿಯ ತೊಡಕುಗಳು ಎದುರಾಗುತ್ತಲೇ ಇರುತ್ತವೆ. ಇದೊಂದು ಆಕಸ್ಮಿಕವಷ್ಟೇ. ಭೂಮಿಕಾ ಚೆನ್ನಾಗಿ ಓದಿ ಇಂಜಿನಿಯರಾಗುವ ಕನಸು ಹೊತ್ತವಳು. ಆದರೆ ಅನಿರೀಕ್ಷಿತವಾಗಿ ಆಕೆಯ ಚಿಕ್ಕಮ್ಮನ ಮೂಲಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದ ವೇಣು ಗೋಪಾಲನನ್ನು ಮದುವೆಯಾಗಲು ಪ್ರಸ್ತಾಪ ಬರುತ್ತದೆ. ಆಕೆಯ ತಂದೆತಾಯಿಗಳು ಇದು ಒಳ್ಳೆಯ ಸಂಬಂಧವೆಂದು ಆಕೆಯನ್ನು ಒಪ್ಪಿಸುತ್ತಾರೆ. ಪಿ.ಯು.ಸಿ. ಓದನ್ನು ಅಷ್ಟಕ್ಕೇ ಬಿಟ್ಟು ತನ್ನ ಹದಿನೆಂಟನೆಯ ವಯಸ್ಸಿಗೆ ಮದುವೆಯಾಗುತ್ತಾಳೆ. ಪ್ರಾರಂಭದಲ್ಲಿ ಅವಳಿಗೆ ಇದು ಒಳ್ಳೆಯ ಆಯ್ಕೆಯಂತೆ ಕಂಡುಬಂದರೂ ವೈವಾಹಿಕ ಜೀವನದಲ್ಲಿ ಗರ್ಭಿಣಿಯಾಗಿ ಎರಡು ಬಾರಿ ಅಬಾರ್ಷನ್ ಆಗಿ ಮೂರನೆಯ ಬಾರಿ ಮುನ್ನೆಚ್ಚರಿಕೆಯಾಗಿ ತಂದೆಯ ಮನೆಯಲ್ಲಿ ದೀರ್ಘಕಾಲ ಉಳಿಯುತ್ತಾಳೆ. ಆಗ ಹುಟ್ಟಿದ ಮಗಳು ಬಕುಳಾಳಿಗೆ ಹನ್ನೊಂದು ತಿಂಗಳಾದಾಗ ಪತಿಗೃಹಕ್ಕೆ ಹಿಂದಿರುಗುತ್ತಾಳೆ. ಅಷ್ಟೊತ್ತಿಗೆ ಆಕೆಯ ಮನೆಯಲ್ಲಿ ಇನ್ನೊಂದು ಅನಿರೀಕ್ಷಿತ ಬದಲಾವಣೆಯಾಗಿರುತ್ತದೆ. ಆಕೆಯ ಗಂಡ ಗುಪ್ತವಾಗಿ ಬೇರೆ ಜಾತಿಯ ಇನ್ನೊಬ್ಬಳನ್ನು ವಿವಾಹವಾಗಿದ್ದನು. ಅವನಿಗೆ ಬುದ್ಧಿ ಹೇಳಿಸಲೋಸುಗ ತಂದೆಯ ಮನೆಗೆ ಹೋಗಿ ಗಂಡನನ್ನು ಅಲ್ಲಿಗೆ ಬರುವಂತೆ ಮಾಡುತ್ತಾಳೆ. ಅವನು ಬಂದ ಮರುದಿನ ಬೆಳಗ್ಗೆ ಇನ್ನೊಂದು ಅನಿರೀಕ್ಷಿತ ಘಟನೆ ನಡೆಯುತ್ತದೆ. ಆಕೆಯ ಗಂಡ ವೇಣುಗೋಪಾಲನನ್ನು ಬೇರೆಬೇರೆ ಹೆಸರಿನಲ್ಲಿ ಅನೇಕ ಹೆಣ್ಣುಗಳನ್ನು ಮದುವೆಯಾಗಿದ್ದ ಮೋಸಗಾರನೆಂಬ ಆರೋಪದ ಮೇಲೆ ಪೋಲೀಸಿನವರು ಬಂಧಿಸುತ್ತಾರೆ. ಇದರಿಂದಾಗಿ ಅವನಿಂದ ಬಿಡುಗಡೆಯಾಗಲು ಅರ್ಜಿ ದಾಖಲಿಸಿ ನ್ಯಾಯಾಲಯದಿಂದ ವಿಚ್ಛೇದನ ಪಡೆಯುತ್ತಾಳೆ. ಆದರೆ ಮಗಳ ಪಾಲನೆಗಾಗಿ ಭೂಮಿಕಾಳಿಗೆ ತಿಂಗಳಿಗೆ ಹತ್ತುಸಾವಿರ ರೂಗಳನ್ನು ನೀಡಬೇಕೆಂದು ಕೋರ್ಟ್ ಆದೇಶವಿದ್ದರೂ ಆತ ಒಂದು ಕಾಸೂ ಇವಳಿಗೆ ನೀಡುವುದಿಲ್ಲ. ಅವಳು ಕೆಲಸ ಮಾಡುತ್ತಿದ್ದ ಶಾಲೆಯ ಪ್ರಿನ್ಸಿಪಾಲರು ಸಹಾಯಹಸ್ತ ನೀಡಿದ್ದರಿಂದ ಆಕೆ ಓದನ್ನು ಮುಂದುವರಿಸಿ ಬಿ.ಇ. ಪದವಿ ಪಡೆದು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಇಂಜಿನಿಯರಾಗುತ್ತಾಳೆ. ಅದೇ ಕಂಪನಿಯ ಸೀನಿಯರ್ ಇಂಜಿನಿಯರ್ ಹರೀಶ್ ಪಟೇಲ್ ಎಂಬ ವಿಧುರನಿಗೆ ಆಕೆ ಇಷ್ಟವಾದಳು. ಆತ ಇವಳ ಹಿನ್ನೆಲೆಯನ್ನೆಲ್ಲ ತಿಳಿದುಕೊಂಡು ತಾನು ಅವಳ ಮಗಳು ಮತ್ತು ಅವಳ ತಂದೆತಾಯಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಒಪ್ಪಿಕೊಂಡು ಆಕೆಯ ಕೈ ಹಿಡಿಯಲು ಸಿದ್ಧವಾಗಿ ಅವಳ ಒಪ್ಪಿಗೆ ಕೋರುತ್ತಾನೆ. ಆಕೆಯು ಸಂತೋಷದಿಂದ ತಂದೆತಾಯಿಯರಿಗೆ ವಿಷಯ ತಿಳಿಸಿ ಅವರ ಮನವೊಲಿಸುವ ಭರವಸೆಯಿಂದ ಊರಿಗೆ ಬರುತ್ತಾಳೆ. ಈ ಮಧ್ಯದ ಸಮಯದಲ್ಲಿ ಮಗಳನ್ನು ಪಾಲನೆ ಪೋಷಣೆ ನೋಡಿಕೊಳ್ಳಲು ಆಕೆಯ ತಂದೆತಾಯಿಗಳ ಬಳಿ ಬಿಟ್ಟಿದ್ದಳು. ಅವರು ಮೊಮ್ಮಗಳಿಗೆ ತುಂಬ ಸಲುಗೆ ನೀಡಿ ಬೆಳೆಸಿದ್ದರು. ಇದರ ಫಲವಾಗಿ ಬಕುಳಾ ಸ್ವೇಚ್ಛಾಚಾರಿಯಾಗಿ ಹುಡುಗನೊಬ್ಬನ ಜೊತೆಯಲ್ಲಿ ಚಕ್ಕಂದವಾಡಿ ಗರ್ಭಿಣಿಯಾಗಿದ್ದಳು. ಈ ಗುಟ್ಟು ರಟ್ಟಾಗುವ ಮೊದಲು ಉಳಿದಿರುವ ಒಂದೇ ಉಪಾಯವೆಂದರೆ ಅವಳಿಗೆ ಅದೇ ಹುಡುಗನ ಜೊತೆ ಗುಟ್ಟಾಗಿ ಮದುವೆಯನ್ನಾದರೂ ಮಾಡಿಸಿ ಅವಮಾನವನ್ನು ತಪ್ಪಿಸಿಕೊಳ್ಳುವ ಸಲಹೆಯನ್ನು ಆಕೆಯ ತಂದೆತಾಯಿಗಳು ನೀಡಿದರು. ಅಂತೂ ಬದುಕಿನಲ್ಲಿ ಒಂದು ಸುಖದ ಘಟ್ಟಮುಟ್ಟುವ ಆಸೆ ಹೊತ್ತು ಬಂದಿದ್ದ ಭೂಮಿಕಾಳಿಗೆ ಈ ಸಾರಿ ಆಕೆಯ ಮಗಳೇ ತೊಡಕಾಗಿ ಪರಿಣಮಿಸಿದ್ದಳು. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಭೂಮಿಕಾಳಿಗೆ ಜೀವನದಲ್ಲಿ ನೆಮ್ಮದಿ ಸಿಗುವುದೇ ಇಲ್ಲ.
ಆಯ್ಕೆ:
ಲಲಿತಮ್ಮ ಮಂಡ್ಯದ ಬಳಿಯಲ್ಲಿ ಧನಗಳ್ಳಿಯ ಜಮೀನುದಾರರ ಮನೆಗೆ ಸೊಸೆಯಾಗಿ ಬಂದಿದ್ದಳು.ಶಂಕರಪ್ಪ, ಪಾರ್ವತಮ್ಮ ಆಕೆಯ ಮಾವ ಮತ್ತು ಆತ್ತೆ ತುಂಬ ಒಳ್ಳೆಯವರು. ಅವರ ಮೊದಲ ಮಗನೇ ವಿಶ್ವನಾಥ ಆಕೆಯ ಗಂಡ. ದೊಡ್ಡಮನೆ, ಆಳುಕಾಳು, ಮನೆತುಂಬ ದವಸ ಧಾನ್ಯ, ಸಂಪದ್ಭರಿತವಾಗಿದ್ದ ಕುಟುಂಬ. ಶಂಕರಪ್ಪನವರು ಬದುಕಿರುವವರೆಗೆ ಚೆನ್ನಾಗಿಯೇ ಇತ್ತು. ಅವರ ಅವಸಾನದ ನಂತರ ಯಜಮಾನಿಕೆ ವಿಶ್ವನಾಥನ ಕೈಸೇರಿದಾಗ ಅವನ ವರೆಸೆಯೇ ಬದಲಾಯಿತು. ಜೂಜು, ಕುಡಿತ, ಮಂಡ್ಯಕ್ಕೆ ಬಂದಿದ್ದ ನಾಟಕ ಕಂಪನಿಯ ಹೆಣ್ಣೊಂದರ ಸಹವಾಸ ಮಾಡಿ ಆಸ್ತಿಗಳು ಒಂದೊಂದಾಗಿ ಕರಗತೊಡಗಿದವು. ತಲೆತುಂಬ ಸಾಲಮಾಡಿಕೊಂಡು ತೀರಿಸಲಾಗದೆ ಅವರಿದ್ದ ದೊಡ್ಡ ಮನೆಯನ್ನೂ ಯಾರಿಗೋ ಮಾರಿಕೊಂಡಿದ್ದ. ಮನೆಯನ್ನು ಕೊಂಡವರು ಅವಳಲ್ಲಿಗೆ ಬಂದು ೫೦೦೦೦ ರೂಗಳನ್ನು ನೀಡಿ ತಾವು ಮನೆಯನ್ನು ಕ್ರಯಕ್ಕೆ ಕೊಂಡಿದ್ದೇವೆ. ಕೆಲವೇ ದಿನಗಳಲ್ಲಿ ಮನೆಖಾಲಿ ಮಾಡಿಕೊಡಿ ಎಂದು ಹೇಳಿಹೋದರು. ಆಕೆಯ ಗಂಡ ವಿಶ್ವನಾಥ ಯಾರೊಡನೆಯೋ ಕೊಟ್ಟುಹೋಗಿದ್ದ ಒಂದು ಸಾಲಿನ ಪತ್ರ ದೊರಕಿತು. ಅದರಲ್ಲಿ ತಾನು ಸನ್ಯಾಸಿಯಾಗಿ ಹೋಗುತ್ತಿದ್ದೇನೆಂದು ತಿಳಿಸಿದ್ದ. ಲಲಿತಮ್ಮನಿಗೆ ಆಕಾಶವೇ ಕಳಚಿಬಿದ್ದಂತಾಯ್ತು. ಅವರತ್ತೆಯ ತಮ್ಮ ಅನಂತಸ್ವಾಮಿಯವರ ನೆರವಿನಿಂದ ಆಕೆ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಮಕ್ಕಳೊಡನೆ ವಾಸಿಸಿ ತನ್ನ ಜೀವನಕ್ಕಾಗಿ ಟೈಲರಿಂಗ್ ಮಾಡಿ ಸಂಪಾದಿಸುತ್ತಿದ್ದಳು. ಆಕೆಯ ಅತ್ತೆ ಪಾರ್ವತಮ್ಮನವರು ಮಗನ ದುಂದುಗಾರಿಕೆಯನ್ನು ಕಂಡು ಇವನು ಎಲ್ಲವನ್ನೂ ಕಳೆಯುತ್ತಾನೆಂದು ಊಹಿಸಿ ತನ್ನ, ತನ್ನತ್ತೆಯ, ಮತ್ತು ಸೊಸೆ ಲಲಿತಳ ಚಿನ್ನದ ಒಡವೆಗಳನ್ನು, ಬೆಳ್ಳಿ ಸಾಮಾನುಗಳನ್ನು ತಮ್ಮನೊಡನೆ ಮೈಸೂರಿನಲ್ಲಿ ಬ್ಯಾಂಕೊಂದರಲ್ಲಿ ಭದ್ರವಾಗಿರಿಸಿದ್ದರು. ಈ ವಿಷಯವನ್ನು ಅನಂತಸ್ವಾಮಿ ತಿಳಿಸಿದರು. ಅವರ ಮುಂದಾಲೋಚನೆಯಿಂದ ಲಕ್ಷಾಂತರ ಬಾಳುವ ಒಡವೆಗಳು ಉಳಿದಿದ್ದವು. ಲಲಿತಾಳ ಮಗ ರಾಜೀವ ಬೆಂಗಳೂರಿಗೆ ಹೋಗಿ ಟೈಲರಿಂಗ್ನಲ್ಲಿ ನುರಿತವರಿಂದ ಆಧುನಿಕವಾಗಿ ಹೊಲಿಯುವುದನ್ನು ಕಲಿತು ಬಂದ. ಅವನ ಗೆಳೆಯನೊಬ್ಬನೊಡಗೂಡಿ ಮೈಸೂರಿನಲ್ಲಿ ಒಂದು ಬೋಟಿಕ್ಸ್ ತೆರೆದು ಹಣ ಗಳಿಸಿದ. ನಂತರ ಬೆಂಗಳೂರಿಗೆ ತೆರಳಿ ಲಲಿತಾ ಬೊಟಿಕ್ಸ್ ಎಂಬ ದೊಡ್ಡ ಅಂಗಡಿ ತೆರೆದು ಪ್ರಸಿದ್ಧನಾದ. ಅನಂತಸ್ವಾಮಿಯವರ ಮಗಳು ಸರಳಾಳನ್ನು ಕೈಹಿಡಿದ. ತಾಯಿಯನ್ನು ಸುಖವಾಗಿರಿಸಿದ್ದ. ಆಕೆ ಒಂದು ಭಜನಾಮಂಡಲಿ ಸೇರಿದ್ದಳು. ಅದರ ಸದಸ್ಯರೊಂದಿಗೆ ಉತ್ತರಭಾರತದ ಪ್ರವಾಸಕ್ಕೆ ಹೊರಟಳು. ಅವಳು ಹಿಂದಿರುಗುವಷ್ಟರಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆದಿತ್ತು. ಸಂಸಾರದವರನ್ನು ಬರಿಗೈಮಾಡಿ ಸಂಕಷ್ಟಕ್ಕೊಳಪಡಿಸಿ ಓಡಿಹೋಗಿದ್ದ ವಿಶ್ವನಾಥ, ಆಕೆಯ ಗಂಡ ಹಿಂದಿರುಗಿದ್ದ. ಅವನೀಗ ಮಗನ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದ. ಅವನಿದ್ದ ಮನೆಯಲ್ಲಿ ಲಲಿತಾ ತಾನಿರುವುದಿಲ್ಲವೆಂದು ಗೆಳತಿಯ ಮನೆಯಲ್ಲಿ ಇದ್ದಳು. ಕುಟುಂಬಕ್ಕಾಗಿ ತನ್ನ ಜೀವವನ್ನೇ ತೇಯ್ದ ತಾಯಿ ಲಲಿತಮ್ಮನನ್ನು ದೂರವಿರಿಸಿ ಎಲ್ಲ ಸಂಕಟಗಳಿಗೂ ಕಾರಣನಾದ ವಿಶ್ವನಾಥನನ್ನು ಮನೆಯಲ್ಲಿರಿಸಿಕೊಂಡಿದ್ದು ಸರಿಯಲ್ಲವೆಂದು ರಾಜೀವನ ಮಾವ ಅನಂತಸ್ವಾಮಿ ಅಳಿಯನನ್ನು ತರಾಟೆಗೆ ತೆಗೆದುಕೊಂಡರು. ಅಮ್ಮನನ್ನು ಬಿಟ್ಟರಲಾರೆನೆಂದು ಅವಳನ್ನು ಮನೆಗೆ ಆಹ್ವಾನಿಸಿ ತಂದೆಯನ್ನು ವೃದ್ಧಾಶ್ರಮದಲ್ಲಿರಿಸುವ ಆಯ್ಕೆ ಮಾಡಿಕೊಂಡ ರಾಜೀವ ಲಲಿತಾಳನ್ನು ಕರೆತರಲು ಹೋದ.
ಅಮ್ಮ :
ಅಂಬುಜಾ ಕಥಾನಾಯಕಿ ಹೈಸ್ಕೂಲು ಉಪಧ್ಯಾಯಿನಿಯಾಗಿ ಗಂಡ ಶಾಮರಾಯನ ಬದುಕಿಗೆ ಸರಿಯಾದ ದಿಕ್ಕಾಗಿದ್ದಳು. ತನ್ನ ಅತ್ತೆಮಾವರ ಕಾಲಾನಂತರ ಅವರ ಪಾಲಿಗೆ ಬಂದಿದ್ದ ಹಣದಿಂದ ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ಒಂದು ನಿವೇಶನ ಕೊಂಡಿದ್ದಳು. ತನ್ನ ಗಂಡನು ನಿವೃತ್ತನಾದಾಗ ಅವನಿಗೆ ಸಂದಾಯವಾದ ಹಣದ ಜೊತೆಗೆ ಗ್ರಾಮಾಂತರದ ನಿವೇಶನವನ್ನು ಮಾರಿಬಂದ ಹಣವನ್ನೂ ಸೇರಿಸಿ ಸರಸ್ವತಿಪುರಂಲ್ಲಿ ಡೂಪ್ಲೆಕ್ಸ್ ಮನೆ ಕಟ್ಟಿಕೊಂಡಿದ್ದಳು. ಮೇಲ್ಗಡೆಯ ಮನೆಯಿಂದ ಬಂದ ಬಾಡಿಗೆಯ ಹಣದಿಂದ ಚಿನ್ನದ ಕಾಸುಗಳನ್ನು ಕೊಂಡು ಕೂಡಿಟ್ಟಿದ್ದಳು. ಅಂಬುಜಾಳ ಆಸೆಯಂತೆ ಅವಳ ಇಬ್ಬರೂ ಗಂಡು ಮಕ್ಕಳು ಇಂಜಿನಿಯರುಗಳಾಗಿ ಕೆಲಸಕ್ಕೆ ಸೇರಿದ್ದರು. ಇಂಜಿನಿಯರುಗಳೇ ಆಗಿರುವ ಹೆಣ್ಣುಗಳನ್ನು ಮದುವೆಯಾಗಿದ್ದರು. ಅಂಬುಜಾ ಮುಂದಾಲೋಚನೆಯಿಂದ ಮಕ್ಕಳಿಗೆ ಆಪದ್ಧನವಾಗಿ ಪ್ರತಿ ತಿಂಗಳೂ ತನ್ನ ಹೆಸರಿಗೆ ಹತ್ತುಸಾವಿರ ರೂಪಾಯಿ ಹಾಕಲು ನಿರ್ದೇಶಿಸಿದ್ದಳು. ಇದು ಮಕ್ಕಳಿಗೆ ಸ್ವಲ್ಪ ಇರುಸುಮುರುಸೆನ್ನಿಸಿದರೂ ಪಾಲಿಸಿಕೊಂಡು ಬಂದಿದ್ದರು. ಸೊಸೆಯಂದಿರು ಅತ್ತೆ ಮಾವ ಮೈಸೂರಿನ ಮನೆಯನ್ನು ಮಾರಿ ಬಂದ ಹಣವನ್ನು ಮಕ್ಕಳಿಗೆ ಹಂಚಿಕೊಟ್ಟು ಇಬ್ಬರೂ ಸರತಿಯಂತೆ ತಮ್ಮಿಬ್ಬರ ಮನೆಗಳಲ್ಲಿ ಇರಬಹುದೆಂಬ ಆಲೋಚನೆಯನ್ನು ಮುಂದಿಟ್ಟರು. ಆದರೆ ಅಂಬುಜಾ ತಾನಿರುವವರೆಗೆ ಮನೆ ಮಾರುವುದಿಲ್ಲವೆಂದು ಖಂಡಿತವಾಗಿ ಹೇಳಿದಳು.
ಅಂಬುಜಾಳ ಅವಸಾನವಾದಾಗ ಅವಳ ಮಕ್ಕಳನ್ನು ಭೇಟಿಯಾದ ವಕೀಲೆ ಗಾಯತ್ರಿರಾವ್ ಆಕೆಯು ಮಾಡಿದ್ದ ವಿಲ್ ಓದಿದರು. ಅದರ ಪ್ರಕಾರ ಬ್ಯಾಂಕಿನಲ್ಲಿದ್ದ ಬೆಳ್ಳಿ ವಸ್ತುಗಳು, ಫಿಕ್ಸೆಡ್ ಡಿಪಾಸಿಟ್ ಗಳನ್ನು ಇಬ್ಬರು ಮಕ್ಕಳಿಗೂ ಹಂಚಿದ್ದರು. ಅಂಬುಜಾಳ ತಂಗಿ ಅಲ್ಲಿಗೆ ಬಂದು ತನ್ನಕ್ಕ ಎಲ್ಲ ಒಡವೆಗಳನ್ನು ತೂಕಮಾಡಿಸಿ ಇಬ್ಬರು ಸೊಸೆಯಂದಿರಿಗೂ ಸಮನಾಗಿ ಹಂಚಿ ಎರಡು ಡಬ್ಬಿಗಳಲ್ಲಿರಿಸಿದ್ದಾಳೆ ಅವುಗಳಲ್ಲಿ ಯಾವುದನ್ನಾದರೂ ಅವರು ಆರಿಸಿಕೊಳ್ಳಲು ಹೇಳಿದ್ದರು. ಅಲ್ಲದೆ ಮಕ್ಕಳು ಪ್ರತಿ ತಿಂಗಳು ಕೊಡುತ್ತಿದ್ದ ಹಣವನ್ನು ಆಕೆ ಖರ್ಚುಮಾಡದೆ ಹಾಗೇ ಫಿಕ್ಸೆಡ್ ಡಿಪಾಸಿಟ್ ಮಾಡಿದ್ದಳು. ಮೈಸೂರಿನ ಮನೆಯನ್ನು ಮಾರಿಬಂದ ಹಣಕ್ಕೆ ಆಕೆಯು ಕೂಡಿಟ್ಟ ಹಣವನ್ನು ಸೇರಿಸಿದರೆ ಮಕ್ಕಳು ತಾವು ಬೆಂಗಳೂರಿನಲ್ಲಿ ಕೊಂಡಿರುವ ನಿವೇಶನದಲ್ಲಿ ಕಷ್ಟವಿಲ್ಲದೆ ಮನೆಗಳನ್ನು ಕಟ್ಟಿಕೊಳ್ಳಲಿ ಎಂಬುದು ಅಂಬುಜಾಳ ಆಶಯವಾಗಿತ್ತು. ಇದನ್ನೆಲ್ಲ ಕೇಳಿ ತಿಳಿದ ಮೇಲೆ ಮಕ್ಕಳಿಗೆ ತಮ್ಮ ತಾಯಿಯ ವಿಶಾಲಹೃದಯ, ಮುಂದಾಲೋಚನೆಯ ಅರಿವಾಯಿತು ಸೊಸೆಯಂದಿರು ತಮ್ಮ ಸಂಕುಚಿತ ಆಲೋಚನೆಗಳಿಂದ ಅಂಬುಜಾಳ ವ್ಯಕ್ತಿತ್ವದ ಮುಂದೆ ಕುಬ್ಜರಾದರು. ಅಮ್ಮ ಎಂದರೆ ಹಾಗೇ ಯಾವುದೇ ಅಳತೆಗಳಿಗೆ ಮೀರಿದವಳು.
ಅವರವರ ಭಾವಕ್ಕೆ:
ಸುಚಿ ದೀಕ್ಷಿತ್ ಒಬ್ಬಹವ್ಯಾಸಿ ಬರಹಗಾರ್ತಿ. ಅವರ ತಂದೆ ಅಕಾಲಿಕವಾಗಿ ನಿಧನರಾದಾಗ ಅವಳಿಗೆ ನಿಯಮದಂತೆ ಅವಳಿಗೆ ದೊರೆತ ಅನುಕಂಪಧಾರಿತ ನೌಕರಿಯಲ್ಲಿ ಸೇರಿ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡವಳು. ಕಷ್ಟಸುಖಗಳಿಗೆ ಹೆಗಲಾಗುತ್ತಾ ತಮ್ಮ ತಂಗಿಯರನ್ನು ಒಂದು ಭದ್ರ ನೆಲೆಗೆ ನಿಲ್ಲಿಸುವ ಪ್ರಯತ್ನದಲ್ಲಿ ವರ್ಷಗಳು ಉರುಳುವ ಕಡೆಗೆ ಗಮನ ನೀಡಲೂ ಆಗಲಿಲ್ಲ. ಹೀಗಾಗಿ ತನ್ನ ವಿವಾಹದ ಬಗ್ಗೆ ಆಲೋಚಿಸಲೂ ಹೋಗಲಿಲ್ಲ. ಎಲ್ಲ ಮುಗಿಯುವ ಹೊತ್ತಿಗೆ ತಾಯಿಯ ಆರೈಕೆಯೂ ಅವಳ ಹೆಗಲಿಗೇರಿತ್ತು. ಅಷ್ಟು ಹೊತ್ತಿಗೆ ಆಕೆಗೆ ನಲವತ್ತರ ಸಮಿಪ. ಸುಚಿಯ ಕಥೆಗಳು ನಾಡಿನ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿದ್ದುದರಿಂದ ಅವಳ ಹೆಸರು ಚಿರಪರಿಚಿತವಾಗಿತ್ತು. ಅಕೆಯ ಕೆಲವು ಕಾದಂಬರಿಗಳು ಧಾರಾವಾಹಿಗಳಾಗಿ ಪ್ರಕಟಣೆ ಕಂಡರೆ ಇನ್ನೂ ಕೆಲವು ಚಲನಚಿತ್ರಗಳಾಗಿದ್ದವು. ಅವಳಿಗೆ ಓದುಗ ಅಭಿಮಾನಿಗಳೂ ಅಪಾರ ಸಂಖ್ಯೆಯಲ್ಲಿದ್ದರು. ಮುಗಿಲು ಪತ್ರಿಕೆಯಲ್ಲಿ ಕಥಾ ವಿಭಾಗದ ಸಂಪಾದಕರಾಗಿದ್ದ ಸಂತೋಷ್ ಎಂಬುವರು ಅಂತಹವರಲ್ಲಿ ಒಬ್ಬರು. ಆತನಿಗೆ ಹೆಂಡತಿ ತೀರಿಹೋಗಿ ಎರಡು ಮಕ್ಕಳಿದ್ದವು. ಮರುಮದುವೆಯಾಗುವ ಹಂಬಲವಿತ್ತು. ಸುಚಿಯವರ ಬರಹದ ಪಾತ್ರಗಳಲ್ಲಿ ಕಂಡುಬಂದಂತಹ ಸದ್ಗುಣಗಳಿಗೆ ಅಭಿಮಾನಿಯಾಗಿದ್ದ ಅವರು ಸುಚಿಯವರ ಬಗ್ಗೆ ಅನುರಾಗ ತಾಳಿ ಬಂಧುಗಳೊಬ್ಬರ ಮೂಲಕ ಅವಳಿಗೆ ತಾನು ಅವಳನ್ನು ವಿವಾಹಮಾಡಿಕೊಳ್ಳುವ ಇರಾದೆಯನ್ನು ತಿಳಿಸಿದ್ದರು. ಅವರು ಒಪ್ಪಿದರೆ ತನ್ನ ಮಕ್ಕಳಿಗೂ ಒಳ್ಳೆಯ ತಾಯಿಯಾಗಬಲ್ಲಳು ಎಂದವರ ಆಲೋಚನೆ. ಆದರೆ ಅವಳ ವೈಯಕ್ತಿಕ ಬದುಕಿನ ಬಗ್ಗೆ ಆತನಿಗೆ ಅರಿವಿರಲಿಲ್ಲ. ಸುಚಿದೀಕ್ಷಿತ್ ತನಗೆ ಅವನನ್ನು ವಿವಾಹವಾಗುವ ಇಚ್ಛೆಯಿಲ್ಲವೆಂದು ಕೋರಿಕೆಯನ್ನು ನಿರಾಕರಿಸಿದಳು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಆತನು ಅಂದಿನಿಂದ ಆಕೆಯ ಬರಹಗಳು ಮುಗಿಲು ಪತ್ರಿಕೆಯಲ್ಲಿ ಪ್ರಕಟಣೆಯಾಗದಂತೆ ತಡೆಹಿಡಿಯುವಲ್ಲಿ ಸಫಲನಾಗಿದ್ದ. ಆಕಸ್ಮಿಕವಾಗಿ ಒಂದು ರೈಲು ಪ್ರಯಾಣದಲ್ಲಿ ಅವರಿಬ್ಬರೂ ಎದುರು ಬದುರಾದರು. ಆಗ ಬೇಕೆಂದೇ ಆತ ತನ್ನ ಹೆಸರನ್ನು ಸುಳ್ಳು ಹೇಳಿ ಅವಳಿಗೆ ಮುಗಿಲು ಪತ್ರಿಕೆಯ ವಿಷಯ ಪ್ರಸ್ಥಾಪಿಸುತ್ತಾ ಅವಳ ಕಥೆಗಳು ಪ್ರಕಟಣೆಯಾಗದಂತೆ ತಡೆದವನು ತನ್ನ ಸ್ನೇಹಿತ ಸಂತೋಷ್ ಎಂದು ಹೇಳಿದ. ಸುಚಿ ತಾನು ಮದುವೆಯನ್ನು ಮಾಡಕೊಳ್ಳದಿದ್ದರೂ ತಮ್ಮ ತಂಗಿಯರು ಬಳಗದವರೊಡನೆ ಸುಖಿಯಾಗಿದ್ದೇನೆಂದು ಅವನಿಗೆ ಹೇಳಿದಳು. ಮೈಸೂರಿನಲ್ಲಿ ಕೆಳಗಿಳಿಯುವಾಗ ಮರೆತು ಹೋಗಿದ್ದ ಅವನ ಬ್ಯಾಗನ್ನು ಅವನಿಗೆ ಜ್ಞಾಪಿಸುವಾಗ ಅವನ ಹೆಸರಿದ್ದುದನ್ನು ಕಂಡು ಅವನೇ ಸಂತೋಷ್ ಎಂದರಿವಾಗಿ ಅದೇ ಹೆಸರಿನಿಂದ ಅವನನ್ನು ಕರೆದಳು. ಅವಳ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲದೆ ತನ್ನ ಸ್ವಾರ್ಥ ಆಲೋಚನೆಯಿಂದ ಕೀಳಾಗಿ ನಡೆದುಕೊಂಡ ಅವನ ಸಣ್ಣತನದ ಅರಿವಾಗಿತ್ತು.
ಅಸ್ತಿತ್ವ:
ಸರಸ್ವತಿ, ಶೇಷಗಿರಿ ತಮ್ಮೆರಡು ಮಕ್ಕಳೊಡನೆ ಬೆಂಗಳೂರಿನಲ್ಲಿ ಹೇಗೋ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಸರಸ್ವತಿ ಗಟ್ಟಿಗಿತ್ತಿ, ಕೆಲಸಗಾರ್ತಿ. ಮನೆಯಲ್ಲಿ ಟೈಲರಿಂಗ್ ಮಾಡಿ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಳು. ಶೇಷಗಿರಿಯ ಅಕ್ಕ ಅವಿವಾಹಿತೆ ಲಲಿತಾ ಮೈಸೂರಿನಲ್ಲಿ ಸರ್ಕಾರಿ ಶಾಲೆಯ ಟೀಚರ್ ಆಗಿದ್ದಳು. ತನ್ನ ತಾಯಿಯೊಡನೆ ವಾಸಿಸುತ್ತಿದ್ದಳು. ಆಕೆಯ ತಾಯಿಗೆ ಬಿದ್ದು ಫ್ರಾಕ್ಚರ್ ಆಗಿ ವೀಲ್‌ಛೇರ್‍ನಲ್ಲಿ ಓಡಾಡಬೇಕಾದ ಸ್ಥಿತಿಯಲ್ಲಿದ್ದರು. ಅವರನ್ನು ನೋಡಿಕೊಳ್ಳುವುದು ಕಷ್ಟವಾಗಿದ್ದರಿಂದ ತಮ್ಮ ಶೇಷಗಿರಿಯ ನೆರವನ್ನು ಕೋರಿದ್ದರು. ಅವನಿಗೆ ಮೈಸೂರಿನಲ್ಲೇ ಅವನು ಪಡೆಯುತ್ತಿದ್ದಷ್ಟೇ ಸಂಬಳ ಸಿಗುವಂತೆ ಕೆಲಸ ಕೊಡಿಸುವುದಾಗಿ, ಆತನ ಮಕ್ಕಳಿಗೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸುವುದಾಗಿ ಆಮಿಷವೊಡ್ಡಿ ಅವರನ್ನು ಮೈಸೂರಿನಲ್ಲಿ ತಮ್ಮೊಡನೆ ಇರುವಂತೆ ಒತ್ತಾಯಿಸಿದರು. ಆಸೆಯಿಂದ ಅವರು ಬಂದರು. ಸರಸ್ವತಿ ಬೆಳಗಿನಿಂದ ರಾತ್ರಿಯವರೆಗೆ ಮೈಮುರಿದು ದುಡಿಯುವ ಮೂಗೆತ್ತಿನಂತೆ ದುಡಿದರೂ ಅತ್ತೆ ಮತ್ತು ಮತ್ತು ಲಲಿತಾಳ ಕೊಂಕು ನುಡಿಗಳನ್ನು ಕೇಳಬೇಕಾಗುತ್ತಿತ್ತು. ಆದರೂ ತನ್ನ ಮಕ್ಕಳ ಭವಿಷ್ಯಕ್ಕೆ ನೆರವಾಗುತ್ತಾಳೆಂದು ಎದುರಾಡದೆ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಶೇಷಗಿರಿಯೂ ಚಕಾರವೆತ್ತುತ್ತಿರಲಿಲ್ಲ. ಆದರೆ ಎಲ್ಲಕ್ಕೂ ಮಿತಿಯಿರುವಂತೆ ತಾಳ್ಮೆಗೂ ಒಂದು ಮಿತಿಯಿದೆ. ಒಮ್ಮೆ ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕಾಗಿ ಲಲಿತಾ ಸರಸ್ವತಿಯನ್ನು ಬಿಟ್ಟಿಯಾಗೇನು ಚಾಕರಿ ಮಾಡುತ್ತಿಲ್ಲ. ತಾನು ಅವರೆಲ್ಲರನ್ನೂ ಸಾಕುತ್ತಿದ್ದೇನೆಂಬ ಅರ್ಥದಲ್ಲಿ ಅವಮಾನಕರವಾಗಿ ಹೀಯಾಳಿಸಿ ನುಡಿದಾಗ ಸರಸ್ವತಿಯ ಸ್ವಾಭಿಮಾನ ಕೆರಳಿತು. ಹಂಗಿನರಮನೆಗಿಂತ ವಿಂಗಡದ ಗುಡಿಯೇ ಲೇಸು. ಭಂಗಪಟ್ಟುಣ್ಣುವ ಮೃಷ್ಟಾನ್ನಕ್ಕಿಂತ ತಂಗಳನ್ನವೇ ಲೇಸು ಎಂಬಂತೆ ಸಿಡಿದುಬಿದ್ದು ಆಕೆ ತಾನು ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಹಿಂತಿರುಗುತ್ತೇನೆ. ನಾಲ್ಕು ಮನೆಯಲ್ಲಿ ಕೆಲಸಬೊಗಸೆ ಮಾಡಿಯಾದರೂ ತನ್ನ ಮಕ್ಕಳನ್ನು ಸಾಕುತ್ತೇನೆ. ಲಲಿತಾಳ ಅನುಕಂಪವೇನೂ ತನಗೆ ಆವಶ್ಯಕವಿಲ್ಲ. ಬೇಕಿದ್ದರೆ ಗಂಡನೂ ತನ್ನೊಡನೆ ಬರಲಿ, ಇಲ್ಲವಾದರೆ ತಾನೊಬ್ಬಳೇ ಮಕ್ಕಳ ಯೋಗಕ್ಷೇಮ ಗಮನಿಸಲು ಸಮರ್ಥಳು ಎಂದು ಹೇಳಿ ಮರುಗಳಿಗೆಯೇ ತನ್ನ ಬಟ್ಟೆ ಬರೆಗಳನ್ನು ಪ್ಯಾಕ್ ಮಾಡಿಕೊಂಡು ಮನೆ ಬಿಡಲು ಸಿದ್ಧಳಾದಾಗ ವಾಸ್ತವವಾಗಿ ಲಲಿತಾಳಿಗೆ ಭಯವಾಯಿತು. ಅವರ ಮನೆಯ ಔಟ್ಹೌಸಿನಲ್ಲಿ ವಾಸವಾಗಿದ್ದ ಅವಳ ಗೆಳತಿ ಜಾಹ್ನವಿಗೆ ಸರಸ್ವತಿಯ ಸಿಟ್ಟು ಸಹಜವೆನ್ನಿಸಿತು. ಆಕೆ ಅವಳನ್ನು ಸಮರ್ಥಿಸಿ ಲಲಿತಾಳು ತಪ್ಪು ಮಾಡಿದ್ದಾಳೆಂದು ಅರಿವು ಮೂಡಿಸಿದಳು. ಯಾರೇ ಆದರೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುವುದು ಅಗತ್ಯವಾಗುತ್ತದೆ. ಇದನ್ನೇ ಸರಸ್ವತಿ ಮಾಡಿದ್ದಾಳೆ ಎಂದಾಗ ಲಲಿತಾ ಸರಸ್ವತಿಯ ಕ್ಷಮೆ ಯಾಚಿಸಿ ತಮ್ಮನ್ನು ಬಿಟ್ಟು ಹೋಗದಂತೆ ಕೋರುತ್ತಾಳೆ. ಇದೊಂದು ನೀತಿಯ ಕಥೆಯಾಗಿದೆ.
ತಲ್ಲಣಿಸದಿರು ಕಂಡ್ಯ:
ಕುಟುಂಬಗಳಲ್ಲಿ ಮಲತಾಯಿ ಎಂದಿಗೂ ತಾಯಿಯಾಗುವುದಿಲ್ಲವೆಂಬ ಮಾತು ಕೇಳಿ ಬರುತ್ತಿರುತ್ತದೆ. ಅದು ಸತ್ಯವೇನೋ ಎಂಬಂತೆ ಸರೋಜಮ್ಮ ತನ್ನ ಮಲಮಗ ಶಂಕರ ಮತ್ತು ಸೊಸೆ ರಕ್ಮಾಳನ್ನು ವಿಧವಿಧವಾಗಿ ದುಡಿಯುತ್ತಿದ್ದರೂ ಅವರಲ್ಲಿ ತಪ್ಪುಗಳನ್ನು ಹುಡುಕುತ್ತಲೇ ಇರುತ್ತಾರೆ. ರಕ್ಮಾ ತುಂಬ ತಾಳ್ಮೆಯ ಹುಡುಗಿ. ತನ್ನ ಕರ್ತವ್ಯವೆಂಬಂತೆ ಮನೆಗಾಗಿ ಜೀವ ತೇಯುತ್ತಾಳೆ. ಅವಳ ಮೈದುನ ಸರೋಜಮ್ಮನ ಸ್ವಂತ ಮಗ ಚಂದ್ರುವಿನ ವಿದ್ಯಾಭ್ಯಾಸ ಒಂದು ಹಂತದಲ್ಲಿ ನಿಂತುಹೋಗುವ ಸಂದರ್ಭ ಬಂದಾಗ ತಾನು ಮಕ್ಕಳಿಗೆ ಮನೆ ಪಾಠಹೇಳಿ ಸಂಪಾದಿಸಿದ ಹಣವನ್ನು ನೀಡಿ ಅವನಿಗೆ ಸಹಾಯಮಾಡುತ್ತಾಳೆ. ಚಂದ್ರು ಕೆಲಸಕ್ಕೆ ಸೇರಿದಮೇಲೆ ಮನೆ ಖರ್ಚಿಗಾಗಿ ಪ್ರತಿ ತಿಂಗಳು ಕಳುಹಿಸುತ್ತಿದ್ದ ಹಣ ಮತ್ತು ತಾಯಿಗೆ ಕಣ ನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟ ಹಣ ಯಾವುದನ್ನೂ ಸೊಸೆ ರಕ್ಮಾಳಿಗೆ ಕೊಡದಂತೆ ತಾನೇ ಇಟ್ಟುಕೊಳ್ಳುವಷ್ಟು ಸ್ವಾರ್ಥಿ ಸರೋಜಮ್ಮ. ಕೊನೆಯಲ್ಲಿ ಅವರು ತಾವಿದ್ದ ಮನೆಯನ್ನು ಮಾರುವುದರಲ್ಲಿದ್ದಾಗ ಅದರಲ್ಲಿ ಶಂಕರ ಮತ್ತು ರಕ್ಮಾಳಿಗೆಂದು ಪೈ ಕೂಡ ಕೊಡುವುದಿಲ್ಲವೆಂಬ ನಿಷ್ಕರುಣೆಯ ನಿರ್ಧಾರ ಪ್ರಕಟಿಸುತ್ತಾರೆ. ಆದರೆ ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳಲು ಮುಂದಾಗದಿದ್ದಾಗ ಆಕೆಗೆ ತಾನು ಮಾಡಿದ್ದ ಅನ್ಯಾಯಗಳ ಅರಿವಾಗಿ ಸೊಸೆ ರಕ್ಮಾಳ ಕ್ಷಮೆ ಯಾಚಿಸುತ್ತಾಳೆ. ತಾಳ್ಮೆಯಿಂದ ಎಲ್ಲ ಸಂಕಟಗಳನ್ನೂ ಸಹಿಸಿಕೊಂಡು ನಿಸ್ವಾರ್ಥ ಸೇವೆ ಮಾಡಿದ್ದ ರಕ್ಮಾಳ ಹೆಸರಿಗೇ ಮನೆಯನ್ನು ಬರೆದು ಕೊಡುತ್ತಾರೆ. ತಾವು ಮಾಡಿದ್ದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ.
ನಮ್ಮವರು:
ಮನೆಯಲ್ಲಿರುವ ಸದಸ್ಯರುಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯ, ಸಹಾನುಭೂತಿಗಳಿದ್ದಾಗಲೇ ಅವರೆಲ್ಲರನ್ನೂ ಒಂದೇ ಕುಟುಂಬದ ನಮ್ಮವರೆಂದು ಪರಿಗಣ ಸಬಹುದು. ಗೃಹೀಣ ಶಾರದಾ ಹೊರಗಡೆಯೂ ದುಡಿದು ಮನೆಯೊಳಗೂ ಎಲ್ಲ ರೀತಿಯ ಚಾಕರಿ ಮಾಡಿ ಎಲ್ಲರ ಬೇಕುಬೇಡಗಳನ್ನು ಗಮನಿಸುತ್ತಾಳೆ. ಆದರೆ ಅವಳ ಗಂಡ ರಘುರಾಂ ಮತ್ತು ಮಕ್ಕಳು ಅವಳ ಬಗ್ಗೆ ಯಾವುದೇ ರೀತಿಯ ಅನುಕಂಪವನ್ನೂ ತೋರದೇ ಅವಳಿಂದ ಸೇವೆ ಮಾಡಿಸಿಕೊಳ್ಳುವುದೇ ತಮ್ಮ ಹಕ್ಕೆಂಬಂತೆ ಅವಳನ್ನು ನಿರ್ಲಕ್ಷಿಸಿರುತ್ತಾರೆ. ಒಮ್ಮೆ ಅವಳಿಗೆ ತಲೆ ಸುತ್ತುಬಂದು ಪ್ರಜ್ಞೆತಪ್ಪಿ ಬಿದ್ದು ನರ್ಸಿಂಗ್‌ಹೋಮಿಗೆ ದಾಖಲಾದಾಗ ಅವಳನ್ನು ಪರೀಕ್ಷಿಸಿದ ವೈದ್ಯರು ಅವಳಿಗೆ ತಾನಾರಿಗೂ ಬೇಡವೆಂಬ ಡಿಪ್ರೆಷನ್ ಕಾಡುತ್ತಿದೆ. ಆದ್ದರಿಂದ ಪೂರ್ಣ ವಿಶ್ರಾಂತಿಯ ಆವಶ್ಯಕತೆಯಿದೆ ಎಂದು ಹೇಳಿ ರಘುರಾಮನ ಸೋದರಿ ಡಾ.ರಜನಿಯನ್ನು ಕರೆಸಿ ವಾಸ್ತವ ಸ್ಥಿತಿಯನ್ನು ವಿವರಿಸುತ್ತಾರೆ. ರಜನಿಗೆ ತಪ್ಪೆಲ್ಲಿದೆಯೆಂದು ತಿಳಿಯುತ್ತದೆ. ಆಕೆ ಶಾರದಾಳನ್ನು ತನ್ನೊಡನೆ ಶಿವಮೊಗ್ಗೆಗೆ ಕರೆದುಕೊಂಡು ವಿಶ್ರಾಂತಿಯಲ್ಲಿರಿಸುತಾಳೆ. ಆಗ ಮನೆಯ ಸದಸ್ಯರುಗಳಿಗೆ ಅವಳಿಲ್ಲದ ಕೊರತೆ ಎದ್ದು ಕಾಣತೊಡಗುತ್ತದೆ. ಅವಳೆಷ್ಟು ಸೇವೆ ಮಾಡಿದರೂ ತಾವು ಅವಳ ಬಗ್ಗೆ ತೊರುತ್ತಿದ್ದ ನಿರ್ಲಕ್ಷ್ಯದ ಅರಿವಾಗುತ್ತದೆ. ಅದನ್ನು ಅವರೆಲ್ಲರಿಗೂ ಮನದಟ್ಟಾಗುವಂತೆ ವೈದ್ಯೆ ರಜನಿ ಮಾಡುತ್ತಾಳೆ. ಎಲ್ಲರೂ ತಮ್ಮ ತಪ್ಪಿಗಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿ ಶಾರದಾಳಿಗೆ ತಮ್ಮೊಂದಿಗೆ ಮನೆಗೆ ಹಿಂದಿರುಗುವಂತೆ ಬೇಡುತ್ತಾರೆ. ಶಾರದಾ ಅವರೆಲ್ಲರನ್ನೂ ಕ್ಷಮಿಸಿ ಎಷ್ಟಾದರೂ ಅವರೆಲ್ಲ ನಮ್ಮವರೇ ಎಂದು ಭಾವಿಸಿ ಮನೆಗೆ ಹಿಂದಿರುಗಲು ಒಪ್ಪಿಕೊಳ್ಳುತ್ತಾಳೆ.
ಕಥಾ ಸಂಕಲನದ ಹಲವಾರು ಕಥೆಗಳು ಕುಟುಂಬ ಸಂಬಂಧಗಳ ಸೂಕ್ಷ್ಮತೆಗಳ ಬಗ್ಗೆ ಅರಿವು ಮೂಡಿಸುವ ಸ್ತುತ್ಯ ಪ್ರಯತ್ನಗಳಾಗಿವೆ. ಇದರಿಂದ ಓದುಗರಿಗೆ ತಮ್ಮಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ತಿಳಿವಳಿಕೆಯನ್ನು ಮೂಡಿಸುವಲ್ಲಿಯೂ ಸಫಲವಾಗಿವೆ. ಶ್ರೀಮತಿ ಸಿ.ಎನ್.ಮುಕ್ತಾರವರ ಸಶಕ್ತ ಲೇಖನಿಯಿಂದ ಇನ್ನಷ್ಟು ಬೋಧಪೂರ್ಣ ಕಥೆಗಳು ಹೊರಬರಲೆಂದು ನಿರೀಕ್ಷಿಸುತ್ತಾ ಅವರನ್ನು ಅಭಿನಂದಿಸುತ್ತೇನೆ.
-ಬಿ.ಆರ್. ನಾಗರತ್ನ, ಮೈಸೂರು,.
ಖ್ಯಾತ ಲೇಖಕಿ ಸಿ.ಎನ್. ಮುಕ್ತಾ ಅವರ ಕಥಾಸಂಕಲನದ ವಿಮರ್ಶಾತ್ಮಕ ಪರಿಚಯವು ಚೆನ್ನಾಗಿ ಮೂಡಿ ಬಂದಿದೆ ನಾಗರತ್ನ ಮೇಡಂ… ಧನ್ಯವಾದಗಳು
ವಂದನೆಗಳು ಶಂಕರಿ ಮೇಡಂ.
ಅಂತರಾಳ ಕಥಾಸಂಕಲನದ ಒಳನೋಟ ಸೊಗಸಾಗಿದೆ
ಧನ್ಯವಾದಗಳು ನಯನ ಮೇಡಂ