ಲಹರಿ - ಸಂಪಾದಕೀಯ

ಏನ ಬೇಡಲಿ ನಿನ್ನ?

Share Button

ಕವಿ ಕೆಎಸ್ ನರಸಿಂಹ ಸ್ವಾಮಿ ಅವರ ಮೊದಲ ಕವನ ಸಂಕಲನ ಮೈಸೂರು ಮಲ್ಲಿಗೆ .ಇಲ್ಲಿಯವರೆಗೂ 25 ಮುದ್ರಣಗಳನ್ನು ಕಂಡ ಕನ್ನಡದ ಕೃತಿ .ಇದರ ಕವನಗಳನ್ನು ಹೊಂದಿಸಿಕೊಂಡು ಕಥೆ ಬರೆದು ಹಾಡುಗಳಿಗಾಗಿ ರೂಪುಗೊಂಡ ಸಿನಿಮಾ ಎಂಬ ಹೆಗ್ಗಳಿಕೆಯೂ ಇದರದೇ. ಪ್ರೇಮಗೀತೆಗಳ ಕವಿ ಎಂದು ಹೆಸರಿದ್ದರೂ ಕವಿ ತಮ್ಮ ಗೀತೆಗಳನ್ನು ದಾಂಪತ್ಯ ಗೀತೆಗಳೆನ್ನುತ್ತಾರೆ .ಹೊಸದಾಗಿ ಮದುವೆಯಾದ ಯುವ ಜೋಡಿಯ ಭಾವನೆ ಸಲ್ಲಾಪಗಳ ಚಿತ್ರಣವೇ ಈ ಕವನ ಸಂಕಲನದಲ್ಲಿದೆ .ಹೆಚ್ಚಿನ ಎಲ್ಲ ಕವಿತೆಗಳು ಸಿನಿಮಾ ಹಾಡುಗಳಾಗಿ ಭಾವ ಗೀತೆಗಳಾಗಿ ಪ್ರಸಿದ್ಧವಾಗಿವೆ . ನನ್ನ ತಂದೆಯವರು ಹೇಳುತ್ತಿದ್ದರು ಅವರೇ ಎಷ್ಟೋ ಮದುವೆಗಳಲ್ಲಿ ಅವರ ಗೆಳೆಯರಿಗೆ ಈ ಕೃತಿಯನ್ನು ಕೊಡುಗೆಯಾಗಿ ಕೊಟ್ಟಿದ್ದರಂತೆ.

ಈ ಕವನ ಸಂಕಲನದ “ಏನ ಬೇಡಲಿ” ಎಂಬ ಕವಿತೆಯ ಬಗ್ಗೆ ನಾನೀಗ ಬರೆಯ ಹೊರಟಿರುವುದು. ಹಿಂದಿನ ಅನೇಕ ಕವಿಗಳಂತೆ ನಮ್ಮ ಈ ಕವಿಯೂ ಬಡತನದ ಅಂಚಿನಲ್ಲಿದ್ದವರೇ. ಆದರೆ ಆ ಬಡತನಕ್ಕೆ ಅಳುಕದೆ ಅಂಜದೆ ಬಾಳ ನಿರ್ವಹಿಸಿ ಸಾಹಿತ್ಯ ಶ್ರೀಮಂತಿಕೆ ಮೆರೆದವರು. ದೇವರೊಡನೆ ಅವರು ಏನನ್ನೂ ಬೇಡುವುದಿಲ್ಲ, ಅವನು ಕೊಡುವ ಕಷ್ಟಗಳನ್ನು ದಿಟ್ಟತನದಲ್ಲಿ ಎದುರಿಸುತ್ತಾ ಹೋಗುತ್ತೇನೆ ಎನ್ನುತ್ತಾರೆ. ಕವಿ ಭಗವಂತನಿಗೆ ನಿನ್ನ ಮಾಯೆಗೆ ಅಂಜಿ ನಾನು ಬಾಡುವುದಿಲ್ಲ ನಿನ್ನ ಇಚ್ಛೆಯಂತೆಯೇ ನಡೆವೆನು ಅಡ್ಡಿ ಮಾಡುವುದಿಲ್ಲ ಎನ್ನುತ್ತಾರೆ ಕವಿ. ಮುಕ್ತಿ ಎಂದರೇನು ನನ್ನನ್ನು ನಾನು ತಿಳಿದುಕೊಳ್ಳುವುದೇ ಅಥವಾ ಸಾವಿ ಗಂಜಿ ದೇವರ ಪಾದ ಹಿಡಿಯುವುದೇ ಎಂದು ಅವನನ್ನೇ ಪ್ರಶ್ನಿಸುತ್ತಾರೆ. ಮುಂದೆ ಹೇಗೆ ಬಳ್ಳಿಯನ್ನು ಉಳಿಸಿಕೊಳ್ಳಲು ನೀರೆರೆಯುತ್ತೇವೆಯೋ ಹಾಗೆ ಮುಕ್ತಿ ಗಳಿಸಿಕೊಳ್ಳುವ ಶಕ್ತಿಯನ್ನು ನೀನೇ ಕೊಟ್ಟಿರುವೆ ಎನ್ನುತ್ತಾರೆ. ನಮ್ಮ ಅಂತರಂಗವನ್ನು ನಿಚ್ಚಳವಾಗಿ ಕಾಣಲು ಜ್ಞಾನ ಎಂಬ ರವಿಯನ್ನು ಕೊಟ್ಟು ಪರಮೋಚ್ಚ ಗೀತೆಯನ್ನು ಕೊಳಲಲ್ಲಿ ಊದಿಕೊಳ್ಳಲು ನೀಡಿದೆ ಎಂದು ಹೇಳುತ್ತಾರೆ.

ಕಡೆಯಲ್ಲಿ ಈ ಇಡೀ ಜಗವನ್ನೇ ನನಗಾಗಿ ನೀ ಬಿಟ್ಟಿರುವೆ ಎಲ್ಲವನ್ನು ಕೊಟ್ಟಿರುವೆ ಹಾಗಾಗಿ ಸುಮ್ಮನೆ ನಿನ್ನನ್ನು ಕಾಡುವುದಿಲ್ಲ ಬೇಡುವುದೂ ಇಲ್ಲ ಎನ್ನುತ್ತಾರೆ .

“ಸರಳ ಸುಂದರ ನಿರ್ಮಲ” ಕೆಎಸ್ನ ಅವರ ಕವಿತೆಗಳ ಒಟ್ಟಾರೆ ಭಾವಾಳ. ಇಷ್ಟು ಸರಳವಾಗಿ ಮನಕ್ಕೆ ನಾಟುವಂತೆ ಬರೆಯಲು ಸಾಧ್ಯವೇ ಎಂದು ಬೆರಗಾಗುವ ಪದಪುಂಜ ಪ್ರಯೋಗ ಅವರದು .ಅವರ ರಚನೆಗಳ ಜೀವಾಳ, ಜೀವಂತಿಕೆ, ಮತ್ತು ಭಾವ ಶ್ರೀಮಂತಿಕೆ ಅಡಗಿರುವುದು ಅಲ್ಲೇ. ಯಾವಾಗಲೂ ಬೇಕು ಬೇಕು ಎನ್ನುವ ಬಡವ ಸಾಕು ಸಾಕು ಎನ್ನುವನೇ ಶ್ರೀಮಂತ ಎನ್ನುವಂತೆ ಹಣಕಾಸಿನ ವಿಷಯದಲ್ಲಿ ಬಡವರಾದರೂ ಕವಿ ಹೃದಯವಂತಿಕೆಯಲ್ಲಿ ಕಾವ್ಯ ಸಂಪತ್ತಿನಲ್ಲಿ ತನ್ನ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಅಂದಿನ ತಲೆಮಾರಿನವರಲ್ಲಿದ್ದ ಈ ದೃಷ್ಟಿಕೋನವೇ ಅವರಿಗೆ ನೆಮ್ಮದಿ ಮನಃಶಾಂತಿ ತಂದಿತ್ತೇನೋ? ಬೇಕುಗಳ ಬಿಸಿಲುಗುದುರೆಯ ಹಿಂದೆ ಹೊರಟ ನಮಗೆ ಅವೆರಡೂ ಮರೀಚಿಕೆ ಏನೋ ಅನ್ನಿಸುತ್ತದೆ .

ಏನ ಬೇಡಲಿ ?
ದೇವ, ನಿನ್ನ ಮಾಯೆಗಂಜಿ
ನಡುಗಿ ಬಾಡೆನು ;
ನಿನ್ನ ಇಚ್ಛೆಯಂತೆ ನಡೆವೆ –
ನಡ್ಡಿ ಮಾಡೆನು.

ಮುಕ್ತಿ ! ಮುಕ್ತಿ ! ನನ್ನ ನಾನು
ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
ಅಡಗಿಕೊಳ್ವುದೋ ?

ಶಕ್ತಿಯಿತ್ತೆ ಮುಕ್ತಿಯನ್ನು
ಗಳಿಸಿಕೊಳ್ಳಲು ;
ನೀರನೆರೆದೆ ಬಳ್ಳಿಯನ್ನು
ಬೆಳಸಿಕೊಳ್ಳಲು

ಜ್ಞಾನರವಿಯನಿತ್ತೆ ಎದೆಯ
ನೋಡಿಕೊಳ್ಳಲು ;
ಗೀತೆಯನ್ನು ಕೊಟ್ಟೆ ಕೊಳಲೊ –
ಳೂದಿಕೊಳ್ಳಲು.

ಎಲ್ಲವನ್ನು ಕೊಟ್ಟಿರುವೆ ;
ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
ಏಕೆ ಕಾಡಲಿ !

ಕೆಎಸ್ ನರಸಿಂಹ ಸ್ವಾಮಿ
ಮೈಸೂರು ಮಲ್ಲಿಗೆ ಕವನ ಸಂಕಲನ

 -ಸುಜಾತಾ ರವೀಶ್

6 Comments on “ಏನ ಬೇಡಲಿ ನಿನ್ನ?

  1. ಗೆಳತಿ… ಮೈಸೂರು ನರಸಿಂಹಸ್ವಾಮಿಗಳ ಮೊದಲ ಕವನ ಸಂಕಲನ ಮೈಸೂರು ಮಲ್ಲಿಗೆ ಅಲ್ಲ..ಕಬ್ಬಿಗರ ಕೂಗು1933.. ಮೈಸೂರು ಮಲ್ಲಿಗೆ 1942..ಜನಪ್ರಿಯ ಕವನ ಸಂಕಲನ..
    ನೀವು.ಈಗ ಮೈಸೂರು ಮಲ್ಲಿಗೆ ಕವನ ಸಂಕಲನದ ಒಂದು ಕವನ.ಏನಬೇಡಲಿ..ವಿಶ್ಲೇಷಣೆ.. ಸೊಗಸಾಗಿ ಬಂದಿದೆ….

  2. ದೇವರು ಎಲ್ಲವನ್ನು ನೀಡಿದ್ದರೂ ನಾವು ಅವನನ್ನು ಕಾಡುವುದನ್ನು ನಿಲ್ಲಿಸಿಲ್ಲ
    ಚಂದದ ಬರಹ

  3. ಹಿರಿಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಪ್ರಸಿದ್ಧ ಭಾವಗೀತೆಯೊಂದರ ವಿಮರ್ಶಾತ್ಮಕ ಲೇಖನ ಚೆನ್ನಾಗಿದೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *