ಗೋವಿನಹಾಡು – ಬದುಕುವುದು, ಬದುಕಿಸುವುದು
ಗೋವಿನ ಹಾಡು ಬಹಳ ಪ್ರಸಿದ್ಧವಾದ ಜನಪದ ಕಾವ್ಯ. ಇದನ್ನು ಅನೇಕರು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿದ್ದಾರೆ. ಇವತ್ತಿನ ಅನಿಮೇಷನ್ ಭಾಷೆಯಲ್ಲಿ ಅಥವಾ ಕಾರ್ಟೂನ್ ಭಾಷೆಯಲ್ಲಿ ವಾಸ್ತವತೆ ಮತ್ತು ಆದರ್ಶಗಳನ್ನು ಭಾವನಾತ್ಮಕವಾಗಿ ಸಹಜ ಪ್ರಾಕೃತಿಕ ಪರಿಸರದ ಹಿನ್ನಲೆಯಲ್ಲಿ ಈ ಕಾವ್ಯ ಬಹಳ ಸುಂದರವಾಗಿ ಬೆಸೆದಿದೆ. ಇದನ್ನು ಪುನಃ ಓದುವ, ಅರ್ಥೈಸುವ ಪ್ರಯತ್ನವನ್ನು ಹೀಗೆ ಮಾಡಬಹುದು: ಬದುಕು, ಸಾವುಗಳ ಜಿಜ್ಞಾಸೆ ಸತ್ಯವನ್ನು ಕುರಿತ ಜಿಜ್ಞಾಸೆಯೂ ಹೌದು. ಸತ್ಯ ಎಂದರೆ ಏನು ಎಂಬ ಪ್ರಶ್ನೆಗೆ ಕೊಡಬಹುದಾದ ಉತ್ತರಗಳಲ್ಲಿ ಒಂದು ಗೋವಿನ ಹಾಡು. ಇದು ನಮ್ಮ ಒಟ್ಟಾರೆ ಅರ್ಥಪೂರ್ಣ ಬದುಕನ್ನು ಕುರಿತ ನಮ್ಮ ಭಾರತೀಯ ತಾತ್ತ್ವಿಕ ಜಿಜ್ಞಾಸೆಯ ಫಲಶ್ರುತಿಯೂ ಹೌದು.
ಕಾವ್ಯದ ಸಾರಾಂಶ:
ಗೋವಿನ ಹಾಡು ಕಾವ್ಯದಲ್ಲಿ ಒಂದು ಹಸು ಹುಲಿಯೊಂದಕ್ಕೆ ಸಿಕ್ಕಿಬಿದ್ದಾಗ ಏನಾಯಿತು ಎಂಬುದರ ವರ್ಣನೆ ಇದೆ. ಪುಣ್ಯಕೋಟಿ ಎನ್ನುವ ಹಸು ಅರ್ಭುಕ ಎನ್ನುವ ಹುಲಿಯ ಬಾಯಿಗೆ ಸಿಕ್ಕಿಬಿದ್ದಿದೆ. ತನ್ನ ಕರುವಿಗೆ ಹಾಲು ಕುಡಿಸಿ ಬರುತ್ತೇನೆ, ತನಗೆ ದೊಡ್ಡಿಗೆ ಹೋಗಲು ಅವಕಾಶ ಕೊಡು ಎಂದು ಹಸು ಹುಲಿಯನ್ನು ಕೇಳಿಕೊಂಡಿದೆ. ಈಗ ಬಿಟ್ಟರೆ ಮತ್ತೆ ಹಿಂದಿರುಗಿ ಬರುವುದಿಲ್ಲ, ಆದ್ದರಿಂದ ಬಿಡಲು ಸಾಧ್ಯವಿಲ್ಲ ಎಂದು ಹುಲಿ ಹಸುವನ್ನು ದೊಡ್ಡಿಗೆ ಕಳುಹಿಸಿಕೊಡಲು ನಿರಾಕರಿಸಿತು. ಕೊಟ್ಟ ಮಾತಿಗೆ ತಪ್ಪದ ಹಸು ತಾನು ಎಂದು ಹುಲಿಯನ್ನು ಒಪ್ಪಿಸಿ ಹಸು ತನ್ನ ದೊಡ್ಡಿಗೆ ಹೊಗುತ್ತದೆ. ತನ್ನ ಕರುವಿಗೆ ಹಾಲು ಕುಡಿಸಿ ಆಡಿದ ಮಾತಿನಂತೆ ಅದು ಹಿಂತಿರುಗಿ ಬಂದು ತನ್ನನ್ನು ಹುಲಿಗೆ ಒಪ್ಪಿಸಿಕೊಳ್ಳುತ್ತದೆ. ಆದರೆ ಹುಲಿಗೆ ಇಂಥ ಪ್ರಾಮಾಣಿಕ ಹಸುವನ್ನು ಕೊಂದು ತಿನ್ನಲು ಇಷ್ಟವಾಗುವುದಿಲ್ಲ. ಹಸಿದುಕೊಂಡು ಬದುಕಿ ಉಳಿಯಲೂ ಸಾಧ್ಯ ಇಲ್ಲದ್ದರಿಂದ ಕೆಳಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತದೆ. ಇದು ಈ ಕಾವ್ಯದ ಸಾರಾಂಶ.
ಈ ಕಾವ್ಯ ಸತ್ಯವನ್ನು ಹಲವು ಮಗ್ಗುಲುಗಳಲ್ಲಿ ಗಮನಿಸಲು ಸಾಧ್ಯವಿದೆ ಎನ್ನುವುದು ಈ ಕಾವ್ಯದ ಮಹತ್ ಧ್ವನಿ (ಮಹದ್ಧ್ವನಿ)
1 ಕಾಡು – ನಾಡು
ದಟ್ಟ ಕಾನನ. ಅಲ್ಲಿ ಕಾಳಿಂಗನೆಂಬ ಗೊಲ್ಲನ ದೊಡ್ಡಿ. ಇದು ಈ ಕಾವ್ಯದ ಒಂದು ಮುಖ್ಯ ಸಂಗತಿ. ಇಲ್ಲಿಯ ಈ ಗೊಲ್ಲನ ದೊಡ್ಡಿ ಕಾಡಿನಲ್ಲಿ ಮನುಷ್ಯ-ವ್ಯವಸ್ಥೆಯ ಪ್ರವೇಶ ಆಗಿದೆ, ಮಾನವನ ಇರುವಿಕೆ ಅಲ್ಲಿ ಸಾಧ್ಯ ಆಗಿದೆ ಎನ್ನುವುದರ ಸೂಚಕ. ಕಾಡು ಪ್ರಾಕೃತಿಕವಾದ, ಸ್ವಾಭಾವಿಕವಾದ, ಸ್ವಚ್ಛಂದವಾದ, ಒಂದರ್ಥದಲ್ಲಿ ಮನುಷ್ಯನಿಂದ ಸ್ವತಂತ್ರವಾದದ್ದು. ಈ ಚೌಕಟ್ಟಿನಲ್ಲಿಯ ದೊಡ್ಡಿ ಎನ್ನುವಂತಹ ಯಾವುದೇ ಮನುಷ್ಯನಿರ್ಮಿತ ವ್ಯವಸ್ಥೆಯನ್ನು ಅದು ಸೂಕ್ತವಾದದ್ದು ಎಂದು ಸಮರ್ಥಿಸಿಕೊಂಡ ಹೊರತೂ ತನ್ನ ಪರಿಕಲ್ಪನೆಯ ವ್ಯವಸ್ಥೆಯನ್ನು ನಿರ್ಮಿಸುವ ಮನುಷ್ಯ-ಪ್ರಯತ್ನಕ್ಕೆ ಯಾವ ಅರ್ಥವೂ ಇರುವುದಿಲ್ಲ.
ಮನುಷ್ಯ-ನಿರ್ಮಿತ ವ್ಯವಸ್ಥೆಯ ಸಮರ್ಥನೆಯ ಭಾಗವಾಗಿ ಎಂಬಂತೆ ಕಾವ್ಯದ “ಗೊಲ್ಲನ ದೊಡ್ಡಿ” ಎಂಬ ಮನುಷ್ಯ-ನಿರ್ಮಿತ ವ್ಯವಸ್ಥೆಯಲ್ಲಿ ಪ್ರೀತಿ ಇದೆ, ಸಮೃದ್ಧಿ ಇದೆ, ಸಹಕಾರ ಇದೆ, ಮಾನವೀಯ ಮೌಲ್ಯಗಳಿವೆ ಎನ್ನುತ್ತದೆ ಕಾವ್ಯ. ಇದನ್ನು ಕಾವ್ಯದ ಆರಂಭದಲ್ಲಿರುವ “ಎಳೆಯ ಮಾವಿನ ಮರದ ಕೆಳಗೆ, ಕೊಳಲನೂದುತ ಗೊಲ್ಲ ಗೌಡನು, ಬಳಸಿ ಬರುವ ಹಸುಗಳನ್ನು ಬಳಿಗೆ ಕರೆದನು ಹರುಷದಿ” ಇತ್ಯಾದಿ ಸಾಲುಗಳಿಂದ ಕಾವ್ಯ ಸೂಚಿಸುತ್ತದೆ. ಇವು ಕಾಡು ಮತ್ತು ನಾಡುಗಳನ್ನು ತುಲನಾತ್ಮಕವಾಗಿ ಗಮನಕ್ಕೆ ತರುವ ಸಾಲುಗಳೂ ಆಗಿವೆ.
2 ಸ್ವಕೇಂದ್ರಿತ ಹಸಿವು x ಅರ್ಥಪೂರ್ಣ ಬದುಕು
ಕಾಳಿಂಗ ಗೊಲ್ಲನ ದೊಡ್ಡಿಯ ಹಸುಗಳೆಲ್ಲ ತಮ್ಮ ಕರುಗಳಿಗೆ ಹಾಲನ್ನು ಕೊಟ್ಟಿವೆ. ಗೊಲ್ಲನ ತಂಬಿಗೆಗಳನ್ನು ಹಾಲಿನಿಂದ ತುಂಬಿಸಿವೆ. ಮೇಯುವುದಕ್ಕೆ ಕಾಡಿನ ಒಳಭಾಗಕ್ಕೆ ಹೋಗಿವೆ. ಇನ್ನೇನು ದೊಡ್ಡಿಗೆ ಹಿಂತಿರುಗುವ ಹೊತ್ತು. ಎಲ್ಲ ಹಸುಗಳು ಒಂದರ ಹಿಂದೆ ಒಂದರಂತೆ, ಒಂದರ ಪಕ್ಕ ಒಂದರಂತೆ ಗುಂಪಾಗಿ ದೊಡ್ಡಿಯ ಹಾದಿ ಹಿಡಿದಿವೆ. ಆ ಕಾಡಿನಲ್ಲೊಂದು ಕಿಬ್ಬಿ. ಅದರಲ್ಲೊಂದು ಅರ್ಭುಕ ಎಂಬ ಹುಲಿ. ಅದು ಅತಿಯಾಗಿ ಹಸಿದಿದೆ. ಆಹಾರಕ್ಕಾಗಿ ಹೊಂಚು ಹಾಕುತ್ತಿದೆ. ಹಸುಗಳ ಗುಂಪನ್ನು ಕಂಡೊಡನೆ ಕಾಡೆಲ್ಲ ನಡುಗುವಂತೆ ಆರ್ಭಟಿಸಿದೆ. ಆ ಆರ್ಭಟಕ್ಕೆ ಹೆದರಿ ಓಡಿಹೋದ ಹಸುಗಳಲ್ಲಿ ಪುಣ್ಯಕೋಟಿಯೂ ಒಂದು. ಅದು ಸಂಪೂರ್ಣವಾಗಿ ಒಂಟಿಯಾಗಿಬಿಟ್ಟಿದೆ. ಗುಂಪಿನಲ್ಲಿರುವ ಹಸುಗಳಲ್ಲಿ ಒಂದನ್ನು ಗುಂಪಿನಿಂದ ಬೇರ್ಪಡಿಸುವುದೇ ಹುಲಿಯ ಸಂಚು. ಹಾಗೆ ಮಾಡಿ ಗುಂಪಿನಿಂದ ಹೊರಬಂದ ಪುಣ್ಯಕೋಟಿಯನ್ನು ಅಡ್ಡಕಟ್ಟಿದೆ. ಅದನ್ನು ಕೊಂದು ತಿನ್ನುತ್ತೇನೆಂದು ಗುಡುಗಿದೆ..
ಪುಣ್ಯಕೋಟಿಗೆ ಆಹಾರಕ್ಕಾಗಿ ತನ್ನನ್ನೇ ಅವಲಂಬಿಸಿದ ಪುಟಾಣಿ ಕರುವೊಂದಿದೆ. ಅದರಿಂದಾಗಿ ಅದು ತನ್ನನ್ನು ಬಿಟ್ಟುಬಿಡು ಎಂದು ಹುಲಿಯನ್ನು ಬೇಡಿಕೊಂಡಿದೆ. ಹುಲಿ ಒಪ್ಪದೇ ಇದ್ದಾಗ ಹೋಗಲಿ ಕಡೆಯದಾಗಿ ಇದೊಂದು ಹೊತ್ತು ಕರುವಿಗೆ ಹಾಲು ಕುಡಿಸಿ ಬಂದುಬಿಡುತ್ತೇನೆ ಎಂದು ಹುಲಿಗೆ ಭಾಷೆ ಕೊಟ್ಟಿದೆ. ಇದು ಕಾವ್ಯದ ಅತ್ಯಂತ ಭಾವಪೂರ್ಣವಾದ ದೃಶ್ಯ. ಈ ದೃಶ್ಯ ಸೂಚಿಸುತ್ತಿರುವುದು ಕಾಡಿನಲ್ಲಿ ಸ್ವ ಕೇಂದ್ರಿತ ಹಸಿವು ಮಾತ್ರ ಇದೆ. ದೊಡ್ಡಿಯಲ್ಲಾದರೋ ಅದಕ್ಕೆ ತದ್ವಿರುದ್ಧ. ದೊಡ್ಡಿಯ ಸದಸ್ಯ ಆದ ಪುಣ್ಯಕೋಟಿ ತನ್ನ ಕರುವಿನ ಹಸಿವನ್ನು ಭಾವಿಸುವಂತೆ ಹುಲಿಯ ಹಸಿವನ್ನೂ ಭಾವಿಸಬಲ್ಲುದು. ಅದಕ್ಕೆ ಹುಲಿಯ ಹಸಿವನ್ನು ನಿರ್ಲಕ್ಷಿಸಲು ಆಗದು. ಆದರೆ ತನ್ನ ಕರುವಿನ ಹಸಿವು ಹುಲಿಯ ಹಸಿವಿಗಿಂತ ಮಿಗಿಲು ಎನ್ನುವುದು ಅದರ ಗ್ರಹಿಕೆ.
ಕರುವಿಗೆ ಹಾಲು ಕುಡಿಸಿ ಬಂದುಬಿಡುತ್ತೇನೆ ಎಂದು ಭಾಷೆ ಕೊಡುವ ಪುಣ್ಯಕೋಟಿಗೆ ತನ್ನ ಕರುವಿನ ಹಸಿವನ್ನು ತಣಿಸುವ ತನ್ನ ಸಾಧ್ಯತೆ ತಾತ್ಕಾಲಿಕ ಎಂದು ಗೊತ್ತಿದೆ. ತನ್ನನ್ನು ಮಾತ್ರ ಅವಲಂಬಿಸಿ ಬದುಕಬೇಕಾದ ಅವಶ್ಯಕತೆ ಕರುವಿಗೆ ಇರುವುದೂ ತಾತ್ಕಾಲಿಕ ಎಂದೂ ಗೊತ್ತಿದೆ. ಅದು ದೊಡ್ಡಿಗೆ ಹಿಂತಿರುಗಿದ ಮೇಲೆ ತನ್ನ ಕರುವಿಗೆ ಇತರರೊಂದಿಗೆ ಬದುಕಲು ಸೂಚಿಸುವ ಪದ್ಯಗಳು ಕಾವ್ಯದಲ್ಲಿ ಇವೆ. “ಅಮ್ಮಗಳಿರಾ ಅಕ್ಕಗಳಿರಾ ಎನ್ನ ತಾಯೊಡ ಹುಟ್ಟುಗಳಿರಾ ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು” ಇತ್ಯಾದಿ ಪದ್ಯಗಳು ʼಸಹಜೀವನ, ಕೂಡುಬದುಕು ಹೆಚ್ಚು ವ್ಯಾಪಕವಾದದ್ದು; ಅದಕ್ಕೆ ಒಂದು ಪರಂಪರೆಯನ್ನು ಕಟ್ಟುವ ಶಕ್ತಿ ಇದೆ; ಒಂದು ಜೀವನರೀತಿಗೆ ನಿರಂತರತೆಯನ್ನು ಕೊಡುವ ಸಾಮರ್ಥ್ಯ ಇದೆ; ಸ್ವಕೇಂದ್ರಿತ ಹಸಿವನ್ನು ಹಿಂಗಿಸಿಕೊಂಡು ಬದುಕುವ ರೀತಿಯಾದರೋ ಅಲ್ಲಿಗಲ್ಲಿಗೇ ಸೀಮಿತವಾದದ್ದುʼ ಎಂದು ಸೂಚಿಸುತ್ತವೆ.
3 ಹುಲಿಯ ಕಿಬ್ಬಿ
ಹಸುವಿನ ಮತ್ತು ದೊಡ್ಡಿಯ ಜೀವನದ ದೃಷ್ಟಿಕೋನದಿಂದ ರೂಪುಗೊಳ್ಳುವ ಸೂಚಕತೆಗಳೇ ಬೇರೆ, ಹುಲಿಯ ಮತ್ತು ಕಾಡಿನ ಜೀವನದಿಂದ ರೂಪುಗೊಳ್ಳುವ ಸೂಚಕತೆಗಳೇ ಬೇರೆ. ಹಸುವಿಗೆ ದೊಡ್ಡಿ ಎನ್ನುವ ಚೌಕಟ್ಟು, ವ್ಯವಸ್ಥೆ ಇದ್ದರೆ ಹುಲಿಗೂ ಕಿಬ್ಬಿ ಎನ್ನುವ ವ್ಯವಸ್ಥೆ, ಚೌಕಟ್ಟು ಇದೆ. ಅದು ಹುಲಿಯೊಂದಕ್ಕೆ ಮಾತ್ರ ಸೀಮಿತವಾದದ್ದು. ಅದರೊಂದಿಗೆ ಯಾರೂ ಇಲ್ಲ. ಅದರ ಕಿಬ್ಬಿ ಮತ್ತು ಆ ಕಿಬ್ಬಿಯೊಳಗಿನ ಒಂಟಿ ಜೀವನವೇ ಅದರ ಬದುಕನ್ನು ಏಕಾಕಿಯಾಗಿಸಿದೆ ಮತ್ತು ಒಂದರ್ಥದಲ್ಲಿ ಭಯಾನಕವಾಗಿಸಿದೆ. ಅದು ಬದುಕಬೇಕಾದರೆ ಅದಕ್ಕೆ ಭಯೋತ್ಪಾದನೆಯೇ ಏಕೈಕ ದಾರಿ. ಅದಕ್ಕೆ ತನ್ನ ಅಸ್ತಿತ್ವವನ್ನು ತೋರಿಸುವ ದಾರಿಯೂ ಭಯೋತ್ಪಾದನೆಯೇ.
ಹುಲಿಯು ಭಯೋತ್ಪಾದನೆಯಿಂದಲೇ ತನ್ನ ಹಸಿವನ್ನು ಹಿಂಗಿಸಿಕೊಳ್ಳ ಹೊರಟಿದೆ, ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳ ಬಯಸಿದೆ. ಅದು ತಾನು ಅಡ್ಡಗಟ್ಟಿದ ಹಸುವಿಗೆ “ಹೊಲನ ಗದ್ದೆಯ ಹಾಳುಮಾಡಿದೆ| ಬೆಳೆದ ಪೈರನು ಸವಿದು ಕೆಡಿಸಿದೆ| ಬಳಿಕ ಎನ್ನಯ ಗವಿಯ ಬಳಿಗೆ ತಳುಕದೆ ನೀ ಬಂದೆ” ಎಂದು ಆರೋಪಗಳ ಮಳೆಗರೆದಿದೆ. ಅದಕ್ಕೆ ಶಿಕ್ಷೆ ಎಂದು “ಬೀಳ ಹೊಯ್ವೆನು, ನಿನ್ನನು ಸೀಳಿ ಬಿಸುಡುವೆ ಬೇಗನೆನುತ” ಪ್ರಳಯವಾಗಿ ಕೋಪಿಸಿಕೊಂಡು ತೀರ್ಮಾನಿಸಿದೆ. ಹಸು ತನ್ನಿಂದ ತಪ್ಪು ಆಗಿಲ್ಲ ಎಂದು ”ಅಡವಿಯೊಳಗಣ ಹುಲ್ಲು ಮೇಯುವೆ| ಮಡುವಿನೊಳಗಣ ನೀರು ಕುಡಿಯುವೆ| ಒಡೆಯನ ಆಜ್ಞೆಯಿಂದಲಿರುವೆನು| ನನ್ನ ಕಡೆಹಾಯಿಸು” ಎಂದು ವಿನಂತಿಸಿಕೊಂಡಿದೆ. ಎದುರುತ್ತರ ಕೊಡುವೆಯಾ ಎಂದು “ಕತ್ತು ಮುರಿವೆನು, ಕಚ್ಚಿ ಒದರುವೆ, ರಕ್ತ ಹೀರುವೆ” ಎಂದು ಹುಲಿ ರೌದ್ರ ತಾಳಿದೆ.
ಕಾವ್ಯ ಕಟ್ಟಿಕೊಡುವ ಈ ದೃಶ್ಯ ʼಭಯೋತ್ಪಾದಕರದು ಸ್ವಕೇಂದ್ರಿತವಾದ ಮತ್ತು ಭಯೋತ್ಪಾದನೆ ಆಧಾರಿತ ನ್ಯಾಯದ ಬದುಕು; ಸಾಮಾಜಿಕರದಾದರೋ ಪ್ರೀತಿ, ಸಹಕಾರಗಳ ಭದ್ರ ಚೌಕಟ್ಟಿನೊಳಗಣ ಬದುಕು. ವ್ಯವಸ್ಥೆಯ ಪ್ರತಿಪಾದಕರ ಆಶಯವಾದರೋ ಕಾನೂನು, ಸಂವಿಧಾನ ಇತ್ಯಾದಿಗಳ ಲಿಖಿತ ಅಥವಾ ಅಲಿಖಿತ ಚೌಕಟ್ಟಿನಲ್ಲಿ ಬದುಕಿಗೆ ಅರ್ಥವನ್ನು ಕಂಡುಕೊಳ್ಳುವುದು. ವ್ಯವಸ್ಥೆಯ ಪ್ರತಿಪಾದಕರಿಗೆ ವ್ಯವಸ್ಥೆಯು ಪ್ರೀತಿ, ಸಹಕಾರಗಳ ಭದ್ರ ಚೌಕಟ್ಟಾದರೆ ಹುಲಿಗೆ ಆದಂತೆ ಭಯೋತ್ಪಾದಕರಿಗೆ ಅವರ ಚೌಕಟ್ಟೇ ಭಯೋತ್ಪಾದಕ ಆಗುತ್ತದೆ” ಎಂಬುದನ್ನು ಹುಲಿಯ ಕಿಬ್ಬಿಯ ರೂಪಕದಿಂದ ಹೇಳಬಯಸುತ್ತಿದೆ.
4 ಭಯೋತ್ಪಾದನೆ x ಮಾನವೀಯತೆ: ಮೌಲ್ಯಪ್ರೇರಕ ಕಾಡು
ಹಸಿವಿನ ಸಂದರ್ಭವೊಂದರಲ್ಲಿ ಕಾಡಿನ ಹುಲಿ, ದೊಡ್ಡಿಯ ಹಸು ಎರಡೂ ಮುಖಾಮುಖಿ ಆಗಿವೆ. ಹುಲಿ ತಾನು ಹಸಿದಿದ್ದೇನೆ, ತನಗೆ ಹಸು ಆಹಾರ ಆಗಲೇಬೇಕು ಎನ್ನುವ ಒತ್ತಡ ಹೇರುತ್ತಿದೆ. ಹಸು ತನ್ನ ಕರುವೂ ಹಸಿದಿದೆ, ಅದಕ್ಕೆ ತಾನು ಆಹಾರ ಒದಗಿಸಬೇಕು, ತನ್ನನ್ನು ಬಿಟ್ಟುಬಿಡು ಎಂದು ಬೇಡಿಕೊಳ್ಳುತ್ತಿದೆ. ಇದು ಕಾವ್ಯಕ್ಕೆ ಗಂಭೀರವಾದ ತಿರುವನ್ನು ಕೊಡುವ ದೃಶ್ಯ.
ಭಯಾನಕ ಕಾಡು ಎಷ್ಟು ವಾಸ್ತವವೋ ಮಾನವೀಯತೆಯೂ ಅಷ್ಟೇ ವಾಸ್ತವ. ಅವೆರಡೂ ಒಂದರ್ಥದಲ್ಲಿ ಸಮಾನಾಂತರ. ಕಾಡು ಎಷ್ಟು ದಟ್ಟವೋ, ಘೋರವೋ ಅಷ್ಟೇ ಸುಲಭಗಮ್ಯ. ಅಲ್ಲಿ ಕಾಲುದಾರಿಗಳು. ಒಳದಾರಿಗಳು ಇವೆ. ಹಸುಗಳಿಗೆ ಕಾಡಿನ ಒಳದಾರಿಗಳ, ಕಾಲುದಾರಿಗಳ ಗುರುತು ಇದೆ. ಅವು ಕಾಡಿನಲ್ಲಿ ಮೇಯಲು ಹೋದರೂ ತಮ್ಮ ದೊಡ್ಡಿಗೆ ಸುರಕ್ಷಿತವಾಗಿ ಹಿಂತಿರುಗುತ್ತವೆ. ಭಯೋತ್ಪಾದಕ ಹುಲಿಗೆ ಮುಖಾಮುಖಿ ಆಗುವ ಪರಿಸ್ಥಿತಿಗೆ ಸಿಕ್ಕಿಹಾಕಿಕೊಳ್ಳುವುದೇ ಇಲ್ಲ.
ಹುಲಿ ಕೊಂದು ತಿನ್ನುತ್ತೇನೆ ಎಂದು ಆರ್ಭಟಿಸಿದರೂ ಹಸು ತನ್ನನ್ನು ಬಿಡು ಎಂದು ಕೇಳಿಕೊಳ್ಳುವ ಮಾತುಗಳಿಗೂ ಕಿವಿಗೊಡುತ್ತದೆ. ಕಾಡು ಮೌಲ್ಯಗಳನ್ನು ಭಾವಿಸಬಲ್ಲುದು, ಪ್ರೇರೇಪಿಸಬಲ್ಲುದು. ಕಾಡು ಭಕ್ಷಕವೂ ಹೌದು, ರಕ್ಷಕವೂ ಹೌದು. ಹಸಿವು ಇದ್ದಾಗ ಮಾತ್ರ ಹುಲಿ ಮತ್ತು ಹಸು ಒಂದಕ್ಕೊಂದು ವಿರೋಧಿಗಳು. ಹಸಿವು ಇಲ್ಲದಿದ್ದಾಗ ಅವು ಪರಸ್ಪರರ ಸಹ ಅಸ್ತಿತ್ವವನ್ನು ಒಪ್ಪಿಕೊಳ್ಳುವ ಸಹಜೀವಿಗಳು.
ಭಯಾನಕ ಕಾಡು ಮತ್ತು ಮಾನವೀಯತೆಗಳು ಯಾವಾಗಲೂ ಮುಖಾಮುಖಿ ಆಗುತ್ತಿರುವುದಿಲ್ಲ. ಕಾಡಿನಲ್ಲಿ ಮತ್ತು ನಾಡಿನಲ್ಲಿ ಇರುವವರೆಲ್ಲರೂ ಹಸು, ಹುಲಿಯ ಹಾಗೆ ಮುಖಾಮುಖಿ ಆಗುವ ಸಮಸ್ಯೆಗೆ ಸಿಕ್ಕಿಕೊಳ್ಳುವುದೂ ಇಲ್ಲ. ಹಸು ಒಂಟಿಯಾಗಿದ್ದದ್ದು, ತನ್ನ ಕಂದನ ಹಸಿವನ್ನು ಮಾತ್ರ ಭಾವಿಸುತ್ತಾ ಬರುತ್ತಿದ್ದುದು ಅದಕ್ಕೆ ಈ ಸಮಸ್ಯೆ ಎದುರಾಗಲು ಒಂದು ಕಾರಣ. ಎಚ್ಚರರಹಿತ ಮಾನವೀಯತೆಗೆ ಭಯೋತ್ಪಾದಕತೆಯ ಬೇಗೆ ತಾಗದೇ ಇರುವ ಸಾಧ್ಯತೆ ಕಡಿಮೆ.
5 ಸತ್ಯದ ಪರಿಕಲ್ಪನೆ: ಸಾಂದರ್ಭಿಕ ಸತ್ಯ ಮತ್ತು ನಿತ್ಯ ಸತ್ಯ
ಸತ್ಯದ ಪ್ರತೀಕ ವ್ಯವಸ್ಥೆ ಎಂದು ನಂಬಿರುವ ಹಸು ಎಲ್ಲ ಜೀವಿಗಳಿಗೂ ತಮ್ಮ ತಮ್ಮ ರೀತಿಯಲ್ಲಿ ವ್ಯವಹರಿಸುವ ಸ್ವಾತಂತ್ರ್ಯ ಇರುವ ಸ್ಥಳ ಎಂಬರ್ಥದಲ್ಲಿ ಸ್ವಚ್ಛಂದ ಆಗಿರುವ ಕಾಡಿನಲ್ಲಿ “ಸತ್ಯವೇ ನಮ್ಮ ತಾಯಿ ತಂದೆ| ಸತ್ಯವೇ ನಮ್ಮ ಬಂಧು ಬಳಗ” ಎಂದು ಘೋಷಿಸಿದೆ. ಅದರ ನೆಲೆಯಲ್ಲಿ ಅದು ತನ್ನ ಕಂದನಿಗೆ ಹಾಲು ಕುಡಿಸಿ ಹುಲಿಯ ಹತ್ತಿರಕ್ಕೆ ಹಿಂತಿರುಗಿ ಬರುತ್ತೇನೆ ಎಂದು ಭಾಷೆ ಕೊಟ್ಟಿದೆ. ಅದನ್ನು ಹುಲಿಯೂ ನಂಬಿದೆ. ಕಾಡಿನಂಥ ವಿಸ್ತಾರವಾದ ಜಾಗದಲ್ಲಿಯ ಮನುಷ್ಯನ ವಾಸಸ್ಥಾನದಂತಹ ಸಣ್ಣ ದೊಡ್ಡಿಗೆ ಅದರ ವ್ಯವಸ್ಥೆ ಮತ್ತು ಮನುಷ್ಯನಿಗೆ ಮತ್ತು ದೊಡ್ಡಿಯಂತಹ ಸ್ಥಳಗಳಲ್ಲಿ ವಾಸಮಾಡುವವರ ಪ್ರತೀಕಗಳಾದ ಹಸುಗಳಿಗೆ ಆ ವ್ಯವಸ್ಥೆಯ ಮೇಲಿನ ಭರವಸೆಯೇ ರಕ್ಷಣೆ.. ಈ ವ್ಯವಸ್ಥೆ ಮತ್ತು ಅದು ಒದಗಿಸುವ ರಕ್ಷಣೆ, ಅದು ಒಳಗೊಳ್ಳುವ ಕಾನೂನು, ಸಂವಿಧಾನಗಳಿಗೆ ಪ್ರತೀಕ ದೊಡ್ಡಿಯ ನಾಯಕ. ಆದರೆ ಅವನನ್ನು ಮೀರಿದುದು ಅವನು ಪ್ರತಿನಿಧಿಸುವ ವ್ಯವಸ್ಥೆ, ಅದು ಅವನ ಮೂಲಕ ಜಾರಿಗೆ ಬರುವ ಕಾನೂನು, ಸಂವಿಧಾನಗಳು. ಅದೇ ಹಸುವಿನ ಘೋಷಣೆಯಲ್ಲಿ ಉಕ್ತ ಆಗಿರುವ ಸತ್ಯ.
ಹಸುವಿನ ಕರು ತನಗೆ ಯಾರು ಗತಿ, ನೀನು ಯಾಕೆ ಹುಲಿಯ ಬಾಯಿಗೆ ಸಿಕ್ಕಿ ಪ್ರಾಣ ಬಿಡಬೇಕು, ಹೇಗೂ ತಪ್ಪಿಸಿಕೊಂಡು ಬಂದಿದ್ದೀಯಲ್ಲ ಎಂದು ಒದ್ದಾಡಿಕೊಂಡಾಗಲೂ ಹಸುವಿನ ಉತ್ತರ “ಸತ್ಯವೇ ನಮ್ಮ ತಾಯಿ ತಂದೆ| ಸತ್ಯವೇ ನಮ್ಮ ಬಂಧು ಬಳಗ|” ಎನ್ನುವ ಘೋಷಣೆಯೇ. ಮಗುವಿನ ರಕ್ಷಣೆ, ಪೋಷಣೆಯ ಜವಾಬ್ದಾರಿ ತಾಯಿಯದು ಎಂಬುದು ಸಾಂದರ್ಭಿಕ ಸತ್ಯ. ಒಟ್ಟಾರೆ ರಕ್ಷಣೆ ಮತ್ತು ಪೋಷಣೆಯ ಸಾಧ್ಯತೆ ವ್ಯವಸ್ಥೆಯನ್ನೇ ಅವಲಂಬಿಸಿದೆ ಎಂಬುದು ನಿತ್ಯ ಸತ್ಯ.
ಹಸು ತನ್ನ ಕರುವಿಗೆ ಕೂಡಿ ಬದುಕುವ ಸಲಹೆ ನೀಡುವಂತೆ ಇತರ ಹಸುಗಳಿಗೂ “ಹಿಂದೆ ಬಂದರೆ ಹಾಯಬೇಡಿ| ಮುಂದೆ ಬಂದರೆ ಒದೆಯ ಬೇಡಿ| ಕಂದ ನಿಮ್ಮವನೆಂದು ಕಾಣಿರಿ| ತಬ್ಬಲಿಯನೀ ಕರುವನು” ಎಂದು ತನ್ನ ಕರುವನ್ನು ಒಳಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತದೆ. ವ್ಯವಸ್ಥೆ ಸದಸ್ಯನನ್ನು ಒಳಗೊಳ್ಳಬೇಕು; ಸದಸ್ಯ ವ್ಯವಸ್ಥೆಯನ್ನು ತನ್ನದನ್ನಾಗಿಸಿಕೊಳ್ಳಬೇಕು. ವ್ಯವಸ್ಥೆ ಸದಸ್ಯನನ್ನು, ಸದಸ್ಯ ವ್ಯವಸ್ಥೆಯನ್ನು ತಿರಸ್ಕರಿಸಿದರೆ ಅಥವಾ ಧಿಕ್ಕರಿಸಿದರೆ ಅಲ್ಲಿ ರಕ್ಷಣೆ, ಪೋಷಣೆಯ ಭರವಸೆ ಸಂಪೂರ್ಣವಾಗಿ ಇರುವುದಿಲ್ಲ. ತಾನು ಭಾವಿಸಿದ ವ್ಯವಸ್ಥೆಯ ಹೊರತಾಗಿ ಬೇರೆ ಯಾವ ವ್ಯವಸ್ಥೆಗೂ ಒಳಪಡದೆ ಒಂಟಿಯಾಗಿದ್ದ ಹುಲಿ ಅಂತಿಮವಾಗಿ ಸಾಯುವುದು ಇದರ ಸೂಚನೆಯೇ.
6 ಹುಲಿಯ ಸಾವು: ದ್ವೈಧ (ಡೈಕಾಟಮಿ) ಮತ್ತು ಅಂತಿಮ ಸತ್ಯ
ಕಾಡಿನಲ್ಲಿ ತಿಂದು ಬದುಕುವುದೇ ನಿಯಮ. ಮನುಷ್ಯ-ನಿರ್ಮಿತ ವ್ಯವಸ್ಥೆಯಲ್ಲಿ ಕೂಡಿ ಬದುಕುವುದೇ ನಿಯಮ. ಹುಲಿ-ಹಸು ಎನ್ನುವ ದೈಧಕ್ಕೆ ಸಂಬಂಧಿಸಿದಂತೆ ಕಾವ್ಯ ನಮ್ಮ ಮುಂದೆ ಇಡುವ ಕಾಡುxದೊಡ್ಡಿ ಎನ್ನುವ ಪರಿಕಲ್ಪನೆಯು ಸ್ವಚ್ಛಂಧತೆ-ವ್ಯವಸ್ಥೆ, ಕ್ರೌರ್ಯ-ಮಾನವೀಯತೆ ಎಂಬ ದ್ವೈಧಗಳನ್ನು ಒಳಗೊಳ್ಳುತ್ತದೆ. ಇದು ಪುರುಷ-ಸ್ತ್ರೀ ಎನ್ನುವ ದ್ವೈಧವನ್ನೂ ಒಳಗೊಳ್ಳುತ್ತದೆ. ಕ್ರೌರ್ಯ, ಸ್ವಚ್ಛಂಧತೆಗಳ ಪ್ರತೀಕ ಪುರುಷತ್ವ, ಮಾನವೀಯತೆ ವ್ಯವಸ್ಥೆಗಳ ಪ್ರತೀಕ ಸ್ತ್ರೀತ್ವ ಎಂದು ಭಾವಿಸಬಹುದು. ಇಲ್ಲಿ ದೈಧವೇ ಅಂತಿಮ ಸತ್ಯ.ಅಲ್ಲ. ಇಲ್ಲಿಯ ದ್ವೈಧ ಕಾಡಿನ ಒಳಗೆ ವ್ಯವಸ್ಥೆ, ಮಾನವೀಯತೆಗಳ ಪ್ರವೇಶ ಆದಂತೆಲ್ಲಾ ಕ್ರೂರ, ಸ್ವಚ್ಛಂಧ, ಭಯೋತ್ಪಾದಕ ಕಾಡು ನಾಶವಾಗುತ್ತಾ ಹೋಗುತ್ತದೆ, ನಾಡಾಗಿ ರೂಪುಗೊಳ್ಳುತ್ತದೆ ಎಂಬುದರ ಸೂಚಕ. ಇದಕ್ಕೊಂದು ರೂಪಕ “ಕನ್ನೆಯಿವಳನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು” ಎಂದು ನೆಗೆದು ಹಾರಿದ ಹುಲಿಯ ಸಾವು.
ಹುಲಿಯ ಸಾವನ್ನು ದೊಡ್ಡಿಯ ವಿಶಿಷ್ಟತೆಯ ಹಿನ್ನೆಲೆಯಲ್ಲಿ ಈ ಕಾವ್ಯ ಗಂಭೀರವಾಗಿ ವೈಭವೋಪೇತವಾಗಿ ಚಿತ್ರಿಸುತ್ತದೆ. ಮನುಷ್ಯನಿರ್ಮಿತ ವ್ಯವಸ್ಥೆಯಾದ ದೊಡ್ಡಿಯನ್ನು ಆರಂಭದಲ್ಲಿಯೇ ವೈಭವೀಕರಿಸುವುದು ಕಾವ್ಯದ ಒಂದು ಮುಖ್ಯಾಂಶ. “ಎಳೆಯ ಮಾವಿನ ಮರದ ಕೆಳಗೆ ಗೊಲ್ಲ ಗೌಡ ಕೊಳಲೂದುತ್ತಾ ನಿಂತಿದ್ದಾನೆ. ಪಾರ್ವತಿ, ಲಕ್ಷ್ಮಿ, ಸರಸ್ವತಿಯ ಮಾಣಿಕ್ಯ, ಸರಸ ಸದ್ಗುಣ ವನಿತೆಯರಂಥ ಹಸುಗಳು ಅವನನ್ನು ಬಳಸಿ ನಿಂತಿವೆ. ಅವು ಧರ್ಮಜೀವಿಗಳು; ಧರ್ಮಗುಣದ ತಾಯಿಯರು. ಗಂಗೆ, ಗೌರಿ, ತುಂಗಭದ್ರೆ, ರಂಗನಾಯಕಿ, ರಘು ಕುಲೋತ್ತಮೆಯರಾದ ಸೊಬಗಿಯರು. ಭಾಗ್ಯಲಕ್ಷ್ಮಿ, ಭಾಗ್ಯಗುಣ ಚಾರಿತ್ರೆ, ಯೋಗವತಿ, ಭೂಮಿದೇವಿ, ಕಾಮಧೇನು, ಪುಣ್ಯಕೋಟಿ, ಪುಣ್ಯವಾಹಿನಿಯರಾದ ಅಪೂರ್ವ ಗುಣಸಂಪನ್ನೆಯರು. ಅವುಗಳನ್ನು ಬನ್ನಿ ಎಂದು ಕರೆಯುತ್ತಿದ್ದಂತೆ ಅವೆಲ್ಲಾ ತಾವೇ ತಾವಾಗಿ ಬಿಂದಿಗೆಗಳು ತುಂಬಿ ಸೂಸುವಷ್ಟು ಹಾಲು ಕೊಡುತ್ತವೆ.” ಇಂಥ ವೈಭವದ ದೊಡ್ಡಿಯನ್ನು ಎತ್ತಿಹಿಡಿಯುವ ಗೋವಿನ ಹಾಡು ಕಾವ್ಯದ ಆಶಯ ಆಕ್ರಮಣಕಾರಿ ಹುಲಿಯ ಸಾವಲ್ಲದೆ ಬೇರೆ ಇನ್ನೇನೋ ಆಗಿರಲು ಸಾಧ್ಯವಿಲ್ಲ.
ಹಸು ಕೂಡಿ ಬದುಕುವ ನಿಯಮವನ್ನು ಸತ್ಯವನ್ನಾಗಿ, ಬದುಕಿನ ಭದ್ರ ತಳಪಾಯವನ್ನಾಗಿ ಮುಂದಿಡುತ್ತಿದೆ. ಅದು ಮರ್ಯಾದಿತ ಆಗಬೇಕು, ಜೀವನದ ಅವಿಭಾಜ್ಯ ಅಂಗ ಆಗಬೇಕು ಎಂದರೆ (ಒಂಟಿ ಸಲಗದಂತೆ) ಒಂಟಿಯಾಗಿದ್ದುಕೊಂಡು ಭಯವನ್ನು ಹುಟ್ಟಿಸಿ, ಆಕ್ರಮಣ ಮಾಡಿ ಜೀವನ ನಿರ್ವಹಣೆ ಮಾಡುವ ಹುಲಿ ಸಾಯಬೇಕಾಗುತ್ತದೆ; ಸ್ವಚ್ಛಂಧತೆ, ಅದು ಒಳಗೊಳ್ಳುವ ಅಭದ್ರತೆ, ಅಭದ್ರತೆಯಿಂದಾಗಿ ಒಡಮೂಡುವ ಭಯ, ಕ್ರೌರ್ಯ ಇಲ್ಲವಾಗಲೇಬೇಕಾಗುತ್ತದೆ.
7 ಆಧಾರ-ಸತ್ಯ ಮತ್ತು ಹಸಿವಿನ ಸಮಸ್ಯೆ:
ಗೋವಿನ ಹಾಡು ಕಾವ್ಯ ಪ್ರಸ್ತಾಪಿಸುತ್ತಿರುವ ಒಂದು ಮುಖ್ಯ ಸಮಸ್ಯೆ ಹಸಿವು. ಹೊಟ್ಟೆ ತುಂಬಿಸಿಕೊಳ್ಳುವುದು ಎಲ್ಲಾ ಜೀವಿಗಳ ಪ್ರಮುಖ ಸಮಸ್ಯೆ. ಹಸಿವನ್ನು ಹಿಂಗಿಸಿಕೊಳ್ಳುವುದು ಎಲ್ಲಾ ಜೀವಿಗಳ ಜೈವಿಕ ಅವಶ್ಯಕತೆ. ಅದು ಒಂದರ್ಥದಲ್ಲಿ ಜೀವಂತಿಕೆಯ ಲಕ್ಷಣವೇ ಹಸಿವು. ಸ್ವಾಭಾವಿಕವಾಗಿ ದೊರೆಯುವ ಆಹಾರದಿಂದ ಹಸಿವನ್ನು ಹಿಂಗಿಸಿಕೊಳ್ಳಬಹುದು. ಆಹಾರದ ಉತ್ಪಾದನೆಯನ್ನು ಮಾಡಿಕೊಂಡು ಹಸಿವಿನ ಸಮಸ್ಯೆಯಿಂದ ಪಾರಾಗಬಹುದು. ಹಸಿವನ್ನು ಹೋಗಲಾಡಿಸಿಕೊಳ್ಳಲು ಆಕ್ರಮಣಕ್ಕಿಂತ ಭಿನ್ನವಾದ ಪರಿಹಾರ ಇದೆ. ಅದೇ ದೊಡ್ಡಿಯಂತಹ ವ್ಯವಸ್ಥೆ.
ಹಸಿವನ್ನು ನಿವಾರಿಸಿಕೊಂಡು ಜೀವಂತವಾಗಿರಲು ಅನುಕೂಲಕರವಾದ ದೈಹಿಕ, ಭೌತಿಕ ಸಂಗತಿಗಳು ಸಾಕು. ಒಬ್ಬ ಅರ್ಥಪೂರ್ಣ ವ್ಯಕ್ತಿಯಾಗಿ ಜೀವಂತವಾಗಿರಲು ಒಂದು ವ್ಯವಸ್ಥೆ ಬೇಕು. ಅದು ಮಾನವೀಯ ಮೌಲ್ಯವುಳ್ಳದ್ದು ಆಗಿರಬೇಕು. ಆ ವ್ಯವಸ್ಥೆ ಗೋವಿನ ಹಾಡು ಪ್ರಸ್ತಾಪಿಸುವ “ಹಾಳು ಮಾಡುವ ಗರತಿಯಲ್ಲ, ಬೀಳು ಮಾಡುವ ಗೈಮೆಯಲ್ಲ. ನಾನು ಮೆಟ್ಟಿದ ಭೂಮಿ ಬೆಳೆವುದು, ಧಾನ್ಯ ಧನಗಳನ್ನುಂಟುಮಾಡುವುದು. ಶಾನೆ ಕ್ಷೀರವ ನಿತ್ಯ ಕೊಡುವುದು. ಧರೆಯೊಳು ಬಾಳುವಂತೆ ಮಾಳ್ಪುದು” – ಎನ್ನುವ ಭಾವದ್ದು. ಈ ವ್ಯವಸ್ಥೆಯ ಇತಿಮಿತಿಗಳ ಅರಿವೂ ಗೋವಿನ ಹಾಡಿನ ಕವಿಗೆ ಇದೆ. ಅದರಿಂದಲೇ ಕಾವ್ಯ ಸತ್ಯದ ಮಾತನ್ನಾಡುತ್ತಿದೆ, ಹಸಿವನ್ನು ಸಹಿಸಿಕೊಳ್ಳುವ ಮಾತನ್ನಾಡುತ್ತಿದೆ.
ಇನ್ನೊಬ್ಬರ ತುತ್ತನ್ನು ಕಸಿದುಕೊಳ್ಳುವುದಕ್ಕಿಂತಲೂ, ಇನ್ನೊಬ್ಬರ ಬಾಯಿಗೆ ತುತ್ತು ಆಗುವುದನ್ನು ತಪ್ಪಿಸಿಕೊಳ್ಳುವುದಕ್ಕಿಂತಲೂ ಇನ್ನೊಬ್ಬರಿಗೆ ಆಹಾರ ಆಗುವುದಕ್ಕಾಗಿ ಪ್ರಾಣತ್ಯಾಗ ಮಾಡಬೇಕಾಗಿ ಬಂದರೆ ಅದು ಯೋಗ್ಯವಾದದ್ದೇ ಎಂದೇ ಕಾವ್ಯ ಹೇಳುತ್ತದೆ. ಇಲ್ಲಿ ಹಸು ತನ್ನ ಹಸಿವನ್ನು, ತನ್ನ ವೈಯಕ್ತಿಕ ಉಳಿವನ್ನು ಭಾವಿಸುತ್ತಿಲ್ಲ. ಬದಲಿಗೆ ಅದು ಚಿಗುರುವ, ಬೆಳೆಯುವ, ಅರಕ್ಷಿತ ಹಾಗೂ ಪೋಷಣೆಯ ಅಗತ್ಯ ಇರುವ ಕಂದನ ಹಸಿವನ್ನು ಭಾವಿಸುತ್ತಿದೆ. ಇದೇ ಕಾವ್ಯ ಪ್ರತಿಪಾದಿಸುತ್ತಿರುವ ಕೂಡು ಬದುಕಿನ ವ್ಯವಸ್ಥೆಯ ಆಧಾರ ಮತ್ತು ಅದರ ನೆಲೆಗಟ್ಟು ಆಗಿರುವ ಸತ್ಯ. ಇದೇ ಹಸಿವನ್ನು ತಣಿಸುವುದಕ್ಕೆ ಮತ್ತು ಸಹಿಸಿಕೊಳ್ಳುವುದಕ್ಕೆ ಇರುವ ಅಳತೆಗೋಲು. ಇದನ್ನೇ ಹಸು ತನ್ನ ಕರುವಿಗೆ ಮತ್ತು ಹುಲಿಗೆ ತಿಳಿಸಬಯಸುತ್ತಿರುವುದು.
ತನ್ನ ಸಾವಿನೊಡನೆ ತಾನು ಭಾವಿಸಿದ ಮೌಲ್ಯ ಕೊನೆಗೊಳ್ಳಬಾರದು ಎನ್ನುವುದು ಪುಣ್ಯಕೋಟಿಯ ಆಶಯ. ಕರು “ಅಮ್ಮಾ ನೀನು ಸಾಯಲೇತಕೆ ಸುಮ್ಮನಿರು ಎಲ್ಲಾರ ಹಾಗೆ” ಎಂದು ಕೇಳಿಕೊಂಡಾಗ ಹಸು “ಸತ್ಯವೆಂದು ಬಾಳಿ ಬದುಕುವ ಭಾಗ್ಯ ನಿನ್ನದು, ಮುಂದರಿತು ಬಾಳಯ್ಯಾ” ಎಂದು ಬೋಧಿಸುತ್ತದೆ. ಈ ಬೋಧನೆ ಅರ್ಥಪೂರ್ಣ ಆಗಿರುವುದು ಹುಲಿ ಪುಣ್ಯಕೋಟಿಗೆ ದೊಡ್ಡಿಗೆ ಹೋಗಿ ಬರಲು ಒಪ್ಪಿಗೆ ಕೊಟ್ಟದ್ದರಿಂದಲೇ. ಹುಲಿ ಒಪ್ಪಿದುದೇ ಅದಕ್ಕೆ ಹಸಿವನ್ನು ಸಹಿಸಿಕೊಳ್ಳುವ ಮತ್ತು ಆಕ್ರಮಣವನ್ನು ಕೈಬಿಡುವ ಮನಸ್ಥಿತಿ ಇದೆ ಎಂಬುದರ ಸೂಚನೆ. ಹುಲಿಯ ಸಾವು ಮತ್ತು ದೊಡ್ಡಿಗೆ ಪುಣ್ಯಕೋಟಿಯ ಪುನರಾಗಮನ ಈ ಮನಸ್ಥಿತಿಯನ್ನು ಒಂದು ಪರಾಕಾಷ್ಠೆಗೆ ತಲುಪಿಸಿ ಬಿಡುತ್ತದೆ.
8 ಸತ್ಯದರ್ಶನ:
ಹುಲಿಯ ಶುದ್ಧೀಕರಣ: ಕೊಟ್ಟ ಭಾಷೆಯಂತೆ ಹಸು ಗವಿಯ ಬಾಗಿಲಿಗೆ ಸ್ವ ಇಚ್ಛೆಯಿಂದ ಹೋಗಿ ನಿಂತಿದೆ. “ಖಂಡವಿದೆ ಕೋ ಮಾಂಸವಿದೆ ಕೋ| ಗುಂಡಿಗೆಯ ಬಿಸಿರಕ್ತವಿದೆ ಕೋ” ಎಂದು ಬಿನ್ನವಿಸಿಕೊಂಡಿದೆ. ಹುಲಿ ಇದನ್ನು ನಿರೀಕ್ಷಿಸಿರಲಿಲ್ಲ. ಅದಕ್ಕೆ ಆಶ್ಚರ್ಯ ಆಗಿದೆ. ತಾನು ಹಸುವನ್ನು ಸಂದೇಹದಿಂದ ನೋಡಿದೆನಲ್ಲ ಎಂದು ತನ್ನ ಬಗ್ಗೆಯೇ ಅದಕ್ಕೆ ಜಿಗುಪ್ಸೆ ಉಂಟಾಗಿದೆ. “ಕನ್ನೆ (ಪರಿಶುದ್ಧ ಮನಸ್ಸಿನವಳು) ಇವಳನು ತಿಂದರೆ ಮೆಚ್ಚನಾ ಪರಮಾತ್ಮನು” ಎಂದು ತೀರ್ಮಾನಿಸಿದೆ. “ಎನ್ನ ಒಡಹುಟ್ಟಕ್ಕ ನೀನು ನಿನ್ನ ತಿಂದು ನಾನೇನ ಪಡೆವೆನು” ಎಂದು ಹಸು ತನ್ನಂತೆಯೇ ಒಂದು ಜೀವಿ (ಒಡಹುಟ್ಟಕ್ಕ), ತನ್ನ ಒಡನಾಡುವ ಜೀವಿ ಎಂದು ಅರ್ಥಮಾಡಿಕೊಂಡಿದೆ. ಈ “ಸತ್ಯ ದರುಶನದಿಂದ” ತಾನು ಇಲ್ಲಿಯ ವರೆಗೆ ಹೊಂದಿದ್ದ ಸ್ವ-ಕೇಂದ್ರಿತ ಭಾವಗಳೆಲ್ಲಾ ಬಿಟ್ಟು ಹೋದವು ಎಂದು ತನ್ನನ್ನು ಶುದ್ಧೀಕರಿಸಿಕೊಂಡಿದೆ.
ಹಸುವಿನ ನಿಲುವು: ಹಸುವಿಗೂ ಹುಲಿಯ ನಡೆ ಅಚ್ಚರಿ ಮೂಡಿಸಿದೆ. ಅದು ತಾನು ಹುಲಿಗೆ ಹೆದರಿಕೊಂಡು ಬಂದಿಲ್ಲ; ಹುಲಿಗೆ ಹಸಿವಾಗಿದೆ, ಬಾಯಾರಿಕೆ ಆಗಿದೆ, ಅದನ್ನು ತಣಿಸುವುದು ಸರಿಯಾದದ್ದು ಎಂದೇ ಬಂದಿದ್ದೇನೆ ಎಂದು ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ. “ಅಣ್ಣ ಬಾರೋ ಹುಲಿಯ ರಾಯನೇ| ಹಸಿದೆಯಲ್ಲ ದೋಷ ಬಂದೀತು| ಎನ್ನ ಆಹಾರವನ್ನು ಬೇಗನೆ| ಕೊಳ್ಳೆಲೋ ಹುಲಿರಾಯನೆ” ಎಂದು ವಿನಂತಿಸಿಕೊಂಡಿದೆ. ಹುಲಿ ಹಸಿದುಕೊಂಡು ಹಾಗೇ ಇದ್ದುಬಿಟ್ಟರೆ ತನಗೆ ಆ ದೋಷ ತಾಗುತ್ತದೆ ಎಂದು ಅಲವತ್ತುಕೊಂಡಿದೆ. “ಯಾಕಯ್ಯಾ ಹುಲಿರಾಯ ಕೇಳು| ಜೋಕೆಯಿಂದಲಿ ಎನ್ನನೊಲ್ಲದೆ| ನೂಕಿ ನೀನು ಸಾಯಲೇತಕೆ| ಬೇಕೆಂದು ನಾ ಬಂದೆನು| ನಿನ್ನ ಪ್ರಾಣವ ತೊರೆಯಲೇತಕೆ| ಕನ್ನೆಯೆನ್ನನು (ದಷ್ಟಪುಷ್ಟ ಎಂರ್ಥದಲ್ಲಿನಕನ್ನೆ) ತಿಂದು ಬದುಕದೆ| ಮುನ್ನ ನಿನ್ನ ತೃಷೆಯ ಸಲಹಿಕೊ| ಪನ್ನಗಶಯನೀಗೆ ಪ್ರಿಯವು” ಎಂದು ಹಸು ಹುಲಿಯ ಆಹಾರ ತನ್ನಂಥ ಹಸುವೇ; ಅದು ದೈವ ಸಮ್ಮತವಾದದ್ದು ಎಂದೂ ತಿಳಿಸಿದೆ. ಆದರೂ ಹುಲಿ ಇದನ್ನು ಒಪ್ಪದೆ ತನ್ನದೂ ನ್ಯಾಯಯುತವಾದದ್ದು ಎಂದು “ಮೂರು ಮೂರ್ತಿಗೆ ಕೈಯ ಮುಗಿದು ಆಕಾಶಕ್ಕೆ ಹಾರಿ ನೆಗೆದು” ಕೆಳಗೆ ಬಿದ್ದು ಪ್ರಾಣ ಬಿಟ್ಟಿದೆ.
ಹುಲಿಯ ಮತ್ತು ಹಸುವಿನ ಭಾಷೆ: ಕೊಂದು ತಿನ್ನುವೆ ಎಂಬುದು ಹುಲಿಯ ಘೋಷಣೆ. ಇದರಲ್ಲಿ ಮುಚ್ಚುಮರೆ ಇಲ್ಲ. ಅದರದು ಹೆದರಿಸುವ ಭಯೋತ್ಪಾದಕ ಭಾಷೆ. ಉಳಿಯುತ್ತೇನೆ; ಆಗದಿದ್ದರೆ ಕೊನೆಯ ಪಕ್ಷ ಉಳಿಸಿಯಾದರೂ ಸಾಯುತ್ತೇನೆ ಎನ್ನುವುದು ಹಸುವಿನ ನಿರ್ಣಯ. ಇದರಲ್ಲೂ ಮುಚ್ಚುಮರೆ ಇಲ್ಲ. ಅದರದು ಮಾನವೀಯತೆಯ ಭಾಷೆ. ಅದರಲ್ಲಿ ಬೇಡಿಕೆ ಇದೆ, ಮನ ಒಲಿಸುವ ಆಶಯವೂ ಇದೆ. ಸ್ವಚ್ಛಂದವಾದ, ಸ್ವಕೇಂದ್ರಿತವಾದ ಪ್ರಾಕೃತಿಕ ನ್ಯಾಯ ಪ್ರತಿಪಾದನೆಯನ್ನು ಕೈಬಿಡಬೇಕು, ಕೂಡು-ಬದುಕುವಿಕೆಯ ನ್ಯಾಯವನ್ನು ಒಪ್ಪಿಕೊಳ್ಳುವಂತಾಗಬೇಕು ಎನ್ನುವ ಸದಾಶಯವಿದೆ. ಇಂಥ ನ್ಯಾಯದ ಬದುಕು ಐಚ್ಛಿಕವಾದದ್ದೇ ವಿನಾ ಕಡ್ಡಾಯವಾದದ್ದು ಅಲ್ಲ; ಒತ್ತಾಯದಿಂದ ಕಾರ್ಯರೂಪಕ್ಕೆ ತರುವಂತಹುದೂ ಅಲ್ಲ ಎಂಬ ಸೂಚನೆಯೂ ಇದೆ.
ಸಬಲರು-ದುರ್ಬಲರು: ಹುಲಿ ಸಬಲರಿಗೆ ಸಂಕೇತವಾದರೆ ಹಸು ದುರ್ಬಲರಿಗೆ ಸಂಕೇತ. ದುರ್ಬಲರು, ಸಬಲರು ಇಬ್ಬರೂ ಬದುಕಿನ ವಾಸ್ತವ ಸಂಗತಿಗಳು. ಇಬ್ಬರೂ ಸ್ಬ ಇಚ್ಛೆಯಿಂದ ವ್ಯವಸ್ತೆಯ ನಿರ್ಮಾಣಕ್ಕಾಗಿ ಪರಿಶ್ರಮಿಸಬೇಕು; ನಿರ್ಮಾಣಗೊಂಡ ವ್ಯವಸ್ತೆಯ ಮುಂದುವರಿಯುವಿಕೆಗಾಗಿ ಕರ್ತವ್ಯಬದ್ಧರಾಗಬೇಕು. ಆಗ ಮಾತ್ರ ಅದು ಚಿಗುರಿಸುವ, ಬೆಳೆಯಿಸುವ, ಪ್ರೀತಿಭಾವವನ್ನು ಉಕ್ಕಿಸುವ ವ್ಯವಸ್ಥೆ ಆದೀತು. ಇಲ್ಲದಿದ್ದರೆ ವ್ಯವಸ್ಥೆಯು ಸಬಲರು ದುರ್ಬಲರ ಮೇಲೆ ನಡೆಸುವ ದಬ್ಬಾಳಿಕೆಯೇ ಆಗಿರುತ್ತದೆ. ಅಥವಾ ದುರ್ಬಲರ ರಕ್ಷಣೆಗಾಗಿಯೇ ಸಬಲರು ಇದ್ದಾರೆ ಎಂದು ನಟಿಸುವ ಸೋಗಲಾಡಿತನ ಆಗುತ್ತದೆ. ಸಬಲರು ಮಾರ್ಗದರ್ಶಕರಾದರೆ ಸಾಲದು. ಅವರಿಗೆ ತಾವು ಸಬಲರು ಎನ್ನುವ ಅಹಂಕಾರ ಇಲ್ಲವಾಗಿರಬೇಕು. ಅವರಲ್ಲಿ ತಾವು ದುರ್ಬಲರಿಗೆ ಪೂರಕ ಎಂಬ ಮನೋಭಾವ ಇರಬೇಕು. ಇದನ್ನೂ ಕಾವ್ಯ ನಮ್ಮ ಗಮನಕ್ಕೆ ತರಬಯಸುತ್ತಿದೆ.
9 ಸರ್ವೋದಯ: ಆಕ್ರಮಣಕಾರಿತ್ವದ ಅಪಮೌಲ್ಯ
ಹುಲಿ ಪ್ರಾಣ ಬಿಟ್ಟಿದೆ. ಹುಲಿಯನ್ನು ಹರ ಮೆಚ್ಚಿದ್ದಾನೆ. ಅದರ ಚರ್ಮವನ್ನು ತನ್ನ ವಸ್ತ್ರವನ್ನಾಗಿ ಮಾಡಿಕೊಂಡಿದ್ದಾನೆ. ಹಸುವನ್ನೂ ಮೆಚ್ಚಿದ ಹರಿ, ಹರ, ಬ್ರಹ್ಮರು ಹೂಮಳೆಗರೆದು ಅದನ್ನು ಮರ್ಯಾದಿಸಿ ದೊಡ್ಡಿಗೆ ಕಳುಹಿಸಿಕೊಟ್ಟಿದ್ದಾರೆ. ಅದು ಹೇಗೆ ಹುಲಿಯ ಬಾಯಿಯಿಂದ ತಪ್ಪಿಸಿಕೊಂಡು ಬಂದಿತು ಎಂದು ದೊಡ್ಡಿಯವರು ಕೇಳಿದ ಪ್ರಶ್ನೆಗೆ ಹುಲಿಗೆ ಮೋಕ್ಷ ಸಿಕ್ಕಿದೆ, ತನಗೆ ನಲಿವಿನ ಗೆಲುವು ಸಿಕ್ಕಿದೆ ಎಂದು ಹಸು ಉತ್ತರಿಸಿದೆ. ಹೀಗೆ ಆಕ್ರಮಣಕಾರೀ ಮನೋಭಾವ ನಿಧಾನವಾಗಿ ಹಿಂದೆ ಸರಿಯುತ್ತಾ ಅಪಮೌಲ್ಯಗೊಳ್ಳುತ್ತಾ ಸೌಭಾಗ್ಯದ ಭಾವವಾಗಿ ಪರಿವರ್ತಿತವಾಗುತ್ತಾ ಹೋದವು. ಕಡು ಕಾಠಿಣ್ಯದ ಕಗ್ಗಲ್ಲ ಕಾಡಿನಲ್ಲಿ ಮಾನವ ವಸತಿಗಳು ಯಶಸ್ವಿಯಾಗಿ ನೆಲೆಗೊಂಡವು.
ಮನುಷ್ಯ ತನ್ನ ಸುತ್ತಲಿನ ಸಂಗತಿಗಳ ಮೇಲೆ ಆಕ್ರಮಣ ಮಾಡಿಯೇ ಅವುಗಳ ಮೇಲೆ ತನ್ನ ಆದಿಪತ್ಯವನ್ನು ಸ್ಥಾಪಿಸುತ್ತಾ ಬಂದದ್ದು ಹೌದಾದರೂ ನಿಧಾನವಾಗಿ ತನ್ನ ಸುತ್ತಲಿನವುಗಳನ್ನು ಪ್ರೀತಿಸಲು ಕಲಿತ. ಅವುಗಳಿಂದ ತನಗೆ ಲಾಭ ಆಗಬೇಕು ಎಂಬ ಸ್ವಜನ ಪಕ್ಷಪಾತ ದೃಷ್ಟಿಕೋನದಿಂದ ಅವುಗಳನ್ನು ಭಾವಿಸುವುದರ ಬದಲಿಗೆ ಅವುಗಳನ್ನು ಗೌರವಿಸಿದರೆ, ಆದರಿಸಿದರೆ, ಅವುಗಳ ಉಳಿಯುವಿಕೆಯನ್ನು ಭಾವಿಸಿದರೆ ಮಾತ್ರ ತಾನೂ ಸುರಕ್ಷಿತ, ತನ್ನ ಬದುಕೂ ಸಮೃದ್ಧ ಎಂಬುದನ್ನು ಮನಗಂಡ. ಇವು ಹಸು ದೊಡ್ಡಿಯವರ ಪ್ರಶ್ನೆಗೆ ಕೊಟ್ಟ ಉತ್ತರದ ಸೂಚ್ಯಾರ್ಥ.
ಮಾನವ ಗುಂಪುಗಳು ಪರಸ್ಪರ ಪ್ರಾಣಾಂತಿಕ ಸಂಘರ್ಷವನ್ನು ಕೈಬಿಡುತ್ತಾ ಬಂದುದರಿಂದಲೇ ರಾಜ್ಯ-ಸಾಮ್ರಾಜ್ಯ ಎನ್ನುವ ವ್ಯವಸ್ಥಿತ ಜನಜೀವನ ರೀತಿಯ ಉದಯ ಆಯಿತು ಎಂಬುದು ಒಂದು ಐತಿಹಾಸಿಕ ಸತ್ಯ. ಆ ರಾಜಕೀಯ ವ್ಯವಸ್ಥೆ ಸರ್ವೋದಯದ ಆಶಯದ ಪ್ರಜಾಪ್ರಭುತ್ವವಾಗಿ ನಿಧಾನವಾಗಿ ರೂಪಾಂತರಗೊಳ್ಳುತ್ತಾ ಬಂದಿದೆ ಎಂಬುದು ಇನ್ನೊಂದು ಐತಿಹಾಸಿಕ ಸತ್ಯ. ಸ್ವಾರ್ಥಮೂಲದ ಸಂಘರ್ಷವನ್ನು ಕೈಬಿಡುತ್ತಾ ಬಂದದ್ದು ಕೇವಲ ಯುದ್ಧದಂಥ ಆಕ್ರಮಣಕಾರಿ ವಿನಾಶಾತ್ಮಕ ಕೃತ್ಯಗಳ ಭಯದಿಂದಾಗಿರದೆ ಅದು ಸಾಧು ಸಂತರು ಜನಮನದಲ್ಲಿ ಬಿತ್ತಿದ ಪ್ರೀತಿ ಮತ್ತು ಕರ್ತವ್ಯಾಧಾರಿತ ಹಿತಕರವಾದ ಸರ್ವೋದಯದ ಆಶಯವುಳ್ಳ ಜೀವನ ನಮ್ಮದಾಗಬೇಕು ಎಂಬ ತಾತ್ತ್ವಿಕ ನಿಲುವಿನಿಂದಾಗಿಯೂ ಹೌದು ಎಂಬುದು ಇತಿಹಾಸದಿಂದ ಸುಸ್ಪಷ್ಟ
10 ಬದುಕುವುದು-ಬದುಕಿಸುವುದು
ಈ ಕಾವ್ಯದಲ್ಲಿ ಕೊಲ್ಲುವುದು, ಒಂದು ಇನ್ನೊಂದನ್ನು ತಿನ್ನುವುದು ಇವು ನ್ಯಾಯವೋ ಅನ್ಯಾಯವೋ ಎಂಬ ಜಿಜ್ಞಾಸೆ ಇಲ್ಲ. ಬದುಕಿಸುವುದು ಮಿಗಿಲೋ, ಕೊಲ್ಲುವುದು ಮಿಗಿಲೋ ಎಂಬ ಪ್ರಶ್ನೆ ಮಾತ್ರ ಇದೆ. ಒಂದು ಇನ್ನೊಂದನ್ನು ತಿನ್ನುವುದನ್ನು ಕಾವ್ಯ ವಿರೋಧಿಸುತ್ತಿಲ್ಲ. ಒಂದು ಇನ್ನೊಂದಕ್ಕೆ ಆಹಾರ ಆಗುವುದನ್ನು ನಿರಾಕರಿಸುತ್ತಿಲ್ಲ. ಬದಲಿಗೆ ಬದುಕನ್ನು ಚಿಗುರಿಸುವ, ಬೆಳೆಸುವ ಮತ್ತು ಮುಂದುವರೆಸುವ ಆಶಯ ಇರುವವರ ಮೇಲೆ ಆಕ್ರಮಣ ಮಾಡಿ ತಿನ್ನುವುದನ್ನು ಅಥವಾ ಆಹಾರ ಸಂಪಾದಿಸುವುದನ್ನು ಮಾತ್ರ ಆಕ್ಷೇಪಿಸುತ್ತಿದೆ.
ಹಸಿದು ತನಗಾಗಿ ಕಾದಿರುವ ತನ್ನ ಕರುವಿಗೆ ಹಾಲು ಉಣಿಸಿ ಹಿಂತಿರುಗಿ ಬರುತ್ತೇನೆ ಎಂದು ಹುಲಿಗೆ ಭಾಷೆ ಕೊಟ್ಟು ಬಂದಿದ್ದೇನೆ ಎಂದು ದೊಡ್ಡಿಯಲ್ಲಿರುವ ಇತರ ಹಸುಗಳಿಗೆ ಪುಣ್ಯಕೋಟಿ ಹೇಳಿದಾಗ ಅವು “ನೀನೊಬ್ಬಳೇ ಯಾಕೆ ಸಾಯುತ್ತೀಯೆ? ನಾವೂ ನಿನ್ನೊಡನೆ ಬರುತ್ತೇವೆ” ಎಂದು ಕೇಳಿಕೊಳ್ಳುತ್ತವೆ. “ಅದು ಉಚಿತವಾದದ್ದು ಅಲ್ಲ. ತನಗೆ ಮಾತ್ರ ಈ ಕರ್ಮ” ಎಂದು ಅದು ಉಳಿದ ಹಸುಗಳನ್ನು ತಡೆಯುತ್ತದೆ. ರಕ್ಷಿಸುವ ಭಾವ ಮಾತ್ರ ರಕ್ಷಿಸಬಲ್ಲುದೇ ವಿನಾ ಕೊಲ್ಲುವ ಭಾವವೂ ಅಲ್ಲ, ಬರಿಯ ಪ್ರಾಣಾರ್ಪಣೆಯ ಭಾವವೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅದನ್ನು ಒಪ್ಪಿಕೊಳ್ಳುವ ಈ ಹಸುಗಳು “ನಿನ್ನ ಕಂದನೆ ನಮ್ಮ ಕಂದನು| ಮನಸ್ಸಿನಲ್ಲಿ ಖೇದ ಬೇಡ| ನಿರ್ಮಲ ಮನಸ್ಸಿನಲ್ಲಿರು” ಎಂದು ಆಶ್ವಾಸನೆಯನ್ನು, ಭರವಸೆಯನ್ನು ನೀಡುತ್ತವೆ.
ಒಟ್ಟಾರೆ ಹೇಳುವುದಾದರೆ ಗುಂಪು ಕೇಂದ್ರಿತ ಮಾನವೀಯ ವ್ಯವಸ್ಥೆಯಿಂದ ಮಾತ್ರ ರಕ್ಷಣೆ, ಪೋಷಣೆಯೇ ವಿನಾ ಸ್ವಚ್ಛಂದ, ಭಯಕಾರಕ, ಆಕ್ರಮಣಕಾರೀ ಸ್ವಕೇಂದ್ರಿತ ಬದುಕಿನ ರೀತಿನೀತಿಗಳಿಂದ ಅಲ್ಲ ಎಂಬುದೇ ಈ ಕಾವ್ಯ ಸೂಚಿಸ ಬಯಸಿದ ಮತ್ತು ಪ್ರತಿಪಾದಿಸ ಬಯಸಿದ ಘನಸತ್ಯ. ಇದೇ ಪುಣ್ಯಕೋಟಿ “ಸತ್ಯವೇ ನಮ್ಮ ತಾಯಿ ತಂದೆ| ಸತ್ಯವೇ ನಮ್ಮ ಬಂಧು ಬಳಗ” ಎಂದು ಸಾರಿ ಹೇಳಿದ ಘೋಷ! ಒಂದು ರೀತಿಯ ಉಪನಿಷದ್ ಮಹಾವಾಕ್ಯ!
–ಕೆ.ಎಲ್. ಪದ್ಮಿನಿ ಹೆಗಡೆ
ವಾವ್..ನಾವು ಚಿಕ್ಕಂದಿನಿಂದ..ಕೇಳಿ ಕೊಂಡು ಬಂದ ಗೋವಿನ ಗೀತೆಯನ್ನು…ವಿಶ್ಲೇಷಿಸಿರುವ ರೀತಿ… ಅಸಾಧಾರಣವಾಗಿದೆ…ಎಷ್ಟೇ ಆಗಲಿ ಅದರ ಹಿಂದೆ ಇರುವ ಮಾಸ್ಟರ್ ಅದಕ್ಕೊಂದು ಸೆಲ್ಯೂಟ್
ವಿಸ್ತೃತ ಬರಹ.
ಜನ ಸಾಮಾನ್ಯರು ಯೋಚಿಸದಂತ್ಹಾಹ ವಿಮರ್ಶಾತ್ಮಕ ಲೇಖನ
ಧನ್ಯವಾದಗಳು ಮೇಡಂ
ಚಿಕ್ಕಂದಿನಿಂದಲೂ ಕೇಳಿಕೊಂಡು ಬಂದ ಕಥೆಯ ಅನಾವರಣ ಚೆನ್ನಾಗಿ ಮೂಡಿ ಬಂದಿದೆ
ಪ್ರೀತಿಯಿಂದ ಪ್ರಕಟಿಸಿದ ಹೇಮಮಾಲ ಮೇಡಂಗೆ, ಓದಿ ಚೆಂದಾಗಿ ಪ್ರತಿಕ್ರಿಯೆ ನೀಡಿರುವ ನಾಗರತ್ನ ಮೇಡಂ, ನಯನ ಬಜಕೂಡ್ಲು ಮೇಡಂ, ಕೆ. ರಮೇಶ ಸರ್ ಮತ್ತೆ ಅನಾಮಿಕ ಓದುಗರು ಇವರಿಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು.
ಗೋವಿನ ಹಾಡಿಗೆ ಅನೇಕ ಆಯಾಮಗಳನ್ನು ನೀಡಿ ತಮ್ಮ ಆಳವಾದ ವಿಮರ್ಶಾತ್ಮಕ ಲೇಖನದಿಂದ ನಮ್ಮ ಅರಿವಿಗೆ ಬರದಿದ್ದ ಕೆಲವು ಸಂಗತಿಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
ಸರಳ, ಸುಂದರ, ಭಾವನಾತ್ಮಕ ಗೋವಿನ ಹಾಡಿನ ವಿಮರ್ಶಾತ್ಮಕ ಪ್ರಬುದ್ಧ ಲೇಖನವು ಚೆನ್ನಾಗಿದೆ ಮೇಡಂ.
ಊಹೆಗೂ ನಿಲುಕದ ಅದ್ಬುತ ವಿವರಣೆ,ಸತ್ಯಕ್ಕೆ ಸಂದ ಜಯ, ಅವರವ ಹಸಿವು ತೃಷೆ ಬ್ಬಾಯಾರಿಕೆ ಪೂರೈಸುವುದು ತಾಯಿಯ ಕರ್ತವ್ಯ.ಕ್ರೂರ ಪ್ರಾಣಿಗೂ,ಸಾಧು ಪ್ರಾಣಿಗೂ.ಅಡಗಿರುವ ಮನೋ ಧರ್ಮ ಬಹಳ ಸೊಗಸಾಗಿ ವಿವರಣೆ ನೀಡಿರುವುದು ನಿಜಕ್ಕೂ ಅರ್ಥ ಗರ್ಬೀತ.
ಅದ್ಬುತ ವಿವರಣೆ,ತುಂಬಾ ಕಷ್ಟಪಟ್ಟು ಟೈಪ್ ಮಾಡಿದ್ದೆ ಅಳಿಸಿ ಹೋಯ್ತು.ಪದ್ಮಿನಿ ಮೇಡಂ.ಸತ್ಯ,,ಕೌರ್ಯ,ಹಿಂಸೆ,ಆಹಾರ,ಅಗತ್ಯ, ಅವರವರ ದೃಷ್ಟಿ ಕೋನ.ತುಂಬಾ ಸೊಗಸಾಗಿದೆ.