ನನ್ನ ಪ್ರೀತಿಯ ನನ್ನೊಳಗಿನ ನಾನೇ
ಬೆಡ್ ರೂಮಿನ ಡ್ರೆಸ್ಸಿಂಗ್ ಟೇಬಲ್ ನ ಪೂರ್ಣ ನಿಲುವಿನ ಕನ್ನಡಿಯ ಕಡೆಗೆ ನೋಟ ಹರಿಯಿತು. ಸ್ವಲ್ಪ ಸ್ಥೂಲವೆನಿಸುವ, ತಲೆಯಲ್ಲಿ ಹೆಚ್ಚಿನ ಬಿಳಿಕೂದಲಿನ, ಬೊಜ್ಜು ಹೊಟ್ಟೆಯ ನಡು ವಯಸ್ಸಿನ ಮಹಿಳೆ ಯಾರೆಂದು ನನಗೇ ಒಂದು ಕ್ಷಣ ಗುರುತು ಸಿಕ್ಕದೆ ಹಾಗೇ ದಿಟ್ಟಿಸಿದೆ . ನಿಜ ಅದು ನಾನೇ . ನನ್ನ ಮನಸ್ಸಿನಲ್ಲಿ ನಾನಿನ್ನೂ ಅದೇ ಯೌವನದ ಯುವತಿ. 2 ಜಡೆಯ ಹುಡುಗಿಯ ಬಿಂಬ ಇರದಿದ್ದರೂ ಇಪ್ಪತ್ತೈದರ ಯುವಕಿಯ ಚಿತ್ರ .ಅದೆಷ್ಟು ಬೇಗ ಯೌವನ ಉರುಳಿ ಜೀವನ ಮುಸ್ಸಂಜೆ ಬಂದಿದೆ ಎಂದು ಸಾರುವ ಪ್ರತಿಬಿಂಬ ನಾನೋ , ನನ್ನೊಳಗಿನ ನೆನಪುಗಳ ಯುವತಿ ನಾನೋ ನಿರ್ಧರಿಸಲಾಗದ ಗೋಜಲು . ಅದ್ಯಾವ ಮಾಯದಲ್ಲಿ ಹರೆಯ ಓಡಿಹೋಯ್ತೋ ಕಳೆದುಹೋಯಿತೋ ತಿಳಿಯಲಿಲ್ಲ .
ಬಾಲ್ಯದ ತುಂಟು ಬಟ್ಟಲುಗಣ್ಣಿನ ಹುಡುಗಿ
ಎಲ್ಲಾ ಕಲಿಯ ಬೇಕೆಂಬ ಅದಮ್ಯ ಉತ್ಸಾಹ ಚುರುಕು ದಪ್ಪ ಉದ್ದ ಜಡೆಯ ಹುಡುಗಿಯ ಕಣ್ಣಿನ ಮಿಂಚೆಲ್ಲಿ ಮಾಯವಾಯ್ತು? ಕಪ್ಪು ಎಂಬ ಕೀಳರಿಮೆಯಿಂದ ಹಿಂದಕ್ಕೆ ಉಳಿಯುತ್ತಿದ್ದ ಅಂದಿನ ದಿನದ ಹುಡುಗಿ ಕಳೆದುಹೋಗಿ ಆತ್ಮವಿಶ್ವಾಸದ ಮಹಿಳೆ ಇಂದಾಗಿದ್ದರೂ ಮತ್ತೆ ಬರಬಾರದೇ ಬಾಲ್ಯ? ಅಪ್ಪ ಅಮ್ಮನ ರಕ್ಷಣೆಯಲ್ಲಿದ್ದ ಭರವಸೆಯ ಬೆಚ್ಚಗಿನ ಭಾವ ಮತ್ತೆ ಬರಬಾರದೇ? ಬಾಲ್ಯದ ನೆನಪುಗಳೇ ಇಂದು ಭರವಸೆ ಕೊಡುವೆ ಅಂದಿನ ಜೀವನೋತ್ಸಾಹವನ್ನು ಮರಳಿ ಪಡೆಯಲು ಪ್ರಯತ್ನಿಸುವೆ
ಹದಿಹರೆಯದ ಮಿಂಚು
ಮಾತೆತ್ತಿದರೆ ನಗುವ ನಾಚುವ ಬಾಲಿಷ ವರ್ತನೆ . ಕನಸಿನಂತೆ ಬಂದು ಮರೆಯಾದ ಹಾಗಿದೆ . ಆ ದಿನಗಳು ಕಳೆದಿದ್ದರೂ ಆ ಲವಲವಿಕೆ ಹುರುಪು ಮಾಯವಾಗದ ಹಾಗೆ ಕಾಯ್ದುಕೊಳ್ಳಬೇಕಿತ್ತಲ್ಲವಾ? ದೇಹಕ್ಕೆ ನೀ ಮರಳಿ ಬಾರದಿದ್ದರೂ ಭಾವನೆಗಳಲ್ಲಿ ಪ್ರತಿರೂಪವಾಗಿ ಅದೇ ಚೈತನ್ಯದ ಚಿಲುಮೆಯಂತೆ ಹೊನಲಾಗಿ ಹರಿದು ಬಾ.
ನಡುಹರೆಯ ಸಂದಿತೆಂದರೆ ಎಲ್ಲ ಮುಗಿಯಿತು ಎನ್ನುವ ಕಾಲ ಮರೆಯಾಗಿದೆ ತಾನೇ ಈಗ? ಐವತ್ತರ ನಂತರವೇ ನಾವು ನಮಗಾಗಿ ಬದುಕುವುದು ಎಂಬುದು ಈಗಿನ ಪಾಲಿಸಿ. ಹೆಚ್ಚಿನ ಜವಾಬ್ದಾರಿ ತೀರಿ ಮನಸ್ಸು ನಿರಮ್ಮಳವಾಗುವ ಸಮಯ. ಚಿಂತೆಗಳಿದ್ದರೂ ಆ ಚಿಂತೆಗಳು ಚಿತೆ ಸೇರಿಸುವಷ್ಟು ಪ್ರಬಲವಾಗಿ ಕಾಡದಂತೆ ಮಾಡಿಕೊಳ್ಳದೆ ಉಳಿದ ಜೀವನ ಪ್ರಶಾಂತವಾಗಿ ಕಳೆಯಬಹುದಲ್ಲವೇ ?
ಚಿಕ್ಕ ಕಂದನ ಜೀವನೋತ್ಸಾಹ, ಯೌವ್ವನದ ಹುರುಪು ಹುಮ್ಮಸ್ಸು ಅನುಭವ ಕೊಡುವ ಪ್ರೌಢತೆ ಯಾರಿಗೆ ತಾನೆ ಬೇಡ ? ಇವೆಲ್ಲವೂ ಕಳೆದುಕೊಂಡ ನನ್ನ ಬಾಲ್ಯ ಹರೆಯ ಗಳನ್ನು ಮತ್ತೆ ಈ ಜೀವನದ ಸಂಜೆಯಲ್ಲಿ ಪಡೆದು ಹೊಸ ಜೀವನ ಪಡೆವ ಬಯಕೆ.
ಅದಕ್ಕೆ ಈಗ ನಿನ್ನಲ್ಲಿ ನಾ ಕಂಡುಕೊಳ್ಳುತ್ತಿರುವೆ ಅಥವಾ ನನ್ನೊಳಗಿನ ನಿನ್ನನ್ನೇ ಪುನರ್ದರ್ಶನ ಮಾಡಿಕೊಳ್ಳುತ್ತಿರುವೆ . ಜೀವನ ಎಂದರೆ ಅಷ್ಟೆ ತಾನೆ ? ಉತ್ಸಾಹ ಆರೋಗ್ಯವಿದ್ದಾಗ ಹಣವಿರುವುದಿಲ್ಲ . ಹಣ ಹೆಚ್ಚಾಗಿ ಬರುವ ಕಾಲಕ್ಕೆ ಆರೋಗ್ಯ ಕ್ಷೀಣಿಸಿ ಉತ್ಸಾಹ ಬತ್ತಿ ಹೋಗಿರುತ್ತದೆ . ಹಾಗಾಗಲು ನಿನ್ನನ್ನು ಬಿಡೆನು. ನನ್ನೊಳಗಿನ ನಾನೇ ನನಗೆ ಆತ್ಮಸಖಿ. ಈ ಸಖ್ಯ ಭಾವಬಂಧುರ. ಚಿರನೂತನವಾಗಿ ಕಾಯ್ದುಕೊಳ್ಳುವ ಆತ್ಮಬಲ ಮನೋಸ್ಥೈರ್ಯ ಬೇಕು ತಾನೆ ಗೆಳತಿ? ಈಗಲಾದರೂ ನಾ ನಿನ್ನ
ಗುರುತಿಸಿದೆನಲ್ಲ . ಇನ್ನು ನಮ್ಮಿಬ್ಬರದು ಅಗಲದ ಸಖ್ಯ. ಆತ್ಮ ಕಾವ್ಯಗಳೆರಡರ ಸಮ್ಮಿಲನ ,ಅವಿನಾಭಾವ ಕಡೆಯ ಉಸಿರಿರುವವರೆಗೂ……ಸರಿ ತಾನೆ ? ನನ್ನೊಳಗಿನ ಅಪೂರ್ವ ಸಖಿ ಗೆ ಅನಂತ ನಮನ ಸದ್ಯಕ್ಕಿಷ್ಟು ಸಾಕಲ್ಲವೇ? ಈ ಸಂವಹನ ನಿರಂತರವಿರಲಿ ಮತ್ತೆ ಬರುವೆ ನನಗೆ ಜೀವನ ಕೊಟ್ಟ ಸಖಿಯೆಡೆಗೆ ಹೊಸ ದೃಷ್ಟಿ ಕೊಟ್ತ್ರ ಬರವಣಿಗೆಯೊಂದಿಗೆ.
ನಿನ್ನ ಪ್ರೀತಿಯ ನಿನ್ನೊಳಗಿನ ನಾನು
–ಸುಜಾತಾ ರವೀಶ್
ನಿನ್ನೊಳಗಿನ ನಾನು…ಪ್ರತಿಯೊಬ್ಬರೂ…ನಮ್ಮನ್ನು ನಾವು…ಚಿಂತನೆ ಮಾಡಿ…ಭರವಸೆ ಇಟ್ಟು ಕೊಳ್ಳುವ ಬಗ್ಗೆ ಚೆನ್ನಾಗಿದೆ …ಸೋದರಿ ಸುಜಾತ..
ಧನ್ಯವಾದ ಗಳು ಸೋದರಿ
Very nice
ಧನ್ಯವಾದ ಗಳು ನಯನಾ
ಕನ್ನಡಿಯ ರೂಪಕ ಬರಹಕ್ಕೆ ಅತ್ಯಂತ ಸೂಕ್ತವಾಗಿದೆ
ತಿರುಗುತಿರುವ ಕಾಲಚಕ್ರಕ್ಕೆ ಸಮನಾಗಿ, ನಿಲ್ಲದೆ ಓಡುವ ಹರೆಯ… ಬಾಲ್ಯದ ಮನ ಹೊತ್ತ ವಯಸ್ಸಾದ ಕಾಯ!…
ಎಲ್ಲವೂ ವಿಚಿತ್ರ ಆದರೂ ಸತ್ಯ!!
ಅರ್ಥಪೂರ್ಣ ಬರಹ.
ಧನ್ಯವಾದಗಳು. ಒಳ್ಳೆಯ ಲೇಖನ
ಸೂಪರ್
Nine indu naaleya street vyaktitwada anavarana Bali chennagide
ಉತ್ತಮವಾದ ಅರ್ಥಪೂರ್ಣವಾದ ಲೇಖನ
ವಯಸ್ಸಾಯ್ತು ಎಂದು ಹಲುಬುವವರಿಗೆ ಉತ್ತಮ ಸಂದೇಶ