ಬಾಳ್ವೆ ಎಂಬ ಭರವಸೆ

Share Button


‘ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ’ ಕೆ.ಸ್. ಚಿತ್ರಾ ಸುಶ್ರಾವ್ಯವಾಗಿ ಹಾಡಿದ ಗೀತೆ ಇದು. ಈ ಜೀವನ ಎನ್ನುವುದು ಹಾವು ಏಣಿ ಆಟ, ಈ ಸಂಕಲೆಯಿಂದ ಮುಕ್ತಿ ಇಲ್ಲವೇ? ನನಗೇ ಈ ರೀತಿ ಕಷ್ಟಗಳು ಯಾಕೆ ಬರಬೇಕು ಎನ್ನುವ ಅಗ್ನಿದಿವ್ಯವ ಹಾದಿ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ವಿಧದಲ್ಲಿ, ಭಿನ್ನ ಬಿನ್ನ ರೂಪಗಳಲ್ಲಿ ಬಂದೇ ಬರುತ್ತದೆ. ಈ ಕಷ್ಟ ಪರಂಪರೆಗಳು ಒಂದು ರೀತಿಯ ‘ಕೆಂಡದ ಬೆಳದಿಂಗಳು’.ಎದುರಿಸಿದರೆ ಶಾಂತಿ, ಇಲ್ಲವಾದಲ್ಲಿ ಬೇಗೆ, ತಾಪ, ‘ಕಷ್ಟ ಮನುಷ್ಯನಿಗೆ ಬಾರದೆ ಮರಕ್ಕೆ ಬರುತ್ತದೆಯೇ?’ ಎನ್ನುವಂತೆ ಕಷ್ಟವೆನ್ನುವುದು ಜೀವನದ ಭಾಗ, ಎಳೆಯ ಮಗುವಿನಿಂದ ಹಿಡಿದು ಜೀವನದ ಕೊನೆಯ ಹಂತದ ವರೆಗೆ ಒತ್ತಡ, ಅವಮಾನ, ಸೋಲು, ಹತಾಶೆ ಇವುಗಳು ‘ಸಂತಸ’ ಎನ್ನುವ ಕೌದಿಯ ನೂಲಿನೆಳೆಗಳಂತೆ ಹಾಸು ಹೊಕ್ಕಾಗಿಯೇ ಇರುತ್ತವೆ. ಈ ನಿಟ್ಟಿನಲ್ಲಿ ಸಮಸ್ಯೆಗಳು, ಅವುಗಳ ಪರಿಹಾರಗಳ ಸಾಧ್ಯತೆಗಳ ಬಗ್ಗೆ ಒಂದು ನೋಟ.

ದೇಶದ ಸಮಸ್ಯೆ ಇರಲಿ, ವೈಯಕ್ತಿಕ ಸಮಸ್ಯೆ ಆಗಲಿ ಸಮಸ್ಯೆಗಳು ನಿರಂತರವಾಗಿ ಪ್ರಯತ್ನಿಸಿದಲ್ಲಿ ಇಷ್ಟಿಷ್ಟೇ ಇಷ್ಟಿಷ್ಟೇ ಪರಿಹಾರವಾಗುತ್ತ ಹಾದಿ ನಿಚ್ಚಳವಾಗುತ್ತಾ ಹೋಗುತ್ತದೆ.

ಇನ್ನು ಜೀವನದಲ್ಲಿ ಸಮಸ್ಯೆಗಳಿಗೆ ಬರವಿಲ್ಲ ಪ್ರೇಮವನ್ನು ಕಳೆದುಕೊಳ್ಳುವುದು, ಆರೋಗ್ಯ ಸಮಸ್ಯೆಗಳು, ಅನಿರೀಕ್ಷಿತ ಆಘಾತಗಳು, ಮಾನಸಿಕವಾಗಿ ಕುಸಿಯಲು ಕಾರಣವಾಗುವಂತಹ ನಿರುದ್ಯೋಗ, ನಿರ್ಲಕ್ಷ್ಯದಂತಹ ಘಟನೆಗಳು ಹೀಗೆ ಜೀವನದಲ್ಲಿ ಕಷ್ಟಗಳಿಗೆ ಬರವಿಲ್ಲ. ಈ ಕಷ್ಟಗಳಿಂದ ಪಾರು ಮಾಡುವ ಶಕ್ತಿಯಾಗಲಿ, ಆಸರೆ ಕೊಡುವ ಜೀವವಾಗಲಿ ಸಿಗಲಿ ಎಂದು ಹಂಬಲಿಸುವುದರಲ್ಲಿ ಪ್ರಾರ್ಥಿಸುವುದರಲ್ಲಿ ತಪ್ಪೇನಿಲ್ಲ. ಮನುಷ್ಯನ ಈ ನಿಸ್ಪಹಾಯಕತೆಯನ್ನು ಬಂಡವಾಳವಾಗಿಟ್ಟುಕೊಂಡೇ, ಅಸಂಖ್ಯ ಹೀಲಿಂಗ್ ಸೆಂಟರ್ ಗಳು, ಭಕ್ತಿಯ ಹೆಸರಿನಲ್ಲಿ ಜನರನ್ನು ಯಾಮಾರಿಸುವ, ದಾನಧರ್ಮ ಜ್ಯೋತಷ್ಯ ಎಂದು ಕಂಗಾಲಾಗಿಸುವವರಿಗೂ ಕಡಿಮೆ ಏನಿಲ್ಲ.

ನಮ್ಮ ಆತಂಕ, ಅನುಮಾನಗಳಿಗೆ ಹೆಚ್ಚಿನ ಸಲವೂ ಕಾರಣ ಅನಿಶ್ಚಿತತೆ, ಹಲವಾರು ವಿಚಾರಗಳು, ಘಟನೆಗಳು ನಮ್ಮ ಹತೋಟಿಯಲ್ಲಿ ಇರುವುದಿಲ್ಲ, ಹಾಗೆಂದು ಭರವಸೆಯನ್ನು ಕಳೆದುಕೊಳ್ಳಬಾರದು ನಿರಂತರವಾಗಿ ಪ್ರಯತ್ನಿಸುತ್ತಿದ್ದಲ್ಲಿ ಒಂದಲ್ಲ ಒಂದು ದಿನ ಯಶಸ್ಸು ಲಭಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಅಬ್ರಹಾಂ ಲಿಂಕನ್, ಐನ್‌ಸ್ಟೈನ್ ನಂತಹವರಲ್ಲದೆ ನಮ್ಮ ನಿಮ್ಮ ಜೀವನದಲ್ಲೂ ತೀರ ಇನ್ನೇನು ಪ್ರಪಾತಕ್ಕೆ ಬೀಳುತ್ತೇವೆನ್ನುವಾಗ ಯಾವುದೋ ಅವ್ಯಕ್ತ ಶಕ್ತಿ ನಮ್ಮನ್ನು ಕಾಪಾಡಿಯೇ ಕಾಪಾಡುತ್ತದೆ. ಹಾಗೂ ಅದು ನಮ್ಮ ಆತ್ಮ ವಿಶ್ವಾಸ ಛಲ ಹಾಗೂ ಪ್ರಯತ್ನಕ್ಕೆ ದೇವರು ಕೊಡುವ ಇಂಬಾಗಿರುತ್ತದೆ.

ಇನ್ನು ಬದುಕಿನ ಹಾದಿಯಲ್ಲಿನ ದುರಂತಗಳಿಂದ (ಸಣ್ಣದಿರಲಿ ದೊಡ್ಡದಿರಲಿ) ಪಾಠ ಕಲಿಯುವುದು ಅತಿ ಮುಖ್ಯ ಕಾಲ ಕಳೆದಂತೆ ಅವುಗಳ ತೀವ್ರತೆ ಕಡಿಮೆಯಾಗುವುದಾದರೂ ಅವು ಕಲಿಸುವ ಮೂಲಭೂತ ಪಾಠಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಸಾಧಾರಣವಾಗಿ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪ್ರೇಮ ವೈಫಲ್ಯ, ಕೌಟುಂಬಿಕ ಸಂಘರ್ಷಗಳು, ಆರ್ಥಿಕ ಸಮಸ್ಯೆಗಳು ಹೀಗೆಲ್ಲ ನರಳುವ ಜನರು ನಮ್ಮ ಸುತ್ತಮುತ್ತಲೇ ಕಾಣುತ್ತಿರುತ್ತಾರೆ. ಅದೇ ರೀತಿ ಆ ಎಲ್ಲ ಮಿತಿಗಳನ್ನು ಮೀರಿ ನಿಂತಿರುವರೂ ಕಾಣಿಸುತ್ತಿರುತ್ತಾರೆ, ಅವರು ನಡೆದುಬಂದ ಹಾದಿ ನಮಗೆ ಬೆಳಕಾಗಬಲ್ಲದು ಇದಕ್ಕಿಂತ ಮಿಗಿಲಾಗಿ ನಮಗೆ ನಮ್ಮದೇ ಆದ ಗುರಿ ಕಾರ್ಯಸೂಚಿ ಮುಖ್ಯ.

ಹಾಗೆ ನೋಡಿದರೆ ಗೆಲ್ಲುವುದು ಗೆಲುವೇ ಅಲ್ಲ ಎಂಬ ಹಾಡಿನ ಸಾಲಿನಂತೆ ಎಲ್ಲ ಗೆಲುವುಗಳೂ ಗೆಲುವಲ್ಲ; ಎಲ್ಲ ಸೋಲುಗಳೂ ಸೋಲಲ್ಲ. ಅವು ಆಯಾ ಕಾಲ ಯುಗಧರ್ಮಕ್ಕನುಗುಣವಾಗಿ ಇರುತ್ತದೆ. ಒಂದು ಸಮಯದ ಕಡು ಸೋಲು ಇನ್ನೊಂದು ದಿನಮಾನದ ಗೆಲುವಾಗಿ ಪರಿಣಮಿಸಬಹುದು. ಇನ್ನು ಕೆಲವೊಮ್ಮೆ ಬದುಕು ನಮ್ಮನ್ನು ಬರಿಗೈಯಲ್ಲಿ ನಿಲ್ಲಿಸಿದೆ ಎನಿಸಬಹುದು ಅದು ಮನಸ್ಸಿಗೆ ಸಂಬಂಧಿಸಿರಬಹುದು; ಆರ್ಥಿಕತೆ, ಸಾಮಾಜಿಕ ಜನಪ್ರಿಯತೆಗೆ ಸಂಬಂಧಿಸಿರಬಹುದು ಶೂನ್ಯ ಕವಿಯಲಾರಂಭಿಸಿದಾಗ ನಮ್ಮನ್ನು ನಾವೇ ಹಳಿಯಲಾರಂಭಿಸುತ್ತೇವೆ, ಹಾಗೂ ಇದು ಸಹಜ, ಹಾಗೆಂದು ನಮ್ಮನ್ನು ನಾವೇ ಕೊಂದುಕೊಳ್ಳುವ ವರೆಗೆ ಈ ಆತ್ಮ
ನಿಂದನೆ ಇರಬಾರದು.

ಈ ಬದುಕು ಶ್ರೇಷ್ಠವಾದುದು ಹಾಗೂ ಎಲ್ಲರಿಗೂ ಇಲ್ಲಿ ಬದುಕುವ ಹಕ್ಕಿದೆ ಬುದ್ದನಿಂದ ಪರಿವರ್ತಿತನಾದ ಅಂಗಲಿಮಾಲ,ಸಾವು ಸನ್ನಿಹಿತವಾಗಿದೆ ಎಂದಾಗ ತೀವ್ರವಾಗಿ ಬದುಕಿನ ‘ದ ಲಾಸ್ಟ್ ಲೆಕ್ಚರ್’ ಬರೆದ ರ್‍ಯಾಂಡಿಪಾಶ್ ಹೀಗೆ.

ಇನ್ನು ನಮ್ಮ ಸಂತಸದ ಕ್ಷಣಗಳು ಹೇಗೆ ಮುಗಿಯುತ್ತವೆಯೋ, ಕಷ್ಟದ ಸಮಯವೂ ಕಳೆದೇ ಕಳೆಯುತ್ತದೆ, ಕಾಯುವ ತಾಳ್ಮೆ, ಸಹನೆ ನಮಗಿರಬೇಕಷ್ಟೆ ಹಾಗೆ ನೋಡುವುದಿದ್ದರೆ ನಮ್ಮ ಮೂಕ ಸಂಕಟಗಳು ಅಳಲುಗಳು, ನಿಸ್ಸಹಾಯಕತೆಗಳು ನಮ್ಮನ್ನು ಹೆಚ್ಚು ಮನುಷ್ಯರಾಗಿಸುತ್ತವೆ, ಕೆಚ್ಚು ತುಂಬುತ್ತವೆ ಬದುಕಿನ ಹಾದಿಯಲ್ಲಿ ಹೋರಾಡಿ ಗೆಲ್ಲುವುದಕಿಂದ ಸಾರ್ಥತೆ ಮತ್ತೇನಿದೆ? ಹಾಗೂ ನಾವು ಗೆದ್ದೇ ಗೆಲ್ಲುತ್ತೇವೆ ಗೆದ್ದರೆ ವಿಜಯ, ಸೋತರೆ ಅನುಭವ ಅಷ್ಟೇ.

ನಮ್ಮ ಸಮಸ್ಯೆಗಳನ್ನು ಪರಿಹರಿಸಬುದಾದ ಏಕೈಕ ಮಾರ್ಗ ಪ್ರಯತ್ನ ಹಾಗೂ ಮೌನ. ಮೌನವಾಗಿದ್ದುಕೊಂಡು ಕಷ್ಟಪಡುವುದು. ನಮ್ಮ ಹಲವಾರು ಸಮಸ್ಯೆಗಳು ವಿವೇಚನೆ ಇಲ್ಲದೆ ಅತಿಯಾಗಿ ಮಾತನಾಡುವುದರಿಂದಲೇ ಸಂಭವಿಸುತ್ತವೆ. ಅತಿಯಾಗಿ ಮಾತನಾಡುವುದು, ಸುಳ್ಳು ಭರವಸೆಗಳನ್ನಿಟ್ಟುಕೊಳ್ಳುವುದು, ಅವಾಸ್ತವಿಕ ಮಹತ್ವಾಕಾಂಕ್ಷೆ ಇಟ್ಟುಕೊಳ್ಳುವುದು, ಹೀಗೆ. ಮಹತ್ವಾಕಾಂಕ್ಷೆಗಳು ಕನಸುಗಳು ಖಂಡಿತವಾಗಿಯೂ ನಮಗೆ ಬೇಕು ಹಾಗೆಂದು ಅವು ನಮ್ಮ ಸಾಮರ್ಥ್ಯದ ಆಳವನ್ನೇ ಮೀರಿ ಇರಬಾರದು ಅಷ್ಟೆ.

ಇನ್ನು ನಾವು ತಪ್ಪು ತಿಳಿದುಕೊಂಡ ಘಟನೆಗಳು, ಮನುಷ್ಯರು, ನಮ್ಮನ್ನು ತಪ್ಪು ತಿಳಿದುಕೊಂಡವರು, ಹೀಗೆ ಜೀವನ ಎನ್ನುವುದು ಅನುಭವಗಳ ಸಂತೆ. ಅವನ್ನೊಂದು ಸ್ಥಾಯಿ ಭಾವದಿಂದ ನೋಡುತ್ತ ಆ ಘಟನೆಗಳನ್ನು, ಅವುಗಳಿಗೆ ಕಾರಣರಾದವರನ್ನು ಕ್ಷಮಿಸುವುದೊಂದೇ ಬಹುಶ ನಾವು ಸಮಚಿತ್ತದಿಂದ ಬದುಕಲು ಮಾರ್ಗ. ನಮಗೂ ಎಂದಾದರೊಂದು ದಿನ ಕ್ಷಮೆಯ ಅಗತ್ಯ ಬೀಳಬಹುದಲ್ಲವೇ?

ಇನ್ನು ಸ್ವಾನುಕಂಪ, ಸ್ವಪ್ರಶಂಸೆ, ಸ್ವನಿಂದನೆ ಎಲ್ಲವೂ ಹಲವಾರು ಪದರಗಳುಳ್ಳವುಗಳು ನಮ್ಮ ಕಷ್ಟಗಳನ್ನು ನಮಗಾದ ಅನ್ಯಾಯಗಳನ್ನು ನೆನೆಸಿಕೊಂಡು ಸ್ವಾನುಕಂಪ ಪಡುವುದು, ಸಹಾನುಭೂತಿಗಾಗಿ ಕೈಚಾಚುವುದು ಸಹಜ. ಈ ಸ್ವಾನುಕಂಪ ಕೊನೆಗೆ ಸ್ವಮರುಕ, ಈರ್ಷ್ಯೆಗೆ ತಿರುಗದಂತೆ ಎಚ್ಚರಿಕೆ ವಹಿಸಬೇಕು. ನಮಗೆ ಸಹಾನುಭೂತಿ, ಅನುಕಂಪ ತೋರಿಸುವವರೆಲ್ಲ ಸಹೃದಯಿಗಳೇ ಆಗಬೇಕೆಂದಿಲ್ಲ ಅಥವಾ ಒಂದೊಮ್ಮೆ ಸಹಾಯ ಮಾಡಿದರೂ ಮುಂದೊಮ್ಮೆ ಸಂಬಂಧ ಹಳಸಿದಲ್ಲಿ ಅವರೇ ಅತಿ ಕೆಟ್ಟ ಶತ್ರುವಾಗಿ ಪರಿಣಮಿಸಬಹುದು .ಹೀಗಾಗಿ ‘ನಿನಗೆ ನೀನೇ ಮಿತ್ರ ನಿನಗೆ ನೀನೇ ಶತ್ರು’ ಎನ್ನುವುದೇ ನಮ್ಮ ಮಂತ್ರವಾಗಿರಬೇಕು. ಪ್ರೀತಿಯ ಸೆಲೆ ಝಲ್ಲನೆ ಲಭಿಸಿದಲ್ಲಿ ಒಂದು ಸದೃಡ ಸ್ನೇಹವೋ, ಗುರುರೂಪದ ಬೆಳಕಿನ ಪುಂಜದ ಸಹವಾಸವೋ ಲಭಿಸಿದರೆ, ಆಶ್ರಯಿಸಿದರೆ ತಪ್ಪೇನೂ ಇಲ್ಲ, ಆದರೆ ಅದು ಯಾರಿಗೂ ಹೊರೆಯಾಗಬಾರದು, ಸಂಬಂಧಗಳ ಹೊಸ ಸಂಘರ್ಷಗಳನ್ನು, ಸಂಕಷ್ಟಗಳನ್ನು ತಂದೊಡ್ಡಬಾರದು ಅಷ್ಟೆ.


ನನ್ನದೇ ಜೀವನದ ಘಟನೆಗಳ ಆಧಾರದಲ್ಲಿ ನಾನಂತೂ ನಿರಂತರ ಪ್ರಯತ್ನಶೀಲತೆ, ಪ್ರಾಮಾಣಿಕತೆ ನಮ್ಮನ್ನು ಕಾಯುತ್ತದೆ ಎಂಬ ದೃಢವಿಶ್ವಾಸ ಹೊಂದಿದ್ದೇನೆ ತಡವಾಗಿಯಾದರೂ ನಮ್ಮ ಪಾಲಿನ ಯಶಸ್ಸು ಅಭೂತಪೂರ್ವ ಯಶಸ್ಸು ನಮಗೆ ಸಿಕ್ಕಿಯೇ ಸಿಕ್ಕುತ್ತದೆ, ಹಾಗೆಯೇ ನಾವದಕ್ಕೆ ಕಾಯಬೇಕು, ಆ ಹಾದಿಯಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು ನಮ್ಮ ಬೇಕೂಫತನಗಳಿಂದಲೇ ನಾವು ಕೈಯಾರೆ ಸಂಬಂಧಗಳನ್ನು ಹಾಳುಗೆಡಹಿಕೊಂಡಿರುವ ಮಿತ್ರರಿಂದ ದೂರವಾಗಿರುವ ಸಾಧ್ಯತೆ ಇದೆ. ಹಾಗೆಂದು ಅದಕ್ಕೆ ಅಳುತ್ತಾ ಕೂತರೆ ಪ್ರಯೋಜನವಿಲ್ಲ ‘ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂದು ಅಣ್ಣಾವ್ರು ಹೇಳಿಲ್ಲವೇ? ಹಾಗೆ ನಮ್ಮ ನಿಷ್ಠೆ ನಿಜವಾದುದಲ್ಲಿ, ನಮ್ಮ ಪ್ರಯತ್ನಗಳಲ್ಲಿ ಸಜ್ಜನಿಕೆ, ನಿಸ್ವಾರ್ಥತೆ, ಜೀವ ಪರ ಕಾಳಜಿ ಇದ್ದಲ್ಲಿ ಯಶಸ್ಸು ಲಭಿಸಿಯೇ ಲಭಿಸುತ್ತದೆ ಹಾಗೂ ನಾವು ನಂಬುವ ಯಾವುದೋ ಶಕ್ತಿಯೋ ಭಗವಂತನೋ, ನಾವು ಹಿಂದೊಮ್ಮೆ ಮಾಡಿದ ಕೆಲಸ ಕಾರ್ಯಗಳೋ ನಮ್ಮನ್ನುಪೊರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಹಾಗೆ ನೋಡಿದರೆ ಎಲ್ಲ ಸಾಧಕರೂ ನಮ್ಮ ಪಾಲಿನ ವೈಫಲ್ಯಗಳನ್ನು ಎದುರಿಸಿಯೇ, ಕಷ್ಟಗಳನ್ನು ಸಹಿಸಿಯೇ ಆ ಮಟ್ಟಕ್ಕೆ ಬಂದಿರುತ್ತಾರೆ, ಅವರಲ್ಲಿ ಸಾಮಾನ್ಯ ಜನರಿಗಿಂತ ಧಾರಣಶಕ್ತಿ, ಕಷ್ಟ ಸಹಿಷ್ಟುತೆ ತಾಳ್ಮೆ ಧನಾತ್ಮಕತೆ ಜಾಸ್ತಿ ಇರುವುದೇ ಅವರ ವಿಜಯಕ್ಕೆ ಕಾರಣ. ನಮಗೆ ಬೇಜಾರಾದಾಗೆಲ್ಲ ಇಂತಹ ಧೀಮಂತ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಬಹುದು. ಯೂಟೂಬ್ ಭಾಷಣಗಳನ್ನು ಕೇಳಬಹುದು, ಇಷ್ಟವಿದ್ದಲ್ಲಿ ಸಾಹಿತ್ಯ ಸಮ್ಮೇಳನ, ಲಯನ್ಸ್, ಜೇಸಿ, ರೋಟರಿ ಎಂದೆಲ್ಲ ಕ್ಲಬ್ ಗಳಲ್ಲಿ ಭಾಗವಹಿಸಬಹುದು, ಏನಿಲ್ಲವಾದರೂ ನಮ್ಮದೇ ಸ್ವಂತ ಲೈಬ್ರರಿ ಇಟ್ಟುಕೊಂಡು ಕತೆ, ಕಾದಂಬರಿಗಳ ಕಲ್ಪನಾಲೋಕದಲ್ಲಿ, ಒಳ್ಳೆಯ ಸಿನಿಮಾಗಳ ಭಾವಲೋಕದಲ್ಲಿ ಕಳೆದು ಹೋಗಬಹುದು, ನಮ್ಮ ಬುದ್ದಿ ಭಾವವನ್ನು ಪ್ರಚೋದಿಸುವ ಉತ್ತಮ ಸಂಗೀತ, ಒಳ್ಳೆಯ ಹವ್ಯಾಸಗಳು, ಕಲೆಗಳನ್ನು ಬೆಳೆಸಿಕೊಳ್ಳಬಹುದು ಸಮಾನ ಆಸಕ್ತರೊಂದಿಗೆ ನಮ್ಮ ದುಗುಡಗಳನ್ನೂ, ಕನಸುಗಳನ್ನೂ ಆಸೆ ಆಕಾಂಕ್ಷೆಗಳನ್ನು ಹಿತಮಿತವಾಗಿ ಹಂಚಿಕೊಳ್ಳಬಹುದು. ಸಾಧನೆಗೆ ಸಾವಿರ ಹಾದಿ.

ಹಾಗೆ ನೋಡಿದರೆ ‘ಸಾಧನೆ’ ಎಂದರೆ ಏನು? ನಮ್ಮ ಸಂಕುಚಿತ ವಲಯದಿಂದ ವಿಸ್ತಾರಕ್ಕೆ ತೆರೆದುಕೊಳ್ಳುವುದು. ಸಾಧನೆಯ ಹಾದಿಯಲ್ಲಿ ಸ್ಪರ್ಧೆ ಸಹಜವಾದರೂ ಆ ಸ್ಪರ್ಧೆಗಳು ನಮ್ಮಲ್ಲಿ ಸಣ್ಣತನ, ಅಸೂಯೆ, ಕಲಹ, ನಿಂದನೆಗಳಿಗೆ ಎಡೆಮಾಡಿಕೊಂಡದಂತೆ ಇರಬೇಕು, ಆರೋಗ್ಯಕರ ಸ್ಪರ್ಧೆ ನಮ್ಮಲ್ಲಿ ಜೀವನೋತ್ಸಾಹವನ್ನು ಜೀವಂತಿಕೆಯನ್ನು, ಪ್ರಫುಲ್ಲತೆಯನ್ನು, ಆಹ್ಲಾದವನ್ನು ತಂದುಕೊಡಬಲ್ಲುದು. ಇವಲ್ಲದೆ ನಮ್ಮ ಕೌಟುಂಬಿಕ ಬದುಕು, ಸ್ನೇಹಿತ ವರ್ಗವೂ ಒತ್ತಾಸೆಯಾಗಿ ನಿಲ್ಲುವಂತೆ ಅವುಗಳನ್ನು ರೂಪಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮುಂದೊಂದು ದಿನ ಸಾಧನೆಯ ಶಿಖರದಲ್ಲಿ ನಿಂತಾಗ ಏಕಾಂಗಿಯಾಗಿ ಬಿಡುವ ಅಪಾಯವಿದೆ. ಇನ್ನು ದುಡ್ಡೇ ಎಲ್ಲವೂ ಅಲ್ಲದಿದ್ದರೂ ಉತ್ತಮ ಜೀವನ ಶೈಲಿ ಸದಭಿರುಚಿಯ ಆಸಕ್ತಿಗಳನ್ನು ನಿಭಾಯಿಸಲು ನಮಗೆ ದುಡ್ಡು ಬೇಕು. ಅದರಲ್ಲೂ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವುದು ಅತ್ಯಗತ್ಯ. ವೃದ್ಯಾಪ್ಯದಲ್ಲಂತೂ ಇದು ಇನ್ನಷ್ಟು ಅನಿವಾರ್ಯ. ಇತರರನ್ನು ಅತಿಯಾಗಿ ನಂಬಿ ನಮ್ಮಲ್ಲಿರುವ ದುಡ್ಡು ಕಾಸು ಕಳೆದುಕೊಳ್ಳುವ ಅನ್ಯರ ಹಂಗಿನ ಕೂಳಿಗೆ ಕೈಚಾಚುವ ದುರ್ಗತಿ ಬಾರದಂತೆ ಎಚ್ಚರೆಚ್ಚರದಿಂದ ಇರಬೇಕು. ಜಗತ್ತು ಕಿರಿದಾದಂತೆ ಮೋಸದ ಜಾಲಗಳೂ ಹೆಚ್ಚಾಗುತ್ತಿವೆ, ಲೈಂಗಿಕ ದೌರ್ಜನ್ಯ,ಹನಿಟ್ರಾಪ್, ಮೊದಲುಗೊಂಡು ಮಾನವನ ಅನಾಚಾರ ಹೇಳತೀರದು. ನಮ್ಮ ಕಂಫರ್ಟ್ ಜೋನ್ ಅಲ್ಲದೆ ಈ ಅನ್ಯಾಯ, ವಂಚನೆ, ತಾರತಮ್ಯಗಳ ಅರಿವು ನಮಗಿಬೇಕು, ತೀರಾ ಮುಗ್ಧತೆಯಿಂದ ದಿವಾಳಿಯಾಗಲು ಅನುವು ಮಾಡಿಕೊಡಬಾರದು, ಇದೇ ಸಂದರ್ಭ ಸಾಮಾಜಿಕ ಜಾಲತಾಣಗಳ ಬಗೆಗೂ ಕೊಂಚ ಬರೆಯಬೇಕೆನಿಸುತ್ತದೆ, ಫೇಸ್ ಬುಕ್ ವಾಟ್ಸಾಪ್, ಇನ್ಟ್ರಾಗ್ರಾಂ, ಟ್ವಿಟರ್ ಎಂದೆಲ್ಲ ಸಾಮಾಜಿಕ ಜಾಲತಾಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಅವು ಎಷ್ಟು ಜೋಡಿಸುತ್ತೇವೆಯೋ ಅಷ್ಟೇ ಒಡೆಯುತ್ತವೆ ಕೂಡ. ಮೊಬೈಲ್, ವಾಟ್ಸಾಪ್, ಪೇಸ್ ಬುಕ್ ಎಲ್ಲವೂ ಒಂದು ಸಾಧನ ಮಾತ್ರ ಎಂಬ ವಿವೇಕ ನಮ್ಮಲ್ಲಿದ್ದು ವಿವೇಚನೆಯಿಂದ ಬಳಸಿದರೆ ಅವುಗಳನ್ನೇ ನಮ್ಮ ಜೀವನದ ಉನ್ನತಿಗೆ, ಪ್ರಫುಲ್ಲತೆಗೆ ಬಳಸಿಕೊಳ್ಳಬಹುದು.

ಇನ್ನು ನಾವೆಲ್ಲರೂ ಮನುಷ್ಯರೇ ಆಗಿರುವುದರಿಂದ ಮಾನವೀಯ ಸಂಬಂಧಗಳಿಂದ ಸ್ನೇಹ, ಗೆಳೆತನ, ವೃತ್ತಿಕ್ಷೇತ್ರದ ಬಾಂಧವ್ಯಗಳು ಹೀಗೆಲ್ಲ ಕಾಲ ಕ್ರಮೇಣ ನಿರೀಕ್ಷೆಗಳನ್ನಿಟ್ಟುಕೊಳ್ಳಲಾರಂಭಿಸುತ್ತೇವೆ, ಈ ನಿರೀಕ್ಷೆಗಳು ನಮ್ಮ ಚಿತ್ತಸ್ವಾಸ್ಥಕ್ಕೆ ಭಂಗ ತಾರದಂತೆ ಬದುಕಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅವು ನಮ್ಮ ಅಸ್ತಿತ್ವವನ್ನೇ ಅಲುಗಾಡಿಸುವ ಅಪಾಯ ಇದೆ. ಒಂದು ರೀತಿಯ ನಿರ್ಲಿಪ್ತತೆ, ‘ಕರ್ಮಣ್ಣೇ ವಾಧಿಕಾರಸ್ತೇ ಮಾಫಲೇಶು ಕದಾಚನ’ ಎಂಬಂತೆ ಬದುಕುವುದೊಳ್ಳೆಯದು.

ಕೊನೆಯದಾಗಿ, ದುರಿತ ಪರಂಪರೆಗಳನ್ನೆದುರಿಸುತ್ತಿರುವಾಗ ಮನುಷ್ಯರ ಮೇಲಿನ ಎಲ್ಲಾ ನಂಬಿಕೆ ಹೊರಟು ಹೋಗುತ್ತದೆಯಾದರೂ ಸಹನೆ ಕಳೆದುಕೊಳ್ಳಬಾರದು ಎಲ್ಲರ ಎದೆಯಲ್ಲೂ ಒಂದು ಒಲವಿನ, ದಯೆ, ಕರುಣೆ, ಅನುಕಂಪೆಯ ಒರತೆಯಿರುತ್ತದೆ. ಅಸಲಿಗೆ ವಿಧಿಯ ಕಾಲೆಳೆತ ಕೀಟಲೆಯ ಮುಂದೆ ನಾವೆಲ್ಲ ನಿಮಿತ್ತ ಮಾತ್ರ, ಎಲ್ಲರೂ ನಮ್ಮಷ್ಟೇ ಸಂದರ್ಭಕ್ಕನುಗುಣವಾಗಿ ನಿಸ್ಸಹಾಯಕರು ನಮ್ಮ ಕುಗ್ಗಿದ ನಡೆ, ಕಂದಿದ ಮುಖವನ್ನು ನೋಡಿ ಮಾತನಾಡಿಸುವವರನ್ನೆಲ್ಲ ಅನುಮಾನದಿಂದ ನೋಡದೆ ಅವರ ಒಲುಮೆಯ, ಬೆಚ್ಚನೆಯ ಪ್ರೀತಿಗೊಂದಿಷ್ಟು ಅವಕಾಶ ಕೊಟ್ಟು ನೋಡೋಣ. ನಮ್ಮನ್ನೇ ನೆಚ್ಚಿರುವ ಜೀವಗಳ ಶಾಂತಿಯ ಬಗ್ಗೆ ಅವರ ಭವಿಷ್ಯದ ಬಗೆಗೆ ಯೋಚಿಸೋಣ. ನಮ್ಮ ಅಕ್ಕಪಕ್ಕದವರಿಗೆ, ನಮ್ಮ ಆಪ್ತವಲಯದವರಿಗೆ ನಮ್ಮಿಂದಾದ ಸಹಾಯ ಮಾಡೋಣ.
ಅಕ್ಕರೆಯಿಂದ ಒಟ್ಟಿಗೆ ಬಾಳೋಣ ಆಗದೇ?”.

ಎಲ್ಲರಿಗೂ ಶುಭವಾಗಲಿ.

ಜಯಶ್ರೀ ಬಿ. ಕದ್ರಿ

7 Responses

  1. ನಯನ ಬಜಕೂಡ್ಲು says:

    ಬಹಳ ದಿನಗಳ ನಂತರ ಕಾಣಿಸಿಕೊಳ್ತಿದ್ದೀರಿ ಮೇಡಂ, ಅದೂ ಬಹಳ ಸುಂದರ ಹಾಗೂ ಸ್ಪೂರ್ತಿದಾಯಕ ಲೇಖನದೊಂದಿಗೆ.

  2. R. K. Nadgir says:

    ಬಾಳ್ವೆ ಕುರಿತಾಗಿ ಬರೆದ ಸುದೀರ್ಘ ಲೇಖನ ಬಹಳೇ ಸುಂದರವಾಗಿ ಮೂಡಿ ಬಂದಿದೆ. ಸಮಸ್ಯೆಗಳ ಸುಳಿಯಲ್ಲಿ ಬಳಲುವವರಿಗೆ
    ಸಮಾಧಾನ ಸೂಚಿಸುವ ಲೇಖನ ಇದಾಗಿದ್ದು. ಇನ್ನೂ ಹೆಚ್ಚಿನ ವಿವೇಚನ ಪೂರ್ಣ ಲೇಖನಗಳು ನಿಮ್ಮಿಂದ ಅವ್ಯಾಹತ ವಾಗಿ ಮೂಡ್ ಬರಲೆಂದು ಹಾರೈಸುತ್ತೇವೆ.
    ಹುಬ್ಬಳ್ಳಿಯ ನಾಡಗೀರ್ ಪರಿವಾರ

  3. ಚಿಂತನಪೂರ್ಣ ಲೇಖನ.. ಸಕಾರಾತ್ಮಕ.. ಮುಕ್ತಾಯ… ಧನ್ಯವಾದಗಳು ಮೇಡಂ.

  4. Dr Krishnaprabha M says:

    ತುಂಬಾ ಚಂದದ ಬರಹ

  5. ನೊಂದವರಿಗೆ ಬದುಕಿನಲ್ಲಿ ಹತಾಶೆ ಹೊಂದಿದವರಿಗೆ ಅರ್ಥವತ್ತಾದ ಸೂಕ್ತವಾದ ಬರಹ
    ಲೇಖನ ಅರ್ಥಗರ್ಭಿತವಾಗಿ ಮೂಡಿಬಂದಿದೆ

  6. ಎಲ್ಲರಿಗೂ ಧನ್ಯವಾದಗಳು

  7. ಶಂಕರಿ ಶರ್ಮ says:

    ಬದುಕಿನಲ್ಲಿ ಧನಾತ್ಮಕ ಯೋಚನೆಯ ಅಗತ್ಯತೆಯನ್ನು ಒತ್ತಿ ಹೇಳುವ ಪ್ರಬುದ್ಧ, ಸುದೀರ್ಘ ಲೇಖನ ಎಲ್ಲರಿಗೂ
    ಸ್ಫೂರ್ತಿದಾಯಕವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: