ಅಮರ ಪ್ರೇಮ
ಆಗ ತಾನೇ ಕರೋನಾ ಮೂರನೇ ಅಲೆಯಿಂದ ಜನತೆ ಹೊರಬರುತ್ತಿದ್ದರೂ, ಇನ್ನೂ, ಕೊನೆಯ ಪಕ್ಷ ಆಸ್ಪತ್ರೆಗಳಲ್ಲಿ ಅನುಸರಿಸುತ್ತಿದ್ದ ʼದೈಹಿಕ ಅಂತರವಿರಲಿʼ ಮತ್ತು ʼಮಾಸ್ಕ್ ಧರಿಸಿರಿʼ ನಿಯಮಗಳು ಕಡ್ಡಾಯವಾಗಿ ಆಚರಣೆಯಲ್ಲಿದುದರಿಂದ ನೋಂದಣಿಗಾಗಿ ನಗರದ ಪ್ರತಿಷ್ಟಿತ ನರ್ಸಿಂಗ್ ಹೋಂನಲ್ಲಿ ಮುಂದಿನ ವ್ಯಕ್ತಿಯಿಂದ ಎರಡು ಅಡಿ ಹಿಂದೆ ನಿಂತಿದ್ದ ಸುಧಾಕರನ ಮನದಲ್ಲಿ, ನಡೆದ ಘಟನೆಗಳು ಪುನರಾವತರ್ನೆಗೊಳ್ಳುತ್ತಿದ್ದವು.
ಇಂದಿಗೆ ಒಂದೂವರೆ ತಿಂಗಳ ಹಿಂದೆ ಕರೋನಾದಿಂದ ತೀರಿಕೊಂಡ ಸೋದರಮಾವ, ಅವರ ಅಂತಿಮ ದರ್ಶನಕ್ಕಂತೂ ಹೋಗಲಾಗಲಿಲ್ಲವೆಂದು, ಎಂದೂ ಯಾವುದಕ್ಕೂ ಹಠ ಮಾಡದ ಅಮ್ಮ, ವೈಕುಂಠಸಮಾರಾಧನೆಗೆ ಬೇಡವೆಂದರೂ ಹೋಗಿ ಬಂದ ದಿನ ರಾತ್ರಿಯೇ ಉಸಿರಾಡಲು ಕಷ್ಟಪಟ್ಟದ್ದು, ತಪಾಸಣೆ ಮಾಡಿಸಲಾಗಿ ಕರೋನಾ ಸೋಂಕು ತಗಲಿದ್ದು ಧೃಡಪಟ್ಟದ್ದು, ಮನೆಯವರೆಲ್ಲರ ಕೈ ಕಾಲುಗಳು ಬಿದ್ದು ಹೋದಂತಾಗಿ, ಆಸ್ಪತ್ರೆಗೆ ದಾಖಲಿಸಿದ್ದು, ಎರಡೇ ದಿನದಲ್ಲಿ ಉಲ್ಭಣಗೊಂಡು ಇಂದಿಗೆ 21 ದಿನಗಳ ಹಿಂದೆ ಗತಿಸಿದ್ದು ನೆನೆದರೆ ಈಗಲೂ ದುಃಖದಿಂದ ದೇಹದ ಸಾರವೆಲ್ಲಾ ಸೋರಿಹೋದಂತಾಗುವುದೂ, ಅಮ್ಮನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪ ಮೌನಕ್ಕೆ ಜಾರಿದ್ದು ಎಲ್ಲಾ ನೆನೆಸಿಕೊಂಡ ಮನ ಮೂಕವಾಗಿ ರೋಧಿಸುತಿತ್ತು.
ಇಂದು ಬೆಳಗ್ಗೆ ಎದ್ದವರೇ ಅಪ್ಪ – ಸುಧಾಕರ, ಯಾಕೋ ನಿನ್ನೆ ರಾತ್ರಿಯೆಲ್ಲಾ ತುಂಬಾ ಅಂದ್ರೆ, ತುಂಬಾನೇ ಹೊಟ್ಟೆ ನೋವು, ನುಲಿದಂತೆ ಆಗುತ್ತಿದೆ, ಏನು ಮಾಡುವುದು? ಒಮ್ಮೆ ತೋರಿಸಿಕೊಂಡು ಬರೋಣವೇ? – ಎಂದಾಗ, – ಖಂಡಿತಾ ಅಪ್ಪ – ಎಂದು ಅಪ್ಪನನ್ನು ಕರೆತಂದು ಅವರನ್ನು ವರಾಂಡದಲ್ಲಿ ಹಾಕಿದ್ದ ಖುರ್ಚಿಯಲ್ಲಿ ಕೂಡಿಸಿ ಈಗಿಲ್ಲಿ ಬಂದು ಕ್ಯೂನಲ್ಲಿ ನಿಂತಾಗಿದೆ.
ಅಂತೂ ಇಂತೂ ವಂಶಾವಳಿಯ ಪ್ರವರಗಳನ್ನೆಲ್ಲಾ ಹೇಳಿ, ನೋಂದಣಿಯ ಶುಲ್ಕವನ್ನು ಕಟ್ಟಿದ ನಂತರ ಸ್ವಾಗತಕಾರಿಣಿ ಹೇಳಿದಳು – ಮೊದಲನೇ ಮಹಡಿಯ 8 ನೇ ಸಂಖ್ಯೆಯ ಕೋಣೆಗೆ ಪೇಶೆಂಟನ್ನು ಕರೆದೊಯ್ದು, ಟೋಕನ್ ಪಡೆಯಿರಿ. ನಿಮ್ಮ ನಂಬರ್ ಬಂದಾಗ, ಡಾಕ್ಟರ್ ತಪಾಸಣೆ ನಡೆಸುತ್ತಾರೆ – ಎಂದಳು. ʼಸರಿʼ ಎಂದು, ಅವಳು ತಾನು ಪಡೆದ ವಿವರಗಳನ್ನೆಲ್ಲಾ ದಾಖಲಿಸಿ ನೀಡಿದ್ದ ಫೈಲನ್ನು ಹಿಡಿದು ಅಪ್ಪ ಕುಳಿತಿದ್ದ ಸ್ಥಳಕ್ಕೆ ಬಂದಾಗ ಅವರು ಅಲ್ಲಿ ಇರಲೇ ಇಲ್ಲ! ಅಕ್ಕಪಕ್ಕದವರನ್ನು ವಿಚಾರಿಸಲಾಗಿ, ಎಲ್ಲರೂ ತಮಗೆ ಗೊತ್ತಿಲ್ಲ ಎಂದು ಕೈಯಾಡಿಸಿದರು.
ʼಎಲ್ಲಾದರೂ ಶೌಚಾಲಯಕ್ಕೆ ಹೋಗಿರಬಹುದು, ಅಥವಾ ಯಾರನ್ನಾದರೂ ವಿಚಾರಿಸಿಕೊಂಡು ಈ ರೀತಿಯ ತೊಂದರೆಗಳಿಗೆ ತಪಾಸಣೆ ನಡೆಸುವ ಕೋಣೆಯ ಹತ್ತಿರವೇ ಹೋಗಿರಹುದುʼ ಎಂದುಕೊಳ್ಳುತ್ತಾ, ಶೌಚಾಲಯಗಳನ್ನೆಲ್ಲಾ ಹುಡುಕಿ ಅಲ್ಲಿ ಇಲ್ಲದ್ದು ಕಂಡು ಮೇಲಿನ ಮಹಡಿಯ ೮ನೇ ಸಂಖ್ಯೆ ಕೊಠಡಿಯೆಡೆಗೆ ಬಂದಾಗ, ಅಲ್ಲಿಯೂ ಇಲ್ಲದ್ದು ನೋಡಿ ಆತಂಕದಿಂದ, ಮನೆಗೇನಾದರೂ ಮನಸ್ಸು ಬದಲಾಯಿಸಿ ಹೊರಟುಬಿಟ್ಟರೇ ಎಂದುಕೊಳ್ಳುತ್ತಾ, ಫೋನಾಯಿಸಿದರೆ, ಅಲ್ಲಿಗೂ ಬಂದಿಲ್ಲ, ಎಂಬ ಉತ್ತರ ಕೇಳಿ, ಈಗ ನಿಜಕ್ಕೂ ಗಾಭರಿಯಾಗಿ ಸ್ವಾಗತಕಾರಿಣಿಗೆ ಹೇಳಿ, ಮೈಕಿನಲ್ಲಿ ಅನೌನ್ಸ್ ಮಾಡಿಸಿ, ಕಂಡ ಕಂಡವರನ್ನೆಲ್ಲಾ ವಿಚಾರಿಸಿ ಎಲ್ಲಿಯೂ ಇಲ್ಲದ್ದು ಕಂಡು ಗೇಟಿನಿಂದಾಚೆಗೆ ಬಂದು ಅಲ್ಲಿಯೂ ಅವರ ಚಹರೆ ಹೇಳಿದಾಗ, ಅಲ್ಲಿ ನಿಂತಿದ್ದ ಆಟೋಗಳ ಒಬ್ಬ ಚಾಲಕ – ಈಗ ಸ್ವಲ್ಪ ಹೊತ್ತಿನ ಮುಂಚೆ, ನೀವು ಹೇಳಿದಂತೆಯೇ ಇದ್ದ ಹಿರಿಯರೊಬ್ಬರು ಆಟೋ ಒಂದನ್ನು ಹತ್ತಿಕೊಂಡು ಹೋದ ಹಾಗಿತ್ತು – ಎಂದ.
ಅವರೇ ಹೋಗೋಣವೆಂದು ಹೇಳಿ ಬಂದು ಹೀಗೇಕೆ ಮಾಡಿದರು, ಬಹುಶಃ ಇಷ್ಟರ ವೇಳೆ ಮನೆಗೆ ಹಿಂತಿರುಗಿರಬಹುದೆಂದು ಮನೆಗೆ ಬಂದರೆ ಅಲ್ಲಿಯೂ ನಿರಾಶೆಯೇ ಕಾದಿತ್ತು.
ಕಂಡ ಕಂಡ ಪರಿಚಯಸ್ಥರು, ಸ್ನೇಹಿತರು, ಬಂಧುಗಳಿಗೆಲ್ಲಾ ಫೋನಾಯಿಸಿದರೂ ಸಿಕ್ಕಿದ್ದು ನಕಾರಾತ್ಮಕ ಉತ್ತರವೇ. ಇನ್ನು ವಿಳಂಬಿಸುವುದರಲ್ಲಿ ಅರ್ಥವೇ ಇಲ್ಲವೆಂದು ಪೋಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದಾಗ, ಇನ್ಸೆಪೆಕ್ಟರ್ –ಇನ್ನೂ ಹೋಗಿ 3 – 4 ಗಂಟೆಯೂ ಆಗಿಲ್ಲ ಅನ್ನುತ್ತೀರಿ, ತಡೆಯಿರಿ, ಎಲ್ಲಾದರೂ ಪರಿಚಿತ ಜಾಗಕ್ಕೆ ಹೋಗಿರಬಹುದು, ಬರುತ್ತಾರೆ – ಎಂದರು.
ಇಲ್ಲಾ ಸಾರ್, ನಮ್ಮ ತಂದೆ ಹಾಗೆಲ್ಲಾ ಹೇಳದೆ ಕೇಳದೆ ಸುಮ್ಮಸುಮ್ಮನೆ ಹೋಗುವವರಲ್ಲ, ಅಲ್ಲದೇ ಇಂತಹ ಪರಿಸ್ಥಿತಿಯಲ್ಲಿ – ಎನ್ನುತ್ತಾ, ಮನೆಯ ಪರಿಸ್ಥಿತಿಯನ್ನು ತಿಳಿಸಿದರು.
ಆಗ ಇನ್ಸಪೆಕ್ಟರ್ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಗರದ ಎಲ್ಲಾ ಠಾಣೆಗಳಿಗೂ ಸುದ್ದಿಯನ್ನು ರವಾನಿಸಿ, – ನೀವು ಮನೆಗೆ ಹೋಗಿರಿ, ನಾನು ಎಲ್ಲ ರೀತಿಯಿಂದಲೂ ಹುಡುಕಿಸಲು ಪ್ರಯತ್ನಿಸುತ್ತೇನೆ, ಅಕಸ್ಮಾತ್ ಮನೆಗೆ ಬಂದರೆ ತಕ್ಷಣ ತಿಳಿಸಿ – ಎಂದರು.
ಸೋತ ಮುಖದಲ್ಲಿ ಹಿಂದಿರುಗಿದ ಸುಧಾಕರನನ್ನು ನೋಡಿ ಹೆಂಡತಿ ಸುಶೀಲ, ತಂಗಿ ಭಾರತಿ, ಎಲ್ಲರೂ ಚಿಂತಾಕ್ರಾಂತರಾದರು.
ನರ್ಸಿಂಗ್ ಹೋಂಗೆ ಹೊರಟದ್ದು ಹನ್ನೊಂದು ಗಂಟೆಗೆ. ಈಗ ಆಗಲೇ ಸಂಜೆ ಐದೂವರೆ ಆಗುತ್ತಾ ಬಂತು. ಯಾವುದೇ ಸುದ್ದಿ ಸಮಾಚಾರವಿಲ್ಲ. ಎಲ್ಲಿಯಾದರೂ ಹಸಿವಿನಿಂದಲೋ, ಮುಂಚೆಯೇ ಹೊಟ್ಟೆ ನೋವು ಎನ್ನುತ್ತಿದ್ದರು, ನಿಶ್ಯಕ್ತಿಯಿಂದಲೋ ತಲೆಸುತ್ತಿ ಬಿದಿದ್ದರೆ, ಹೀಗೆ ಒಬೊಬ್ಬರ ಮನದಲ್ಲೂ ಎಲ್ಲಾ ರೀತಿಯ ಕೆಟ್ಟ ಯೋಚನೆಗಳು ಬರುತಿತ್ತು.
ಅಷ್ಟರಲ್ಲಿ ಸುಧಾಕರನ ಫೋನ್ ರಿಂಗಣಿಸಿತು. ಅತ್ತ ಕಡೆಯಿಂದ ಇನ್ಸಪೆಕ್ಟರ್ – ಸುಧಾಕರ್, ನೀವೀಗಲೇ ಮೈಸೂರಿನ ಹೊರವಲಯದಲ್ಲಿರುವ ವರುಣಾ ನಾಲೆಯ ಹತ್ತಿರ ಬನ್ನಿರಿ, ಧೈರ್ಯದಿಂದಿರಿ – ಎಂದರು.
ಯಾವುದೇ ಪ್ರಶ್ನೆಯನ್ನೂ ಕೇಳಲು ಧೈರ್ಯವಿಲ್ಲದೆ ತಂಗಿ ಭಾರತಿಯೊಡಗೂಡಿ, ವರುಣಾ ನಾಲೆಯ ಹತ್ತಿರ ಬಂದಾಗ ಹತ್ತಾರು ಜನರ ಗುಂಪು ಕಂಡಿತು. ಇನ್ಸಪೆಕ್ಟರ್ ಕೂಡ ಅಲ್ಲಿಯೇ ಇದ್ದರು. ಹೇಳಿದರು –
ಬನ್ನಿ, ಗುರುತಿಸಿ, ಇವರ ಚಹರೆ, ನೀವು ನೀಡಿದ ನಿಮ್ಮ ತಂದೆಯವರ ಚಹರೆಗೆ ಕೊಂಚ ಹೋಲುತ್ತಿದೆ, ನೋಡಿರಿ – ಎಂದರು.
ಅಣ್ಣ ತಂಗಿ ಇಬ್ಬರೂ ಒಬ್ಬರ ಕೈಯನ್ನೊಬ್ಬರು ಬಿಗಿಯಾಗಿ ಹಿಡಿದು ನಡುಗುವ ಹೃದಯದೊಂದಿಗೆ ಹೋಗಿ ನೋಡಿದರೆ, ದುರಂತ ಕಾದಿತ್ತು.
ಕಾಲುಗಳಿಗೆ ಕಲ್ಲು ಕಟ್ಟಿದಂತಿತ್ತು. ಪ್ರಾಣ ಹೋದ ತಂದೆಯ ದೇಹ ಶಾಂತವಾಗಿ ಮಲಗಿತ್ತು.
ಅಘಾತವನ್ನು ತಾಳಲಾರದೆ ಅಶ್ರುಧಾರೆ ಹರಿಯಿತು – ಹೌದು ಸರ್, ಇವರೇ ನಮ್ಮ ತಂದೆ, ಇದು ಹೇಗಾಯಿತು?
ನೋಡಿ ಈ ಪತ್ರವನ್ನು – ಎನ್ನುತ್ತಾ ಒಂದು ಪತ್ರವನ್ನು ನೀಡಿದರು.
ತಂದೆ ಬರೆದಿದ್ದರು – ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ಯಾರೂ ಕಾರಣರಲ್ಲ, ಹೆಣ ದೂರ ಕೊಚ್ಚಿಕೊಂಡು ಹೋಗಿ ಸಿಗುವುದು ಕಷ್ಟವಾಗಬಾರದೆಂದು ನಾನೇ ಕಾಲುಗಳಿಗೆ ಕಲ್ಲು ಕಟ್ಟಿಕೊಂಡು ನೀರಿಗೆ ಬೀಳುತಿದ್ದೇನೆ. ಈ ವಿಚಾರವನ್ನು ಕಂಡವರು ನನ್ನ ಮನೆಗೆ ದಯವಿಟ್ಟು ತಿಳಿಸಿ, ನನ್ನ ಮನೆಯ ಫೋನ್ ನಂಬರ್ ಇದು . . . . – ಎಂದಿತ್ತು.
ಪತ್ರ ಓದಿ ತಲೆ ಎತ್ತಿದಾಗ, ಇನ್ಸಪೆಕ್ಟರ್ ಹೇಳಿದರು – ಈ ಜಾಗದಲ್ಲಿ ಸಾಧಾರಣ ಜನ ಸಂಚಾರವಿರುವುದಿಲ್ಲ. ಬಹುಶಃ ಆಟೋದಲ್ಲಿ ಬಂದು ಇಲ್ಲಿಗೆ ಅರ್ಧ ಕಿಲೋಮೀಟರ್ ದೂರದಲ್ಲಿ ಇಳಿದು ಕೊಂಚ ದೂರ ನಡೆದುಕೊಂಡು ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹತ್ತಿರದ ಸಿದ್ದಲಿಂಗಪುರದ ಇಬ್ಬರು ಯುವಕರು ಈಜಲು ಇಲ್ಲಿಗೆ ಬಂದಾಗ ಈ ಪತ್ರ, ಅವರ ಕನ್ನಡಕ, ಧರಿಸಿದ್ದ ಶರ್ಟು ಇಲ್ಲಿತ್ತಂತೆ. ಪತ್ರದ ಮೇಲೆ ಹಾರಿಹೋಗದಂತೆ ಒಂದು ಕಲ್ಲನ್ನೂ ಇಟ್ಟಿದ್ದರಂತೆ. ಅವರುಗಳು ನುರಿತ ಈಜುಗಾರರಾದ್ದರಿಂದ ತಕ್ಷಣ ನದಿಗೆ ಜಿಗಿದು ಹುಡುಕಲಾಗಿ ಇಲ್ಲೇ ಕೊಂಚ ಮುಂದೆ ದೇಹ ಸಿಕ್ಕಿದೆ. ಐ ಆಮ್ ವೆರಿ ಸ್ಸಾರಿ – ಎಂದರು. ಅಣ್ಣ, ತಂಗಿ ತಲೆಯ ಮೇಲೆ ಕೈ ಹೊತ್ತು ಕುಳಿತರು.
ಮುಂದಿನದೆಲ್ಲಾ ಯಾಂತ್ರಿಕವಾಗಿ ನಡೆಯಿತು. ಈಗ ತಾನೇ ಮನೆಯಲ್ಲಿ ಸಂಭವಿಸಿದ್ದ ಎರಡು ಸಾವುಗಳ ಜೊತೆಗೆ ಇನ್ನೊಂದು ಸೇರಿಕೊಂಡಿತು. ಆದರೆ ಮೊದಲನೆಯದು ಸೋಂಕಿನಿಂದಾದರೆ, ಎರಡನೆಯದು ನಿರ್ಲಕ್ಷದಿಂದ ಮತ್ತು ಇದಂತೂ ದುರ್ಮರಣವೇ ಹೌದೆಂದು ಎಲ್ಲರಲ್ಲೂ ದುಖಃ ಮಡುಗಟ್ಟಿತ್ತು.
ಆದರೂ ಸುಧಾಕರ, ಸುಶೀಲ, ಭಾರತಿಯರಿಗೆ, – ಜೀವನದುದ್ದಕ್ಕೂ ಪ್ರಬುದ್ಧವಾಗಿ ಯೋಚಿಸಿ, ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ಅಪ್ಪ ಹೀಗೇಕೆ ಮಾಡಿದರು? ಆತ್ಮಹತ್ಯೆ ಪಾಪವಲ್ಲವೆ? ಇಬ್ಬರೂ ಒಟ್ಟಿಗೇ ಹೊರಟು ಹೋದರೆ ನಮ್ಮಗಳ ಗತಿ ಏನು, ಎಂದಾದರೂ ಯೋಚಿಸಬೇಕಿತ್ತಲ್ಲವೆ? – ಎಂದೆನಿಸುತಿತ್ತು. ಮೂವರಿಗೂ ʼತಾವೇನಾದರೂ ತಪ್ಪಾಗಿ ನಡೆದುಕೊಂಡೆವೇ ಅಥವಾ ಒಬ್ಬರಿಗೆ ತಿಳಿಯದಂತೆ ಇನ್ನಿಬ್ಬರಲ್ಲಿ ಯಾರಾದರೂ ಅವರ ಸೂಕ್ಷ್ಮ ಮನಸ್ಸು ನೋಯುವಂತೆ ನಡೆದುಕೊಂಡರೇʼ ಎಂದು ಸದಾ ಮನಸ್ಸು ಆತ್ಮಾವಲೋಕನದಲ್ಲಿ ತಲ್ಲಣಿಸುತಿತ್ತು.
ವಾರ್ತಾಪತ್ರಿಕೆಯಲ್ಲಿ, ಟಿವಿಯಲ್ಲಿ ನೋಡಿದ ಆಟೋ ಚಾಲಕ ಮನೆಗೆ ಬಂದು ಸಂತಾಪ ಸೂಚಿಸುತ್ತಾ ಹೇಳಿದ – ಅಂದು ನರ್ಸಿಂಗ್ ಹೋಮಿನಿಂದ ಹೊರಟಾಗ ನಾನು, – ಅಷ್ಟು ದೂರ ಯಾಕೆ ಯಜಮಾನರೇ? – ಎಂದು ಕೂಡ ಕೇಳಿದೆ. – ಇಲ್ಲಾ ನನಗೆ ಮರೆತೇ ಹೋಗಿತ್ತು, ಅಲ್ಲೇ ಹತ್ತಿರದಲ್ಲಿ ಇರುವ ಜಮೀನು ಮಾರಬೇಕಿದೆ, ಕೊಳ್ಳುವವರು ಅಲ್ಲಿಗೇ ಬನ್ನಿ ಎಂದಿದ್ದರು – ಎಂದರು, ಅದನ್ನು ನಾನು ನಂಬಿಬಿಟ್ಟೆ. ʼಸ್ವಲ್ಪ ಹೊತ್ತು ಕಾಯಲೇ, ವಾಪಸ್ಸು ಬರುತ್ತೀರಾ?ʼ ಎಂದು ಕೂಡ ಕೇಳಿದೆ. – ಇಲ್ಲಾ ನಂತರ ಅವರ ಮನೆಗೆ ಹೋಗಿ ಮಾತುಕತೆ ಮುಗಿಸಿಕೊಂಡು ಸಂಜೆ ಹಿಂದಿರುಗುತ್ತೀನಿ – ಎನ್ನುತ್ತಾ ಬಾಡಿಗೆಗಿಂತ ನೂರು ರೂಪಾಯಿ ಹೆಚ್ಚಿಗೆ ಕೊಟ್ಟು ಕಳುಹಿಸಿಬಿಟ್ಟರು, ನಾನು ಇನ್ನೂ ಎಚ್ಚರವಹಿಸಬೇಕಾಗಿತ್ತು, ಛೇ, ಅನ್ಯಾಯವಾಯಿತು – ಎಂದು ಪೇಚಾಡಿಕೊಂಡ.
ಮೂರ್ನಾಲ್ಕು ದಿನಗಳ ನಂತರ ಅವರ ಕೋಣೆಯನ್ನು ಸ್ವಚ್ಚ ಮಾಡಲು ಹೋದಾಗ ಮೇಜಿನ ಖಾನೆಯಲ್ಲಿ ಮತ್ತೊಂದು ಪತ್ರ ಸಿಕ್ಕಿತು. ಬರೆದಿದ್ದರು –
ನನ್ನ ಪ್ರೀತಿಯ ಮಕ್ಕಳೇ,
ನಿಮ್ಮಗಳಿಗೆ ಒಟ್ಟೊಟ್ಟಿಗೇ ದು:ಖ ನೀಡುತ್ತಿರುವುದಕ್ಕೆ ಕ್ಷಮೆಯಿರಲಿ. ಎಲ್ಲರೂ ಪ್ರೌಢರಿದ್ದೀರಿ, ದಯವಿಟ್ಟು ನನ್ನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಿ. ಸಾಯುವ ಹಿಂದಿನ ದಿನ ಐಸಿಯುನಿಂದ ನಿಮ್ಮ ಅಮ್ಮ ದೀನಳಾಗಿ ನೋಡಿದ ನೋಟ ನನ್ನನ್ನು ಕಾಡುತ್ತಿದೆ. ಒಮ್ಮೆಯೂ ತವರು ಮನೆಗೂ ಹೋಗದೆ 58 ವರ್ಷಗಳ ಒಡನಾಟವನ್ನು ಕಡಿದುಕೊಂಡು ಬದುಕಲು ನನಗೆ ಸಾಧ್ಯವಾಗುತ್ತಲೇ ಇಲ್ಲ. ನೀವೆಲ್ಲರೂ ನಮ್ಮನ್ನು ಅತ್ಯಂತ ಪ್ರೀತ್ಯಾದರಗಳಿಂದ ಕಂಡಿದ್ದೀರಿ. ನನಗೆ ನಿಮ್ಮಗಳ ಮೇಲೆ, ಈ ಪ್ರಪಂಚದ ಮೇಲೆ ಯಾವುದೇ ದೂರುಗಳಿಲ್ಲ. ನನ್ನ ಪ್ರೀತಿಯ ಮಕ್ಕಳು ನೀವು. ದೇವರು ನಿಮಗೆ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ನನಗಂತೂ ನಿಮ್ಮ ಅಮ್ಮನನ್ನು ಬಿಟ್ಟು ಬದುಕುವ ಶಕ್ತಿಯನ್ನು ಕೊಡಲಿಲ್ಲ. ಆತ್ಮಹತ್ಯೆ ಮಹಾಪಾಪ ಎಂದು ತಿಳಿದಿದ್ದರೂ, ಮುಗ್ಧ, ಕೋಮಲ ಮನದ ನಿಮ್ಮ ಅಮ್ಮನನ್ನು ಬಿಟ್ಟಿರುವುದು ಇನ್ನೂ ಮಹಾಪಾಪ ಎನಿಸಹತ್ತಿದೆ. ಹಾಗಾಗಿ ಹೋಗುತ್ತಿದ್ದೇನೆ. ನನಗೆ ನಿಮ್ಮ ಅಮ್ಮನ ಮೇಲಿರುವ ಈ ಭಾವವನ್ನು ʼಮೋಹʼ ಎಂದಾದರೂ, ʼಅಮರ ಪ್ರೇಮʼ ಎಂದಾದರೂ ಕರೆಯುವುದು ನಿಮಗೆ ಬಿಟ್ಟ ವಿಚಾರ. ಈ ಜನ್ಮದಲ್ಲಿ ನಾವಿಬ್ಬರೂ ನಮ್ಮ ಜವಾಬ್ದಾರಿಗಳೆಲ್ಲವನ್ನೂ, ನಮ್ಮ ಕೈಲಾದಮಟ್ಟಿಗೆ ನಿಸ್ವಾರ್ಥವಾಗಿ ನಿಭಾಯಿಸಿದ್ದೇವೆ ಎಂಬ ಆತ್ಮವಿಶ್ವಾಸದಿಂದ ಹೊರಟಿದ್ದೇನೆ, ಮೇಲಿಂದಲೇ ನಿಮ್ಮನ್ನು ಹರಸುತ್ತೇನೆ.
ಇತೀ ಆಶೀರ್ವಾದಗಳೊಂದಿಗೆ,
ನಿಮ್ಮ ಅಪ್ಪ
ಮೂವರೂ ಪತ್ರವನ್ನೋದಿ ಮತ್ತೊಮ್ಮೆ ಕಣ್ಣೀರ ಕೋಡಿ ಹರಿಸಿದರು. ಮಗಳು ಭಾರತಿಯೇ ಧೈರ್ಯ ತಂದುಕೊಂಡು, –
ಅಣ್ಣ, ಅತ್ತಿಗೆ, ಏಳಿ, ಕಣ್ಣೀರೊರಸಿಕೊಳ್ಳಿ, 58 ವರುಷಗಳಾದರೂ ಇಷ್ಟು ತೀವ್ರತರವಾದ ಪ್ರೀತಿ, ಪ್ರೇಮ, ಅಭಿಮಾನ, ಅಂತಃಕರಣಗಳನ್ನು ಹೊಂದಿದ್ದ ʼಅಮರ ಪ್ರೇಮಿʼ ತಂದೆ ತಾಯಿಗಳ ಮಕ್ಕಳಾದ ನಾವೇ ಧನ್ಯರು. ನಾವು ನೊಂದಷ್ಟೂ ಅವರ ಆತ್ಮಗಳೂ ದುಃಖಿತಗೊಳ್ಳುತ್ತವೆ. ಇಂತಹವರ ಮಕ್ಕಳೆಂದು ಹೆಮ್ಮೆ ಪಡೋಣ – ಎನ್ನುತ್ತಾ ವಾತಾವರಣದ ತೀವ್ರತೆಯನ್ನು ಕಡಿಮೆಗೊಳಸಿದಳು.
-ಪದ್ಮಾ ಆನಂದ್, ಮೈಸೂರು.
ಪತಿಪತ್ನಿಯರ..ಅನ್ಯೋನ್ಯ ದಾಂಪತ್ಯ ವನ್ನು..ಕಥಾಚೌಕಟ್ಟಿನಲ್ಲಿ…ಅನಾವರಣಗೊಳಿಸಿರುವ ರೀತಿ..
ಚೆನ್ನಾಗಿದೆ…..ಅಭಿನಂದನೆಗಳು ಗೆಳತಿ ಪದ್ಮಾ
ತುಂಬು ಮನದ ಧನ್ಯವಾದಗಳು.
ದಾರುಣ ಅಂತ್ಯ. ಆದರೂ ಚೆನ್ನಾಗಿದೆ ಕಥೆ
ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಕಥಾ ವಸ್ತು ಮತ್ತು ನಿರೂಪಣೆ ತುಂಬಾ ಚೆನ್ನಾಗಿದೆ. ತುಂಬಾ ಇಷ್ಟವಾಯಿತು ಪದ್ಮಾ ಮೇಡಂ.
ಮೆಚ್ಚುಗೆಗಾಗಿ ಧನ್ಯವಾದಗಳು.
Nice story
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ದುಃಖಾಂತ್ಯವಾದರೂ ಪತ್ರಿಕೆಯ ಸುದ್ದಿಯ ತುಣುಕನ್ನೇ ಆಧರಿಸಿ ಹೆಣೆದ ಚಂದದ ಕಥೆ ಚೆನ್ನಾಗಿದೆ.
ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಕಥಯನ್ನು ಪ್ರಕಟಿಸಿದ “ಸುರಹೊನ್ನೆ”ಗೆ ಧನ್ಯವಾದಗಳು. ಮೊಬೈಲ್ ಕಳೆದುಹೋಗಿ, ಅಂತರ್ಜಾಲ ಕೆಲಸ ಮಾಡದೆ ಪ್ರತಿಕ್ರಯಿಸಲು ಅತ್ಯಂತ ತಡವಾಯಿತು. ಅದಕ್ಕಾಗಿ ಕ್ಷಮೆ ಕೋರುತ್ತೇನೆ.
ಇಷ್ಟವಾಯಿತು ಮೇಡಂ. ಈಗ ಓದಿದೆ. ಹಲವು ಬದಲಾವಣೆಗಳಿಂದ ಹಿರಿಯರ ಮನೋಧರ್ಮ ಸಂತುಲನೆಯನ್ನು ಕಳೆದುಕೊಳ್ಳುತ್ತಿದೆ.
ಇಷ್ಟದ ಜೀವ ಇನ್ನಿಲ್ಲವೆಂಬ ಗಾಢ ವಿಷಾದವೇ ಆತ್ಮಹತ್ಯೆಗೆ ಮೂಲವಾಯಿತೆಂಬ ಕತೆಯ ಎಳೆಯನ್ನು ಲೇಖಕಿ ಎಳೆದು
ಬೆಳೆಸಬಹುದಾದ ಎಲ್ಲ ಸಾಧ್ಯತೆಗಳಿದ್ದಾಗ್ಯೂ ಅತ್ಯಂತ ಸಂಯಮವನ್ನು ಲೇಖನಿ ತೋರಿದ ರೀತಿ ಶ್ಲಾಘನೀಯ.
ಕತೆಯ ಲಕ್ಷಣವನ್ನೂ ಪ್ರಬಂಧದ ಗುಣವನ್ನೂ ಒಟ್ಟೊಟ್ಟಿಗೆ ಕಾಯ್ದುಕೊಂಡ ಕಥನ. ಬದುಕಿಗೆ ದುರಂತವೇ ಮೂಲವಯ್ಯ
ಎಂದು ಸಾವರಿಸಿಕೊಳ್ಳುವಂತಾಯಿತು. ಧನ್ಯವಾದಗಳು.