ಕರ್ಮಯೋಗ

Share Button

ಸ್ವಾಮಿ ವಿವೇಕಾನಂದರು ಯೋಗದ ತತ್ವಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ.

1) ಬುದ್ದಿಯಿಂದ ಸತ್ಯವನ್ನು ಅರಿಯುವುದು ಜ್ಞಾನಯೋಗ
2) ಕೈಗಳಿಂದ ಸತ್ಕರ್ಮಗಳನ್ನು ಮಾಡುವುದು ಕರ್ಮಯೋಗ
3) ಮನವು ನಿರಂತರ ಸತ್ಯದ ಸ್ಮರಣೆಯಲ್ಲಿ ನಿಂತರೆ ಅದೇ ಧ್ಯಾನಯೋಗ
4) ಹೃದಯವು ಸತ್ಯವನ್ನು ಅನನ್ಯವಾಗಿ ಪ್ರೀತಿಸಿದರೆ ಅದೇ ಭಕ್ತಿಯೋಗ. ವೇದಾಂತ ದರ್ಶನದಲ್ಲಿ ಈ ಎಲ್ಲಾ ಪ್ರಕಾರಗಳು ಬರುತ್ತವೆ.

ಸಿದ್ಧರಾಮರು ಕರ್ಮಯೋಗಿಗಳು, ಅನಿಮಿಷರು ಜ್ಞಾನಯೋಗಿಗಳು, ಅಲ್ಲಮರು ಧ್ಯಾನಯೋಗಿಗಳು, ಬಸವಣ್ಣನವರು ಭಕ್ತಿಯೋಗಿಗಳು, ಕರ್ಮಯೋಗವೆಂದರೆ ಪ್ರತಿಫಲವನ್ನು ಅಪೇಕ್ಷಿಸದೆ ಕರ್ತವ್ಯವನ್ನು ಮಾಡುತ್ತಾ ಹೋಗುವುದು. ಭಕ್ತಿಯೋಗವು ಪ್ರೀತಿಯಿಂದ ಸಂಪೂರ್ಣವಾಗಿ ದೇವರ ಕಡೆಗೆ ಸಮರ್ಪಣಾ ಭಾವ ಹೊಂದಿರುವುದು. ಜ್ಞಾನಯೋಗವು – ತರ್ಕ ಬದ್ಧವಾದ ವಿಚಾರ ಮಾಡುತ್ತಾ ತತ್ವಜ್ಞಾನದ ಮಾರ್ಗವನ್ನು ಅನುಸರಿಸುವುದು. ರಾಜಯೋಗವು ಪ್ರಜ್ಞೆಯ ಉನ್ನತ ಸ್ಥಿತಿಯನ್ನು ತಲುಪಲು ಅನುಸರಿಸುವ ಪ್ರಯೋಗಶೀಲ ಯೋಗವಾಗಿದೆ. ಯೋಗದ ಪ್ರಕಾರಗಳು ಬೇರೆ ಬೇರೆಯಾದರೂ ಗುರಿ ಮಾತ್ರ ಒಂದೇ. ಈ ಮಾರ್ಗಗಳನ್ನು ಅನುಸರಿಸುತ್ತಾ ಸ್ವತಂತ್ರನಾಗುವುದೇ ಯೋಗಿಯ ಗುರಿ. ಯಾಗ ಯಜ್ಞಾದಿಗಳನ್ನು ಮಾಡುತ್ತಾ ಸತ್ಯದರ್ಶನ ಮಾಡುವುದೇ ಕರ್ಮಯೋಗ.

ಕರ್ಮ ಎಂದರೆ ಕೆಲಸ – ಪ್ರತಿಯೊಂದು ಕರ್ಮಕ್ಕೂ ಒಂದು ಪ್ರಬಲ ಕಾರಣವಿದೆ. ಹಾಗೂ ನಿರ್ದಿಷ್ಟ ಫಲವಿದೆ. ಕಾರಣ ಮತ್ತು ಫಲಗಳ ನಡುವಿನ ಅವಸ್ಥೆಯೆ ಕರ್ಮ. ಈ ಕಾರಣ, ಕರ್ಮ iತ್ತು ಫಲಗಳು ನಿರಂತರವಾಗಿ ಮುಂದುವರೆಯುತ್ತದೆ, ಈ ಸ್ವಕೃತಕರ್ಮಗಳೆಲ್ಲೂ ತ್ರಿಗುಣಗಳಿಂದ – (ತಮ, ರಜ, ಸತ್ವ) ನಿಯಂತ್ರಿಸಲ್ಪಟ್ಟಿದೆ. ಸತ್ವಗುಣ ಪ್ರಧಾನವಾದ ಕರ್ಮಗಳನ್ನು, ಸತ್ಕರ್ಮಗಳೆಂದೂ, ತಮೋಗುಣ ಪ್ರಧಾನವಾದ ಕರ್ಮಗಳನ್ನು ದುಷ್ಕರ್ಮಗಳೆಂದೂ, ಹಾಗೂ ರಜೋಗುಣ ಪ್ರಧಾನವಾದ ಕರ್ಮಗಳನ್ನು ಮಿಶ್ರಕರ್ಮಗಳೆಂದೂ ಹೇಳುತ್ತಾರೆ. ನೀತಿಪರನೂ, ಸ್ನೇಹಪರನೂ ಆಗಿದ್ದು ವಿದ್ಯೆಯನ್ನು ಗಳಿಸಿ ಸತ್ಕರ್ಮ ಮಾಡಿದಾಗ ಬ್ರಹ್ಮಾನಂದ ಪಡೆಯಬಹುದಾಗಿದೆ.

ಕರ್ಮದಲ್ಲಿ ಮೂರು ಬಗೆ – ಹೊಲವನ್ನು ಉಳದೇ ಫಲವನ್ನು ಪಡೆಯದಿರುವುದು, ಹೊಲವನ್ನು ಉಳುಮೆ ಮಾಡಿ ಫಲವನ್ನು ಪಡೆಯುವುದು ಹಾಗೂ ಹೊಲವನ್ನು ಉಳುಮೆಮಾಡಿ ಫಲದ ನಿರೀಕ್ಷೆ ಮಾಡದಿರುವುದು. ವಿಜ್ಞಾನಿಗಳು ಸಂಶೋಧನೆಗಳಿಗಾಗಿ, ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅದರ ಫಲವನ್ನು ಲೊಕಹಿತಕ್ಕಾಗಿ ಬಿಡುವ ಕರ್ಮವೇ ಕರ್ಮಯೋಗ. ಹಾಗೆಯೇ ತತ್ವಜ್ಞಾನಿಗಳು, ಸಂತರು, ಸಮಾಜಸೇವಕರು, ಮಾಡುವ ನಿಷ್ಕಾಮ ಕರ್ಮವೇ ಕರ್ಮಯೋಗ.

ಭಗವದ್ಗೀತೆಯಲ್ಲಿ ಅರ್ಜುನನು ಶ್ರೀ ಕೃಷ್ಣನನ್ನು ಕೇಳುತ್ತಾನೆ ‘ಕರ್ಮಕ್ಕಿಂತ ಜ್ಞಾನವು ಶ್ರೇಷ್ಠವೆಂದು ನಿನ್ನ ಅಭಿಪ್ರಾಯವಾದರೆ, ನನ್ನನ್ನು ಈ ಯುದ್ಧ ಕರ್ಮಕ್ಕೆ ಏಕೆ ಪ್ರೇರೇಪಿಸುತ್ತಿರುವೆ’ ಶ್ರೀಕೃಷ್ಣನು ಉತ್ತರಿಸುತ್ತಾನೆ ”ಯಾರಿಗೂ ಕ್ಷಣ ಮಾತ್ರವೂ ಕರ್ಮ ಮಾಡದೇ ಇರಲಾಗದು …… ಪ್ರತಿ ವ್ಯಕ್ತಿಯೂ ಕರ್ಮ ಮಾಡುತ್ತಲೇ ಇರಬೇಕಾಗುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಿ ಪ್ರತಿಫಲಾಪೇಕ್ಷೆಯಿಲ್ಲದೇ ಕರ್ಮಯೋಗವನ್ನು ಆಚರಿಸುವ ವ್ಯಕ್ತಿಯೇ ಉತ್ತಮನು”. ಇಂತಹ ಕರ್ಮಯೋಗವು ಮಾನವನನ್ನು ತೀವ್ರವಾದ ಭಾವನೆಗಳಿಂದ ಬಿಡುಗಡೆಗೊಳಿಸುತ್ತದೆ. ಹಾಗೆಯೇ ಅವನು ಉತ್ತಮ ವ್ಯಕ್ತಿತ್ವ ಉಳ್ಳವನಾಗುತ್ತಾನೆ. ಕರ್ಮವನ್ನು ತ್ಯಜಿಸುವುದರಿಂದ ಸಮಸ್ಯೆಗಳಿಗೆ ಯಾವುದೇ ಪರಿಹಾರ ದೊರೆಯುವುದಿಲ್ಲ. ಸಮಸ್ಯೆಗಳನ್ನು ಎದುರಿಸುತ್ತಾ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಕಾಯಕದಿಂದ ನಮ್ಮ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳಬಹುದು.

ಆದರೆ ಕಾಯಕದ ಗುಣಲಕ್ಷಣಗಳೇನು? – ನಮ್ಮ ವ್ಯಕ್ತಿತ್ವದ ಮೇಲೆ ನಮ್ಮ ಕ್ರಿಯೆಗಳು ಅವಲಂಬಿಸಿರುತ್ತವೆ. ನಮ್ಮೆಲ್ಲಾ ಕ್ರಿಯೆಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು. – ತಮಸ್ಸು, ರಜಸ್ಸು, ಮತ್ತು ಸತ್ವ. ಪ್ರತಿಯೊಬ್ಬರಲ್ಲೂ ಈ ಮೂರು ಗುಣಗಳು ಇರುತ್ತವೆ. ತಮಸ್ಸಿನ ಗುಣ – ಕರ್ಮವನ್ನು ಮಾಡದೆ ಇರುವುದು, ಸೋಮಾರಿತನ, ಭಯ, ಭ್ರಮೆ ಮತ್ತು ಗೊಂದಲ ಇವು ಇವನ ಲಕ್ಷಣಗಳು. ಈ ಗುಣಗಳು ಅವನನ್ನು ನಿಷ್ಕ್ರಿಯನಾಗುವಂತೆ ಪ್ರಚೋದಿಸುತ್ತವೆ. ಅವನಲ್ಲಿರುವ ಅಸಾಮರ್ಥ್ಯ ಅಥವಾ ಜಡತೆ ಸಮಸ್ಯೆಗಳಿಂದ ಪಲಾಯನ ಮಾಡುವಂತೆ ಮಾಡುತ್ತದೆ. ದಾಸ್ಯದ ಸಂಕೋಲೆಗಳು ಅವನನ್ನು ಬಂಧಿಸುತ್ತವೆ. ಹಾಗೂ ಅವನ ಮಾನಸಿಕ ಬೆಳವಣಿಗೆಗೆ ಕುಂಠಿತವಾಗುತ್ತದೆ. ‘ಅಜ್ಞ್ಣಾನವೇ ಸ್ವರ್ಗವೆಂದು’ ಎಂದು ಕೆಲವು ಬಾರಿ ಅನ್ನಿಸುತ್ತದೆ. ಇಂಥವರು – ಸೋಮಾರಿತನ ಮತ್ತು ತೂಕಡಿಕೆ ಸ್ಥಿತಿಯಲ್ಲಿ ಆನಂದಪಡುತ್ತಾರೆ. ಇಂತಹ ತಮೋ ಗುಣದಿಂದ ಹೊರಬರಲು ಹೋರಾಟ ಒಂದೆಡೆಯಾದರೆ – ಸೋಮಾರಿತನ ಅವನನ್ನು ದಾಸ್ಯದ ಸಂಕೋಲೆಗಳಿಂದ ಬಂಧಿಸುವ ಯತ್ನ ಮಾಡುತ್ತಿರುತ್ತದೆ, ಹೋರಾಟದಲ್ಲಿ ಅವನು ಯಶಸ್ವಿಯಾದರೆ ತಾಮಸದಿಂದ ರಾಜಸದೆಡೆಗೆ ಚಲಿಸುತ್ತಾನೆ.

ರಾಜಸವೆಂದರೆ – ತನ್ನ ಕಠಿಣ ಪರಿಶ್ರಮದಿಂದ ಪ್ರಸಿದ್ಧ ವ್ಯಕ್ತಿಯಾಗುವುದು. ಕ್ರಿಯಾಶೀಲನಾಗಿ, ಚುರುಕಾಗಿ ಯಾವುದೇ ಕಾರ್ಯ ನಿರ್ವಹಿಸಲು ಉತ್ಸುಕನಾಗಿರುತ್ತಾನೆ. ಉತ್ತಮ ಕಾರ್ಯತಂತ್ರ ಮತ್ತು ನಿರ್ವಹಣೆ ಅವನಲ್ಲಿ ಸಹಜ ಗುಣವಾಗಿರುತ್ತದೆ. ಇಲ್ಲಿ ‘ನಾನು’ ಎನ್ನುವುದು ಬಹಳ ಮುಖ್ಯವಾಗಿದ್ದು, ಹೆಸರು, ಪ್ರಸಿದ್ಧಿ, ಹಣದ ಅಪೇಕ್ಷೆ ಇರುತ್ತದೆ. ಬಹುಬೇಗ ‘ಮೊದಲ ದರ್ಜೆಯ’ ವ್ಯಕ್ತಿಯಾಗಿ ಗುರುತಿಸಲ್ಪಡುತ್ತಾನೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನ ಕಾರ್ಯ ದಕ್ಷತೆಯಿಂದ ಉತ್ತಮ ಸಾಧನೆಗೈಯುತ್ತಾನೆ. ಆದರೆ ಅವನಲ್ಲಿರುವ ಅಹಂಕಾರದಿಂದ ಬಹುಬೇಗ ಕೆಳಗಿನ ಸ್ತರಕ್ಕೆ ಇಳಿಯುತ್ತಾನೆ. – ‘ಖಾಲಿ ಕೊಡಗಳು ಹೆಚ್ಚು ಸದ್ದು ಮಾಡುತ್ತವೆ’ ಅಥವಾ ತುಂಬಿದ ಕೊಡ ತುಳುಕುವುದಿಲ್ಲ.

ಶ್ರೀಕೃಷ್ಣನು ಗೀತೆಯಲ್ಲಿ ಹೇಳುವಂತೆ – ಜೀವನದ ಗುರಿಯು ಸಂತೋಷದ ಶಿಖರವನ್ನು ಅಂದರೆ ಆತ್ಮ ತೃಪ್ತಿಯನ್ನು ಪಡೆಯುವುದು. ಆಗ ಕ್ರಿಯೆಯು ಸಂಪೂರ್ಣವಾದ ಪರಿಶುದ್ಧವಾದ ಪ್ರಜ್ಞೆಯ ಸ್ಥಿತಿಯಾಗಿದೆ. ಇದನ್ನು ನಿಷ್ಠಾಮ ಕರ್ಮ ಅಥವಾ ಸ್ಥಗಿತ ಕ್ರಿಯೆ ಎಂದು ಕರೆಯುತ್ತಾರೆ. ಮಾನವೀಯ ಮೌಲ್ಯಗಳಾದ – ಪ್ರೀತಿ, ಕರುಣೆ, ಹೊಂದಾಣಿಕೆ, ಇಂದ್ರಿಯ ನಿಗ್ರಹಗಳೆ – ಸತ್ಯದ ಮುಖ್ಯ ಲಕ್ಷಣಗಳು.
ಕಾಮ್ಯ ಕರ್ಮದಿಂದ ಕರ್ಮಯೋಗದೆಡೆ ಸಾಗುವುದೇ ರಾಜಸದಿಂದ ಸಾತ್ವಿಕತೆಗೆ ಸಾಗುವುದು. ಫಲಾಪೇಕ್ಷೆಯಿಲ್ಲದೇ, ನಿರಂತರವಾಗಿ ಕರ್ಮವನ್ನು ಮಾಡುತ್ತಾ – ಅಂದರೆ ನಿಷ್ಕಾಮ ಕರ್ಮದೆಡೆ ಸಾಗುವ ಕ್ರಿಯೆಯೇ ಸತ್ವ.
ಕರ್ಮ ಯೋಗದ ಸಾರ – ‘ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನಾ
ಮಾ ಕರ್ಮ ಫಲಾ ಹೇತು ರ್ಭೂರ್ಮಾ ತೇ ಸಂತೋಸ್ತ್ವ ಕರ್ಮಣಿಂ
ನೀನು ಕರ್ಮವನ್ನು ಫಲಾಪೇಕ್ಷೆಯಿಲ್ಲದೇ ಮಾಡು ಕರ್ಮದಿಂದ ಬರುವ ಫಲಗಳ ಬಗ್ಗೆ ಸ್ಥಿತ ಪ್ರಜ್ಞನಾಗಿರು. ನಿರಂತರವಾಗಿ ಕರ್ಮ ಮಾಡು.
ಯೋಗಃ ಕರ್ಮಷು ಕೌಶಲಂ
ಯೋಗವೆಂಬ ಕೌಶಲ್ಯದ ಚಾತುರ್ಯದಿಂದ ರಾಗ, ದ್ವೇಷಗಳನ್ನು ನಿಗ್ರಹಿಸಿ ಉದ್ವೇಗವಿಲ್ಲದೇ ಶಾಂತವಾದ ರೀತಿಯಲ್ಲಿ ಕ್ರಿಯೆ ನಿರ್ವಹಿಸಲು ಸಮರ್ಥನಾಗುತ್ತಾನೆ.
ಸಮತ್ವಂ ಯೋಗ ಉಚ್ಛತೇ

ಯೋಗವೆಂದರೆ ಸಮಚಿತ್ತ, ಸಮತ್ವದ ಸ್ಥಿತಿ. ಯೋಗಿಯ ತನ್ನ ಕರ್ಮದ ಫಲಗಳಿಂದ ವಿಚಲಿತನಾಗುವುದಿಲ್ಲ ಹಾಗೂ ಬಂಡೆಯ ತರಹ ಸ್ಥಿರವಾಗಿರುತ್ತಾನೆ. ಭಾವನಾತ್ಮಕವಾಗಿ ಯಾವುದೇ ಗೊಂದಲಗಳಿಲ್ಲದೇ ಸೂಕ್ಷ್ಮತೆ ಹಾಗೂ ತನ್ನ ಬುದ್ಧಿಶಕ್ತಿಯಿಂದ ತನ್ನ ಕಾಯಕವನ್ನು ನಡೆಸುತ್ತಾನೆ. ನಾವು ಕರ್ಮಯೋಗದಲ್ಲಿ ಸಾಧನೆ ಮಾಡುತ್ತಾ ಹೋದ ಹಾಗೆ ನಮ್ಮ ಕರ್ತವ್ಯಪ್ರಜ್ಞೆಯು ಸಾಕ್ಷಿಪ್ರಜ್ಞೆಯನ್ನು ತಲುಪುತ್ತದೆ. ಈ ರೀತಿ ಪ್ರಜ್ಞಾಪೂರ್ವಕವಾದ ಆರಿವು ಆನಂದದಾಯಕವಾಗಿರುತ್ತದೆ. ಗೀತೆಯಲ್ಲಿ ಹೇಳುವಂತೆ – ‘ಯೋಗದ ಮೂಲಕ ಎಲ್ಲ ಬಂಧನವನ್ನು ತ್ಯಜಿಸಿ, ಸಿದ್ದಿ ಅಸಿದ್ದಿಗಳಲ್ಲಿ, ಫಲಾಫಲಗಳಲ್ಲಿ ಸಮಭಾಗ ಹೊಂದಿ ಯಾವುದೇ ಅಪೇಕ್ಷೆ ಇಲ್ಲದೆ ಕೆಲಸಮಾಡು’ ಸಮತ್ವದ ಭಾವ ಇರುವವನೇ ಪಾಪ, ಪುಣ್ಯ ಎರಡಕ್ಕೂ ಅತೀತನಾಗುತ್ತಾನೆ.

ಯಾವುದು ಕರ್ಮ ಯಾವುದು ಅಕರ್ಮ ಮತ್ತು ಯಾವುದು ವಿಕರ್ಮ ಎಂಬುದನ್ನು ತಿಳಿಯಬೇಕು.
ಕರ್ಮದ ಫಲದಲ್ಲಿ ಆಸಕ್ತಿ ತ್ಯಜಿಸಿ, ಯಾವುದರ ಮೇಲೂ ಮೊಹವಿಲ್ಲದೆ ಕರ್ಮ ಮಾಡುವವನು – ಕರ್ಮ ಮಾಡದವನೇ ಆಗುತ್ತಾನೆ. ಉದಾ; ಶ್ರೇಷ್ಠ ಮುನಿಗಳಾದ ಪರಾಶರ, ವಸಿಷ್ಠ, ಜಮದಗ್ನಿ ಮುಂತಾದವರು ಯಾವುದೇ ಬಂಧನವಿಲ್ಲದೆ ಜೀವಿಸಿದ್ದರು, ಹೀಗೆ ಕರ್ಮದಲ್ಲಿ ಅಕರ್ಮವನ್ನು, ಅಕರ್ಮದಲ್ಲಿ ಕiವನ್ನು ಕಾಣುವ ವ್ಯಕ್ತಿಯೇ ಯೋಗಿಯು. ಇಂತಹ ಅಕರ್ಮ ಸ್ಥಿತಿಯನ್ನು ಶ್ರೇಷ್ಠ ಮೌನಸ್ಥಿತಿ ಎಂದೂ ಕರೆಯುತ್ತಾರೆ. ಪ್ರಳಯಕಾಲದಲ್ಲಿ ಇಡೀ ವಿಶ್ವವನ್ನು ನಾಶ ಮಾಡಿದ ಶಿವನು ಹೇಳುವುದು – ‘ನಾನು ಕೊಲ್ಲುವುದೂ ಇಲ್ಲ ಮತ್ತು ಈ ಕಾರ್ಯದಲ್ಲಿ ನಾನು ಭಾಗಿಯೂ ಅಲ್ಲ.’

‘ಸಮತ್ವ’ ದಿಂದ ಕರ್ಮಯೋಗವನ್ನು ಮಾಡುವ ವ್ಯಕ್ತಿಗಳು ಕರ್ಮದಿಂದ ಬರುವ ಫಲದಲ್ಲಿ ಆಸಕ್ತಿ ತ್ಯಜಿಸಿ ಬಂಧನದಿಂದ ವಿಮುಕ್ತಿ ಪಡೆದು, ಮೋಕ್ಷ ಹೊಂದುತ್ತಾರೆ.

ನಿತ್ಯವೂ, ಪರಿಪೂರ್ಣವೂ ಆದ ಸಮುದ್ರದಲ್ಲಿ ನದಿಯು ಸೇರಿ, ಸಮುದ್ರ ಸ್ವರೂಪವೇ ಆಗುವಂತೆ, ಕಾಮನೆಗಳನ್ನು ತ್ಯಜಿಸಿದವನು – ಕರ್ಮಯೋಗದ ಮೂಲಕ – ಕೃಷ್ಣನಲ್ಲಿ ಸೇರಿ ಆತನ ಸ್ವರೂಪವೇ ಆಗಿ ಮೋಕ್ಷ ಗಳಿಸುತ್ತಾನೆ.

‘ನ್ಯೆಷ್ಕರ್ಮ ಕರ್ಮ ಸ್ಥಿತಿ’ – ಈ ಸ್ಥಿತಿಯು ನಮ್ಮ ಮನಸ್ಸಿನ ಸ್ಥಿರತೆ, ಪರಮಾನಂದ ಹಾಗೂ ಶಾಂತತೆಯಿಂದ ಸಾಧಿಸಲ್ಪಡುತ್ತದೆ. ಈ ಮಾರ್ಗವು ಕಠಿಣಕರವಾಗಿದ್ದು, ನಿರಂತರವಾದ ಸಾಧನೆ ಮತ್ತು ಪ್ರಯತ್ನ ಪೂರ್ವಕವಾದ ಕ್ರಿಯೆಯಾಗಿದೆ. ಇದು ಒಂದು ತಪಸ್ಸು.

ತಾಮಸದಿಂದ, ರಾಜಸದೆಡೆಗೆ ಹಾಗೂ ಅಲ್ಲಿಂದ ಸಾತ್ವಿಕತೆ ಅಂಧರೆ ಕರ್ಮಯೋಗದೆಡೆ ಸಾಗುವ ಪ್ರಕ್ರಿಯೆ ಹೀಗಿದೆ –
1) ನಿಷ್ಕಾಮ ಕರ್ಮ
2) ಕರ್ತವ್ಯ ಪ್ರಜ್ಞೆ
3) ರಾಗ, ದ್ವೇಷಗಳ ಮೇಲೆ ನಿಯಂತ್ರಣ
4) ವಸ್ತುನಿಷ್ಟ ದೃಷ್ಟಿಕೋನ, ಸ್ಪಷ್ಟ ಆಲೋಚನೆ, ದಕ್ಷತೆ, ಚುರುಕುತನ
5) ದೇಶಭಕ್ತಿ ಹಾಗೂ ಸೇವಾ ಮನೋಭಾವ
6) ಧರ್ಮ ಸಂದಿಗ್ದ ಗೊಂದಲಗಳು ಹಾಗೂ ವಿಶ್ಲೇಷಣೆ
7) ಪ್ರಜ್ಞಾಪೂರ್ವಕ ಕೆಲಸ
9) ಜೀವನ್ಮುಕ್ತ ಸ್ಥಿತಿ – ಪ್ರಜ್ಞಾಸ್ಥಿತಿಯ ಹಿಂದಿನ ಜಡತ್ವ ನಿವಾರಣೆ ಹಾಗೂ ಕ್ರಿಯಾತ್ಮಕತೆ
9) ಸಿದ್ಧ ಸ್ಥಿತಿ – ಸಾಧಕನಾಗಿ ಸಿದ್ದಿ ಪಡೆಯುವುದು
10) ವಿಶ್ವ ಭ್ರಾತೃತ್ವ ಮತ್ತು ಪ್ರೇಮ
11) ನ್ಯೆಷ್ಕರ್ಮಯ ಸ್ಥಿತಿ – ಮೋಕ್ಷ

ಆಧುನಿಕ ಜಗತ್ತಿನಲ್ಲಿ ಕರ್ಮಯೋಗದ ಮಾರ್ಗವು ಬಹಳ ಮಹತ್ವದ್ದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನಿಂದ ವಿಶ್ವದ ವಿನಾಶಕ್ಕೆ ನಾಂದಿ ಹಾಡುತ್ತಿರುವವರ ವಿರುದ್ಧ ನಾವು ಯದ್ದ ಸಾರಬೇಕಾಗಿದೆ. ಶಾಂತಿ, ಪ್ರೀತಿ, ಸಾಮರಸ್ಯಗಳನ್ನು ಪುನಃ ಸ್ಥಾಪಿಸಬೇಕಾಗಿದೆ. ಅಶಾಂತಿ, ಅನುಮಾನ ಮತ್ತು ಗುಮಾನಿಗಳನ್ನು ತಡೆಗಟ್ಟಿ ಆದರ್ಶ ರಾಷ್ಟ್ರವನ್ನು ಕಟ್ಟಲು ಕರ್ಮಯೋಗದಿಂದ ಮಾತ್ರ ಸಾಧ್ಯ.

-ಡಾ.ಗಾಯತ್ರಿದೇವಿ ಸಜ್ಜನ್

6 Responses

  1. ಉತ್ತಮ ವಿಚಾರಪೂರ್ಣ ಲೇಖನ.. ಗಾಯತ್ರಿ ಮೇಡಂ.. ನಿಮ್ಮ ಹತ್ತಿರ ಪಾಠ ಹೇಳಿ ಸಿಕೊಂಡ ಮಕ್ಕಳು ಪುಣ್ಯವಂತರು ಮೇಡಂ.. ಅಭಿನಂದನೆಗಳು…

  2. ನಯನ ಬಜಕೂಡ್ಲು says:

    Very nice

  3. ಶಂಕರಿ ಶರ್ಮ says:

    ಕಾರಣ ಮತ್ತು ಫಲಗಳ ನಡುವಿನ ಕರ್ಮದ ಪ್ರಾಮುಖ್ಯತೆ, ನಿಷ್ಕಾಮ ಕರ್ಮ, ತಾಮಸದಿಂದ ಸಾತ್ವಿಕತೆ ಅಥವಾ ಕರ್ಮಯೋಗದೆಡೆಗೆ ಸಾಗುವ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ಮಾಹಿತಿಯುಕ್ತ ಲೇಖನ ಬಹಳ ಚೆನ್ನಾಗಿದೆ.

  4. Anonymous says:

    ಸಮಾಜದಲ್ಲಿ ಸಜ್ಜನನಾಗಬೇಕಾದರೆ ಅನುಸರಿಸಬೇಕಾದ ರೀತಿನೀತಿಗಳ ಸರಳ ಸಂಕ್ಷಿಪ್ತ ರೂಪ.

  5. ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: