ವೈರಿ ಹೊರಗಿಲ್ಲ !

Share Button

ವೈರಿ ಹೊರಗಿಲ್ಲ !
(ಒಂದು ವಾಚ್ಯದ ಸೂಚ್ಯಂಕ)

“ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು” – ಅಲ್ಲಮಪ್ರಭು
ಕರೆದಾಗ ಹೋಗುವ, ಹೋಗದಿರುವ
ಕಂಡಾಗ ಮಾತಾಡಿಸುವ, ಮಾತಾಡಿಸದಿರುವ
ಕೊಟ್ಟಾಗ ತಿನ್ನುವ, ತಿನ್ನದಿರುವ
ಬಂದಾಗ ಸಂವಹನಿಸುವ, ಸಂವಾದಿಸದಿರುವ
ಬಿಟ್ಟಾಗ ನೋಯುವ, ನೋಯದಿರುವ

ಬಯ್ದಾಗ ತಳಮಳಿಸುವ, ಮುದುಡದೇ ಇರುವ
ಕಣ್ಣೆದುರಾದಾಗ ನೋಡುವ, ನೋಡದಿರುವ
ಹೇಳಿದಾಗ ಕೇಳಿಸಿಕೊಳ್ಳುವ, ಆಲಿಸದಿರುವ
ಗೋಳು ಕರೆವಾಗ ಕಿವಿಗೊಡುವ, ಕಿವುಡಾಗಿ ಬಿಡುವ
ದುಃಖಿಸುವಾಗ ಸಾಂತ್ವನಿಸುವ, ಸುಮ್ಮನಿರುವ

ಸಲಹೆ ನೀಡಿದಾಗ ಸ್ವೀಕರಿಸುವ, ಬಿಟ್ಟು ಬಿಡುವ
ಉಪದೇಶಿಸಿದಾಗ ಪಾಲಿಸುವ, ಪಾಲಿಸದಿರುವ
ಸ್ನೇಹಿಸಿದಾಗ ಸಮೀಪವಾಗುವ, ದೂರವಾಗುವ
ಒಲುಮೆ ಪಲ್ಲವಿಸಿದಾಗ ಸ್ಪಂದಿಸುವ, ಜಡವಾಗುವ
ಜೊತೆಯಾದಾಗ ಕತೆಯಾಗುವ, ವ್ಯಥೆಯಾಗದಿರುವ

ಮಾತಾಡಿದಾಗ ಮಾತಾಡುವ, ಮೌನವಾಗುವ
ದೂರುವಾಗ ಸಿಟ್ಟಾಗುವ, ನಕ್ಕು ಬಿಡುವ
ವಿಡಂಬಿಸಿದಾಗ ಕಹಿಯಾಗುವ, ಕನಿಕರಿಸುವ
ಕೈಗಿಟ್ಟಾಗ ಓದುವ, ಓದದೇ ತಿರುವಿ ಹಾಕುವ
ಪ್ರಶ್ನಿಸಿದಾಗ ಉತ್ತರಿಸುವ, ಮತ್ತೆ ಪ್ರಶ್ನೆಯಾಗುವ

ಎಲ್ಲ, ಏನೆಲ್ಲ ಸ್ವಾತಂತ್ರ್ಯದ ಸಾಧ್ಯತೆ, ಬಾಧ್ಯತೆ
ಗಳು ಇನ್ನೂ ನಿನ್ನಲೇ ಇವೆ ; ನಿನ್ನವೇ ಆಗಿವೆ!
ಯೋಚಿಸು, ವಿವೇಚಿಸು, ವಿವೇಕಿಸು, ತಿಳಿವ ಅರಸು
ಯಾರನೂ ಯಾವುದನೂ ದೂರದೆ ಸಹನಿಸಿ ಧ್ಯಾನಿಸು!!

ಮನವ ಶೂನ್ಯನಾವೆಯಾಗಿಸು, ಮಂಕಾಗಿಸು, ಮೆತ್ತಗಾಗಿಸು
ಬಿಗುವ ಕಳೆದು ಲಘುವಾಗಿಹ ಕೊರಡಾಗಿಸು, ನೀರಲಿ ತೇಲಿಸು

ತನ್ನ ಪಾಡಿಗೆ ತಾನು ಇದ್ದಲ್ಲಿ ಬಿದ್ದಲ್ಲಿ ಇರುವ ಬಂಡೆಗಲ್ಲು
ಜುಳು ಜುಳು ಹರಿದರೆ ನಯ ನೇರ್ಪು, ನೈಸು ಮಕಮಲ್ಲು

ಯಾರೋ ಬಂದು, ಕಂಡು ಮಾತಾಡಿಸಿ ಕೆತ್ತಿದರೆ ರೂಹು
ಜೀವ ಪಲ್ಲವಿಸಿ, ದೇವ ಉದ್ಭವಿಸಿ ಪೂಜೆ, ಭಕ್ತಿಗೆ ಕುರುಹು

ಕಾಡು ಮಲ್ಲಿಗೆ, ಹೂವು ಕಣಗಿಲೆ, ಅರಳಿ ಉದುರಿದ ಪಾರಿಜಾತ
ಸುತ್ತೆಲ್ಲ ಹರಡಿದ ಪರಿಮಳ ಬೀಸುಗಾಳಿಗೆ ಸಾಗಿ ಅವ್ಯಾಹತ

ನೀ ಮುಡಿದರಷ್ಟೇ ಸಾರ್ಥಕ ಇಲ್ಲ ನಿರರ್ಥಕವೆಂದು
ಅಂದುಕೊಳ್ಳುವೆಯೇಕೆ?
ನೀ ಕಂಡರಷ್ಟೇ ಒನಪು, ನೆನಪು ಇಲ್ಲ ಬರಿ ತೋಪೆಂದು
ನೊಂದುಕೊಳ್ಳುವೆಯೇಕೆ?

ಧ್ವನಿಸುವ ಪ್ರತಿಸ್ಪಂದಿಸುವ ಭಾವಭಂಗಿ
ಹಲವು ಕುಸುಮಗಳ ಮಕರಂದ ಕದಿಯುವ ಭೃಂಗಿ
ಸವಿದ ಜೇನಿನ ರುಚಿಯಲಿ ಒಂದೇ ವಿಧ, ಪುಷ್ಪ ವಿವಿಧ
ಒಂದೇ ಗೀತ ಮಾಧುರಿ; ಬಳಸಿದ ವಾದ್ಯ ಪರಿಕರ ನೂರು

ಮುಗಿಲು ಕರಗಿ ಮಳೆಯಾಗುವಾಗ ಇಳೆಯೂ
ಸಡಗರಿಸಿ ಸಂಭ್ರಮಿಸುವುದಿಲ್ಲವೇನು?
ಅಥವಾ, ತಣಿಸದೆ, ದಣಿಸದೆದಾಹ ಮಣಿಸಲಿಲ್ಲವೆಂದು
ವಿಚ್ಛೇದಿಸಿ, ವಿರಾಗಿಯಾಗುವುದೇನು?

ನೀರಿನೊಳಗವಿತ ಧಗೆ ; ನಗೆಯಲಿ ಮಿಂಚುವ ಹಗೆ
ಬೂದಿ ಮುಚ್ಚಿದ್ದರೂ ಅಲ್ಲಲ್ಲಿ ಆವಿಯಾಡುವ ಹೊಗೆ
ನುಡಿಯೊಳಗಿದ್ದೂ ಇಲ್ಲದಂತಿರುವ ಕುಹಕ ಹಲವು ಬಗೆ
ಏಕಿದು? ಆತ್ಮವಂಚಿಸುವ ದುರಾತ್ಮ ಧರಿಸಿರುವ ಸಲಿಗೆ

ನೀನೊಂದು ನಿಸರ್ಗ; ಆಗದಿರು ವಿಸರ್ಗ
ನಿನ್ನಲೇ ಅಡಗಿದೆ, ಅನ್ವೇಷಿಸು ಮುಚ್ಚಿಟ್ಟ ಸ್ವರ್ಗ

ಗಾನ ಗೇಯತೆಯ ರಾಧೆ ರಾಗಕೆ ಮುರಲಿಯ ಖಾಲಿ ಬಿದಿರು
ಮನವೇ ಎಲ್ಲಕೂ ಮೂಲಮಟ್ಟು ; ನಿನ್ನ ನಿರ್ಧಾರ ಚಿನ್ನದದಿರು

ವರ್ಣಮಾಲೆಯಲಿ ಬರೀ ಐವತ್ತೇ ಅಲ್ಲವೇ ಅಕ್ಷರ
ವರ್ಣಿತ ಭಾವತರಂಗವದೆಷ್ಟು ಲಕ್ಷ ನಕ್ಷತ್ರ ವಿಸ್ತರ
ಹಾಗೆ ನೀ, ನಿನ್ನ ಮನ ಕಾನನ, ಕರುಣ ಹೂಬನ
ಕೊನೆಗೂ ನಿನ್ನಳತೆಯದೇ, ಅರಳಿ ನಗುವ ನಂದನ !

ಡಾ. ಹೆಚ್‌ ಎನ್‌ ಮಂಜುರಾಜ್‌

7 Responses

  1. ಸುಚೇತಾ says:

    ಸರ್, ಅಳವಡಿಸಿಕೊಳ್ಳಬೇಕು ಆದರೆ ಈ ಮನಸ್ಥಿತಿ ತಲುಪುವುದು ಕಷ್ಟ.

  2. ಅಬಭ್ಬಾ…ಈ ಸ್ಥಿತಿ ನಮ್ಮಂತ ಪಾಮರರಿಗೆ ಸಾಧ್ಯ ವೇ…ಅರ್ಥಪೂರ್ಣ ವಾದ ಸಂದೇಶಕೊಟ್ಟ ಕವನ…ಸೊಗಸಾಗಿ ದೆ..ಸಾರ್..

  3. ನಯನ ಬಜಕೂಡ್ಲು says:

    Nice

  4. Anonymous says:

    Neenondu nisarga……… muchhitta swarga.

    Lovely lines. These lines touches. Impacts.

  5. ಕವನ ಅರ್ಥಪೂರ್ಣವಾಗಿದೆ

  6. ಶಂಕರಿ ಶರ್ಮ says:

    ಉತ್ತಮ ಸಂದೇಶ ಹೊತ್ತ ನವ್ಯ ಕವನ ಚೆನ್ನಾಗಿದೆ.

  7. Anonymous says:

    ಅರ್ಥಗರ್ಭಿತವಾದ ಸುಂದರ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: