ಬೆಳಕು-ಬಳ್ಳಿ

ಈಗಾಗಲೇ………..

Share Button


ಎಲ್ಲವನೂ ಬರೆಯಲಾಗಿದೆ
ವಿನಮ್ರತೆಯಿಂದ ಓದಬೇಕಷ್ಟೇ;
ಹಾಳೆ ತಿರುವಿದ ಸಶಬ್ದ ನಾಚಬೇಕಿದೆ.

ಎಲ್ಲವನೂ ಹಾಡಲಾಗಿದೆ
ತನ್ಮಯದಿ ಕೇಳಬೇಕಷ್ಟೇ;
ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ.

ಎಲ್ಲವನೂ ಬದುಕಲಾಗಿದೆ
ಜೀವಂತದಿ ಗಮನಿಸಬೇಕಷ್ಟೇ;
ಅರಳೀಮರವೇ ಆಹ್ಲಾದವಾಗಿದೆ.

ಎಲ್ಲವನೂ ಅನುಭವಿಸಲಾಗಿದೆ
ಭವಮುಕ್ತವಾಗಿ ಧರಿಸಬೇಕಷ್ಟೇ;
ಸಾವು ಸಮೀಪದಲೇ ಇರುತದೆ.

ಎಲ್ಲವನೂ ಮಾತಾಡಲಾಗಿದೆ
ಕಿವಿಗೊಟ್ಟು ಕೇಳಬೇಕಷ್ಟೇ;
ಅಹಮಿನ ಸರ್ಪ ಸಾಯಬೇಕಿದೆ.

ಅದೇ ಪಂಚಭೂತ; ಅದೇ ದೇವದೂತ
ಹೊಸದೇನೇನೂ ಇಲ್ಲ ಜಗದಲಿ;
ಮನಸು ಮಧುರವಾಗಬೇಕಿದೆ.

ಹಳೆಯದು ಹಳಸಲಾಗದಂತೆ
ಜತನವಾಗಿ ಕಾಪಾಡಬೇಕಿದೆ;
ಅಕ್ಕಿಯೇ ಅನ್ನವಾಗಿ ಹಬೆಯಾಡುತಿದೆ.

ಖಾಲಿ ಬಿದಿರಲಿ ರಾಗ ಹೊಮ್ಮಿಸುವ
ಪವಾಡ ಹೊಸದೆಂದು ತಿಳಿಯಬೇಕಿದೆ;
ಸುಮ್ಮನೆ ಇದ್ದು ಸುಮ್ಮಾನ ಹೊಂದಬೇಕಿದೆ.

ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

10 Comments on “ಈಗಾಗಲೇ………..

  1. ಪ್ರಕಟಿಸಿದ ಸುರಹೊನ್ನೆಗೆ ಅನಂತ ಧನ್ಯವಾದಗಳು…

  2. ಬಹಳ..ಬಹಳ…ಚೆನ್ನಾಗಿದೆ… ಎಲ್ಲವೂ ಇದೆ..ಆದರೆ ಅದನ್ನು ಅನುಭವಿಸುವ.. ಆಸ್ವಾದಿಸುವ ..ಮನ..ಗುಣ ನಮ್ಮ ಲ್ಲಿರಬೇಕು..ಇಲ್ಲವೇ ಬೆಳಸಿಕೊಳ್ಳಬೇಕು..ಅಭಿನಂದನೆಗಳು ಮಂಜುರಜ್ ಸಾರ್..

  3. ಅರಿವಿನಂಗಳದಿ ಇರುವುದೆಲ್ಲವ ಅರಿತು ಸುಮ್ಮನಿದ್ದು ಸುಮ್ಮಾನ ಹೊಂದಬೇಕಿದೆ, ಚಂದದಿ ಹೆಣೆದ ಸದಾಶಯದ ಸುಂದರ ಕವಿತೆ.

  4. ಎಲ್ಲವನೂ ಹಾಡಲಾಗಿದೆ ಎಂದಾಗ ಗೀತಗಂಧ ಪಸರಿಸಿದೆ ಎಂದೇ ಅರ್ಥ. ಗೀತಗಂಧ ಪಸರಿಸಿದೆ ಎಂದರೆ ಹಾಡು ಇನ್ನೂ ಪುನರಾವರ್ತನೆಯಾಗುತ್ತಿದೆ ಎಂದರ್ಥ. ಗೀತಗಂಧ ಪಸರಿಸಬೇಕಾಗಿದೆ ಮತ್ತು ಎಲ್ಲವನ್ನೂ ಹಾಡಲಾಗಿದೆ ಎಂದು ಪದ್ಯ ಹೇಳುವುದರಿಂದ ಹಾಡಿ ಮುಗಿದು ಹೋಗಿರುವ ಹಾಡನ್ನು ಮತ್ತು ಪಸರಿಸದ ಗೀತ ಗಂಧವನ್ನು ತನ್ಮಯದಿಂದ ಕೇಳುವುದು/ಆಘ್ರಾಣಿಸುವುದು ಹೇಗೆ? ಕಲ್ಪನೆ ವಾಸ್ತವ ಸಾಧ್ಯತೆಯ ಒಂದು ಮುಖ.
    .

Leave a Reply to ಜಾಹ್ನವಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *