‘ಕಾಡುವ ಗತ ಜೀವನದ ನೆರಳುಗಳು’

Share Button

ಕಾದಂಬರಿ: ‘ನೆರಳು
ಲೇಖಕಿ : ಬಿ.ಆರ್. ನಾಗರತ್ನ
ಜಾಗೃತಿ ಪ್ರಕಾಶನ

ಶ್ರೀಮತಿ ಬಿ. ಆರ್. ನಾಗರತ್ನ ಅವರ ಎರಡನೆಯ ಕಾದಂಬರಿ ನೆರಳು. ಇನ್ನೂರಾ ಎಪ್ಪತ್ತಮೂರು ಪುಟಗಳ ಈ ಕಾದಂಬರಿ ಶ್ರೀಮತಿ ಹೇಮಮಾಲಾ ಅವರ `ಸುರಹೊನ್ನೆ’ ಇ-.ಮ್ಯಾಗಜೈನ್ನಲ್ಲಿ ಓದುಗರಿಗೆ ಈಗಾಗಲೇ ಪರಿಚಿತವಾದ ಕಾದಂಬರಿ. ಶ್ರೀಯುತ ಮೋಹನ್ ವರ್ಣೇಕರ್‌ಸರ್ ಅವರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ ನೆರಳು ಓದುಗರಿಂದ ಮೆಚ್ಚುಗೆ ಪಡೆಯಲೇಬೇಕಾದ ಕಾದಂಬರಿಯೆಂದರೂ ಸೋಜಿಗವೇನಲ್ಲ.

ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತಾ ಹೋಗುವ ಮನುಷ್ಯನ ನಡವಳಿಕೆ, ಆಚರಣೆ, ಸ್ವಭಾವ, ಗುಣಧರ್ಮಗಳು ಸಂಪೂರ್ಣವಾಗಿ ಹೊಸರೂಪ ಪಡೆಯಲೇ ಬೇಕೆಂದೇನಿಲ್ಲ. ಆಚರಣೆಗಳು ಬದಲಾದರೂ ಮರುಹುಟ್ಟು ಪಡೆದು ಹೊಸರೂಪದೊಂದಿಗೆ ಹಿಂದಿನ ನಡಾವಳಿಗಳು ಮರುಕಳಿಸಬಹುದು. ಮರುಕಳಿಸಿದರೂ ತಪ್ಪೇನಿಲ್ಲ. ಅದು ಸಹಜವಾದುದೇ ಆಗಿದೆ. ಸನಾತನ ಸಂಪ್ರದಾಯಗಳನ್ನೇ ಆಚರಿಸಿಕೊಂಡು ಬಂದ ಮನೆತನದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು, ಸಂಪ್ರದಾಯಗಳಿಗೆ ಒಂದು ಹೊಸರೂಪ ಕೊಡಬಹುದು, ಸನಾತನ ಧರ್ಮಪರಿಪಾಲನೆ ಮನುಷ್ಯನ ಅಂದಂದಿನ ಜೀವನದ ಗೆಲುವು ಅಥವಾ ಸೋಲಿಗೆ ಸಂಬಂಧಪಟ್ಟಿದ್ದು ಎಂಬುದನ್ನು ಕಾದಂಬರಿ ಬಹಳ ಅರ್ಥಪೂರ್ಣವಾಗಿ ಸೂಚಿಸುತ್ತದೆ.

ಪುರುಷಪ್ರಧಾನ ಸಮಾಜದಲ್ಲಿ ಲಕ್ಷ್ಮಿಯು ಸಂಸಾರದ ನೊಗ ಹೊತ್ತು ತನ್ನ ಗಂಡ ಶಂಭು ಭಟ್ಟನ ಜೀವನಗಾಥೆಯಲ್ಲಿ, ಜೀವನ್ಮೃತನಂತೆ ಬದುಕಬಹುದಾಗಿದ್ದವನನ್ನು ಜೀವಂತವಾಗಿ ಬದುಕು ನಡೆಸುವುದು ಹೇಗೆಂದು ಕಲಿಸಿಕೊಟ್ಟ, ಜಾಣೆ. ಸಾಧ್ವಿ ಶಿರೋಮಣಿ . ಭಟ್ಟರೂ ಕೂಡ ಅವಳನ್ನನುಸರಿಸಿ ಜೀವನ ಕಟ್ಟಿಕೊಳ್ಳುವಲ್ಲಿ ಸಫಲತೆ ಸಾಧಿಸುವುದನ್ನು, ಭಟ್ಟರ ವ್ಯವಹಾರಜ್ಞಾನ ಪಳಗುತ್ತಾ ಹೋಗುವ ಮೂಲಕ ಯಶಸ್ವೀ ಗಂಡಹೆಂಡತಿಯರೆನಿಸಿಕೊಳ್ಳುತ್ತಾರೆ. ನಾಲ್ಕು ಜನ ಹೆಣ್ಣುಮಕ್ಕಳನ್ನು ದಡ ಸೇರಿಸುವಲ್ಲಿಯೂ ಯಶಸ್ಸು ಸಾಧಿಸುತ್ತಾರೆ.

ಪುರಷರ `ಈಗೋ’ ಅವನು ಎಂತಹ ಹೀನ ಸ್ಥಿತಿಯಲ್ಲಿದ್ದರೂ ಹೆಂಡತಿಯನ್ನು ಮಾತ್ರ ತನ್ನ ಅಡಿಯಾಳಾಗಿಯೇ ಕಾಣುವ ಸಂದರ್ಭಗಳು ಹಿಂದಿನ ಪೀಳಿಗೆಗಳಲ್ಲಿ ಮಾತ್ರವಲ್ಲ, ಈಗಲೂ ಸಾಕಷ್ಟು ಕುಟುಂಬಗಳು ಈ ರೋಗದಿಂದ ನರಳುತ್ತಿವೆ. ಇಡೀ ಮನೆಯನ್ನು ಹೆಂಡತಿ ನಿಭಾಯಿಸಿದರೂ, ಅವಳನ್ನು ಗೌರವಿಸುವ ಹಿರಿತನವನ್ನು ಗಂಡಸು ಮೆರೆಯುವುದಿಲ್ಲ. ಬದಲಿಗೆ ಹೀಯಾಳಿಕೆಗಳಿಂದ ಅವಳಲ್ಲಿ ಹುಟ್ಟಬಹುದಾದ ಸಾರ್ಥಕಭಾವವನ್ನು ಚಿವುಟುವಲ್ಲಿ ತನ್ನ ಪುರುಷತ್ವವನ್ನು ಸಾಧಿಸಿದೆನೆಂದುಕೊಳ್ಳುತ್ತಾನೆ. ಇಲ್ಲಿ ಶ್ರೀನಿವಾಸನೂ ಇಂತಹ ಪುರುಷರ ಪ್ರತೀಕವಾಗಿ ನಿಲ್ಲುತ್ತಾನೆ. ಪೌರೋಹಿತ್ಯದ ಮನೆತನದಲ್ಲಿ ಹುಟ್ಟಿದ ಸ್ಫುರದ್ರೂಪಿ ಶೀನ, ಸುಂದರಿಯಾದ, ಸಕಲಗುಣ ಸಂಪನ್ನೆಯಾದ, ಜೊತೆಗೆ ವಿದ್ಯೆಬುದ್ದಿಗಳಲ್ಲಿ ಅವನಿಗಿಂತ ಮುಂದಿರುವ ಲಕ್ಷ್ಮಿಯ ಮಗಳು ಭಾಗ್ಯಳನ್ನು ಮದುವೆಯಾಗುತ್ತಾನೆ. ಜೀವನದಲ್ಲಿ ಮಹತ್ವಾಕಾಂಕ್ಷಿಯಾದ ಭಾಗ್ಯ ಗಂಡನಿಗೆ ತಲೆಬಾಗಿ ತನ್ನ ಆಸೆಗಳನ್ನು ಅಲ್ಲಲ್ಲೇ ಮುರುಟಿಸಿ, ಇರುವುದರಲ್ಲೇ ಸುಖ ಕಂಡುಕೊಳ್ಳುವ ಅವಳ ಸ್ವಭಾವವನ್ನು ಕಾದಂಬರಿಕಾರ್ತಿ ಎಳೆ‌ಎಳೆಯಾಗಿ ಬಿಡಿಸಿಡುತ್ತಾರೆ.

ಕಾದಂಬರಿಗಳು ಯಾವುದೇ ವಸ್ತು ವಿಷಯಗಳನ್ನು ತೆಗೆದುಕೊಂಡರೂ, ಬಹಳಷ್ಟು ಕಾದಂಬರಿಗಳು ಸ್ತ್ರೀಪ್ರಧಾನವೇ ಆಗಿರುತ್ತವೆ. ಅಂತೆಯೇ ನೆರಳು ಕೂಡ ಸ್ತ್ರೀಪ್ರಧಾನವಾದ ಕಾದಂಬರಿಯೇ ಆಗಿದೆ. ಲಕ್ಷ್ಮಿ, ಭಾಗ್ಯ, ಸಿರಿ, ರಶ್ಮಿ ಹೀಗೆ ನಾಲ್ಕು ಪೀಳಿಗೆಗಳನ್ನು ತೆರೆದಿಡುತ್ತಾ ಹೋಗುವ ಕಾದಂಬರಿಯ ಪಾತ್ರಗಳು ಕಣ್ಣಮುಂದೆ ಹರಿದಾಡುತ್ತವೆ. ಆ ಪಾತ್ರಗಳ ರೂಪು, ವ್ಯಕ್ತಿತ್ವಗಳ ಚಿತ್ರಣ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇದರಲ್ಲಿ ಎಲ್ಲಿಂದಲೋ ಬಂದ ನಾರಣಪ್ಪನವರ ಪಾತ್ರವೂ ಬಹಳ ಮುಖ್ಯವಾಗಿ ಕುಟುಂಬದಲ್ಲಾಗುವ ಎಲ್ಲ ಆಗುಹೋಗುಗಳನ್ನೂ ಸಾಕ್ಷೀಕರಿಸುತ್ತಾರೆ.

ಮೂಢನಂಬಿಕೆ, ಜಾತಕ, ಮನಸ್ಸನ್ನು ಘಾಸಿಗೊಳಿಸುವ ಆಚಾರವಿಚಾರಗಳ ಬಗ್ಗೆ ಲೇಖಕಿಗೆ ತೀವ್ರವಾದ ಸಂತಾಪವಿದೆ. ಹತಾಶೆಯಿದೆ. ಬದಲಾಗಲಾರದ ಈ ವ್ಯವಸ್ಥೆಯ ಬಗ್ಗೆ ಕನಿಕರವಿದೆ. ಪಾತ್ರಗಳ ಮೂಲಕ ಸಮಾಜದ ಇಂತಹ ಅಂಕುಡೊಂಕುಗಳನ್ನು ತೋರಿಸಲು ಪ್ರಯತ್ನ ಪಟ್ಟಿರುವುದು, ಅವುಗಳ ವಿರುದ್ಧ ಧ್ವನಿಯೆತ್ತಿರುವುದು ಶ್ಲಾಘನೀಯವೇ ಸರಿ. ಕಾದಂಬರಿಯು ಅಡೆತಡೆಯಿಲ್ಲದೆ ಓದಿಸಿಕೊಂಡು, ಓದುಗರ ಮನ ಗೆಲ್ಲುತ್ತದೆ. ಕೇವಲ ಪಾತ್ರಗಳನ್ನಷ್ಟೇ ಹೆಣೆಯದೆ, ಪಾತ್ರಗಳ ಮೂಲಕ ಸಮಾಜಕ್ಕೆ ಮಾರಕವಾದವುಗಳ ಬಗ್ಗೆ ಸಂದೇಶ ನೀಡಿರುವುದು ಕಾದಂಬರಿಯ ಪ್ಲಸ್ ಪಾಯಿಂಟ್. ಬಹುಶಃ ದುರಂತಮಯವಾಗಬಹುದಾಗಿದ್ದ ಕಾದಂಬರಿ, ಭಾಗ್ಯಳ ಸಮಯೋಚಿತವಾದ ನಿರ್ಧಾರದಿಂದ, ಜಾತಕ ನಂಬಿ ತನ್ನ ಮನಸ್ಸನ್ನೇ ಕೆಸರು ಮಾಡಿಕೊಂಡು ದೇಹ ನೀಗಿದ ಶ್ರೀನಿವಾಸನಿಗೂ ಸವಾಲೆಸೆಯುವುದಲ್ಲದೆ, ಬದುಕು ಕಟ್ಟಿಕೊಂಡಂತಿರುತ್ತದೆ ಎಂಬುದನ್ನು ಸಾಬೀತು ಪಡಿಸುವಲ್ಲಿ ಭಾಗ್ಯ ಗೆಲ್ಲುತ್ತಾಳೆ. ಧನಾತ್ಮಕ ಚಿಂತನೆಗಳು, ಯೋಚನೆಗಳು ಮನುಷ್ಯನನ್ನು ಜಯದ ಹಾದಿಯಲ್ಲಿ ಕೊಂಡೊಯ್ಯುತ್ತವೆ ಎಂಬುದಕ್ಕೆ ಭಾಗ್ಯ ಮತ್ತು ಲಕ್ಷ್ಮಿಯೇ ಉದಾಹರಣೆಯಾಗುತ್ತಾರೆ.

ಶ್ರೀಮತಿ ಬಿ. ಆರ್. ನಾಗರತ್ನ ಅವರು ಬಹು ಪ್ರಕಾರಗಳಲ್ಲಿ ಲೇಖನಿ ಬಳಸಿದವರು. ಕಾದಂಬರಿಯ ಪ್ರಕಾರವೂ ಅವರಿಗೊಲಿಯಲಿ. ಅನೇಕ ಕಾದಂಬರಿಗಳು ಸಾಹಿತ್ಯಲೋಕಕ್ಕೆ ಕಾಣಿಕೆಯಾಗಿ ಅವರಿಂದ ದೊರೆಯಲಿ ಎಂಬುದು ನನ್ನ ಸದಾಶಯವಾಗಿದೆ.

ಶುಭಮಸ್ತು.

-ಬಿ.ಕೆ.ಮೀನಾಕ್ಷಿ, ಮೈಸೂರು.

6 Responses

  1. ನನ್ನ ನೆರಳು ಕಾದಂಬರಿಯನ್ನು ಸೊಗಸಾಗಿ ಅವಲೋಕನ ಮಾಡಿ..ಶುಭಹಾರೈಕೆಗಳನ್ನು ತಿಳಿಸಿರುವ ಗೆಳತಿ ಮೀನಾಕ್ಷಿ ಗೆ ಹೃತ್ಪೂರ್ವಕ ಧನ್ಯವಾದಗಳು…

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿ ಮೂಡಿ ಬಂದಿತ್ತು ಕಾದಂಬರಿ. ಸಹಜ ಬದುಕು, ನಮ್ಮ ಜೀವನದ ಕನ್ನಡಿಯಂತೆ ಬಿಂಬಿಸುತಿತ್ತು. ಬಹಳ ಚೆನ್ನಾಗಿ ಬರೆದಿದ್ದೀರಿ ಕಾದಂಬರಿಯ ಕುರಿತಾಗಿ.

  3. Padma Anand says:

    ಕಾದಂಬರಿಯ ಅವಕೋಕನ ಸೊಗಸಾಗಿ ಮೂಡಿ ಬಂದಿದೆ.

  4. B.k.meenakshi says:

    ನಿಮ್ಮೆಲ್ಲರ ಅನಿಸಿಕೆಗೆ ಧನ್ಯವಾದಗಳು ನಯನ ಮೇಡಂ ಮತ್ತು ಪದ್ಮಾ ಮೇಡಂ ಕಾದಂಬರಿಕಾರ್ತಿಯವರಿಗೂ ನನ್ನ ಪ್ರೀತಿಪೂರ್ವಕ ನಮನಗಳು

  5. ಶಂಕರಿ ಶರ್ಮ says:

    ಸುರಹೊನ್ನೆಯಲ್ಲಿ ನಾವೆಲ್ಲರೂ ಇಷ್ಟಪಟ್ಟ ‘ನೆರಳು` ಕಾದಂಬರಿಯ ಅವಲೋಕನದ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ.

  6. ವಿದ್ಯಾ says:

    ಅವಲೋಕನ ಓದಿದವರಿಗೆ ಕಾದಂಬರಿ ಓದಲೇಬೇಕೆನಿಸುತ್ತದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: