ಮತದಾನ ಮರೆತ ಮಂಗನ ಕಥೆ….
ದೇವಲೋಕದಲ್ಲಿ ದೇವಾನುದೇವತೆಗಳ ಸಭೆ ನೆಡೆದಿತ್ತು. ಭೂಲೋಕದಲ್ಲಿ ಪ್ರಾಣಿಗಳ ರಾಜನ್ಯಾರಾಗಬೇಕೆಂಬುದೇ ಸಭಾವಿಷಯ. ಒಬ್ಬಬ್ಬರೂ ಒಂದೊಂದು ಹೆಸರನ್ನು ಸಭೆಯ ಮುಂದಿಟ್ಟರು. ಸುಬ್ರಮಣ್ಯ ನವಿಲೇ ರಾಜನಾಗಬೇಕೆಂದ, ಗಣಪತಿ ಇಲಿಯೇ ರಾಜನಾಗಬೇಕೆಂದ, ಯಮರಾಜ ಕೋಣವೇ ರಾಜನಾಗಬೇಕೆಂದ, ಶನಿದೇವ ಕಾಗೆಯೇ ರಾಜನಾಗಬೇಕೆಂದ. ಆದರೆ ಒಮ್ಮತದ ಆಯ್ಕೆಗೆ ಬಹುಮತ ಮೂಡಲಿಲ್ಲ. ಕೊನೆಯಲ್ಲಿ ಸಭಾನಾಯಕ ಈಶ್ವರನ ಆಜ್ಞೆಯಂತೆ ಮತದಾನ ನೆಡೆಸಲು ನಿರ್ಧರಿ ಸಲಾಯ್ತು.
ದೇವಭಟರನ್ನು ಭೂಮಿಗೆ ಕಳಿಸಲಾಯ್ತು. ಮತದಾನದ ದಿನ ಎಲ್ಲಾ ಪ್ರಾಣಿಪಕ್ಷಿಗಳೂ ಮತ ಕೇಂದ್ರದ ಬಳಿ ಹಾಜರಿದ್ದು ಕಡ್ಡಾಯವಾಗಿ ಮತದಾನ ಮಾಡಬೇಕೆಂದೂ, ಯಾರು ಅತ್ಯುತ್ಸಾಹದಿಂದ ಮತದಾನ ಮಾಡುತ್ತಾರೋ ಅವರಿಗೆ ಬಹುಮಾನ ನೀಡಲಾಗುವುದೆಂದೂ, ಯಾರು ಗೈರಾಗುತ್ತಾರೋ ಅಂತವರಿಗೆ ಉಗ್ರ ಶಿಕ್ಷೆ ಕಾದಿದೆಯೆಂದೂ ಘೋಷಿಸಲಾಯ್ತು.
ಮತದಾನದ ದಿನ ಬಂದೇ ಬಿಡ್ತು. ಮನುಷ್ಯ ಬೆಳಿಗ್ಗೆ ಬೇಗನೆ ಎದ್ದ. ಅತ್ಯುತ್ಸಾಹದಿಂದ ಮತ ಕೇಂದ್ರದ ಬಳಿ ಓಡೋಡಿ ಬಂದ. ಮೊದಲಿಗನಾಗಿ ಮತ ಚಲಾಯಿಸಿದ. ನಂತರದ ಸರದಿ ಗೋವಿನದು, ಗೋಮಾತೆಯೂ ಓಡೋಡಿ ಬಂದಳು, ತನ್ನ ಮತ
ಚಲಾಯಿಸಿದಳು. ನಂತರದ ಸರದಿ ಪಾರಿವಾಳದ್ದು, ಪಾರಿವಾಳವೂ ಓಡೋಡಿ ಬಂತು, ತನ್ನ ಮತ ಚಲಾಯಿಸಿತು, ನಂತರ ಜಿಂಕೆ, ನಂತರ ಮೊಲ, ಹೀಗೆ ಎಲ್ಲಾ ಪ್ರಾಣಿ ಪಕ್ಷಿಗಳೂ ತಮ್ಮ ತಮ್ಮ ಮತ ಚಲಾಯಿಸಿದವು.
ಆದರೆ ಮತದಾನದ ಸಮಯ ಮುಗಿಯುತ್ತ ಬಂದರೂ ಮಂಗನ ಪತ್ತೆಯೇ ಇರಲಿಲ್ಲ. ಮಂಗನನ್ನು ಹುಡುಕಿ ತರಲು ದೇವಭಟರನ್ನು ಕಳಿಸಲಾಯ್ತು. ದೇವಭಟರು ಬರೀಗೈಲಿ ವಾಪಾಸಾದರು. ಮಂಗ ಅತ್ತಿತ್ತ ಓಡಾಡಿಕೊಂಡು, ಮಂಗಚೇಷ್ಟೆ ಮಾಡಿಕೊಂಡು, ಮತದಾನವನ್ನೇ ಮರೆತಿತ್ತು.ಮತದಾನದ ಸಮಯ ಮುಗಿದ್ದಿದ್ದರಿಂದ ಕೊನೆಗೂ ಮತದಾನದಿಂದ ದೂರವೇ ಉಳಿಯಿತು.
ಫಲಿತಾಂಶದ ದಿನವೂ ಬಂತು. ಮತಗಳನ್ನು ಎಣಿಸಲಾಯ್ತು. ಸಿಂಹವು ಅತ್ಯಧಿಕ ಮತಗಳಿಸಿ ರಾಜನ ಗದ್ದುಗೆಯೇರಿತು. ಸಿಂಹನನ್ನು ರಾಜನೆಂದು ಅಧಿಕೃತವಾಗಿ ಘೋಷಿಸಲಾಯ್ತು.
ಇನ್ನು ಬಹುಮಾನದ ಸರದಿ. ಅತ್ಯುತ್ಸಾಹದಿಂದ ಮತದಾನ ಮಾಡಿದ ಮನುಷ್ಯನನ್ನು ದೇವರು ತನ್ನೊಂದಿಗೆ ದೇವಲೋಕಕ್ಕೆ ಕರೆದೊಯ್ದ. ತನಗೆ ಸರಿಸಮಾನವಾದ ಆಸನದಲ್ಲಿ ಕುಳ್ಳಿರಿಸಿದ. ಅಮೃತದ ಸಿಹಿ ಪಾನೀಯ ನೀಡಿ ಉಪಚರಿಸಿದ,ದೇವಲೋಕದ ಹೂವಿನ ಮಾಲೆಯನ್ನೂ, ತನ್ನೆಲ್ಲಾ ಬಿರುದು ಬಾವಲಿಗಳನ್ನೂ, ಅಪಾರ ಪ್ರಮಾಣದ ಧನ, ವಜ್ರ ವೈಡೂರ್ಯಗಳನ್ನೂ ನೀಡಿ ಸತ್ಕರಿಸಿದ.ದೇವಮರ್ಯಾದೆಯೊಂದಿಗೆ ಭೂಲೋಕಕ್ಕೆ ಕಳಿಸಿಕೊಟ್ಟ.
ಈಗ ಶಿಕ್ಷೆಯ ಸರದಿ. ಮತದಾನಕ್ಕೆ ಗೈರಾದ ಮಂಗನನ್ನು ಯಾವುದೇ ಗೊತ್ತು ಗುರಿ ಇಲ್ಲದೆ, ಸ್ವಂತ ನೆಲೆಯೂ ಇಲ್ಲದೆ ಅತ್ತಿತ್ತ ಓಡಾಡಿಕೊಂಡು ಒಂದೆಡೆಯಿಂದ ಇನ್ನೊಂದೆಡೆಗೆ ಹಾರಿಕೊಂಡು ಮಂಗಚೇಷ್ಟೆ ಮಾಡಿಕೊಂಡು ಇಡೀ ಜೀವನ ಸವೆಸು ಎಂಬ ಶಿಕ್ಷೆಯಿತ್ತ.
ಅಂದು ಬೇಜವಾಬ್ದಾರಿಯಿಂದ ಮತದಾನಕ್ಕೆ ಗೈರಾದ ಮಂಗ ಯಾವುದೇ ಸ್ವಂತ ನೆಲೆಯಿಲ್ಲದೆ,ಗೊತ್ತುಗುರಿಯೂ ಇಲ್ಲದೆ, ಅತ್ತಿತ್ತ ಓಡಾಡಿಕೊಂಡು ಮಂಗಚೇಷ್ಟೆ ಮಾಡಿಕೊಂಡು ಇಡೀ ಜೀವನ ವ್ಯರ್ಥವಾಗಿ ಕಳೆಯಿತು.
-ಪ್ರಸಾದ್ ಕೆ ಎನ್
ಜವಾಬ್ದಾರಿ ಮರೆತರೆ..ಪರಿಣಾಮ ಏನಾಗಿತ್ತದೆಂಬ ಸಂದೇಶ ವನ್ನು ತಿಳಿ ಹಾಸ್ಯದ ಲೇಪನ ಹೊಂದಿದ ಕಥಯ ಮೂಲಕ ಹೇಳಿರುವ ರೀತಿ ಚೆನ್ನಾಗಿ ದೆ..ಧನ್ಯವಾದಗಳು..
ಸಾರ್
Nice
ಬೇಜವಾಬ್ದಾರಿ ಮಂಗನಂತಾಗದೆ, ಜವಾಬ್ದಾರಿಯುತ ಮತದಾರನಾಗಲು ಕೊಟ್ಟ ತಿಳಿಹಾಸ್ಯ ಮಿಶ್ರಿತ ಕರೆಯು ಸಖತ್ತಾಗಿದೆ!
ಸಂದರ್ಭೋಚಿತ ಕಥೆ. ಮರೆಯದೆ ಮತ ಚಲಾಯಿಸೋಣ, ಮಂಗಗಳಾಗದಿರೋಣ.