(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ನಾಗರ ಹೊಳೆಯ ಹಾದಿ.
ಅಂತರ ಸಂತೆಯ ಕಾಫಿ ಸೇವನೆ ನಂತರ ಕಾರುಗಳು ಬರ್ ಬರ್ ಶಬ್ದದೊಂದಿಗೆ ಹೊರಟವು. ಈಗ ಎದುರಾದ್ದದ್ದು ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯ ದ್ವಾರ. ಪ್ರಶಾಂತವಾದ ಕಾಡಲ್ಲಿ ಧ್ವನಿ ಮಾಡುತ್ತಾ ಇದ್ದದ್ದು ವಾಹನಗಳೇ ಹೆಚ್ಚು. ಬರ್ ಬರ್ ಶಬ್ದದೊಂದಿಗೆ ಯಾವ ಪ್ರಾಣಿಗಳ ಶಬ್ಧವನ್ನು ಆಲಿಸಲು ಆಗಲೇ ಇಲ್ಲ. ದ್ವಾರದಲ್ಲಿ ಟಿಕೇಟ್ ತೆಗೆದು ಕೊಳ್ಳಲು ಒಬ್ಬರು ಮಾತ್ರ ಇಳಿಯಬಹುದಿತ್ತು. ಯಾರೂ ಇಳಿಯುವಂತಿರಲಿಲ್ಲ. ಹೆಚ್ಚು ಗದ್ದಲ ಮಾಡುವಂತಿಲ್ಲ. ಪೋಟೋ ಅಂತೂ ತೆಗೆಯುವಂತೆಯೇ ಇಲ್ಲ. ಇಷ್ಟೆಲ್ಲಾ ಸೂಚನೆಗಳ ಕಡೆ ಮೊದಲೇ ಗೋಪು ಸರ್ ಎಚ್ಚರಿಕೆ ನೀಡಿದ್ದರು. ಆದರೂ ಮರೆತು ಇಳಿದುಬಿಟ್ಟೆವು ಕೆಲಮಂದಿ.
ನಮ್ಮ ಇಳಿಯುವಿಕೆಯ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದು ಚಂಗನೇ ನೆಗೆಯುತ್ತಿದ್ದ ಜಿಂಕೆಗಳು….ನಾಡ ಕೋತಿಗಳಂತೆ ತೊಂದರೆ ಕೊಡದ ಮುಸುವಾಗಳು…. ಹುಳುಗಳನ್ನು ಹೆಕ್ಕಿ ತಿನ್ನುತ್ತಿದ್ದ ನವಿಲು. ಇವು ಸರ್ವೇಸಾಮಾನ್ಯ ದೃಶ್ಯ…ಮತ್ತು…ಪ್ರಾಣಿಗಳು. ಆದರೂ ಆ ಪ್ರಕೃತಿಯಲ್ಲಿ….ವಾಹನಗಳು ಓಡಾಡುವ ರಸ್ತೆಯಲ್ಲಿ ಹೆದರಿ ಓಡುವ ಜಿಂಕೆಗಳೇ ಹೆಚ್ಚು ಎನ್ನಬಹುದು. ವಾಚ್ ಮ್ಯಾನ್ ವಿಶಲ್ ಊದುತ್ತಿದ್ದುದರಿಂದ ಮತ್ತೆ ವಾಹನವೇರಿ ಹೊರಟೆವು. ಇಂತಿಷ್ಟುಸಮಯದಲ್ಲಿ ಈ ಚೆಕ್ ಪೋಸ್ಟ್ ನಿಂದ ಕಾಡಿನ ಮತ್ತೊಂದು ತುದಿಯ ಚೆಕ್ ಪೋಸ್ಟ್ ದಾಟಬೇಕು. ಇಲ್ಲವಾದರೆ ಪೈನ್ ಕಟ್ಟಬೇಕಾದ್ದರಿಂದ ಮೊದಲಿಗಿಂತ ತುಸುವೇಗವಾಗಿಯೇ ಹೊರಟೆವು.
ಸೂರ್ಯನ ರಶ್ಮಿಗಳು ಕಾಡಿನ ಮರದ ಮಧ್ಯೆ ಹೊಂಬೆಳಕನ್ನು ಚೆಲ್ಲಿ ಕಾಡಿನ ಸೌಂದರ್ಯವನ್ನು ಹೆಚ್ಚಿಸಿತ್ತು. ಕಾಡು,ಮರ ಗಿಡ, ಹಸಿರೆಂದರೆ ಹೆಚ್ಚು ಪ್ರಾಣವಿಟ್ಟ ನಾನು ತುಸು ಹೆಚ್ಚಾಗಿಯೇ ಮೈಮರೆಯುವೆ. ಈ ಹಸಿರನ್ನು ನೋಡಿದಾಗ ನೆನಪಾಗುವ ನನ್ನ ಫೇವರಿಟ್ ಹಾಡಾದ “ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೇ ಮಾನವ ಕುಲವ ಕಾಯುವ ತಾಯೆ”…. ” ಈ ಹಸಿರು ಸಿರಿಯಲಿ ಮನಸು ಮರೆಯಲಿ “.. ಹಾಡುತ್ತಾ ಚೆಲುವ ಆಸ್ವಾದಿಸಿದೆ. ಜಿಂಕೆಗಳು, ನವಿಲುಗಳು, ನಾಡ ಕೋತಿಗಳು, ಕಟ್ಟಿದ್ದ ಒಂದು ಆನೆ ಬಿಟ್ಟರೆ ಮತ್ತೆ ಯಾವ ಪ್ರಾಣಿಯೂ ನಮಗೆ ಎದುರಾಗಲಿಲ್ಲ. ಬಹುಶಃ ಚಳಿ ಇದ್ದುದರಿಂದ ತಮ್ಮ ಕಾಯಕವನ್ನು ಇನ್ನೂ ಶುರುಮಾಡಿರಲಿಲ್ಲ.
ಕಾಡಿನ ನಡುವೆ ಪ್ರಾಣಿಗಳು ನೀರುಕುಡಿಯಲು ಇದ್ದ ಪುಟ್ಟ ಪುಟ್ಟ ಕೆರೆಗಳಲ್ಲಿನ ನೀರು ಬಹಳವೇ ಪ್ರಶಾಂತವಾಗಿತ್ತು. ಇನ್ನೂ ಯಾವ ಪ್ರಾಣಿ ಪಕ್ಷಿಗಳು ನೀರು ಕುಡಿದಿರಲಿಲ್ಲ. ಆ ತಿಳಿಯಾದ ನೀರೊಳಗೆ ಸುತ್ತಲಿನ ಪ್ರದೇಶದ ಚಿತ್ರಗಳ ಬಿಂಬ ಎಷ್ಟು ಚೆನ್ನಾಗಿ ಮೂಡಿತ್ತೆಂದರೆ ಕಲಾಕಾರ ಬಿಡಿಸಿದ ಸ್ತಬ್ಧ ಚಿತ್ರದಂತೆ ತಟಸ್ಥ ವಾಗಿತ್ತು. ಇಳಿಯುವಂತಿದ್ದರೆ ಒಂದು ಒಳ್ಳೆಯ ಫೋಟೋ ಸಿಗುತ್ತಿತ್ತು. ಆದರೆ ಇಳಿದು ಕಾಲ ಕಳೆಯುವಂತಿಲ್ಲ. ನಾ ಕುಳಿತ್ತಿದ್ದ ಕಾರಲ್ಲಿ ಮೇಲಿನ ಜಾಗ, ಕತ್ತು ಹೊರಹಾಕಿ ಸುತ್ತಲಿನ ದೃಶ್ಯವನ್ನು ಕಣ್ಣಿಗೆ ಆನಂದವಾಗುವಷ್ಟು ಸವಿಯಬಹುದಿತ್ತು. ಆದರೆ ರಸ್ತೆಯ ಉಬ್ಬು ತಗ್ಗು ಗುಂಡಿಗಳು, ಹಂಪ್ಸ್ ಗಳಿಗೆ ಗಲ್ಲ ಬೆನ್ನು ಹೊಡೆಸಿಕೊಂಡು ನೋಡಬೇಕಿತ್ತು. ಆದರೂ ಸ್ವಲ್ಪ ಬಿಡದೆ ನೋಡಿಕೊಂಡು ಎಂಜಾಯ್ ಮಾಡಿ ಚಂದದ ವೀಡಿಯೋ ಮಾಡಿಕೊಂಡೆ.
ಬಹಳ ವರ್ಷಗಳೇ ಆಗಿತ್ತು ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿ. ರಸ್ತೆಗಳ ಅಗಲೀಕರಣಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ಅನೇಕ ಮರಗಳು ಅಸುನೀಗಿದ್ದವು. ಕಾಡಿನ ಬೆಂಕಿಯಿಂದ ಅಲ್ಲಲ್ಲೇ ಸುಟ್ಟ ಮರಗಳು ಗ್ರಹಣಬಡಿದಂತೆ ಕಂಡವು.ಸೂರ್ಯನು ತನ್ನ ಪಥ ಬದಲಿಸುವ ಬದಲಿಸುವ ಸಂಕ್ರಮಣದ ಕಾಲ ತುಂಬಾ ಹತ್ತಿರವಾದ್ದುದರಿಂದ ಬಿಸಿಲಿನ ಹೊಳಪು ಕ್ಷಣಕ್ಷಣಕ್ಕೂ ಏರುತ್ತಿತ್ತು. ದೂರದ ಮಂಜು ಕವಿದ ಬೆಟ್ಟ ಗುಡ್ಡಗಳಲ್ಲಿ ದಟ್ಟವಾಗಿ ಕವಿದಿದ್ದ ಮಂಜು ಎಲ್ಲಿ ಹನಿಯಾಗಿ ಭುವಿಗಿಳಿದು ಬಿಡುವೆನೋ ಎಂಬ ತವಕದಲಿ ತನ್ನ ಆಸರೆಯನ್ನು ಹುಡುಕಿ ಓಡುತ್ತಿತ್ತು . ಬೆನ್ನಟ್ಟಿ ಬರುವ ರವಿಕಿರಣಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡು ಓಡುತ್ತಿತ್ತು. ನಾವು ಹಿಮದೊಳಗೆ ತೂರಿದರೂ ನಮಗದರ ಅನುಭವ ಆಗದು. ದೂರದ ನುಣ್ಣಗಿನ ಬೆಟ್ಟದ ಮಂಜು ತನ್ನ ತೆರೆ ಸರಿಸುವಾಗ ನೂರೆಂಟು ಚಿತ್ರಗಳನ್ನು ನೋಡಲು ಕೊಟ್ಟು , ಆ ಚಂದದ ಅನುಭವವನ್ನು ಕೊಟ್ಟು, ನಮ್ಮ ಕಣ್ಮನ ತಣಿಸುವುದು ಮಾತ್ರ ಸುಳ್ಳಲ್ಲ.
ನಾಗರ ಹಾವಿನಂತೆ ಸುತ್ತಿಕೊಂಡು ಹೊರಟ ನಾಗರಹೊಳೆಯ ದಾರಿಯಲ್ಲಿ ನನ್ನ ಸೆಳೆದದ್ದು ಹಾಡಿಗಳ ಪುಟ್ಟ ಗೂಡುಗಳು. ಯಾವುದೇ ಅಬ್ಬರವಿಲ್ಲದೆ, ಆಡಂಬರವಿಲ್ಲದೆ, ಸರಳ ಸುಂದರ ಆರೋಗ್ಯಕರ ಜೀವನವನ್ನು ರೂಢಿಸಿಕೊಂಡ ಇವರ ಜೀವನ ಶೈಲಿ ಅತ್ಯಂತ ಮನಸೆಳೆಯಿತು. ವಾಹನಗಳ ಹೊಗೆಯೊಂದು ಬಿಟ್ಟು ಮತ್ಯಾವ ಮಾಲಿನ್ಯವನ್ನು ತರುವ ಕಾರ್ಖಾನೆಗಳು ಇರದೆ ನೆಮ್ಮದಿಯ ತಾಣವಾದ ಈ ಕಾಡಿನಲ್ಲಿನ ಆರೋಗ್ಯಕರ ಜೀವನ ಶೈಲಿ ಅತ್ಯಂತ ಮನಸೆಳೆಯಿತು. ನಿರ್ಭಯವಾಗಿ ಓಡಾಡುವ, ಅವರ ಧೈರ್ಯ ಮೆಚ್ಚುಗೆಯಾದುದು. ಇದೂ ಅಲ್ಲದೆ ನನಗೆ ಮತ್ತಷ್ಟು ಮನ ಸೆಳೆದುದು ಶಾಲಾ ಮಕ್ಕಳು ನಿರ್ಭಯವಾಗಿ ಬಸ್ಸು ಹತ್ತಲು, ಶಾಲೆಗೆ ಹೋಗಲು ತಯಾರಾಗಿ ನಿಂತದ್ದು. ಅಂದರೆ ಬಹುಶಃ ಅಲ್ಲೆಲ್ಲಾ ಕ್ರೂರ ಪ್ರಾಣಿಗಳು ಬರುವುದಿಲ್ಲ. ಆದರೂ ಕಾಡೆಂದ ಮೇಲೆ ಆನೆ, ನರಿ ಮತ್ತಿರ ಪ್ರಾಣಿಗಳು ಬಂದರೂ ಅಲ್ಲಿನ ಜೀವನ ಶೈಲಿಗೆ ಮಕ್ಕಳೂ ಕೂಡಾ ಹೊಂದಿಕೊಳ್ಳುವುದು ಶ್ಲಾಘನೀಯ. ಇದು ಅನಿವಾರ್ಯ. ಆದರೆ ನಗರ ಪ್ರದೇಶ, ಗ್ರಾಮಿಣ ಪ್ರದೇಶ ಎರಡಕ್ಕೂ ಮೀರಿದ್ದು ಬುಡಕಟ್ಟು ಪ್ರದೇಶ.
ಅಂತೂ ಇಂತೂ ಕೊಟ್ಟ ಸಮಯದಲ್ಲಿ ಕಾಡಿನ ಟೋಲ್ಗೇಟ್ ನ ಮತ್ತೊಂದು ತುದಿಗೆ ಬಂದು ತಲುಪಿದೆವು. ಆದರೂ ಸುಯ್ ಎಂದು ಬೀಸಿ ಕಿವಿಯೊಳಗೆ ಇಳಿಯುತ್ತಿದ್ದ ತಂಗಾಳಿ, ಆ ಮಣ್ಣಿನ ಘಮಲು, ಕಾಡುಮರಗಳು ಕೊಡುವ ಕಂಪು, ಕಣ್ ತಣಿಸುವ ಸುತ್ತಲಿನ ಸೌಂದರ್ಯದಲ್ಲಿ ನನ್ನ ಮನವು ಅಚ್ಚಳಿಯದೆ ಉಳಿದು ಬಿಟ್ಟಿತು. ಸಿನಿಮಾಗಳಲ್ಲಿ ನೋಡಿ, ಬೇರೆಯವರ ಛಾಯಾಚಿತ್ರಗಳನ್ನು ನೋಡಿ ಆಗುವ ಆನಂದಕ್ಕಿಂತ ನೂರುಪಟ್ಟು ಆನಂದ ನಾ ಆಸ್ವಾದಿಸಿದಾಗ ಸಿಕ್ಕಿದ್ದು ಎಂದೂ ಮರೆಯದ ಅನುಭೂತಿ.
ಮುಂದುವರೆಯುವುದು..
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=37780
-ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ




ದೇವರನಾಡಿನಲ್ಲಿ ಒಂದು ದಿನ ಪ್ರವಾಸ ಕಥನ.. ಓದಿಸಿಕೊಂಡು ಹೋಗುತ್ತಿದೆ..ಮುಂದಿನ ಕಂತಿಗಾಗಿ ಕಾಯುವಂತೆ ಮಾಡುವ..
ಬರೆಹ..ಧನ್ಯವಾದಗಳು ಗೆಳತಿ ಲಕ್ಷ್ಮಿ
ಪ್ರಕೃತಿಯ ಸುಂದರ ವರ್ಣನೆಯೊಂದಿಗೆ ಪ್ರವಾಸ ಕಥನ ಸರಾಗವಾಗಿ ಸಾಗುತ್ತಿದೆ.ಅಭಿನಂದನೆಗಳು.
ಸೊಗಸಾಗಿದೆ
ಚೆಂದದ ಬರಹ…
ನಾಗರಹೊಳೆಯಲ್ಲಿನ ಸೊಗಸಾದ ಪಯಣದ ಖುಷಿಯನ್ನು ಹಂಚಿಕೊಂಡ ಲೇಖನವು ಇಷ್ಟವಾಯ್ತು.
ಪಯಣದ ನಿರೂಪಣೆ ಚೆನ್ನಾಗಿದೆ