ದೇವರನಾಡಲ್ಲಿ ಒಂದು ದಿನ – ಭಾಗ 2
ಅಂತರಸಂತೆಯ ಹಾದಿಯಲಿ.
ಪ್ರಕೃತಿಯು ನಮಗೊಂದು ವರದಾನ. ಎಷ್ಟು ಸವಿದರೂ ಕಡಿಮೆಯೇ… ಕಣ್ಣು ಮನಸುಗಳೆರಡೂ ಒಂದು ಕ್ಷಣ ಮೂಕವಾಗುವ ಸಮಯಕ್ಕೆ….ವ್ಯಾ ವ್ಯಾ ಎನ್ನುವ ಸದ್ದು. ಏನೆಂದು ಸದ್ದಿಗೆ ಮನ ಕೊಟ್ಟರೆ ಪಕ್ಕದಲ್ಲಿ ದೀಪಶ್ರೀ ಬೆಳ್ಳಂಬೆಳಿಗ್ಗೆಯೇ ಹೊಟ್ಟೆಯೊಳಗಿನ ಕಸವನ್ನು ಕಾರಿನ ಆಚೆ ಕಾರಿಕೊಳ್ಳುತ್ತಿದ್ದಳು. ಮೊದಲೇ ಹೇಳಿದ್ದಳು. ನನಗೆ ವಾಂತಿಯಾಗುವುದೆಂದು. ಇಲ್ಲಿಂದಲೇ ವಮನಕ್ಕೆ ನಾಂದಿ ಹಾಡಿದರು. ಪ್ರಯಾಣದಲ್ಲಿ ಹೊಟ್ಟೆ ತೊಳಸುವಿಕೆ, ಅಹಿತಕರ ವಾಸನೆಗಳಿಗೆ ವಾಂತಿ ಆಗುವುದು ಸಹಜ, ತಿರುವಿನ ಪ್ರದೇಶದಲ್ಲಿ ಎರ್ರಾಬಿರ್ರಿ ಕಕ್ಕಿದ ಅನುಭವ ನನಗೆ ಚೆನ್ನಾಗಿ ಆಗಿದ್ದು ನೆನಪಿದ್ದುದರಿಂದ ಅವಳ ಬಗ್ಗೆ ಕನಿಕರವೆನಿಸಿತು. ಸಮಾಧಾನಿಸಿ…ಬಾಯಿ ತೊಳೆಯಲು ನೀರು ಕೊಟ್ಟು, ಮತ್ತೆ ಕಾರು ಹತ್ತಿದೆ. ಸಮಾಧಾನ ಚಿತ್ತದಿಂದ ಚೂರು ಬೇಸರಗೊಳ್ಳದೆ ಬೇಕೆಂದಲ್ಲಿ ಕಾರು ನಿಲ್ಲಿಸಿ…. ಹತ್ತಿಸಿಕೊಂಡು ಕಾರು ಚಲಾಯಿಸುತ್ತಿದ್ದರು ಉಮಾಪತಿ ಸರ್. ಎರಡು ದೀಪಗಳ ನಡುವೆ ಗಣಪನಂತೆ ಕುಳಿತು ಮತ್ತೆ ಸಣ್ಣ ಪುಟ್ಟ ಜೋಕ್ ನೊಂದಿಗೆ ಪ್ರಕೃತಿಯಲ್ಲಿ ಮುಳುಗಿದೆ.
ಸಣ್ಣಗೆ ಹಸಿವು ಪ್ರಾರಂಭವಾಯಿತು. ನಿತ್ಯ ತಿಂಡಿ ತಿನ್ನುವ ಸಮಯ ಹನ್ನೊಂದರವರೆಗೆ ಆಗುವುದು. ಏಕೆಂದರೆ ಬೆಳಿಗ್ಗೆ ಕೆಲಸಕ್ಕೆ ಹೊರಡುವ ಧಾವಂತ…. ನಸುಕಿಗೆದ್ದು, ಎಂಟು ಗಂಟೆಗೆ ತಯಾರಾಗಿ ಕೆಲಸಕ್ಕೆ ಹೊರಡುವ ಸಮಯ. ಬಸ್ಸು ಹತ್ತಿ ದೂರದ ಪ್ರಯಾಣ ಮಾಡಲೇಬೇಕು. ತಿಂಡಿ ತಿನ್ನಲು ಕುಳಿತರೆ ಕೆಲಸಕ್ಕೆ ತಡ . ಹೀಗಾಗಿ ಶಾಲೆಗೆ ಹೋಗಿ ನಿಧಾನವಾಗಿ ತಿನ್ನುವೆ. ಆದರೇಕೋ ಇಂದು ಬಹಳವೇ ಹಸಿವಾಗಲು ಪ್ರಾರಂಭಿಸಿತು. ಅದಕ್ಕೆ ತಕ್ಕಂತೆ ಗೆಳತಿ ದೀಪ ಸ್ವಾಮಿ ಹಣ್ಣು ತಿನ್ನಲು ಪ್ರಾರಂಭಿಸಿದಳು. ಬೆಳ್ಳಂಬೆಳಗ್ಗೆನೇ ತಿನ್ನುವುದು ನನಗಾಗದ ವಿಷಯ. ನಾನದರ ಗೋಜಿಗೆ ಹೋಗದೇ ಕಾಫಿಯ ಜಾಗಕ್ಕೆ ಕಾಯುತ್ತಿದ್ದೆ.
ಕಣ್ಣು ಮತ್ತೆ ರಸ್ತೆಯ ಮೇಲೆ ನೆಟ್ಟಿತು. ಅಲ್ಲಲ್ಲೇ ಸಣ್ಣ ಹಳ್ಳಿಗಳು ಸಿಗಲು ಪ್ರಾರಂಭಿಸಿತು. ಅನ್ನದಾತನ ಕಾಯಕ ಶುರುವಾಗುವ ಸಮಯ. ಎತ್ತಿನಗಾಡಿ ಹೊಡೆದುಕೊಂಡು ಹೊಲದ ಕಡೆ ನಡೆದವರು ಸ್ವಲ್ಪ, ಹಾಲು ಹಾಕಿಬರುವವರು, ಕೊಂಡುಹೊರಟವರು ಸ್ವಲ್ಪ, ಚುಮುಚುಮು ಚಳಿಯಲ್ಲಿ ತಲೆಗೊಂದು ಟವಲ್ ಸುತ್ತಿ ಕಟ್ಟಿ, ತುಂಬು ತೋಳಿನ ಸ್ವೆಟರ್ ಹಾಕಿ, ಬೀಡಿ ಸಿಗರೇಟು ಸೇವನೆ ಮಾಡುತ್ತಾ, ಕಾಫಿ ಕುಡಿಯುತ್ತ,ಬಿಸಿಲಿಗೆ ಮೈಯೊಡ್ಡಿ ನಿತ್ಯದ ಮಾತು ಕತೆಯಲ್ಲಿ ತೊಡಗಿಕೊಂಡವರು ಸ್ವಲ್ಪ, ಬಾಗಿಲ ಕಸ ಗುಡಿಸಿ, ನೀರು ಹಾಕಿ ರಂಗೋಲಿ ಇಡುತಿರುವವರು ಸ್ವಲ್ಪ, ಅಮ್ಮ ಕೊಡುವ ಬಿಸಿಬಿಸಿ ಕಾಫಿಯಜೊತೆ ತಿನ್ನಲು ಬನ್, ಬಿಸ್ಕತ್ತು ಹಿಡಿದು ಹೊರಟ ಚಿಣ್ಣರು
ಸ್ವಲ್ಪ, ಆಗತಾನೆ ಎದ್ದು ಕಣ್ಣುಜ್ಜಿಕೊಂಡು ಅಳುತ್ತಾ ಅಮ್ಮಾ ಎಂದು ಅಳುತ್ತಾ ಬಂದ ಪುಟ್ಟ ಕಂದಮ್ಮಗಳು ಸ್ವಲ್ಪ, ಜೊಲ್ಲಿಳಿಸಿಕೊಂಡು ಬಂದ ಕೋರೆಗಳನ್ನು ಒರೆಸದೆ ಅಡ್ಡಾಡುತ್ತಿದ್ದವರು ಸ್ವಲ್ಪ, ಬೆಳಗಾಗಿ ಸೂರ್ಯ ಪ್ರಕಾಶ ಬೀರಿದರೂ ಇನ್ನೂ ಬೆಳಗಾದುದು ಸಾಲದು ಎಂದುಕೊಂಡು ಪಟಪಟನೆ ರೆಕ್ಕೆ ಬಡಿದು ಕ್ಕೋಕೋಕೋ…..ಎಂದು ಕೂಗುತಿರುವ ಕೋಳಿಗಳ ಕೂಗು, ಬೀದಿನಾಯಿಗಳ ಕಿತ್ತಾಟ ……ಅಬ್ಬಾ . ಒಂದೇ..ಎರಡೇ ಹಳ್ಳಿಯನ್ನು ಹಾಯ್ದು ಹೋಗುವಷ್ಟರಲ್ಲಿ ಇಷ್ಟೆಲ್ಲಾ ದೃಶ್ಯಗಳು ಸೆರೆಯಾದವು. ನನ್ನ ಗಮನಕ್ಕೆ ಬಾನಿನ ಅರ್ಕನೂ ಜೊತೆಯಾಗಿದ್ದ. ನಗರ ಪ್ರದೇಶದಲ್ಲಿನ ಜೀವನ ಶೈಲಿಗೂ ಗ್ರಾಮೀಣ ಪ್ರದೇಶದಲ್ಲಿನ ಜೀವನ ಶೈಲಿಗೂ ಅಜಗಜಾಂತರ. ಅವರವರ ಸಮಯ ಹೊಂದಾಣಿಕೆ ಮೇಲೆ ಅವರ ರೂಢಿಗಳು ನಿಂತಿರುತ್ತವೆ ಎಂಬುದನ್ನು ನಿತ್ಯವೂ ನೋಡುವ ನನಗೆ ಇದು ಹೊಸದೆನಿಸಲಿಲ್ಲ.
ಎಲ್ಲಾ ಕಾರುಗಳ ಹಿಂದೆ ನಮ್ಮ ಕಾರು ಇತ್ತು. ಹಾಗೇ ಸ್ವಲ್ಪ ಮುಂದೆ ಹೋದಂತೆ ಒಂದು ತಿರುವಿನಲ್ಲಿ ಒಂದು ಕಾರು ಹಾಗೇ ಕೆಳಕ್ಕೆ ಜಾರಿತ್ತು….ಅದರೊಳಗಿರುವವರು ನಮಗ್ಯಾರಿಗೂ ಕಾಣುತ್ತಿರಲಿಲ್ಲ. ಹೊರಗಿನ ಜನರಾಗಿ ಇಬ್ಬರು ಅಲ್ಲಿ ನಿಂತಿದ್ದರು. “ಪಾಪ ಯಾವುದೋ ಕಾರುಬಿದ್ದಿದೆ ” ಎಂದ ಕೂಡಲೇ….”ನಮ್ಮವರದಾಗದಿದ್ದರೆ ಸಾಕು” ಎಂದು ಕಾರು ನಿಲ್ಲಿಸಿದೆವು. “ನಮ್ಮವರದಲ್ಲ ಬಿಡಿ. ಪಾಪ ಯಾರದೋ ಏನೋ” ..ಆದರೂ ನೋಡುವ ಎಂದು ಒಬ್ಬೊಬ್ಬರಾಗಿ ಕೆಳಗೆ ಇಳಿದರೆ ಇದು ನಮ್ಮದೇ ಎಂದು ಶಶಿಸರ್ ಕೂಗಿದರು. ನೋಡಿದರೆ ರಮೇಶ್ ಭಾವ.. ಒಮ್ಮೇಲೆ ದಢ್ ಎಂದಿತು. ನಾನೂ ಕೂಡ ದಢದಢ ಇಳಿದೆ ಕೆಳಗೆ. ಉಮಾಪತಿ ಸರ್ ಧೈರ್ಯ ತುಂಬುತ್ತಿದ್ದರು. ” ಏನಾಗಿಲ್ಲ… ಏನಾಗಲ್ಲ ಹಿಂದೆ ತಗೊಳಿ ” ಎಂದರು. ….ಕಾರಲ್ಲಿ ಇರುವವರು ಮೊದಲು ಕೆಳಗಿಳಿಯಿರಿ ಎಂದು ಕೂಗಿದೆ…. ಊರಿನವರು ಇದು ನಿತ್ಯವೂ ಆಗುವುದು….ಕಾಮನ್.. ಗಾಬರಿ ಬೇಡ ಎಂದರು. ಆದರೂ ಆತಂಕ ಎಲ್ಲರ ಮುಖದಲ್ಲೂ ಮನೆಮಾಡಿತ್ತು. ನಮ್ಮೊಳಗೆ ನಡುಕ ಹುಟ್ಟಿತ್ತು….. ನಮಗಿಂತ ಒಳಗಿದ್ದವರಿಗೂ ಹೆಚ್ಚಿನ ಭಯ ಕಾಡಿದ್ದು ಮುಖದಲ್ಲಿ ಗೋಚರವಾಗುತ್ತಿತ್ತು. ನಮ್ಮ ಭಯ ಅದು ಎಡಕ್ಕೆ ಉರುಳಿಕೊಂಡಿದ್ದರೆ ಯಾರಿಗಾದರೂ ತೊಂದರೆ ಇತ್ತು. ಪುಣ್ಯಕ್ಕೆ ಅಲ್ಲಿನ ತಂತಿಯ ಬೇಲಿ ಇಡೀ ಕಾರಿನ ಜನರನ್ನು ತಡೆದಿತ್ತು. ಉದ್ದಕ್ಕೂ ದೇವರ ಸ್ತೋತ್ರವನ್ನು ಪಠಿಸಿದ್ದರ ಫಲ ಹಾಗೂ ಎಲ್ಲರ ಪುಣ್ಯ ಏನೂ ಆಗದಂತೆ….ಕಾರಿಗೂ ಏನೂ ತೊಂದರೆಯಾಗದಂತೆ ಯಥಾಸ್ಥಿತಿಗೆ ಬಂತು. ಪಾಪ ರಮೇಶ್ ಭಾವನ ಪರಿಸ್ಥಿತಿ ಏನಾಗಿರಬೇಡ… ಅವರು ಅತ್ಯಂತ ಉತ್ತಮವಾಗಿ ಕಾರು ಚಾಲನೆ ಮಾಡುತ್ತಿದ್ದರು. ನಾವದನ್ನು ಕಂಡಿದ್ದೆವು.
ಒಂದು ಖುಷಿಯಲ್ಲಿ ನೋವು ತರದ ಭಗವಂತನನ್ನು ನೆನೆಯುತ್ತಾ ಮುಂದೆ ಸಾಗಿದೆವು. ಮತ್ತೆ ಎಲ್ಲರ ಮೊಗದಲ್ಲೂ ನಗು ಮೂಡಿತು……. “ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು “…ಎನ್ನುತ್ತೇವೆ . ಎಲ್ಲರಿಗೂ ಭಗವಂತ ಅಷ್ಟೇ ಆಯುಷ್ ಕೊಡಲಿ ಎಂದು ಬೇಡುವೆ.
ಮುಂದೆ ಸಾಗಿತು ನಮ್ಮ ಬಂಡಿ…. ಅಂತರ ಸಂತೆಯ ಹಾದಿಯಲ್ಲಿ…..ಹಾ…ಹಾ…ಬಂಡಿ ಎಂದ ಕೂಡಲೇ ನೆಪ್ಪಾತು. ದಾರೀಲಿ ಒಂದು ಖಾಲಿ ಎತ್ತಿನ ಗಾಡಿ ಹೋಗುತ್ತಿತ್ತು. ಕಪಿ ಮನಸು ಸುಮ್ಮನೆ ಇರಬೇಕಲ್ಲ. ಎಲ್ಲರೂ ಒಂದು ಗಾಡಿ ಹೊಡೆಯುವ ಫೋಟೋ ತೆಗೆಸಿಕೊಳ್ಳುವ ಎಂದು ಗಾಡಿ ನಿಲ್ಲಿಸಿದೆವು. ತಮಾಷೆ ಅಂದ್ರೆ ನಾನು ಕೆಲಸಕ್ಕೆ ಹೋಗುವುದೇ ಹಳ್ಳಿಗೆ. ನಿತ್ಯವೂ ಇಂತಹ ಗಾಡಿನ ನೋಡುವೆ. ಆದರೆ ಯೋಚನೆ ಮಾಡಿ…. ಅಲ್ಲಿ ಈ ತರಹ ಗಾಡಿ ಹತ್ತಿ, ಗಾಡಿ ಹೊಡೆಯುವ ಕೆಲಸ ಮಾಡಲು ಎಂದೂ ಆಗದು. ನನ್ನೊಳಗೆ ಒಂದು ಗಿಲ್ಟಿ ಕಾಡಲು ಆರಂಭವಾಗುತ್ತದೆ. ಅದಕೆ ಇಲ್ಲಿ ಹತ್ತಿ ನನ್ನ ಆಸೆ ನೆರವೇರಿಸಿಕೊಂಡೆ. ಅದೂ ಭಯದಿಂದ. ಗಾಡಿಯವ ಕೈಗೆ ಹಗ್ಗ ಕೊಟ್ಟು ಇಳಿದೇ ಬಿಡೋದ…. ಹೆಣ್ಣು ಹೈಕಳು ಕಿರುಚಲು ಶುರುಮಾಡಿದೆವು… ಆತ ಏನೂ ಆಗಲ್ಲ ಹತ್ತಿ ಎಂದು ಧೈರ್ಯ ಕೊಟ್ಟ … ಮುಂದೆ ಹೋಗಿ ಎತ್ತುಗಳ ಬಳಿ ನಿಂತ. ಅಂತೂ ಇಂತೂ ಪ್ಯಾಟೆ ಮಂದಿ ಗಾಡಿ ಹೊಡೆಯುವ ಪೋಸ್ ಕೊಟ್ಟು ರೂಪದರ್ಶಿಗಳಾದೆವು. ಗಾಡಿಯವನಿಗೊಂದು ಕೃತಜ್ಞತೆ ಸಲ್ಲಿಸಿ ಮುಂದೆ ನಡೆದವು….ಈಗ ಕಾಫಿ ಕುಡಿಯುವ ಸಣ್ಣ ಕೆಫೆ ಅಂತರಸಂತೆಯ ದಾರಿಯಲ್ಲಿ ಸಿಕ್ಕಿತು.
ಚುಮುಚುಮು ಚಳಿಗೆ ಬೆಚ್ಚಗಿನ ಕಾಫಿ ಹೇಳಿಕೊಳ್ಳುವಂತಹ ಸೊಗವಿರಲಿಲ್ಲ. ಆದರೂ ಸೇವಿಸಿ ಸ್ವಲ್ಪ ಮಟ್ಟಿಗೆ ಸಮಾಧಾನ ಮಾಡಿಕೊಂಡು….ಒಂಚೂರು ಹರಟುತ್ತಾ… ಒಂದಷ್ಟು ಕಾಫಿ ವಿತ್ ಪೋಟೋ ತೆಗೆದುಕೊಂಡು ಪುನಃ ಕಾರು ಹತ್ತಿ ಕುಳಿತೆವು. ಒಂದೊಂದಾಗಿ ನಾಲ್ಕು ಚಕ್ರಗಳ ರಥಗಳು ಹೊರಟವು ಅಂತರಸಂತೆಯ ಹಾದಿಯಲಿ.
(ಮುಂದುವರಿಯುವುದು).
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=37746
-ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ
ಪ್ರವಾಸ ಕಥನ ಮುಂದುವರೆದಭಾಗ ಓದಿಸಿಕೊಂಡು ಹೋಯಿತು..ಮುಂದಿನ ಕಂತಿಗಾಗಿ ಕಾಯುವಂತಿದೆ…ಧನ್ಯವಾದಗಳು ಗೆಳತಿ ಲಕ್ಷ್ಮಿ
ಸೊಗಸಾಗಿದೆ
ಅಂತರಸಂತೆಯ ಹಾದಿಯಲ್ಲಿ ಕಾರು ಜಾರಿದಾಗ ನನ್ನೆದೆಯೂ ದಸಕ್ ಎಂದಿತು! ಪ್ರವಾಸದ ಸೊಗಸಾದ ನಿರೂಪಣೆ ಖುಷಿಕೊಟ್ಟಿತು.
ಚೆನ್ನಾಗಿದೆ. ಎತ್ತಿನಗಾಡಿಯ ಪ್ರಯಾಣ ಒಂದು ಬಗೆಯಾದರೆ; ವಿಘ್ನಗಳನ್ನು ದಾಟಿ ದಡಸೇರುವ ಕಥಾನಕ….
ಪ್ರವಾಸ ಕಥನ ಗಾಭರಿ, ಆತಂಕ, ಖುಷಿ, ಹೊಸ ಅನುಭವಗಳೊಂದಿಗೆ ಚಂದದಿಂದ ಸಾಗುತ್ತಿದೆ.