ದೇವರನಾಡಲ್ಲಿ ಒಂದು ದಿನ -1
ಟ್ರಿನ್….ಟ್ರಿನ್….ಅಂತ ಅಲಾರಾಂ ಹೊಡೆದ ಶಬ್ಧಕ್ಕೆ ಕಿವಿಗಳು ಚುರುಕಾದವು. ಅಯ್ಯೋ ಇಷ್ಟು ಬೇಗ ಬೆಳಗಾಯಿತ ಎಂದು ಬಂದ್ ಮಾಡಲು ಕಣ್ ಬಿಟ್ಟರೆ ಸಮಯ ನಾಲ್ಕು ಗಂಟೆ….ಓ ನಾನಿಂದು ಹಾಸಿಗೆ ಬಿಟ್ಟು ಏಳಬೇಕಿತ್ತು. ಕಾರಣ ನಾವಿಂದು ಪ್ರವಾಸ ಹೋಗುವ ದಿನ ಎಂದರಿತು…ತುಸು ಸಡಗರದೇ ಎದ್ದೆ.
ಬೆಚ್ಚಗೆ ಮಲಗಿದ್ದ ಮಗಳು..”ಇನ್ನೂ ಸ್ವಲ್ಪ ಹೊತ್ತು ಮಲಗಬಾರದ “…ಎಂದು ಗೊಣಗುತ್ತಿದ್ದಳು. ಮಾತು ಬೆಳೆಸಿದರೆ ಅವಳ ನಿದ್ದೆ ಕೆಡುವುದೆಂದು ಮೌನವಾಗಿ ಬಾಗಿಲು ಮುಚ್ಚಿ ಹೊರಬಂದೆ.
ನಿತ್ಯಕರ್ಮಗಳನ್ನು ಮುಗಿಸಿ ಸರಿಯಾಗಿ ಐದಕ್ಕೆ ತಯಾರಾದೆ. ಆರು ಗಂಟೆಗೆ ಹೇಳಿದ ಜಾಗಕ್ಕೆ ತಲುಪಬೇಕಿತ್ತು. ಮಗಳಿಗೆ ಏಳಿಸಲು ತಯಾರಾದೆ. ರಾತ್ರಿಯೇ ಎಚ್ಚರಿಕೆ ನೀಡಿದ್ದೆ. ಗೊಣಗಾಡದೇ ಸರಿಯಾದ ಸಮಯಕ್ಕೆ ತಲುಪಿಸಬೇಕೆಂದು. ಏಕೆಂದರೆ ಅವಳು ಆಟೋದಲ್ಲಿ ಹೋಗುವುದನ್ನು ಒಪ್ಪಿರಲಿಲ್ಲ. ಕಳುಹಿಸಲು ನಾನೇ ಬರುವೆ ಎಂದು ಹಠ ಮಾಡಿದ್ದಳು. ಅರ್ಧಗಂಟೆಯ ಪ್ರಯಾಣ ನಾನು ಹೋಗಬೇಕಾದ ಜಾಗ. ತುಂಬಾ ದೂರವಿದೆ. ..ಕತ್ತಲೆ ಬೇರೆ. ಬೇಡವೆಂದರೂ ಕೇಳದೆ…. ಬಹಳವೇ
ಕೇರ್ ಮಾಡುವಳ ಹಾಗೆ ” ನನಗೆ ನನ್ನ ಅಮ್ಮನ ಕೇರ್ ಮುಖ್ಯ” ಎಂದು ಹೊರಟು ನಿಂತಳು. ಅವಳೇ ಮಗ ಮಗಳು ಎರಡೂ ಆದ್ದರಿಂದ ಅವಳ ಮಾತಿಗೆ ಒಪ್ಪಲೇ ಬೇಕಿತ್ತು. ಅವಳ ಅಪ್ಪನನ್ನು ಒಪ್ಪಿಸಿಬಿಟ್ಟಿದ್ದಳು.
“ಅಮ್ಮಾ….. ಈ ಬೆಚ್ಚನೆ ಸ್ವೆಟರ್,ಟೋಪಿ ನಿನ್ ಜೀನ್ಸ್ ಗೆ ತುಂಬಾ ಒಪ್ಪುತ್ತಿದೆ ” ಎಂದು ಮೆಚ್ಚುಗೆಯ ಮಾತುಗಳನ್ನು ಹೇಳುತ್ತಾ ಬಿಸಿ ಬಿಸಿ ಕಾಫಿ ಹೀರುತ್ತಿದ್ದ ಮಗಳನ್ನು ಮುದ್ದು ಮಾಡಿ, ಕೇರಾಗಿರಲು ಹೇಳಿ ಬಾಗಿಲು ಮುಚ್ಚಿ ಹೊರಟೆವು . ಸ್ಕೂಟಿಯನ್ನು ಹತ್ತಿ.
ಹೆಲ್ಮೆಟ್ ಹಾಕಿದ್ದರೂ ಸಹಾ ಸುಯ್ ಸುಯ್ ಗಾಳಿ ಕಿವಿಯನ್ನು ಹೊಕ್ಕು ಚಳಿಯನ್ನು ಇಮ್ಮಡಿ ಗೊಳಿಸಿತ್ತು. ಕಣ್ಣಲ್ಲಿ ನೀರು ಕೂಡಾ ಸುರಿಯಲು ಪ್ರಾರಂಭಿಸಿತು. ಮಗಳಿಗೆ ನಿಧಾನವಾಗಿ ಗಾಡಿ ಓಡಿಸಲು ಹೇಳಿದೆ. ಪದೇ ಪದೇ ‘ರಸ್ತೆಯಲ್ಲಿ ನಿಧಾನವಾಗಿ ಹೋಗು ‘ ಎಂದು ಹೇಳುವ ಹೇಳಿಕೆ ಅವಳಿಗೆ ಮುಜುಗರ ತರುತ್ತಿತ್ತು. ಅವಳು ಎಷ್ಟೇ ಬೈದರೂ ನಾನು ಹೇಳುವುದನ್ನು ಬಿಡುವುದಿಲ್ಲ. “ಅವಸರವೇ ಅಪಘಾತಕ್ಕೆ ಕಾರಣ ಅಲ್ಲವ” ಹಾಗಾಗಿ.
ಅಂತೂ ಇಂತೂ ಎಲ್ಲರೂ ಸೇರಲು ಹೇಳಿದ ಆಂದೋಲನ ಸರ್ಕಲ್ ಗೆ ಬಂದು ತಲುಪಿದಾಗ ಐದು ಮುಕ್ಕಾಲು ಆಗಿತ್ತು. ಇನ್ನೂ ಬೆಳಗು ಆಗಿರಲಿಲ್ಲ. ಅಲ್ಲಲ್ಲೇ ಜನ ವಾಯುವಿಹಾರ ಮಾಡುತ್ತಿದ್ದರು. ಸುಂದರವಾದ ಪೂರ್ಣ ಚಂದ್ರನಂತ ಮೊಗದ , ಪ್ರಶಾಂತ ಬುದ್ಧನ ಮೂರ್ತಿಯ ಮೇಲೆ ಪೂರ್ಣ ಚಂದ್ರನ ಬೆಳಕು ಅರ್ಧ ಕಪೋಲದ ಕಾಂತಿಯನ್ನು ಇಮ್ಮಡಿಸಿತ್ತು. ನೋಡನೋಡುತ್ತಿದ್ದಂತೆ
ಪೂರ್ಣ ಶರಣಾಗತಿಯಾದ….”ಹೂಂ , ಅಮ್ಮ …ಮುಳುಗಿ ಹೋದೆಯಾ ಇಲ್ಲೇ ….ಹುಷಾರು ಕವಿಯಾಗಿ ಕುಳಿತು ಬಿಡುವಂತೆ ಇಲ್ಲೇ….ಸರಿ ಸರಿ ….ನೋಡು ನಿನ್ನ ಸ್ನೇಹಿತರು ಯಾರಾದರೂ ಬಂದಿರುವರಾ” ಅಂತ ತರಾಟೆಗೆ ತೆಗೆದುಕೊಂಡಳು.. ನಗು ಮೂಡಿಸುತ್ತಾ, ಸುತ್ತ ಮುತ್ತ ನೋಡಿದೆ.
ಇಷ್ಟು ದೊಡ್ಡ ಸರ್ಕಲ್ ನಲ್ಲಿ ಯಾವ ಕಡೆ ಇರುವರೆಂದು ತಿಳಿಯಲಿಲ್ಲ. ಒಂದು ಕಾರೂ ನಿಂತಿರಲಿಲ್ಲ. ಸುತ್ತ ಕಣ್ಣಾಡಿಸುವಾಗ ದೂರದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಶಶಿಸರ್ ಕೈ ಬೀಸಿದರು. ಶುಭೋದಯಗಳ ವಿನಿಮಯವಾಯಿತು. ಒಬ್ಬೊಬ್ಬರಾಗಿ ಬಂದು ಎಲ್ಲರೂ ಸೇರಿದರು. ಸರಿ ಹೊರಡುವ ಸಮಯ ಬಂದಾಗ ಮಗಳಿಗೊಂದು ಮುತ್ತಿಟ್ಟು ಕಾರು ಹತ್ತಿದೆ. ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು. ಅವಳನ್ನು ಬಿಟ್ಟು ಹೋಗುವುದು ನನಗಿಷ್ಟ ಇಲ್ಲ. ಆದರೆ ಅವಳು ನನ್ನ ಜೊತೆ ಬರುವುದನ್ನೇ ಬಿಟ್ಟಿದ್ದಾಳೆ…..ಮನಸು ಎರಡೂ ಕಡೆಗೂ ಹೋಯ್ದಾಡುತ್ತಿತ್ತು. “ನೀನು ನಿನ್ನ ಸ್ನೇಹಿತರ ಜೊತೆ ಹೋಗು…. ಅಲ್ಲಿ ನನಗೇನು ಕೆಲಸ ” ಎಂಬಂತಹ ಮಾತು ಪದೇಪದೇ ಕೇಳಿಬರುವುದು. ಮಕ್ಕಳು ಪ್ರೌಢಿಮೆಗೆ ಬಂದಾಗ ನಾವು ಹೀಗೆನಾ ಎಂಬ ಸತ್ಯ ಅರಗಿಸಿಕೊಳ್ಳಲು ನನಗಿನ್ನೂ ಸಮಯ ಬೇಕು ಅನಿಸಿ ಕಾರಿನ ಬಾಗಿಲು ಮುಚ್ಚಿ ಮತ್ತೊಮ್ಮೆ ಮಗಳಿಗೆ ಕೈಯಾಡಿಸಿದೆ.
ನಾಲ್ಕು ಕಾರುಗಳಲ್ಲಿ ನಾವೆಲ್ಲಾ ಹಂಚಿಕೆಯಾಗಿದ್ದೆವು. ದೀಪ ಶ್ರೀ, ದೀಪ ಸ್ವಾಮಿ, ಶಶಿಕುಮಾರ್ ಸರ್, ಉಮಾಪತಿ ಸರ್ ಸೇರಿದಂತೆ ಇದ್ದ ಕಾರಲ್ಲಿ ನಾನೂ ಒಬ್ಬಳಾಗಿ ಹೊರಟೆ. ಒಂದರ ಹಿಂದೆ ಒಂದು ಕಾರುಗಳು ಹೊರಟವು. ಎಚ್.ಡಿ.ಕೋಟೆ ರಸ್ತೆಗಿಳಿದ ಕಾರುಗಳು ಉಗಿಬಂಡಿಯ ಕೆಲ ಬೋಗಿಗಳಂತೆ ಕಾಣುತ್ತಿದ್ದವು. ಇನ್ನು ಸೂರ್ಯ ಬಂದಿರಲಿಲ್ಲವಾದ್ದರಿಂದ ಕಾರಿನ ದೀಪಗಳ ಬೆಳಕು
ದೂರದಿಂದ ಬಹಳ ಚೆನ್ನಾಗಿ ಕಾಣುತ್ತಿತ್ತು. ಹಿಮಗಾಳಿಯನ್ನು ಸೀಳಿಕೊಂಡು ಮುನ್ನುಗ್ಗಿದ ನಮ್ಮ ಪಯಣ ಕೇರಳದ ವಾಯನಾಡಿತ್ತ ಸಾಗಿತು. ಮೊದಲಬಾರಿ ದೇವರನಾಡಿನಲ್ಲಿ ಬೀಡುಬಿಡುವ ನನ್ನ ಉತ್ಸಾಹಕ್ಕೆ ಸುತ್ತಲಿನ ಪ್ರಕೃತಿಯ ಸೌಂದರ್ಯವೂ ಕೂಡಾ ಕಣ್ಮನ ತಣಿಸುತ್ತಾ ಸಾಥಿ ನೀಡಿತು.
ಕೊಯ್ಲು ಸಮಯವಾದ್ದರಿಂದ ಹೊಲಗದ್ದೆಗಳ ಪೈರುಗಳು ಕಟಾವು ಆಗಿ, ಉಳಿದ ಕೂಳೆಗಳು ಬಾಯಿಬಿಟ್ಟ ಗದ್ದೆಯಲ್ಲಿ ಸಿಲುಕಿ ಚೀರಿಡುವ ರೈತನನ್ನು ನೆನಪಿಸುತ್ತಿದ್ದವು. ಸದಾ ವಾಹನಗಳ ಓಡಾಟದಿಂದೇರಿದ ಧೂಳು ಹಸಿರೆಲೆಗಳ ಮುತ್ತಿಕ್ಕಿ ನೆಲದ ಬಣ್ಣಕ್ಕೆ ಜೊತೆಯಾಗಿದ್ದವು. ಧೂಳಿಡಿದು ಬಣ್ಣಗೆಟ್ಟ ಬದುಗಳ ಎತ್ತರದ ಹಸಿರು ಗಿಡ ಮರಗಳ ಎಲೆಗಳಲಿ ಇಬ್ಬನಿಯು ಸಣ್ಣಗೆ ತೊಟ್ಟಿಡಲು ಪ್ರಾರಂಭಿಸಿದ್ದವು. ಚಿತ್ರಗಾರ ಚಿತ್ರಿಸಲು ಬಣ್ಣ ಎರಚಿದಂತೆ ಕಾಣ್ಣಿಗೆ ಮುದತಂದಿತ್ತ ನೋಟ, ಅಲುಗಾಡದೆ ತಿಳಿಯಾಗಿ ನಿಂತ ಕೆರೆಕಟ್ಟೆಗಳ ನೀರು ಕಣ್ಣಿಗೆ ಆಕರ್ಷಕವಾಗಿ ಕಾಣುವ ವೇಳೆಗೆ ಮೆಲ್ಲನೆ ಮರಗಳ ಸಂದಿಯಿಂದ ಇಣುಕಿದ ಸೂರ್ಯನ ರಶ್ಮಿಗಳು ಇಂಚಪಟ್ಟಿಯಿಂದೆಳೆದ ನೇರರೇಖೆಗಳಂತೆ ಭೂಮಿಯನ್ನು ಮುಟ್ಟುತ್ತಿತ್ತು….. ಆಗಸದಲ್ಲಿ ತುಸುವೇ ಕೆಂಪರಡಿತು.
ಚಿಲಿಪಿಲಿ ಕಲರವದ ಸದ್ದಿನ ನಡುವೆ ಮನಸು ಹಾಗೇ ತೇಲಿ ಹೋಯಿತು.
-ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ.
(ಮುಂದುವರೆಯುವುದು…..)
ದೇವರನಾಡಿನಲ್ಲಿ ಒಂದು ದಿನ ಲೇಖನ ಓದಿ ಸಿಕೊಂಡು ಹೋಗಿ ಮುಂದಿನ ಕಂತಿಗೆ ಕಾಯುವಂತೆ ಮಾಡಿದೆ…ಲಕ್ಷ್ಮಿ.. ಅಭಿನಂದನೆಗಳು..
ಕಣ್ಣಿಗೆ ಕಟ್ಟುವಂತೆ ವಿವರಣೆ ತುಂಬಿದೆ…..ಮುಂದಿನ ಕಂತಿಗಾಗಿ ಕಾಯುತ್ತಿದ್ದೇವೆ……ಮೇಡಂ
ಸೊಗಸಾಗಿದೆ ಲೇಖನ
ಅದ್ಭುತ. Miss ಮಾಡ್ದೆ ಓದುತ್ತೇನೆ..
ಪ್ರವಾಸದ ಕಥನದ ಶುಭಾರಂಭ ಸೊಗಸಾಗಿಯೇ ಆಗಿದೆ.
ಪ್ರವಾಸದ ಆರಂಭ ಕುತೂಹಲ ಮೂಡಿಸಿದೆ..
ಪ್ರವಾಸದ ಮೊದಲ ಹಂತವೇ ಬಹಳ ಕುತೂಹಲಕಾರಿಯಾಗಿದೆ!