ಸಾಸುವೆ ಸಿಡಿದ ಘಮಲಿನಮಲು
ಅಕ್ಕ ,
ನೀನಿಂದಿಗೂ ಅರಿತವರ ಆದರ್ಶ
ನಡೆನುಡಿ ಸಮೃದ್ಧ ಪಾರದರ್ಶ !
ಗಂಡು ಗುಡುಗಿದ ಕಾಲದಲೂ
ಆಗಸದ ಮೋಡ ಹೊದ್ದ ನಿನ್ನ
ಕಂಗಳಲಿ ಸುರಿದ ಭಾರೀ ಮಳೆ
ನಿಟ್ಟುಸಿರ ನೀರ ಹೆಂಗಳೆಯ ಇಳೆ !
ಕೌಶಿಕನ ಹೊದ್ದೂ ಕೊನೆಗೊದ್ದು
ಎದ್ದು ನಡೆದ ನಿನ್ನ ನಿರ್ಭೀತ ನಡಿಗೆ
ಬರೆದ ಒಂದೊಂದರಲೂ ಬಿಂಬಿಸಿದ
ತನುಮನ ಕನಸುಗಳ ಶಿವನೊಸಗೆ
ಚನ್ನಮಲ್ಲನನರಸಿದ ಕೇಶಾಂಬರೆ
ಅಲ್ಲಮನ ಪ್ರಶ್ನೆಗುತ್ತರಿಸಿದ ಧೀರೆ
ಒಳತೋಟಿಗಳನೆಲ್ಲ ಒಡಲೊಳಗಿಟ್ಟು
ಮೊರೆಯಿಡುವ ದಾರಿ , ಧ್ಯಾನಸ್ಥ ಗಳಿಗೆ
ಸದಭಿಮಾನ ಸಮತೆಯ ಅರಮನೆ
ಕಟ್ಟುತ ನೆಮ್ಮದಿಯ ಉಸಿರನಾಡಲು
ಹೊರಟ ಎಲ್ಲ ಹೆಂಗಳೆಯರಲಿ ನೀನಿರುವೆ ;
ನಿನ್ನ ಅರ್ಥ ಮಾಡಿಕೊಂಡ ನಾನಿರುವೆ !
ಶಿಕಾರಿಪುರ ತಾಲೂಕಿನ ಉಡುತಡಿಯಲಿ 78 ಅಡಿ
ಎತ್ತರದ ಇಷ್ಟಲಿಂಗ ಹಿಡಿದು ಧ್ಯಾನಸ್ಥಳಾದ
ಅಕ್ಕಮಹಾದೇವಿ ಪ್ರತಿಮೆ ಅನಾವರಣಗೊಂಡಾಗ !
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಬರೆಹ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
ಚಂದದ ಸಾಲುಗಳ ಸುಂದರ ಕವಿತೆ. ಅಕ್ಕನ ಹಿರಿಮೆಯೊಟ್ಟಿಗೆ ಕೊನೆಯ ಸಾಲುಗಳ ವಿಶಾಲ ಮನೋಭಾವ ಮನ ಮುಟ್ಟಿತು. ಅಭಿನಂದನೆಗಳು.
ಒಮ್ಮೆ ಭೇಟಿ ನೀಡಿ ೭೮ ಅಡಿ ಎತ್ತರದ ಇಷ್ಟಲಿಂಗ ಹಿಡಿದು ಧ್ಯಾನಸ್ಥಳಾದ ಅಕ್ಕಮಹಾದೇವಿ ಪ್ರತಿಮೆಯನ್ನು ನೋಡುವಾಸೆ ಸರ್.
ಹೋಗಿ ಬನ್ನಿ…..
ಧೀಮಂತಿಕೆಯ ಭವ್ಯತೆಗೆ ಉಪಮೆಯದು.
ಅಕ್ಕನ ಅಸ್ಮಿತೆಗೆ ಹಿಡಿದ ಅಗಾಧ ಬಿಂಬವದು !
ಅಕ್ಕನ ವ್ಯಕ್ತಿತ್ವದ ಅನಾವರಣದ …ಅರ್ಥಪೂರ್ಣ ಕವನ..ಸೊಗಸಾಗಿ ಮೂಡಿಬಂದಿದೆ ಸಾರ್..ಧನ್ಯವಾದಗಳು.
ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿದೆ ಸರ್
ಧನ್ಯವಾದಗಳು ಸರ್
Nice
ಸೊಗಸಾದ ಕವನ.
ಅಕ್ಕ ಮಹಾದೇವಿಗೆ ನಮನ ಸಲ್ಲಿಸುವ ಕವನ ಚೆನ್ನಾಗಿದೆ.