ಪೌರಾಣಿಕ ಕತೆ

ವ್ಯಾಕರಣ ಶಾಸ್ತ್ರಕಾರ ಪಾಣಿನಿ

Share Button

ಮನುಜನಿಗೆ ಭೂಮಿಯಲ್ಲಿ ಆಗುವ ಮದುವೆಗೆ ; ಗಂಡಿಗೆ ಹೆಣ್ಣು ಯಾರು, ಹೆಣ್ಣಿಗೆ ಗಂಡು ಯಾರು? ಎಂಬುದಾಗಿ ಭೂಮಿಗೆ ಬರುವ ಮೊದಲೇ ನಿರ್ಣಯಿಸಲ್ಪಡುತ್ತದೆಯಂತೆ. ಹಾಗೆಂದು ಪ್ರಾಯ ಬಂದ ಮಕ್ಕಳಿಗೆ ಹಿರಿಯರು ನೋಡಿ ಮಾಡುವುದನ್ನು ಕಾಣುತ್ತೇವೆ. ಮಕ್ಕಳಿಗೆ ಸಂಗಾತಿ ಯಾರೆಂದು ಅನ್ವೇಷಣೆ ಮಾಡಿ ಕುಲಗೋತ್ರ ವಿಚಾರಿಸಿ  ಕೂಡಿ ಬಂದರೆ ವಿವಾಹ ಮಾಡುವುದು ಹೆತ್ತವರ ಕರ್ತವ್ಯವಲ್ಲವೇ?.

ಕೆಲವೊಮ್ಮೆ ಈ ಹುಡುಕಾಟವು ದೀರ್ಘ ಸಮಯ ತೆಗೆದುಕೊಳ್ಳುವುದು ಕಾಣುತ್ತೇವೆ. ಎಷ್ಟು ಹುಡುಕಿದರೂ ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ಸಿಗಲು ಕಷ್ಟವಾಗಿ ಬಿಡುತ್ತದೆ!.ಹೀಗಾದಾಗ ಕುಲದೇವರಲ್ಲಿ ಪ್ರಾರ್ಥಿಸಿ, ಬೇಡಿಕೊಳ್ಳುವುದನ್ನು ಕಾಣುತ್ತೇವೆ. ಮದುವೆಗೆ ಕಾಲಕೂಡಿ ಬರಲು  ‘ಸ್ವಯಂವರ ಪಾರ್ವತಿ’ ಪೂಜೆ ಮಾಡಿದರೆ; ಇಷ್ಟಾರ್ಥ ಈಡೇರುವುದೆಂದು ಬಲವಾದ ನಂಬಿಕೆ ಇದೆ. ವಿವಾಹವಾದ ಮೇಲೆ ಮಕ್ಕಳಾಗುವುದು ಸಹಜ ಕ್ರಿಯೆ. ಆದರೆ ವಿವಾಹ ಆದವರಿಗೆಲ್ಲ ಮಕ್ಕಳಾಗುವುದೂ ಇಲ್ಲ. ಮಕ್ಕಳಾದವರೆಲ್ಲರೂ ಲೋಕ ಪ್ರಸಿದ್ಧರಾಗುವುದೂ ಇಲ್ಲ.  ಲೋಕಮಾನ್ಯರೆನಿಸುವ ಸಮಾಜ ಗುರುತಿಸುವ ಮಕ್ಕಳಾಗಬೇಕಾದರೆ; ಹಿರಿಯರಿಂದಲೇ ಬಂದ ಸುಕೃತ ಫಲ ಬೇಕು.ಹಾಗೆಯೇ ಮಕ್ಕಳಲ್ಲಿ ಲೋಕ ಗುರುತಿಸುವ ಗುರಿ ಸಾಧಿಸುವ ಛಲವೂ ಬೇಕು.

ಹೀಗೆ ಪತಿ-ಪತ್ನಿಯರು ಜಗನ್ಮಾತೆಯಾದ ಪಾರ್ವತಿಯನ್ನು ಪೂಜಿಸುವರು. ಇಂತಹ  ಪುತ್ರನು ದೇವಿಯ ಅನುಗ್ರಹದಿಂದ ಗೃಹಸ್ಥನೆನಿಸಿ, ಲೋಕ ಮಾನ್ಯ ವ್ಯಾಕರಣಕಾರನೆನಿಸಿ, ಅಗ್ರಗಣ್ಯನೆನಿಸಿಕೊಳ್ಳುವನು. ಅವನೇ  ‘ಪಾಣಿನಿ‘ ಮಹರ್ಷಿ.

ಸರ್ವಶಾಸ್ತ್ರ ಪಾರಂಗತನಾದ ಪಿತೃಶರ್ಮನೆಂಬ ಬ್ರಾಹ್ಮಣನಿದ್ದನು. ಈತನು ತಾರುಣ್ಯಕ್ಕೆ ಬಂದಾಗ ತನಗೆ ಮದುವೆಯಾಗಿ ಗೃಹಸ್ಥನಾಗಬೇಕೆಂಬ ಅಭಿಲಾಶೆ ಉಂಟಾಯಿತು. ಆದರೆ ಆತನಿಗೆ ಮದುವೆಮಾಡುವ ಹಿರಿಯರು ಯಾರೂ ಇರಲಿಲ್ಲ. ಯೋಗ್ಯ ಕನ್ಯೆಯನ್ನು ಹುಡುಕುವುದರಲ್ಲಿ ಸೋತನು. ಕೊನೆಗೆ ಪಾರ್ವತಿ ದೇವಿಯ ಮೊರೆಹೊಕ್ಕು ಏಕೋಧ್ಯಾನದಿಂದ ಕೆಲಕಾಲ ಸ್ತುತಿಸಿದನು. ಪಿತೃಶರ್ಮನ ನಿರಂತರ ಭಕ್ತಿಗೆ ಮೆಚ್ಚಿ ಪಾರ್ವತಿ ಪ್ರತ್ಯಕ್ಷಳಾದಳು. ದೇವಯು “ನಿನ್ನ ಪ್ರಾರ್ಥನೆ ಏನು?” ಎಂದು ಕೇಳಿದಳು. “ಅಮ್ಮಾ ನಾನು ವಿವಾಹವಾಗಬೇಕು. ಆಕೆ ನನ್ನ ಹಾಗೂ ನಾಡಿನ ಶ್ರೇಯಸ್ಸನ್ನು ಪರಿಗಣಿಸಿ ಬೆಳಗುವಂತಹ ಉತ್ತಮ ಕನ್ಯೆ ಆಗಿರಬೇಕು. ಇಂತಹ ತ್ಯಾಗಮಯಿಯಾದ ಹೆಣ್ಣನ್ನು ಹುಡುಕಿಕೊಡು ತಾಯೇ” ಎಂದು ಬೇಡಿಕೊಂಡನು.

ಆಗ ಜಗನ್ಮಾತೆಯು  ಇಂತೆಂದಳು. “ಪುತ್ರಾ ನೀನು ವರಿಸಬಲ್ಲಂತಹ ಹೆಣ್ಣನ್ನು ನಾನೀಗಾಗಲೇ ಹುಡುಕಿ ಇಟ್ಟಿದ್ದೇನೆ. ನೀನು ಕಾಶಿಗೆ ಹೋಗು.ಅಲ್ಲಿ  ‘ವಿಷ್ಣುಯಶ’ನೆಂಬ ಬ್ರಾಹ್ಮಣನಿದ್ದಾನೆ. ಆತನ ಮಗಳನ್ನು ವಿವಾಹವಾಗು ಮುಂದೆ ನಿನಗೆ ಒಳ್ಳೆಯದಾಗುವುದು” ಎಂದು ಹೇಳಿ ದೇವಿ ಅಂತರ್ಧಾನಳಾದಳು. ವಿಷ್ಣು ಶರ್ಮ ಕಾಶಿಯೆಡೆಗೆ ಪ್ರಯಾಣ ಬೆಳೆಸಿದನು. ಕಾಶಿಯಲ್ಲಿ ‘ವಿಷ್ಣುಯಶ’ನಲ್ಲಿ  ವಿಷಯವನ್ನೆಲ್ಲ ಅರುಹಿದನು. ವಿಷಯ ತಿಳಿದ  ‘ವಿಷ್ಣು ಯಶ’ನು ಸಂತೋಷದಿಂದ ತನ್ನ ಮಗಳನ್ನು ಧಾರೆಯೆರೆದು ಕೊಡಲು ಒಪ್ಪಿದನು. ಮುಂದೆ ಸಡಗರ ಸಂಭ್ರಮದಿಂದ ತನ್ನ ಮಗಳನ್ನು ಧಾರೆಯರೆದು ಕೊಟ್ಟನು.

‘ವಿಷ್ಣುಯಶ’ನ ಮಗಳು ‘ಪ್ರಮದ್ವರೆ’  ‘ಪಿತೃ ಶರ್ಮ’ನ ಮಡದಿಯಾದಳು. ರೂಪಸಿಯೂ ಗುಣವತಿಯೂ ಆದ ಪ್ರಮದ್ವರೆಯೊಂದಿಗೆ ದಾಂಪತ್ಯದ ಫಲವಾಗಿ ಅವರಿಗೆ ಒಬ್ಬ ಮಗ ಜನಿಸಿದನು.ಅವನಿಗೆ ‘ಪಾಣಿನಿ’ ಎಂಬ ಹೆಸರನ್ನಿಟ್ಟು ಕರೆದನು. ಪಾಣಿನಿಗೆ ಪಿತೃಶರ್ಮನು ಯೋಗ್ಯ ಗುರುಗಳಲ್ಲಿ ವಿದ್ಯಾಭ್ಯಾಸ ಕೊಡಿಸಿದನು.ಆದರೂ ಪಿತೃಶರ್ಮನಿಗೆ ತನ್ನ ಮಗನು ಲೋಕ ಪ್ರಸಿದ್ಧನಾದ ಯೋಗ್ಯ ಪಾಂಡಿತ್ಯ ನೆನಿಸದಂತೆ ಕಾಣಲಿಲ್ಲ. ಪಿತೃಶರ್ಮನಿಗೆ ತನ್ನ ಮಗನ ಚಿಂತೆಯೇ ಇತ್ತು.

ಒಂದು ದಿನ ಜಣಾಧರ ಎಂಬ ಮುನಿಯಲ್ಲಿ ವಾದವನ್ನು ಮಾಡಿ ಪಾಣಿನಿಯು ಸೋತನು. ಇದರಿಂದ ಪಿತೃಶರ್ಮನಿಗೆ ಖೇದ ಉಂಟಾಯಿತು. ಅದರಿಂದ ಅವಮಾನಿತನಾದ ಪಾಣಿನಿಯು ತೀರ್ಥಾಟನೆಗೆ ತೆರಳಿದನು. ಇತ್ತ ಪಿತೃಶರ್ಮನು ತನ್ನ ಮಗನ ಶ್ರೇಯೋಭಿವೃದ್ಧಿಗಾಗಿ  ಪಾರ್ವತಿ ದೇವಿಯಲ್ಲಿ ತಪಸ್ಸು ಮಾಡಿದರೆ; ಅತ್ತ  ಪಾಣಿನಿಯು  ಮಾನಸ ಸರೋವರದಲ್ಲಿ ಮಿಂದು ಮಹಾದೇವನನ್ನು ಮನಸಾ ಪ್ರಾರ್ಥಿಸಿದನು‌. ಮಹಾದೇವನು ಮೆಚ್ಚಿ ಪಾಣಿನಿಗೆ ವರಗಳನ್ನಿತ್ತನು.

ಶಿವನ ಒಲುಮೆಯಿಂದ ಸಂಸ್ಕೃತದ ವ್ಯಾಕರಣ ಸೂತ್ರಗಳಾದ  ‘ಮಾಹೇಶ್ವರ ಸೂತ್ರಗಳು’ ಎಂಬುದು  ಪಾಣಿನಿಗೆ ಸಿದ್ಧಿಸಿತು. ಸಂಸ್ಕೃತದ ವ್ಯಾಕರಣ ಸೂತ್ರಕಾರನಾದ ಈತನು ಲೋಕದಲ್ಲಿ ಅಗ್ರಗಣ್ಯನಾದನು.ಲೋಕದಲ್ಲಿ ಸಂಸ್ಕೃತ ಸಾಹಿತ್ಯ ಇರುವಷ್ಟು ಕಾಲವೂ ಪಾಣಿನಿಯ ಹೆಸರು ಚಿರಸ್ಥಾಯಿಯಾಯಿತು.

ಒಮ್ಮೆ ಮಗಧ ದೇಶದ ರಾಜನು ಪಾಣಿನಿಯನ್ನು ಬರಮಾಡಿಕೊಂಡು ‘ಶ್ರೇಷ್ಠವಾದ ಬ್ರಹ್ಮಚರ್ಯೆ ಯಾವುದು?’ ಎಂಬ ಪ್ರಶ್ನೆಯನ್ನು ಮುಂದಿಟ್ಟನು.

ಅದಕ್ಕೆ ಪಾಣಿನಿಯು ಉದಾತ್ತ  ‘ಸ್ವರಿತ ‘ ಸ್ವರಗಳಿಂದ ಬ್ರಹ್ಮನನ್ನು ಆರಾಧಿಸುವವನೇ  ‘ಶ್ರೇಷ್ಠ ಬ್ರಹ್ಮಚಾರಿ’ ಎಂದು ಪ್ರತಿಪಾದಿಸಿದನು.  ಮಗಧಾದಿಪತಿಯು ಪಾಣಿನಿಗೆ ಸಾಷ್ಟಾಂಗ ವಂದಿಸಿದ್ದಲ್ಲದೆ ಆತನ ಶಿಷ್ಯನಾದನು. ಪಾಣಿನಿಯ ವಿದ್ವತ್ ಎಲ್ಲೆಡೆ ಪಸರಿಸಿತು.

-ವಿಜಯಾಸುಬ್ರಹ್ಮಣ್ಯ ಕುಂಬಳೆ

5 Comments on “ವ್ಯಾಕರಣ ಶಾಸ್ತ್ರಕಾರ ಪಾಣಿನಿ

  1. ಪ್ರಕಟಿಸಿದ ಅಡ್ಮಿನ್ ಹೇಮಮಾಲ ಹಾಗೂ ಓದುಗರಿಗೆ ಕೃತಜ್ಞತೆಗಳು.

  2. ವ್ಯಾಜರಣ ಶಾಸ್ತ್ರಕಾರವಪಾಣಿನಿ ಕಥೆ ಚೆನ್ನಾಗಿ ಮೂಡಿಬಂದಿದೆ ಮರೆತ ಪುರಾಣಕಥೆಗಳನ್ನು ನೆನಪಿಸುವಂತೆ ಮಾಡುವ ನಿಮಗೆ ಧನ್ಯವಾದಗಳು.. ವಿಜಯ ಮೇಡಂ.

  3. ಪಾಣಿನಿ ಶ್ರೇಷ್ಠ ಸಂಸ್ಕೃತ ವ್ಯಾಕರಣಕಾರ ಎಂದು ಮಾತ್ರ ತಿಳಿದಿತ್ತು. ವಿವರಣಾತ್ಮಕ ಲೇಖನಕ್ಕಾಗಿ ಅಭಿನಂದನೆಗಳು.

  4. ಮಹಾನ್ ವ್ಯಾಕರಣ ಪಂಡಿತನಾದ ಪಾಣಿನಿಯ ಕಥೆ ಬಹಳ ಚೆನ್ನಾಗಿದೆ

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *