ವಾಟ್ಸಾಪ್ ಕಥೆ 14 : ಸತತ ಪ್ರಯತ್ನ.
ಒಂದು ಗೌಳಿಗರ ಮನೆ. ಸಾಕಷ್ಟು ಹಸುಗಳನ್ನು ಸಾಕಿದ್ದರು. ಹೆಚ್ಚು ಪ್ರಮಾಣದಲ್ಲಿ ಹಾಲನ್ನು ಉತ್ಪಾದಿಸುತ್ತಿದ್ದರು. ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದ ರೀತಿಯಲ್ಲಿ ಹಾಲಿನ ಪದಾರ್ಥಗಳನ್ನು ಗ್ರಾಹಕರಿಗೆ ಮಾರಿ ಸಂಪಾದನೆ ಮಾಡುವುದು ಅವರ ಕಸುಬಾಗಿತ್ತು.
ಒಂದು ದಿನ ಹೆಚ್ಚು ಪ್ರಮಾಣದ ಹಾಲನ್ನು ಹದವಾಗಿ ಕಾಯಿಸಿ ಆರಿಸಿ ದೊಡ್ಡ ಬಾಯಿಯ ಪಾತ್ರೆಯೊಂದರಲ್ಲಿ ಹೆಪ್ಪು ಹಾಕಿಟ್ಟಿದ್ದರು.
ಅಕಸ್ಮಾತ್ತಾಗಿ ಕೊಟ್ಟಿಗೆ ಸೇರಿದ್ದ ಎರಡು ಕಪ್ಪೆಗಳು ಕತ್ತಲಲ್ಲಿ ಹಾರುತ್ತಾ ಒಳಗೆ ಬಂದವು. ಗೊತ್ತಾಗದೆ ಹೆಪ್ಪು ಹಾಕಿದ್ದ ಹಾಲಿನ ಪಾತ್ರೆಯೊಳಗೆ ಬಿದ್ದು ಬಿಟ್ಟವು. ಅಲ್ಲಿಂದ ಮೇಲೆ ಹತ್ತಿ ಹೊರಕ್ಕೆ ಹತ್ತಿ ಬರಲು ತೀವ್ರ ಪ್ರಯತ್ನ ಮಾಡಿದವು. ಆದರೆ ಹಾಲಿನಿಂದ ತೊಯ್ದಿದ್ದ ಅವುಗಳ ಕಾಲುಗಳು ಜಾರತೊಡಗಿದ್ದವು. ಪಾತ್ರೆಯ ಕಂಠವು ಎತ್ತರದಲ್ಲಿತ್ತು. ಅಲ್ಲಿಯವರೆಗೆ ಎಷ್ಟು ಪ್ರಯತ್ನಪಟ್ಟರೂ ನೆಗೆಯಲು ಆಗಲಿಲ್ಲ. ಭಯದಿಂದ ಹಾಲಿನಲ್ಲೇ ಈಜಾಡತೊಡಗಿದವು. ಒಂದು ಕಪ್ಪೆ ”ಅಯ್ಯಪ್ಪಾ ! ನನ್ನಿಂದ ಇನ್ನು ಈಜಲೂ ಆಗುತ್ತಿಲ್ಲ. ಕಾಲುಗಳು ಸುಸ್ತಾಗಿವೆ”. ”ಎಂದು ತಟಸ್ಥವಾಗಿ ಹಾಲಿನಲ್ಲಿಯೇ ಮುಳುಗಿತು. ಸ್ವಲ್ಪ ಹೊತ್ತಿನಲ್ಲಿಯೇ ಅದು ಪ್ರಾಣಬಿಟ್ಟಿತು. ಇನ್ನೊಂದು ಕಪ್ಪೆ ಮಾತ್ರ ಭರವಸೆಯನ್ನು ಕಳೆದುಕೊಳ್ಳದೆ ಸತತವಾಗಿ ಕಾಲು ಬಡಿದು ಈಜಾಡುತ್ತಲೇ ಇತ್ತು.
ಹೀಗೇ ಬಹಳ ಕಾಲವಾದ ಮೇಲೆ ಹೆಪ್ಪಾಗಿದ್ದ ಮೊಸರು ಕಡೆದಂತಾಗಿ ಅದರಿಂದ ಬೆಣ್ಣೆ ಉತ್ಪತ್ತಿಯಾಯಿತು. ಕಪ್ಪೆಯ ಚಲನೆಯಿಂದ ಅದು ಸುತ್ತುತ್ತಾ ಒಟ್ಟುಗೂಡಿ ಒಂದು ಮುದ್ದೆಯಾಗಿ ತೇಲಿತು. ಕಪ್ಪೆ ಅದನ್ನು ನೋಡಿತು. ಏನೋ ಹೊಳೆದಂತಾಗಿ ತನ್ನ ಒಂದು ಕಾಲನ್ನು ಆ ಮುದ್ದೆಯ ಮೇಲಿಟ್ಟು ಸಾಧ್ಯವಾದಷ್ಟೂ ಜೋರಾಗಿ ಪಾತ್ರೆಯಿಂದ ಹೊರಕ್ಕೆ ನೆಗೆಯಿತು. ಅದ್ರಷ್ಟವಶಾತ್ ಅದರ ಬಾಯಿಯಿಂದ ಹೊರಕ್ಕೆ ಬಿದ್ದಿತು. ಅಂತೂ ಸತತ ಪ್ರಯತ್ನದಿಂದ ತನ್ನ ಜೀವ ಉಳಿಸಿಕೊಂಡಿತು.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಯತ್ನಕ್ಕೆ ಒಳ್ಳೆಯ ಉದಾಹರಣೆ.
ಉತ್ತಮ ಸಂದೇಶವುಳ್ಳ ಕಥೆ
ಧನ್ಯವಾದಗಳು ವಿಜಯಾ ಮೇಡಂ
ನಿರಂತರ ಪ್ರಯತ್ನ ಯಶಸ್ಸಿಗೆ ದಾರಿ ಎಂಬ ನೀತಿಯನ್ನು ಬಿಂಬಿಸುವ ಕಥೆ ತುಂಬಾ ಚೆನ್ನಾಗಿದೆ. ಆದರೂ ಅಷ್ಟೊಂದು ಮೊಸರು ದಂಡವಾಯಿತಲ್ಲಾ, ಮುಚ್ವಿ ಯಾಕೆ ಇಟ್ಟಿರಲಿಲ್ಲಾ ಎಂದು ಆತಂಕವಾಯಿತು.
ಧನ್ಯವಾದಗಳು ನಯನ ಮೇಡಂ
ಅಪಾಯವನ್ನು ಜಯಿಸಲು ಸತತ ಪ್ರಯತ್ನ ಅಗತ್ಯವೆಂಬ ಸಂದೇಶ ಹೊತ್ತ ಪುಟ್ಟ ಕಥೆ ಚೆನ್ನಾಗಿದೆ ಮೇಡಂ. ರೇಖಾಚಿತ್ರ ಎಂದಿನಂತೆ ಸೂಪರ್.
ಧನ್ಯವಾದಗಳು ಪದ್ಮಾ ಹಾಗೂ ಶಂಕರಿ ಮೇಡಂ