ನಾನಾಗ ಬಯಸುವ ರಾಮಾಯಣದ ಪಾತ್ರ

Share Button

ಪತ್ರಂ ಪುಷ್ಪಂ ಫಲಂ ತೋಯಂ
ಯೋ ಮೇ ಭಕ್ತ್ಯಾ ಪ್ರಯಚ್ಛತಿ
ತದಹಂ ಭಕ್ತ್ಯುಪಹೃತಮಶ್ನಾಮಿ
ಪ್ರಿಯತಾತ್ಮನಃ

ಭಗವದ್ಗೀತೆಯ ಅಧ್ಯಾಯ 9 ಶ್ಲೋಕ  26 ರಲ್ಲಿ ಭಗವಂತ ಹೀಗೆ ಹೇಳುತ್ತಾನೆ “ಭಕ್ತಿಯಿಂದ ಒಂದು ಎಲೆ ಹೂವು ಫಲ ಏನನ್ನಾದರೂ ಸರಿ ಸಮರ್ಪಿಸಿದರೆ ಸಾಕು ನಾನು ಸಂತುಷ್ಟನಾಗುತ್ತೇನೆ”.  ಇಲ್ಲಿ ಆಡಂಬರ ಡಾಂಬಿಕತೆ ಬೇಡವೇ ಬೇಡ . ನಿಷ್ಕಲ್ಮಶ ಪ್ರೀತಿ ಇದ್ದರೆ ಸಾಕು.  ರಾಮಾಯಣದ ಶಬರಿಯ ಕಥೆ ಇದಕ್ಕೆ ಸಮಂಜಸ ದೃಷ್ಟಾಂತ.  ನಿಷಧವೆಂಬ ಬೇಡರ ಕುಲದ ರಾಜ ಶಬರನ ಮಗಳು ಶಬರಿ . ಅವಳಮದುವೆಯ ಮುನ್ನಾದಿನ ಔತಣಕ್ಕೆಂದು ತಂದಿರಿಸಿದ ಬಲಿಯ ಪ್ರಾಣಿಗಳನ್ನು ಕಂಡು ಮನಕರಗಿ ನೊಂದು
ತನ್ನ ಮನೆಯನ್ನೇ ತೊರೆದು ಕಾಡಿನಲ್ಲಿ ಅಲೆಯುತ್ತಿರುತ್ತಾಳೆ.  ಮಾತಂಗ ಮಹರ್ಷಿಗಳ ಆಶ್ರಮ ತಲುಪಿ ಅವರ ಸೇವೆಯನ್ನು ಮಾಡುತ್ತಾ ದಿನ ಕಳೆದಿರುತ್ತಾಳೆ.  ಮಾತಂಗರು ತಮ್ಮ ಕೊನೆಗಾಲದಲ್ಲಿ ಅವಳಿಗೆ ರಾಮನು ಈ ಆಶ್ರಮಕ್ಕೆ ಬಂದು ನಿನಗೆ ದರ್ಶನಕೊಟ್ಟು ಸಾಯುಜ್ಯವೀಯುತ್ತಾನೆಂದು ತಿಳಿಸುತ್ತಾರೆ. ಬೆನ್ನು ಬಾಗಿ ಹಣ್ಣುಹಣ್ಣು ಮುದುಕಿಯಾಗುವವರೆಗೂ ರಾಮನ ಪ್ರತೀಕ್ಷೆಯಲ್ಲಿ ಇದ್ದವಳಿಗೆ ಒಂದು ದಿನ ಆ ಪುರುಷೋತ್ತಮನ ದರ್ಶನಭಾಗ್ಯ ಲಭಿಸುತ್ತದೆ . ರುಚಿನೋಡಿ ಮಧುರವಾದ
ಹಣ್ಣುಗಳನ್ನು ಮಾತ್ರ ಅವನಿಗಿತ್ತ ಆ ನಿಷ್ಕಪಟ ಪ್ರೀತಿಗೆ ರಾಮ ಕರಗುತ್ತಾನೆ .ಅವಳು ಬಯಸಿದ ಚಿರಶಾಂತಿಯ ವರ ಕೊಡುತ್ತಾನೆ. ಅಗ್ನಿ ಪ್ರವೇಶಿಸುವಾಗ ಆ ಜರಾ ವೃದ್ಧೆಯು ಯೌವನದ ತರುಣಿಯಾಗಿ ಸಾಲಂಕೃತ ರೂಪದಿಂದ ಬ್ರಹ್ಮ ಸಾಯುಜ್ಯ ಹೊಂದುತ್ತಾಳೆ.

ಚಿಕ್ಕವಳಿದ್ದಾಗ ಪ್ರೈಮರಿ ಶಾಲೆಯಲ್ಲಿ “ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು” ಎಂಬ ಪದ್ಯ ಓದಿದಾಗಲೆಲ್ಲ ಆ ಭಕ್ತಿಯ ಪರಾಕಾಷ್ಠತೆಯ ಅರಿವಾಗದಿದ್ದರೂ ಕುತೂಹಲ ಹುಟ್ಟಿಸಿದಾಕೆ ಶಬರಿ.  ಎಲ್ಲಿಯ ಬೇಡ ಕುಲ? ಎತ್ತಣ ರಾಮ ಪ್ರಸಾದಿತ ಸಾಯುಜ್ಯ?  ಈ ಎರಡೂ ವೈಪರೀತ್ಯಗಳ ಮಧ್ಯೆ ಆಧ್ಯಾತ್ಮಿಕ ಬಲ ಹೊಂದಿ ಸಾಧನೆಯ ಪಥದಲ್ಲಿ ಸಾಗಿದವಳು ಶಬರಿ. ಆ ಮುಗ್ಧತೆ,  ನಿರಾಡಂಬರತೆ ತನ್ನ ಆರಾಧ್ಯದೈವದ ದರ್ಶನಕ್ಕಾಗಿ ತನು ಮನಗಳೆರಡೂ ದಣಿಸಿ ಕಾಯುವ ಪರಿ ಅನಾದೃಶ ಅಸದೃಶ. ಹಾಗಾಗಿಯೇ ಮಾತಂಗ ರಂಥ ಮಹರ್ಷಿಗಳಿಗೂ ಸಾಧ್ಯವಾಗದ ರಾಮದರ್ಶನ ಶಬರಿಗೆ ಲಭ್ಯವಾದದ್ದು.  ಪರಮಾತ್ಮ ನಿಜ ಭಕ್ತಿಗೆ ಒಲಿದು ಅವಳಿರುವಲ್ಲಿಗೆ ಬಂದು ಆತಿಥ್ಯ ಸ್ವೀಕರಿಸಿದ್ದು .ಇದನೆಲ್ಲ ನೆನೆದಾಗ ಮೈ ಜುಮ್ಮೆನ್ನುತ್ತದೆ .

ಅದೇ ಏಕಾಗ್ರತೆಯಿಂದ ನಾವು ಮನದಲ್ಲಿ ಧ್ಯಾನಿಸಿದಾಗ ವಾಂಛಿತಗಳು ಖಂಡಿತ ಕೈಗೆಟುಕುತ್ತವೆ ಎಂಬ ನಿತ್ಯಸತ್ಯದ ಅನಾವರಣವಾಗುತ್ತದೆ . ಪುತಿನರವರ ಶಬರಿ ಗೀತ ನಾಟಕವಂತೂ ಅಸೀಮ ಭಕ್ತೆಯ ಮನದಾಳದ ಪದರ ಪದರಗಳನ್ನು ಅನಾವರಣಗೊಳಿಸುತ್ತದೆ.  ಹಾಗಾಗಿ ರಾಮಾಯಣದ ಪಾತ್ರಗಳಲ್ಲೆಲ್ಲ ನನಗಿಷ್ಟವಾದವಳು ಶಬರಿ . ಅವಳ ಪಾತ್ರದಂತೆ ನಾನಾಗಿ ಆ ಪರಮಾತ್ಮನ ಪದತಲದಲಿ ವಿನೀತಳಾಗಿ ಸೇರಿ ಹೋಗುವ ಭಾಗ್ಯ ಸಿಕ್ಕರೆ ಸಾಕು ಪುನೀತವೀ ಜನ್ಮ.  ರಾಮಾಯಣ ದರ್ಶನಂನ ಈ ಸಾಲುಗಳೊಂದಿಗೆ ಮುಕ್ತಾಯ ಹಾಡುವೆ.

ಸೌಮಿತ್ರಿ ರಾಮರಂ ಸುಖಬಾಷ್ಪಂ ನೇತ್ರದಿಂ ನೋಡುತ್ತೆ
ನೋಡುತ್ತೆ ಕಣ್ಮುಚ್ಚಿದಳ್  ಆ ಅಮರ ಸನ್ಮಾನ್ಯೆ
ದೇವ ಸೀತಾನಾಥ ದಿವ್ಯಾಶ್ರು ತೀರ್ಥಜಲ
ಸಂಸ್ನಾತೆ, ಸಂಪೂತೆ, ಮೇಣ್ ಶಿವಕಳೇಬರೆ, ಧನ್ಯೆ!

-ಸುಜಾತಾ ರವೀಶ್ ,ಮೈಸೂರು.

11 Responses

  1. ಗೊತ್ತಿರುವ ಕಥೆಯಾದರೂ ಹೇಳಿರುವ ರೀತಿ ಮುದ ತಂದು‌ ಮೆಲಕುಹಾಕುವಂತಾಯಿತು…ಸೋದರಿ.

  2. Anonymous says:

    Very nice

  3. ಶಂಕರಿ ಶರ್ಮ says:

    ಯಾಕಾಗಿ ಶಬರಿ ಪಾತ್ರವಿಷ್ಟ ಎಂಬುದನ್ನು ಪುಷ್ಟೀಕರಿಸುವ ಲೇಖನ ಚೆನ್ನಾಗಿದೆ.

  4. H S VATHSALA says:

    ಶಬರಿಯ ಭಕ್ತಿ ಪರಾಕಾಷ್ಠತೆಯ ಬಗ್ಗೆ ಬೆಳಕು ಚೆಲ್ಲಿದ ಬರಹ
    ಮನಸಿಗೆ ತಂಪೆರೆಯಿತು.

  5. ನಯನ ಬಜಕೂಡ್ಲು says:

    ಶಬರಿಯ ಕಥೆ ವಿವರವಾಗಿ ಇವತ್ತೇ ಓದುತ್ತಿರುವುದು. ಚೆನ್ನಾಗಿದೆ.

  6. padmini kadambi says:

    ಚೆನ್ನಾಗಿದೆ

  7. Chaya says:

    ಭಕ್ತಿಯ ಉತ್ತಮ ಉದಾಹರಣೆ ಶಬರಿ.
    ಉತ್ತಮ ಲೇಖನ.

  8. ಶಬರಿಯ ಕಥೆ ಗೊತ್ತೇ ಇರಲಿಲ್ಲ
    ರಾಮನಿಗಾಗಿ ಕಾಯುತ್ತಿದ್ದ ಶಬರಿಯ ಪಾತ್ರ ಮಾತ್ರ ಗೊತ್ತಿತ್ತು
    ವಂದನೆಗಳು

  9. ವಿದ್ಯಾ says:

    ತುಂಬಾ ತುಂಬಾ ಚೆನ್ನಾಗಿದೆ

  10. Padma Anand says:

    ಅನನ್ಯ ಭಕ್ತಿಯ ಪರಾಕಾಷ್ಠಕ್ಕೇರಿದ್ದ ಶಬರಿಯ ಪಾತ್ರಚಿತ್ರಣದ ಸೊಗಸಾದ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: