ಜೂನ್ ನಲ್ಲಿ ಜೂಲೇ : ಹನಿ 15
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಕರ್ದೂಂಗ್ಲಾ ಪಾಸ್ ನಲ್ಲಿ ಆತಂಕದ ಕ್ಷಣಗಳು
ಪಾಕಿಸ್ತಾನದ ಗಡಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಿಸಿ, ಅಲ್ಲಿದ್ದ ಸೈನಿಕರಿಗೆ ವಂದಿಸಿ ಹಿಂತಿರುಗಿದೆವು. ಗೇಟ್ ನಲ್ಲಿ ಕೊಟ್ಟಿದ್ದ ನಮ್ಮ ಗುರುತಿನ ಚೀಟಿಗಳನ್ನು ಹಿಂಪಡೆದು ಲೇಹ್ ಗೆ ಪ್ರಯಾಣಿಸಿದೆವು. ಎತ್ತರದ ಬೆಟ್ಟಗಳನ್ನೇರಿ ಕರ್ದೂಂಗ್ಲಾ ಪಾಸ್ ದಾರಿಯಾಗಿ ಲೇಹ್ ಗೆ ಪ್ರಯಾಣಿಸಬೇಕಿತ್ತು. ಇಲ್ಲಿನ ಜನರ ಪರಸ್ಪರ ಸಹಾಯದ ಗುಣವನ್ನು ಗಮನಿಸಿದೆವು. ಮಾರ್ಗಮಧ್ಯೆ ಯಾವುದೋ ಹಳ್ಳಿಯಲ್ಲಿ ಇಬ್ಬರು ಮಹಿಳೆಯರು ನಮ್ಮ ವ್ಯಾನ್ ನಲ್ಲಿ ಸ್ಥಳವಿದೆಯೇ ಎಂದು ಕೇಳಿದರು. ಡ್ರೈವರ್ ನೊಬ್ರು ಇವರು ಬರಬಹುದೇ ಎಂದು ನಮ್ಮ ಅನುಮತಿ ಕೇಳಿದ. ಹಿಂದಿನ ಸೀಟು ಖಾಲಿ ಇದ್ದುದರಿಂದ ‘ಆಗಲಿ, ಅವರು ಬರಲಿ’ ಎಂದೆವು. ಅವರು ಆರಾಮವಾಗಿ ನಮ್ಮ ಜೊತೆಗೆ ಬಂದು, ಇನ್ಯಾವುದೋ ಹಳ್ಳಿಯಲ್ಲಿ ಇಳಿದರು. ಇನ್ನೊಂದು ಕಡೆ ನಿಂತಿದ್ದ ಒಂದು ಕಾರಿನ ಪಕ್ಕ ಒಬ್ಬಾತ ಕೈಯಲ್ಲಿ ಪೆಟ್ರೋಲ್ ಕ್ಯಾನ್ ಹಿಡಿದು ನಿಂತಿದ್ದ. ಆತನಿಗೆ ಇನ್ನೆಲ್ಲಿಗೋ ಆ ಪೆಟ್ರೋಲ್ ಅನ್ನು ಒಯ್ದು ಕೊಡಬೇಕಿತ್ತು. ಆತನೂ ಡ್ರೈವರ್ ನ ಬಳಿ ಮಾತನಾಡಿ ವ್ಯಾನ್ ಹತ್ತಿದ. ಮತ್ತೊಂದು ಕಡೆ ಬೈಕ್ ಸವಾರನೊಬ್ಬ ಕೆಸರು ರಸ್ತೆಯಲ್ಲಿ ಜಾರಿ ಬಿದ್ದಿದ್ದ. ಅದೃಷ್ಟವಶಾತ್ ಆತ ತನ್ನ ಎಡಗಡೆಗೆ ಪರ್ವತದ ಕಡೆಗೆ ಬಿದ್ದಿದ್ದ…ಬಲಗಡೆಗೆ ಆಗಿದ್ದರೆ, ಆತನ ಕುರುಹೂ ಸಿಗಲಾರದ ಪ್ರಪಾತವಿತ್ತು. ಉತ್ಸಾಹಿ ಯುವಜನರು ಮೌಂಟೇನ್ ಬೈಕಿಂಗ್ ಮಾಡುವುದೇನೋ ಸರಿ, ಆದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳೂ ಇವೆ. ಮಧ್ಯೆ ಮಧ್ಯೆ ಓಡಾಡುವ ಸೈನಿಕರು ತೊಂದರೆಗೆ ಸಿಲುಕಿದವರಿಗೆ ಸಹಾಯ ಮಾಡುತ್ತಾರೆ.
ಪ್ರಯಾಣ ಮುಂದುವರಿಯುತ್ತಿದ್ದಂತೆ ಸಂಜೆಯಾಗತೊಡಗಿತ್ತು. ಮಂಜು ಮುಸುಕಿದ್ದು ಕಿಟಿಕಿಯಿಂದ ಹೊರ ನೋಡಿದರೆ ಏನೂ ಕಾಣಿಸುತ್ತಿರಲಿಲ್ಲ. ಹತ್ತು ಅಡಿ ದೂರದ ರಸ್ತೆಯೂ ಕಾಣಿಸುತ್ತಿರಲಿಲ್ಲ . ಹಿಮಪಾತವೂ ಶುರುವಾಗಿತ್ತು. ಇಂತಹ ದಾರಿಯಲ್ಲಿಯೂ ನಮ್ಮ ಡ್ರೈವರ್ ನೋಬ್ರು ನಿರಾತಂಕವಾಗಿ ಗಂಟೆಗೆ ಕನಿಷ್ಟ 50 ಕಿ.ಮೀ ವೇಗದಲ್ಲಿ ವ್ಯಾನ್ ಚಲಾಯಿಸುತ್ತಿದ್ದ! ಆತನ ವಾಹನಚಾಲನಾ ಕೌಶಲಕ್ಕೆ ಸಲಾಂ! ನಮಗೆ ವಿಸ್ಮಯ.. ಆದರೆ ಹಿಮಾಲಯದ ಪರ್ವತಗಳಲ್ಲಿ ಬದುಕುವವರಿಗೆ ಅದು ಮಾಮೂಲಿ ವಿಚಾರ.
ಸಂಜೆ ಏಳುವರೆ ಗಂಟೆಯ ಸುಮಾರಿಗೆ ಅತಿ ಎತ್ತರದ ರಸ್ತೆ ಕರ್ದೂಂಗ್ಲಾ ಪಾಸ್ ಅನ್ನು ದಾಟಿ ನೂರು ಅಡಿ ದಾಟಿರಬಹುದಷ್ಟೆ. ಇದ್ದಕಿದ್ದಂತೆ ಡ್ರೈವರ್ ಕೆಳಗಿಳಿದು ‘ಬರ್ಬಾದ್ ಹುವಾ…ದೇರ್ ಹೋ ಜಾಯೇಗಾ‘ ಅಂದ. ನಮ್ಮ ವ್ಯಾನಿನ ಮುಂದೆ ಒಂದು ಕಾರು ನಿಂತಿತ್ತು. ಅಲ್ಲಿದ್ದ ಒಂದಿಬ್ಬರು ‘ ಅಭೀ ಪಾಂಚ್ ಮಿನಟ್ ಕೆ ಪಹಲೆ ಪತ್ಥರ್ ಗಿರ ಗಯಾ , ರಾಸ್ತಾ ಬಂದ್ ಹುವಾ.. ಆರ್ಮಿ ಲೋಗ್ ಕೋ ಬೋಲನಾ ಹೈ..” ಇತ್ಯಾದಿ ಮಾತನಾಡಿಕೊಳ್ಳುತ್ತಿದ್ದರು. ಕೇವಲ ಐದು ನಿಮಿಷಗಳ ಹಿಂದೆ ರಸ್ತೆಯ ಮೇಲೆ ಎತ್ತರದ ಬೆಟ್ಟದಿಂದ ಬೃಹದ್ಗಾತ್ರದ ಬಂಡೆ ಬಿದ್ದಿತ್ತು. ಅಕಸ್ಮಾತ್ ಆ ಸಮಯದಲ್ಲಿ ನಮ್ಮ ವ್ಯಾನ್ ಅಲ್ಲಿ ದಾಟುತ್ತಿದ್ದರೆ…. ವ್ಯಾನ್ ಮೇಲೆ ಆ ಬಂಡೆ ಬಿದ್ದಿರುತ್ತಿದ್ದರೆ ಏನೂ ಆಗಬಹುದಿತ್ತು….ಊಹಿಸಿಕೊಳ್ಳಿ! ಈ ಪ್ರವಾಸಕಥನ ಬರೆಯಲು ನಾನು ಬದುಕಿರುತ್ತಿರಲಿಲ್ಲ!
ಕರ್ದೂಂಗ್ಲಾ ಪಾಸ್ ನ ಭೌಗೋಳಿಕ ಲಕ್ಷಣದ ಪ್ರಕಾರ, ಮಳೆ ಬಂದರೆ ಸಮೀಪದ ಬೆಟ್ಟಗಳಿಂದ ಯಾವುದೇ ಸಮಯದಲ್ಲಿ ಕಲ್ಲುಗಳು ಉರುಳುತ್ತವೆ. ಹಾಗಾಗಿ ರಸ್ತೆಯನ್ನು ಬಂದ್ ಮಾಡುತ್ತಾರೆ. ಇಲ್ಲಿ ಹೀಗೆ ಕಲ್ಲು ಬೀಳುವುದು , ಕೆಲವೊಮ್ಮೆ ವಾಹನಗಳ ಮೇಲೆ ಬಿದ್ದು ಜನರು ಸಾಯುವುದು ಕೂಡ ಆಗಿಂದಾಗ್ಗೆ ಸಂಭವಿಸುವ ವಿಚಾರ.
ಹಿಮಾಲಯದಲ್ಲಿ ಇಂತಹ ಪರಿಸ್ಥಿತಿಯಲ್ಲಿ ನಮ್ಮ ದೇಶದ ಗಡಿಭದ್ರತಾ ಪಡೆಯ ಸೈನಿಕರು ಆಪತ್ಭಾಂಧವರು. ಹೇಗೋ ದಾರಿ ಮಾಡಿಕೊಂಡು ಟಿಪ್ಪರ್ , ಡೌಜರ್ ಇತ್ಯಾದಿ ಯಂತ್ರಗಳ ಸಮೇತ ಬರುತ್ತಿದ್ದಾರೆ ಎಂದು ಗೊತ್ತಾಯಿತು. ಜಗತ್ತಿನ ಅತ್ಯಂತ ಎತ್ತರದ ರಸ್ತೆಯಲ್ಲಿ, ಆಮ್ಲಜನಕ ಕಡಿಮೆ ಇರುವ ಕಡೆಯಲ್ಲಿ, ಚಳಿಯಲ್ಲಿ ನಡುಗುತ್ತಾ, ವ್ಯಾನ್ ನ ಒಳಗೇ ಕುಳಿತಿರುವ ಅನಿವಾರ್ಯತೆಯಲ್ಲಿ ಮೂರು ಗಂಟೆಗಳ ಕಾಲ ಕುಳಿತಿದ್ದೆವು. ಲೇಹ್ ನಲ್ಲಿ ಕೊಂಡಿದ್ದ ಯಾಕ್ ಮೃಗದ ಉಣ್ಣೆಯ ಶಾಲು ಇಲ್ಲಿ ಚೆನ್ನಾಗಿ ಉಪಯೋಗಕ್ಕೆ ಬಂತು. ‘ ನಿಮ್ಮ ಮುಂದಿನ ಪ್ರಯಾಣಕ್ಕೆ ಬೇಕಾಗುತ್ತದೆ, ಇಲ್ಲಿನ ಚಳಿಗೆ ನಿಮ್ಮ ಸ್ವೆಟರ್ ಸಾಲದು’ ಲೇಹ್ ನ ಅಂಗಡಿ ಮಾಲಿಕ ಹೇಳಿದಾಗ ಅದು ಅವರ ಮಾರ್ಕೆಟಿಂಗ್ ತಂತ್ರ ಎಂದು ಭಾವಿಸಿದ್ದರೂ, 750/- ರೂ ಕೊಟ್ಟು ಯಾಕ್ ಮೃಗದ ಉಣ್ಣೆಯ ಒಂದು ಶಾಲನ್ನು ಕೊಂಡಿದ್ದೆ. ಎರಡೂ ಬದಿ ಬೇರೆ ಬಣ್ಣ ಮತ್ತು ವಿನ್ಯಾಸ ಹೊಂದಿದ್ದ ಆ ಶಾಲಿನ ‘ಮೌಲ್ಯ’ ಕರ್ದೂಂಗ್ಲಾ ಪಾಸ್ ನಲ್ಲಿ ಚೆನ್ನಾಗಿ ಅರ್ಥವಾಯಿತು. ನಿಜಕ್ಕೂ ಮೈಯನ್ನು ಬೆಚ್ಚಗಿಡುತ್ತದೆ, ನೋಡಲೂ ಚೆನ್ನಾಗಿದೆ.
ಚಳಿಗೆ ಹೊದ್ದು ಸುಮ್ಮನೇ ವ್ಯಾನ್ ನಲ್ಲಿ ಕುಳಿತಿದ್ದೆವು. ರಸ್ತೆ ತೆರವಾಗುವ ವರೆಗೆ ನಾವು ಹೋಗಲಾಗುವುದಿಲ್ಲ. ಇಂದೇ ಬಂಡೆಯನ್ನು ಸರಿಸಬಹುದು, ನಾಳೆಯಾದರೂ ಆದೀತು, ಇನ್ನೊಂದು ಬಂಡೆಯೂ ಯಾವುದೇ ಕ್ಷಣದಲ್ಲಿ ಬೀಳುವಂತಿದೆ ಇತ್ಯಾದಿ ಮಾತುಗಳು ಹರಿದಾಡತೊಡಗಿದುವು.
ಡ್ರೈವರ್ ಹೋಟೆಲ್ ಗ್ಯಾಲಕ್ಸಿಯ ಮಾಲಿಕರಿಗೆ ವಿಷಯ ತಿಳಿಸಿ ನಾವು ಬರುವುದು ತಡವಾಗಬಹುದು ಎಂದು ತಿಳಿಸಿದ. ಇನ್ನು ರಾತ್ರಿಯೂಟ ಅನುಮಾನ ಎಂದುಕೊಂಡು , ನಮ್ಮ ಬಳಿಯಿದ್ದ ತಿಂಡಿ-ತಿನಿಸುಗಳನ್ನು ಹಂಚಿ ತಿಂದೆವು. ವ್ಯಾನ್ ನ ಒಳಗೇ ಕುಳಿತಿದ್ದೆವು, ಕೆಳಗೆ ಇಳಿಯೋಣ ಎಂದರೆ ಹಿಮಪಾತವಾಗುತ್ತಿತ್ತು. ಈ ನಡುವೆ ನಮ್ಮ ತಂಡದ ಎಳೆಯುವಕರು ಆಗಿಂದಾಗ್ಗೆ ವ್ಯಾನ್ ಹತ್ತಿ-ಇಳಿದು ಮಾಡುತ್ತಾ “ ಅಭೀ ಆರ್ಮಿ ಆ ರಹಾ ಹೈ.. ಡೌಜರ್ ಮಶಿನ್ ಹೇ ಪರಂತು ಇಸ್ಕಾ ಆಪರೇಟರ್ ನಹೀ ಹೈ….ಅರ್ಮೀ ಲೋಗ್ ಉಸ್ಕೊ ಬುಲ್ವಾಯೇಂಗೆ…. ಉಧರ್ ಸೇ ಭೀ ಟ್ರಾಫಿಕ್ ಜ್ಯಾಮ್ ಹೈ.. ಆಪರೇಟರ್ ಲೇಹ್ ಸೆ ಆನಾ ಹೈ…..ವೊ ಲೇಹ್ ಸೆ ಬೈಕ್ ಮೆ ಆ ರಹಾ ಹೈ.. .. ಅಭಿ ಟಿಪ್ಪರ್ ಆ ಗಯಾ..” ಇತ್ಯಾದಿ ವೀಕ್ಷಕ ವಿವರಣೆ ಕೊಡುತ್ತಾ ಭರವಸೆ ಮೂಡಿಸುತ್ತಿದ್ದರು.
ರಾತ್ರಿ 1030 ಗಂಟೆಗೆ ಸೈನಿಕರ ಕಾರ್ಯಾಚರಣೆಯಿಂದ ರಸ್ತೆ ತೆರವಾಯಿತು. ಆಪತ್ಭಾಂಧವರಿಗೆ ನಮೋ ನಮ: ! ನಂತರ ನಿರಾಳವಾಗಿ ಲೇಹ್ ಕಡೆ ನಮ್ಮ ವ್ಯಾನ್ ದೌಡಾಯಿಸಿತು. 12 ಗಂಟೆಗೆ ಹೋಟೆಲ್ ಗ್ಯಾಲಕ್ಸಿ ತಲಪಿದೆವು. ನಮ್ಮನ್ನು ಕಾಯುತ್ತಿದ್ದ ಹೋಟೆಲ್ ಮಾಲಿಕ ದಂಪತಿ ಗಿರಿ ಮತ್ತು ಝೋರಾ ಪ್ರತಿಯೊಬ್ಬರನ್ನೂ ಮೈದಡವಿಸಿ ‘ಆಯಿಯೇ..ಆಯಿಯೇ ಆಪ್ ಕೊ ಬಹುತ್ ಪರೇಶಾನ್ ಹುವಾ…..ಖಾನಾ ಕರಕೇ ಸೋ ಜಾಯೇ.’ ಅನ್ನುತ್ತಾ ಬಹಳ ಕಾಳಜಿಯಿಂದ ವಿಚಾರಿಸಿಕೊಂಡರು.
ಅಡುಗೆಯವರೂ ಕಾಯುತ್ತಿದ್ದರು .ಊಟ ಸಿದ್ದವಿತ್ತು. ಬೇಕಿದ್ದವರು ಸ್ವಲ್ಪ ಊಟ ಮಾಡಿದರು. ನಾವು ಬಿಸಿನೀರು ಕೇಳಿ ಕುಡಿದೆವು. ಅನ್ನವನ್ನು ವ್ಯರ್ಥ ಮಾಡುವುದು ಬೇಡ, ನಮಗೆ ನಾಳೆಯ ಉಪಾಹಾರಕ್ಕೆ ಇದರಲ್ಲಿ ಚಿತ್ರಾನ್ನ ಮಾಡಿಕೊಡಿರೆಂದು ಅಡುಗೆಯವರಿಗೆ ತಿಳಿಸಿ ನಿರಾತಂಕವಾಗಿ ನಿದ್ರಿಸಿದೆವು.
ಹೀಗೆ, ಜಗತ್ತಿನ ಅತ್ಯಂತ ಎತ್ತರದ ರಸ್ತೆಯಲ್ಲಿ, ಪ್ರತಿಕೂಲ ಪರಿಸ್ಥಿತಿಯಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದರೂ, ಅಪಾಯದಿಂದ ತಪ್ಪಿಸಿಕೊಂಡು ಬಂದ ಯಶೋಗಾಥೆ ನಮ್ಮದಾಯಿತು. ಸ್ಮರಣಾರ್ಹ ಅನುಭವವಿದು, ಅಕಸ್ಮಾತ್ 27 ಜೂನ್ 2018 ರಂದು ಏನಾದರೂ ‘ ಹೆಚ್ಚು ಕಡಿಮೆ’ ಆಗಿದ್ದರೆ, ನಮ್ಮನ್ನು ಇತರರು ‘ಸ್ಮರಿಸಿಕೊಳ್ಳುವಂತಾಗುತಿತ್ತು!’
(ಮುಂದುವರಿಯುವುದು..)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=37415
-ಹೇಮಮಾಲಾ, ಮೈಸೂರು
ಅಬ್ಬ….ಇದೇ ರೀತಿಯ ಅನುಭವ ಬದರಿನಾಥ ದಲ್ಲಿ ನಮಗಾಯಿತು.
ಇವತ್ತಿನ ಪ್ರವಾಸ ಕಥನ.. ನಿಜವಾಗಲೂ … ಅಗೋಚರ ಶಕ್ತಿ ಯ ರಕ್ಷಾ ಕವಚ…ಭೂಮಿಯ ಮೇಲಿನ ಋಣ..ಓದಿದಾಗ ಮೈ ನವಿರೇಳಿಸಿತು..ಅಚ್ಚು ಕಟ್ಟಾದ ವಿವರಣೆ..ಗೆಳತಿ.. ಧನ್ಯವಾದಗಳು..
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು
ಪೂರಕ ಚಿತ್ರಗಳೊಂದಿಗಿನ, ಸೊಗಸಾದ ನಿರೂಪಣೆಯ ಪ್ರವಾಸ ಲೇಖನ. ಇತ್ತೀಚೆಗಿನ ನಮ್ಮ ಚಾರ್ಧಾಮ್ ಪ್ರವಾಸದಲ್ಲಿ ಇಂತಹದೇ ಅನುಭವ ಆದುದುದನ್ನು ನೆನಪಿಸಿಕೊಂಡೆ!
ಮೈ ಜುಮ್ ಅನ್ನಿಸುವ ಘಟನೆ.
ನಮ್ಮ ಕಣ್ಣೆದುರಿಗೆ ನಡೆಯುತ್ತಿದೆ ಅನ್ನುವ ರೀತಿಯಲ್ಲಿ ಬಂದಿದೆ ನಿಮ್ಮ ಬರಹ .ಬಹಳ ಸ್ವಾರಸ್ಯವಾದ ಅನುಭವ ತುಂಬಾ ಚೆನ್ನಾಗಿದೆ.
ಮೈ ನವಿರೇಳಿಸಿದ ಕಥನ
ಪ್ರವಾಸಕಥನವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
Very well narrated..
Thank you very much.
ಮೈ ನವಿರೇಳಿಸುವ ಅನುಭವ ಕಥನ. ಇಂತಹ ಸಮಯದಲ್ಲಿಯೇ ದೇವರ ಅನುಗ್ರಹದ ಅಗತ್ಯತೆಯ ಅರಿವಾಗುವುದು. ನಮ್ಮನ್ನು ಕಾಯುವ ಗಡಿ ರಕ್ಷಣಾ ಪಡೆಯ ಸೈನಿಕರಿಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಸಾಲದು.