ಹಕ್ಕಿ ಹಾಡಲಿಲ್ಲ
ಸರದಿಯಲಿ ವರ್ಷಗಳು
ಸರಿದು ಹೋದವು
ನೆನಪ ಬಾಂದಳದಿಂದ ನೀ ಸರಿಯಲಿಲ್ಲ
ಹದಿವಯಸ ದಾರಿಯಲಿ
ಸವೆಸಿದೆವು ಹೆಜ್ಜೆಗಳ
ಹೃದಯ ತೋರಿದ ದಾರಿ ಗಮಿಸಲಿಲ್ಲ
ಬರೆದ ಬರಹಗಳಲ್ಲಿ
ಒಲವು ಹಲುಬಿದವು
ಮನಸ ಕವಿತೆಯ ನಿನಗೆ ಉಸುರಲಿಲ್ಲ
ಎನಿತೋ ಅಧ್ಯಾಯಗಳ
ಓದು ಮುಗಿಸಿದೆವು
ಮೊದಲ ಪಾಠದ ಸವಿಯು ಮಾಸಲಿಲ್ಲ
ಸುಗಮದಲಿ ಸಂಪದವು
ಬದುಕ ತುಂಬಿದವು
ನಿನ್ನ ಸ್ನೇಹದ ಸಿರಿಗೆ ಸಮವೆನಿಸಲಿಲ್ಲ
ಜವ್ವನದ ಬಿಸಿಯು
ಬಸಿದು ಹೋದವು
ನಾಮ ಜಪದೊಳ ಹಸಿತ ಹರಿಯಲಿಲ್ಲ
ಸಂಚಯದ ಆಸೆಗಳು
ನನಸಾಗಿ ಮೆರೆದವು
ನೀನೆಟುಕದ ನಿರಾಸೆ ಚಿರ ಉಳಿಯಿತಲ್ಲ
ಮೊದಲ ಮೋಹದೆರಕ
ಎದೆ ಗೂಡಲಿರಿಸಿಯೂ
ಜೀವಧರಿಸಿದ ಹಕ್ಕಿ ಹಾರಲಿಲ್ಲ ಹಾಡಲಿಲ್ಲ
– ಅನಂತ ರಮೇಶ್
ಅರ್ಥಪೂರ್ಣ ವಾದ..ಕವನ..ಚೆನ್ನಾಗಿದೆ.. ಸಾರ್
ಒಲವಿನ ನೋವಿನ ನಲಿವಿನ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ
Nice one
Nice one sir.
ಮನದ ಭಾವಗಳ, ನೋವು ನಲಿವುಗಳ ಏರಿಳಿತಗಳು ಮೂಡಿಬಂದ ಸಾಲುಗಳು ಚೆನ್ನಾಗಿವೆ.
ಸುಂದರ ಕವಿತೆ.