ರೇಡಿಯೋ-ನೆನಪುಗಳ ಸುತ್ತ
ಫೆಬ್ರವರಿ 13 ವಿಶ್ವ ರೇಡಿಯೋ ದಿನವಂತೆ! 2012 ರಿಂದ ಈ ದಿನಾಚರಣೆ ನಡೆಯುತ್ತಿದೆಯಂತೆ!
ಅಂದ ಹಾಗೆ ನಾನೀಗ ರೇಡಿಯೋ ಅಂದರೆ ಏನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆಯೆಂದು ಬರೆಯುವುದಿಲ್ಲ. ವಿಶ್ವ ರೇಡಿಯೋ ದಿನಾಚರಣೆ ಬಗ್ಗೆಯೂ ಬರೆಯುವುದಿಲ್ಲ. ಯಾಕೆಂದರೆ ಈಗ ಮೊಬೈಲ್ ಒಂದು ಕೈಯಲ್ಲಿ ಇದ್ದರೆ ಮುಗಿಯಿತು. ಅಲ್ಲಿ ಏನಿದೆ? ಏನಿಲ್ಲ? ಎಲ್ಲವೂ ಇದೆ. ರೇಡಿಯೋ, ದೂರದರ್ಶನ, ದೂರವಾಣ , ಗಣಕಯಂತ್ರ, ಕ್ಯಾಲ್ಕುಲೇಟರ್, ಕ್ಯಾಮೆರಾ, ಟಾರ್ಚ್, ಟೇಪ್ ರೆಕಾರ್ಡರ್/ಪ್ಲೇಯರ್, ವಿಡಿಯೋ ರೆಕಾರ್ಡರ್/ಪ್ಲೇಯರ್,….ಎಲ್ಲವೂ ಅದರೊಳಗೆ ಬಂಧಿ. ದೂರದರ್ಶನ ಸರ್ವವ್ಯಾಪಿಯಾಗುವ ಮೊದಲು ಚಾಲ್ತಿಯಲ್ಲಿದ್ದುದೇ ರೇಡಿಯೋ. ನಮ್ಮ ರಾಜ್ಯದಲ್ಲಿ, ದೇಶದಲ್ಲಿ, ಜಗತ್ತಿನಲ್ಲಿ ಏನೇನು ನಡೆಯುತ್ತದೆ ಎಂಬುದು ಗೊತ್ತಾಗಬೇಕಿದ್ದರೆ ರೇಡಿಯೋವನ್ನೇ ಆಶ್ರಯಿಸಬೇಕಿತ್ತು. ಜನಸಾಮಾನ್ಯನ ಸಂಗಾತಿ ರೇಡಿಯೋ. ಅದೊಂದು ಶ್ರಾವ್ಯ ಮಾಧ್ಯಮ. ಕೇವಲ ಧ್ವನಿಯ ಏರಿಳಿತದಿಂದ, ಬದಲಾಯಿಸುವಿಕೆಯಿಂದ ನವರಸಗಳನ್ನು ಅಭಿವ್ಯಕ್ತಿ ಮಾಡಬಲ್ಲ ಚಾಕಚಕ್ಯತೆಯುಳ್ಳ ಅನೇಕ ಬಾನುಲಿ ಕಲಾವಿದರು ಚರಿತ್ರೆ ಸೃಷ್ಟಿಸಿದ್ದಾರೆ, ಸೃಷ್ಟಿಸುತ್ತಿದ್ದಾರೆ,…. ಈಗ ತಂತ್ರಜ್ಞಾನ ಮುಂದುವರೆದಿದೆ.
ರೇಡಿಯೋ ಜೊತೆಗೆ ಬಾಲ್ಯ ಕಳೆದ ನನಗೆ ರೇಡಿಯೋ ಕೂಡಾ ಒಂದು ಗುರು. ರೇಡಿಯೋ ಕೇಳುತ್ತ ಇರುವಾಗ ನಮ್ಮ ಬೆಳಗಿನ ದಿನಚರಿಗಳು ರೇಡಿಯೋ ಕಾರ್ಯಕ್ರಮಗಳ ಮೇಲೆ ಅವಲಂಬಿತವಾಗಿರುತ್ತಿದ್ದವು. ರೇಡಿಯೋ ಸಮಯವೆಂದರೆ ಅದು ಸರಿಯಾದ ಸಮಯ. ಹಾಗಾಗಿ ದಿನಚರಿಯಲ್ಲಿ ಗಡಿಯಾರದ ಅಗತ್ಯಕ್ಕಿಂತಲೂ ಜಾಸ್ತಿ ರೇಡಿಯೋದ ಅಗತ್ಯವಿತ್ತು. ಬಹುಶಃ ನಾನಾಗ ಏಳನೇ ತರಗತಿಯಲ್ಲಿ ಓದುತ್ತಿದ್ದ ನೆನಪು. ಅದೊಂದು ದಿನ ಪುಟ್ಟ ಮಾತನಾಡುವ ಪೆಟ್ಟಿಗೆ ಮನೆಗೆ ಬಂದಿತ್ತು. ನಮಗೆಲ್ಲರಿಗೂ ಅದೊಂದು ಕೌತುಕವೇ! 6.55 ಕ್ಕೆ ಸಂಸ್ಕೃತ ವಾರ್ತೆ, 7.05 ಕ್ಕೆ ಪ್ರದೇಶ ಸಮಾಚಾರ, 7.35 ಕ್ಕೆ ಕನ್ನಡ ವಾರ್ತೆಗಳು, ಎಂಟು ಗಂಟೆಗೆ ಹಿಂದಿ ನಂತರ ಇಂಗ್ಲೀಷ್ ವಾರ್ತೆಗಳು, ವಿವಿಧ ಸಂಗೀತ ಕಾರ್ಯಕ್ರಮಗಳು, ಚಲನಚಿತ್ರಗೀತೆಗಳು, ಶ್ರೋತೃಗಳ ಕೋರಿಕೆಯ ಹಾಡುಗಳು, ಯುವವಾಣಿ , ಪತ್ರೋತ್ತರ, ಕೌಟುಂಬಿಕ ಚರ್ಚೆ, ಮಾರುಕಟ್ಟೆ ಧಾರಣೆ- ಹಳೆ ಅಡಿಕೆ, ಹೊಸ ಅಡಿಕೆ ಮಾರಾಟ ದರ, ಕಪ್ಪು ಬೆಲ್ಲ, ಬಿಳಿಬೆಲ್ಲ, ಕೆಂಪು ಬೆಲ್ಲ ಧಾರಣೆ, ಮೆಣಸು, ಸಂಗೀತಪಾಠ,….ಒಂದೇ ಎರಡೇ….ನೆನಪುಗಳು ಅಲೆ ಅಲೆಯಾಗಿ ಆವರಿಸಿಕೊಳ್ಳುತ್ತಿವೆ. ರೇಡಿಯೋದ ಬ್ಯಾಟರಿ ಖಾಲಿ ಆಗಿ, ಹೊಸದು ಹಾಕುವ ತನಕದ ಆ ಕಾಯುವಿಕೆ! ಬೆಳಗ್ಗೆದ್ದು ಚಾಚೂ ತಪ್ಪದೆ ಅಮ್ಮ ರೇಡಿಯೋ ಹಚ್ಚುತ್ತಿದ್ದರು. ದಿನದ ಆರಂಭವನ್ನು ಸುಂದರಗೊಳಿಸುತ್ತಿದ್ದ ಆ ಭಕ್ತಿಗೀತೆಗಳು ಕೆಲವು ಈಗಲೂ ನೆನಪಿಗೆ ಬರುತ್ತವೆ.
ಟೆಸ್ಟ್ ಪಂದ್ಯಗಳು ನಡೆದಾಗ ರೇಡಿಯೋದಲ್ಲಿ ಪ್ರಸಾರವಾಗುವ ಕೆಲವು ಕಾರ್ಯಕ್ರಮಗಳಿಗೆ ಖೋತಾ. ಲಗೋರಿ ಆಟ ಮಾತ್ರ ಗೊತ್ತಿತ್ತೇ ಹೊರತು ಕ್ರಿಕೆಟ್ ಆಟ ಅಂದರೆ ಏನೆಂದು ಕೂಡಾ ನನಗೆ ಗೊತ್ತಿರಲಿಲ್ಲ. ಆ ದಿನಗಳಲ್ಲಿ ಕ್ರಿಕೆಟ್ ಆಟದ ವೀಕ್ಷಕ ವಿವರಣೆ ಪ್ರಸಾರವಾಗುವಾಗ ಏನನ್ನೋ ಕಳೆದುಕೊಂಡ ಹಾಗಾಗುತ್ತಿತ್ತು. ಬಾವಿಯ ಕಪ್ಪೆಯಂತಿದ್ದ ನಾನು ಸಮುದ್ರದ ಕಪ್ಪೆಯಾದಾಗ ತಿಳಿದು ಬಂದ ವಿಷಯವೆಂದರೆ ವೀಕ್ಷಕ ವಿವರಣೆ ಕೇಳಲು ರೇಡಿಯೋವನ್ನು ಎಷ್ಟರ ಮಟ್ಟಿಗೆ ಜನರು ಆಶ್ರಯಿಸಿದ್ದರೆಂದು! ರೇಡಿಯೋ ಸಿಲೋನಿನಿಂದ ಪ್ರಸಾರವಾಗುತ್ತಿದ್ದ ಕನ್ನಡ ಹಾಡುಗಳನ್ನು ಕೇಳುವುದಕ್ಕಿಂತಲೂ, ಕನ್ನಡ ಮಾತನಾಡಲು ಗೊತ್ತಿಲ್ಲದವರು ಅರೆಬರೆ ಕನ್ನಡದಲ್ಲಿ ನಿರೂಪಣೆ ಮಾಡುವುದನ್ನು ಕೇಳುವುದೇ ಒಂದು ಮಜವಾಗಿತ್ತು.
ನಮ್ಮ ಮನೆಯಲ್ಲಿ ಎಲ್ಲರಿಗೂ ರೇಡಿಯೋ ಕೇಳುತ್ತಲೇ ಪರೀಕ್ಷೆಗೆ ಓದುವುದು ಅಭ್ಯಾಸವಾಗಿತ್ತು. ಪರೀಕ್ಷೆಗೆ ಪುಸ್ತಕಗಳನ್ನು ಓದುವಾಗ, ಕಣ್ಣಾಡಿಸಿ ಮನಸ್ಸಿನಲ್ಲಿಯೇ ಓದುವ ಬದಲು ಗಟ್ಟಿಯಾಗಿ ಓದಿದರೆ ಬೇಗ ತಲೆಗೆ ಹತ್ತುವುದೆಂಬುದು ನಮ್ಮೆಲ್ಲರಿಗೂ ಅನಿಸುತ್ತಿತ್ತು. ಒಬ್ಬರು ಓದುವುದು ಇನ್ನೊಬ್ಬರಿಗೆ ಕಿರಿಕಿರಿ ಆಗಬಾರದಲ್ವಾ? ಅದಕ್ಕೆ ರೇಡಿಯೋ ಗಟ್ಟಿಯಾಗಿ ಇಟ್ಟು, ನಾವೆಲ್ಲರೂ ನಮ್ಮ ಪಾಡಿಗೆ ಓದಿಕೊಳ್ಳುತ್ತಿದ್ದೆವು. ಈಗ ಆ ಬಗ್ಗೆ ಯೋಚಿಸುವಾಗ ಕಾಲ ಹೇಗೆ ಬದಲಾಗಿದೆ ಅನಿಸುತ್ತದೆ. ಓದುವ ಮಕ್ಕಳಿದ್ದರೆ, ಮನೆಯಲ್ಲಿ ನೀರವ ಮೌನ ಇರಬೇಕು. ಯಾವ ಕಿರಿಕಿರಿಯೂ ಇರಬಾರದೆಂದು ಮಕ್ಕಳು ಬಯಸುತ್ತಾರೆ.
ರೇಡಿಯೋದಲ್ಲಿ ಪ್ರಸಾರವಾಗುವ ಹಾಡುಗಳನ್ನು ಕೇಳುತ್ತಾ ಹಾಡು ಕೇಳುವುದು ಹಾಗೆಯೇ ಹಾಡು ಹಾಡುವುದು ಕೂಡಾ ನನಗೆ ತುಂಬಾ ಇಷ್ಟದ ವಿಷಯವಾಗಿತ್ತು. ಎಂಬತ್ತರ ದಶಕದಲ್ಲಿ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಚಲನಚಿತ್ರಗೀತೆಗಳು ಬಹುಶಃ ಬಾಯಿಪಾಠ ಬರುತ್ತಿತ್ತು. ಆಗ ಶ್ರುತಿ, ತಾಳ ಅಂದರೆ ಏನೆಂದೇ ಗೊತ್ತಿರಲಿಲ್ಲ. ಗೊತ್ತಿರುವ ಹಾಡನ್ನು ಮನೆಯ ಒಳಗಡೆ ಮಾತ್ರ ತಾರಕಸ್ಥಾಯಿಯಲ್ಲಿ ಹಾಡುತ್ತಿದ್ದೆ. ನಾನು ಅಪ್ಪಿ ತಪ್ಪಿ ಕೂಡಾ ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಹಾಡಿದ್ದಿಲ್ಲ. ಯಾಕೆಂದರೆ ಮನದೊಳಗೆ ಮನೆ ಮಾಡಿದ್ದ ಹೆದರಿಕೆ ಭೂತಾಕಾರವಾಗಿ ಎದುರು ನಿಂತು ನಾಲಿಗೆಯ ಪಸೆಯನ್ನೇ ಆರಿಸುತ್ತಿತ್ತು. ನಾನು ಸಂಗೀತ ಕಲಿಯಬೇಕೆಂಬ ಹಂಬಲ ಮನದೊಳಗೆ ಮೂಡಿತ್ತು. ಅಮ್ಮನ ಬಳಿ ಹೇಳಿಯೂ ಇದ್ದೆ. ಆದರೆ ನನ್ನ ಆ ಬೇಡಿಕೆಯನ್ನು ಮನ್ನಿಸದಿರಲು ಮನೆಯ ಆರ್ಥಿಕ ಸ್ಥಿತಿಯೂ ಕಾರಣವಾಗಿತ್ತು. ನನಗಿನ್ನೂ ಸರಿಯಾಗಿ ನೆನಪಿದೆ. ಆಗ ಮಂಗಳೂರು ಆಕಾಶವಾಣಿಯಲ್ಲಿ ಸಂಗೀತಪಾಠ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಗುರುಗಳಾದ ಶ್ರೀನಾಥ ಮರಾಠೆಯವರು ಅದನ್ನು ನಡೆಸಿಕೊಡುತ್ತಿದ್ದರು. ನಾನು ಮೊದಲಿಗೆ ಕಲಿತ ಹಾಡು ಪುರಂದರದಾಸರ ರಚನೆಯ “ಯಾರೇ ರಂಗನಾ ಯಾರೇ ಕೃಷ್ಣನಾ”. ನಂತರ “ಕಾಮಾಕ್ಷಿ ಕಾಮಕೋಟಿ ಪೀಠವಾಸಿನಿ”, “ಅನುರಾಗಮುಲೇನಿ”, “ನಾ ಮನವಿನಿ ವಿನವಯ್ಯಾ“ ಈ ಹಾಡುಗಳನ್ನು ಮನನ ಮಾಡಿಕೊಂಡಿದ್ದೆ. ಆದರೆ, ಶ್ರುತಿಯಲ್ಲಿರುತ್ತಿತ್ತು, ಆದರೆ ಸಾಲಿನಿಂದ ಸಾಲಿಗೆ, ಚರಣದಿಂದ ಪಲ್ಲವಿಗೆ ಹೋಗುವಾಗ ತಾಳ ತಪ್ಪಾಗುತ್ತಿತ್ತು ಎಂದು ಈಗ ನನಗನಿಸುತ್ತಿದೆ.
ವಿಪರ್ಯಾಸವೆಂದರೆ ರೇಡಿಯೋ ಕೇಳುತ್ತಿರುವಾಗ, ರೇಡಿಯೋ ತಂತ್ರಜ್ಞಾನದ ಬಗ್ಗೆ ಏನೂ ತಿಳಿದಿರಲಿಲ್ಲ. ಈಗ ಬಾನುಲಿ ಪ್ರಸಾರದ ತಂತ್ರಜ್ಞಾನದ ಬಗ್ಗೆ ಗೊತ್ತಿದೆ. ಆದರೆ ಈಗ ರೇಡಿಯೋ ಕೇಳುವುದು ಕಡಿಮೆಯಾಗಿದೆ. ಆದರೂ ಕಾರು ಚಲಾಯಿಸುತ್ತಾ ಹೋಗುವಾಗ ಎಫ್‌ಎಂ ರೇಡಿಯೋ ಕೇಳುತ್ತಾ ಹೋಗುವುದನ್ನು ರೂಢಿಸಿಕೊಂಡಿದ್ದೇನೆ. 98.3, 96.5, 100.3 ಯಾವುದಾದರೂ ಓಕೆ! ಆರ್‌ಜೆಗಳ ಮಾತಿನ ಮೋಡಿಯೇ ಅನನ್ಯ. ಸುದೀಪ್ ಅಭಿನಯದ ಮುಸ್ಸಂಜೆ ಮಾತು ಚಲನಚಿತ್ರದ “ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲಾ ಸಿಗದು ಬಾಳಲಿ” ಅನ್ನುವ ಹಾಡು ನೆನಪಾಗ್ತಿದೆ. ಹಾಗೆಯೇ ಆ ಚಿತ್ರದ ನಾಯಕ ಎಫ್ ಎಂ ರೇಡಿಯೋ ಮೂಲಕ ಜನರಿಗೆ ಸ್ಫೂರ್ತಿ ನೀಡುತ್ತಾ, ಮನದ ನೋವುಗಳನ್ನು ಶಮನ ಮಾಡುವ ಮಾತುಗಳನ್ನಾಡುತ್ತಾ, ನೊಂದವರ ಬಾಳಿಗೆ ಚೈತನ್ಯ ತುಂಬುತ್ತಾ ಅಭಿಮಾನಿ ಬಳಗವನ್ನು ಹೊಂದಿರುತ್ತಾನೆ. ರೇಡಿಯೋ ಹೇಗೆ ಪ್ರಬಲ ಸಂವಹನ ಮಾಧ್ಯಮವಾಗಬಹುದು ಅನ್ನುವುದನ್ನು ಈ ಚಲನಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ.
ಕೊನೆಗೊಂದು ಹಾರೈಕೆಯ ಮಾತು
ಬದಲಾಗುತ್ತಿರುವ ಕಾಲಮಾನದಲ್ಲಿ ರೇಡಿಯೋ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದಿರಲಿ, ಮುಂದಿನ ಪೀಳಿಗೆಯವರಿಗೂ ಈ ರೇಡಿಯೋ ಮಾಧ್ಯಮ ಉಳಿಯಲಿ ಅನ್ನುವ ಹಾರೈಕೆ.
–ಡಾ.ಕೃಷ್ಣಪ್ರಭಾ ಎಂ., ಮಂಗಳೂರು
ರೇಡಿಯೋ ಬಗ್ಗೆ ತಮ್ಮ ಅನಿಸಿಕೆ ಅನುಭವ ಹಾಗೇ ಹಾರೈಕೆ..ಒಳಗೊಂಡ ಲೇಖನ ಚೆನ್ನಾಗಿದೆ..
ಈಗಲೂ ನನ್ನ ಮೆಚ್ಚಿನ ಮಾಧ್ಯಮ ರೇಡಿಯೋ ನೇ..ನಿಮ್ಮ ಹಾರೈಕೆ… ಮುಂದುವರೆಯಬಹುದು…ಮೇಡಂ.
ನಿಮ್ಮ ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.. ರೇಡಿಯೋ ಕೇಳಿ ಖುಷಿಪಟ್ಟವರಿಗೆ ಮಾತ್ರ ಅದರ ಬೆಲೆ
ಚಂದದ ಬರಹ
ಧನ್ಯವಾದಗಳು ನಯನಾ
ಇನ್ನೂ ಓದಬೇಕೆಂದನಿಸುತ್ತಿತ್ತು..ಚೆನ್ನಾಗಿದೆ.
ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು
ನಮ್ಮೂರಿನ ಸಮುದಾಯ ಬಾನುಲಿ ಕೇಂದ್ರದಲ್ಲಿ ಆಗಾಗ ಕಾರ್ಯಕ್ರಮಗಳನ್ನು ನೀಡುತ್ತಾ, ಅದರೊಳಗೆ ಒಂದಾಗುತ್ತಾ.. ರೇಡಿಯೋ ಆನ್ ಮಾಡುವುದರ ಮೂಲಕವೇ ದಿನವನ್ನು ಪ್ರಾರಂಭ ಮಾಡುತ್ತಾ, ಮನೆಯ ಒಂದು ಸದಸ್ಯನಂತೆ ಭಾವನೆ ಮೂಡಿಸುವ ರೇಡಿಯೋದ ಜೊತೆ ವರ್ಷಗಟ್ಟಲೆ ನಡೆದಿರುವ ನನಗೆ ತಮ್ಮ ಲೇಖನ ಆತ್ಮೀಯವೆನಿಸಿತು… ಧನ್ಯವಾದಗಳು ಮೇಡಂ.
ಹೌದು. ರೇಡಿಯೋ ದಿನಾಲೂ ಕೇಳುತ್ತಿರುವಾಗ, ಒಂದು ದಿನ ಕೇಳದೇ ಇದ್ದರೂ ಏನೋ ಕಳೆದುಕೊಂಡ ಹಾಗಾಗುತ್ತಿತ್ತು. ನೀವು ಸಮುದಾಯ ಬಾನುಲಿ ಕೇಂದ್ರದಲ್ಲಿ ಕಾರ್ಯಕ್ರಮ ನೀಡುವುದು ತಿಳಿದು ಸಂತಸವಾಯಿತು.
ಇಂದಿನ ಸಮಾಜದಲ್ಲಿ ರೇಡಿಯೊ ಇನ್ನು ಮುಂದೆ ಉಪಯುಕ್ತವಲ್ಲ ಎಂದು ಹಲವರು ಭಾವಿಸುತ್ತಾರೆ. ಆದಾಗ್ಯೂ, ರೇಡಿಯೋ ಈಗಲೂ ನಮ್ಮ ಜೀವನದಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ರೇಡಿಯೋ ಎಲ್ಲೆಡೆ ಇದೆ – USA ನಲ್ಲಿ 90% ಕ್ಕಿಂತ ಹೆಚ್ಚು ಕುಟುಂಬಗಳು ಕನಿಷ್ಠ ಒಂದು ರೇಡಿಯೊವನ್ನು ಹೊಂದಿದ್ದಾರೆ ಮತ್ತು 2020 ರ ವೇಳೆಗೆ 30 ಶತಕೋಟಿಗಿಂತ ಹೆಚ್ಚು ಜಾಗತಿಕ ಬಳಕೆದಾರರು ಇರುತ್ತಾರೆ ಎಂದು ಅಂದಾಜಿಸಲಾಗಿದೆ.
ಸುರಹೊನ್ನೆಯಲ್ಲಿ ನಿಮ್ಮ ಅಂಕಣವನ್ನು ನಾನು ಯಾವಾಗಲೂ ಆನಂದಿಸುತ್ತೇನೆ. ನಿಮ್ಮ ಮುಂದಿನ ಮಾಹಿತಿಯುಕ್ತ ಕೃತಿಯನ್ನು ಓದಲು ನಾನು ಎದುರು ನೋಡುತ್ತಿದ್ದೇನೆ.
ಧನ್ಯವಾದ .
ನಿಮ್ಮ ದೀರ್ಘ ಪ್ರತಿಕ್ರಿಯೆಗೆ ಧನ್ಯವಾದಗಳು. USA ನಲ್ಲಿ 90% ಕ್ಕಿಂತ ಹೆಚ್ಚು ಕುಟುಂಬಗಳು ಕನಿಷ್ಠ ಒಂದು ರೇಡಿಯೊವನ್ನು ಹೊಂದಿದ್ದಾರೆ ಮತ್ತು 2020 ರ ವೇಳೆಗೆ 30 ಶತಕೋಟಿಗಿಂತ ಹೆಚ್ಚು ಜಾಗತಿಕ ಬಳಕೆದಾರರು ಇರುತ್ತಾರೆ ಅನ್ನುವ ಮಾಹಿತಿ ತಿಳಿದು ಬಹಳ ಖುಷಿ ಆಯಿತು. ನಿಮ್ಮ ಪ್ರೋತ್ಸಾಹದ ನುಡಿಗ್ಳಿಗೆ ಧನ್ಯವಾದಗಳು
ಚಂದದ ಬರಹ
ಮೆಚ್ಚುಗೆಗೆ ಧನ್ಯವಾದಗಳು.
ಈಗಲೂ ನನ್ನ ದಿನ ಭಕ್ತಿ ಗೀತೆಯೊಂದಿಗೆ ಆರಂಭವಾಗುತ್ತದೆ,
ಅವರ ಉತ್ತಮ ಕನ್ನಡ ಭಾಷೆ ಕೇಳುವುದೇ ಚೆಂದ,
ನಿಮ್ಮ ಬರಹ ನನ್ನ ಬಾಲ್ಯ ದ ನೆನಪನ್ನು ಕೆದಕಿತ್ತು,,
ನಿಮ್ಮಿಂದ ಇಂತಹ ಬರಹಗಳು ಬರುತಿರಲಿ,,
ರೇಡಿಯೋ ಸಮಗ್ರ ರಂಜನೆ ಮಾಹಿತಿಯ ಸಂಗಾತಿ
ಬಾಲ್ಯದ ರೆಡಿಯೋದೊಂದಿಗಿನ ಬಾಂಧವ್ಯದ ನೆನಪುಗಳೆಲ್ಲವನ್ನೂ ಹಸಿರಾಗಿಸಿದ ಸುಂದರ ಲೇಖನ. ಎಲ್ಲ ನೆನಪುಗಳನ್ನೂ ಮೆಲಕು ಹಾಕಿದಂತೆ ಆಯಿತು. ಅಭಿನಂದನೆಗಳು.