ಜೂನ್ ನಲ್ಲಿ ಜೂಲೇ : ಹನಿ 12
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಮಧ್ಯಾಹ್ನ ಮೂರು ಗಂಟೆ ಅಂದಾಜಿಗೆ ನುಬ್ರಾ ಕಣಿವೆಯಲ್ಲಿರುವ ‘ ಹೋಟೆಲ್ ಮೌಂಟೇನ್ ಕ್ಯಾಂಪ್’ ಗೆ ತಲಪಿದೆವು. ಅಲ್ಲಿಯ ಹೋಟೆಲ್ ಮಾಲಿಕರು ಸ್ನೇಹದಿಂದ ನಮ್ಮನ್ನು ಬರಮಾಡಿಕೊಂಡರು. ‘ಮೌಂಟೇನ್ ಕ್ಯಾಂಪ್’ ನಲ್ಲಿ ನಮಗೆ ಟೆಂಟ್ ಮನೆಯಲ್ಲಿ ವಾಸ್ತವ್ಯ. ಇಬ್ಬರಿಗೆ ಒಂದು ಟೆಂಟ್. ಗೋಡೆಯ ಬದಲು ಟಾರ್ಪಾಲಿನ್ ಪರದೆ ಇದೆ ಎನ್ನುವುದನ್ನು ಬಿಟ್ಟರೆ, ಸುಸಜ್ಜಿತವಾದ ರೂಮ್ ನಲ್ಲಿ ಇರಬೇಕಾದ ಎಲ್ಲಾ ಅನುಕೂಕುಲತೆಗಳು ಅಲ್ಲಿದ್ದುವು. ಟೆಂಟ್ ನ ಹೊರಗಡೆ ಪುಟ್ಟ ಉದ್ಯಾನವೂ ಇತ್ತು. ಪಕ್ಕದಲ್ಲಿ ಸಿಲಿಂಡರ್ ಆಕಾರದ ಹಂಡೆಯಲ್ಲಿ ಕಾಯಿಸಿದ ಬಿಸಿನೀರು ಪೈಪ್ ಗಳ ಮೂಲಕ ನಮ್ಮ ಟೆಂಟ್ ಗಳಿಗೆ ಬರುತಿತ್ತು. ಒಟ್ಟಿನಲ್ಲಿ, ಇಷ್ಟು ದೂರದ ಪರ್ವತ ಪ್ರದೇಶದಲ್ಲಿ , ತಾವು ಪ್ರತಿಕೂಲ ಹವಾಮಾನವನ್ನು ಎದುರಿಸುತ್ತಾ ಇದ್ದರೂ ಅಚ್ಚುಕಟ್ಟಾದ ವಸತಿ ಸೌಲಭ್ಯ ನಿರ್ಮಿಸಿ ಪ್ರವಾಸಿಗಳನ್ನು ಆಕರ್ಷಿಸುವ ಲಡಾಖಿಗಳ ಕಾರ್ಯಕ್ಷಮತೆಯನ್ನು ಮೆಚ್ಚಬೇಕು. ನಾವು ಕೆಲವರು ಪಕೋಡ, ಮ್ಯಾಗಿ ಇತ್ಯಾದಿ ಕೇಳಿ ತರಿಸಿ ತಿಂದೆವು. ಆಮೇಲೆ ಕಾಫಿ ಕುಡಿದು ನಾಲ್ಕು ಗಂಟೆಗೆ ಸನಿಹದ ‘ಹುಂಡರ್ ‘ ಎಂಬಲ್ಲಿರುವ ಮರಳಿನ ದಿಬ್ಬಗಳನ್ನು ನೋಡಲು ಹೊರಟೆವು.
ಹುಂಡರ್ ಹಳ್ಳಿಯ ಮರಳುದಿಬ್ಬಗಳು, ಎರಡು ಡುಬ್ಬದ ಒಂಟೆಗಳು
ವ್ಯಾನ್ ನಲ್ಲಿ ಕಾಲು ಗಂಟೆ ಪ್ರಯಾಣಿಸಿದಾಗ ‘ಹುಂಡರ್ ‘ ಹಳ್ಳಿ ಎದುರಾಯಿತು. ಸುತ್ತಲೂ ಬೆಟ್ಟಗಳ ಕೋಟೆ. ಮಧ್ಯದಲ್ಲಿ ವಿಸ್ತಾರವಾದ ಬಯಲಿನಂತಹ ಜಾಗದಲ್ಲಿ ಕಂದು-ಬೂದು ಮಿಶ್ರಿತ ಮರಳಿನ ದಿಬ್ಬಗಳು. , ಹರಿಯುತ್ತಿದ್ದ ಶುಭ್ರನೀರಿನ ಪುಟ್ಟ ಝರಿ. ಪಕ್ಕದಲ್ಲೊಂದು ಕ್ಯಾಂಟೀನ್, ನೂರಾರು ಜನರು, ಎರಡು ಡುಬ್ಬಗಳುಳ್ಳ ಒಂಟೆಗಳು ಇಷ್ಟು ನಮಗೆ ನುಬ್ರಾದಲ್ಲಿ ಕಾಣಿಸಿದ ವಿಚಾರಗಳು. ಈ ಒಂಟೆಗಳ ಮೇಲೆ ಸವಾರಿ ಮಾಡುವುದು ಪ್ರವಾಸಿ ಆಕರ್ಷಣೆ. ಏಳೆಂಟು ಒಂಟೆಗಳನ್ನು ಸಾಲಾಗಿ ನಿಲ್ಲಿಸಿ, ಒಂದಕ್ಕೊಂದು ಹಗ್ಗ ಕಟ್ಟಿ ಜೋಡಿಸಿ ‘ಒಂಟೆಗಳ ಕ್ಯಾರಾವಾನ್’ ಮಾಡಿರುತ್ತಾರೆ. ಎಲ್ಲಾ ಒಂಟೆಗಳಿಗೂ ಆಸಕ್ತ ಪ್ರವಾಸಿ ಸವಾರರು ಸಿಕ್ಕಿದ ಮೇಲೆ, ಆ ಕ್ಯಾರಾವಾನ್ ಹೊರಟು ಒಂದು ದೊಡ್ಡ ಸುತ್ತು ಹಾಕಿ ಬರುತ್ತದೆ.
ಚರಿತ್ರೆಯ ಪ್ರಕಾರ, ಕ್ರಿಸ್ತಪೂರ್ವ ಕಾಲದಿಂದಲೂ, ಚೀನಾದ ವರ್ತಕರು ರೇಷ್ಮೆಯನ್ನು ಮಧ್ಯಪ್ರಾಚ್ಯ ದೇಶಗಳ ವರೆಗೂ ತಲಪಿಸಲು ಒಂಟೆಗಳ ಮೂಲಕ ಪ್ರಯಾಣಿಸುತ್ತಿದ್ದ ಅತಿ ಉದ್ದದ ವಾಣಿಜ್ಯ ಮಾರ್ಗವಾದ ‘ಸಿಲ್ಕ್ ರೂಟ್’ ಇಲ್ಲಿದೆ. ಅವರು ಬಾಕ್ಟ್ರಿನ್ ಎಂಬ ಮಂಗೋಲಿಯನ್ ಮೂಲದ ತಳಿಯ ಒಂಟೆಗಳ ಬೆನ್ನ ಮೇಲೆ ಸರಕು ಹೇರಿ ಚೀನಾದಿಂದ ಬರುತ್ತಿದ್ದರು. ಈ ತಳಿಯ ಒಂಟೆಗಳಿಗೆ ಹಿಮಾಲಯದ ಚಳಿಯನ್ನು ತಡೆಯುವ ಶಕ್ತಿ ಇದೆ. ಕಾಲಾನಂತರದಲ್ಲಿ, ಈ ವಾಣಿಜ್ಯಮಾರ್ಗದ ಅವಶ್ಯಕತೆ ಇಲ್ಲವಾಯಿತು. ವಸ್ತುಗಳನ್ನು ಹಡಗಿನ ಮೂಲಕ ಸಾಗಿಸಲಾರಂಭಿಸಿದರು. ನುಬ್ರಾ ಪ್ರದೇಶದಲ್ಲಿ ಮಾತ್ರ ಈ ಒಂಟೆಗಳ ಸಂತತಿ ಉಳಿದಿವೆ.
ಮುಂದುವರಿಯುವುದು..
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=37250
-ಹೇಮಮಾಲಾ, ಮೈಸೂರು
ಸುಂದರವಾದ ಪ್ರವಾಸ ಕಥನ
ಚಿತ್ರ ಗಳ ಸಮೇತ ವಿವರಣೆ ಕೊಡುವ ನಿಮ್ಮ ಪ್ರವಾಸ ಕಥನ ನನಗೆ ಮುದ ಕೊಡುತ್ತದೆ ಗೆಳತಿ ಹೇಮಾ…ಧನ್ಯವಾದಗಳು
ಸುವ್ಯವಸ್ಥಿತ ವಸತಿ ಸೌಕರ್ಯ, ನುಬ್ರಾದ ಮರಳು ದಿಬ್ಬ, ಸಿಲ್ಕ್ ರೂಟಿನಲ್ಲಿ ಬಳಸುವ ಎರಡು ಡುಬ್ಬದ ಒಂಟೆ ಇತ್ಯಾದಿಗಳ ವಿವರ ಹೊತ್ತ ಪ್ರವಾಸ ಕಥನ ಇಷ್ಟವಾಯ್ತು..ಧನ್ಯವಾದಗಳು ಹೇಮಾ ಅವರಿಗೆ..
ಚಂದದ ವಿವರಣೆಯಿಂದೊಡಗೂಡಿದ ಸುಂದರ ಪ್ರವಾಸೀ ಕಥನದ ಕಂತು ಮುದ ನೀಡಿತು.
ಓದಿದ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.