ಒಂದು ಬಡಗಿಯ ಅಂಗಡಿ. ಅಲ್ಲಿ ಮರಗೆಲಸದ ಅನೇಕ ಸಾಮಾನುಗಳು, ತಯಾರಿಸಿದ ಪೀಠೋಪಕರಣಗಳು ತುಂಬಿಕೊಂಡಿದ್ದವು. ಬಡಗಿ ತಾನು ತಯಾರಿಸಿದ ಪೀಠೋಪಕರಣಗಳನ್ನು ಮಾರಿ ಜೀವನ ನಡೆಸುತ್ತಿದ್ದನು. ಒಂದು ದಿನ ತನ್ನ ಕೆಲಸವನ್ನು ಮುಗಿಸಿ ಅಂಗಡಿಯ ಬಾಗಿಲು ಹಾಕಿಕೊಂಡು ಬಡಗಿಯು ಮನೆಗೆ ಹೋದ. ಅವನ ಅಂಗಡಿಯು ಹಳೆಯದಾಗಿತ್ತು. ಸಾಲದ್ದಕ್ಕೆ ಅದರ ಪಕ್ಕದಲ್ಲಿ ಖಾಲಿಜಾಗವಿದ್ದು ಅಲ್ಲಿ ಗಿಡಗೆಂಟೆಗಳು ಯಥೇಚ್ಛವಾಗಿ ಬೆಳೆದಿದ್ದವು. ಅದರೊಳಗೆ ಹುಳು ಹುಪ್ಪಟೆಗಳು ನಿರ್ಭಯವಾಗಿ ಓಡಾಡುತ್ತಿದ್ದವು. ಒಂದು ದಿನ ಒಂದು ಹಾವು ಹರಿಯುತ್ತಾ ಗಿಡಗಳ ಮಧ್ಯದಿಂದ ನುಸುಳಿ ಅಂಗಡಿಯ ಹಿಂಬದಿಯಲ್ಲಿದ್ದ ಕಿಂಡಿಯ ಮೂಲಕ ಅಂಗಡಿಯನ್ನು ಪ್ರವೇಶಿಸಿತು.
ಒಳಗೆ ಬಂದ ಹಾವು ಅತ್ತಿತ್ತ ಕತ್ತಲೆಯಲ್ಲಿ ಸರಿದಾಡಿ ತನ್ನ ಆಹಾರಕ್ಕಾಗಿ ಯಾವುದಾದರೂ ಹುಳು ಹುಪ್ಪಟೆಗಳು ಸಿಗಬಹುದೆ ಎಂದು ಹುಡುಕಾಡಿತು. ಸರಸರ ಎಂದು ಅತ್ತಿತ್ತ ನುಸುಳುತ್ತಿರುವಾಗ ಗೋಡೆಗೆ ಒರಗಿಸಿಟ್ಟಿದ್ದ ಮರ ಕೊಯ್ಯುವ ರಂಪದ ಅಲಗು ಅದರ ಮೈಗೆ ತಾಕಿತು. ಚೂಪಾಗಿದ್ದ ಅಲಗು ತಾಕಿ ಹಾವಿನ ಮೈಗೆ ಗಾಯವಾಯುತು. ಹಾವಿಗೆ ನೋವಾಗಿ ತುಂಬ ಸಿಟ್ಟುಬಂತು. ಅದಕ್ಕೆ ರಂಪವೇನೆಂದು ತಿಳಿಯದು. ಸಿಟ್ಟಿನಿಂದ ತನ್ನ ಮೈಯನ್ನು ರಂಪದ ಸುತ್ತ ಸುತ್ತಿಕೊಂಡು ಬಿಗಿಯಾಗಿ ಅಪ್ಪಿಕೊಂಡಿತು. ಇದರಿಂದ ಹಾವಿನ ಮೈಯಿ ಹಲವಾರು ಕಡೆಗಳಲ್ಲಿ ಕತ್ತರಿಸಿ ಹೋಗಿ ರಕ್ತ ಹರಿಯಿತು. ಅದು ಸತ್ತುಹೋಯಿತು.
ಮಾರನೆಯ ಬೆಳಗ್ಗೆ ಬಡಗಿಯು ಅಂಗಡಿ ತೆಗೆಯಲು ಬಂದಾಗ ಗರಗಸಕ್ಕೆ ಸುತ್ತಿಕೊಂಡ ಹಾವನ್ನು ನೋಡಿ ಗಾಭರಿಯಾದ. ಸ್ವಲ್ಪ ಹೊತ್ತು ನೋಡಿದರೂ ಹಾವು ಅಲುಗಾಡಲೇ ಇಲ್ಲ. ಅಲ್ಲೇ ಬಿದ್ದಿದ್ದ ಕಡ್ಡಿಯೊಂದರಿಂದ ಹಾವನ್ನು ತಿವಿದಾಗಲೂ ಚಲಿಸಲಿಲ್ಲ. ಅದು ಸತ್ತಿದೆಯೆಂಬುದು ಖಚಿತವಾಯಿತು. ಅದರ ಮೈಯಲ್ಲಿ ಹಲವಾರು ಕಡೆ ಕೊಯ್ದ ಗಾಯಗಳಿದ್ದವು. ನಡೆದುದೆಲ್ಲವೂ ಬಡಗಿಗೆ ತಿಳಿದುಹೋಯಿತು. ಹಾವನ್ನು ಯಾರೂ ಕೊಂದಿಲ್ಲ. ತನ್ನ ಬುದ್ಧಿಗೇಡಿ ಕ್ರಿಯೆಯಿಂದ ತಾನೇ ಪ್ರಾಣ ಕಳೆದುಕೊಂಡಿದೆ ಎಂದುಕೊಂಡ.
ಹೀಗೇ ಹಲವಾರು ಸಂದರ್ಭದಲ್ಲಿ ನಾವು ವಿವೇಚನೆಯಿಲ್ಲದೆ ಸಿಟ್ಟಾಗಿ ಬುದ್ಧಗೇಡಿ ಕೆಲಸಗಳನ್ನು ಮಾಡುವುದುಂಟು. ಆದ್ದರಿಂದ ಯಾವಾಗಲೂ ತಾಳ್ಮೆ, ವಿವೇಚನೆಯಿಂದ ಪ್ರತಿಕ್ರಯಿಸಬೇಕು. ಆತುರಪಟ್ಟು ಹಾನಿಗೊಳಗಾಗಬಹುದು.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು

ಕಥೆ ತುಂಬಾ ಚೆನ್ನಾಗಿದೆ, ಒಳ್ಳೆಯ, ಅನುಕರಣೀಯ ನೀತಿ ಇದೆ ಕಥೆಯಲ್ಲಿ.
ಚಂದದ ಕಥೆ, ಉತ್ತಮ ಸಂದೇಶವುಳ್ಳ ಕಥೆ
ಧನ್ಯವಾದಗಳು ನಯನ ಮೇಡಂ.
ಹಾಗೂ ಸಾಹಿತ್ಯ ಸಹೃದರೇ..
ಉತ್ತಮ ಸಂದೇಶ ಹೊತ್ತ ಚಂದದ ಕಥೆ ….ಧನ್ಯವಾದಗಳು ಮೇಡಂ
ನಮ್ಮ ಮನಸ್ಸೂ ಬುದ್ದಿಗೇಡಿ ಹಾವಿನಂತಾಗದಿರಲಿ ಎಂಬ ಸಂದೇಶವುಳ್ಳ ಸುಂದರ ಕಥೆ.
ಧನ್ಯವಾದಗಳು ಶಂಕರಿ ಮತ್ತು ಪದ್ಮಿನಿ ಮೇಡಂ
ಧನ್ಯವಾದಗಳು ಪದ್ಮಾ ಮೇಡಂ… ತಪ್ಪಾಗಿ ಪದ್ಮಿನಿ ಮೇಡಂ ಆಗಿದೆ.. ಕ್ಷಮಿಸಿ.