ನಿರ್ಲೋಭಿ ‘ನಾಭಾಗ’
ಒಬ್ಬ ತಂದೆ-ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಎಲ್ಲರೂ ಒಂದೇ ತೆರನಾಗಿರುವುದಿಲ್ಲ. ಒಬ್ಬ ಧಾರಾಳಿಯಿರಬಹುದು. ಮತ್ತೊಬ್ಬ ಪಿಟ್ಟಾಸಿಯಿರಬಹುದು.ಇನ್ನೊಬ್ಬ ಸ್ವಾರ್ಥಿಯಿರಬಹುದು.ಮಗದೊಬ್ಬ ನಿಸ್ವಾರ್ಥಿಯಿರಬಹುದು. ಹೀಗೆ ವಿಭಿನ್ನ ಗುಣದವರು ಪರಸ್ಪರ ಕಚ್ಚಾಡುವವರೂ ಇರಬಹುದು. ಹಾಗೆಯೇ ಕೆಲವರು ತಂದೆ-ತಾಯಿಯರ ಇಷ್ಟದಂತೆ ವರ್ತಿಸುತ್ತಾ ಅವರಿಗೆ ಸಂತೋಷವನ್ನುಂಟು ಮಾಡಿದರೆ ಇನ್ನು ಕೆಲವರು ಅವರಿಗೆ ವಿರೋಧವನ್ನೆಸಗುತ್ತಾ ಹೆತ್ತವರಿಗೆ ವೃದ್ಧಾಪ್ಯದಲ್ಲಿ ದುಃಖವನ್ನು ತಂದುಕೊಡುವವರೇ ಅಧಿಕ.ಎಷ್ಟೇ ಸಜ್ಜನ ಸಹೋದರರಾದರೂ ಪಿತ್ರಾರ್ಜಿತ ಆಸ್ತಿ ಪಾಲುಮಾಡುವ ವೇಳೆಯಲ್ಲಿ ಅದು ಸರಿಯಾಗಿಲ್ಲ,ಇದು ಸರಿಯಾಗಿಲ್ಲ,ಅವನಿಗೆ ಹೆಚ್ಚು ಹೋಗಿದೆ,ತನಗೆ ಕಡಿಮೆ ಬಂದಿದೆ ಎಂದು ಕಿರಿಕಿರಿ ತೆಗೆಯುವವರೇ ಎಲ್ಲೆಡೆ ತುಂಬಿದ್ದಾರೆ. ಪಾಲು ತನ್ನಪಾಲಿಗೆ ದಕ್ಕಿದಷ್ಟು ಸಾಕು ಎಂಬ ತೃಪ್ತಿ ಉಳ್ಳವರು ವಿರಳ. ಅದರಲ್ಲೂ ಪಾಲು ಏನೂ ಕೊಡದೆ ಜನ್ಮದಾತನೇ ನಿನ್ನ ಪಾಲಿನ ಆಸ್ತಿ ಎನ್ನಿಸಿಕೊಂಡು; ಜೀವನಕ್ಕೆ ಬೇರೆ ದಾರಿ ಹುಡುಕಬೇಕಾಗಿ ಬಂದರೂ ಸಂಯಮ ಕಳೆದುಕೊಳ್ಳದೆ ಒಂದು ರೀತಿಯ ಸ್ಥಿತ ಪ್ರಜ್ಞರಂತೆ ಇರುವವರು ಇನ್ನೂ ಅಪರೂಪ. ಇಂತಹ ಒಂದು ದೃಷ್ಟಾಂತ ‘ನಾಭಾಗ’ ನ ಚರಿತ್ರೆ.
ಪುರಾತನದಲ್ಲಿ ‘ನಭಗ’ನೆಂಬ ಒಬ್ಬ ಧನಿಕನಿದ್ದ. ಆತನಿಗೆ ನಾಲ್ಕಾರು ಮಂದಿ ಮಕ್ಕಳು. ಅವರಲ್ಲಿ ‘ನಾಭಾಗ’ ನೆಂಬ ನಾಮಧೇಯನು ಕೊನೆಯವನು. ಬುದ್ಧಿ,ವಿವೇಕ ಉಳ್ಳವನೂ ಆಗಿದ್ದ ನಾಭಾಗನು ತಾನು ವಿದ್ಯೆ ಕಲಿಯಬೇಕೆಂಬ ಬಯಕೆಯನ್ನು ಪಿತನ ಮುಂದಿಟ್ಟನು.ಅಂತೆಯೇ ಅಂದಿನ ಪದ್ಧತಿಯಂತೆ ಗುರುಮಠದಲ್ಲಿ ಅವನ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಯಿತು. ಉಳಿದ ಮಕ್ಕಳ್ಯಾರೂ ವಿದ್ಯೆ ಕಲಿಯುವುದಕ್ಕೆ ಮುಂದೆ ಬರಲಿಲ್ಲ. ನಾಲ್ಕಾರು ವರ್ಷಗಳು ಸರಿದವು.ಅಂದಿನ ಗುರುಗಳು ಶಿಷ್ಯರ ವಿದ್ಯೆ ಸಂಪೂರ್ಣ ಮುಗಿದ ಮೇಲಷ್ಟೇ ಅವರವರ ಮನೆಗಳಿಗೆ ಹಿಂತಿರುಗಲು ಸಮ್ಮತಿ ಕೊಡುತ್ತಿದ್ದರಷ್ಟೆ. ನಾಭಾಗನು ಊರಲ್ಲಿಲ್ಲದ ಈ ಸಮಯದಲ್ಲಿ ಅವನ ಸಹೋದರರು ಆಸ್ತಿಯನ್ನು ತಮಗೆಲ್ಲ ಪಾಲು ಮಾಡಿಕೊಡಬೇಕೆಂದೂ ತಮ್ಮ ತಮ್ಮ ‘ಹಿಶೆ’ಯನ್ನು ತಾವು ಪ್ರತ್ಯೇಕ ಪ್ರತ್ಯೇಕವಾಗಿ ನೋಡಿಕೊಳ್ಳುವೆವೆಂದು ಅಪ್ಪನಲ್ಲಿ ಪಟ್ಟು ಹಿಡಿದರು. ಅಪ್ಪ ಉಪೇಕ್ಷೆ ತೋರಿದಾಗ; ತಾವೆಲ್ಲ ಒಟ್ಟು ಸೇರಿ ಮುಂದೆ ಬಂದು ಆಸ್ತಿ ಪಾಲುಮಾಡಿಕೊಂಡರು!. ತಂದೆಯಾದ ‘ನಭಗ’ನು ಮಕ್ಕಳಲ್ಲಿ ನಾಭಾಗನ ಪಾಲು ಎಲ್ಲಿ ? ಎಂದು ಕೇಳಿದಾಗ ; ”ನಾಭಾಗನಿಗೆ ಆಸ್ತಿಯಲ್ಲಿ ಪಾಲು ಯಾಕೆ? ನೀವೇ ಅವನ ಪಾಲು “ ಎಂದು ವ್ಯಂಗ್ಯವಾಡಿದರು.
ನಾಭಾಗನು ಆತನ ಶಿಕ್ಷಣ ಪೂರ್ತಿಯಾದಮೇಲೆ ಊರಿಗೆ ಹಿಂದಿರುಗಿದನು. ತಾನು ಜ್ಞಾನಾರ್ಜನೆ ಹೊಂದಿ ಬಂದಾಗ ಏನೋ ಒಂದು ವ್ಯತ್ಯಾಸ ಮನೆಯಲ್ಲಿ ಕಂಡು ಅಪ್ಪನಲ್ಲಿ ವಿಚಾರಿಸಲಾಗಿ ವಿಷಯವೆಲ್ಲ ತಿಳಿಯಿತು. ತಾನು ಊರಲ್ಲಿಲ್ಲದಾಗ ಅಪ್ಪನ ಮಾತನ್ನೂ ಲೆಕ್ಕಿಸದೆ ಸಹೋದರರು ಆಸ್ತಿಯನ್ನು ಪಾಲುಮಾಡಿ ತಾವು ತಾವೇ ಹಂಚಿಕೊಂಡದ್ದಲ್ಲದೆ ತನಗೇನೂ ನೀಡದೆ ಇರುವುದಕ್ಕೆ ನಾಭಾಗನು ವಿಚಲಿತನಾಗಲಿಲ್ಲ. “ಅಪ್ಪಾ ನನ್ನ ಜೊತೆಯಲ್ಲಿ ನೀವಿದ್ದರೆ ನನಗದುವೇ ಮುಖ್ಯ. ಬೇರಾವ ಪಾಲು ಇಲ್ಲದಿದ್ರೂ ಚಿಂತೆಯಿಲ್ಲ”. ಎಂದು ಬಿಟ್ಟ. ಆದರೂ ಮಗನಿಗೆ ಬದುಕುವುಕ್ಕೆ ಏನಾದರೂ ದಾರಿ ಬೇಡವೇ?. ಯೋಚಿಸಿದ ‘ನಭಗ’ನು “ಮಗನೇ ಮಹಾತ್ಮರಾದ ಅಂಗೀರಸ ಮುನಿಗಳು ಸತ್ರಯಾಗವೊಂದನ್ನು ಕೈಗೊಂಡಿದ್ದಾರೆ. ಆ ಯಾಗದಲ್ಲಿ ಆರನೇ ದಿನದ ಕಾರ್ಯಕಲಾಪಗಳು ಅವರಿಗೆ ತಿಳಿಯದೆ ಮಂಕು ಕವಿದಂತೆ ಇರುತ್ತಾರೆ. ನಿನಗದು ಗೊತ್ತಿದೆ. ನೀನು ಹೋಗಿ ನಿನ್ನ ಪಾಂಡಿತ್ಯಕ್ಕೆ ಬೆರಗಾದ ಅವರು ನಿನ್ನನ್ನು ಗೌರವಿಸುವುದಲ್ಲದೆ ನಿನ್ನ ಉತ್ತರೋತ್ತರ ಅಭಿವೃದ್ಧಿಗೆ ಕಾರಣರಾಗುವರು”. ಎಂದು ಹೇಳಿ ಮಗನನ್ನು ಅಲ್ಲಿಗೆ ಕಳುಹಿಸಿಕೊಟ್ಟನು.
ನಾಭಾಗನು ತನ್ನ ತಂದೆ ಹೇಳಿದಂತೆ ಅಂಗೀರಸ ಮುನಿಗಳು ಸತ್ರಯಾಗ ಮಾಡುವಲ್ಲಿಗೆ ತೆರಳಿ ಅವರ ಯಾಗ ಸಂಪೂರ್ಣ ಸಂಪನ್ನವಾಗುವಂತೆ ನಡೆಸಿಕೊಟ್ಟನು. ಇದರಿಂದ ಪ್ರಸನ್ನರಾದ ಅಂಗೀರಸ ಮುನಿಗಳು ಯಾಗದ ಕೊನೆಗೆ ಉಳಿದ ಸಂಪತ್ತನ್ನು ನಾಭಾಗನಿಗೇ ಕೊಟ್ಟು ಅವರು ಸ್ವರ್ಗಕ್ಕೆ ನಡೆದರು.
ನಾಭಾಗನು ಸಂಪತ್ತನ್ನು ಸಾಗಿಸುತ್ತಿದ್ದಾಗ ರುದ್ರನು ಕರಿಬಣ್ಣದ ಮನುಷ್ಯ ರೂಪದಲ್ಲಿ ಬಂದು “ಯಜ್ಞಮಂಟಪದಲ್ಲಿ ಕೊನೆಗುಳಿದ ವಸ್ತುಗಳೆಲ್ಲ ನನ್ನವು ಕೊಡು” ಎಂದನು. ಆಗ ನಾಭಾಗನು “ಇವೆಲ್ಲ ಅಂಗೀರಸ ಮುನಿಗಳೇ ನನಗೆ ಪೂರ್ತಿಯಾಗಿ ಕೊಟ್ಟು ತೆರಳಿರುವುದು” ಎಂದನು. ಆಗ ಆ ವೇಷಧಾರಿ ರುದ್ರನು “ನಿನಗೆ ಸಂಶಯವಿದ್ದರೆ ನಿನ್ನ ಅಪ್ಪನಲ್ಲಿ ಕೇಳು” ಎನ್ನಲಾಗಿ ನಾಭಾಗನು ಹಾಗೇ ಮಾಡಿದನು. “ಯಜ್ಞಶಾಲೆಯಲ್ಲಿ ಉಳಿದ ಸಂಪತ್ತೆಲ್ಲ ಯಾರಿಗೆ ಸೇರುತ್ತವೆ?” ಎಂದು ತಂದೆಯಲ್ಲಿ ಕೇಳಲಾಗಿ “ಅದು ಶಿವನಿಗೇ ಸೇರತಕ್ಕದ್ದು. ನೀನು ಶಿವನನ್ನು ಒಲಿಸಿಕೋ” ಎಂದನು ತಂದೆ. ನಾಭಾಗನು ಶಿವನನ್ನು ಸ್ತುತಿಸಿ ಅವನನ್ನು ಮೆಚ್ಚಿಸಿ ಆ ಸಂಪತ್ತನ್ನೆಲ್ಲಾ ಪಡೆದನು. ರುದ್ರನು ನಾಭಾಗನ ಇಷ್ಟಾರ್ಥವನ್ನು ಈಡೇರಿಸಿ ಅದೃಶ್ಯನಾದನು. ಮುಂದೆ ಈತನು ಬ್ರಹ್ಮತ್ವವನ್ನು ಪಡೆದು ಬ್ರಹ್ಮರ್ಷಿಯೆನಿಸಿದನು.
-ವಿಜಯಾಸುಬ್ರಹ್ಮಣ್ಯ ಕುಂಬಳೆ
Nice one
ಈ ಕಥೆ ನನಗೆ ಸರಿಯಾಗಿ ಗೊತ್ತಿರಲಿಲ್ಲ.. ಓದಿ ಖುಷಿ ಯಾಯಿತು…ಧನ್ಯವಾದಗಳು ವಿಜಯ ಮೇಡಂ.
ಪೌರಾಣಿಕ ಕಥೆಗಳು ನಿರಂತರ ನಿತ್ಯ ನೂತನ ..ಚಂದದ ಕಥೆಗಾಗಿ ಧನ್ಯವಾದಗಳು ವಿಜಯಕ್ಕ
ತಂದೆಯನ್ನೂ, ವಿದ್ಯೆಯನ್ನೂ ಸಂಪತ್ತಾಗಿ ಪರಿಗಣಿಸಿದ ನಾಭಾಗನ ಆದರ್ಶ ಅನುಕರಣಿಯ.