ಲಹರಿ

ಮಳೆಯ ಮುನ್ಸೂಚನೆಯ ಸುತ್ತ

Share Button

ಆರು ದಶಕಗಳ ಹಿಂದೆ ನಾನು ಕೊಡಗಿನ ಒಂದು ಸಣ್ಣ ಊರಲ್ಲಿ ಸರಕಾರಿ ಪ್ರೈಮರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅಲ್ಲಿದ್ದ ಬಹುತೇಕ ಮಕ್ಕಳು ರೈತಾಪಿಗಳ ಕುಟುಂಬದವರು. ಜೂನ್ ತಿಂಗಳಲ್ಲಿ ಆ ಮಕ್ಕಳು ಮಳೆಬರುವ ತಾರೀಖನ್ನು ಕರಾರುವಕ್ಕಾಗಿ ಹೇಳುತ್ತಿದ್ದುದು ನಿಜಕ್ಕೂ ವಿಸ್ಮಯಕರ. ಆ ದಿನ ಮಳೆ ಬಂದೇ ಬರುತ್ತಿತ್ತು ಹಾಗೂ ಆ ಮಕ್ಕಳು ಮಳೆಯಲ್ಲಿ ಸಂತೋಷದಿಂದ ಕುಣಿದಾಡುತ್ತಿದ್ದರು. ಈ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ. ಹೀಗೆ ಈ ಮಕ್ಕಳ ಮನೆಯವರು ಮಳೆಯ ಮುನ್ಸೂಚನೆಯನ್ನು ಹೇಗೆ ಕಾಣುತ್ತಿದ್ದರೋ ಅದು ಈಗಲೂ ನಿಗೂಢ.

ಸಾಮಾನ್ಯವಾಗಿ ಹಳ್ಳಿ ರೈತರ ಮನೆಯ ಅಂಗಳದ ಒಂದು ಕಡೆ ನೀರಿನ ತೊಟ್ಟಿ ಇರುತ್ತದೆ. ರೈತರು ಬೆಳಿಗ್ಗೆ ಹೊಲಕ್ಕೆ ಹೋಗುವ ಮೊದಲು ಎತ್ತುಗಳನ್ನು ನೀರು ಕುಡಿಸಿ ಕರೆದೊಯ್ಯುವುದು ವಾಡಿಕೆ. ಎತ್ತುಗಳು ಹಾಗೆ ನೀರು ಕುಡಿದು ಹೊಲಕ್ಕೆ ಹೋಗುವ ಬದಲು ಕೊಟ್ಟಿಗೆಯ ಕಡೆಗೆ ಹೋದರೆ ಆ ದಿನ ಮಳೆ ಖಂಡಿತ ಬರುತ್ತದೆ ಎನ್ನುತ್ತಾರೆ ಅನುಭವಿ ರೈತರು.

ಇನ್ನು ಕಪ್ಪೆಗಳು ವಟಗುಟ್ಟಿದರೆ, ಜೀರುಂಡೆ ಮರಗಳಲ್ಲಿ ಒಂದೇ ಸಮನೆ ಕೂಗುತ್ತಿದ್ದರೆ, ಕಾಡಂಚಿನಲ್ಲಿ ನವಿಲು ರೆಕ್ಕೆ ಬಿಡಿಸಿ ನೃತ್ಯ ಪ್ರಾರಂಭಿಸಿದರೆ ಮಳೆಯ ಆಗಮನ ಖಂಡಿತ. ಗ್ರಾಮದ ಅನುಭವಿ ರೈತರು ಗಾಳಿಯ ವೇಗ, ಮೋಡಗಳ ಚಲನೆ, ಮುಂಜಾನೆ ಗಾಳಿ, ವಾತಾವರಣ, ಹಕ್ಕಿಗಳ ವಿಚಿತ್ರ ಹಾರಾಟ, ಮಿಂಚಿನ ತೀವ್ರತೆ ಇವುಗಳನ್ನು ನೋಡಿ ನಿಖರವಾಗಿ ಮಳೆ ಬರುವ ಸಮಯವನ್ನು ಕರಾರುವಕ್ಕಾಗಿ ತಿಳಿಸುತ್ತಾರೆ.

ಗದಗ ಜಿಲ್ಲೆಯಲ್ಲಿ ‘ಬಾದಾಮಿ ಮಿಂಚು’ ಎಂಬ ಮಾತು ಬಹಳ ಪ್ರಸಿದ್ಧ, ಬಾದಾಮಿ ಗದಗದ ಈಶಾನ್ಯಕ್ಕಿರುವುದರಿಂದ ಆ ಜಾಗದಲ್ಲಿ ಮಿಂಚಿದರೆ ಮೂರು ದಿನಕ್ಕೆ ಮಳೆ ಖಂಡಿತ ಬರುವುದೆಂಬ ನಂಬಿಕೆ ಆ ಜಾಗದ ಜನರದ್ದು.

ಇನ್ನು ಮಲೆನಾಡಿನ ಜನರಂತೂ ಮಳೆಯ ಆಗಮನದ ಬಗ್ಗೆ ಬಹಳ ನಿಖರವಾಗಿ ಹೇಳಬಲ್ಲರು. ಅವರು ಗುಡುಗಿನ ಸಪ್ಪಳವನ್ನು ಕೇಳಿ ಎಷ್ಟು ದಿನ ಮಳೆ ಆಗುತ್ತದೆ ಎಂಬುದನ್ನೂ ಹೇಳಬಲ್ಲರು. ಆಶ್ಚರ್ಯವೆಂದರೆ ಅವರು ಇವನ್ನೆಲ್ಲ ಗಾದೆಗಳ ರೂಪದಲ್ಲಿ ನೆನಪಿಟ್ಟುಕೊಳ್ಳುತ್ತಾರೆ.

ಅಶ್ವಿನಿ ಮಳೆ ಬಿದ್ದರೆ ಅರಶಿಣಕ್ಕೆ ಮೇಲು
ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ
ಭರಣಿ ಸುರಿದರೆ ಧರಣಿ ಬದುಕೀತು
ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
ಮೃಗಶಿರದಲ್ಲಿ ಮಿಸುಕಾಡದೆ ನೆರೆ ಬಂತು
ಅರಿದ್ರಾ ಮಳೆ ಆಗದೆ ಗುಡುಗಿದರೆ ಅರುಮಳೆ ಆಗಲ್ಲ
ಅರಿದ್ರಾ ಮಳೆ ಅರದೆ ಹುಯ್ಯುತ್ತೆ
ಅರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ
ಅಮ್ಮನ ಮನಸ್ಸು ಬೆಲ್ಲದ ಹಾಗೆ, ಅರಿದ್ರಾ ಹನಿ ಕಲ್ಲಿನ ಹಾಗೆ
ಬಂದರೆ ಮಗೆ ಹೋದರೆ ಹೊಗೆ
ಬಂದರೆ ಮಘ ಇಲ್ಲದಿದ್ದರೆ ಧಗೆ
ಮಘಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು
ಪುಷ್ಯ ಮಳೆ ಭಾಷೆ ಕೊಟ್ಟಹಾಗೆ
ಮೃಗಶಿರದಲ್ಲಿ ನೆಟ್ಟ ಸಸಿ ಸಾಯುವುದಿಲ್ಲ
ಪುಬ್ಬಾ ದಲ್ಲಿ ನೆಟ್ಟ ಸಸಿ ಬದುಕುವುದಿಲ್ಲ (ಭಾರಿ ಮಳೆಯಿಂದ)
ಅರಿದ್ರಾಮಳೆ ಹೊಯ್ದರೆ ಆರು ನಕ್ಷತ್ರ ಮಳೆ ಹೊಯ್ತದೆ
ಪುಷ್ಯ ಬಂದರೆ ಮೀನುಗಳ ವಿಷ್ಯ (ಮರಿ ಸಂತಾನ)
ಹೀಗೆ ಪ್ರತಿ ನಕ್ಷತ್ರಗಳಿಗೂ ಸಂಬಂಧಿಸಿದ ಮಳೆಯನ್ನು ಸುಂದರವಾಗಿ ಪೋಣಿಸಿದ್ದಾರೆ.

ಹಲವಾರು ಶತಮಾನಗಳಿಂದ ಹೀಗೆ ಮಳೆಯ ಆಗಮನ ಹಾಗೂ ನಿರ್ಗಮನಗಳನ್ನು ಕರಾರುವಕ್ಕಾಗಿ ನಮ್ಮ ಪೂರ್ವಜರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಹೇಳುತ್ತಿದ್ದರು. ಆದರೆ ಈಗ ಹವಾಮಾನ ಇಲಾಖೆ ಕೂಡ ನಿಖರವಾಗಿ ಮಳೆಯ ಆಗಮನ, ನಿರ್ಗಮನ, ತೀವ್ರತೆ ಅಲ್ಲದೆ ಕಡಲತಡಿಯಲ್ಲಿ ವಾಯುಭಾರ ಕುಸಿತ ಹಾಗೂ ಬಿರುಗಾಳಿ ಇವುಗಳನ್ನು ನಿಖರವಾಗಿ ಹೇಳಬಲ್ಲುದು. ಆದರೆ ಪರಿಸರದ ಏರುಪೇರು, ವಾಯುಮಾಲಿನ್ಯ, ವಾತಾವರಣದ ಉಷ್ಣತೆಯ ಏರುಪೇರು, ವಾಯುಮಾಲಿನ್ಯ, ಜನಸಾಂದ್ರತೆ, ವಾತಾವರಣದ ಉಷ್ಣತೆಯ ಏರುಪೇರು ಇವುಗಳಿಂದ ಋತು ಚಕ್ರದಲ್ಲಿ ಭಾರಿ‌ಏರುಪೇರು ಕಾಣಿಸತೊಡಗಿದೆ. ಅಕಾಲದಲ್ಲಿ ಮಳೆ, ಬರಗಾಲ, ಪ್ರವಾಹಗಳು ಬಹಳ ಸಾಮಾನ್ಯವಾಗಿದೆ. ಪ್ರಕೃತಿಯ ನಿಯಮಕ್ಕೆ ವಿರೋಧವಾಗಿ ಅಣೆಕಟ್ಟು ನಿರ್ಮಾಣ, ನದಿಗಳ ಜೋಡಣೆ, ಅವುಗಳ ಸ್ವಾಭಾವಿಕ ಹರಿವನ್ನು ಬದಲಾಯಿಸುವಿಕೆ, ನಗರೀಕರಣ ಇವೆಲ್ಲವೂ ಇದಕ್ಕೆ ಕಾರಣ ಎನ್ನಬಹುದು. ಜಗತ್ತಿನ ಮುಂದುವರಿದ ದೇಶಗಳಲ್ಲಿ ಕಾಳಜಿ ವಹಿಸದ ವಾಯುಮಾಲಿನ್ಯ, ಇಂಗಾಲ ಹೆಜ್ಜೆ ಗುರುತಿನ ನಿಯಂತ್ರಣ, ಇವುಗಳ ಬಗ್ಗೆ ಕ್ರಮ ಇಲ್ಲದ್ದರಿಂದ ಋತು-ಚಕ್ರದ ಏರುಪೇರಿಗೆ ಇಂಬುಕೊಟ್ಟಂತಾಗಿದೆ.

ಮಾನವ ಕುಲದ ಉಳಿವಿಗೆ, ಋತುಮಾನಗಳ ಸಹಜವಾದ ಕ್ರಿಯೆಗಳಿಗೆ ಸರಿಯಾದ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಸಂಭವಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ನೀವೇನಂತೀರಿ?

-ಕೆ. ರಮೇಶ್

6 Comments on “ಮಳೆಯ ಮುನ್ಸೂಚನೆಯ ಸುತ್ತ

  1. ಉತ್ತಮ ಮಾಹಿತಿ ಯುಳ್ಳ ಲೇಖನ..ವಿಚಾರ ಸಂಗ್ರಹದ ಜೊತೆಗೆ ಅದನ್ನು ಲೇಖನದಲ್ಲಿ ಅಚ್ಚುಕಟ್ಟಾಗಿ ಅನಾವರಣಗೊಳಿಸುತ್ತೀರಿ ಅದಕ್ಕೆ ನನ್ನದೊಂದು ನಮನ ಸಾರ್

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *