“ಕಾಂತಾರ” ನೆನಪಿಸಿದ ಕಥೆ
“ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ. ಆ ಸೊಪ್ಪು ಹಾಕಿ ಕಾಯಿಸಿದ ಎಣ್ಣೆ ತಲೆಗೆ ಹಚ್ಚಿ ತಿಕ್ಕಿದರೆ ತಲೆಯಲ್ಲಿ ಕೂದಲು ಬೆಳೆಯುತ್ತದೆ” ಇತ್ತೀಚೆಗೆ ತೆರೆಕಂಡು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಕಾಂತಾರ ಚಲನಚಿತ್ರದಲ್ಲಿ ಈ ದೃಶ್ಯ ಎಲ್ಲರೂ ನೋಡಿಯೇ ಇರುತ್ತೀರಿ. ಕಾಂತಾರ ಚಲನಚಿತ್ರದಲ್ಲಿ ವಿವರಿಸಿರುವ ಕಥೆಯ ಕಾಲಘಟ್ಟ ವರ್ತಮಾನಕ್ಕೆ ಸಂಬಂಧಿಸಿದ್ದು ಅಲ್ಲವಾದರೂ ಮುಖಪುಟದಲ್ಲಿ ಆಗಾಗ ಮಿಂಚಿ ಮರೆಯಾಗುವ ಜಾಹೀರಾತುಗಳು ನನ್ನ ಗಮನ ಸೆಳೆದವು. ಅದೇ ಆದಿವಾಸಿ ಹರ್ಬಲ್ ಎಣ್ಣೆ. ಕಾಡಿನಲ್ಲಿ ಸಿಗುವ ವಿವಿಧ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ಈ ಎಣ್ಣೆಯನ್ನು ಹಚ್ಚುವುದರಿಂದ ಕಾಂತಿಯುಕ್ತವಾದ, ಸೊಂಪಾದ, ಉದ್ದನೆಯ ದಟ್ಟ ಕೇಶರಾಶಿಯನ್ನು ಕೇವಲ ಆರು ತಿಂಗಳಿನಲ್ಲಿ ನಿಮ್ಮದಾಗಿಸಿಕೊಳ್ಳಬಹುದು ಅನ್ನುವುದನ್ನು ದಟ್ಟವಾದ, ಉದ್ದನೆಯ ಕೇಶರಾಶಿ ಹೊಂದಿರುವ ಮಹಿಳೆಯರ ಕೂದಲನ್ನು ತೋರಿಸಿ ವಿವರಿಸಿರುವ ಕೆಲವು ಜಾಹೀರಾತುಗಳನ್ನು ಕಂಡೆ. ಕಾಂತಾರ ಚಲನಚಿತ್ರದ ಆ ದೃಶ್ಯ ಹಾಗೂ ಆದಿವಾಸಿ ಹರ್ಬಲ್ ಎಣ್ಣೆಯ ಜಾಹೀರಾತು ನೋಡಿದ ಬಳಿಕ ಸುಮಾರು ಮೂವತ್ತು ವರ್ಷಗಳ ಹಿಂದಿನ ನನ್ನ ಅನುಭವವೊಂದು ನೆನಪಿಗೆ ಬರುತ್ತಿದೆ. ಆಗ ಅದನ್ನು ಕಥೆಯ ರೂಪದಲ್ಲಿ ಬರೆದಿಟ್ಟ ನೆನಪು. ಆದರೆ ಯಾವ ಪತ್ರಿಕೆಗೂ ಕಳುಹಿಸಿರಲಿಲ್ಲ. ಆಗ ಬರೆದದ್ದು ಸ್ವಲ್ಪ ಸ್ವಲ್ಪ ನೆನಪಿದೆ. ಆ ನೆನಪಿನಿಂದ ಬರೆದ ಕಥೆಯನ್ನು ನಿಮ್ಮ ಮುಂದಿಡುವ ಪ್ರಯತ್ನ.
“ಅವ್ವಾರೇ…. ಅವ್ವಾರೇ…” ಯಾರೋ ಕರೆಯುತ್ತಿರುವುದು ಕಿವಿಗೆ ಬಿತ್ತು. ಮರುದಿನ ನಡೆಯಲಿರುವ ಪರೀಕ್ಷಾತಯಾರಿಗಾಗಿ ಓದುವುದರಲ್ಲಿ ಮಗ್ನಳಾಗಿದ್ದೆ. ಅಮ್ಮ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮನೆಯ ಹೊರಗೆ ಬಂದು ನೋಡಿದಾಗ ಸುಮಾರು ಒಂದು ವರ್ಷದ ಮಗುವನ್ನು ಬಗಲಿಗೆ ಜೋತು ಹಾಕಿದ ಜೋಳಿಗೆಯಲ್ಲಿರಿಸಿಕೊಂಡ ಓರ್ವ ಮಹಿಳೆ. ಭಿಕ್ಷುಕರಿರಬೇಕು ಎಂದು ಹಣ ನೀಡಲು ಹೋದರೆ “ನಾನು ಭಿಕ್ಷುಕಿಯಲ್ಲ, ಅವ್ವಾರು ಬರಲಿ” ಅನ್ನುತ್ತಿದ್ದಾಳೆ ಆ ಮಹಿಳೆ. ಅಡುಗೆಮನೆಯಲ್ಲಿದ್ದ ಅಮ್ಮ ಹೊರಗೆ ಬಂದರು. “ಈಕೆ ನಿಮ್ಮ ಮಗಳೇ?” ಅಮ್ಮನ ಬಳಿ ಆ ಹೆಣ್ಣುಮಗಳ ಪ್ರಶ್ನೆ. “ನೋಡಿ, ನಿಮ್ಮ ಮಗಳ ಕೂದಲು ಎಷ್ಟೊಂದು ಒಣಗಿ ಹೋಗಿದೆ! ಕಾಂತಿಯೇ ಇಲ್ಲ. ಕಣ್ಣುಗಳು ಕೂಡಾ ಕಾಂತಿಹೀನವಾಗಿವೆ. ಮುಖ ಸೊರಗಿದಂತೆ ತೋರುತ್ತಿದೆ. ಈ ವಯಸ್ಸಿನಲ್ಲಿ ಹೇಗಿರಬೇಕಿತ್ತು! ನೋಡಿ ಅವ್ವಾರೇ, ನನ್ನ ಬಳಿ ಒಂದು ಎಣ್ಣೆ ಇದೆ. ಈ ಎಣ್ಣೆ ತಲೆಗೆ ಹಚ್ಚಿದರೆ ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯುತ್ತದೆ. ಕಣ್ಣುಗಳಲ್ಲಿ ಕಾಂತಿ, ಹೊಳಪು ಮೂಡುತ್ತದೆ. ಈ ಎಣ್ಣೆ ಹಚ್ಚಿದರೆ, ನಿಮ್ಮ ಮಗಳಲ್ಲಿ ಹೇಗೆ ಬದಲಾವಣೆ ಆಗುತ್ತದೆ ಅಂತ ನಿಮಗೆ ಗೊತ್ತಾಗುತ್ತದೆ” ತನ್ನಲ್ಲಿರುವ ಎಣ್ಣೆಯ ಬಗ್ಗೆ ವಿವರಣೆ ನೀಡುತ್ತಿದ್ದಳು ಆ ಹೆಣ್ಣುಮಗಳು.
ಸುಲಭದಲ್ಲೇನೂ ಅವಳ ಮಾತುಗಳಿಗೆ ಅಮ್ಮ ಕರಗಲಿಲ್ಲ. ಆಕೆ ಪುಸಲಾಯಿಸುತ್ತಿದ್ದಳು. ಕಡೆಗೂ ಅವಳ ಮಾತಿನ ಓಘಕ್ಕೆ ಶರಣಾದ ಅಮ್ಮ ಎಣ್ಣೆಯನ್ನು ಖರೀದಿಸಿ, ಆಕೆ ಹೇಳಿದ ಹಣ ನೀಡಿದರು. ಎಣ್ಣೆಯ ಪರಿಮಳ ಹೇಗಿದೆ ನೋಡೋಣವೆಂದು ಎಣ್ಣೆಸೀಸೆಯ ಮುಚ್ಚಳ ತೆಗೆದು ಮೂಸಲು ಹೋದಾಗ “ಅಯ್ಯೋ, ಅಯ್ಯೋ, ಮೂಸ್ಬ್ಯಾಡ ಮಗಾ. ಮೂಗಿನ ಕೂದಲು ಉದ್ದಕ್ಕೆ ಬೆಳೆದಾವು” ಅಂದಾಗ ತಲೆಗೂದಲು ಉದ್ದ ಬೆಳೆಯುವುದು ಗ್ಯಾರಂಟಿ ಅಂದುಕೊಂಡೆ.
ಮತ್ತೂ ಆ ಹೆಣ್ಣುಮಗಳು ಹೊರಡುವ ಸೂಚನೆ ಕಾಣಿಸಲಿಲ್ಲ. “ಅವ್ವಾರೇ, ಮಗ ತುಂಬಾ ಹಸಿದಿದೆ. ಏನಾರ ತಿಂಡಿ ಇದ್ರೆ ಕೊಡ್ರವ್ವಾ” ಎಂದಾಗ ಅಮ್ಮನ ಹೆಂಗರುಳು ಚುರ್ ಅಂತ ಮಿಡಿದಿತ್ತು. ಆ ದಿನ ಬೆಳಿಗ್ಗೆ ತಿಂಡಿಗೆ ಮಾಡಿದ್ದ ದೋಸೆ ಜೊತೆಗೆ ನೀರುಮಜ್ಜಿಗೆ ಸರಬರಾಜು ಕೂಡಾ ಆಯ್ತು. ಮಗು ಗಬಗಬನೆ ತಿಂಡಿ ತಿಂದಿದ್ದು ನೋಡುವಾಗ “ಪಾಪ ತುಂಬಾ ಹಸಿದಿದ್ದಿರಬೇಕು” ಅಂತನಿಸಿತು. “ಸರಿ, ನನ್ನ ಅಡುಗೆ ಕೆಲಸ ಬಾಕಿಯಾಗಿದೆ. ನೀವಿನ್ನು ಹೊರಡಿ” ಅನ್ನುವ ಸೂಚನೆ ನೀಡಿದರೂ ಆ ಹೆಣ್ಣುಮಗಳು ಹೊರಡುವ ಸೂಚನೆ ಕಾಣಲಿಲ್ಲ. “ಅವ್ವಾರೇ, ನನ್ನ ಮೈದುನನ ಹೆಣ್ತಿ ಹಸಿ ಬಾಣಂತಿ. ನಿಮ್ಮ ಹಳೆ ಸೀರೆ ಕೊಡಿ ಅವ್ವಾರೇ. ಬಾಣಂತಿ, ಮಗೂಗೆ ಕೊಡ್ರವ್ವ. ಆ ದ್ಯಾವ್ರು ನಿಮ್ಮನ್ನು ಸಂದಾಗಿಟ್ಟಿರಲಿ”. ಹಳೆ ಸೀರೆಗಳ ಸರಬರಾಜು ಕೂಡಾ ಆಯ್ತು. ಮತ್ತೂ ಹೊರಡುವ ಲಕ್ಷಣ ಇಲ್ಲ! “ಅವ್ವಾರೇ, ಒಂದು ತೆಂಗಿನಕಾಯಿ ಕೊಡ್ರವ್ವ”. ಆಕೆಯ ಗೋಗರೆತ ತಾಳಲಾರದೇ, ತೆಂಗಿನಕಾಯಿ ಕೊಟ್ಟು” ಇಲ್ಲೇ ಇದ್ದರೆ ಇವಳ ಪಟ್ಟಿ ಮುಗಿಯುವುದೇ ಇಲ್ಲ” ಅನ್ನುತ್ತಾ ಒಳನಡೆದರು ಅಮ್ಮ. ತನ್ನ ಚೀಲ ತುಂಬಿಸಿಕೊಂಡು, ಆಕೆ ಹೊರಟು ಹೋದಳು.
ಎಣ್ಣೆ ಖರೀದಿಸಿ ಆಗಿತ್ತು. ತಲೆಗೆ ಹಚ್ಚುವುದು ಮಾತ್ರ ಬಾಕಿ ಇತ್ತು. ಕಾಲೇಜು ಗ್ರಂಥಾಲಯದಲ್ಲಿ ಐದು ಅಡಿ ಆರು ಅಂಗುಲ ಕೂದಲುಳ್ಳ ಇಬ್ಬರು ಅವಳಿ ಸೋದರಿಯರ ಬಗ್ಗೆ ಲೇಖನವನ್ನು ಸುಧಾ ಪತ್ರಿಕೆಯಲ್ಲಿ ಓದಿದ್ದೆ. ಅಷ್ಟಲ್ಲದಿದ್ದರೂ ಹಾವಿನಂತೆ ಇಳಿ ಬಿದ್ದ ಜಡೆಯ ಕಲ್ಪನೆಯಂತೂ ಬಂದು ಹೋಗಿದ್ದಂತೂ ನಿಜ. ಒಂದು ಶುಭದಿನ, ಮೂಗಿಗೆ ಪರಿಮಳ ಬರದಂತೆ ಜಾಗ್ರತೆ ವಹಿಸಿ ಆ ಎಣ್ಣೆಯನ್ನು ತಲೆಗೆ ಹಚ್ಚಿದೆ. ಎರಡನೆಯ ದಿನ ಸಂಜೆಯಾಗುವಾಗ ತಲೆಭಾರ, ಕಣ್ಣುರಿ, ಜ್ವರ. ತೀವ್ರವಾದ ಜ್ವರದಿಂದ ಚೇತರಿಸಿಕೊಳ್ಳಲು ವಾರವೇ ಹಿಡಿದಿತ್ತು.
ಕಾಕತಾಳೀಯ ಆಗಿದ್ದರೂ, ಎಣ್ಣೆ ಹಚ್ಚಿದ ಮರುದಿನವೇ ಜ್ವರ ಬಂದು ಹಾಸಿಗೆ ಹಿಡಿದದ್ದು ನೆಪವಾಗಿ ಜ್ವರ ಬರಲು ಎಣ್ಣೆಯೇ ಕಾರಣವಾಗಿರಬೇಕೆಂದು ತೀರ್ಮಾನಕ್ಕೆ ಬಂದ ಅಮ್ಮ, ಆ ಎಣ್ಣೆಯನ್ನು ಯಾರೂ ಹಾಕುವುದು ಬೇಡವೆಂದು ತಾಕೀತು ಮಾಡಿ ಆಗಿತ್ತು.
ಮನೋಭಿತ್ತಿಯಲ್ಲಿ ಅವಿತಿದ್ದ ಮೂವತ್ತು ವರ್ಷಗಳ ಹಿಂದಿನ ಘಟನೆಯನ್ನು ಕಾಂತಾರ ಚಲನಚಿತ್ರದ ಆ ದೃಶ್ಯ ನೆನಪಿಸಿತು.
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ಯಬ್ಬಾ …..ಯಾವುದನ್ನು ಸರಿಮನದಟ್ಟು ಮಾಡಿಯೇ ಮುಂದೆ ಸಾಗಬೇಕು ..ಯಬ್ಬಾ ಓದಿದಾಗ ಒಮ್ಮೆ ಭಯ ಆಯಿತು ಪ್ರಭ
ಕಾಂತಾರ ನೋಡಿದ ದಿನದಿಂದಲೇ ಈ ವಿಷಯ ಬರೆಯಲು ಯೋಚಿಸಿದ್ದೆ, ಧನ್ಯವಾದಗಳು ಅಕ್ಕ
ವಾವ್..ನೆನಪನಂಗಳದ ಬುತ್ತಿ ಅದರ ಅಭಿವ್ಯಕ್ತಿ ಸೊಗಸಾಗಿ ಮೂಡಿಬಂದಿದೆ.. ಧನ್ಯವಾದಗಳು ಮೇಡಂ.
ನೆನಪಿನ ಬುತ್ತಿಯಿಂದ ಉಣಿಸಿದ ಬರಹಕ್ಕೆ ಮೆಚ್ಚುಗೆ ಸೂಸಿದ ನಿಮಗೆ ಧನ್ಯವಾದಗಳು ಮೇಡಂ
ಬುತ್ತಿ ರುಚಿಯಾಗಿದೆ
ಮೆಚ್ಚುಗೆ ಸೂಸಿದ ನಿಮಗೆ ಧನ್ಯವಾದಗಳು
ಚಂದದ ಬರಹ
ಮೆಚ್ಚುಗೆಗೆ ಧನ್ಯವಾದಗಳು
ಎಣ್ಣೆಯಿಂದ ಆದ ಪೇಚಾಟ.ಅಲ್ಲವಾ.ಯಾವುದಕ್ಕೂ ತುಂಬಾಜಾಗ್ರತೆ ಬೇಕು.ಓದುವಾಗ ಜುಂ ಆಯಿತು
ಹೌದು…ನಂಬುವುದು ಕೂಡಾ ಕಷ್ಟ.. ಮೆಚ್ಚುಗೆಗೆ ಧನ್ಯವಾದಗಳು ಅಕ್ಕ
ಬಹಳ ಅಂದವಾಗಿ ಮೂಡಿ ಬಂದಿದೆ.
ಮೆಚ್ಚುಗೆಗೆ ಧನ್ಯವಾದಗಳು
ಅಯ್ಯೋ…. ನಿಮ್ಮ ನೆನಪು ಶಕ್ತಿಗೆ ನಾವು ಶರಣಾದೆವು
ಮೆಚ್ಚುಗೆಗೆ ಧನ್ಯವಾದಗಳು..ಕೆಲವು ವಿಷಯಗಳು ನೆನಪಿರುತ್ತವೆ ಅಷ್ಟೇ
ಜ್ವರದ ಜೊತೆ ಕೂದಲು ಉದ್ದ ಬಂತಾ ಹೇಗೆ??
ಮುಂದಿನದನ್ನು ಕಾದಿರಿಸಲಾಗಿದೆ….!!
ಹೌದು…ಹೀಗೂ ಉಂಟೇ?? ಚಂದದ ಲೇಖನ
ಕೂದಲು ಉದ್ದ ಬರುವುದಾ? ಮುಂದಿನ ಭಾಗ ಇಲ್ಲ…. ಮೆಚ್ಚುಗೆಗೆ ಧನ್ಯವಾದಗಳು ಮೇಡಂ
ಕಾಂತಾರದಿಂದ ಹೀಗೊಂದು ಕತೆ ಚೆನ್ನಾಗಿದೆ. ಈಗ ಆಗಿರುತ್ತಿದ್ದರೆ ಎಣ್ಣೆ ತಲೆಗೆ ಹಾಕಿ ಮತ್ತೊಮ್ಮೆ ಆಕೆಯ ತಲೆ ಎಣ್ಣೆಗೆ ಕಾಯುತ್ತಿರಲಿಲ್ಲವೇ?
ಈಗ ಆಗಿದ್ದರೆ ಆ ಕಥೆ ನಡೆಯುತ್ತಲಿರಲಿಲ್ಲ. ಮೆಚ್ಚುಗೆಗೆ ಧನ್ಯವಾದಗಳು ಮೇಡಂ
ಆರಂಭವು ನಿಜವಾಗಿಯೂ ನನ್ನನ್ನು ಸೆಳೆಯಿತು. ಓದುಗರ ಗಮನವನ್ನು ಹೇಗೆ ಸೆಳೆಯುವುದು ಎಂದು ನಿಮಗೆ ತಿಳಿದಿದೆ.
ನಿಮ್ಮ ಬರವಣಿಗೆ ತುಂಬಾ ಸುಂದರವಾಗಿದೆ ಏಕೆಂದರೆ ನೀವು ಯಾವಾಗಲೂ ಸರಿಯಾದ ಕ್ಷಣಕ್ಕೆ ಸರಿಯಾದ ಪದವನ್ನು ತಿಳಿದಿರುತ್ತೀರಿ.
ನಿಮ್ಮ ಬರವಣಿಗೆ ನನಗೆ ಯಾವಾಗಲೂ ಬರಹಗಾರನಾಗಲು ಬಯಸುತ್ತದೆ.
ಮಗು ಗಬಗಬನೆ ತಿಂಡಿ ತಿಂದಿದ್ದು ನೋಡುವಾಗ “ಪಾಪ ತುಂಬಾ ಹಸಿದಿದ್ದಿರಬೇಕು” ಅಂತನಿಸಿತು. ಈ ವಾಕ್ಯ ನಿಜವಾಗಿಯೂ ನನ್ನನ್ನು ಸೆಳೆಯಿತು. ನೀವು ಅದನ್ನು ರೂಪಿಸಿದ ರೀತಿಯನ್ನು ನಾನು ಇಷ್ಟಪಡುತ್ತೇನೆ.
ನಿಮ್ಮ ಬರವಣಿಗೆ ನನ್ನ ಬಾಲ್ಯವನ್ನು ಅಂತಹ ಸ್ಪಷ್ಟ ವಿವರಗಳಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದೆ. ನೀವು ಅಂತಹ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದೀರಿ. ನೀವು ಬರೆಯಲು ಅಂತಹ ಆಸಕ್ತಿದಾಯಕ ವಿಷಯವನ್ನು ಆರಿಸಿದ್ದೀರಿ.
ನಾನು ನಿಜವಾಗಿಯೂ ನಿಮ್ಮಿಂದ ಕಲಿಯಲು ಇಷ್ಟಪಡುತ್ತೇನೆ!
ನಿಮ್ಮ ಮುಂದಿನ ತುಣುಕು ಯಾವಾಗ ಹೊರಬರುತ್ತದೆ?