ಹತ್ತನೆ ತರಗತಿಯೋ? ಬಂಗಾರದ ಪಂಜರವೋ?
ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಬೆಳಗಿನ ಶುಭೋದಯದೊಂದಿಗೆ ಮಕ್ಕಳು ಶಿಕ್ಷಕರನ್ನು ಸ್ವಾಗತಿಸುವ ಪರಿ ಅತ್ಯಂತ ಮುದ ನೀಡುವಂತಹದ್ದು. ನಿರ್ಮಲ ಮನಸ್ಸಿನ, ತುಂಟ ನಗೆಯ, ಪ್ರಶಾಂತವಾದ ಅವರ ಮುಖ ನೋಡುವುದೊಂದು ಭಾಗ್ಯವೇ ಸರಿ.
ಅದರಲ್ಲೂ ಮರ್ಕಟ ಮನಸ್ಸಿನ ಹತ್ತನೆಯ ತರಗತಿಯ ಮಕ್ಕಳನ್ನು ನಿಭಾಯಿಸುವುದೇ ಒಂದು ಸವಾಲು. ಶಾರೀರಿಕವಾಗಿ ಬೆಳವಣಿಗೆ ಆಗಿದ್ದರೂ ಮಾನಸಿಕವಾಗಿ ಅಪ್ರಬುದ್ಧರು. ಸ್ವಲ್ಪ ನಾಚಿಕೆ, ಒಂದಷ್ಟು ಭಯ ಮಿಶ್ರಿತ ಆತಂಕ. ಅತಿ ಸೂಕ್ಷ್ಮ ಮನಸ್ಥಿತಿಯ, ತಮ್ಮದೇ ಲೋಕದಲ್ಲಿ ವಿಹರಿಸುವ ಮುಗ್ಧ ಮನಸ್ಸುಗಳು!
ತಮಗೆ ಬೇಕಾದ ಪರಿಸ್ಥಿತಿಯಲ್ಲಿ, ‘ದೊಡ್ಡವರಾಗಿದ್ದೇವೆ’ ಎಂದು ತೋರಿಸಿಕೊಳ್ಳುವ ತವಕ. ಹಾಗೆಯೇ ತಮಗೆ ಪೂರಕವಲ್ಲದ ಪರಿಸ್ಥಿತಿಯಲ್ಲಿ ಚಿಕ್ಕವರಾಗೇ ಉಳಿಯುವ ಬಯಕೆ. ಪ್ರತಿ ಕ್ಷಣವೂ ಯಾವುದು ಸರಿ, ಯಾವುದು ತಪ್ಪು ಎಂದು ವಿಶ್ಲೇಷಿಸುವ ಮನಸ್ಸು. ಈ ಸಂದರ್ಭದಲ್ಲಿ ತಮ್ಮ ಜೀವನದ ಅತಿ ಮುಖ್ಯ ತಿರುವಿನಲ್ಲಿ ನಿಂತು ಯುದ್ಧಕ್ಕೆ ಸನ್ನದ್ಧರಾದ ಸೈನಿಕರಂತೆ ಕಾಣುವರು.
ಕಿರಿಯ ತರಗತಿಗಳಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಚ್ಚಾಗಿ ಗಮನಿಸಿಕೊಳ್ಳದ ಪೋಷಕರು, ದಿಢೀರನೆ ಶಾಲೆಯಲ್ಲಿ ಪ್ರತ್ಯಕ್ಷರಾಗಿ, ಶಾಲೆಯ ಶಿಕ್ಷಕರ ಹಾಗು ತಮ್ಮ ಮಕ್ಕಳ ಮೇಲೆ ಒತ್ತಡ ಹೇರಲು ಶುರುವಿಟ್ಟು ಕೊಳ್ಳುತ್ತಾರೆ. ಆ ಕ್ಷಣದಿಂದ ಪೋಷಕರ ಹಾಗು ಶಿಕ್ಷಕರ ಮಧ್ಯೆ ಚಕಮಕಿ, ವಿಚಾರ ವಿನಿಮಯಗಳು ಪ್ರಾರಂಭವಾಗುತ್ತವೆ. ಅತಿ ಕಾಳಜಿಯಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಪೋಷಕರೂ ಇದ್ದಾರೆ. ಆದರೆ ಅಂತಹವರ ಸಂಖ್ಯೆ ಕಡಿಮೆಯೇ ಸರಿ.
ಶಿಕ್ಷಕರೂ ಸಹ ಪಾಠಗಳನ್ನು ಮುಗಿಸಿ, ಪುನರಾವರ್ತನೆಯತ್ತ ಮುಖ ಮಾಡಿ, ಹೇಗಾದರೂ ಮಾಡಿ ಎಲ್ಲಾ ಮಕ್ಕಳೂ ಸಮಾಧಾನಕರ ಅಂಕಗಳನ್ನು ಪಡೆದು, ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕೆಂಬ ಉದ್ದೇಶದಿಂದ ತಮ್ಮ ಪಾಲಿನ ಒತ್ತಡವನ್ನು ಮಕ್ಕಳ ಮೇಲೆ ಹೇರುತ್ತಾರೆ.
ಸ್ವೇಚ್ಛೆಯಿಂದ ಹಕ್ಕಿಗಳಂತೆ ಹಾರಾಡುತ್ತಿದ್ದ ಮಕ್ಕಳು, ‘ಹತ್ತನೇ ತರಗತಿ’ ಎಂಬ ಚಕ್ರವ್ಯೂಹದಲ್ಲಿ ಸಿಲುಕಿಕೊಂಡು ಬಿಡುತ್ತಾರೆ. ಪೋಷಕರ ಈ ಅನಿರೀಕ್ಷಿತ ವರ್ತನೆ, ಶಿಕ್ಷಕರ ಎಚ್ಚರಿಕೆಯ ಮಾತುಗಳು, ಪಠ್ಯ ಪಾಠಗಳ ವಿಸ್ತರಣೆ, ಕಿರಿಯ ತರಗತಿಗಳಲ್ಲಿ ನಿರಾಸಕ್ತಿಯಿಂದಲೋ,
ಬೇಜವಾಬ್ದಾರಿಯಿಂದಲೋ, ಕಲಿಯದೇ ಉಳಿಸಿಕೊಂಡ ಪರಿಕಲ್ಪನೆಗಳು (concepts) ಈಗ ಬಂದು ಕಾಡಿಸಲಾರಂಭಿಸುತ್ತವೆ.’ಹತ್ತನೇ ತರಗತಿ’ ಎಂಬ ಮಾಯಾಂಗನೆಯ ಪ್ರಭಾವವೇ ಅಷ್ಟೊಂದು ತೀವ್ರ ಗತಿಯಲ್ಲಿ ಇರುತ್ತದೆ.
ಎಂದೂ ಇವರ ಓದಿನ ಬಗ್ಗೆ ತಲೆಕೆಡಿಸಿಕೊಳ್ಳದ ನೆಂಟರಿಷ್ಟರು, ಈ ವರುಷ ಮಾತ್ರ ಬೆಂಬಿಡದ ನಕ್ಷತ್ರಿಕನಂತೆ ನೆರಳಾಗಿ ಹಿಂಬಾಲಿಸಲು ಶುರುವಿಟ್ಟುಕೊ ಳ್ಳುತ್ತಾರೆ. ಇಷ್ಟು ಸುಧೀರ್ಘಕಾಲ ತಮ್ಮಿಷ್ಟದಂತೆ ಓದಿಕೊಳ್ಳುತ್ತಿದ್ದ ಮಕ್ಕಳು, ಈಗ ಇನ್ನೊಬ್ಬರ ಪ್ರತಿಷ್ಠೆಗೆ ಬಲಿಯಾಗುತ್ತಾರೆ. ಎಲ್ಲರ ಒತ್ತಡ, ಆಕಾಂಕ್ಷೆಗಳನ್ನು ಈಡೇರಿಸುವುದೇ ಅವರ ಮುಖ್ಯ ಗುರಿಯಾಗಿಬಿಡುತ್ತದೆ.
ಅವಶ್ಯಕತೆ ಇರದಿದ್ದರೂ ಮನೆಪಾಠಕ್ಕೆ (tution) ದಬ್ಬುವ ಪೋಷಕರು, ಮಕ್ಕಳ ತೀವ್ರ ಮಾನಸಿಕ ಕ್ಲೇಷೆಗೆ ಕಾರಣೀಭೂತರಾಗುತ್ತಾರೆ. ಚೆನ್ನಾಗಿ ಓದುವ ಮಕ್ಕಳೂ ಆತಂಕಕ್ಕೆ ಒಳಗಾಗಿ, ಹಗಲಿರುಳೂ ಅಭ್ಯಯಿಸಿ, ದೈಹಿಕ ಅನಾರೋಗ್ಯಕ್ಕೂ ತುತ್ತಾಗುತ್ತಾರೆ. ಶಾಲೆಯಲ್ಲೂ, ಮನೆಯಲ್ಲೂ ಇವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವವರೇ ಇಲ್ಲದಂತಾಗುತ್ತದೆ. ಮಕ್ಕಳ ಬುದ್ಧಿಶಕ್ತಿಯ ಪರಿಮಿತಿ ಎಷ್ಟೇ ಇದ್ದರೂ, ಶೇಕಡ ತೊಂಬತ್ತರಷ್ಟು ಅಂಕಗಳನ್ನೇ ಗುರಿಯನ್ನಾಗಿ ಮುಂದಿಡುವ ಪೋಷಕ ವರ್ಗಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಇಂತಹ ಪೋಷಕರು ತಮ್ಮ ಹಿಂದಿನ ಬೇಜವಾಬ್ದಾರಿ ವರ್ತನೆ, ಇಂದಿನ ಹತಾಶೆನ್ನು ಶಿಕ್ಷಕರ ಹಾಗು ಶಾಲೆಯ ಮೇಲೆ ಹಾಕಿ ಧನ್ಯರಾಗುತ್ತಾರೆ!
ಆರೋಗ್ಯ, ಮನಃ ಶಾಂತಿ, ಪಠ್ಯೇತರ ಚಟುವಟಿಕೆಗಳನ್ನು ಬದಿಗೊತ್ತಿ, ಪರೀಕ್ಷೆಗಳನ್ನು ನಾವು ಇಷ್ಟೊಂದು ಗಾಂಭೀರ್ಯತೆಯಿಂದ ತೆಗೆದುಕೊಳ್ಳಲು ಎಂದಿನಿಂದ ಪ್ರಾರಂಭಿಸಿದೆವೋ ತಿಳಿಯದಾಗಿದೆ. ಮಕ್ಕಳಲ್ಲಿ ಅನಾವಶ್ಯಕ ಒತ್ತಡ ಹೇರಿ, ಅವರ ಕ್ರೀಡೆ ಹಾಗು ಇನ್ನಿತರ ವ್ಯಕ್ತಿ ವಿಕಸನ ಚಟುವಟಿಕೆಗಳನ್ನು ಪಕ್ಕಕ್ಕಿಡಿಸಿ, ಕೇವಲ ಅಂಕಗಳ ಬೇಟೆಗೆ ಅವರನ್ನು ತಯಾರು ಮಾಡುತ್ತಿರುವುದು ಎಲ್ಲಿಯ ನ್ಯಾಯ? ಮಕ್ಕಳು ಅಂಕಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಓಟದಲ್ಲಿ, ತಮ್ಮಲ್ಲಿರುವ ಕ್ರಿಯಾತ್ಮಕತೆ, ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಇಷ್ಟು ವರ್ಷ ಇಲ್ಲದ ಒತ್ತಡ, ಅತಿಯಾದ ಮುತುವರ್ಜಿಯನ್ನು ಕಂಡು ವಿದ್ಯುತ್ ತಾಕಿದ ಕಾಗೆಯ ಹಾಗೆ ನೀರಿನಲ್ಲಿ ನೆನೆದು ಮುದುಡಿದ ಗುಬ್ಬಚ್ಚಿಯ ಹಾಗೆ, ಬಂಗಾರದ ಪಂಜರದಲ್ಲಿ ಬಂಧಿಯಾದ ಗಿಳಿಯ ಹಾಗೆ, ಹತ್ತನೇ ತರಗತಿಯ ಮಕ್ಕಳು ಎಲ್ಲೆಲ್ಲೂ ಕಾಣಸಿಗುತ್ತಾರೆ.
ಈ ಸನ್ನಿವೇಶಕ್ಕೆ ಯಾರು ಕಾರಣರು? ಶಿಕ್ಷಕರೇ? ಪೋಷಕರೇ? ಅಥವಾ ಇಂದಿನ ಶಿಕ್ಷಣ ವ್ಯವಸ್ಥೆಯೇ?
– ಮಾಲಿನಿ ವಾದಿರಾಜ್
ಲೇಖನ ಚೆನ್ನಾಗಿದೆ..ವಾಸ್ತವಿಕ ಚಿತ್ರ ಣ..
ಧನ್ಯವಾದಗಳು ಮಾಲಿನಿಯವರೇ.
ಧನ್ಯವಾದಗಳು
ಬರೆವಣಿಗೆ, ಮತ್ತು ಶೈಲಿ ಚೆನ್ನಾಗಿದೆ
Nice one
ಒತ್ರಡ ರಹಿತ ಹತ್ತನೇ ತರಗತಿ ಇಂದು ಬೇಕಾಗಿದೆ…
ಬರೆಹ ಚೆನ್ನಾಗಿದೆ ಮೇಡಂ.