ಲಹರಿ

ಒಮ್ಮೆ ಮುಖವಾಡ ಕಳಚು ಮಗಳೇ

Share Button

ನೈಜೀರಿಯಾದ ಖ್ಯಾತ ಕವಿ -ಗೇಬ್ರಿಯಲ್ ಒಕಾರಾ ರಚಿಸಿರುವ – ‘ಒನ್ಸ್ ಅಪಾನ್ ಎ ಟೈಮ್’ (Once Upon A Time) ಕವನವನ್ನು ಕಾಲೇಜಿನಲ್ಲಿ ಬೋಧಿಸುತ್ತಿರುವಾಗ, ನನಗೆ ನನ್ನ ಬದುಕಿನ ನೆನಪುಗಳ ಸರಮಾಲೆಯೊಂದು ಕಣ್ಣ ಮುಂದೆ ತೇಲಿ ಬಂತು. ಮಾನವನು ನಿತ್ಯ ಬದುಕಿನಲ್ಲಿ ಹಲವು ಮುಖವಾಡಗಳನ್ನು ಧರಿಸಿ, ಕೊನೆಗೆ ತನ್ನತನವನ್ನೇ ಮರೆತು ಕಂಗಾಲಾಗುವನು. ಕೊನೆಗೆ ದೀನನಾಗಿ, ಸಹಜವಾಗಿ ನಗುವುದನ್ನು ಕಲಿಸು ಎಂದು ತನ್ನ ಮಗನನ್ನೇ ಕೇಳಿಕೊಳ್ಳುವನು.

ತಂದೆ ತಾಯಿಗಳು ಕನ್ಯಾದಾನ ಮಾಡಿದ ದಿನದಿಂದಲೇ, ಹೆಣ್ಣಿಗೆ ಮುಖವಾಡಗಳನ್ನು ಧರಿಸುವ ಕ್ಷಣಗಳು ಆರಂಭವಾಗುವುದು- ಅತ್ತೆಯ ಮನೆಯಲ್ಲಿ ಸೊಸೆಯಾಗಿ, ಗಂಡನಿಗೆ ಮಡದಿಯಾಗಿ. ಮೈದುನನಿಗೆ ಅತ್ತಿಗೆಯಾಗಿ..ಇತ್ಯಾದಿ. ಗೃಹಲಕ್ಷ್ಮಿಯೆಂಬ ಪಟ್ಟ ಹೊತ್ತಮೇಲೆ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಗಂಟುಮೂಟೆ ಕಟ್ಟಿ ಅಟ್ಟದ ಮೇಲೆ ಜೋಪಾನವಾಗಿ ಇಡಲೇಬೇಕಲ್ಲ. ಜಾನಪದರು ವಿವಾಹಿತ ಹೆಣ್ಣಿಗೆ ನೀಡುವ ಎಚ್ಚರಿಕೆಯಾದರೂ ಏನೆಂದು ಕೇಳೋಣ ಬನ್ನಿ –‘ಅತ್ತೀಯ ಮನಿಯಾಗ ತೊತ್ತಾಗಿ ಇರಬೇಕು,/ ಹೊತ್ತಾಗಿ ನೀಡಿದರೂ ಉಣಬೇಕು ಮಗಳೇ.’ ತವರಿನಲ್ಲಿ ತಂದೆತಾಯಿಯರ ಮಮತೆಯಲ್ಲಿ ಮಿಂದ ಹುಡುಗಿ, ಅಪರಿಚಿತರ ಮಧ್ಯೆ ತನ್ನ ಬದುಕನ್ನು ಕಟ್ಟಿಕೊಳ್ಳಲು ಹರಸಾಹಸ ಪಡಬೇಕಲ್ಲವೇ? ಇನ್ನು ಸನಾತನ ಧರ್ಮದಲ್ಲಿ ಅವಳಿಗೆಂದೇ ಒಂದು ಚೌಕಟ್ಟನ್ನು ಹಾಕಿಟ್ಟಿದ್ದಾರೆ – ‘ಕಾರ್‍ಯೇಷು ದಾಸೀ, ಕರಣೇಷು ಮಂತ್ರೀ / ಭೋಜ್ಯೇಷು ಮಾತಾ, ಶಯನೇಷು ರಂಭಾ / ರೂಪೇಷು ಲಕ್ಷ್ಮೀ, ಕ್ಷಮಯಾ ಧರಿತ್ರಿ / ಷಟ್ ಧರ್ಮಯುಕ್ತಾ ಕುಲಧರ್ಮಪತ್ನೀ.‘ ಈ ಆರು ಗುಣಗಳನ್ನು ಹೊಂದಿದವಳು ಮಾತ್ರ ಧರ್ಮಪತ್ನಿಯಾಗಲು ಅರ್ಹಳು.

ಇನ್ನು ಹೆಣ್ಣು ಉದ್ಯೋಗಸ್ಥಳಾದರೆ, ಕಾಲಿಗೆ ಸದಾ ಚಕ್ರ ಕಟ್ಟಿಕೊಂಡು ಓಡುತ್ತಲೇ ಇರುವಳು. ಮನೆಗೆಲಸ, ಆಫೀಸಿನ ಕೆಲಸಗಳ ಮಧ್ಯೆ ಕಳೆದುಹೋಗುವಳು. ಹಲವು ಮುಖವಾಡಗಳನ್ನು ಧರಿಸುವ ಹೆಣ್ಣಿಗೆ ಉಸಿರು ಕಟ್ಟಿದ ಅನುಭವ. ಎಷ್ಟೋ ಬಾರಿ ಬಿ.ಪಿ. ಸಕ್ಕರೆ ಖಾಯಿಲೆ, ಗ್ಯಾಸ್ಟ್ರೈಟಿಸ್ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುವಳು. ಇದಕ್ಕೆ ಪರಿಹಾರವೇ ಇಲ್ಲವೇ? ಗೃಹಿಣಿಯಾದವಳು ತನ್ನ ಕರ್ತವ್ಯವನ್ನು ಮಾಡಲೇಬೇಕಲ್ಲವೆ? ಲಂಡನ್‌ನಲ್ಲಿ ವಾಸವಾಗಿದ್ದ ವೈದ್ಯೆಯೊಬ್ಬಳು ಹೊಟ್ಟೆನೋವೆಂದು ಆಸ್ಪತ್ರೆ ಸೇರಿದ್ದಳು. ವೈದ್ಯರ ತಪಾಸಣೆಯ ನಂತರ ಕೊಲೋನ್ ಕ್ಯಾನ್ಸರ್ ಎಂದು ಗೊತ್ತಾದಾಗ, ಅವಳು ಮಾಡಿದ್ದೇನು ಗೊತ್ತೆ? ವೈದ್ಯರ ಅನುಮತಿ ಪಡೆದು, ನಾಲ್ಕು ದಿನ ಮನೆಗೆ ಬಂದು ತನ್ನ ಪತಿಗೆ ಹಾಗೂ ಆರು ವರ್ಷದ ಮಗಳಿಗೆ ಒಂದು ವಾರಕ್ಕಾಗುವಷ್ಟು ಊಟ, ತಿಂಡಿ ತಯಾರಿಸಿ ಫ್ರಿಜ್‌ನಲ್ಲಿಟ್ಟು, ಬಟ್ಟೆ ಒಗೆದು, ಪಾತ್ರೆ ತೊಳೆದು, ಮರಳಿ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದಳು ಎಂದರೆ ನಂಬುತ್ತೀರ? ತಾಯಿಯಾಗಲೀ, ಅತ್ತೆಯಾಗಲೀ ಅವಳ ನೆರವಿಗೆ ಲಂಡನ್ನಿಗೆ ಬರುವ ಸ್ಥಿತಿಯಲ್ಲಿರಲಿಲ್ಲ. ಅವಳ ಮನಸ್ಸು ನೋವಿನಿಂದ ಚೀರಾಡುತ್ತಿತ್ತು. ಚಿಕಿತ್ಸೆಯ ನಂತರ ತಾನು ಮೊದಲಿನಂತೆ ಆಗುವೆನೇ ಎಂಬ ಆತಂಕ. ಗಂಡನಿಗಾದರೋ ಅಡಿಗೆ ಮನೆಯ ಪರಿಚಯವೇ ಇರಲಿಲ್ಲ, ಗೃಹಿಣಿಯ ಮುಖವಾಡ ಹೊತ್ತವಳು, ತನ್ನ ನೋವಿನ ಮಧ್ಯೆಯೂ ಕರ್ತವ್ಯವನ್ನು ಮರೆಯಲಾಗಲಿಲ್ಲ.

ಹಾಗಿದ್ದಲ್ಲಿ, ಹೆಣ್ಣು ಒಂದೆರೆಡು ಗಂಟೆಗಳ ಕಾಲವಾದರೂ ತನ್ನ ಮುಖವಾಡಗಳನ್ನು ಕಿತ್ತೆಸೆದು ವಿಶ್ರಾಂತಿ ಪಡೆಯಲು ಸಾಧ್ಯವೇ? ಮದುವೆಯಾದ ಹೆಣ್ಣು, ಶ್ರಾವಣ ಮಾಸ ಎಂದು ಬಂದೀತೆಂದು ಹಂಬಲಿಸುತ್ತಾಳೆ, ತನ್ನ ತವರಿಗೆ ತೆರಳಿ, ಹಡೆದವ್ವನ ಮಡಿಲಲ್ಲಿ ಮಲಗಿ ಹಗುರಾಗಲು. ಈ ಜಾನಪದ ಗೀತೆಯನ್ನು ನೆನಪು ಮಾಡಿಕೊಳ್ಳಿ – ‘ಆಷಾಢ ಮಾಸ ಬಂದೀತವ್ವಾ, ಅಣ್ಣಾ ಕರಿಯಾಕೆ ಬರಲಿಲ್ಲಾ’ – ಎಂದು ಹೆಣ್ಣು ಹಲುಬುವಳು. ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಹೆಣ್ಣು ಬಾವಿಕಟ್ಟೆಗೆ ತೆರಳುತ್ತಿದ್ದಳು. ಅಲ್ಲಿ ಹೆಣ್ಣಿಗೆ ತನ್ನ ನೋವು ನಲಿವುಗಳನ್ನು ಹಂಚಿಕೊಳ್ಳಲು ಜೊತೆಗಾರರು ದೊರೆಯುತ್ತಿದ್ದರು. ತನ್ನ ಕಷ್ಟಗಳನ್ನು ಹೇಳಿಕೊಂಡು ಹಗುರಾಗುತ್ತಿದ್ದಳು, ಅನುಭವಿಗಳು ಅತ್ತೆಯ ಮನೆಯಲ್ಲಿ ಹೊಂದಿಕೊಂಡು ಹೋಗಲು ಕೆಲವು ಕಿವಿಮಾತುಗಳನ್ನೂ ಹೇಳಿಕೊಡುತ್ತಿದ್ದರು. ಹೀಗೆ ಬಾವಿಕಟ್ಟೆಯು ಪಾತ್ರೆ, ಬಟ್ಟೆಗಳನ್ನು ತೊಳೆಯುವುದರ ಜೊತೆಜೊತೆಗೇ ಅವಳ ಮನಸ್ಸನ್ನೂ ಸ್ವಚ್ಛ ಮಾಡುವ ಸಾಧನವಾಗಿತ್ತು ಸ್ನೇಹಿತರ ಮಾತುಗಳು ಅವಳ ಮನಸ್ಸನ್ನು ಅರಳಿಸುತ್ತಿದ್ದವು. ಉತ್ಸಾಹ, ಲವಲವಿಕೆಯಿಂದ ಮನೆಗೆ ಮರಳುತ್ತಿದ್ದಳು.

ಇಂದಿನ ‘ಕಿಟ್ಟಿ ಪಾರ್ಟಿಗಳು’, ಈ ವ್ಯವಸ್ಥೆಯ ಮುಂದುವರೆದ ಭಾಗ ಎಂದರೆ ತಪ್ಪಾಗಲಾರದು. ಹತ್ತಾರು ಮಂದಿ ಸಮಾನ ಮನಸ್ಕರು ಒಂದೆಡೆ ಸೇರುತ್ತಾರೆ, ಹಲವು ಬಗೆಯ ಗೇಮ್ಸ್ ಆಡುತ್ತಾರೆ, ಮಾತುಕಥೆ ನಡೆಯುತ್ತದೆ, ಕಷ್ಟ ಸುಖ ಹಂಚಿಕೊಂಡು ನಿರಾಳವಾಗುತ್ತಾರೆ, ಒಟ್ಟಿಗೆ ಸೇರಿ ಊಟ ಮಾಡುತ್ತಾರೆ, ಊಟ, ಆಟ, ಪಾಠ ಎಲ್ಲವೂ ಹದವಾಗಿ ಸೇರಿದೆ ಈ ಕಿಟ್ಟಿ ಪಾರ್ಟಿಗಳಲ್ಲಿ ಅಲ್ಲವೇ? ಇಂದು ಬಾವಿಕಟ್ಟೆಯಿಲ್ಲ, ಕಿಟ್ಟಿಪಾರ್ಟಿ ಸೇರಲು ಅವಕಾಶವಿಲ್ಲದವರು ಮಾಡುವುದಾದರೂ ಏನು? ನಮ್ಮ ನೋವನ್ನು ಸಹನೆಯಿಂದ ಕೇಳಿಸಿಕೊಳ್ಳುವ, ನಮ್ಮ ಗುಟ್ಟನ್ನು ರಟ್ಟು ಮಾಡದಿರುವ, ಅಗತ್ಯಬಿದ್ದಾಗ ಮಾರ್ಗದರ್ಶನ ಮಾಡುವ ಸ್ನೇಹಿತರನ್ನು ಎಚ್ಚರಿಕೆಯಿಂದ ಆರಿಸಿ, ಅವರ ಮುಂದೆ ನಮ್ಮ ನೋವು ನಲಿವುಗಳ ಕಂತೆಗಳನ್ನು ಬಿಚ್ಚಿಡೋಣ ಮನಬಿಚ್ಚಿ ಅತ್ತುಬಿಡೋಣ ಅಥವಾ ನಕ್ಕುಬಿಡೋಣ ಆಗಾಗ್ಗೆ ಮುಖವಾಡ ಕಳಚಿಟ್ಟು ಸರಾಗವಾಗಿ ಉಸಿರಾಡೋಣ. ಕರ್ತವ್ಯಗಳ ಜೊತೆಜೊತೆಗೇ ನಮ್ಮತನವನ್ನು ಉಳಿಸಿಕೊಳ್ಳೋಣ. ‘ದೇವರ ಕಣ್ಣು’ ಸಿನೆಮಾದ ಗೀತೆಯ ಸಾಲುಗಳನ್ನು ಮೆಲುಕು ಹಾಕೋಣ ಬನ್ನಿ ‘ನಿನ್ನ ನೀನು ಮರೆತರೇನು ಸುಖವಿದೆ, ತನ್ನತನವ ತೊರೆದರೇನು ಸೊಗಸಿದೆ? ಹಾಡುವುದನು ಕೋಗಿಲೆಯು ಮರೆಯುವುದೇ / ಹಾರುವುದನು ಬಾನಾಡಿ ತೊರೆಯುವುದೇ..’

-ಡಾ.ಗಾಯತ್ರಿದೇವಿ ಸಜ್ಜನ್.ಎಸ್, ಶಿವಮೊಗ್ಗ

5 Comments on “ಒಮ್ಮೆ ಮುಖವಾಡ ಕಳಚು ಮಗಳೇ

  1. ಒಮ್ಮೆ ಮುಖವಾಡ ಕಳಚು ಮಗಳೇ..ಸೊಗಸಾದ ನಿರೂಪಣೆಯ ಬರಹ..ಧನ್ಯವಾದಗಳು ಮೇಡಂ.

  2. ಸಾಮಾನ್ಯ ಮಹಿಳೆಯ ಜೀವನದ ಕಹಿಸತ್ಯವನ್ನು ಬಿಚ್ಚಿಟ್ಟ ತಮ್ಮ ಲೇಖನವು, ಮನದ ಮೂಲೆಯಲ್ಲಿ ನೋವಿನ ತರಂಗವನ್ನೆಬ್ಬಿಸಿದ್ದು ಸತ್ಯ!

Leave a Reply to ನಾಗರತ್ನ ಬಿ. ಅರ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *