ಹೆಸರಿನೊಳಗಿನ ಲಹರಿ
ನಮ್ಮ ಕುಟುಂಬದಲ್ಲಿ ನನಗೆ ಹೆಸರಿಡುವ ಕಾಲದಲ್ಲಿ (ಐವತ್ತು ದಶಕದ ಹಿಂದೆ) ಮನೆಯ ಹಿರಿಮಗಳಿಗೆ ತಂದೆಯ ತಾಯಿಯ ಹೆಸರು, ಎರಡನೇ ಮಗಳಿಗೆ ತಾಯಿಯ ಅಮ್ಮನ ಹೆಸರು ಇಡುವುದು ರೂಢಿಯಲ್ಲಿತ್ತು. ಅಪ್ಪ ದೊಡ್ಡಪ್ಪರೊಡನೆ ನಾವು ಒಟ್ಟು ಕುಟುಂಬದಲ್ಲಿ ಬೆಳೆದವರು. ದೊಡ್ಡಪ್ಪನಿಗೆ ಮೂರು ಮಕ್ಕಳು, ಅಪ್ಪನಿಗೆ ನಾವು ಐದು ಮಕ್ಕಳು. ತಂದೆಯ ತಾಯಿಯ ಹೆಸರು ಲಕ್ಷ್ಮೀ. ಲಕ್ಷ್ಮೀ ಎಂಬ ಅಜ್ಜಿ ಹೆಸರನ್ನು ದೊಡ್ಡಪ್ಪನ ಹಿರಿಮಗಳಿಗೆ ಇಟ್ಟಕಾರಣ, ಒಂದೇ ಮನೆಯಲ್ಲಿರುವ ಎರಡು ಮಕ್ಕಳಿಗೆ ಲಕ್ಷ್ಮೀ ಎಂದಿಡುವುದು ಬೇಡವೆಂದು ಒಡಹುಟ್ಟಿದ ನಮ್ಮ ಅಕ್ಕನಿಗೆ ಅಜ್ಜಿಯ ಹೆಸರು ಲಕ್ಷ್ಮೀ ಎಂದು ಇಡಲಿಲ್ಲ. ಹಾಗೂ ಅವಳು ಗೌರಿ ಹಬ್ಬದಂದು ಜನಿಸಿದ್ದರಿಂದ ಮಂಗಲಗೌರಿ ಎಂದು ನಾಮಕರಣ ಮಾಡಿದರು. ಹಾಗಾಗಿ ಅಜ್ಜಿ ಹೆಸರು ದಕ್ಕಲಿಲ್ಲ.
ನಮ್ಮಮ್ಮನಿಗೆ ನಾನು ಎರಡನೇ ಮಗಳು. ಹಾಗಾಗಿ ರೂಢಿಯಂತೆ ನನಗೆ ನಮ್ಮಜ್ಜಿ (ಅಮ್ಮನ ತಾಯಿ) ಹೆಸರು ರುಕ್ಮಿಣಿ ಎಂದಿಟ್ಟರು. ಆವಾಗಲೆಲ್ಲ ಮಕ್ಕಳಿಗೆ ಅಜ್ಜ ಅಜ್ಜಿ ಹೆಸರಿಡುವುದು, ಮತ್ತೆ ಹಿರಿಯರ ಹೆಸರನ್ನು ಕಿರಿಯರು ಹೆಸರಿಡಿದು ಕರೆಯುವಂತಿಲ್ಲ ಎಂದು ಒಂದು ಅಡ್ಡ ಹೆಸರು ಅವರಿಗೆ ಅಂಟಿಕೊಂಡಿರುತ್ತಲಿತ್ತು. ಅದಕ್ಕೆ ನಾನೂ ಹೊರತಲ್ಲ. ಮನೆಯವರೆಲ್ಲರೂ ನನ್ನನ್ನು ‘ಕೂಸು’ ಎಂದು ಕರೆಯಯತ್ತಲಿದ್ದರು. ತಂಗಿ ತಮ್ಮನಿಗೆ ಕೂಚಕ್ಕನಾದೆ. ಸಣ್ಣವರಿದ್ದಾಗ ಕೂಸು ಎಂದರೆ ಏನೂ ಅನಿಸಿರಲಿಲ್ಲ. ಬೆಳೆದಂತೆ ಎಲ್ಲರ ಎದುರು ಕೂಸು ಎಂದು ಕರೆಯುವುದು ಅವಮಾನ ಎಂದು ಭಾಸವಾದಾಗ, ಹಾಗೆ ಕರೆಯಕೂಡದು ಎಂದು ಎಲ್ಲರಿಗೂ ವಿನಂತಿ ಮಾಡಿದ್ದೆ. ಅವರೆಲ್ಲರೂ ಒಪ್ಪಿದ್ದರು.
ಶಾಲೆಗೆ ಸೇರಿದಾಗ, ಅಲ್ಲಿ ಒ.ರುಕ್ಮಿಣಿ ಎಂದೇ ನಮೂದಿಸಿದರು. ಆದರೆ ನಮ್ಮ ಅಕ್ಕಂದಿರು ನನಗೆ ಮಾಲಾ ಎಂಬ ಅಡ್ಡ ಹೆಸರನ್ನು ಇಟ್ಟರು. ಅವರೆಲ್ಶಾಲ ಮಾಲಾ ಎಂದೇಕರೆಯುತ್ತಲಿದ್ದರು. ಶಾಲೆಯಲ್ಲೂ ಹಾಜರಿಪಟ್ಟಿಯಲ್ಲಿ ರುಕ್ಮಿಣಿ ಎಂದಿದ್ದರೂ, ಎಲ್ಲರಿಗೂ ಮಾಲಾ ಎಂದೇ ಚಿರಪರಿಚಿತಳಾಗಿದ್ದೆ. ಮುಂದೆ ಎಸ್.ಎಸ್ ಎಲ್.ಸಿ, ಪಿಯುಸಿ ಅಂಕಪಟ್ಟಿಯಲ್ಲಿ ಒ. ರುಕ್ಮಿಣಿ ಎಂಬ ಹೆಸರು ಮಾತ್ರವಿದ್ದರೂ ಶಾಲೆಯಲ್ಲಿ ಎಲ್ಲರಿಗೂ ಗೊತ್ತಿರುವುದು ಮಾಲಾರುಕ್ಮಿಣಿ ಎಂದೇ. ಅದರಲ್ಲೂ ಮಾಲಾ ಎಂದೇ ಹೆಸರುವಾಸಿಯಾಗಿದ್ದೆ.
ಮುಂದೆ ವಿವಾಹ ನಿಶ್ಚಯವಾದಾಗ, ನಮ್ಮ ಮಾವ (ಗಂಡನ ತಂದೆ ಜಿಟಿ. ನಾರಾಯಣ ರಾವ್ ) ಮದುವೆ ಕರೆಯೋಲೆಯಲ್ಲಿ ರುಕ್ಮಿಣಿಮಾಲಾ ಎಂದು ಅಚ್ಚು ಹಾಕಿಸಿಬಿಟ್ಟರು. ಮಾಲಾರುಕ್ಮಿಣಿಯಾದ ನಾನು ವಿವಾಹಾನಂತರ ರುಕ್ಮಿಣಿಮಾಲಾ ಆಗಿದ್ದೆ! ಪ್ರಪಂಚದಲ್ಲಿ ಬಹುಶಃ ಬೇರೆ ಯಾರಿಗೂ ಈ ಹೆಸರು ಇದ್ದ ಹಾಗಿಲ್ಲ! ಫೇಸ್‌ಬುಕ್ ನಲ್ಲಿ ರುಕ್ಮಿಣಿಮಾಲಾ ಎಂದು ಹಾಕಿದರೆ ಏಕೈಕ ವ್ಯಕ್ತಿ ಅದು ನನ್ನ ಹೆಸರು ಮಾತ್ರ ತೋರಿಸುತ್ತದೆ!
ಮದುವೆಯನಂತರ ಹೊಸ ನೆಂಟರಿಷ್ಟರಲ್ಲಿ ಕೆಲವರು ‘ಮಾಲಾ‘ ಎಂದು ಕರೆದರೆ ಇನ್ನು ಕೆಲವರು ‘ರುಕ್ಮಿಣಿ‘ ಹೆಸರು ಚೆನ್ನಾಗಿದೆ ಎಂದು ಹಾಗೆಯೇ ಕರೆದರು.
ಹೆಸರು ಬದಲಾವಣೆಯಿಂದ ಯಾವ ವ್ಯತ್ಯಾಸವೂ ಆಗದೆ ಜೀವನ ಸಾಗುತ್ತಲಿತ್ತು. ಹೆಸರಿನ ಗೊಂದಲ ಮೊದಲಿಗೆ ತಕರಾರು ಕೊಟ್ಟದ್ದು ಪಾಸ್‌ಪೋರ್ಟ್ ಮಾಡಿಸುವಾಗ. ಪಾಸ್‌ಪೋರ್ಟಿಗೆ ದಾಖಲೆ ಸಲ್ಲಿಸಿದ ಅಂಕಪಟ್ಟಿಯಲ್ಲಿ ಒ. ರುಕ್ಮಿಣಿ ಎಂದು ಮಾತ್ರ ಇದ್ದದ್ದು ಜಿ.ಎ. ರುಕ್ಮಿಣಿಮಾಲಾ ಎಂದು ನಮೂದಿಸಿ ಹೆಸರು ಕೊಟ್ಟದ್ದು ಅವರಿಗೆ ಗೊಂದಲ ಮೂಡಿಸಿತು. ಮತ್ತೆ ಪತ್ರಿಕೆಯಲ್ಲಿ ಹೆಸರು ಬದಲಾವಣೆ ಎಂದು ಜಾಹೀರಾತು ಕೊಟ್ಟು, ಅಫಡವಿಟ್ ಸಲ್ಲಿಸಿ, ಆ ದಾಖಲೆಗಳನ್ನು ಹೊತ್ತು ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಗೆ ಅಲೆದು ಅಂತೂ ‘ಆ ರುಕ್ಮಿಣಿ‘ ‘ಈ ರುಕ್ಮಿಣಿಮಾಲಾ‘ ಇಬ್ಬರೂ ಒಂದೇ ಜನ ಎಂದು ಅವರಿಗೆ ಮನವರಿಕೆಯಾಗಿ ಪಾಸ್‌ಪೋರ್ಟ್ ಲಭಿಸಿತ್ತು.
ರುಕ್ಮಿಣಿ ಎಂಬ ಹೆಸರು ನನಗೆ ಇಷ್ಟವೇ ಇರಲಿಲ್ಲ. ಆದರೆ ಯಾವ ಮಕ್ಕಳಿಗೂ ತನ್ನ ಹೆಸರನ್ನು ತಾನೇ ಇಡುವ ಅವಕಾಶ ಬರುವುದಿಲ್ಲವಲ್ಲ. ಹಾಗಾಗಿ ಹಿರಿಯರು ಇಟ್ಟ ಹೆಸರನ್ನು ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳಲೇ ಬೇಕು. ಹಾಗೆಯೇ ನಾನೂ ಒಪ್ಪಿಕೊಂಡಿದ್ದೆ!
ಮದುವೆಯಾಗಿ ಹಳ್ಳಿಯಿಂದ ಮೈಸೂರು ಪೇಟೆಗೆ ಬಂದೆ. ಒಮ್ಮೆಯಾವುದಕ್ಕೋ ಹಣ ಕೊಟ್ಟಾಗ ಅವರು ರಸೀದಿ ಬರೆಯಲು ಹೆಸರು ಕೇಳಿದಾಗ ರುಕ್ಮಿಣಿ ಎಂದಾಗ ಅವರು ಬರೆದು ಕೊಟ್ಟ ರಸೀದಿ ನೋಡಿದಾಗ ರುಕ್ಷಿಣಿ ಎಂದು ಬರೆದದ್ದು ಕಂಡು ರುಕ್ಮಿಣಿ ಎಂದು ಬರೆಯಲೇ ಬರುವುದಿಲ್ಲವಲ್ಲ ಇಲ್ಲಿಯವರಿಗೆಲ್ಲ ಎಂದು ಚಿಂತಿಸಿದ್ದೆ. ಮಗದೊಮ್ಮೆ ಅಂತ ಪ್ರಸಂಗ ಬಂದಾಗ ರುಕ್ಮಿಣಿ ಎನ್ನದೆ ಮಾಲಾ ಎಂದಿದ್ದೆ. ಅವರು ಕೊಟ್ಟ ರಸೀದಿ ನೋಡಿ ಮೂರ್ಛೆ ತಪ್ಪದೆ ಇದ್ದದ್ದು ಪುಣ್ಯ. ಮಲ ಎಂದು ಬರೆದಿದ್ದರು! ಅಯ್ಯೊ ಮಲದಿಂದ ರುಕ್ಷಿಣಿಯೇ ಆಗಬಹುದು ಎಂದು ಭಾವಿಸಿದ್ದೆ! ಈ ಹೆಸರಿನೊಳಗಿನ ಲಹರಿ ಹೊರಬರಲು ಕಾರಣ ಫೇಸ್‌ಬುಕ್. ಇತ್ತೀಚೆಗೆ ಕೆಲವರೆಲ್ಲ ತಮ್ಮ ಹೆಸರಿನ ಲಹರಿ ಹರಿಯಬಿಟ್ಟದ್ದು ಓದಿದಾಗ ನನ್ನ ಹೆಸರಿನ ಲಹರಿ ಹೊರಬಂತು.
-ರುಕ್ಮಿಣಿಮಾಲಾ ಮೈಸೂರು
ಹೆಸರಿನ ಲಹರಿ ತೆಳುವಾದ ಹಾಸ್ಯ ಲೇಪಿತ. ಬರಹ ಓದಿದಾಗ ನನಗೂ ಕೆಲವು ಅಂಥಹ ಪ್ರಸಂಗಗಳು ನೆನಪಿಗೆ ಬಂದವು..ಧನ್ಯವಾದಗಳು ರುಕ್ಮಿಣಿ ಮಾಲಾ
ಧನ್ಯವಾದ. ನಿಮ್ಮ ನೆನಪನ್ನು ಅಕ್ಷರಕ್ಕಿಳಿಸಿ.
ಹಾಸ್ಯ ಲೇಖನ ಓದಿ ನಗೆ ಬಂತು
ಧನ್ಯವಾದ
ಹೆಸರಿನೊಂದಿಗಿನ ಕಸರತ್ತು ಬಹಳ ಚೆನ್ನಾಗಿ ಮೂಡಿಬಂದಿದೆ ಹ್ಹೆ…ಹ್ಹೆ..ಹ್ಹೆ…!
ಧನ್ಯವಾದ
ತುಂಬಾ ಚೆನ್ನಾಗಿದೆ