ನಿರಂತರವಾಗಿರಲಿ ಕನ್ನಡ ನಾಡು- ನುಡಿ, ಸಂಸ್ಕೃತಿಯ ಪ್ರೀತಿ…..
ನವಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಬಹಳ ಅದ್ದೂರಿಯಾಗಿ ಆಚರಿಸಿದ್ದೇವೆ. ಕಳೆದ ಎರಡು ವರ್ಷ ಕೋವಿಡ್ 19 ನಿಂದಾಗಿ ರಾಜ್ಯೋತ್ಸವ ಸರಳವಾಗಿ ಆಚರಣೆಗೊಂಡಿತ್ತು. ಮೊದಲಿಗೆ ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯ ಏಳಿಗೆಗಾಗಿ ದುಡಿದ/ದುಡಿಯುತ್ತಿರುವ ಮಡಿದ/ ಅಮರರಾದ ಎಲ್ಲರನ್ನು ನೆನೆದು, ಅವರಿಗೆಲ್ಲ ನನ್ನ ಧನ್ಯವಾದಗಳುಸಮರ್ಪಿಸುತ್ತೇನೆ.
ನನಗೆ ಕನ್ನಡ ಸಾಹಿತ್ಯ ಎಂದರೆ ತುಂಬಾ ಇಷ್ಟ ಅಂದರೆ ಓದುವುದು….ಬರೆಯುವುದು….. ಕನ್ನಡದ ಬಗೆಗಿನ ಅಥವಾ ಕನ್ನಡ ಕ್ಷೇತ್ರಕ್ಕೆ, ಭಾಷೆಗೆ ಸಂಬಂಧಿಸಿದ ವಿವಿಧ ಪ್ರಕಾರಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ ಮೂಡಿಸಿಕೊಂಡಿರುತ್ತೇನೆ. ನನ್ನ ಮನಸ್ಸಿಗೆ ಬೇಜಾರಾದಾಗ ಅಥವಾ ಕಚೇರಿಯ ಕೆಲಸ ಕಾರ್ಯಗಳ ಒತ್ತಡವಿರುವಾಗ ಕುಟುಂಬದ ಸಮಸ್ಯೆಗಳು ಬಂದಾಗ, ಒಂದು ಕಥೆಯನ್ನೋ, ಕವಿತೆಯನ್ನೋ ಲೇಖನಗಳನ್ನೋ ಬರೆಯುತ್ತೇನೆ ಅಥವಾ ಓದುತ್ತೇನೆ. ಅಲ್ಲದೆ ಮುಖ್ಯವಾಗಿ ಚಿತ್ರಗೀತೆಯನ್ನು…. ಭಾವಗೀತೆಯನ್ನು…. ಕೇಳಿದಾಗ ಮನಸ್ಸು ಒಂದು ರೀತಿಯಲ್ಲಿ ಪ್ರಫುಲ್ಲಗೊಳ್ಳುತ್ತದೆ. ಮೈಮನಗಳು ರೋಮಾಂಚನಗೊಳ್ಳುತ್ತವೆ.
ಒಂದು ಭಾಷೆಯ ಸಾಹಿತ್ಯದಿಂದಾಗಿ ಏನೆಲ್ಲ ಮೂಡುತ್ತದೆ, ಮೂಡಿಸುತ್ತದೆ ಎನ್ನುವುದಕ್ಕೆ ಚಿಕ್ಕ ಉದಾಹರಣೆ ಅಷ್ಟೇ. ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು…. ಈ ಚಿತ್ರಗೀತೆಯನ್ನು ಕೇಳಿದ್ದೀರಲ್ಲವೇ?!. ಅಬ್ಬಾ ಕರುನಾಡ ಸೌಂದರ್ಯವನ್ನು ವರ್ಣಿಸುವ ಈ ರೀತಿಯ ಅದೆಷ್ಟೋ ಹಾಡುಗಳು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಇಂತಹ ಸುಮಧುರ, ಅರ್ಥಪೂರ್ಣ ಗೀತಗಳ ಗುಚ್ಛಗಳು ವರ್ಣಿಸಲಸದಳ ಅನುಭವ ನೀಡುತ್ತವೆ. ನಮಗರಿವಿಲ್ಲದೆ ಮತ್ತೆ ಮತ್ತೆ ಕೇಳಬೇಕು ಎಂದೆನಿಸದೆ. ಅದರಲ್ಲೂ ಚಿತ್ರಗೀತೆಗಳನ್ನು, ಭಾವಗೀತೆಗಳನ್ನು ಭಕ್ತಿ ಗೀತೆಗಳನ್ನು, ರಂಗಗೀತೆಗಳನ್ನು, ಆಕಾಶವಾಣಿಯ ಮೂಲಕ ಕೇಳುವುದು ಇದೆಯಲ್ಲ ಆಗ ಭಾವನೆಗಳ ಹಂದರವನ್ನೇರ್ಪಡಿಸಿ ಬಿಡುತ್ತದೆ!.
ಜೊತೆಗೆ ಭಾವ ಪ್ರಪಂಚಕ್ಕೆ ಸವಾರಿ ಮಾಡಿಸಿಬಿಡುತ್ತದೆ. ಮನರಂಜಿಸುತ್ತದೆ, ಮುದ ನೀಡುತ್ತದೆ. ಯಾವುದೇ ಸಭೆ ಸಮಾರಂಭಗಳಲ್ಲಿ ಕುವೆಂಪುರವರು ಬರೆದಿರುವ “ಜಯ ಭಾರತ ಜನನಿಯ ತನುಜಾತೆ” ಎಂಬ ಗೀತೆಯನ್ನು ನಾವು ಹಾಡುತ್ತೇವೆ. ಕನ್ನಡ ನಾಡಿನ ಅಂತರಂಗದಲ್ಲಿ ಏನೆಲ್ಲಾ ತಾಣಗಳು, ವ್ಯಕ್ತಿಗಳು ಪ್ರಸಿದ್ಧರಾಗಿದ್ದಾರೆ ಎಂಬುದನ್ನು ತಮ್ಮದೇ ಆದ ಶೈಲಿಯಲ್ಲಿ ಕುವೆಂಪುರವರು ಬಿಂಬಿಸಿದ್ದಾರೆ. ಎಂದೋ ಬರೆದ ಗೀತೆ ಇವತ್ತಿಗೂ ಸಹ ಮೌಲಿಕವಾಗಿದೆ. ಅದಕ್ಕಲ್ಲವೇ ಈ ಗೀತೆ ನಾಡಗೀತೆಯಾಗಿ ನಮ್ಮೆಲ್ಲರ ನಾಡಿ ಮಿಡಿತ ಹೆಚ್ಚಿಸಿದೆ.
ಇನ್ನು ಇದೇ ರೀತಿ ಹುಯಿಲಗೋಳ ನಾರಾಯಣರಾಯರು ಬರೆದಿರುವ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಆಗಿರಬಹುದು, ಕುವೆಂಪುರವರೇ ಬರೆದ “ಬಾರಿಸು ಕನ್ನಡ ಡಿಂಡಿಮವ” ಆಗಿರಬಹುದು, ಡಿ ಎಸ್ ಕರ್ಕಿ ರವರು ಬರೆದಿರುವ “ಹಚ್ಚೇವು ಕನ್ನಡದ ದೀಪ”, ಚನ್ನವೀರ ಕಣವಿಯವರು ಬರೆದಿರುವ “ವಿಶ್ವ ವಿನೂತನ ವಿದ್ಯಾ ಚೇತನ”, ಹಂಸಲೇಖರವರು ಡಾ ರಾಜಕುಮಾರ್ ನಟಿಸಿರುವ “ಆಕಸ್ಮಿಕ” ಚಿತ್ರಕ್ಕಾಗಿ ಬರೆದಿರುವ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎನ್ನುವ ಗೀತೆ, ಇದೇ ರೀತಿ ನೂರಾರು ಗೀತೆಗಳು ನಮ್ಮ ನಾಡೊರಗೆ ಮತ್ತು ನಾಡೊಳಗೆ ಕಾಣಿಸಿಗುವ ಪ್ರತಿಯೊಂದರ ಇತಿಹಾಸ, ಕೋಟಿ ಕೊತ್ತಲಗಳು, ನದಿ ತೊರೆಗಳು, ಬೆಟ್ಟ ಗುಡ್ಡಗಳು, ಪ್ರವಾಸಿ ತಾಣಗಳು, ಶಿಲ್ಪ ಕಲೆಗಳ ವೈಭವ, ಭಕ್ತಿಭಾವ ಮೂಡಿಸುವ ದೇವಾಲಯಗಳು, ಕನ್ನಡ ನಾಡು ನುಡಿಗಾಗಿ ಹೋರಾಡಿದ ವೀರ ಕನ್ನಡಿಗರು, ರಾಜರಾಳಿದ ನಾಡಿನ ಸೊಬಗು, ಮುಂತಾದವುಗಳ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಪ್ರತಿಬಿಂಬಿಸುವುದು ಇದೆಯಲ್ಲ ಇದೆಲ್ಲ ಕವಿಗಳಿಗೆ/ ಲೇಖಕರುಗಳಿಗೆ ಕಲ್ಪನೆಯ ಮೆರಗು ನೀಡಿದರೆ, ನಮಗೆಲ್ಲ ಬೆರಗು ಮುಡಿಸುತ್ತವೆ!. ಮುಂದುವರೆದು “ಜೋಗದ ಸಿರಿ ಬೆಳಕಿನಲ್ಲಿ” ಈ ಸುಂದರ ಗೀತೆಯಲ್ಲಿ ತಾಯಿ ಕನ್ನಡತಿಗೆ ನಿತ್ಯೋತ್ಸವದ ಕೊಡುಗೆಯನ್ನು ನೀಡಿದ್ದಾರೆ ನಮ್ಮ ಕೆ ಎಸ್ ನಿಸಾರ್ ಅಹಮದ್ ರವರು. ಹೀಗೆ ನೂರಾರು ಕವನಗಳು, ಲೇಖನಗಳು ಉದಾಹರಣೆಯಾಗಿ ನಿಲ್ಲುತ್ತವೆ.
ಪೂರ್ವದ ಹಳೆಗನ್ನಡ ಅಥವಾ ಪಂಪ ಪೂರ್ವ ಯುಗ…. ನಂತರ ಪಂಪ ಯುಗ ಅಥವಾ ಹಳೆಗನ್ನಡ ಕಾಲ……. ನಂತರ ನಡುಗನ್ನಡ ಕಾಲ…… ಈಗ ಹೊಸಗನ್ನಡ ಕಾಲ……. ಹೊಸಗನ್ನಡ ಕಾಲದಲ್ಲಿ….. ನವೋದಯ, ನವ್ಯ, ಪ್ರಗತಿ ಶೀಲ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ ..ಎಲ್ಲಾ ಕಾಲಘಟ್ಟಗಳಲ್ಲಿ ನಾಡು ನುಡಿಯನ್ನು ಶ್ರೀಮಂತಗೊಳಿಸಿದ ಅಗಸ, ಚಾರುಕೀರ್ತಿ, ಶಿವಕೋಟ್ಯಾಚಾರ್ಯ, ಶ್ರೀ ವಿಜಯ, ಗುಣನಂದಿ, ಪಂಪ, ರನ್ನ, ಜನ್ನ, ಪೊನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ, ಆಲೂರು ವೆಂಕಟರಾಯರು, ಅನಕೃ, ಬಿ ಎಂ ಶ್ರೀಕಂಠಯ್ಯ, ತೀನಂಶ್ರೀ, ಶ್ರೀ ಕುವೆಂಪು, ಪುತೀನ, ಕೆ ಎಸ್ ನಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗರು, ದ ರಾ ಬೇಂದ್ರೆ, ಮಾಸ್ತಿ, ಇನ್ನು ದಾಸ ಸಾಹಿತ್ಯದಲ್ಲಿ ಕನಕದಾಸರು, ಪುರಂದರದಾಸರು, ಜಿ ಕೆ ಗೋವಿಂದರಾವ್, ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಲಂಕೇಶ್, ದೇವನೂರು ಮಹದೇವ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ……ಇದೇ ರೀತಿ ಕನ್ನಡದಲ್ಲಿ ನೂರಾರು ಕವಿಗಳು, ಲೇಖಕರು, ವಚನಕಾರರು ಎಲ್ಲರ ಗಮನ ಸೆಳೆದಿದ್ದಾರೆ. ಇಲ್ಲಿ ಪ್ರಾತಿನಿಧಿಕವಾಗಿ ಕೆಲವರ ಹೆಸರುಗಳನ್ನು ಮಾತ್ರ ಪ್ರಸ್ತಾಪಿಸಲಾಗಿದೆ. ಸರ್ ವಾಲ್ಟರ್ ಎಲಿಯಟ್, ಸರ್ ಥಾಮಸ್ ಮನ್ರೋ ಮುಂತಾದ ಬ್ರಿಟಿಷ್ ಅಧಿಕಾರಿಗಳು. ಚನ್ನಬಸಪ್ಪರಂತಹ ಕನ್ನಡಾಧಿಕಾರಿಗಳು ಮುಂತಾದವರು ಸೇರಿದ್ದಾರೆ.
ಹೊಸಗನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ರಂಗಭೂಮಿ ಮತ್ತು ಚಲನಚಿತ್ರರಂಗ ಅಲ್ಲದೇ ಪತ್ರಿಕೆಗಳು, ಆಕಾಶವಾಣಿ, ದೂರದರ್ಶನ ಮುಂತಾದ ಪ್ರಭಾವಿ ಮಾದ್ಯಮಗಳು ಒಂದಲ್ಲ ಒಂದು ರೀತಿಯಲ್ಲಿ ಕನ್ನಡದ ಅಭಿವೃದ್ಧಿಗೆ ಆಧಾರವಾಗುತ್ತಾ ಬರುತ್ತಿವೆ.
ಡಾ ರಾಜಕುಮಾರ್ ಅವರು ಪರಭಾಷೆಗಳಲ್ಲಿ ನಟಿಸದೆ ಕನ್ನಡವನ್ನೇ ಅಪ್ಪಿಕೊಂಡು, ಒಪ್ಪಿಕೊಂಡು ಚಿತ್ರರಂಗದ ಮೇರು ಪರ್ವತರಾದರು. ಕನ್ನಡ ಎಂಬ ಮೂರಕ್ಷರದಲ್ಲಿ ಏನೆಲ್ಲಾ ವೈಭವದ ಸೊಗಡು ಅಡಗಿದೆ. ಕನ್ನಡದ ಒಳ- ಹೊರಗಿನ ವಸ್ತು ವಿಶೇಷ, ಸೌಂದರ್ಯ, ಸಂಪತ್ತು, ಭಾಷಾ ಸೊಗಡು ಕರ್ನಾಟಕದಲ್ಲಿ ಅಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಸಹ ರಾಜ್ಯೋತ್ಸವ ಇನ್ನಿತರ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಲ್ಲಿಯೂ ಕೂಡ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವುದು/ ಹಿಡಿಯುತ್ತಿರುವುದು ಹೆಮ್ಮೆಯ ಸಂಗತಿ. ಅದರಿಂದಾಗಿ ಹೊರನಾಡಿನ ಕನ್ನಡಿಗರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು.
ಕನ್ನಡದ ಭುವಿಯ ಅಂತರಂಗದಲ್ಲಿ ಅಪಾರ ಖನಿಜ ಸಂಪತ್ತು ಅಡಗಿದೆ, ಕರಾವಳಿ ತೀರ, ನದಿಗಳು, ವಿವಿಧ ಜಾನಪದ ಶೈಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪಯಣಿಸಿದಂತೆ ವಿಭಿನ್ನ ಭಾಷಾ ಸೊಗಡು, ಆಹಾರ ವಿಹಾರ, ಜನರ ಸಂಸ್ಕೃತಿ, ಅದರಲ್ಲೂ ಗ್ರಾಮೀಣ ಭಾಷೆಯ ಜನರ ಜೀವನ ಅದ್ಭುತ!.
ಸವಿಯಾದ ಕೋಗಿಲೆಯಂತೆ, ಸುಮಧುರವಾಗಿ ಮುದ ನೀಡುತ್ತಿದೆ. ರಾಷ್ಟ್ರ ಭಾಷೆಗಳಿಗೆ ಕೊಡುವಂತಹ ಜ್ಞಾನಪೀಠ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ಅತಿ ಹೆಚ್ಚಿನ ಅಗ್ರಸ್ಥಾನ ದೊರಕಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಒಂದು ದಾಖಲೆಯ ಸರಿ. ದೇಶ ದೇಶದೊಳಗೆ ನಮ್ಮ ಭಾರತ ಚಂದ, ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ, ಕನ್ನಡ ನಾಡಿನ ಈ ಮಣ್ಣಿನ ಕಣ ಕಣದಲ್ಲೂ ಸಹ ತುಂಬಿದೆ ಸಿರಿಗಂಧದ ಗಮವು, ಕೋಲಾರದಿ ಚಿನ್ನದ ಗಣಿಯು, ಮೈಸೂರು ಮಹಾರಾಜರ ಕೊಡುಗೆ, ಅಲ್ಲದೆ ಭಾರತ ಸ್ವಾತಂತ್ರ ಪಡೆಯುವಲ್ಲಿ ಕನ್ನಡ ನೆಲದಲ್ಲಿ ಹುಟ್ಟಿದ ಅನೇಕರು, ವೀರ ಹೋರಾಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ.
ಕನ್ನಡದಲ್ಲಿ ಹೊಸ ಹೊಸ ತಂತ್ರಜ್ಞಾನ ಸಾಧನೆಯ ಹೊರಬರುತ್ತಿದೆ. ಇದು ಕನ್ನಡ ಮತ್ತಷ್ಟು ಬೆಳೆಯಲು ಆಧಾರವಾಗಿದೆ. ಕನ್ನಡದ ಬಾವುಟ ಹಳದಿ ಮತ್ತು ಕೆಂಪು ಬಣ್ಣಗಳಿಂದ ಕೂಡಿದ್ದು, ಕನ್ನಡಾಂಬೆಯ ಬಾವುಟ ಎತ್ತರಕ್ಕೆ ಸಾಗುತ್ತಿದೆ.
ಚಲನಚಿತ್ರಗಳಲ್ಲಿ ಹಲವು ಕನ್ನಡ ಕುರಿತ ಹಾಡುಗಳು ಇವೆ…….. “ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು”, “ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ”, “ಕರುನಾಡ ತಾಯಿ ಸದಾ ಚಿನ್ಮಯಿ”, “ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ,” “ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ”, ಹೀಗೆ ಸಾವಿರಾರು ಗೀತೆಗಳು….. ಈ ರೀತಿಯ ಗೀತ ಸಾಹಿತ್ಯ ಬರೆದವರು, ಸಂಗೀತ ನಿರ್ದೇಶಕರು, ಚಿತ್ರ ಸಂಭಾಷಣಕಾರರು, ನಟ- ನಟಿಯರು, ಪೋಷಕ ಕಲಾವಿದರು, ಗಾಯಕ- ಗಾಯಕಿಯರು ಕನ್ನಡದ ಅಭಿವೃದ್ಧಿಗಾಗಿ ಒಂದಲ್ಲ ಒಂದು ರೀತಿಯಲ್ಲಿ ಶ್ರಮಿಸಿದ್ದಾರೆ.
ಕನ್ನಡಾಂಬೆಯ ಸೇವೆ ಮಾಡುವವರಿಗೆ, ಮಾಡಿದವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಮನ್ನಣೆ ಸಿಗುತ್ತಲೇ ಬರುತ್ತಿದೆ. ಜ್ಞಾನಪೀಠ ಪ್ರಶಸ್ತಿ, ನಾಡೋಜ, ನೃಪತುಂಗ, ಬಸವಶ್ರೀ, ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ರತ್ನ, ಅಲ್ಲದೆ ಭಾರತ ರತ್ನದಂತಹ ಅತ್ಯುನ್ನತ ಪ್ರಶಸ್ತಿಯನ್ನು ಕನ್ನಡ ನೆಲದ ಧೀಮಂತ ಪ್ರತಿಭೆಗಳು ವಿವಿಧ ಕ್ಷೇತ್ರಗಳ ಸೇವೆಗಾಗಿ ಪಡೆದುಕೊಂಡಿರುವುದು ಮತ್ತಷ್ಟು ಹೆಮ್ಮೆಮೂಡಿಸುತ್ತದೆ.
ನಾನು ಮೊದಲೇ ಹೇಳಿದಂತೆ ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಯಕ್ಷಗಾನ, ಭಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜ ಸೇವೆ, ಸಂಕೀರ್ಣ, ಪತ್ರಿಕೋದ್ಯಮ,ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಖುಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಹೀಗೆ ಹಲವು ಕ್ಷೇತ್ರಗಳಲ್ಲಿ ಕನ್ನಡಿಗರ ಸೇವೆ ಅಪ್ರತಿಮವಾದದ್ದು.
ಕನ್ನಡ ಸಾಹಿತ್ಯ ಪರಿಷತ್ತು 1915 ರಿಂದ ಈವರೆಗೆ ಕನ್ನಡ ನಾಡು- ನುಡಿಗಾಗಿ ಶ್ರಮಿಸಿದ ಚಿಂತಕರನ್ನು, ಕವಿ/ಲೇಖಕರುಗಳನ್ನು ಅಧ್ಯಕ್ಷರನ್ನಾಗಿ ಮಾಡಿ ಒಂದೊಂದು ಜಿಲ್ಲೆಯಿಂದ ಒಂದೊಂದು ಸಮ್ಮೇಳನ ಮಾಡುತ್ತಾ ಬಂದಿದ್ದು, ಈ ಬಾರಿ 86ನೇ ಸಮ್ಮೇಳನ ಹಾವೇರಿಯಲ್ಲಿ ಡಾ. ದೊಡ್ಡ ರಂಗೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕನ್ನಡದ ರಥವನ್ನು ಎಳೆಯುವುದರ ಮೂಲಕ ತಮ್ಮ ಪ್ರತಿಭೆ ಮೆರೆದಿದ್ದಾರೆ.
“ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು”, ಅಲ್ಲದೆ “ಕನ್ನಡಕ್ಕಾಗಿ ಕೈ ಎತ್ತು, ಅದು ಕಲ್ಪವೃಕ್ಷವಾಗುತ್ತದೆ….” ಸಾಲುಗಳು ಇಷ್ಟೊಂದು ಅರ್ಥಗರ್ಭಿತ. ಕೆಲಸದ ನಿಮಿತ್ತ, ಭಾಷಾ ಪ್ರೌಢಿಮೆಗೆ, ಪರಭಾಷೆಗಳು ಕೂಡ ನೆರವಾಗಬಲ್ಲವು. ಆದರೆ ಮನೆ- ಮನದಲ್ಲಿ ಕನ್ನಡ ಇರಬೇಕು. ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಶಾಲಾ ಪಠ್ಯ ಪುಸ್ತಕದಿಂದ ಹಿಡಿದು ಹಂತ ಹಂತವಾಗಿ ಭಾಷೆಯನ್ನು ಸಮೃದ್ಧವಾಗಿ ಬಳಸುವುದರ ಮೂಲಕ ವಿನೂತನ ಪ್ರಯೋಗ ಮಾಡಿದೆ.
ನಾನು ಪ್ರಾತಿನಿಧಿಕವಾಗಿ ಸ್ಥಳ, ವ್ಯಕ್ತಿ ಚಿತ್ರಣವನ್ನು ನೀಡಿದ್ದೇನೆ.
ಇನ್ನು ನನ್ನ ಬಾಲ್ಯದ ದಿನಗಳು ಈ ಕ್ಷಣದಲ್ಲಿ ನೆನಪಿಗೆ ಬರುತ್ತದೆ. ಶಾಲೆಯಲ್ಲಿ ಕನ್ನಡ ಕಂಠಪಾಠ ಸ್ಪರ್ಧೆ, ಭಾವಗೀತೆಗಳು, ಭಕ್ತಿ ಗೀತೆ, ಜನಪದ, ಚಿತ್ರಗೀತೆ, ಪ್ರಬಂಧ ಸ್ಪರ್ಧೆ, ಅಲ್ಲದೆ ನಮಗೆ ಕನ್ನಡ ಬಾವುಟದ ಮಹತ್ವವನ್ನು ಹೇಳುತ್ತಿದ್ದರು. ಜೊತೆಗೆ ಆಶುಭಾಷಣ ಸ್ಪರ್ಧೆ, ಗಾದೆ, ಒಗಟು, ರಸಪ್ರಶ್ನೆ, ಸಾಂಸ್ಕೃತಿ ಕಾರ್ಯಕ್ರಮಗಳು ಇವೆಲ್ಲಾ ಮನ ರಂಜನೆ ನೀಡುತ್ತಿದ್ದವು. ಅದರಲ್ಲೂ ಕನ್ನಡದ ವೀರಯೋಧರ, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆ ನಮ್ಮನ್ನು ಅತ್ಯಾಕರ್ಷಕ ಗೊಳಿಸುತ್ತಿತ್ತು.
ಇವೆಲ್ಲವೂ ಸಹಾ ಕೂಡ ಒಂದೊಂದಾಗಿ ನೆನಪಿಗೆ ಬರುತ್ತದೆ. ನಮ್ಮ ಯುವಜನತೆ ಕನ್ನಡವನ್ನು ಉಳಿಸಿ ಬೆಳೆಸಬೇಕು. ಕನ್ನಡದಲ್ಲಿ ಸಿಗುತ್ತಿರುವ ಅನೇಕ ಸವಲತ್ತುಗಳನ್ನುಪಡೆದುಕೊಳ್ಳುವಂತಾಗಲಿ. ಜೊತೆಗೆ ನಾವು ಕೇವಲ “ನವಂಬರ್ ಕನ್ನಡಿ”ಗರಾಗದೆ “ನಂಬರ್ ಒನ್” ಕನ್ನಡಿಗರಾಗೋಣ.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಕನ್ನಡ ನಾಡು ನುಡಿ ಸಂಸ್ಕೃತಿ ಯ ಬಗ್ಗೆ.. ಅಭಿಮಾನಪೂರ್ವಕವಾದ..ಹಾಗೂ..ಮಾಹಿತಿಯನ್ನು…ಒಳಗೊಂಡ ಲೇಖನ ಸೊಗಸಾಗಿ ಮೂಡಿಬಂದಿದೆ.
ಅಭಿನಂದನೆಗಳು ಸಾರ್.
ಸುಂದರವಾದ ಲೇಖನ
ಕನ್ನಡನಾಡು, ನುಡಿಯ ಮೇಲಿನ ಅತೀವ ಅಭಿಮಾನವು ಪ್ರತಿಬಿಂಬಿಸುತ್ತಿರುವ ಸೊಗಸಾದ ಲೇಖನ.
ನಿಮ್ಮ ಕನ್ನಡ ಪ್ರೀತಿಯನ್ನು ಎತ್ತಿ ಹಿಡಿಯುವ ಸವಿಸ್ತಾರ ಲೇಖನ ಸೊಗಸಾಗಿದೆ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com