ಮುಗುದೆಯ ತಲ್ಲಣ
ರೈಲು ಸಾಗರದಿಂದ ಶಿವಮೊಗ್ಗೆಯ ಕಡೆ ವೇಗವಾಗಿ ಓಡುತಿತ್ತು. ಕೈಯಲ್ಲಿ ಕಡಲೇಕಾಯಿ ಪೊಟ್ಟಣ್ಣಗಳನ್ನು ಇಟ್ಟುಕೊಂಡು ಮಾರಲು ಚೀಲದೊಂದಿಗೆ ಬಂದಿದ್ದ ಮಾದೇವಿಗೆ ಬಾಯಿಂದ ಮಾತೇ ಹೊರಡುತ್ತಿರಲಿಲ್ಲ. ಅವಳ ತಮ್ಮ ಎಂಟು ವರುಷದ ಪೋರ ನಂಜುಂಡ ಮಾರಲು ತಂದಿದ್ದ ಪೊಟ್ಟಣ್ಣಗಳನ್ನೆಲ್ಲ ಮಾರಿ ಜೋಬಿನ ತುಂಬ ದುಡ್ಡನಿಟ್ಟುಕೊಂಡು ಅಪ್ಪನ ಮುಂದೆ ಸುರಿದಾಗ, ಅಮ್ಮ ಅವನಿಗೆ ದೃಷ್ಠಿಯನ್ನು ತೆಗೆದು ನೆಟ್ಟಿಗೆಗಳನ್ನು ಮುರಿದಾಗ ಬೀಗುತ್ತಿದ್ದ ನಂಜುಂಡನ ಮುಖ ನೋಡಿ ಮಾದೇವಿಗೆ ಹೊಟ್ಟೆಯಲ್ಲಿ ಹುಳಿ ಹಿಂಡಿದ ಹಾಗಾಗುತಿತ್ತು. ತಾನು ಅವನಿಗಿಂತ ನಾಲ್ಕು ವರುಷ ದೊಡ್ಡವಳು. ನಾನೂ ರೈಲಿನಲ್ಲಿ ಹೋಗಿ ಕಡಲೇಕಾಯಿ ಮಾರಿ ಬರುತ್ತೇನೆಂದು ಹಠ ಹಿಡಿದಾಗ ಅಪ್ಪ ಬೆತ್ತದಿಂದ ನನ್ನ ಕುಂಡೆ ಮೇಲೆ ಎರಡು ಬಾರಿಸಿ – ಏ ಹೆಣ್ಣು ಕೂಸೆ, ನೀನು ನಿಮ್ಮಮ್ಮನ ಜೊತೆಗೆ ಹೋಗಿ ದಣೇರ ಮನೇಲಿ ಮುಸುರೆ ತಿಕ್ಕಿದರೆ ಸಾಕು. ನಿಮ್ಮಮ್ಮನಿಗೂ ಸ್ವಲ್ಪ ಬಿಡುವು ಸಿಗುತ್ತದೆ. ನನ್ನ ಕುಲದೀಪಕ ಶಾಲೆಗೆ ಹೋಗಿ ಚೆನ್ನಾಗಿ ಓದಿ ದೊಡ್ಡ ಆಫೀಸರ್ ಆಗುತ್ತಾನೆ. ರಜೆಯ ದಿನ ರೈಲಿನಲ್ಲಿ ಕಡಲೇಕಾಯಿ ಮಾರುತ್ತಾನೆ. ನೀನು ನಿನ್ನಮ್ಮನಂತೆ ಮನೆಗೆಲಸ ಚೆನ್ನಾಗಿ ಕಲಿತು ದಣಿಯ ಮನೆಯಲ್ಲಿ ಕಸಮುಸುರೆ, ಬಟ್ಟೆ ಒಗೆಯುವುದು, ಗಿಡಗಳಿಗೆ ನೀರುಣಿಸುವುದು ಮಾಡಿಕೊಂಡಿದ್ದರೆ ಸಾಕು. ನೀನು ದೊಡ್ಡವಳಾದ ಮೇಲೆ ಗಂಡನ ಮನೆಗೆ ಹೋದಾಗ ನಿನಗೂ ಒಂದು ಒಳ್ಳೆಯ ಅನುಭವವಾಗಿರುತ್ತದೆ.
ದಣೇರ ಮಕ್ಕಳ ಜೊತೆ ನಂಜುಂಡನನ್ನೂ ಸ್ಕೂಲಿಗೆ ಕಳುಹಿಸಿದಾಗ ಮಾದೇವಿ ಮನೆಯಲ್ಲಿ ಮಾಡಿದ ರಂಪ ಒಂದೊಂದಲ್ಲ. ಮೂರು ದಿನ ಅವಳು ಅಮ್ಮನ ಜೊತೆ ದಣೇರ ಮನೆಗೆ ಕಸಮುಸುರೆ ಮಾಡಲೂ ಹೋಗಲಿಲ್ಲ. ಆದರೆ ಅಪ್ಪನ ಬೆತ್ತದ ಏಟಿನ ರುಚಿ ತಾಳದಾದಾಗ ಹೋಗಲೇಬೇಕಾಯಿತು. ನಂಜುಂಡ ಶಾಲೆಯಿಂದ ಬಂದ ಕೂಡಲೇ ಅಮ್ಮ ಅವನಿಗೆ ಬಿಸಿ ಬಿಸಿ ಹಾಲು, ಬನ್ನು, ಕೊಡುತ್ತಿದ್ದಳು. ಅವನು ಮನೆಗೆ ಬಂದೊಡನೆಯೇ ಅವನ ಶಾಲೆಯ ಸಮವಸ್ತ್ರವನ್ನೆಲ್ಲಾ ಬಿಚ್ಚಿ ಸಿಕ್ಕ ಸಿಕ್ಕಲ್ಲೇ ಬಿಸಾಡಿ ಹಾಲು ಕುಡಿದು ಆಟ ಆಡಲು ಹೋಗುತ್ತಿದ್ದ. ಮಾದೇವಿ ಅವನ ಬಟ್ಟೆಯನ್ನೆಲ್ಲಾ ಎತ್ತಿ ಮಡಚಿಡಬೇಕು. ರಾತ್ರಿ ಅಪ್ಪ ಮನೆಗೆ ಬಂದ ಕೂಡಲೇ ಅವನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಶಾಲೆಯ ಕಥೆಯನ್ನೆಲ್ಲಾ ಕೇಳುತ್ತಿದ್ದ. ಅವನು ಶಾಲೆಯಲ್ಲಿ ಕಲಿತ ಪದ್ಯಗಳನ್ನು ಹೇಳಿದರೆ ಅಪ್ಪ, ಅಮ್ಮನ ಮುಖಗಳೂ ಊರಗಲವಾಗುತ್ತಿದ್ದವು. ಒಂದು ದಿನವಾದರೂ ಅಪ್ಪ, ಅಮ್ಮ ಮಾದೇವಿಯನ್ನು ಅವರ ಬಳಿ ಕೂಡಿಸಿಕೊಂಡ ಹೀಗೆ ಮುದ್ದು ಮಾಡಿದ್ದು ಅವಳಿಗೆ ನೆನಪಿಲ್ಲ. ನಂಜುಂಡ ಹುಟ್ಟುವ ಮೊದಲು ಅಪ್ಪ ಮಾದೇವಿಯನ್ನು ಹೊತ್ತುಕೊಂಡು ದಣೇರ ತೋಟವನ್ನೆಲ್ಲಾ ಸುತ್ತಿಸುತ್ತಿದ್ದ. ಅಲ್ಲಿ ಬೆಳೆದ ಸೀಬೆ ಹಣ್ಣು, ನೆಲ್ಲಿಕಾಯಿಗಳನ್ನೆಲ್ಲಾ ಕಿತ್ತು ತಿನ್ನಲ್ಲಿಕ್ಕೆ ಕೊಡುತ್ತಿದ್ದ. ಅಮ್ಮನೂ ದಣೆರ ಮನೆಯಲ್ಲಿ ಕೊಡುತ್ತಿದ್ದ ಕಜ್ಜಾಯ, ಉಂಡೆಗಳನ್ನು ಅವಳಿಗೇ ತಿನ್ನಿಸುತ್ತಳು. ರಾತ್ರಿ ಅವರಿಬ್ಬರ ಮಧ್ಯೆ ಮಲಗಿದರೆ ಎಷ್ಟು ಮಜವಾಗಿರುತ್ತಿತ್ತು. ಆದರೆ ಬೆಳಗ್ಗೆ ಏಳುವಾಗ ಮಾತ್ರ ಅವಳು ಅಪ್ಪ ಅಮ್ಮನಿಂದ ದೂರ ಬೇರೊಂದು ಚಾಪೆಯ ಮೇಲೆ ಮಲಗಿರುತ್ತಿದ್ದಳು. ತಾನು ಯಾವಾಗ ಅಪ್ಪನ ಹಾಸಿಗೆಯಿಂದ ಎದ್ದು ಬಂದೆ ಎಂಬುದೇ ಅವಳಿಗೆ ತಿಳಿಯುತ್ತಿರಲಿಲ್ಲ. ಆದರೂ ಅವು ಬಹಳ ಸುಂದರವಾದ ದಿನಗಳಾಗಿದ್ದವು. ಆಮೇಲೆ ಅಮ್ಮ ಮತ್ತೆ ಹೊಟ್ಟೆ ಉಬ್ಬಿಸಿಕೊಂಡು ಓಡಾಡಲು ಶುರು ಮಾಡಿದಾಗ ಮಾದೇವಿಯನ್ನು ಕೇಳುವವರೇ ಇರಲಿಲ್ಲ. ಅಪ್ಪ ಅವಳನ್ನು ತೋಟಕ್ಕೆ ಕರೆದುಕೊಂಡು ಹೋಗುವುದು ನಿಂತೇ ಹೋಗಿತ್ತು. ಸುಮ್ಮ ಸುಮ್ಮನೆ ಅವಳ ಮೇಲೆ ಸಿಡುಕುತ್ತಿದ್ದ. ಇನ್ನೂ ನಾಲ್ಕು ವರ್ಷ ತುಂಬದ ಅವಳ ಕೈಲಿ ಸಣ್ಣ ಮನೆ ಕೆಲಸ ಮಾಡಿಸುತ್ತಿದ್ದ. ಅಮ್ಮ ಸುಮ್ಮನೆ ಕುಳಿತಿರುತ್ತಿದ್ದಳು.
ಮಗು ನಂಜುಂಡ ಹುಟ್ಟಿದಾಗ ಮನೆಯಲ್ಲಿ ಎಷ್ಟು ಸಂಭ್ರಮ. ಅಪ್ಪ ಅಮ್ಮ ಅಷ್ಟು ಸಂತೋಷವಾಗಿರುವುದನ್ನು ಮಾದೇವಿ ನೋಡಿರಲೇ ಇಲ್ಲ. ಮಾದೇವಿಗೂ ಮುದ್ದು ತಮ್ಮನನ್ನು ನೋಡಿದಾಗ ತುಂಬಾ ಸಂತೋಷವಾಗುತಿತ್ತು. ಮೊದಲೇ ಅನಾದಾರಕ್ಕೆ ಒಳಗಾಗಿದ್ದ ಮಾದೇವಿ ಈಗ ಪೂರ್ತಿ ಮೂಲೆಗುಂಪಾಗಿದ್ದಳು. ಅವಳೂ ಚಿಕ್ಕ ಹುಡುಗಿ. ಅಪ್ಪ ಅಮ್ಮಂದಿರ ಪ್ರೀತಿಗೆ, ಓಲೈಕೆಗೆ ಹಾತೊರೆಯುತ್ತಿದ್ದಳು. ಓಲೈಕೆ ಇಲ್ಲದಿದ್ದರೆ ಬೇಡ, ತೆಗಳಿಕೆ, ದುಡಿಮೆ, ಏಟುಗಳು ತಪ್ಪಿದರೆ ಸಾಕೆನಿಸುತಿತ್ತು. ನಂಜುಂಡ ಮುದ್ದಾಗಿ ಬೆಳೆಯುತ್ತಿದ್ದ. ಬೆಳೆಯದೇ ಏನು ದಾಡಿ ಅವನಿಗೆ. ಮನೆಯಲ್ಲಿ ಯಾರಿಗೆ ಏನಿಲ್ಲದಿದ್ದರೂ ಅವನಿಗೆ ತುಪ್ಪ, ಹಾಲು, ಹಣ್ಣುಗಳಿಗೆ ಕೊರತೆ ಇರಲಿಲ್ಲ. ಹೊಸ ಬಟ್ಟೆ, ಆಟಿಕೆಗಳು ಎಲ್ಲಾ ಸಿಗುತ್ತಿದ್ದವು. ದಣೇರ ಮನೆಯ ಮಕ್ಕಳು ಹಾಕಿ, ಆಡಿ ಬಿಸಾಕ್ಕಿದ್ದ ಬಟ್ಟೆಗಳು, ಬೆಲೆಬಾಳುವ ಆಟದ ಸಾಮಾನುಗಳು ದಂಡಿಯಾಗಿ ಬರುತ್ತಿದ್ದವು. ಆದರೆ ಮಾದೇವಿಗೆ ಮಾತ್ರ ಅವೇ ಹಳೆಯ ಲಂಗ, ಬ್ಲೌಸ್ಸುಗಳು. ದಣೇರ ಮನೆಯವರಿಗೂ ಇವಳಿಗೆ ಏನ್ನನ್ನೂ ಕೊಡಬೇಕು ಎಂದೆನಿಸುತ್ತಿರಲಿಲ್ಲವೋ ಅಥವಾ ಅಪ್ಪ ಅಮ್ಮ ಅವರನ್ನು ಕೇಳುತ್ತಲೇ ಇರಲಿಲ್ಲವೋ ತಿಳಿಯದು. ನೋಡು ನೋಡುತ್ತಿದ್ದಂತೆ ನಂಜುಂಡನ ಆಟ ಪಾಠಗಳು ಮನೆಯಲ್ಲಿ ಜಾಸ್ತಿಯಾಗುತ್ತಿದ್ದವು. ಜೊತೆಗೆ ಅಕ್ಕ ಮಾದೇವಿಯನ್ನೂ ಗೋಳು ಹುಯ್ದುಕೊಳ್ಳುವುದೂ ಜಾಸ್ತಿಯಾಗಿತ್ತು. ಅವಳು ಕೈಲಿ ಏನು ಹಿಡಿದುಕೊಂಡಿದ್ದರೂ ಅವನಿಗೆ ಅದೇ ಬೇಕು. ಅವನ ಆಟದ ಸಾಮಾನುಗಳಲ್ಲಿ ಯಾವುದಾದರೂ ಆಟಿಕೆಯನ್ನು ಹಿಡಿದುಕೊಂಡು ಆಟವಾಡುತ್ತಿದ್ದರೆ ಎಲ್ಲಿರುತ್ತಿದ್ದನೋ ಬಂದು ಬಿಡುತ್ತಿದ್ದ. ಅವಳಿಂದ ಅದನ್ನು ಕಿತ್ತುಕೊಳ್ಳುವವರೆವಿಗೂ ಅವನಿಗೆ ಸಮಾಧಾನವಿಲ್ಲ. ಒಂದುವೇಳೆ ಅವಳು ಆಟಿಕೆಯನ್ನು ಅವನಿಗೆ ಕೊಡದೆ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ ಜೋರಾಗಿ ಅಳುತ್ತಿದ್ದ. ಅವನ ಅಳುವಿಗೆ ಅವಳ ಅಪ್ಪ, ಅಮ್ಮ, ಓಡಿ ಬರುತ್ತಿದ್ದರು. ಮಾದೇವಿಗೆ ಎರಡು ಬಾರಿಸಿ, ಆಟಿಕೆಯನ್ನು ಅವಳಿಂದ ಕಿತ್ತು ಅವನಿಗೆ ಕೊಡುತ್ತಿದ್ದಳು. ಮಾದೇವಿಗೆ ಅಳು ತಡೆಯಲಾಗುತ್ತಿರಲಿಲ್ಲ. ಜೋರಾಗಿ ಅತ್ತರೆ ಅಪ್ಪ, ಬೆತ್ತದ ಏಟು ಕೊಡುತ್ತಿದ್ದ. ಯಾರಿಗೂ ಕಾಣದಂತೆ ಹಿತ್ತಲಿಗೆ ಹೋಗಿ ಒಂದು ಮೂಲೆಯಲ್ಲಿ ಕುಳಿತು ಅತ್ತು ಬರುತ್ತಿದ್ದಳು. ನಂಜುಂಡನ ಆಟ ಪಾಟ ಅವಳಿಗೂ ಇಷ್ಟವಾಗುತಿತ್ತು. ಆದರೆ ತಕ್ಷಣ ಅವನ ಕೋಪ ಬರುತಿತ್ತು. ಇವನು ಹುಟ್ಟದಿದ್ದಿದ್ದರೆ ಅಪ್ಪ ಅಮ್ಮ ಇವಳನ್ನೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇವನು ಹುಟ್ಟಿದ್ದೇ ಅವಳಿಗೆ ಮುಳುವಾಗಿತ್ತು. ಮಗು ದೊಡ್ಡದಾಗುತ್ತಿದ್ದಂತೆ ಮಾದೇವಿಗೆ ಅದರ ಮೇಲಿದ್ದ ಪ್ರೀತಿ ಕಡಿಮೆಯಾಗಿ ಅಸೂಯೆ ಜಾಸ್ತಿಯಾಗುತಿತ್ತು. ಒಂದು ದಿನ ಮನೆಯಲ್ಲಿ ಅಪ್ಪ ಇರಲಿಲ್ಲ. ಅಮ್ಮ ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದಳು. ನಂಜುಂಡ ಹಾಸಿಗೆಯ ಮೇಲೆ ಮಲಗಿದ್ದ, ಆಗ ಅವನಿಗಿನ್ನೂ ಎರಡು ವರ್ಷವೂ ತುಂಬಿರಲಿಲ್ಲ. ಮನೆತುಂಬಾ ಓಡಾಡುತ್ತಿದ್ದ. ಅಮ್ಮ, ಅಪ್ಪ, ಅಕ್ಕ ಎಂಬ ಎರಡಕ್ಷರದ ಮಾತುಗಳನ್ನಾಡುತ್ತಿದ್ದ. ಅವನು ಅಕ್ಕ ಎಂದು ಕರೆದಾಗ ಸಂತೋಷವಾಗುತ್ತಿದ್ದರೂ ಅವನ ದೆಸೆಯಿಂದ ಅವಳಿಗೆ ಅಪ್ಪ ಅಮ್ಮನಿಂದ ಸಿಗದ ಪ್ರೀತಿಗೆ ಇವನೇ ಕಾರಣ ಎಂಬ ಅರಿವಾಗಿ ಅವನ ಮೇಲೆ ಸಿಟ್ಟು ಬರುತಿತ್ತು.
ನಂಜುಂಡ ನಿದ್ದೆಯಲ್ಲಿ ಏನು ಕನಸು ಕಾಣುತಿದ್ದನೋ ತಿಳಿಯದು. ಅವನ ಮುಖದಲ್ಲಿ ಮುಗುಳು ನಗು ಇತ್ತು. ಕೆಳಗಿನ ಸಾಲಿನಲ್ಲಿ ಬಂದಿದ್ದ ನಾಲ್ಕು ಹಲ್ಲುಗಳೂ ಕಾಣುತಿದ್ದವು. ಬಾಯಿ ಅರ್ಧ ತೆರೆದಿತ್ತು. ಒಂದು ಕ್ಷಣ ಅವನನ್ನು ನೋಡಿ ಮನದ ತುಂಬಾ ತನ್ನ ತಮ್ಮನೆಂಬ ಮುದ್ದು ಆವರಿಸಿಕೊಂಡರೂ ಮರುಕ್ಷಣದಲ್ಲೇ ಅವನ ಮೇಲೆ ಸಿಟ್ಟು ಬಂದಿತು. ಮೆಲ್ಲಗೆ ಅವನ ಬಳಿ ಹೋಗಿ ಅವನ ತೊಡೆಯ ಭಾಗದಲ್ಲಿ ಜೋರಾಗಿ ಚಿಗುಟಿಬಿಟ್ಟಳು. ತಕ್ಷಣ ಅಲ್ಲಿಂದ ಮನೆಯಾಚೆ ಓಡಿ ಹೋದಳು. ಮಗು ಕಿಟಾರನೆ ಕಿರುಚಿಕೊಂಡಿತು. ಹಿತ್ತಲಲ್ಲಿದ್ದ ಅಮ್ಮ ಓಡಿ ಬಂದು ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡಲು ಯತ್ನಿಸಿದಳು. ಮಗು ಅಳುವುದನ್ನು ನಿಲ್ಲಿಸಲೇ ಇಲ್ಲ. ಅಮ್ಮ ಮಾದೇವಿ, ಮಾದೇವಿ ಎಂದು ಕಿರಿಚಿದಾಗ ಮನೆಯಾಚೆಯ ಮೂಲೆಯಲ್ಲಿ ಅಡಗಿ ನಿಂತಿದ್ದ ಮಾದೇವಿ ಓಡಿ ಬಂದಳು. – ʼಲೇ ಮಾದೇವಿ, ಮಗು ಮಲಗಿರುವಾಗ ಅದನ್ನು ಬಿಟ್ಟು ಎಲ್ಲಿ ಸಾಯಲಿಕ್ಕೆ ಹೋಗಿದ್ದೆ? ಏನಾಯಿತೋ ತಿಳಿಯದು, ಮಗು ಅಳುತ್ತಿದೆ, ಹೋಗಿ ಒಂದು ಲೋಟ ಹಾಲು ತಂದು ಕೊಡುʼ – ಎಂದಳು. ಮಗು ಹಾಲು ಕುಡಿದು ಸಮಾಧಾನಗೊಂಡಿತು. ಮಾದೇವಿಗೂ ಏನೋ ಒಂದು ರೀತಿಯ ಸಮಾಧಾನ. ಈ ಎರಡು ವರುಷಗಳಲ್ಲಿ ಅಪ್ಪ ಅಮ್ಮ ನನಗೆ ಎಷ್ಟು ಬಾರಿಹೊಡೆದಿಲ್ಲ, ಬೈದಿಲ್ಲ, ನಾನು ಅತ್ತಾಗ ಒಂದು ದಿನವಾದರೂ ಹಾಲು ಕುಡಿಸಿದ್ದಾರಾ, ಸಂತೈಸಿದ್ದರಾ, ಈಗ ಈ ರಾಜಕುಮಾರನಿಗೆ ಹಾಲು! ಆದರೂ ಅವನು ಎಷ್ಟು ಜೋರಾಗಿ ಅತ್ತ. ತಾನು ಎರಡು ವರ್ಷಗಳಿಂದ ಹೊಡೆತ ತಿಂದು ಅತ್ತದ್ದಕ್ಕೆ ಇಂದು ಅವನ ಅಳುವಿನಿಂದ ತನಗೆ ಒಂದು ರೀತಿಯ ಸಮಾಧಾನವಾಯಿತು, ಎಂದು ಮಾದೇವಿಗೆ ಅನಿಸಿ ಮನಸ್ಸು ಮುದಗೊಂಡಿತು. ತಮ್ಮನನ್ನು ನೋಯಿಸಿ, ಅಳಿಸಿ ಸಂಭ್ರಮಿಸುವುದು ಮಾದೇವಿಗೆ ಒಂದು ಚಟವಾದದ್ದು ಬಹಳ ದಿನ ನಡೆಯಲಿಲ್ಲ. ನಂಜುಂಡ ನಿಧಾನವಾಗಿ ಮಾತು ಕಲಿಯುತ್ತಿದ್ದ. ಹೀಗೆ ಒಂದು ದಿನ ಅವನನ್ನು ಗಿಂಡಿ ಓಡಿ ಹೋದಾಗ ಅಮ್ಮನ ಎದುರಿಗೆ, – ಅಕ್ಕಾ, ಅಬ್ಬಿ, – ಎಂದು ಅಳುತ್ತಿದ್ದ. ಅಮ್ಮನಿಗೆ ಅನುಮಾನ ಬಂದು ಅವನನ್ನು ಅಲ್ಲಿಯೇ ಬಿಟ್ಟು ಮನೆಯ ಆಚೆ ಬಂದು ಮಾದೇವಿ ಮರೆಯಲ್ಲಿ ನಿಂತಿರುವುದು ಕಾಣಿಸಿತು. ಅಮ್ಮ ಬಂದು ಅವಳ ಕಿವಿ ಹಿಂಡುತ್ತಾ, ದರ ದರ ಒಳಗೆ ಕರೆದುಕೊಂಡು ಬಂದು – ಏನು ಮಾಡಿದೆ ಮಗುವಿಗೆ ಹೇಳು, ಸುಳ್ಳು ಹೇಳಿದರೆ ನನಗೆ ಗೊತ್ತಾಗುತ್ತದೆ – ಎಂದು ಕೇಳಿದಳು. ಮಾದೇವಿ ಏನೂ ಮಾತನಾಡಲಿಲ್ಲ. ಅಮ್ಮನಿಗೆ ಗೊತ್ತಾಯಿತು. – ಏ ಮಾದೇವಿ, ನಿನಗೆ ಮಾದೇವಿ ಎಂದು ಆ ದೇವರ ಹೆಸರಿಟ್ಟಿದ್ದು ದಂಡ. ನೀನು ಮಾದೇವಿಯಲ್ಲ, ಮೂದೇವಿ, ನಿಮ್ಮ ಅಪ್ಪನಿಗೆ ಏನಾದರೂ ಇದು ತಿಳಿದರೆ, ನಿನ್ನ ಮೈಯೆಲ್ಲಾ ಬಾಸುಂಡೆ ಬರುವಂತೆ ಹೊಡೆಯುತ್ತಾರೆ. ನಂಜುಂಡ ಒಬ್ಬನೇ ಇರುವಾಗ ಇದ್ದಕ್ಕಿದ್ದ ಹಾಗೆ ಜೋರಾಗಿ ಅಳಲು ಏನು ಕಾರಣ ಎಂದು ಈಗ ತಿಳಿಯಿತು. ಇದೇ ಕೊನೆಯ ಬಾರಿ. ಮುಂದೆ ನೀನು ಈ ರೀತಿ ಮಗುವಿಗೆ ತೊಂದರೆ ಮಾಡಿದರೆ ನಿಮ್ಮಪ್ಪನ ಛಡಿ ಏಟು ಖಂಡಿತಾ – ಎನ್ನುತ್ತಾ ಮಾದೇವಿಯ ಕಪಾಳಕ್ಕೆ ಒಂದು ಏಟು ಹಾಕಿ ಸುಮ್ಮನಾದಳು. ಅಂದಿನಿಂದ ಇವಳನ್ನು ಕಂಡರೆ ಸ್ವಲ್ಪವಾದರೂ ಮೃದುವಾಗಿದ್ದ ಅಮ್ಮ, ಮತ್ತಷ್ಟು ಕಠಿಣಳಾಗಿ ವರ್ತಿಸುತ್ತಿದ್ದಳು. ದಿನ ಕಳೆದಂತೆ ನಂಜುಂಡ ಚೆನ್ನಾಗಿ ಬೆಳೆಯುತ್ತಿದ್ದ. ಐದು ವರುಷ ತುಂಬಿದೊಡನೆ ಅವನನ್ನು ದಣೇರ ಮಕ್ಕಳೊಂದಿಗೆ ಶಾಲೆಗೆ ಕಳುಹಿಸುವ ಏರ್ಪಾಟು ಆಯಿತು. ಎಷ್ಟೇ ಹಠ ಮಾಡಿದರೂ ಮಾದೇವಿಯನ್ನು ಶಾಲೆಗೆ ಕಳುಹಿಸಲು ಅಪ್ಪ ಒಪ್ಪಲಿಲ್ಲ, ಅಮ್ಮ ಮನೆಯಲ್ಲಿ, ದಣೇರ ಮನೆಯಲ್ಲಿ ಒಬ್ಬಳೇ ದುಡಿಯುತ್ತಾಳೆ. ಅವಳಿಗೆ ಸಹಾಯ ಮಾಡಿಕೊಂಡು ಕೆಲಸ ಕಲಿಯಲಿ, ಇವಳು ಶಾಲೆಗೆ ಹೋಗಿ ಯಾವ ದೇಶ ಉದ್ಧಾರ ಮಾಡಬೇಕಾಗಿದೆ ಎಂದು ಬಿಟ್ಟಿದ್ದರು.
ದಿನಗಳು ಕಳೆದಂತೆ ಮಾದೇವಿಯೂ ದೊಡ್ಡವಳಾಗುತ್ತಿದ್ದಳು. ಅನಿವಾರ್ಯವಾಗಿ ಕಷ್ಟಪಟ್ಟು ದುಡಿಯುತ್ತಿದ್ದುದರಿಂದ ಚಿನ್ನಾಗಿ ಹಸಿವೆಯೂ ಆಗುತ್ತಿತ್ತು. ಚೆನ್ನಾಗಿ ಊಟವನ್ನೂ ಮಾಡುತ್ತಿದ್ದಳು. ಜೊತೆಗೆ ತಮ್ಮ ನಂಜುಂಡ ತಿನ್ನದೇ ಬಿಡುತ್ತಿದ್ದ, ತುಪ್ಪದ ದೋಸೆ, ಹಣ್ಣು. ತುಪ್ಪ ಕಲೆಸಿದ ಅನ್ನಗಳನ್ನು ಇವಳೇ ಮುಗಿಸುತ್ತಿದ್ದಳು. ಆದರೆ ನಂಜುಂಡನಿಗೆ ಸಿಗುತ್ತಿದ್ದ ಪ್ರೀತಿ ಅವನನ್ನು ಅಪ್ಪ, ಅಮ್ಮ ಮುದ್ದಿಸುತ್ತಿದ್ದುದು ಮಾದೇವಿಗೆ ತಡೆದುಕೊಳ್ಳಲಾಗುತ್ತಿರಲಿಲ್ಲ. ಏನಾದರೂ ಮಾಡಿ ಅವನನ್ನು ಗೋಳು ಹುಯ್ದುಕೊಳ್ಳಬೇಕೆಂದು ಯೋಚಿಸುತ್ತಿದ್ದಮಾದೇವಿಗೆ ಕೊನೆಗೂ ಒಂದು ಉಪಾಯ ಸಿಕ್ಕಿತು. ಹೊಡೆದೂ ಬಡಿದು ಮಾಡಿದರೆ ಅಮ್ಮನಿಗೆ ಚಾಡಿ ಹೇಳಿ ಬಿಡುತ್ತಾನೆ. ಹೇಗೆ ಅವನನ್ನು ಅಳಿಸುವುದು? ನಂಜುಂಡ ಶಾಲೆಯಿಂದ ಬಂದೊಡನೆಯೇ ಅವನ ಶೂಸು, ಬಟ್ಟೆ, ಪುಸ್ತಕದ ಚೀಲಗಳನ್ನೆಲ್ಲಾ ಚಿಕ್ಕಿದ ಕಡೆ ಬಿಸಾಡಿ ಹೋಗುತ್ತಿದ್ದ. ಮಾದೇವಿ ಎಲ್ಲವನ್ನೂ ಸರಿಯಾಗಿ ಜೋಡಿಸಿ ಇಡುತ್ತಿದ್ದಳು. ಅವನ ಪುಸ್ತಕದ ಹಾಳೆಗಳನ್ನು ಆಗಾಗಾ ಹರಿದು ಬಿಡುತ್ತಿದ್ದ. ಆಗ ಅಪ್ಪನಿಂದ ಬೈಸಿಕೊಳ್ಳುತ್ತಿದ್ದ. ಇದನ್ನು ಗಮನಿಸಿದ್ದ ಮಾದೇವಿ ಉಪಾಯದಿಂದ ಯಾರಿಗೂ ಗೊತ್ತಾಗದಂತೆ ಅವನ ಪುಸ್ತಕದಿಂದ ಒಂದು, ಎರಡು ಹಾಳೆಗಳನ್ನು ಹರಿದು ಬಿಸಾಡಿ ಬಿಡುತ್ತಿದ್ದಳು. ರಾತ್ರಿ ಅವನು ಓದಲು ಕುಳಿತಾಗ ಹಾಳೆಯಿಲ್ಲದೆ ಅಳುತಿದ್ದ. ಅಮ್ಮ ಅವನನ್ನು ಬೈದು ಹೊಡೆಯುತ್ತಿದ್ದಳು. ನಂಜುಂಡ ಜೋರಾಗಿ ಅಳುತಿದ್ದ. ಮಾದೇವಿಗೆ ಭೂತ ತೃಪ್ತಿಯಾಗುತಿತ್ತು. ನಿಧಾನವಾಗಿ ನಂಜುಂಡನ ಶೂಸಿನಿಂದ ಒಂದೊಂದು ಕಾಲು ಚೀಲ, ಪನ್ಸಿಲ್ಲು, ರಬ್ಬರು, ಅವನ ಒಂದೊಂದು ಬಟ್ಟೆ ಕಾಣೆಯಾಗುತ್ತಿದ್ದವು. ಮಾದೇವಿಯ ಅಮ್ಮನಿಗೆ ಅವಳ ಮೇಲೆ ಅನುಮಾನ ಬಂದರೂ ಬಹಳ ಜಾಗರೂಕತೆಯಿಂದ ಕಳುವು ಮಾಡಿ ಮನೆಯ ಹೊರಗೆ ದೂರದಲ್ಲಿ ಎಸೆದು ಬರುತ್ತಿದ್ದುದರಿಂದ ಅವಳನ್ನು ಹಿಡಿಯಲಾಗುತ್ತಿರಲಿಲ್ಲ. ಅಲ್ಲದೆ ನಂಜುಂಡ ಬಹಳ ತುಂಟನಾಗಿದ್ದರಿಂದಲೂ ಅವನೇ ಎಲ್ಲವನ್ನು ಕಳೆಯುತ್ತಿದ್ದಾನೆ ಎಂದು ಭಾವಿಸುತ್ತಿದ್ದಳು. ಕೆಲವು ಬಾರಿ ಅದಕ್ಕಾಗಿ ಅಮ್ಮನಿಂದ, ಅಪ್ಪನಿಂದ ಅವನು ಏಟು ತಿಂದಾಗಲಂತೂ ಮಾದೇವಿಗೆ ಪೈಶಾಚಿಕ ಆನಂದವಾಗುತಿತ್ತು. ಆದರೂ ಒಂದೊಂದು ಬಾರಿ ಮುದ್ದು ತಮ್ಮನ ಮೇಲೆ ಪ್ರೀತಿ ಉಕ್ಕುತಿತ್ತು, ಯಾರಿಗೂ ಕಾಣದಂತೆ ಅವನ ಕೆನ್ನೆಗೆ ಮುತ್ತು ಕೊಡುತ್ತಿದ್ದಳು. ಅವನೂ ಒಂದು ಬಾರಿ ಅಮ್ಮನ ಹತ್ತಿರ, – ಅಮ್ಮ, ಅಕ್ಕ ಪಪ್ಪಿ – ಎಂದು ಮುದ್ದಾಗಿ ಹೇಳಿದಾಗ, ಅಮ್ಮ ಮಾದೇವಿಯೆಡೆಗೆ ನಗು ಬೀರಿದ್ದನ್ನು ಕಂಡು ಅವಳಿಗೆ ಬಹಳ ಸಮಾಧಾನವಾಯಿತು. ಅಮ್ಮ ತನ್ನನ್ನು ನೋಡಿ ನಕ್ಕು ಎಷ್ಟು ದಿನಗಳಾಗಿದ್ದವು ಎಂದು ಯೋಚಿಸುತ್ತಿದ್ದಳು.
ಹೀಗೆ, ಅವಮಾನ, ಅಸೂಯೆಗಳಿಂದ, ತಮ್ಮನ ಮೇಲಿನ ದ್ವೇಷ, ಪ್ರೀತಿಯ ಜೂಟಾಟದಿಂದ ಅಮ್ಮ, ಅಪ್ಪನ ಏಟುಗಳು, ದಣಿಗಳ ಮನೆಯ ಬಿಡುವಿಲ್ಲದ ಕೆಲಸಗಳಿಂದ ಬೇಸತ್ತು ಹೋಗಿದ್ದ ಮಾದೇವಿ ಎಲ್ಲವನ್ನೂ ಅನುಭವಿಸುತ್ತಲೇ ಬೆಳೆದು 12 ರ ಹೊಸ್ತಿಲನ್ನು ದಾಟಿ ಬಾಲಕಿಯಿಂದ ಯುವತಿಯಾಗುವ ಆ ಪರ್ವಕಾಲದಲ್ಲಿ ಅವಳ ಸಹನೆಯ ಕಟ್ಟೆ ಒಡೆದದ್ದು. 8 ವರ್ಷದ ಪೋರ ಅಪ್ಪನ ಜೊತೆ ಹೋಗಿ ರೈಲಿನಲ್ಲಿ ಕಡಲೇಕಾಯಿ ಮಾರಿಕೊಂಡು ಬಂದು ಅಮ್ಮನ ಮುಂದೆ ಹಣದ ರಾಶಿಯನ್ನು ಸುರಿದಾಗ, ಅಪ್ಪ ಅವನನ್ನ ಬರಸೆಳೆದು ಅಪ್ಪಿಕೊಂಡು ಹೆಂಡತಿಗೆ,
ʼನೋಡೇನನ್ನ ಮಗ ನನ್ನ ಕೈಗೆ ಬಂದು ಬಿಟ್ಟ. ಇವನ ಮುದ್ದು ಮಾತಿಗೆ ರೈಲಿನ ಜನ ಬೆರಗಾಗಿ ಬಿಟ್ಟರು. ನಾವು ಸಾಗರದಿಂದ ತಾಳಗುಪ್ಪ ಸೇರಿ ವಾಪಸ್ಸು ಸಾಗರಕ್ಕೆ ಬರುವಷ್ಟರಲ್ಲಿಯೇ ಎಲ್ಲ ಕಡಲೇಕಾಯಿ ಪೊಟ್ಟಣಗಳನ್ನು ಇವನೇ ಮಾರಿಬಿಟ್ಟ. ನಾನು ಸುಮ್ಮನೇ ಇವನ ಜೊತೆಗಿದ್ದೆ. ಹಣವನ್ನೂ ಸರಿಯಾಗಿ ತೆಗೆದುಕೊಳ್ಳುತ್ತಿದ್ದ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಹುಪಾಲು ಜನರು ನನಗೆ ತಿಳಿದವರೇ. “ಏನು ಶಿವಪ್ಪಾ, ಮಗ ಕೈಗೆ ಬಂದು ಬಿಟ್ಟ. ಇನ್ನು ನೀವು ಆರಾಮವಾಗಿರಬಹುದು”, ಎಂದಾಗ ನನಗೆ ಸ್ವರ್ಗ ಸಿಕ್ಕಷ್ಟೇ ಸಂತೋಷವಾಯಿತು. ಇವನಿಗೆ ದೃಷ್ಠಿ ನಿವಾಳಿಸು – ಎಂದಾಗ ಅಲ್ಲೇ ನಿಂತು ನೋಡುತ್ತಿದ್ದ ಮಾದೇವಿಯ ಹೊಟ್ಟೆಯಲ್ಲಿ ಬೆಂಕಿ ಹೊತ್ತಿಕೊಂಡ ಹಾಗಾಯಿತು. ಅವಳು ಬಚ್ಚಲ ಮನೆಗೆ ಹೋಗಿ ಒಂದು ತಂಬಿಗೆ ತಣ್ಣೀರನ್ನು ಹುಯ್ದುಕೊಂಡು ಹಿತ್ತಲಿನ ಮೂಲೆಯಲ್ಲಿಬಿಕ್ಕುತ್ತಾ ಕುಳಿತುಬಿಟ್ಟಳು.
ಅಂದಿನಿಂದ ಮೂರು ದಿನ ಮಾದೇವಿಗೆ ಮೈತುಂಬಾ ಜ್ವರ. ಅಮ್ಮ ಗಾಭರಿಗೊಂಡು ತಲೆಯ ಮೇಲೆ ತಣ್ಣೀರಿನ ಬಟ್ಟೆಯನ್ನು ಹಾಕುತ್ತಾ ಗಂಜಿ ಮಾಡಿಕೊಟ್ಟಳು. ಅಮ್ಮ ಎಲ್ಲ ಕೆಲಸವೂ ತನ್ನ ಮೇಲೇ ಬಿತ್ತು ಎಂದು ಗೊಣಗಿಕೊಳ್ಳುತ್ತಾ ಓಡಾಡುತ್ತಿದ್ದಳು. ನಂಜುಂಡ ಎಂದಿನಂತೆ ತನ್ನ ಆಟ ಪಾಠಗಳಲ್ಲಿ ತಲ್ಲಿನನಾಗಿದ್ದ. ಮಲಗಿದ್ದ ಮಾದೇವಿಗೆ ಕನಸಿನಲ್ಲೆಲ್ಲಾ ಅಪ್ಪ, ನಂಜುಂಡನಿಗೆ – ಮಗ ಕೈಗೆ ಬಂದು ಬಿಟ್ಟ – ಎಂಬ ಮಾತುಗಳೇ ಗುಣುಗುಣಿಸುತ್ತಿದ್ದವು. ಅವನು ಎಂಟು ವರ್ಷದ ಪೋರ, ಅವಳು ಅವನಿಗಿಂತ ನಾಲ್ಕು ವರ್ಷ ದೊಡ್ಡವಳು. ದಣಿಗಳ ಮನೆಗೆಲಸ, ಮನೆಯ ಎಲ್ಲ ಕೆಲಸ ಮಾಡುತ್ತಿದ್ದರೂ ಅಪ್ಪ ಅಮ್ಮ ಹೊಗಳದಿದ್ದರೂ, ದಣಿಯವರ ಹೆಂಡತಿ ಮಹಾಲಕ್ಷಮ್ಮನವರು – ನಿನ್ನ ಮಗಳು ಮಾದೇವಿ ತುಂಬಾ ಜಾಣೆ ಕಣೆ, ಎಷ್ಟು ಸೊಗಸಾಗಿ ರಂಗೋಲಿ ಹಾಕುತ್ತಾಳೆ, ಅವಳು ನಿನಗಿಂತಾ ಚೆನ್ನಾಗಿ ಪಾತ್ರೆ ಬೆಳಗುತ್ತಾಳೆ – ಎಂದಗ ಅಮ್ಮ, ಅವರಿಗೆ – ಎಲ್ಲಾ ನಿಮ್ಮ ಅಭಿಮಾನ – ಎಂದರೂ ಅವಳ ತಲೆ ಸವರಲಿಲ್ಲ. ಇಂದು ಈ ಪೋರ, ಕಡಲೇಕಾಯಿ ಮಾರಿದ್ದನ್ನೇ ದೊಡ್ಡದಾಗಿ ಮಾಡಿಕೊಂಡು ದೃಷ್ಠಿ ತೆಗೆಯುತ್ತಾರೆ, ಇವರಿಗೆ ನನ್ನ ಕಂಡರೆ ಆಗುವುದೇ ಇಲ್ಲ – ಎಂದು ಹಲಬುತ್ತಾ ನಿದ್ದೆಗೆ ಜಾರುತ್ತಿದ್ದಳು. ಹೀಗೆಯೆ ಮೂರು ನಾಲ್ಕು ದಿನಗಳಾದ ಮೇಲೆ ಜ್ವರ ಕಡಿಮೆಯಾಯಿತು. ಅಮ್ಮ ಮಾದೇವಿಯ ಹಣೆ ಮುಟ್ಟಿ – ನಿನಗೆಈಗ ಜ್ವರ ಕಮ್ಮಿಯಾಗಿದೆ, ಇವತ್ತೊಂದು ದಿನ ಮನೆಯಲ್ಲೇ ಇರು, ಇಂದು ಭಾನುವಾರ, ನಂಜುಂಡನಿಗೂ ಶಾಲೆ ಇಲ್ಲ, ನಿಮ್ಮಪ್ಪನೂ ದಣಿಗಳ ಜೊತೆಗೆ ತೋಟದಲ್ಲಿ ತೆಂಗಿನಕಾಯಿಗಳನ್ನು ಕೀಳಿಸುವ ಕೆಲಸ ಮಾಡುತ್ತಿರುತ್ತಾರೆ. ಅವರು ಮನೆಗೆ ಬರುವುದು ಯಾವಾಗಲೋ ತಿಳಿಯದು. ನೀನು ನಂಜುಂಡನ ಜೊತೆ ಜಗಳವಾಡಬೇಡ, ಅವನಿಗೂ ಊಟ ಮಾಡಿಸು. ನಿನಗಿಷ್ಟವಾದ ಚಿತ್ರಾನ್ನ ಮಾಡಿದ್ದೇನೆ. ತಿನ್ನು. ಅವನನ್ನು ಅಳಿಸಬೇಡ, ನಾನು ಆದಷ್ಟು ಬೇಗ ಬರುತ್ತೇನೆ, ಎಂದು ಹೊರಟು ಹೋದಳು.
ಮನೆಯಲ್ಲಿ ಇಬ್ಬರೇ. ನಂಜುಂಡ ಒಬ್ಬನೇ ಅಂಗಳದಲ್ಲಿ ಗೋಲಿಯಾಡುತ್ತಿದ್ದ. ಅವನನ್ನು ನೋಡಿದ ಕೂಡಲೇ ಮಾದೇವಿಗೆ ಹೊಟ್ಟೆಯಲ್ಲಿ ಬೆಂಕಿ ಹೊತ್ತಿಕೊಂಡಂತೆ ಆಯಿತು. ಆಗಲೇ ಎಂಟು ವರ್ಷದ ಪೋರ, ಮನೆಯಲ್ಲಿ ಒಂದು ಕೆಲಸವನ್ನೂ ಮಾಡುವುದಿಲ್ಲ. ಅಪ್ಪನೊಡನೆ ಹೋಗಿ ಏನೋ ಕಡಲೇಕಾಯಿ ಮಾರಿದನಂತೆ. ಅಷ್ಟಕ್ಕೇ ಅವನು ಕುಲದೀಪಕನಾಗಿ ಹೋದ. ಅವನಿಗೆ ದೃಷ್ಠಿ ಬೇರೆ ತೆಗೆಯುವ ಅಪ್ಪ, ಅಮ್ಮ. ಕಡಲೇಕಾಯಿ ಮಾರುವುದು ಅದೇನು ಮಹಾ ಕೆಲಸ. ನಾನು ಹೋದರೆ ಅವನಿಗಿಂತ ಡಬ್ಬಲ್ ಮಾರುತ್ತೇನೆ ಎಂದು ಯೋಚಿಸಿದಾಗ ಮೂಲೆಯಲ್ಲಿ ಇದ್ದ ಕಡಲೇಕಾಯಿಯ ಪೊಟ್ಟಣ್ಣಗಳಿದ್ದ ಚೀಲ ಕಂಡಿತು. ಸರಿ, ಇದೇ ಸರಿಯಾದ ಸಮಯ. ಹೇಗೂ ಮನೆಯಲ್ಲಿ ಯಾರೂ ಇಲ್ಲ, ಇಂದು ನಾನೂ ರೈಲಿನಲ್ಲಿ ಹೋಗಿ ಎಲ್ಲಾ ಕಡಲೇಕಾಯಿ ಮಾರಿಕೊಂಡು ಬಂದರೆ, ಅಪ್ಪ ಅಮ್ಮ ಖುಷಿಯಾಗುತ್ತಾರೆ, ಇನ್ನೇನು ರೈಲು ಬರುವ ಸಮಯವಾಯಿತು. ಪ್ರತೀ ದಿನ ಮನೆಯ ಮುಂದೆ ರೈಲು ಹೋಗುತ್ತದೆ. ನನಗೆ ಇದರ ಸಮಯ ಗೊತ್ತಿಲ್ಲವೆ? ಇರಲಿ, ಮೊದಲು ಸ್ವಲ್ಪ ಚಿತ್ರಾನ್ನ ತಿಂದು ಬಿಡೋಣ, ಅವನಿಗೂ ತಿನ್ನಿಸಿ ಬಿಟ್ಟರೆ, ಅಮ್ಮ ಬರುವ ತನಕ ಅವನು ಗಲಾಟೆ ಮಾಡುವುದಿಲ್ಲ. ನಂಜುಂಡನಿಗೂ ಒಂದು ತಟ್ಟೆಯಲ್ಲಿ ಚಿತ್ರಾನ್ನ ಹಾಕಿ ಅವಳೂ ಒಂದು ತಟ್ಟೆಯಲ್ಲಿ ಹಾಕಿಕೊಂಡು ನಂಜುಂಡನನ್ನು ಕರೆದು ಇಬ್ಬರೂ ಚಿತ್ರಾನ್ನ ತಿಂದು ಮುಗಿಸಿದರು. ಅವಳ ಅದೃಷ್ಟ, ನಂಜುಂಡನಿಗೂ ಹೊಟ್ಟೆ ಹಸಿಯುತಿತ್ತು ಎಂದು ಕಾಣುತ್ತದೆ, ಗಲಾಟೆ ಮಾಡದೆ ತಿಂದ. ಅನ್ನ ತಿಂದಾದ ಮೇಲೆ ಮಾದೇವಿ, ನಂಜುಂಡನನ್ನು ಕರೆದು, – ನೋಡು ನಂಜುಂಡ, ಇಂದು ನಾನು ಹೋಗಿ ರೈಲಿನಲ್ಲಿ, ಕಡಲೇಕಾಯಿ ಮಾರಿಕೊಂಡು ಬಂದು ಬಿಡುತ್ತೇನೆ, ನೀನು ಇಲ್ಲೇ ಮನೆಯ ಒಳಗಡೆ ಇದ್ದು ಬಿಡು, ಎಲ್ಲಿಗೂ ಹೋಗಬೇಡ, ಅಮ್ಮ ಬಂದರೆ ಗಾಭರಿಯಾಗುತ್ತಾಳೆ, ಬರುವಾಗ ನಾನು ನಿನಗೆ ಕೊಬ್ಬರಿ ಮಿಠಾಯಿ ತಂದು ಕೊಡುತ್ತೇನೆ. – ಎಂದಳು. ನಂಜುಂಡ ಒಂದು ನಿಮಿಷ ಸುಮ್ಮನೆ ಇದ್ದು, ನಂತರ – ಓ ಅಮ್ಮಣ್ಣೀ, ನೀನು ಒಬ್ಬಳೇ ಕಡಲೇಕಾಯಿ ಮಾರಲು ಹೋಗುತ್ತೀಯಾ, ನಿನಗಿಂತ ಮೊದಲೇ ನಾನು ಕಡಲೇಕಾಯಿ ಮಾರಿಕೊಂಡು ಬಂದಿದ್ದೇನೆ. ನಾನೂ ಬರುತ್ತೀನಿ – ಎಂದ. ಮಾದೇವಿ, – ಬೇಡ ನಂಜುಂಡ, ನಾನೊಬ್ಬಳೇ ಹೋಗಿ ಬರುತ್ತೀನಿ – ಎನ್ನುವಷ್ಟರಲ್ಲಿ, ನಂಜುಂಡ ಓಡಿ ಹೋಗಿ ಮೂಲೆಯಲ್ಲಿದ್ದ ಕಡಲೇಕಾಯಿಯ ಚೀಲ ತೆಗೆದುಕೊಂಡು, – ನಾನು, ನಿನಗೆ ಒಬ್ಬಳೇ ಹೋಗುವುದಕ್ಕೆ ಬಿಡುವುದಿಲ್ಲ – ಎಂದು ಹಠ ಮಾಡಿದ. ಇವನು ಬಿಡುವುದಿಲ್ಲವೆಂದರಿತ ಮಾದೇವಿ – ಸರಿ, ನಾವಿಬ್ಬರೂ ಹೋಗೋಣ – ಎನ್ನುತ್ತಾ ಕಡಲೇಕಾಯಿ ಚೀಲವನ್ನು ಹೊತ್ತುಕೊಂಡು ಮನೆಯ ಬಾಗಿಲನ್ನು ಮುಂದೆ ಹಾಕಿಕೊಂಡು ಚಿಲಕಕ್ಕೆ ಒಂದು ಕಡ್ಡಿಯನ್ನು ಸಿಕ್ಕಿಸಿ ಅಕ್ಕ ತಮ್ಮ, ಇಬ್ಬರೂ ಮನೆಯ ಮುಂದೆ ಸ್ವಲ್ಪವೇ ದೂರಲ್ಲಿದ್ದ ರೈಲು ನಿಲ್ದಾಣಕ್ಕೆ ತೆರಳಿದರು. ರೈಲು ನಿಲ್ದಾಣ ತಲುಪಿದಾಗ, ರೈಲು ಇನ್ನೂ ಬಂದಿರಲಿಲ್ಲ. ಪ್ಲಾಟ್ ಫಾರಂನಲ್ಲೇ ಯಾರೋ ನಂಜುಂಡನನ್ನು ನೋಡಿ – ಓ, ನೀನು ಮತ್ತೆ ಕಡಲೇಕಾಯಿ ಮಾರಲು ಬಂದಿದ್ದೀಯಾ, ಎಲ್ಲಿ ನಿನ್ನ ಅಪ್ಪ – ಎಂದಾಗ, ನಂಜುಂಡ – ಇಲ್ಲ, ಇವತ್ತು ಅಕ್ಕ ಬಂದಿದ್ದಾಳೆ – ಎಂದು ಕಡಲೇಕಾಯಿ ಚೀಲದಿಂದ ಒಂದು ಪೊಟ್ಟಣ ಅವರಿಗೆ ತೆಗೆದು ಕೊಟ್ಟು, ಅವರಿಂದ ಹಣ ತೆಗೆದುಕೊಂಡು ಚೆಡ್ಡಿ ಜೋಬಿನಲ್ಲಿ ಹಾಕಿಕೊಂಡ. ಎಲ್ಲವನ್ನು ನೋಡುತ್ತಿದ್ದ ಮಾದೇವಿ, ನಂಜುಂಡನಿಗೆ – ಏ ನಂಜುಂಡ, ನೀನು ಕಡಲೇಕಾಯಿ ಮಾರಬೇಡ, ನಾನು ನಿನ್ನನ್ನು ಸುಮ್ಮನೇ ಕರೆದುಕೊಂಡು ಬಂದಿದ್ದೇನೆ, ಇಂದು ಎಲ್ಲಾ ಕಡಲೇಕಾಯಿಯನ್ನು ನಾನೇ ಮಾರುತ್ತೇನೆ.
ಹೂಂ, ಅಮ್ಮಣ್ಣಿ, ನಾನು ನಿನಗಿಂತ ಮೊದಲೇ ಕಡಲೇಕಾಯಿ ಮಾರಿದ್ದೇನೆ, ನೀನು ಸುಮ್ಮನೆ ಚೀಲ ಹಿಡಿದುಕೊಂಡು ನನ್ನ ಹಿಂದೆ ಬಾ
ಮಾದೇವಿ, – ಏ, ಚೋಟುದ್ದಾ ಇದ್ದೀಯಾ, ನನ್ನ ಮೇಲೇ ರೋಫು ಹಾಕುತ್ತೀಯಾ, ನಿನ್ನ ಮಾತು ಕೇಳಲು ನಾನು ನಿನ್ನ ಅಪ್ಪ ಅಲ್ಲ – ಎಂದಾಗ, ನಂಜುಂಡ, ಅವಳ ಕೈಯಿಂದ ಕಡಲೇಕಾಯಿ ಚೀಲವನ್ನು ಕಿತ್ತುಕೊಳ್ಳಲು ಮುಂದೆ ಬಂದ. ಅಷ್ಟು ಹೊತ್ತಿಗೆ ಪ್ಲಾಟ್ ಫಾರಂಗೆ ರೈಲು ಬರುವ ಸದ್ದು ಕೇಳಿಸಿತು. ಮಾದೇವಿ, – ನಂಜುಂಡ, ಮೊದಲು ರೈಲು ಹತ್ತೋಣ, ಆಮೇಲೆ ನೋಡೋಣ, ಈಗ ನೀನು ಸುಮ್ಮನಿರುಎಂದಾಗ ನಂಜುಂಡ ಸುಮ್ಮನಾದ.
ಇಬ್ಬರೂ ರೈಲು ಹತ್ತಿದರು. ಸ್ವಲ್ಪ ಸಮಯದಲ್ಲೇ ರೈಲು ಹೊರಟಿತು. ಅಲ್ಲಿಯವರಗೆ ಸುಮ್ಮನಿದ್ದ ನಂಜುಂಡ ರೈಲು ಹೊರಟೊಡನೆ ಜೋರಾಗಿ – ಕಳ್ಳೇಕಾಯಿ, ಕಳ್ಳೇಕಾಯಿ, 5 ರೂಪಾಯಿಗೆ ಒಂದು ಪೊಟ್ಟಣ, ಗರಂ ಗರಂ ಕಳ್ಳೇಕಾಯಿ – ಎಂದು ಕಿರುಚಲು ಶುರು ಮಾಡಿದ. ಮಾದೇವಿಗೆ ಏನೂ ಮಾಡಲೂ ತೋಚಲಿಲ್ಲ. ಒಂದಿಬ್ಬರು ಕಡಲೇಕಾಯಿ ಕೊಂಡರು. ಮಾದೇವಿಗೆ ಸಹನೆ ಮೀರಿತ್ತಿತ್ತು. ಇಂದು ಎಲ್ಲಾ ಕಡಲೇಕಾಯಿಯನ್ನು ತಾನೇ ಮಾರಿ ಅಪ್ಪನಿಗೆ ಹಣಕೊಟ್ಟು ತಾನೂ ಅವನ ಮಗಳು, ಕೈಗೆ ಬಂದಿದ್ದೇನೆ ಎಂದು ಹೊಗಳಿಸಿಕೊಳ್ಳಬೇಕೆಂದು ಬಂದಿದ್ದರೂ, ಇಂದೂ ಇವನೇ ಮಾರುತ್ತಿದ್ದಾನೆ. ಹೀಗೇ ಬಿಟ್ಟರೆ ನಾನು ಅಪ್ಪ ಅಮ್ಮನ ಕೈಯಲ್ಲಿ ಹೊಗಳುಸಿಕೊಳ್ಳುವುದು ಯಾವಾಗ? ಇಲ್ಲ, ಇವನನ್ನು ಇಲ್ಲಿಗೇ ನಿಲ್ಲಿಸಬೇಕು, ಪಕ್ಕದಲ್ಲೇ ಇದ್ದ ಶೌಚಾಲಯಕ್ಕೆ ಹೋಗಿ ಅವನನ್ನೂ ಒಳಗೆ ಎಳೆದುಕೊಂಡು ಬಾಗಿಲು ಹಾಕಿಕೊಂಡಳು. ನಂಜುಡ ಕಿರುಚಲು ಬಾಯಿ ತೆರೆದಾಗ ಅವನ ಬಾಯಿಯನ್ನು ಮುಚ್ಚಿ, – ನೋಡು ನಂಜುಂಡ ಇಲ್ಲಿ ನಿನ್ನ ಆಟ ನಡೆಯುವುದಿಲ್ಲ, ಇಲ್ಲಿ ನಿನಗೆ ಅಮ್ಮ ಅಪ್ಪ ಇಲ್ಲ, ನೀನು ಸುಮ್ಮನೇ ನನ್ನ ಹಿಂದೆ ಬರಬೇಕು, ನಾನು ಕಡಲೇಕಾಯಿ ಮಾರುತ್ತೇನೆ – ಎಂದು ಅವನ ಬಾಯಿಯಿಂದ ಕೈ ತೆಗೆದಾಗ ನಂಜುಂಡ ಜೋರಾಗಿ ಅಳುತ್ತಾ – ಅಪ್ಪನಿಗೆ ಹೇಳಿ ನಿನಗೆ ಹೊಡೆಸುತ್ತೇನೆ ಎಂದಾಗ, ಮಾದೇವಿ ಕೋಪದಿಂದ ಅವನ ಬಾಯಿಯ ಮೇಲೆ ಜೋರಾಗಿ ಹೊಡೆದುಬಿಟ್ಟಳು. ಅವಳು ಹೊಡೆದ ಏಟಿಗೆ ನಂಜುಂಡ ಅಲ್ಲಿದ್ದ ಕಮೋಡಿನ ಮೇಲೆ ಜೋರಾಗಿ ಬಿದ್ದ. ಅವನ ಹಣೆಯಿಂದ ರಕ್ತ ಸೋರತೊಡಗಿತು. ಮಾದೇವಿಗೆ ಏನೂ ಮಾಡಲೂ ತೋಚಲಿಲ್ಲ. ತಲೆ ಗ್ರಿರೆಂದು ಸುತ್ತುತ್ತಿತ್ತು. – ಏ ನಂಜುಂಡ, ಎಂದು ಹೇಳಲು ಬಾಯಿ ತೆರೆದರೆ ಬಾಯಿಯಿಂದ ಸ್ವರವೇ ಬರುತ್ತಿರಲಿಲ್ಲ. ನಂಜುಂಡ ಕಮೋಡಿನ ಪಕ್ಕದಲ್ಲೇ ಕುಸಿದು ಬಿದ್ದಿದ್ದ. ಅವನು ಅಳುತ್ತಲೂ ಇರಲಿಲ್ಲ. ಮಾದೇವಿ ಶೌಚಾಲಯದಿಂಂದ ಆಚೆಗೆ ಬಂದು ಕಡಲೇಕಾಯಿ ಚೀಲದೊಂದಿಗೆ ಕುಳಿತಳು. ತಲೆ ಗ್ರಿರನೆ ತಿರುಗುತ್ತಲೇ ಇತ್ತು. ಬಾಯಿಯಿಂದ ಮಾತೂ ಹೊರಡುತ್ತಿರಲಿಲ್ಲ. ಲಂಗದ ಒಳಗೆ ಏನೋ ಒದ್ದೆಯಾದಂತಿತ್ತು.
ಅವಸರ, ಅವಸರವಾಗಿ ಮನೆಗೆ ಬಂದ ಮಾದೇವಿ, ನಂಜುಂಡರ ತಾಯಿಗೆ ಮನೆಯ ಬಾಗಿಲಿಗೆ ಕಡ್ಡಿ ಸಿಕ್ಕಿಸಿರುವುದು ನೋಡಿ ಗಾಭರಿಯಾಗಿ ಒಳಗೆ ಬಂದು ನೋಡಿದರೆ, ಮಗ ನಂಜುಂಡ, ಮಗಳು ಮಾದೇವಿ ಇಬ್ಬರೂ ಕಾಣೆಯಾಗಿದ್ದಾರೆ. ಎಲ್ಲೋ ಹಿತ್ತಲನಲ್ಲಿ ಆಡುತ್ತಿರಬಹುದೆಂದು ನೋಡಿದರೆ, ಎಲ್ಲೂ ಸುಳಿವಿಲ್ಲ. ಗಾಭರಿಗೊಂಡು ಅಕ್ಕಪಕ್ಕದ ಮನೆಯವರನ್ನು ಕೇಳಿದರೆ, ಯಾರಿಗೂ ತಿಳಿದಿಲ್ಲ.
ತೋಟಕ್ಕೆ ಹೋಗಿದ್ದ ಗಂಡನನ್ನು ಭೇಟಿಮಾಡಿ ಮಕ್ಕಳು ಕಾಣುತ್ತಿಲ್ಲದಿರುವುದನ್ನು ಹೇಳಿದರೆ, ತೆಂಗಿನಕಾಯಿ ಬಿಡಿಸುವುದರಲ್ಲಿ ತೊಡಗಿದ್ದ ಗಂಡ – ಅಲ್ಲೇ ಎಲ್ಲೋ ಆಟ ಆಡಿಕೊಂಡಿರುತ್ತಾರೆ ನೋಡೇ – ಎಂದಾಗ, – ಇಲ್ಲಾ, ನಾನು ಎಲ್ಲಾ ಕಡೆ ನೋಡಿದೆ, ಎಲ್ಲೂ ಅವರಿಲ್ಲ ಎಂದು ಗಾಭರಿಗೊಂಡು ಹೇಳಿದಾಗ, ಅವನೂ ಗಾಭರಿಯಾಗಿ ಮನೆಗೆ ಬಂದು ಮನೆಯನ್ನೆಲ್ಲಾ ಪರಿಶೀಲಿಸಿದ. ಮೂಲೆಯಲ್ಲಿದ್ದ ಕಡಲೇಕಾಯಿ ತುಂಬಿದ್ದ ಚೀಲ ಕಾಣಲಿಲ್ಲ. ಅವನಿಗೆ ತಕ್ಷಣ ಹೊಳೆಯಿತು. – ಓ, ಅಕ್ಕ, ತಮ್ಮ, ಇಬ್ಬರೂ ಕಡಲೇಕಾಯಿ ಮಾರಲು ರೈಲಿಗೆ ಹೋಗಿದ್ದಾರೆ. ಆಗ ಅವನಿಗೆ ಗಾಭರಿಯಾಯಿತು. ಅಯ್ಯೋ, ರೈಲು ಸಾಗರ ಬಿಟ್ಟು ಒಂದು ಗಂಟೆಯ ಮೇಲಾಯಿತು. ಅದು ತಾಳಗುಪ್ಪದಿಂದ ಬಂದು ಶಿವಮೊಗ್ಗಕ್ಕೆ ಹೊರಟು ಹೋಗಿದೆ. ಅವರು ಶಿವಮೊಗ್ಗದಲ್ಲಿ ಇಳಿಯದಿದ್ದರೆ, ರೈಲು ಬೆಂಗಳೂರಿಗೆ ಹೋಗಿಬಿಡುತ್ತದೆ. ತಕ್ಷಣ ದಣೇರ ಬಳಿ ಹೋಗಿ ವಿಚಾರ ತಿಳಿಸಿದಾಗ ಅವರು ತಡ ಮಾಡದೆ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಫೋನು ಮಾಡಿ ರೈಲು ಇನ್ನೂ ಸಾಗರದಿಂದ ಶಿವಮೊಗ್ಗಕ್ಕೆ ಬಂದಿಲ್ಲ ಎಂದು ಖಚಿತವಾದ ಮೇಲೆ ಅಲ್ಲಿಯ ಸ್ಟೇಷನ್ ಮಾಸ್ಟರಿಗೆ ಹನ್ನೆರಡು ವರ್ಷದ ಮಾದೇವಿಯನ್ನೂ, 8 ವರ್ಷದ ನಂಜುಂಡನನ್ನೂ ಇಳಿಸಿಕೊಂಡಿರಬೇಕೆಂದೂ ಅವರಿಬ್ಬರನ್ನೂ ತಾವು ಬಂದು ಕರೆದೊಯ್ಯುವುದಾಗಿ ಹೇಳೆದರು. ಸ್ಟೇಷನ್ ಮಾಸ್ಟರ್ ದಣಿಗಳ ಸ್ನೇಹಿತರಾಗಿದ್ದರಿಂದ ಒಪ್ಪಿದರು.
ದಣಿಗಳು ಖುದ್ದಾಗಿ ಕಾರಿನಲ್ಲಿ ನಂಜುಂಡನ ಅಪ್ಪನನ್ನೂ, ಅಮ್ಮನನ್ನೂ ಕರೆದುಕೊಂಡು ಶಿವಮೊಗ್ಗ ರೈಲುನಿಲ್ದಾಣಕ್ಕೆ ಬಂದು ಇಳಿದಾಗ, ರೈಲ್ವೆ ಸ್ಟೇಷನ್ ಮಾಸ್ಟರ್ ಅವರು, – ನೋಡಿ ಹುಡುಗರ ಸ್ಥಿತಿ ಚೆನ್ನಾಗಿಲ್ಲ. ಹುಡುಗನಿಗೆ ತಲೆಯ ಬಳಿ ಹಣೆಯ ಮೇಲೆ ಪೆಟ್ಟಾಗಿ ರಕ್ತಸಾವ್ರವಾಗಿದೆ. ಅವನು ರೈಲಿನ ಶೌಚಾಲಯದಲ್ಲಿ ಬಿದ್ದು ಬಿಟ್ಟಿದ್ದ. ಹೆಣ್ಣು ಮಗಳು ಬಾಗಿಲ ಬಳಿ ಕುಳಿತಿದ್ದಳು. ಎಷ್ಟು ಪ್ರಯತ್ನಿಸಿದರೂ ಅವಳ ಬಾಯಿಯಿಂದ ಒಂದು ಮಾತೂ ಹೊರಡಲಿಲ್ಲ. ಕಡಲೇಕಾಯಿ ಪೊಟ್ಟಣಗಳಿದ್ದ ಚೀಲವನ್ನುತಬ್ಬಿಕೊಂಡು ಕುಳಿತಿದ್ದಳು. ನಿಮ್ಮ ಮಗನಿಗೆ ಫಸ್ಟ್ ಏಡ್ ಮಾಡಿಸಿದ್ದೇನೆ. ಅವನಿಗೆ ಜ್ಞಾನ ಬಂದಿದೆ. ಆದರೆ ಮಗಳನ್ನು ತಕ್ಷಣ ಯಾವುದಾದರು ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಅವಳ ಲಂಗವೆಲ್ಲಾ ರಕ್ತದ ಕಲೆಯಾಗಿದೆ.
ದಣೇರ ಕಾರಿನಲ್ಲೇ ಶಿವಮೊಗ್ಗೆಯ ದೊಡ್ಡ ಆಸ್ಪತ್ರೆಗೆ ಹೋಗಿ ಮಾದೇವಿಯನ್ನು ದಾಖಲಾಯಿಸಿದರು. ಅವಳನ್ನು ವಿವರವಾಗಿ ಪರೀಕ್ಷೆ ಮಾಡಿದ ವೈದ್ಯರು ಶಾರೀರಿಕವಾಗಿ ಅವಳಿಗೆ ಯಾವ ತೊಂದರೆಯೂ ಇದ್ದ ಹಾಗೆ ಕಾಣುವುದಿಲ್ಲ. ಅವಳಿಗೆ ಋತುಸ್ರಾವವಾಗಿ, ಅದರಿಂದ ಲಂಗವೆಲ್ಲಾ ರಕ್ತದ ಕಲೆಯಾಗಿದೆ. ಗಾಭರಿಯಾಗುವಂತಹದೇನೂ ಇಲ್ಲ, ಆದರೆ ಅವಳಿಗೆ ಮೆಂಟಲ್ ಶಾಕ್ ಆಗಿದೆ ಅನ್ನಿಸುತ್ತದೆ. ನಾನು ಅವಳಿಗೆ ಒಂದು ಚುಚ್ಚುಮದ್ದು ಕೊಟ್ಟಿದ್ದೇನೆ. ಅವಳಿಗೆ ನಿದ್ದೆ ಬರುತ್ತದೆ. ನೀವು ಅವಳನ್ನು ಮನೆಗೆ ಕರೆದುಕೊಂಡು ಹೋಗಿ. ನಿಮ್ಮ ಮನೆಗೆ ನಾನು ಒಬ್ಬ ಮನೋವೈದ್ಯರನ್ನು ಕಳುಹಿಸುತ್ತೇನೆ. ಅವರು ನಿಮ್ಮ ಮಗಳ ಸಮಸ್ಯೆ ತಿಳಿದು ಚಿಕಿತ್ಸೆ ನೀಡುತ್ತಾರೆ.
ದಣಿಗಳು ಎಲ್ಲರನ್ನೂ ಅವರ ಮನೆಗೆ ಬಿಟ್ಟು ತೆರಳಿದರು. ನಂಜುಂಡ ಚೇತರಿಸಿಕೊಂಡ. ಆದರೆ ಮಾದೇವಿ ಮಾತನಾಡುತ್ತಿರಲಿಲ್ಲ. ಬಿಟ್ಟಕಣ್ಣು ಬಿಟ್ಟ ಹಾಗೇ ಕುಳಿತಿರುತ್ತಿದ್ದಳು. ಮುಖದಲ್ಲಿ ಯಾವ ಭಾವನೆಯೂ ಇರುತ್ತಿರಲಿಲ್ಲ.
ಸ್ವಲ್ಪ ಹೊತ್ತಿನಲ್ಲೇ ಲೇಡಿ ಡಾಕ್ಟರ್ ಬಂದರು. ಅವರು ಮಾದೇವಿಯನ್ನು ಪರೀಕ್ಷಿಸಿ ಅವಳ ಅಪ್ಪ ಅಮ್ಮನನ್ನು ವರಾಂಡಕ್ಕೆ ಕರೆಸಿಕೊಂಡು ವಿಚಾರಿಸಿದರು. – ನೋಡಿ, ನಿಮ್ಮ ಮಗಳಿಗೆ ಶಾಕ್ ಆಗಿದೆ. ಅದಕ್ಕೆ ಕಾರಣ, ನನಗೆ ತಿಳಿಯಬೇಕು. ಅವಳ ಬಗ್ಗೆ ವಿವರವಾಗಿ ಹೇಳಿ, ಕಳೆದ ಐದಾರು ವರುಷಗಳಿಂದ ಅವಳ ನಡವಳಿಕೆಗಳ ಬಗ್ಗೆ ತಿಳಿಸಿ. ಈಗ ಅವಳಿಗೆ ಋತುಸ್ರಾವವೂ ಆಗಿದೆ. ಅವಳು ಯಾವಾಗ ಋತುಮತಿಯಾದಳು?
ಇಲ್ಲಾ ಡಾಕ್ಟರ್, ಅವಳು ಮುಂಚೆ ಋತುಮತಿಯಾಗಿರಲಿಲ್ಲ. ಇದೇ ಮೊದಲ ಬಾರಿ.
ಡಾಕ್ಟರ್ – ಓ ಹಾಗಾದರೆ, ಇದೂ ಇಂದು ಕಾರಣ. ಇಂಥಹ ಸಮಯದಲ್ಲಿ ಅವರ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಇರಲಿ, ಅವಳು ಯಾವಾಗಲೂ ಚಟುವಟಿಕೆಯಿಂದ ಇರುತ್ತಿದ್ದಳಾ? ಅವಳ ತಮ್ಮನ ಜೊತೆ ಹೇಗಿದ್ದಳು? ಇಂದು ಅವಳು, ತನ್ನ ತಮ್ಮನ ಜೊತೆ ರೈಲಿನಲ್ಲಿ ಹೋಗಿದ್ದಳು ಎಂದು ತಿಳಿದು ಬಂತು. ಅವನನ್ನು ಕರೆಯಿರಿ, ನಾನು ಅವನನ್ನು ಮಾತನಾಡಿಸ ಬೇಕು
ನಂಜುಂಡನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡ ಡಾಕ್ಟರ್ – ನೋಡು ನಂಜುಂಡ, ನೀನು ಜಾಣ ಹುಡುಗ, ನೀನೂ ನಿನ್ನ ಅಕ್ಕನ ಜೊತೆಗೆ ರೈಲಿನಲ್ಲಿ ಹೋದಾಗಿನಿಂದ ಅಲ್ಲಿ ಏನಾಯಿತೆಂದು ಹೇಳು. ನಂಜುಂಡ ಅಮ್ಮನ ಮುಖ ನೋಡಿದ.
ಅಮ್ಮ, – ಪರವಾಗಿಲ್ಲ ನೀನು ಹೆದರಬೇಡ, ಎಲ್ಲಾ ಹೇಳು – ಎಂದಳು.
ನಂಜುಂಡ – ನಾವು ಹತ್ತಿದ ಕೂಡಲೇ, ನಾನು ʼಕಳ್ಳೆಕಾಯಿ, ಕಳ್ಳೇಕಾಯಿʼ ಎಂದು ಮುಂದೆ ಹೋಗುತ್ತಿದ್ದೆ. ಅಕ್ಕ ಚೀಲ ಹಿಡಿದುಕೊಂಡು ಹಿಂದೆ ಬರುತ್ತಿದ್ದಳು. ಅವಳಿಗೆ ನಾನು ಕಡಲೇಕಾಯಿ ಮಾರುವುದು ಇಷ್ಟವಿರಲಿಲ್ಲ. ನನಗೆ ಅವಳು ಕಡಲೇಕಾಯಿ ಮಾರುವುದು ಇಷ್ಟವಿರಲಿಲ್ಲ. ಅವಳು ಬೇಡವೆಂದರೂ ನಾನು ಕೇಳದೆ ನಾನು ಮಾರತೊಡಗಿದಾಗ ಇಬ್ಬರು ನನ್ನಿಂದ ಕಡಲೇಕಾಯಿಯನ್ನು ಕೊಂಡು ದುಡ್ಡನ್ನು ಕೊಟ್ಟಾಗ ಅಕ್ಕನಿಗೆ ಕೋಪ ಬಂದಿತು. ಅವಳು ನನ್ನನ್ನು ಅಲ್ಲೇ ಇದ್ದ ಕಕ್ಕಸ್ಸಿಗೆ ಕರೆದುಕೊಂಡು ಹೋಗಿ ಬಾಯಿ ಮೇಲೆ ಹೊಡೆದಳು. ನಾನು ಬಿದ್ದು ಬಿಟ್ಟೆ. ಹಾಗೇ ಏಳಲಾಗದೆ ಮಲಗಿದ್ದೆ. ಆಮೇಲೆ ಯಾರೋ ಬಂದು ಕರೆದುಕೊಂಡು ಬಂದರು, ನಾನು ಅಕ್ಕನನ್ನು ನೋಡಿದರೆ, ಅವಳು ಮಾತನಾಡುತ್ತಲೇ ಇರಲಿಲ್ಲ. – ಎಂದ.
ಡಾಕ್ಟರ್ – ನಂಜುಂಡ, ಎಲ್ಲವನ್ನೂ ಚೆನ್ನಾಗಿ ಹೇಳೀದ್ದಿಯಾ. ನೀನು ಜಾಣ ಹುಡುಗ. ಈಗ ಹೋಗಿ ಆಟ ಆಡಿಕೋ ಎಂದು ಕಳುಹಿಸಿದರು. ಮುಂದಿನ ಒಂದು ಗಂಟೆ ಪೂರ್ತಾ ಮಾದೇವಿಯ ಅಪ್ಪ ಅಮ್ಮಂದಿರಿಂದ ನುರಿತ ವೈದ್ಯೆ ಎಲ್ಲವನ್ನೂ ಬಾಯಿ ಬಿಡಿಸಿದರು. ನಂಜುಂಡ ಹುಟ್ಟಿದಾಗಿನಿಂದ ಮಾದೇವಿ ಅನುಭವಿಸುತ್ತಿದ್ದ ಮಾನಸಿಕ ಯಾತನೆ ಅವರಿಗೆ ಅರಿವಾಗಿತ್ತು. ಅವರು ಇಬ್ಬರನ್ನೂ ಉದ್ದೇಶಿಸಿ – ನೋಡಿ, ಇದು ಸಾಮಾನ್ಯವಾಗಿ ನಮ್ಮೆಲ್ಲರ ಸಂಸಾರಗಳಲ್ಲಿ ಆಗುವ ಘಟನೆಯೇ. ನಮಗೆ ಗಂಡು ಮಗನೆಂದರೆ ಅಪಾರ ಮೋಹ. ಮಗಳೆಂದರೆ ತಾತ್ಸಾರ. ನಿಮ್ಮ ಮನೆಯಲ್ಲೂ ಅದೇ ಆಗಿದೆ. ಅವಳು ನಿಮ್ಮ ಪ್ರೀತಿಯ ಆರೈಕೆಗೆ ಹಪಹಪಿಸುತ್ತಿದ್ದರೆ, ಅವಳನ್ನು ನೀವು ಮನೆಗೆಲಸದ ಶಿಕ್ಷೆಯ ಕೂಪದಲ್ಲಿ ತಳ್ಳಿದಿರಿ. ಮಗ ಹುಟ್ಟಿದ ಮೇಲೆ, ಅವನನ್ನು ಓಲೈಸುವ ಭರದಲ್ಲಿ ಅವಳ ಮನಸ್ಸಿಗೆ ಬಹಳ ನೋವನ್ನುಂಟು ಮಾಡಿದಿರಿ. ಅವಳ ಮುಂದೆ ಅವನನ್ನು ಹೊಗಳಿ ಅಟ್ಟಕ್ಕೇರಿಸಿದಿರಿ. ಅವಳಿಗೆ ತಾನೂ ಕೂಡ, ನಿಮ್ಮ ಮುದ್ದಿನ ಮಗಳಾಗಬೇಕು ಎಂಬ ಆಸೆಗೆ ನೀವು ತಣ್ಣೇರೆರಚಿದಿರಿ. ನಿಮ್ಮನ್ನೆಲ್ಲಾ ಮೆಚ್ಚಿಸಲು ಅವಳು ಕಡಲೇಕಾಯಿ ಮಾರಲು ಹೋದಾಗ, ನಿಮ್ಮ ಮಗ ಮತ್ತೆ ಅವಳನ್ನು ಹಿಂದಕ್ಕೆ ನೂಕಿ ತಾನೇ ಮಾರಲು ಹೊರಟಾಗ ಅವಳ ಸಹನೆಯ ಕಟ್ಟೆ ಒಡೆದಿತ್ತು. ಅವಳು ಅವನನ್ನು ತಡೆಯಲು ಹೋಗಿ ಅವನಿಗೆ ಹೊಡೆದು, ಅವನು ಬಿದ್ದು ಅವನ ಹಣೆಯಲ್ಲಿ ರಕ್ತ ನೋಡಿದಾಗ ಅವಳಿಗೆ ಗಾಭರಿಯಾಗಿದೆ, ಶಾಕ್ ಆಗಿದೆ. ಅದೇ ಸಮಯಕ್ಕೆ ಅವಳು ಋತುಮತಿಯಾಗಿದ್ದಾಳೆ. ಎಲ್ಲವೂ ಸೇರಿ ಆದ ಶಾಕಿನಿಂದ ಅವಳು ನಿತ್ರಾಣಳಾಗಿದ್ದಾಳೆ. ಈಗ ಅವಳಿಗೆ ನಿಮ್ಮ ಪ್ರೀತಿ, ಕೇವಲ ನಿಮ್ಮ ಪ್ರೀತಿ ಮಾತ್ರ ಔಷಧಿ. ಅವಳನ್ನು ಪ್ರೀತಿಯಿಂದ ನೋಡಿಕೊಳ್ಳಿ. ಅವಳ ಮುಂದೆ ಮಗನನ್ನು ಕೊಂಡಾಡಬೇಡಿ. ಅವಳನ್ನು ಕೊಂಡಾಡಿ. ಈ ಶಾಕ್ ಜಾಸ್ತಿ ದಿನ ಇರುವುದಿಲ್ಲ. ಅವಳು ಬಹಳ ಪ್ರೀತಿ ಮಾಡುವ, ಪ್ರೀತಿ ಬಯಸುವ ಹೆಣ್ಣು. ನಾನು ಕೆಲವು ಮಾತ್ರೆಗಳನ್ನೂ ಕೊಡುತ್ತೇನೆ. ಒಳ್ಳೆಯ ಆಹಾರ ಕೊಡಿ. ಸರಿಹೋಗುತ್ತಾಳೆ ಎಂದಾಗ ಗಂಡ ಹೆಂಡಿರಿಬ್ಬರೂ ವೈದ್ಯರ ಕಾಲಿಗೆರಗಿದರು.
ಕಥೆಯ ಅಂತ್ಯವೆಂದು ನಾನು ಮಾದೇವಿ ಸರಿಯಾದಳೆಂದು ಹೇಳುವ ಅಗತ್ಯವಿಲ್ಲ ಎನ್ನಿಸುತ್ತದೆ. ವೈದ್ಯರು ಅವಳ ತಂದೆ ತಾಯಿಯರಿಗೆ ಸರಿಯಾದ ಚಿಕಿತ್ಸೆ ನೀಡಿದ್ದರು. ಮಾದೇವಿ, ನಂಜುಂಡ ಮುದ್ದಿನ ಮಕ್ಕಳಾಗಿ ಬೆಳೆದರು.
–ಎಂ.ಆರ್. ಆನಂದ
ಮಕ್ಕಳಲ್ಲಿ ಹೆತ್ತವರು ತೋರುವ ಭೇದ ಭಾವ ಅವರ ಬದುಕನ್ನೇ ಕಮರಿಸುವ ಹಂತಕ್ಕೂ ತಲುಪುತ್ತದೆ
ತಮ್ಮ ಅಭಿಪ್ರಾಯಕ್ಕೆ ವಂದನೆಗಳು
ಅನಾದಿ ಕಾಲದಿಂದಲೇ ಹೆಚ್ಚಿನ ಕುಟುಂಬದಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಲ್ಲಿ ಬೇದಭಾವ ಇರಬಾರದ ಕಡೆಯೂ ಇತ್ತು. ಕಥೆ ಚೆನ್ನಾಗಿ ಮನಕಲಕುವಂತಿದೆ.
ತಮ್ಮ ಪ್ರತಿಕ್ರಿಯೆಗೆ ವಂದನೆಗಳು.
ಪೋಷಕರು..ಮಕ್ಕಳಲ್ಲಿ.. ಮಾಡುವ.. ತಾರತಮ್ಯ… ಆ..ಮುಗ್ದ..ಮನಸನ್ನು..ಯಾವ..ರೀತಿ.. ಹಿಂಸೆ..ಅನುಭವಿಸುತ್ತದೆ..ನಂತರ.. ಪೈಪೋಟಿ…ಹೆತ್ತವರಿಗೆ…ಹತ್ತಿರವಾಗಬೇಕೆಂಬ..ಹಂಬಲ..ಅದಕ್ಕಾಗಿ..ಹೋರಾಟ..ಸ್ಪರ್ದೆ..ಅದರ..ಮದ್ಯೆ..ಸೋಲಿನ..ಅರಿವು..ಪ್ರತೀಕಾರ..ತೆಗೆದುಕೊಳ್ಳುವ… ಸಂದರ್ಭದಲ್ಲಿ.. ತನಗೆ…ತಳಯದೇ..ಸೋದರ ನಮೇಲೆ…ತಿರಿಗೇಟು..ನೀಡಿದಾಗ..ಆದ..ಪರಿಣಾಮ…ಅದು..ತಿಳಿದರೆ..ನನ್ನ… ಪರಿಸ್ಥಿತಿ ಯ..ಏನಾಗುವುದೋ..ಎಂಬ..ತೀವ್ರ ತೆ..ಅವಳ..ದೇಹದಮೇಲಾಗುವ..ಪರಿಣಾಮ ವನ್ನು…ಹಂತಹಂತವಾಗಿ… ಬಹಳ…ಕುತೂಹಲ.. ಹುಟ್ಟು… ಹಾಕುತ್ತಾ..ಕಥೆ ಯನ್ನು… ಕಟ್ಟಿಕೊಟ್ಟಿರುವ..ರೀತಿ…ಬಹಳ.
ಸೊಗಸಾಗಿ.. ಮೂಡಿಬಂದಿದೆ…ಉತ್ತಮ… ಸಂದೇಶ… ನೀಡಿದೆ..ಅಭಿನಂದನೆಗಳು… ಆನಂದ.. ಸಾರ್..
ತಮ್ಮ ವಿಮರ್ಶಾತ್ಮಕ ಸದಭಿಪ್ರಾಯಕ್ಕೆ ಧನ್ಯವಾದಗಳು.
ಸೊಗಸಾದ ಮನೋವೈಜ್ಞಾನಿಕ ಕಥೆ, ತಾರತಮ್ಯ ಧೋರಣೆಯಿಂದ ಉಂಟಾಗುವ ದುಷ್ಪರಿಣಾಮವನ್ನು ಪರಿಣಾಮಕಾರಿಯಾಗಿ ಬಿಂಬಿಸಿರುವುದರೊಂದಿಗೆ, ಸಕಾಲದಲ್ಲಿ ತೆಗೆದುಕೊಂಡ ಚಿಕಿತ್ಸೆಯ ಒಳ್ಳೆಯ ಪರಿಣಾಮವು, ಕಥೆಯ ಧನಾತ್ಮಕ ಅಂಶವಾಗಿದೆ.
ಧನ್ಯವಾದಗಳು.
ಈ ಕಾಲದಲ್ಲಿ ಹೆಣ್ಣು ಗಂಡೆಂಬ ಎಂಬ ಭೇದಭಾವ ಮಾಡುವ ತಂದೆ ತಾಯಿಗಳನ್ನು ನೋಡಿದರೆ ಬೇಸರವಾಗುತ್ತದೆ. ಅರ್ಥಪೂರ್ಣ ವಾದ ಕಥೆ
ತಮ್ಮ ಮೆಚ್ಚುಗೆಗೆ ವಂದನೆಗಳು.
ಅರ್ಥಪೂರ್ಣವಾದ ಕಥೆ!
ಸೊಗಸಾದ ಮನೋವೈಜ್ಞಾನಿಕ ಕಥೆ ಇಷ್ಟವಾಯ್ತು.
ತಮಗೆ ಇಷ್ಟವಾದುದಕ್ಕೆ ಸಂತೋಷವಾಯಿತು. ಧನ್ಯವಾದಗಳು..
ಧನ್ಯವಾದಗಳು.