ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 20

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..

ಪಿ.ಕೆ. ತ್ರೆ಼ಷಿಯ ಕೇರಳದ ಸಿರಿಯನ್‌ ಕ್ರಿಶ್ಚಿಯನ್‌ ಕುಟುಂಬದ ಕುಡಿಯಾಗಿ 1924ರಲ್ಲಿ ಜನಿಸಿದರು. ಹೈಸ್ಕೂಲ್‌ ವಿದ್ಯಾಭ್ಯಾಸದ ನಂತರ ತಂದೆಯ ಪ್ರೋತ್ಸಾಹದಿಂದ ಗಿಂಡಿಯ ಇಂಜನಿಯರಿಂಗ್‌ ಕಾಲೇಜಿಗೆ   ಪ್ರವೇಶ ಪಡೆದರು. 1944ರಲ್ಲಿ ಸಿವಿಲ್‌ ಇಂಜನಿಯರಿಂಗ್‌ ಪದವೀಧರರಾದರು. ಕೊಚಿನ್‌ ರಾಜ್ಯದ ಪಬ್ಲಿಕ್‌ ಕಮಿಷನ್‌ ಕಚೇರಿಯಲ್ಲಿಸೆಕ್ಷನ್‌ ಆಫೀಸರ್‌ ಆಗಿ ನೇಮಕಗೊಂಡರು. ಆನಂತರ ಟಿ.ಬಿ. ಸ್ಯಾನಿಟೋರಿಯಂ ನಲ್ಲಿ ಸಹಾಯಕ ಕನ್ಸ್ಟ್ರಕ್ಷನ್ಇಂಜನಿಯರ್ ಆದರು. ಇಂಜನಿಯರಿಂಗ್‌ ಕೆಲಸವೇನೂ ಹುಡುಗಿಯರಿಗೆ ಕಷ್ಟದ ಕೆಲಸ ಅಲ್ಲ ಎನ್ನುವ ಭಾವದಿಂದ ತಮ್ಮ ಜೀವನ ಪರ್ಯಂತ ತಮ್ಮ ಇಂಜನಿಯರಿಂಗ್‌ ಕೌಶಲ್ಯವನ್ನು ಸಮಾಜದ ಇಂಜನಿಯರಿಂಗ್‌ ಕಾರ್ಯಾಭಿವೃದ್ಧಿಗಾಗಿ ಮೀಸಲಿರಿಸಿದ್ದರು. 

1925ರಲ್ಲಿ ಬಂಗಾಲ ಪ್ರಾಂತ್ಯದಲ್ಲಿ ಜನಿಸಿದ ದೇಬಲ ಮಿತ್ರ ಅನೇಕ ಬೌದ್ಧ ಐತಿಹಾಸಿಕ ಕ್ಷೇತ್ರಗಳನ್ನು ಶೋಧಿಸಿದ ಭಾರತೀಯ ಆರ್ಕಿಯಾಲಜಿಸ್ಟ್.‌ ಕುಲ್ನ ಮತ್ತು ಕಲ್ಕತ್ತಗಳಲ್ಲಿ ವಿದ್ಯಾಭ್ಯಾಸ ಮಾಡಿ ಪ್ಯಾರಿಸ್‌ನಲ್ಲಿ ಡಾಕ್ಟೊರೇಟ್‌ ಪದವಿಯನ್ನು ಪಡೆದರು. “ಆರ್ಕಿಯೋಲಾಜಿಕಲ್‌ ಸರ್ವೆ ಆಫ್ ಇಂಡಿಯಾ”‌ ದಲ್ಲಿ 1940ರಲ್ಲಿ ಪೂರ್ವವಲಯದ ಸೂಪರ್‌ಇನ್‌ಟೆಂಡೆಂಟ್‌ ಆಗಿ ವೃತ್ತಿಯನ್ನು ಆರಂಭಿಸಿದರು, ಆರ್ಕಿಯಾಲಜಿ ಕ್ಷೇತ್ರದಲ್ಲಿ ಮಾನ್ಯರಾದರು, ಡೈರೆಕ್ಟರ್‌ ಜನೆರಲ್‌ ಆಗಿ ನಿವೃತ್ತರಾದರು,. 

ರಾಜ ಬಜಾರ್‌ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ 1936ರಲ್ಲಿ ಎಂಎಸ್.ಸಿ. ಪದವಿಯನ್ನು ಪಡೆದ ಏಕೈಕ ಮಹಿಳೆ ವಿಭಾ ಚೌಧುರಿ. ಬೋಸ್‌ ಸಂಸ್ಥೆಯಲ್ಲಿ ದೇವೇಂದ್ರ ಬೋಸ್‌ ಅವರೊಂದಿಗೆ ಮ್ಯುಅಯಾನ್ ಗಳನ್ನು ಪ್ರಯೋಗಗಳ ಮೂಲಕ ಅವಲೋಕಿಸಿದ ಇವರು ಕಾಸ್ಮಿಕ್‌ ಕಿರಣಗಳ ಬಗ್ಗೆ ಸಂಶೋಧನಾತ್ಮಕ ಲೇಖನವನ್ನು ಪ್ರಕಟಿಸಿದರು. ಇನ್ನಷ್ಟು ಸೂಕ್ಷವಾಗಿ ಅವಲೋಕಿಸಲು ಅಗತ್ಯವಾದ ಪರಿಕರಗಳು ಇಲ್ಲದಿದ್ದುದರಿಂದ ಇವರು ಮ್ಯಾಂಚೆಸ್ಟರ್‌ ವಿಶ್ವವಿದ್ಯಾನಿಲಯದಲ್ಲಿ ಪ್ಯಾಟ್ರಿಕ್‌ ಬ್ಲಾಕೆಟ್‌ ಅವರೊಂದಿಗೆ ಪೋಸ್ಟ್‌ ಡಾಕ್ಟೊರಲ್‌ ಸಂಶೋಧನೆಯನ್ನಾರಂಭಿಸಿದರು. ಮುಂದೆ ಬ್ಲಾಕೆಟ್ ಅವರು ಪಡೆದ ನೋಬಲ್‌ ಪಾರಿತೋಷಕಕ್ಕೆ ಬಹು ಮಟ್ಟಿಗೆ ಇವರದೂ ಕಾಣಿಕೆ ಇತ್ತು. “ಟಾಟಾ ಇನ್ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌” ನಲ್ಲಿ, ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿಯಲ್ಲಿ, ಮಿಚಿಗನ್‌ ವಿಶ್ವವಿದ್ಯಾನಿಲಯದಲ್ಲಿ ಹೀಗೆ ಬೇರೆ ಬೇರೆ ಸಂಸ್ಥೆಗಳಲ್ಲಿ ತಮ್ಮ ಅಂತ್ಯದವರೆಗೂ ಸಂಶೋಧಕಿಯಾಗಿದ್ದ ಇವರ ಸಂಶೋಧನೆಯ ಮೌಲ್ಯವನ್ನು ಗುರುತಿಸಿರುವ ವಿಜ್ಞಾನ ಕ್ಷೇತ್ರ ಬಿಳಿಹಳದಿ ಕುಬ್ಜ ನಕ್ಷತ್ರವೊಂದಕ್ಕೆ ವಿಭಾ ಎಂದು ಹೆಸರಿಟ್ಟಿದೆ.    

ಆರ್ಗಾನಿಕ್‌ ರಸಾಯನಶಾಸ್ತ್ರದಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ 1944 ರಲ್ಲಿ ಡಿ.ಎಸ್.ಸಿ. ಮಾಡಿ ಡಾಕ್ಟೊರೇಟ್‌ ಪದವಿ ಪಡೆದ ಮತ್ತು “ವಿಸ್ಕಾನ್‌ಸಿನ್‌ ಅಂಡ್‌ ಚಾಲ್‌ಟೆಕ್‌” ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್‌ ಡಾಕ್ಟೊರಲ್‌ ಸಂಶೋಧನೆ ಮಾಡಿದ ಪ್ರಪ್ರಥಮ ಮಹಿಳೆ ಅಸೀಮ ಮುಖರ್ಜಿ. ಇವರು ಭಾರತಕ್ಕೆ ಹಿಂದಿರುಗಿದ ನಂತರ ಕಾಲೇಜಿನಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕಿಯಾಗಿ ಬೋಧಿಸುತ್ತಾ ಸಸ್ಯಗಳ ಔಷಧೀಯ ಗುಣಗಳ ಬಗೆಗಿನ ಸಂಶೋಧನೆಯನ್ನು ಮುಂದುವರೆಸಿ ಆಂಟಿ ಎಪಿಲೆಪ್ಟಿಕ್‌, ಆಂಟಿ ಕನ್ವಲ್ಸಿವ್ ಮತ್ತು ಕೆಮೊಥೆರಪಿ ಔಷಧಿಗಳನ್ನು ಕಂಡುಹಿಡಿದರು. ಕ್ಯಾನ್ಸರ್-ಬೆಳವಣಿಗೆಯನ್ನು ಪ್ರತಿಬಂಧಿಸುವುದರ ಬಗ್ಗೆ ನಿರಂತರವಾಗಿ ಸಂಶೋಧನೆ ಮಾಡಿರುವ ಇವರು ಕೆಮೊಥೆರಪಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಆಲ್ಕಲಾಯ್ಡ್‌ ಗಳನ್ನು ಗುರುತಿಸಿದರು. ಇವರು ಆಂಟಿ ಮಲೇರಿಯ ಔಷಧಿಗಳನ್ನು ಅಭಿವೃದ್ಧಿ ಪಡಿಸಿದರು. ಕಲ್ಕತ್ತ ವಿಶ್ವವಿದ್ಯಾನಿಲಯಕ್ಕೆ ಸೇರಿದ ಲೇಡಿ ಬ್ರಾಬೌರ್ನ್‌ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗವನ್ನು ಹೊಸದಾಗಿ ಆರಂಭಿಸಿ ಅಲ್ಲಿ ಸಂಶೋಧನೆಯನ್ನು ಮುಂದುವರೆಸಿದ ಇವರು ಆರೋಗ್ಯ ಕ್ಷೇತ್ರಕ್ಕೆ ಗಮನಾರ್ಹ ಕಾಣಿಕೆ ಕೊಟ್ಟಿದ್ದಾರೆ. 

ಹೀಗೆ ಬಹುಮುಖಿಯಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಮುಂದುವರೆದ ಭಾರತೀಯ ವೈಜ್ಞಾನಿಕ ಜಾಗೃತಿ ಅಭಿಯಾನದಲ್ಲಿ ಭಾಗಿಯಾದವರ ಸಂಖ್ಯೆ ಗಣನೀಯವಾಗಿ ದೊಡ್ಡದು. ಅವರಲ್ಲಿ ಕೆಲವರನ್ನು ಮಾತ್ರ ಇಲ್ಲಿ ಗುರುತಿಸಲು ಸಾಧ್ಯವಾಗಿದೆ ಎಬುದು ಒಂದು ಗಮನಾರ್ಹ ಕೊರತೆ. ಜಾಗೃತ ಮನಸ್ಕರೆಲ್ಲರ ಸಹಭಾಗಿತ್ವದಿಂದಲೇ ಇಂದು ಭಾರತ ವೈಜ್ಞಾನಿಕವಾಗಿ ಅನನ್ಯವಾಗಿ ಮುಂಚೂಣಿಯಲ್ಲಿದೆ; ಮಹಿಳಾಮಣಿಗಳು ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯೋತ್ತರ ಸಂಶೋಧನಾಸಕ್ತ ಮಹಿಳೆಯರಿಗೆ ಆಶಾದೀವಿಗೆಯಾಗಿದ್ದಾರೆ ಮತ್ತು ದಾರಿದೀಪವಾಗಿದ್ದಾರೆ ಎಂಬುದು ನಿಶ್ಚಿತ, ಸಂಶಯಾತೀತ! 

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=36568

(ಮುಗಿಯಿತು)
-ಪದ್ಮಿನಿ ಹೆಗಡೆ

6 Responses

  1. Hema says:

    ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾದ ಈ ವೈಜ್ಞಾನಿಕ ಲೇಖನ ಸರಣಿಯು ಸೊಗಸಾಗಿ, ಮಾಹಿತಿಯುಕ್ತವಾಗಿ ಮೂಡಿ ಬಂತು, ಧನ್ಯವಾದಗಳು.

  2. ಬಹಳಷ್ಟು… ಉತ್ತಮ… ಮಾಹಿತಿಯನ್ನು… ಒಳಗೊಂಡ… ಲೇಖನ… ಬಹಳ… ಸೊಗಸಾಗಿ… ಮೂಡಿಬಂತು… ಅಭಿನಂದನೆಗಳು.. ಪದ್ಮಿನಿ.. ಮೇಡಂ.

  3. ಶಂಕರಿ ಶರ್ಮ says:

    ಬಹಳ ಸೊಗಸಾದ, ಸಂಗ್ರಹಯೋಗ್ಯ, ಮಾಹಿತಿಯುಕ್ತ ವೈಜ್ಞಾನಿಕ
    ಲೇಖನಮಾಲೆಯಿಂದ ಓದುಗರ ಮನಸೆಳೆದ ಪದ್ಮಿನಿ ಮೇಡಂ ಅವರಿಗೆ ಧನ್ಯವಾದಗಳು.

  4. Padma Anand says:

    ”ಕೆಲವರನ್ನು ಮಾತ್ರ’ ಎಂದೇ, ‘ಅಬ್ಬಾ’ ಎನ್ನಿಸುವಂತಿರುವ ಲೇಖನಮಾಲೆ ನಿಜಕ್ಕೂ ಎಷ್ಟೊಂದು ಮಾಹಿತಿಗಳನ್ನು ನೀಡಿತು, ಮನುಷ್ಯನ ಬುದ್ಧಿಮತ್ತಿಯ ಅಗಾಧತೆಗೆ ಬೆರಗಾಗುವಂತಾಯಿತು. ಉಪಯುಕ್ತ ಲೇಖನಮಾಲಿಕೆಗಾಗಿ ವಂದನೆಗಳು, ಅಭಿನಂದನೆಗಳು ಪದ್ಮಿನಿ ಮೇಡಂ.

  5. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ ಸರಣಿ.

  6. Padmini Hegade says:

    20 ಕಂತುಗಳಲ್ಲಿ ಸುಂದರವಾದ ಸೂಕ್ತವಾದ ಚಿತ್ರಗಳೊಂದಿಗೆ ಸ್ವಾತಂತ್ರ್ಯ ಪೂರ್ವದ ವೈಜ್ಞಾನಿಕ ಅಭಿಯಾನ ಲೇಖನ ಮಾಲೆಯನ್ನು ಪ್ರಕಟಿಸಿದ ಹೇಮಮಾಲಾ ಮೇಡಂಗೆ ಹೃತ್ಪೂರ್ವಕವಾದ ಧನ್ಯವಾದಗಳು.
    ಪ್ರೀತಿಯಿಂದ ಲೇಖನಮಾಲೆಯ ಎಲ್ಲಾ ಸರಣಿಗಳನ್ನೂ ತಪ್ಪದೇ ಓದಿ ಸೊಗಸಾಗಿ ಪ್ರತಿಕ್ರಿಯೆಯನ್ನು ನೀಡಿದ ಬಿ.ಆರ್.‌ ನಾಗರತ್ನ ಮೇಡಂಗೆ, ನಯನ ಬಜಕೂಡ್ಲು ಮೇಡಂಗೆ, ಶಂಕರಿ ಶರ್ಮ ಮೇಡಂಗೆ, ಪದ್ಮ ಆನಂದ ಮೇಡಂಗೆ ಮತ್ತೆ ಅನಾಮಿಕ ಓದುಗರಿಗೆ ಕೃತಜ್ಞತಾಪೂರ್ವಕ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: