ಬಾ ದೀಪಾವಳಿಯೇ..
ಬಾ ದೀಪಾವಳಿಯೇ….
ಸಾಲು ದೀಪಗಳ ಶಾಂತ ಬೆಳಕಿನಲಿ
ನಕ್ಷತ್ರಗಳ ತೋರಣ ಕಟ್ಟು
ಆಕಾಶದೆತ್ತರಕೇರಿ ನಿಂತ
ಜಗದಾಸೆಗಳಿಗೆ ಏಣಿಯಾಗು
ಮಿಣುಕುವ ಒಣಗಣ್ಣುಗಳಿಗೆ
ಭರವಸೆಯ ಕಿರಣಗಳ ಬೀರು
ಓ ದೀಪಾವಳಿಯೇ……
ತಲೆಬೇನೆಗಳ ಸುಟ್ಟುಬಿಡು
ರೋಗರುಜೆಗಳ ಬೂದಿಯಾಗಿಸು
ಕಳ್ಳಮನಸುಗಳ ಸುಳ್ಳು ಯೋಚನೆಗಳನು
ಕರಕಲಾಗಿಸು
ಹೂಬತ್ತಿಯೊಸಗೆಯಾಗು
ವಿಷ್ಣುಚಕ್ರವ ಬೀಸಿ
ಕೆಡುಕಿನ ಸರಮಾಲೆಗಳ ಕಡಿತಗೊಳಿಸು
ಮನೆಮನದೊಳಗೆ ತುಂಬಿನಿಂತ ಕಹಿಗಳ
ಭೂಚಕ್ರದಲಿ ಹೊಸಕಿಹಾಕು
ಬಾ ದೀಪಾವಳಿಯೇ….. ಬಾ
ಬದುಕಿನ ನಿಂತ ನೀರಿಗೆ ಚಲನೆಯಾಗು
ಕನಸುಗಳ ಕಡಲಿಗೆ ಹೂಮಳೆಯಾಗು
ಕೋಗಿಲೆಗಳ ದನಿಗೆ, ನವಿಲ ನರ್ತನಕೆ
ಭಾವ ತುಂಬು.
ಸೋತ ಮೋರೆಗಳಿಗೊಂದಷ್ಟು ಬಣ್ಣ ಸವರು
ತಮದ ಜಗಕೆ, ಸುಮದ ಮನಕೆ
ಘಮದ ಬೆಳಕ ಹರಿಸು
ಹರಸು ಬಾ ದೀಪವೇ
ಇರಿಸು ಬಾಳಿನಂಗಳಕೆ ಸೊಗದ ಚಿತ್ರವನು
ಬಡಜೀವಕೊಂದಿಷ್ಟು ಸುಖದ ತಣಿಗೆಯನು
ಕಾಯುತಿರುವೆ ರಿಕ್ತವಾಗಿಸಬೇಡ ನನ್ನ!
ಹಂಬಲಿಸಿದೆದೆಯ
ಮುನಿಸಲಿ ಮುದುಡಿಸಬೇಡ!
ಹೊತ್ತು ಬಾ, ಬುಟ್ಟಿತುಂಬ ಹಚ್ಚಿದ ಹಣತೆಗಳ
ಕತ್ತಲೆಯ ಗೂಡೊಳಗೆ ಇಳುಕಿ ಮುಂದೆ ಸಾಗು
ಸದಾ ಬೆಳಗುತಿರಲಿ, ಬೆಳಕೇ ಹಾಡ ಗುನುಗುತಿರಲಿ
-ಬಿ.ಕೆ. ಮೀನಾಕ್ಷಿ, ಮೈಸೂರು.
ದೀಪಾವಳಿ ಹಬ್ಬದ…ಸಂದರ್ಭದಲ್ಲಿ.. ಉತ್ತಮ… ಸದಾಶಯಗಳನ್ನು…ಹೊತ್ತ.ಬಾದೀವಳಿಗೆ..ಕವನ…
ಸೊಗಸಾಗಿ ಮೂಡಿಬಂದಿದೆ..ಗೆಳತಿ.. ಮೀನಾಕ್ಷಿ..
ಸದಾಶಯಹೊಂದಿದ ಸುಂದರ ಕವಿತೆಗಾಗಿ ಅಭಿನಂದನೆಗಳು.
ಬೆಳಕ ಹಾಡನು ಗುನುಗ ಬಯಸುವ ಆಶಯ ಚೆನ್ನಾಗಿದೆ