ಜಾಗತಿಕ ದೀಪಾವಳಿ

Share Button

ಹಜಾರದಲ್ಲಿ ಹಾಕಿದ್ದ ಗಡಿಯಾರ ಮೂರು ಹೊಡೆದ ಕೂಡಲೇ, ಉಂಡು 20 ನಿಮಿಷಗಳಷ್ಟೇ ವಿಶ್ರಾಂತಿಗಾಗಿ ಅಲಾರಾಂ ಇಟ್ಟುಕೊಂಡು ಮಲಗಿದ್ದ 80 ವರ್ಷಗಳ ಭಾರತಮ್ಮನವರು ಧಡ್‌ ಎಂದು ಎದ್ದು ಕುಳಿತು, ತಂಗಿ ಗೀತಳನ್ನು ಕೇಳಿದರು –
‘ನಾನು 2.50 ಕ್ಕೆ ಮೊಬೈಲ್ಲಿನಲ್ಲಿ ಅಲಾರಾಂ ಇಟ್ಟುಕೊಂಡು ಮಲಗಿದ್ದೆ. ಆಗಲೇ ಗಂಟೆ ಮೂರು ಹೊಡೆಯಿತು, ಏಕೆ ಮೊಬೈಲ್‌ ಅಲಾರಾಂ ಹೊಡೆಯಲಿಲ್ಲ’ – ಎನ್ನುತ್ತಾ, ಹಾಸಿಗೆಯ ಅತಿತ್ತ ತಮ್ಮ ಫೋನಿಗಾಗಿ ಹುಡುಕತೊಡಗಿದರು.

”ಅಯ್ಯೋ ಅಕ್ಕಾ, ನಾನೇ ನಿಮ್ಮ ಮೊಬೈಲ್‌ ಅನ್ನು ಮ್ಯೂಟ್‌ ಮಾಡಿ ತೆಗೆದುಕೊಂಡು ಆಚೆ ಇಟ್ಟೆ. ಎಂಟು ದಿನಗಳ ಹಿಂದೆ ʼತನ್ವಿʼ ಹಬ್ಬಕ್ಕೆ ಹೊಸಗಂಡನೊಡನೆ ಭಾರತಕ್ಕೆ ಬರುತ್ತಿದ್ದೇನೆಂದು ತಿಳಿಸಿದ ಕ್ಷಣದಿಂದಲೂ ನೀನು ಪಡುತ್ತಿರುವ ಧಾವಂತ, ಸಡಗರಗಳನ್ನು ನೋಡಿದರೆ ನಮಗೆಲ್ಲಾ ಗಾಬರಿಯಾಗುತ್ತಿದೆ. ನಿನ್ನ ವಯಸ್ಸನ್ನೂ ಗಣನೆಗೆ ತೆಗೆದುಕೊಳ್ಳದೆ ಇಷ್ಟು ಆಯಾಸ ಮಾಡಿಕೊಂಡರೆ ಹೇಗೆ ಅಕ್ಕಾ? ತನ್ವಿ ಹುಟ್ಟಿ ಬೆಳೆದುದೆಲ್ಲಾ ಅಮೆರಿಕಾದಲ್ಲಿ. ಅವಳೇ ಆರಿಸಿ ಮದುವೆಯಾದ ಹುಡುಗ ಆಸ್ಟ್ರೇಲಿಯಾದವನು. ಅವನ ಅಪ್ಪನ ಅಮ್ಮನೇನೋ ಭಾರತದ ತಮಿಳರ ಹುಡುಗಿಯಾಗಿದ್ದರಂತೆ. ಇವನಂತೂ ತನ್ನ ಭಾರತೀಯ ಅಜ್ಜಿಯನ್ನು ನೋಡೂ ಇಲ್ಲವಂತೆ. ತನ್ವಿ ಮತ್ತು ಅವಳ ಗಂಡ ವಿನ್ಸೆಂಟ್‌ ಇಬ್ಬರ ಬೇರುಗಳ ಒಂದೊಂದು ಎಳೆ ಭಾರತದದ್ದಾರೂ ಅವರುಗಳಿಗೇನು ನಮ್ಮ ಸಂಸ್ಕೃತಿಯ, ಹಬ್ಬಗಳ ಬಗ್ಗೆ ಗೊತ್ತಿರುತ್ತೆ. ಮಕ್ಕಳು ಮನೆಗೆ ಬರುತ್ತಿದ್ದಾರೆ ನಿಜ, ಸಂಭ್ರಮ ಪಡೋಣ. ಆದರೆ ಇಷ್ಟೊಂದು ಆಯಾಸ ಮಾಡಿಕೊಂಡರೆ ಹೇಗೆ?”

‘ನೀನೊಳ್ಳೆ, ನಾನು ಎಂಟು ದಿನಗಳಿಂದ ನಡೆಸಿದ ತಯ್ಯಾರಿ ಎಲ್ಲಾ ನಿನ್ನ ಈ ʼಚಲ್ತಾ ಹೈʼ ಮನೋಭಾವದಿಂದ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತೆ, ಇರಲಿ ಬಿಡು, ನನ್ನ ಬಗ್ಗೆ ನಿನಗಿರುವ ಕಾಳಜಿ ನನಗಿಷ್ಟವಾಯಿತು, ಅಷ್ಟೆ. ನಂಗೆ ಈಗ ನಿನ್ನ ಹತ್ತರ ವಾದ ವಿವಾದ ಮಾಡೋಕ್ಕೆ ಪುರಸೊತ್ತಿಲ್ಲ, ಏ ಉಮಾ, ಎಲ್ಲಾ ತಯ್ಯಾರಿಗಳನ್ನೂ ನಾನು ಹೇಳಿದಂತೆಯೇ ಚಾಚೂ ತಪ್ಪದೆ ಮಾಡಿಕೊಂಡಿದ್ದೀಯಾ ತಾನೆ?’- ಎನ್ನುತ್ತಾ, ರಾತ್ರಿಯ ಊಟದ ಜೊತೆಗೆಂದು ಕರಿಗಡಬು ಕರಿಯುತ್ತಿದ್ದ, ಕಳೆದ 50 ವರ್ಷಗಳಿಂದ ತಮ್ಮ ಬಲಗೈ ಬಂಟಿಯಂತಿದ್ದ ಉಮಾಳನ್ನು ಅರಸುತ್ತಾ ಅಡುಗೆಮನೆ ಕಡೆ ನಡೆದರು ಭಾರತಮ್ಮ.

ಹೊರಗೆ ಅಕ್ಕ ತಂಗಿಯರ ಸಂಭಾಷಣೆ ಕಿವಿಗೆ ಬಿದ್ದೊಡನೆಯೇ, ಆಗ ತಾನೆ ಹಾಕಿದ್ದ ಡಿಕಾಕ್ಷನ್ನನ್ನು ಬಗ್ಗಿಸಿ, ಕಾಫಿ ಬೆರೆಸಿ, ಭಾರತಮ್ಮನವರು, ಅವರನ್ನು ಹಿಂಬಾಲಿಸಿ ಬಂದ ಅವಳ ತಂಗಿ 76 ವರ್ಷದ ಗೀತಾರಿಗೆ ಕೊಡುತ್ತಾ ಉಮಾ ಹೇಳಿದಳು.
‘ಹುಂ, ದೊಡ್ಡಮ್ಮಾ, ನಾವೆಲ್ಲಾ ಸೇರಿ ಎಲ್ಲಾ ನೀವು ಹೇಳಿದಂತೆಯೇ ತಯ್ಯಾರಿ ಮಾಡಿಕೊಂಡಿದ್ದೇವೆ. ಮುಂಭಾಗದಲ್ಲಿ ಇರುವ ತುಳಸೀ ಕಟ್ಟೆಯಿಂದ ಹಿಡಿದು, ಹಿಂಬಾಗಿಲಿನ ಆಚೆ ಇರುವ ಟಾಯ್ಲೆಟ್‌ತನಕ ಎಲ್ಲವನ್ನೂ ಸ್ವಚ್ಛವಾಗಿ ಇಟ್ಟಿದ್ದೇವೆ. ಬರುವ ಹೊಸ ದಂಪತಿಗಳ ಕೋಣೆ, ಅಡುಗೆ ಮನೆ, ದೇವರ ಕೋಣೆ, ಎಲ್ಲವೂ ಕೂಡ ನಿಮ್ಮ ಮುದ್ದಿನ ಮೊಮ್ಮಕ್ಕಳ ಆಗಮನಕ್ಕಾಗಿ ಕಾದಿವೆ. ಹಬ್ಬದ ಅಡುಗೆಯೂ ತಯಾರಾಗುತ್ತಿದೆ. ಆರತಿಯೂ ತಯಾರಾಗಿದೆ. ನೀವೊಂದು ಗುಟುಕು ಕಾಫಿ ಕುಡಿದು ಎಲ್ಲ ಕಡೆಯೂ ಒಮ್ಮೆ ಕಣ್ಣಾಡಿಸಿ ಬನ್ನಿ. ಏನಾದರೂ ಸರಿಯಿಲ್ಲದಿದ್ದರೆ ಹೇಳಿ, ತಕ್ಷಣ ಸರಿ ಮಾಡುತ್ತೇನೆ. ನಂತರ ನೀವು ಮುಖ ತೊಳೆದು ರೆಡಿಯಾದರೆ ಅಷ್ಟರಲ್ಲಿ ಮಕ್ಕಳು ಬಂದೇ ಬಿಡುತ್ತಾರೆ’ – ಎಂದಳು.

ಧಾವಂತದಲ್ಲೇ ಬೇಗ ಬೇಗ ಕಾಫಿ ಕುಡಿದು, ಎಲ್ಲ ಕಡೆಯೂ ಒಂದು ಸುತ್ತು ಹೋಗಿ ಬಂದು ತೃಪ್ತಿಯಾಗಿ ಒಳಬಂದ ಭಾರತಮ್ಮ – ನನ್ನ ಮನಸ್ಸಿನಲ್ಲಿರುವಂತೆಯೇ ಕೆಲಸ ಮಾಡಿದ್ದೀಯ ಉಮಾ, ಎಲ್ಲ ಸರಿಯಾಗಿದೆ. ಗಂಟೆ 6 ಆದಕೂಡಲೇ ದೇವರ ದೀಪವನ್ನು ಹಚ್ಚಿ ಬಿಡೋಣ. ಜ್ಞಾಪಕ ಇಟ್ಟುಕೋ ಉಮಾ, ಅಷ್ಟರಲ್ಲೇ ಅಕಸ್ಮಾತ್‌ ಮಕ್ಕಳು ಬಂದು ಬಿಟ್ಟರೆ, ಅವರುಗಳು ಮನೆಯ ಒಳಗೆ ಬರುವ ಮೊದಲೇ ದೀಪಗಳನ್ನು ಹಚ್ಚಿಬಿಡು, ನಾನು ಗಾಬರಿಯಲ್ಲಿ ಮರೆಯಬಹುದು – ಎನ್ನುತ್ತಾ ಮುಖ ತೊಳೆಯಲು ಹೊರಟರು ಭಾರತಮ್ಮ.

“ನೀವಾ ಮರೆಯುವುದಾ” – ಎಂದು ಗೀತಾ ಅವರು ಮತ್ತು ಉಮಾ ಒಟ್ಟಿಗೇ ಹೇಳಿ ನಕ್ಕರು.

ಹಾಗೇ ಸೋಫಾಗೆ ಒರಗಿ ಕುಳಿತ ಗೀತಾರಿಗೆ ಹಿಂದಿನ ಘಟನೆಗಳೆಲ್ಲಾ ನೆನಪಿನಂಗಳದಲ್ಲಿ ನಾಟ್ಯವಾಡತೊಡಗಿದವು.
ತಂದೆ, ತಾಯಿ ಕೈಗೊಂಡ ಜನಸೇವಾ ಕಾರ್ಯಗಳಿಗೆ ಕೈಜೋಡಿಸಿ ಅದನ್ನು ಅವರ ನಂತರವೂ ಉಳಿಸಿ ಬೆಳೆಸಬೇಕೆಂಬ ಉಧಾತ್ತ ಧ್ಯೇಯದಿಂದ ಮಿಡಲ್‌ಸ್ಕೂಲ್‌ ಶಿಕ್ಷಕಿಯಾಗಿದ್ದ ಅಕ್ಕ, ತಾನು ಮದುವೆಯೇ ಆಗುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದು, ತಾನು ಪದವಿ ವ್ಯಾಸಂಗ ಮಾಡುತ್ತಿರುವಾಗ ತನ್ನ ಮನವನ್ನು ಕದ್ದ ವಿಜ್ಞಾನದ ಪ್ರೊಫೆಸರ್‌ ಶಂಕರನ್‌ ಅವರು, ಅದನ್ನು ಹೇಗೋ ತಿಳಿದು ತನ್ನ ಮನದಲ್ಲಿದ್ದ ಅಳುಕನ್ನು ಹೋಗಲಾಡಿದಿ ತಾನೇ ಮುಂದೆ ನಿಂತು ತನ್ನ ಮದುವೆ ಮಾಡಿಸಿದ ಅಕ್ಕ, ನಂತರದ ದಿನಗಳಲ್ಲಿ ಉನ್ನತ ವ್ಯಾಸಂಗಕ್ಕೆಂದು ಅಮೆರಿಕಾಗೆ ತೆರಳಿದ ಶಂಕರನ್ ಮತ್ತು ತಾನು ಅಲ್ಲೇ ನೆಲೆ ನಿಂತದ್ದು, ಅಲ್ಲೇ ಹುಟ್ಟಿ ಬೆಳೆದ ಮಗ ನೇಪಾಳೀ ಹುಡುಗಿಯನ್ನು ಪ್ರೀತಿಸಿ ಮದುವೆಯಾದದ್ದು, ಅವರಿಗೆ ಹುಟ್ಟಿದ ಮಗುವಿಗೆ ʼತನ್ವಿʼ, ಎಂದು ಹೆಸರಿಟ್ಟದ್ದು, ನಂತರದ ದಿನಗಳಲ್ಲಿ ಶಂಕರನ್‌ ಅವರು ತೀರಿಕೊಂಡಾಗ ತನಗಾದ ಅಘಾತ, ಆಗ ತನ್ನನ್ನು ಫೋನಿನಲ್ಲೇ ಸಂತೈಸಿದ ಅಕ್ಕ, ಇಲ್ಲಿಗೇ ಬರುವಂತೆ, ಬಂದು ಅಪ್ಪ ಅಮ್ಮ, ಬೆಳೆಸಿದ, ತಾನು ಉಳಿಸಿರುವ ಸಮಾಜದ ಕಾರ್ಯಗಳಲ್ಲಿ ಕೈಜೋಡಿಸುವಂತೆ, ಅದರ ಮೂಲಕ ತನಗಾಗಿದ್ದ ಅಘಾತದಿಂದ ಹೊರಬರುವಂತೆ ಮಾಡಿದ ಅಕ್ಕನ ಬುದ್ಧಿಮತ್ತೆ, ಈಗ ತನ್ವಿ ಬೆಳೆದು ಆಸ್ಟ್ರೇಲಿಯಾ ಮೂಲದ ಹುಡುಗನನ್ನು ಮದುವೆಯಾದಾಗಲೂ ಸಂತೋಷದಿಂದ ಇಲ್ಲಿಂದಲೇ ಹರಸಿದ ತನ್ನಕ್ಕನ ಉದಾತ್ತ ಗುಣ, ಈಗ ದೀಪಾವಳಿ ಹಬ್ಬವನ್ನು ಆಚರಿಸಲು, ಹಾಗೂ ಭಾರತವನ್ನು ಪರಿಚಯಿಸಿಕೊಳ್ಳಲು ಬರುತ್ತಿರುವುದಾಗಿ ವಾರದ ಹಿಂದೆ ತನ್ವಿ ತಿಳಿಸಿದಾಗಿನಿಂದ ಅಕ್ಕ ಸಂಭ್ರಮಿಸುತ್ತಿರುವ ರೀತಿ, ಎಲ್ಲವನ್ನೂ ಜ್ಞಾಪಿಸಿಕೊಳ್ಳುತ್ತಾ, ತುಟಿಯಂಚಿನಲ್ಲಿ ಕಿರುನಗೆಯರಳುವಷ್ಟರಲ್ಲಿ, ತಾನು ತೆಗೆದಿಟ್ಟ, 38 ವರ್ಷಗಳಷ್ಟು ಹಳೆಯದಾದರೂ, ಬರೀ ಅಂಟುವಾಳದ ಕಾಯಿಯನ್ನು ಹಾಕಿ ಒಗೆದು ಶುಭ್ರವಾಗಿ ಹೊಚ್ಚ ಹೊಸದರಂತೆ ಇಟ್ಟಿರುವ ಕಡು ಹಸಿರು ಬಣ್ಣಕ್ಕೆ ಗಾಢ ಕಿತ್ತಳೇ ಬಣ್ಣದ, ಶುದ್ಧ ಜರಿಯ ಕುಸರಿ ಕೆಲಸ ಮಾಡಿದ ಬಾರ್ಡರಿರುವ ಸೀರೆಯುಟ್ಟು, ಅದಕ್ಕೊಪ್ಪುವ ರವಿಕೆ ತೊಟ್ಟು ಲಕ್ಷಣವಾಗಿ ಅಲಂಕರಿಸಿಕೊಂಡು, ಇರುವ ಬಿಳೀ ಕೂದಲನ್ನೆಲ್ಲಾ ಸೇರಿಸಿ ತುರುಬು ಕಟ್ಟಿ ಅದಕ್ಕೆ ಅರ್ಧ ಚಂದ್ರಾಕಾರದಲ್ಲಿ ಮಲ್ಲಿಗೆಯ ದಂಡೆ ಸುತ್ತಿ ಮೊಗದಲ್ಲಿ ಸಂತೃಪ್ತಿಯ ನಗೆಚೆಲ್ಲುತ್ತಾ ಬಂದ ಅಕ್ಕ, ಗೀತಾರನ್ನು ಕುರಿತು,

‘ಅಯ್ಯೋ ಅಯ್ಯೋ, ಮಕ್ಕಳು ಬರುವ ಹೊತ್ತಾಯಿತು, ಇನ್ನೂ ಹಗಲುಗನಸು ಕಾಣುತ್ತಾ ಕುಳಿತಿದ್ದೀಯಾ? ಏಳು, ಏಳು, ಮುಖ ತೊಳೆದು ಸೀರೆ ಬದಲಾಯಿಸು, ಉಮಾಳ ಕೆಲಸ ಎಲ್ಲಿಗೆ ಬಂತೋ ನೋಡುತ್ತೀನಿ – ಎನ್ನುತ್ತಾ ಅಡುಗೆ ಮನೆ ಕಡೆ ನಡೆದರು.
ಸಂಜೆ 6.30 ರ ವೇಳೆಗೆ ಪೊಂ, ಪೊಂ, ಎಂದು ಸದ್ದು ಮಾಡುತ್ತಾ ಟ್ಯಾಕ್ಸಿ ಬಂದು ಅಂಗಳದಲ್ಲಿ ನಿಂತಿತು, ಅದರಿಂದ ಜೀನ್ಸ್‌ಪ್ಯಾಂಟ್‌, ಟೀ ಶರ್ಟು ತೊಟ್ಟ ಮದುಮಕ್ಕಳು ಕೆಳಗಿಳಿದರು. ಅವರನ್ನು ಎದುರುಗೊಳ್ಳಲು ಎಲ್ಲರೂ ಮನೆಯ ಅಂಗಳಕ್ಕೇ ಬಂದು ನಿಂತರು.

ತನ್ನವರನ್ನು, ತನ್ನ ಬೇರುಗಳ ಎಳೆಯಿರುವ ಈ ನೆಲವನ್ನು ಸ್ಪರ್ಶಿಸಿದ ರೋಮಾಂಚನವನ್ನು ಅನುಭವಿಸುತ್ತಾ ತನ್ವಿ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ವರ್ಣಮಯ ದೇಶ ಎಂದು ವಿಶ್ವದಲ್ಲೇ ಮಾನ್ಯತೆಯನ್ನು ಪಡೆದ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾದ ಕುಟುಂಬವೊಂದರ ವಿಶೇಷಣಗಳನ್ನು ಕೌತುಕಮಯ ಕಣ್ಣುಗಳಿಂದ ನೋಡುತ್ತಾ ವಿನ್ಸೆಂಟ್‌, ಇಬ್ಬರೂ ಅಜ್ಜಿಯರೆಡೆಗೆ ಬಂದರು.

“ಹಾಯ್‌ ಅಜ್ಜೀಸ್‌ʼ’ ಎನ್ನುತ್ತಾ ತನ್ವಿ, ಅಜ್ಜಿಯರ ಕಾಲಿಗೆ ಬಿದ್ದರೆ, “ನಮಸ್ತೇ” ಎನ್ನುತ್ತಾ ವಿನ್ಸೆಂಟ್‌ಕೈ ಜೋಡಿಸಿದನು. ಆರತಿ ಎತ್ತಿ ಮಧುಮಕ್ಕಳನ್ನು ಒಳಗೆ ಕರೆದೊಯ್ದರು ಭಾರತಮ್ಮ ಮತ್ತು ಎಲ್ಲರೂ.

ತಿಂಡಿ ಕಾಫಿಗಳ ಸಮಾರಾಧನೆಯಾಗುತ್ತಿದ್ದಂತೆಯೇ, ಮನೆಯಂಗಳವನ್ನೆಲ್ಲಾ ದೀಪಗಳಿಂದ ಸಿಂಗರಿಸಲು ಭಾರತಮ್ಮ ಮತ್ತು ಉಮಾ ಹೊರಟರೆ, ಗೀತಾ ಮಕ್ಕಳ ಬೇಕು, ಬೇಡಗಳನ್ನು ನೋಡಿಕೊಳ್ಳುವುದರಲ್ಲಿ ನಿರತರಾದರು.

ಅಡುಗೆ ಮನೆಗೆ ಬಂದರೆ, ಫಳ ಫಳ ಹೊಳೆಯುವ ಹಳೆಯ ಕಾಲದ ತಾಮ್ರದ ಬಿಂದಿಗೆಗೆ ಸುಣ್ಣದ ಪಟ್ಟಿ ಹಚ್ಚಿ, ಅರಿಶಿನ, ಕುಂಕುಮ ಹೂಗಳಿಂದ ಪೂಜಿಸಿ ಬಿಂದಿಗೆಯ ಕತ್ತಿಗೆ ಮಾವಿನೆಲೆಯ, ಹೂವಿನ ಗೊಂಚನ್ನು ಸುತ್ತಿ ಚಂದದ ರಂಗೋಲೆಯ ಮೇಲೆ ಇಟ್ಟಿದ್ದರು. ಹಾಗೇಯೇ, ಹೊಸ ಚಿಗುರು ಹಳೆ ಬೇರು ಎನ್ನುವಂತೆ, ʼಆಕ್ವಾಗಾರ್ಡ್‌ʼ ಮೇಲೂ ಹೂವು ಮಾವಿನೆಲೆಗಳನ್ನು ಇಟ್ಟು ಪೂಜಿಸಿದ್ದರು. ಬಚ್ಚಲು ಮನೆಯಲ್ಲೂ ಹಳೆಯ ಕಾಲದ ಹಂಡೆಯನ್ನು ಬೆಳ್ಳಗೆ ಬೆಳಗಿ ಪೂಜಿಸಿದ್ದರು. ಟೆರೇಸಿನ ಮೇಲೆ ಹೋದರೆ ಸೋಲಾರ್‌ ಟ್ಯಾಂಕಿಗೂ ಪೂಜೆಯಾಗಿತ್ತು. ವಿನ್ಸೆಂಟ್‌ ಮತ್ತು ತನ್ವಿಯವರಿಗೆ ಕೇಳಲು ಸಾವಿರ ಪ್ರಶ್ನೆಗಳಿದ್ದವು. ಗೀತಾ ಒಮ್ಮೆಗೇ ಹೇಳಿಬಿಟ್ಟರು – ನಿಮ್ಮಗಳ ಕಣ್ಣುಗಳನ್ನು ನೋಡುತ್ತಿದ್ದರೆ, ಸಾವಿರ ಪ್ರಶ್ನೆಗಳಿವೆ. ನಾಡಿದ್ದಿನ ತನಕ ಇನ್ನೂ ಸಾವಿರಾರು ಪ್ರಶ್ನೆಗಳು ಹುಟ್ಟುತ್ತವೆ. ಎಲ್ಲಕ್ಕೂ ಅಕ್ಕ ಒಟ್ಟಿಗೆ ಉತ್ತರಿಸುತ್ತಾಳೆ. ಈಗ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಅಕ್ಕ ಹೇಳಿದಂತೆ ಕೇಳಿರಿ. ನಮ್ಮ ಕುಟುಂಬದ ಹಿರಿಯ ಜೀವ ಅತಿಯಾದ ಆಸೆಯಿಂದ ನಿಮ್ಮೊಂದಿಗೆ ಹಬ್ಬ ಮಾಡಲು ಕಾದಿದಾಳೆ – ಎಂದರು.

”ಹುಂ ಅಮ್ಮಾ, ಅದಕ್ಕೆಂದೇ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ಆಚರಿಸಲು ಇಲ್ಲಿಗೆ ಬಂದಿರುವುದು” ಎಂದಳು ತನ್ವಿ.

ಮಾರನೆಯ ದಿನ, ಬೆಳಗ್ಗೆ ಎದ್ದು ಎಲ್ಲರಿಗೂ ಎಣ್ಣೆ ಶಾಸ್ತ್ರ, ಮದುಮಕ್ಕಳಿಗೆ ಹೊಸ ಬಟ್ಟೆಯ ಉಡುಗೊರೆ, ನಂತರ ಅಭ್ಯಂಗನ, ವಿಶೇಷ ದಿನಗಳಲ್ಲಿ ಬರುವ ಭಟ್ಟರ ಆಗಮನ, ದೇವರ ಪೂಜೆ, ನಂತರ ಇಡ್ಲಿ, ಚಟ್ನಿ, ಪಾಯಸದ ಉಪಹಾರ, ನಂತರ ಮೈಸೂರಿನ ಪೇಟೆ ಬೀದಿಗಳಲ್ಲಿ ಸುತ್ತಾಟ, ಮಧ್ಯಾಹ್ನ ಮನೆಗೆ ಬಂದು ಸಿಹಿಯೂಟ, ವಿಶ್ರಾಂತಿಗೆಂದು ಒಂದು ಸಣ್ಣ ನಿದ್ರೆ. ಅಷ್ಟ್ರರಲ್ಲೇ, ಸೇವಾಸಮಾಜದ ಮುಖ್ಯಸ್ಥರ, ಹಲವಾರು ಬಂಧುಗಳ, ಸ್ನೇಹಿತರ ಆಗಮನ, ಒಬ್ಬರಿಗೊಬ್ಬರ ಪರಿಚಯ, ಶುಭಾಶಯ, ಸಿಹಿತಿಂಡಿಗಳ ವಿನಿಮಯ, ಸಂಜೆ ಮತ್ತೆ ಅಂಗಳಕ್ಕೆಲ್ಲಾ ದೀಪದ ಹಣತೆಗಳ ಶೃಂಗಾರ, ಮನೆ ಹತ್ತಿರದ ದೇವಸ್ಥಾನಕ್ಕೆ ಭೇಟಿ, ಮನೆಗೆ ಬಂದು ನಾಲ್ಕಾರು ಹೂಕುಂಡ, ಸುರಸುರಬತ್ತಿ, ಮತಾಪು, ಪಟಾಕಿಗಳ ಹಚ್ಚುವ ಸಂಭ್ರಮ. ಲಘುವಾಗಿ ಊಟ, ಎಲ್ಲರೂ ಕುಳಿತು ಹಳೆಯ ದಿನಗಳ ನೆನಪುಗಳನ್ನು ಮಾಡಿಕೊಳ್ಳುತ್ತಾ ಅವುಗಳನ್ನು ವಿನ್ಸೆಂಟಿಗೂ ವಿವರಿಸುತ್ತಾ ನಿದ್ರೆಗೆ ಜಾರಿದಾಗ ರಾತ್ರಿ ಹತ್ತುಗಂಟೆಯಾಗಿತ್ತು.

ಮಾರನೆಯ ದಿನ ಮನೆಯಲ್ಲಿ ಅಂಥಹ ಕಾರ್ಯಕಲಾಪಗಳು ಜಾಸ್ತಿಯಿಲ್ಲದಿದ್ದರೂ, ಅಂದು ಸಂಜೆ ಸೇವಾ ಸಮಾಜದಲ್ಲಿ ಲಕ್ಷ್ಮಿ ಪೂಜೆ, ಅಲ್ಲಿಯ ಸದಸ್ಯರಿಗೆ ಸಿಹಿಯೂಟ. ಬೆಳಗ್ಗೆಯೆಲ್ಲಾ ಮಕ್ಕಳು ನಂಜನಗೂಡು, ಚಾಮುಂಡಿಬೆಟ್ಟ, ಶ್ರೀರಂಗಪಟ್ಟಣಗಳಿಗೆ ಭೇಟಿ ನೀಡಿ ಮನೆಗೆ ಬಂದು ಊಟಮಾಡಿ ಒಂದು ಸಣ್ಣ ನಿದ್ರೆ ತೆಗೆದು ಎದ್ದಾಗ ಇನ್ನೂ ಗಂಟೆ 3. ಸಮಾಜಕ್ಕೆ ಹೊರಡುವುದು ಸಂಜೆ 5.30 ಗಂಟೆಗೆ. ಅಷ್ಟರತನಕ ಏನು ಮಾಡೋಣ ಎಂಬ ಯೋಚನೆಯಲ್ಲಿದ್ದಾಗಲೇ ಉಮಾ ಬಿಸಿ ಬಿಸಿ ಕಾಫಿ, ಕೋಡುಬಳೆ, ಬೇಸಿನ್‌ ಲಾಡುವಿನೊಂದಿಗೆ ಹಾಜರ್.‌ ಕಾಫೀ ಲೋಟಗಳನ್ನು ಎಡಗೈಲಿ ಹಿಡಿದು ಬಲಗೈ ತಿಂಡಿ ತಟ್ಟೆಗೆ ಹಾಕುತ್ತಲೇ, ವಿನ್ಸೆಂಟ್‌ ಹೇಳಿದ – ದೊಡ್ಡಜ್ಜಿ ಈಗ ಬಿಡುವಾಗಿದ್ದರೆ ನೀವು ನಮಗೆ ದೀಪಾವಳಿ ಹಬ್ಬದ ಕುರಿತಾದ ವಿವರಗಳನ್ನು ಕೊಡುತ್ತೀರಾ? ಮೊನ್ನೆ ಯಾಕೆ ನೀರಿನ ಡ್ರಮ್ಮಿಗೆ ಪೂಜೆ ಮಾಡಿದ್ದಿರಿ? ನಿನ್ನೆ ಯಾಕೆ ಆಯಿಲ್‌ ಬಾತ್‌ ತೆಗೆದುಕೊಂಡೆವು, ಇಂದು ಯಾಕೆ ಲಕ್ಷ್ಮೀ ಪೂಜೆ, ನಾಳಿನ ಮಹತ್ವ, ಎಲ್ಲಾ ತಿಳಿಸುತ್ತೀರಾ?

ತನ್ವಿ ಕೂಡ, – ಎಸ್‌, ಎಸ್‌, ಇದು ರೈಟ್‌ಟೈಮ್, ಹೇಳಿ ಹೇಳಿ ಅಜ್ಜೀಸ್‌ಗಳೇ – ಎಂದಳು.

ಗೀತಾ – ನನಗೂ ಜಾಸ್ತಿ ತಿಳಿದಿಲ್ಲ. ನನ್ನ ಹೆಚ್ಚಿನ ವರ್ಷಗಳು ಅಮೆರಿಕಾದಲ್ಲೇ ಕಳೆದಿದದ್ದುರಿಂದ ಹಬ್ಬದ ದಿನ ಪಾಯಸದಡುಗೆ ಮಾಡಿ ಸಿಹಿ ತಿಂದು ಎಲ್ಲರಿಗೂ ಶುಭಾಶಯ ಕೋರುವುದಷ್ಟೇ ನನಗೆ ತಿಳಿದಿರುವುದು, ಅಕ್ಕ ನೀನೇ ಹೇಳು – ಎಂದರು.
ಭಾರತಮ್ಮನವರು – ನನಗೂ ಜಾಸ್ತಿ ತಿಳಿದಿಲ್ಲ, ಆದರೂ ಮಕ್ಕಳು ಕೇಳಿದಾಗ, ಅದರಲ್ಲೂ ಎಲ್ಲವನ್ನೂ ಕೆದಕಿ ಕೆದಕಿ ಕೇಳಿ, ಉತ್ತರ ತೃಪ್ತಿ ತಂದರೆ ಮಾತ್ರ ಒಪ್ಪಿಕೊಳ್ಳುವ ನಿಮ್ಮಂಥಹ ಚುರುಕು ಮಕ್ಕಳಿಗೆ ಏನೂ ಹೇಳದೆ ಸುಮ್ಮನೆ ಆಚರಿಸಿ ಎಂದರೆ ಖಂಡಿತಾ ತಪ್ಪಾಗುತ್ತದೆ.

ಅಲ್ಲದೆ, ನಾನು ಹೇಳುವುದೇ ಸರಿ, ಅದೇ ವೇದವಾಕ್ಯ, ಎಂದೇನೂ ಅಲ್ಲ. ನಮ್ಮ ಅಮ್ಮ ಅಪ್ಪ, ಏನು ಹೇಳುತ್ತಿದ್ದರೋ, ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಅಷ್ಟೆ. ಇರಲಿ, ನನಗೆ ತಿಳಿದಷ್ಟನ್ನು ಹೇಳುತ್ತೇನೆ, ಗೀತಾ ನೀನು ಅದನ್ನು ನಿನ್ನ ರೀತಿಯಲ್ಲಿ ಮಕ್ಕಳಿಗೆ ಅರ್ಥವಾಗುವಂತೆ ಅನುವಾದ ಮಾಡಿ ಹೇಳು, – ಎನ್ನುತ್ತಾ ಗಂಟಲು ಸರಿಪಡಿಸಿಕೊಂಡು ಹೇಳತೊಡಗಿದರು.

ನಮ್ಮ ಹಿಂದಿನವರು ಮಾನಸಿಕ ಆರೋಗ್ಯಕ್ಕಾಗಿ ವಿಶೇಷ ಕಾಳಜಿಯನ್ನು ವಹಿಸುತ್ತಿದ್ದರು. ಅಂದಿನ ಕಾಲದಲ್ಲಿ ಜನ ಅತ್ಯಂತ ಶ್ರಮಜೀವಿಗಳಾಗಿದ್ದರು. ಆಗಿನ ಕಾಲದಲ್ಲಿ ಮನರಂಜನೆಗೆಂದು ಬೇರೆ ಯಾವುದೇ ರೀತಿಯ ಸಾಧನಗಳು ಇರಲಿಲ್ಲ. ಶ್ರಮಜೀವನದ ಏಕತಾನತೆಯಿಂದ ಹೊರಬಂದು ಮನಸ್ಸನ್ನು ಉಲ್ಲಾಸದಿಂದ ಇಟ್ಟುಕೊಳ್ಳಲು ಪ್ರಕೃತಿಯ ಬದಲಾವಣೆಗಳಿಗೆ ಪೂರಕವಾಗಿ, ಹಲವಾರು ಹಬ್ಬಹರಿದಿನಗಳನ್ನು ಆಚರಣೆಗೆ ತಂದರು. ವೈವಿಧ್ಯಮಯ ದೈವಾರಾಧನೆ, ಋತುಗಳಿಗೆ ತಕ್ಕಂತೆ ದೈಹಿಕ ಆರೋಗ್ಯ ನೀಡುವ ಊಟೋಪಚಾರಗಳು, ಬಂಧು ಬಾಂಧವರೊಂದಿಗಿನ ಮಿಲನ, ಸಂಭ್ರಮ, ಸಡಗರಗಳಿಂದ ದೇಹ ಮನಸ್ಸುಗಳು ಉಲ್ಲಾಸಗೊಂಡು ಮತ್ತೆ ದೈನಂದಿನ ಕಾರ್ಯಕಲಾಪಗಳಲ್ಲಿ ತೊಡಗಲು ಪ್ರೇರಣೆಯಾಗುತಿತ್ತು.
ಎಲ್ಲರೂ ಮಂತ್ರಮುಗ್ಧರಾಗಿ ಕೇಳುತ್ತಿದ್ದರು. ಭಾರತಮ್ಮನವರ ಮಾತುಗಳನ್ನು ಗೀತಾ ಸಮಪರ್ಕವಾಗಿ ಭಾಷಾಂತರಿಸಿ ಹೇಳುತ್ತಿದ್ದರು.

ತನ್ವಿ ಹೇಳಿದಳು – ದೊಡ್ಡಜ್ಜಿ, ನಾನು ಮತ್ತು ವಿನ್ಸೆಂಟ್‌ ಇಬ್ಬರಿಗೂ ನಾಲ್ಕು ವಿಭಿನ್ನ ಸಂಸ್ಕೃತಿಗಳ ಬೇರುಗಳ ಎಳೆಗಳಿವೆ. ಭಾರತ, ನೇಪಾಳ, ಅಮೆರಿಕಾ ಮತ್ತು ಆಸ್ಟ್ರೇಲಿಯಾ. ಅದಕ್ಕೇ ನಾವುಗಳು ನಿರ್ಧರಿಸಿದ್ದೇವೆ, ನಾಲ್ಕೂ ಸಂಸ್ಕೃತಿಗಳ ಒಂದೊಂದು ಆಚರಣೆಯನ್ನು ನಮ್ಮ ಜೀವನದಲ್ಲಿ ಅನುಸರಿಸೋಣ ಎಂದು. ಅದರಲ್ಲಿ ಒಂದಾಗಿ ಭಾರತದ ದೀಪಾವಳಿ ಹಬ್ಬವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ವಿನ್ಸೆಂಟ್‌ ಅಜ್ಜಿಯವರ ಊರಾದ ತಮಿಳುನಾಡು ಮತ್ತು ನನ್ನ ಊರಾದ ಕರ್ನಾಟಕ ಹಾಗೂ ಭಾರತದಾದ್ಯಂತ ಆಚರಿಸುವ ದೀಪಾವಳಿ ನಮ್ಮ ಆಯ್ಕೆಯಾಯಿತು. ನಾವು ಮಾಡಿರೋದು ಸರಿ ಅಲ್ಲವಾ ಅಜ್ಜೀ – ಎಂದಳು.

ಭಾರತಮ್ಮ ಮುಂದುವರೆಸಿದರು – ಖಂಡಿತಾ ಸರಿ ಪುಟ್ಟಾ. ಈಗಿನ ಜಾಗತೀಕರಣದಿಂದ ನಮ್ಮ ಭಾರತದ ವೇದೋಕ್ತಿ, “ವಸುದೈವ ಕುಟುಂಬಕಂ”, ಎನ್ನುವುದು ಇತ್ತೀಚೆಗೆ ನಿಜಾರ್ಥದಲ್ಲಿ ಸಾಕ್ಷತ್ಕಾರವಾಗುತ್ತಿದೆ. ವಿಭಿನ್ನ ಸಂಸ್ಕೃತಿಯ, ವಿಭಿನ್ನ ಮತದ, ವಿಭಿನ್ನ ದೇಶದವರುಗಳೂ ಸಹ ವಿವಾಹವಾಗಿ ಒಬ್ಬರನ್ನೊಬ್ಬರು ಗೌರವಿಸುತ್ತಾ. ವೈಯುಕ್ತಿಕ ಭಾವನೆಗಳಿಗೆ ಬೆಲೆಕೊಡುತ್ತಾ, ತಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರ ಮೇಲೆ ಹೇರದೆ ಬದುಕುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ನಮ್ಮ ಮನೆಯೇ ಒಂದು ಸಾಕ್ಷಿ.

ಇರಲಿ, ಹೀಗೆ ನಾನು ಬರೀ ಸುತ್ತ ಮುತ್ತಲಿನ ಮಾತುಗಳನ್ನಾಡುತ್ತಾ ಮುಖ್ಯವಾದ ವಿಷಯವನ್ನೇ ಹೇಳುವುದನ್ನು ಬಿಟ್ಟು ಬಿಡುತ್ತೇನೆ. ಈ ನಡುವೆ ಯಾಕೋ ಮರೆವು ಜಾಸ್ತಿಯಾಗಿ ಬಿಟ್ಟಿದೆ.

ಗೀತಾ ನಗುತ್ತಾ – ಮರೆವು ಬಂದಿದೆ ಎಂದೇ ಇಷ್ಟು ವಿಚಾರಗಳನ್ನು ಹೇಳುತ್ತೀಯಾ, ಅಷ್ಟನ್ನೇ ಎಲ್ಲರಿಗೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಪೂರ್ತೀ ಹೇಳಿದ್ದರೆ ಇನ್ನೆಷ್ಟು ಇರುತ್ತಿತ್ತೋ? ಇರಲಿ, ಹೇಳು ಅಕ್ಕಾ, ಚೆನ್ನಾಗಿ ಈಗಿನ ಪೀಳಿಗೆಯ ಮಕ್ಕಳಿಗೆ ಮನಸ್ಸಿಗೆ ನಾಟುವಂತೆ ಹೇಳುತ್ತೀಯಾ – ಎಂದರು.

ʼಹುಂ, ಭೂಲೋಕದ ಒಡೆಯ ಬಲಿಚಕ್ರವರ್ತಿ, ತನ್ನ ಪ್ರಜೆಗಳನ್ನೆಲ್ಲಾ ಚೆನ್ನಾಗಿ ಪಾಲಿಸುತ್ತಾ ಧರ್ಮಕಾರ್ಯಗಳಲ್ಲಿ ನಿರತನಾಗಿ, ತಪಸ್ಸನ್ನಾಚರಿಸಿ ಎಷ್ಟು ಎತ್ತರದ ಸ್ಥಾನಕ್ಕೆ ಏರುತ್ತಾನೆಂದರೆ, ಅವನು ದೇವಲೋಕದ ರಾಜ ಇಂದ್ರನ ಸ್ಥಾನಕ್ಕೇ ಅರ್ಹತೆಯನ್ನು ಪಡೆಯುವಂತಹವನಾಗುತ್ತಾನೆ. ಆಗ ಕೃಷ್ಣನು ಕುಳ್ಳಗಿನ ಬ್ರಾಹ್ಮಣನ ವೇಷವನ್ನು ಧರಿಸಿ ʼವಾಮನಾವತಾರʼದಲ್ಲಿ ಬಲಿಚಕ್ರವರ್ತಿಯ ಬಳಿಗೆ ಬರುತ್ತಾನೆ. “ತಮಗೇನು ದಾನ ನೀಡಲಿ” ಎಂದು ಬಲಿ ಕೇಳಿದಾಗ ವೇಷಧಾರೀ ಕೃಷ್ಣ, ಮೂರು ಹೆಜ್ಜೆ ಜಾಗವನ್ನು ಕೇಳಿ, ತ್ರಿವಿಕ್ರಮನಾಗಿ ಬೆಳೆದು, ಒಂದು ಹೆಜ್ಜೆಯಿಂದ ಭೂಮಂಡಲವನ್ನೂ ಮತ್ತೊಂದು ಹೆಜ್ಜೆಯಿಂದ ನಭೋಮಂಡಲವನ್ನೂ ಆಕ್ರಮಿಸಿ ಇನ್ನೊಂದು ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಅವನಿಗೆ ಮೋಕ್ಷವನ್ನು ಕರುಣಿಸುತ್ತಾನೆ. ಆಗ ಪ್ರಜೆಗಳೆಲ್ಲರೂ ತಮ್ಮ ಪ್ರೀತಿಪಾತ್ರ ರಾಜನಿಗಾಗಿ ಹಂಬಲಿಸುತ್ತಾರೆ. ಅವರುಗಳ ಪ್ರೀತಿಗೆ ಕರಗಿದ ಕೃಷ್ಣ “ವರ್ಷಕ್ಕೆ ಒಂದು ದಿನ, ಕಾರ್ತೀಕ ಶುದ್ಧ ಪಾಡ್ಯಮಿಯಂದು ಬಲಿ ಚಕ್ರವರ್ತಿ ತಾನಾಳಿಗದ, ತನ್ನ ಪ್ರಿಯ ಪ್ರಜೆಗಳಿರುವ ಭೂಲೋಕಕ್ಕೆ ಆಗಮಿಸುತ್ತಾನೆ. ಆಗ ನೀವುಗಳೆಲ್ಲರೂ ಆ ದಿನವನ್ನು ಹಬ್ಬದಂತೆ ಆಚರಿಸಿ ನಿಮ್ಮ ಪ್ರಿಯ ರಾಜನೊಡನೆ ಸುಖ ಸಂತೋಷದಿಂದ ಕಾಲಕಳೆಯಿರಿ” ಎಂದು ವರ ಕೊಡುತ್ತಾನೆ. ಆದ್ದರಿಂದಲೇ ಅಂದು ನಮ್ಮ ಪ್ರಿಯ ರಾಜ ಧರೆಗೆ ಆಗಮಿಸುತ್ತಾನೆಂಬ ನಂಬುಗೆಯಿಂದ ಮನೆ ಮನೆಯನ್ನೂ ಶುದ್ಧಗೊಳಿಸಿ, ಹೊಸ್ತಿಲನ್ನು ಅಂದವಾದ ರಂಗೋಲಿಯಿಂದ ಅಲಂಕರಿಸಿ, ಅದರ ಮೇಲೆ ಸಗಣಿಯಿಂದ ಮಾಡಿದ ಚಿಕ್ಕ ಮುದ್ದೆಗೆ ಹೂವನ್ನು ಸಿಕ್ಕಿಸಿ, ಸಿಪಾಯಿಯೆಂದು ಹೊಸ್ತಿಲ ಎರಡೂ ಕಡೆಯ ಮೇಲೆ, ತುಳಸೀ ಕಟ್ಟೆಯ ಮುಂದೆ ಇಡುತ್ತಾರೆ. ಅದನ್ನು ʼಕೆರಕʼ ಎಂದು ಕರೆಯುತ್ತಾರೆ. ಅಭ್ಯಂಗನ ಮಾಡಿ, ಕುಲದೇವರನ್ನು ಪೂಜಿಸಿ, ಸಿಹಿಯಡುಗೆ ಮಾಡಿ , ಹೊಸ ಬಟ್ಟೆ ತೊಟ್ಟು ಹೂಬಾಣ, ಮತಾಪು, ಪಟಾಕಿಗಳಿಂದ ಸ್ವಾಗತಿಸಿ ಸಂಭ್ರಮಿಸುತ್ತಾರೆ. ರೂಢಿಯಿರುವ ಮನೆಗಳಲ್ಲಿ ಬಲೀಂದ್ರನ ಪೂಜೆಯನ್ನೂ ವಿಶಿಷ್ಟ ರೀತಿಯಲ್ಲಿ ಮಾಡುತ್ತಾರೆ. ಇದು ನಮ್ಮಗಳ ಪದ್ಧತಿಯಾದರೆ, ಉತ್ತರ ಭಾರತದವರು, ವಿಜಯದಶಮಿಯಂದು ರಾವಣನನ್ನು ಸಂಹರಿಸಿದ ಶ್ರೀರಾಮ, ಸೀತಾ ಲಕ್ಷ್ಮಣರೊಡಗೂಡಿ ಪುರಪ್ರವೇಶ ಮಾಡುತ್ತಾನೆಂದೂ ಅಮಾವಾಸ್ಯೆಯ ಸಮಯವಾದ್ದರಿಂದ ದೀಪಗಳಿಂದ ಇಡೀ ಊರನ್ನೆಲ್ಲಾ ಅಲಂಕರಿಸಿ ರಾಮನ್ನು ಎದುರುಗೊಳ್ಳುತ್ತಾರೆಂದು ನಂಬಿದ್ದಾರೆ.

ನಿರರ್ಗಳವಾಗಿ ಭಾರತಮ್ಮ ದೈವೀಕಳೆಯಿಂದ ಹೇಳುತ್ತಿದ್ದರೆ ಎಲ್ಲರೂ ಮಂತ್ರಮುಗ್ಧರಾಗಿ ಕೇಳುತ್ತಿದ್ದರು.ಭಾರತಮ್ಮ ಮುಂದುವರೆಸಿದರು – ಇದು ನಿಜವೆಂದೂ ಅಲ್ಲ, ಅದೇ ಸರಿಯೆಂದೂ ಅಲ್ಲ, ನಮ್ಮ ಅಜ್ಜಿ ಹೇಳುತ್ತಿದ್ದುದನ್ನು ನಾನು ಹೇಳಿದ್ದೇನೆ ಅಷ್ಟೆ. “ನಾವುಗಳು ಹಾಗೆಲ್ಲಾ ನಂಬುವುದಿಲ್ಲ, ಸರಿಯಾದ ವಿಚಾರವನ್ನು ಹೆಕ್ಕಿ ತೆಗೆದು ನಂತರ ಆಚರಿಸುತ್ತೇನೆ” ಎಂದು ಹೊರಟರೆ ಎಲ್ಲರೂ ಹೇಳುವ ಭಿನ್ನ, ವಿಭಿನ್ನ ವಾದ ವಿವಾದಗಳನ್ನು ಕೇಳಿ ತಲೆಕೆಡಿಸಿಕೊಂಡು ಸಮಯವನ್ನು ವ್ಯರ್ಥಮಾಡುವುದಕ್ಕಿಂತ, ನಮ್ಮ ಮನೆಯಲ್ಲಿ ಹಿರಿಯರು ಆಚರಿಸುತ್ತಿದ್ದ ಪದ್ಧತಿಗಳನ್ನು ಸಮಯಕ್ಕೆ ತಕ್ಕಂತೆ ಸರಳ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ, ಸುಖ ಸಂತೋಷದಿಂದ ಎಲ್ಲರೊಡಗೂಡಿ ಹಬ್ಬಗಳನ್ನು ಆಚರಿಸಿದರೆ, ನಮ್ಮ ಹಿರಿಯರ ಆಶಯ ಈಡೇರಿದಂತೆ ಎಂಬುದು ನನ್ನ ಅನಿಸಿಕೆ. ಈ ಹಬ್ಬದ ಸಮಯ, ಹಗಲು ಚಿಕ್ಕದಾಗಿ ದೀರ್ಘವಾದ ರಾತ್ರಿಗಳಿರುವ ಕಾಲವಾದ್ದರಿಂದ ಸಾಲು ದೀಪಗಳು ಎಲ್ಲರಿಗೂ ದಾರಿದೀಪಗಳಾಗಿಯೂ ಉಪಯುಕ್ತವಾಗುತ್ತವೆ ಎಂಬುದೂ ಸಹ ಹಿರಿಯರ ಆಶಯವಿರಬಹುದು. ಒಂದೆರಡು ಪಟಾಕಿ, ಹೂಕುಂಡ , ಮತಾಪು, ಹೂಬಾಣಗಳನ್ನು ಹಚ್ಚಿದರೆ ತಪ್ಪಿಲ್ಲ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. ಅದನ್ನೇ ಸ್ವಪ್ರತಿಷ್ಟೆ ಮಾಡಿಕೊಂಡು, ನಮ್ಮ ಸಿರಿವಂತಿಕೆ ಪ್ರದರ್ಶನಕ್ಕೆಂದೋ, ಛೋಡಿಗೆಂದೋ ವಾತಾವರಣ ಕಲುಶಿತವಾಗುವಷ್ಟು ಖಂಡಿತಾ ಮಾಡಬಾರದು – ಏನಂತೀರೀ, ಆಗಲೇ ಗಂಟೆ ಐದು ಆಗುತ್ತಾ ಬಂತು, ನೀವುಗಳು ಏನಂತೀರೀ, ಅದಕ್ಕೆ ನನ್ನ ಉತ್ತರ ಏನು ಮುಂತಾದ ಎಲ್ಲಾ ಚರ್ಚೆಗಳನ್ನೂ ನಾಳೆ ಮಧ್ಯಾಹ್ನಕ್ಕೆ ಮುಂದೂಡೋಣ, ನಡೆಯಿರಿ ಸಮಾಜದ ಕಡೆ ಹೊರಡೋಣ, ಎನ್ನುವಷ್ಟರಲ್ಲಿ, ಯಾವ ಮಾಯದಲ್ಲೋ ಎದ್ದು ಒಳಗೆ ಹೋಗಿದ್ದ ಉಮಾ ಎಲ್ಲರಿಗೂ ಟೀ ಮಾಡಿ ತಂದಿತ್ತಳು.

ಮನಸ್ಸನ್ನು ಅರಿತು ನಡೆಯುವಲ್ಲಿ ನಮ್ಮ ಉಮನನ್ನು ಬಿಟ್ಟರೆ ಇಲ್ಲಾ- ಎನ್ನುತ್ತಾ ಎಲ್ಲರೂ ಟೀ ಲೋಟಗಳಿಗೆ ಕೈ ಹಾಕಿದರು.
“ಈ ದೀಪಾವಳೀ ಹಬ್ಬದ ಕತೆಯಿಂದಲೇ ಕಳ್ಳನನ್ನು ನಂಬಿದರೂ, ಕುಳ್ಳನನ್ನು ನಂಬಬಾರದು” ಎಂಬ ಗಾದೆ ಮಾತು ಹುಟ್ಟಿಕೊಂಡಿತೋ ಏನೋ ಅಲ್ವಾ ದೊಡ್ಡಮ್ಮಾ – ಎಂದು ಉಮಾ ನಗುತ್ತಾ ಅನ್ನಲು, ಭಾರತಮ್ಮನವರ ಮನದಲ್ಲಿ, ಗಂಭೀರವಾಗಿ “ಇರಬಹುದೇನೋ” ಎನ್ನಿಸಿದ್ದು ಸುಳ್ಳಲ್ಲ.

-ಪದ್ಮಾ ಆನಂದ್, ಮೈಸೂರು

10 Responses

  1. ಹಲವಾರು.. ಸಂಪ್ರದಾಯ.. ಸಂಸ್ಕೃತಿಗಳ..ನೆಲೆವೀಡು…ನಮ್ಮ ದೇಶ…ಅದರ…ಅಡಿಪಾಯ… ಹಬ್ಬ… ಹರಿದಿನಗಳ..ಆಚರಣೆ..
    ಎಂಬುದನ್ನು….ಬೇರೆ.. ಬೇರೆ.. ದೇಶದ ವರೊಡನೆ…ಸಂಬಂಧ ಗಳನ್ನು… ಬೆಳೆಸಿದವರಾಗಿದ್ದರು…ಮೂಲ..ಬೇರು..
    ನಮ್ಮದೇ…ಎಂಬ..ಭಾವನೆಯನ್ನು… ಬಲವಾಗಿ…ನಂಬಿದ್ದ..
    ಕುಟುಂಬದ.. ಹಿರಿಯ..ಜೀವ…ಕಿರಿಯರನ್ನು..ಸ್ವಾಗತಿಸಿ…ಹಬ್ಬದ.. ಆಚರಣೆ..
    ಅರ್ಥವನ್ನು… ತಿಳಿಸಿ..ಹಾರೈಸುವ…ರೀತಿಯ ನ್ನು..ಕಥಾ..ಚೌಕಟ್ಟಿನಲ್ಲಿ…ಕಟ್ಟಿಕೊಟ್ಟಿರುವುದು…ಮುದ..ತಂದಿತು… ಧನ್ಯವಾದಗಳು
    ..ಪದ್ಮಾ ಮೇಡಂ.

  2. Padma Anand says:

    ನಾ ಬರೆದ ಕಥೆಯನ್ನು ಪ್ರಕಟಿಸಿದ್ದಕ್ಕಾಗಿ “ಸುರಹೊನ್ನೆ” ಗೆ ಧನ್ಯವಾದಗಳು. ಸುರಹೊನ್ನೆಯ ಬಳಗಕ್ಕೆಲ್ಲಾ , ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.

  3. K N SHANTHARAM says:

    ಜಾಗತಿಕ ದೀಪಾವಳಿ *ಕಥೆ* ಚೆನ್ನಾಗಿದೆ
    ಅಭಿನಂದನೆಗಳು

  4. S.sudha says:

    Very nice and different theme.

  5. ಶಂಕರಿ ಶರ್ಮ says:

    ದೀಪಾವಳಿ ಹಬ್ಬದ ಆಚರಣೆಯ ಮಹತ್ವವನ್ನು ಕಥಾ ರೂಪದಲ್ಲಿ ಎಳೆ ಎಳೆಯಾಗಿ ನಿರೂಪಿಸಿದ ಬಗೆ ಬಹಳ ಸೊಗಸಾಗಿದೆ ಮೇಡಂ.

  6. Padmini Hegade says:

    ಹಬ್ಬದಾಚರಣೆಗಳಿಗೆ ತಾತ್ವಿಕ ಹಿನ್ನೆಲೆ ಇದ್ದರೂ ಆಚರಣೆಯನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ಅರ್ಥೈಸಿಕೊಳ್ಳಬಹುದು ಎನ್ನುವ ನಿರೂಪಣೆ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: