ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 19
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಬಯೋ ಕೆಮಿಸ್ಟ್ರಿಯಲ್ಲಿ 1939ರಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಕಮಲ ಸೋಹನಿ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪ್ರಪ್ರಥಮ ಸಂಶೋಧನಾ ವಿದ್ಯಾರ್ಥಿನಿಯಾಗಿ ಆಯ್ಕೆಯಾದದ್ದು ಇವರ ಹೆಗ್ಗಳಿಕೆ. ಭಾರತೀಯ ಬಡಜನರ ಆಹಾರವಾದ ಬೇಳೆ, ಅಕ್ಕಿ ಮತ್ತಿತರ ಆಹಾರಾಂಶಗಳ ಪ್ರಮಾಣ ಮತ್ತು ಜೀವಸತ್ವಗಳ ಮೌಲ್ಯವನ್ನು ಅಧ್ಯಯನ ಮಾಡಿದುದು, ಇವರ ವಿಶೇಷತೆ. 1912ರಲ್ಲಿ ಮಧ್ಯಪ್ರದೇಶದಲ್ಲಿ ಜನಿಸಿ 1933ರಲ್ಲಿ ರಸಾಯನಶಾಸ್ತ್ರ, ಭೌತಶಾಸ್ತ್ರಗಳಲ್ಲಿ ಬಿ.ಎಸ್.ಸಿ. ಪದವಿಯನ್ನು ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಪಡೆದ ಕಮಲ ಸೊಹಾನಿಯವರ ವಿಶೇಷ ಸಂಶೋಧನೆ ತಾಳೆ ಹಣ್ಣಿನಿಂದ ಪಡೆಯುವ ಸಾರದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇವೆ ಎಂಬುದು. ಆ ಸಾರವೇ ಈಗ “ನೀರಾ” ಎಂದು ಪ್ರಸಿದ್ಧಿಯನ್ನು ಪಡೆದಿದೆ.
ಸಿ. ವಿ. ರಾಮನ್ ತಮ್ಮ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್” ಸಂಸ್ಥೆಯಲ್ಲಿ ಮಹಿಳೆಯರಿಗೆ ವಿದ್ಯಾರ್ಥಿನಿಯರಾಗಲು ಪ್ರವೇಶ ಕೊಡುತ್ತಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಅವರು ಗಂಭೀರವಾಗಿ ಅಧ್ಯಯನ ಮಾಡುವುದಿಲ್ಲ, ಮಾಡುವವರನ್ನು ದಾರಿ ತಪ್ಪಿಸುತ್ತಾರೆ ಎಂಬುದು ಆಗಿತ್ತು. ಕಮಲ ತಮಗೆ ಪ್ರವೇಶ ನೀಡಲೇ ಬೇಕೆಂದು ಸತ್ಯಾಗ್ರಹ ಹೂಡಿದರು. ಅದಕ್ಕೆ ತಲೆಬಾಗಲೇ ಬೇಕಾಗಿ ಬಂದ ರಾಮನ್ ಅವರು ಕಮಲ ಅವರನ್ನು ತಾತ್ಕಾಲಿಕ ವಿದ್ಯಾರ್ಥಿನಿಯಾಗಿ ಸ್ವೀಕರಿಸಿದುದು, ಅನಂತರ ಅವರನ್ನು ಪೂರ್ಣಕಾಲಿಕ ವಿದ್ಯಾರ್ಥಿನಿಯಾಗಿ ಪರಿಗಣಿಸಿದುದು ಮತ್ತು ಮುಂದೆ ಸ್ತ್ರೀಯರಿಗೆ ಸಂಶೋಧಕ ವಿದ್ಯಾರ್ಥಿನಿಯರಾಗಲು ಅಲ್ಲಿ ಪ್ರವೇಶ ದೊರೆಯುವಂತಾದದ್ದು ಸಹ ಕಮಲ ಅವರ ಹೆಗ್ಗಳಿಕೆಯೇ.
1936ರಲ್ಲಿ ಐ.ಐ.ಎಸ್.ಸಿ.ಯಲ್ಲಿ ಎಂ.ಎಸ್.ಸಿ. ಪದವಿ ಪಡೆದ ಕಮಲ ಅವರಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಡಾ. ಡೆರೆಕ್ ರಿಚರ್ ಅವರ ಮಾರ್ಗದರ್ಶನದಲ್ಲಿ ಫ್ರೆಡೆರಿಕ್ ಜಿ. ಹಾಕಿನ್ಸ್ ಪ್ರಯೋಗಶಾಲೆಯಲ್ಲಿ ಅಧ್ಯಯನ ಮಾಡುವ ಅವಕಾಶ ದೊರೆಯಿತು. ಅಲ್ಲಿ ಸಸ್ಯಗಳ ಅಂಗಾಂಶಗಳನ್ನು ಕುರಿತು ಅಧ್ಯಯನ ಮಾಡಿದರು. ಆಲೂಗೆಡ್ಡೆಗಳಲ್ಲಿಯ ಅಂಗಾಂಶಗಳ ಅಧ್ಯಯನದಿಂದ ಸಸ್ಯಗಳು, ಪ್ರಾಣಿಗಳು ಮತ್ತು ಮನುಷ್ಯರ ಜೀವಕೋಶಗಳಲ್ಲಿಯ ಎಲೆಕ್ಟ್ರಾನ್ ಗಳ ಸಾಗಾಣಿಕೆ ಪ್ರಕ್ರಿಯೆಯಲ್ಲಿ ಅತ್ಯಾವಶ್ಯಕ ಪಾತ್ರವನ್ನು ವಹಿಸುವ ಸೈಟೋಕ್ರೋಮ್ –ಸಿ ಎಂಬ ಕಿಣ್ವವನ್ನು (ಎನ್‌ಜೈಮ್) ಶೋಧಿಸಿದರು. ಈ ಶೋಧಕ್ಕೆ 1939ರಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆದು ಭಾರತಕ್ಕೆ ಹಿಂತಿರುಗಿ ದೆಹಲಿಯ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಅನಂತರ ಕೂನೂರಿನ ನ್ಯೂಟ್ರಿಷನ್ ರಿಸರ್ಚ್ ಪ್ರಯೋಗಾಲಯದಲ್ಲಿ ಸಹಾಯಕ ನಿರ್ದೇಶಕರಾದರು. ವಿಟಮಿನ್‌ಗಳ ಪಾತ್ರವನ್ನು ಅಧ್ಯಯನ ಮಾಡಿ ಆರೋಗ್ಯ ಕ್ಷೇತ್ರಕ್ಕೆ ಗಣನೀಯ ಕೊಡಿಗೆಯನ್ನು ನೀಡಿದರು.
ಕ್ಯಾನ್ಸರ್‌ಗೂ ವೈರಾಣುಗಳಿಗೂ ಇರುವ ಸಂಬಂಧವನ್ನು ಸಂಶೋಧಿಸಿದ ಬಯೋಮೆಡಿಕಲ್ ಸಂಶೋಧಕಿ ಕಮಲ್ ಜಯಸಿಂಗ್ ರಣದಿವೆ ಜನಿಸಿದುದು 1917ರಲ್ಲಿ. ಇವರು ವೈದ್ಯಕೀಯ ಶಾಸ್ತ್ರದ ಬದಲಿಗೆ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳನ್ನು ಆಯ್ಕೆ ಮಾಡಿಕೊಂಡು 1934ರಲ್ಲಿ ಫರ್ಗ್ಯುಸನ್ ಕಾಲೇಜಿನಲ್ಲಿ ಪದವೀಧರರಾದರು. ಪುಣೆಯ ಅಗ್ರಿಕಲ್ಚರ್ ಕಾಲೇಜಿನಲ್ಲಿ 1943ರಲ್ಲಿ ಟ್ರಾಪಿಕಲ್ ಮರ ಗಿಡಗಳ ಆನುವಂಶೀಯತೆಯನ್ನು ವಿಶೇಷ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಸ್ನಾತಕೋತ್ತರ ಪದವಿಯನ್ನು ಪಡೆದು ಬಾಂಬೆಯ ಟಾಟಾ ಮೆಮೋರಿಯಲ್ ಹಾಸ್ಪಿಟಲಿನಲ್ಲಿ ಕೆಲಸಮಾಡಲಾರಂಭಿಸಿದರು. ಇಲ್ಲಿ ಪಿ.ಹೆಚ್.ಡಿಗಾಗಿ ಅಧ್ಯಯನ ಮಾಡಿದರು. ಬ್ರೆಸ್ಟ್ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಮಾಡಿದ ಅಧ್ಯಯನದ ವರದಿಯನ್ನು 1945ರಲ್ಲಿ ಪ್ರಕಟಿಸಿದರು. ಅಂಗಾಂಶಗಳ ರಚನೆ, ಮಕ್ಕಳ ಪಡೆಯುವಿಕೆ, ಆನುವಂಶೀಯತೆ ಮುಂತಾದ ಸಂಗತಿಗಳು ಈ ಕ್ಯಾನ್ಸರಿಗೆ ಕಾರಣ ಎಂಬುದು ಅವರ ಶೋಧನೆಯಾಗಿತ್ತು. ಮಕ್ಕಳಲ್ಲಿ ಜೆನೆಟಿಕ್ ಮೂಲದ ಕ್ಯಾನ್ಸರ್ ಉಂಟಾಗುವಿಕೆಯನ್ನು ಮತ್ತು ರಕ್ತದ ಅಸಾಮಾನ್ಯ ಸ್ಥಿತಿಗಳನ್ನು ಸಹ ಅಧ್ಯಯನ ಮಾಡಿದ ಕಮಲ ಕೈಗೊಂಡ ಯೋಜನೆಗಳಲ್ಲಿ “ಇಮ್ಯುನೊ ಹೆಮಟಾಲಜಿ ಆಫ್ ಟ್ರೈಬಲ್ ಇನ್ಫಾಂಟ್ ಬ್ಲಡ್” ಅತ್ಯಂತ ಮಹತ್ವಪೂರ್ಣವಾದದ್ದು. ಆನುವಂಶೀಯತೆಯ ವಿಷಯದಲ್ಲಿಯೇ ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್. ಡಿ. ಪದವಿಯನ್ನು ಮತ್ತು ಅಮೆರಿಕನ್ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್ ಡಾಕ್ಟೊರೇಟ್ ಪದವಿಯನ್ನು ಪಡೆದ ಇವರು “ಇಂಡಿಯನ್ ವುಮೆನ್ ಸೈಂಟಿಸ್ಟ್ಸ್ ಅಸೋಸಿಯೇಷನ್”ನ ಸಂಸ್ಥಾಪಕ ಸದಸ್ಯರಾಗಿದ್ದರು. ಇವರು ಮಕ್ಕಳ ಮತ್ತು ಸ್ತ್ರೀಯರ ಕ್ಯಾನ್ಸರ್ ಕುರಿತ ಸಂಶೋಧನೆಯಲ್ಲಿ ಆಸಕ್ತರಾಗಿರುವ ಮಹಿಳೆಯರಿಗೆ ವಿಶೇಷವಾಗಿ ಸ್ಫೂರ್ತಿದಾಯಕರಾಗಿದ್ದಾರೆ.
1917ರಲ್ಲಿ ಜನಿಸಿದ ಬಾನೂ ಜೆಹಾಂಗೀರ್ ಕೊಯಾಜಿ ಸೇಂಟ್ ವಿನ್‌ಸೆಂಟ್ ಹುಡುಗರ ಶಾಲೆಯಲ್ಲಿ ಪ್ರವೇಶ ಪಡೆದು ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಪ್ರಪ್ರಥಮ ಹುಡುಗಿ. ಸೇಂಟ್ ಝೇವಿಯರ್ ಕಾಲೇಜಿನಲ್ಲಿ ಪ್ರಿ ಮೆಡಿಕಲ್ ಕೋರ್ಸನ್ನು ಪೂರ್ಣಗೊಳಿಸಿ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಮೆಡಿಸಿನ್ ಅಭ್ಯಾಸ ಮಾಡಿ ಗೈನಕಾಲಜಿಸ್ಟ್ ಆದರು. 1940ರಲ್ಲಿ ಗೈನಕಾಲಜಿಯಲ್ಲಿ ಎಂಡಿ ಪದವಿಯನ್ನು ಪಡೆದು ಖಾಸಗಿಯಾಗಿ ಸೇವಾ ಕಾರ್ಯವನ್ನು ಆರಂಭಿಸಿದರು. ಸರ್ದಾರ್ ಮೊದಲಿಯಾರ್ ಅವರ ಬೇಡಿಕೆಗೆ ಸ್ಪಂದಿಸಿ ಪುಣೆಯ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಹಾಸ್ಪಿಟಲಿನಲ್ಲಿ ಚೀಫ್ ಮೆಡಿಕಲ್ ಆಫೀಸರ್ ಆದರು. ಹಾಸ್ಪಿಟಲಿನಲ್ಲಿ ದೊರೆಯುವ ಆರೋಗ್ಯಸೇವೆಗಳನ್ನು ವಿಸ್ತರಿಸಿ ಜನರ ಆರೋಗ್ಯಭಾಗ್ಯಕ್ಕಾಗಿ ಶ್ರಮಿಸಿದರು.
ಮದ್ರಾಸಿನ ತೆಲುಗು ಮಾತೃಭಾಷೆಯ ಕುಟುಂಬದಲ್ಲಿ 1919ರಲ್ಲಿ ಜನಿಸಿದ ಅಯ್ಯಲ ಸೋಮಯಾಜುಲ ಲಲಿತ ವಿವಾಹವಾಗಿ ಮಗಳೊಬ್ಬಳನ್ನು ಪಡೆಯುತ್ತಿದ್ದಂತೆ ವಿಧವೆಯಾದರು. ನಂತರ ತಂದೆಯ ಪ್ರೋತ್ಸಾಹದಿಂದ ಸೆಕೆಂಡರಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಗಿಂಡಿಯ ಇಂಜನಿಯರಿಂಗ್ ಕಾಲೇಜಿನಲ್ಲಿ ಏಕಮಾತ್ರ ವಿದ್ಯಾರ್ಥಿನಿಯಾಗಿ ಅಭ್ಯಾಸ ಮಾಡಿ 1943ರಲ್ಲಿ ಭಾರತದ ಪ್ರಪ್ರಥಮ ಮಹಿಳಾ ಎಲೆಕ್ಟ್ರಿಕಲ್ ಇಂಜನಿಯರ್ ಆದರು. ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಶಿಮ್ಲಾದ “ಸೆಂಟ್ರಲ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್” ನಲ್ಲಿ ಕೆಲಸ ಮಾಡಿದರು. ಜಮಾಲ್‌ಪುರ್ ರೈಲ್ವೆ ವರ್ಕ್ ಶಾಪ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಗ ಹೊಗೆ ರಹಿತ ಓವನ್ ನ ಸಾಧ್ಯತೆಯನ್ನು ಸಂಶೋಧಿಸಿದುದು ಮತ್ತು ಎಲೆಕ್ಟ್ರಿಕಲ್ ಸಂಗೀತ ವಾದ್ಯವಾದ ಜೆಲೆಕ್ಟೊಮೀನಿಯಮ್ನ್ನು ಕಂಡುಹಿಡಿದದ್ದು ಅವರ ಇಂಜನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕನ್ನಡಿ.
“ಇಂಡಿಯನ್ ಗವರ್ನ್‌ಮೆಂಟ್ ಆಫೀಸ್ ಆಫ್ ಎಲೆಕ್ಟ್ರಿಕಲ್ ಕಮಿಷನರ್” ಕಚೇರಿಯಲ್ಲಿ ತಾಂತ್ರಿಕ ಸಹಾಯಕರಾಗಿದ್ದ ಲಲಿತ ಮುಂದೆ ಭಾಕ್ರ ನಂಗಲ್ ಅಣೆಕಟ್ಟೆಯ ನಿರ್ಮಾಣದ ಸಂದರ್ಭಲ್ಲಿ ಟ್ರಾನ್ಸ್‌ಮಿಷನ್ ಲೈನ್ಸ್‌ಗಳ ಮತ್ತು ಸಬ್‌ಸ್ಟೇಷನ್ ಲೇ ಔಟ್‌ಗಳ ವಿನ್ಯಾಸ ಮಾಡಿದರು ಎನ್ನುವುದು ಅವರ ಇಂಜನಿಯರಿಂಗ್ ಕಾರ್ಯ ಕುಶಲತೆಗೆ ದೊರೆತ ಅರ್ಹ ಮನ್ನಣೆ.
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=36446
(ಮುಂದುವರಿಯುವುದು)
-ಪದ್ಮಿನಿ ಹೆಗಡೆ
Informative
ಎಂದಿನಂತೆ…. ಲೇಖನ…ಓದಿಸಿಕಂಡು..ಹೋಯಿತು.. ಧನ್ಯವಾದಗಳು.. ಪದ್ಮಿನಿ..ಮೇಡಂ.
ಇದು ಭಾಗ -೧೯ ಎಂದು ಪ್ರಕಟ ಆಗಬೇಕಾಗಿತ್ತಲ್ಲವೇ ?
ಹೌದು,ಈಗ ಸರಿಪಡಿಸಲಾಗಿದೆ..ಧನ್ಯವಾದಗಳು
ಸೊಗಸಾದ ಸಂಗ್ರಹಯೋಗ್ಯ ಬರೆಹ.
ಅಬ್ಬ, ಮಹಿಳೆಯರ ಸಾಧನೆ ಹೆಮ್ಮೆ ಎನಿಸುತ್ತದೆ. Very informative. ಅಭಿನಂದನೆಗಳು ಪದ್ಮಿನಿ ಮೇಡಂ.