ಕುರ್ಚಿ ಕುತೂಹಲ !
ಅದೊಂದು ಹಳೆಯ ಕುರ್ಚಿ, ನನ್ನ ದೃಷ್ಟಿಯಲ್ಲಿ ಆ ಕುರ್ಚಿ ಅದ್ಭುತವೇ ಸರಿ. ನಾನು ನಿತ್ಯ ಆ ಮಾರ್ವಾಡಿ ಗಲ್ಲಿಯಿಂದ ಹೋಗಿ ಬರುವಾಗ ಕರಿಕಲ್ಲಿನ ಮನೆಯಂಗಳದಲ್ಲಿ ಆ ಕುರ್ಚಿ ಕಾಣುತಿತ್ತು. ಯಾಕೋ ಏನೋ ಆ ಕುರ್ಚಿಯ ಬಗ್ಗೆ ನನಗೆ ಕುತೂಹಲ ಮೂಡಿ ಅದರ ಬಗ್ಗೆ ಯೋಚನೆ ಶುರುವಾಗುತಿತ್ತು. ಆ ಕುರ್ಚಿ ಯಾವಾಗಲೂ ಖಾಲಿಯಾಗಿರದೆ ಅದರ ಮೇಲೊಬ್ಬ ವೃದ್ಧ ಕೂತಿರುತಿದ್ದ. ಆತನಿಗೂ ಕುರ್ಚಿಗೂ ಅವಿನಾಬಾವ ನಂಟಿತ್ತು.
ಆತನ ವಯಸ್ಸು ಸರಿ ಸುಮಾರು ನೂರರ ಆಸುಪಾಸು, ತೆಳ್ಳನೆಯ ದೇಹ ಬೊಕ್ಕು ತಲೆ, ಬಿಳಿಗಡ್ಡ , ಹೆಗಲ ಮೇಲೆ ಶಲ್ಯ ಹಾಕಿರುತಿದ್ದ. ಆತ ಇಷ್ಟು ವರ್ಷ ಬದುಕಿದ್ದೆ ಆಶ್ಚರ್ಯ ಅಂತ ಜನ ಆಗಾಗ ಮಾತಾಡುತಿದ್ದರು. ಆತನ ಜೊತೆ ಸಧ್ಯ ಮಗ ಸೊಸೆ ಇದ್ದಾರೆ. ಮೊಮ್ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತಿದ್ದಾರೆ.
ಅವನು ಮೂಲತಃ ಬಟ್ಟೆ ವ್ಯಾಪಾರಿ. ನಗರದ ಸೂಪರ್ ಮಾರ್ಕೆಟಿನ ಮಧ್ಯೆಭಾಗದಲ್ಲಿ ಸುಸಜ್ಜಿತ ಸ್ವಂತ ಬಟ್ಟೆ ಅಂಗಡಿ ಇದೆ. ಅದು ಯಾವಾಗಲೂ ಗಿರಾಕಿಗಳಿಂದ ತುಂಬಿರುತ್ತದೆ. ಆ ಅಂಗಡಿಯಲ್ಲಿ ಖರೀದಿಸುವ ಬಹುತೇಕರು ಹಳ್ಳಿಯ ಜನಾನೇ ಅಂತ ಹೇಳಬಹುದು. ಮದುವೆ ಸೀಜನ ಬಂದರೆ ಮುಗೀತು ಅಂಗಡಿಯಲ್ಲಿ ಕಾಲಿಡಲು ಕೂಡ ಜಾಗಾ ಇರುತಿರಲಿಲ್ಲ. ಯಾಕೆಂದರೆ ಆತನ ಅಂಗಡಿಯಲ್ಲಿ ಬಟ್ಟೆ ಖರೀದಿಸಿದರೆ ಬೆಲೆಯಲ್ಲಿ ಯಾವುದೇ ಮೋಸ ಆಗೋದಿಲ್ಲ, ಅನ್ನುವ ನಂಬಿಕೆ ಬೇರೂರಿತ್ತು .
ಆತ ಜೀವನ ಪೂರ್ತಿ ಬಟ್ಟೆ ವ್ಯಾಪಾರ ಮಾಡಿ ಸಾಕಷ್ಟು ಸಂಪಾದನೆಯೂ ಮಾಡಿದ್ದ .ಸಧ್ಯ ವಯಸ್ಸಿನ ಕಾರಣ ವ್ಯಾಪಾರದಲ್ಲಿ ಸಕ್ರಿಯವಾಗದೇ ಅದರ ಸಂಪೂರ್ಣ ಜವಾಬ್ದಾರಿ ಮಗ ಗೋಪಾಲನಿಗೆ ವಹಿಸಿ ಸಧ್ಯ ವಿಶ್ರಾಂತಿಗೆ ಶರಣಾಗಿದ್ದ. ಮನೆಯಂಗಳದ ಆ ಕುರ್ಚಿಯ ಮೇಲೆ ಕೂತು ಅತ್ತ ಇತ್ತ ಕಣ್ಣು ಹಾಯಿಸುತ್ತಾ ಹಿಂದಿನ ಜೀವನದ ಬಗ್ಗೆ ಬಹುಶಃ ಮೆಲುಕು ಹಾಕುತ್ತಾ ವಿಶ್ರಾಂತಿ ಪಡೆಯತಿದ್ದನೇನೋ ಅಂತ ಅನಿಸುತಿತ್ತು. ಓಲ್ಡ ಮ್ಯಾನ ಓಲ್ಡ ಕುರ್ಚಿ ಅಂತ ಎಷ್ಟೋ ಸಾರಿ ಯೋಚಿಸುತಿದ್ದೆ.
ಆತ ಕೂಡುವ ಕುರ್ಚಿ ಹೆಚ್ಚು ಕಡಿಮೆ ಆತನ ವಯಸ್ಸಿನಷ್ಟೇ ಹಳೆಯದಿರಬಹುದು ಆದರೆ ಅದು ತನ್ನ ಹೊಳಪು ಕಳೆದುಕೊಳ್ಳದೆ ಇನ್ನೂ ಹೊಚ್ಚ ಹೊಸದರಂತೆ ಕಾಣುತಿತ್ತು. ಕುರ್ಚಿ ನಿರ್ಜೀವ ವಸ್ತು ಅದಕ್ಕೆ ಇನ್ನೂಗಟ್ಟಿಯಾಗಿದೆ.ಒಂದು ವೇಳೆ ಅದಕ್ಕೇನಾದರು ಜೀವ ಇದ್ದಿದ್ದರೆ ಇಷ್ಟು ಹೊತ್ತಿಗೆ ಇವನಂತೆ ಸವೆದು ಹೋಗುತಿತ್ತೇನೋ ಅನ್ನುವ ಯೋಚನೆಯೂ ಮೂಡುತಿತ್ತು. ಇಂದಿನ ಅಧುನಿಕ ಕುರ್ಚಿಗಳಿಗೆ ಹೋಲಿಸಿದರೆ ಅದು ಆಕಾರ ಮತ್ತು ಆಕರ್ಷಣೆಯಲ್ಲಿ ಭಿನ್ನವಾಗೇ ಕಾಣುತಿತ್ತು. ಅಂತಹ ಕುರ್ಚಿ ಸಧ್ಯ ಅಪರೂಪ. ಅಪ್ಪಟ ಸಾಗುವಾನಿ ಕಟ್ಟೆಗೆಯ ಆ ಕುರ್ಚಿಯ ಮೇಲೆ ಚಿತ್ರ ವಿಚಿತ್ರ ಕರಕುಶಲ ಕೆತ್ತನೆ ಮಾಡಲಾಗಿತ್ತು. ಅದು ಯಾರೋ ಕುಶಲ ಕರ್ಮಿಯ ಕಲೆಯಿಂದ ರೂಪ ಪಡೆದದ್ದು ಅನ್ನುವದು ಸ್ಪಷ್ಟವಾಗಿ ಕಾಣುತಿತ್ತು. ಕುರ್ಚಿ ಮೇಲೆ ಆರಾಮಾಗಿ ಕುಳಿತುಕೊಂಡು ಹೇಗೆ ಬೇಕೋ ಹಾಗೆ ಹಿಗ್ಗಿಸಲು, ಕುಗ್ಗಿಸಲು ಕೂಡ ಅನುಕೂಲವಾಗಿತ್ತು. ಒಮ್ಮೊಮ್ಮೆ ಅದರ ಮೇಲೆ ನಿದ್ದೆಗೂ ಜಾರಬಹುದಿತ್ತು.
ಹೆಂಡತಿ ತೀರಿ ಹೋದ ಮೇಲೆ ಆತನಿಗೆ ಸೊಸೆಯೇ ಆಸರೆಯಾಗಿದ್ದಳು. ಮಾವನ ಊಟ ತಿಂಡಿ ಬೇಕು ಬೇಡ ಎಲ್ಲವೂ ಅವಳೇ ಪೂರೈಸಿ ಆರೋಗ್ಯದ ಕಡೆಗೂ ಗಮನ ಹರಿಸುತಿದ್ದಳು. ಗೋಪಾಲನಿಗೆ ವ್ಯಾಪಾರದಲ್ಲಿ ಪುರುಸೊತ್ತೇ ಸಿಗುತಿರಲಿಲ್ಲ. ಆತ ಮುಂಜಾನೆ ಅಂಗಡಿಗೆ ಹೋದರೆ ತಡ ರಾತ್ರಿಯೇ ಮನೆಗೆ ಬರುತ್ತಿದ್ದ. ಬಂದ ಮೇಲೆ ಇವನ ಯೋಗಕ್ಷೇಮ ಊಟ ತಿಂಡಿ ಬಗ್ಗೆ ವಿಚಾರಿಸಿ ಮಲಗುವ ಸಮಯ ಆಗುತಿದ್ದಂತೆ ಆತನಿಗೆ ಕರೆದುಕೊಂಡು ಬಂದು ರೂಮಿನಲ್ಲಿ ಮಲಗಿಸುತಿದ್ದ. ಮತ್ತೆ ಮುಂಜಾನೆ ಆಗುತಿದ್ದಂತೆ ಅದೇ ಕುರ್ಚಿಯ ಮೇಲೆ ಕರೆತಂದು ಕೂಡಿಸುತಿದ್ದ.
ಆ ಪ್ರಕಾರದ ಕುರ್ಚಿ ನಾನು ಇದೇ ಮೊದಲ ಬಾರಿ ನೋಡಿದ್ದೆ. ಯಾವ ಫರ್ನಿಚರ್ ಅಂಗಡಿಯಲ್ಲೂ ಕಂಡಿರಲಿಲ್ಲ.ಸಭೆ ಸಮಾರಂಭ ಮತ್ತಿತರ ಕಡೆ ಹೋದಾಗ ಅಲ್ಲಿ ವಿವಿಧ ನಮೂನೆಯ ಕುರ್ಚಿಗಳು ಕಾಣುತಿದ್ದವು. ಆಗ ನನಗೆ ಮತ್ತೆ ಆ ಕುರ್ಚಿಯ ನೆನಪು ಬರುತಿತ್ತು. ಅಂತಹ ಕುರ್ಚಿ ಎಲ್ಲಿಯಾದರು ಇವೆಯೇ ? ಅಂತ ಕಣ್ಣು ಹಾಯಿಸುತಿದ್ದೆ, ಎಲ್ಲೂ ಕಾಣದಾದಾಗ ಅಂತಹ ಕುರ್ಚಿ ಎಲ್ಲಿಯೂ ಕಾಣೋದಿಲ್ಲವಲ್ಲ ಅಂತ ನಿಟ್ಟುಸಿರು ಬಿಡುತಿದ್ದೆ. ಓಲ್ಡ ಈಸ್ ಗೋಲ್ಡ್ ಅಂತ ಅದರ ವರ್ಣನೆ ತಂತಾನೇ ನನ್ನಿಂದ ಬಂದು ಬಿಡುತಿತ್ತು. ಅಂತಹ ಕುರ್ಚಿ ಈಗ ಯಾಕೆ ತಯಾರಾಗುತಿಲ್ಲ? ಅದರ ಬೇಡಿಕೆ ಏನಾದರೂ ಕಡಿಮೆಯಾಗಿದೆಯೇ? ಅಧುನಿಕ ಯುಗದಲ್ಲಿ ಅವುಗಳನ್ನು ಜನ ಇಷ್ಟ ಪಡೋದಿಲ್ಲವೇ ? ಕುರ್ಚಿ ತಯಾರು ಮಾಡುವ ಕುಶಲ ಕರ್ಮಿಗಳು ಇಲ್ಲವೇ?ಅದು ದುಬಾರಿ ಅಂತ ಖರೀದಿ ಮಾಡುವವರು ಯೋಚಿಸುತ್ತಾರೆಯೇ? ಅಂತ ಹತ್ತಾರು ಆಲೋಚನೆ ತಲೆಯಲ್ಲಿ ಸುಳಿದಾಡುತಿದ್ದವು.
ಅಂದು ಆ ಗಲ್ಲಿಯಿಂದ ಬರುವಾಗ ಮನೆಯಂಗಳದಲ್ಲಿನ ಆ ಕುರ್ಚಿ ಏಕಾಏಕಿ ಕಾಣೆಯಾಗಿದ್ದು ನೋಡಿ ನನಗೆ ಆಶ್ಚರ್ಯದ ಜೊತೆ ಗಾಬರಿಯೂ ಮೂಡಿಸಿತು. ಅರೇ ಆ ಕುರ್ಚಿ ಎಲ್ಲಿ ಹೋಯಿತು? ಎಷ್ಟೋ ವರ್ಷಗಳಿಂದ ಅದು ಜಾಗಾ ಬಿಟ್ಟು ಒಂದಿಂಚೂ ಕದಲಿರಲಿಲ್ಲ, ಕುರ್ಚಿನೂ ಇಲ್ಲ ಕುರ್ಚಿಯ ಮೇಲೆ ಕೂಡುವ ಆ ವೃದ್ಧನೂ ಇಲ್ಲ, ಕುರ್ಚಿ ಮನೆಯವರು ಬೇರೆ ಕಡೆ ಸ್ಥಳಾಂತರ ಮಾಡಿರಬೇಕೇ? ಯಾರಿಗೆ ಗೊತ್ತು ಆತನಿಗೆ ಮೊದಲೇ ವಯಸ್ಸಾಗಿತ್ತು ಅಂಥವರಿಗೆ ಕಾಯಿಲೆ ಸಹಜ ಆತನ ಆರೋಗ್ಯದಲ್ಲಿ ಏನಾದರೂ ಏರುಪೇರಾಗಿ ಆಸ್ಪತ್ರೆ ಸೇರಿರಬೇಕೇ? ಅನ್ನುವ ಪ್ರಶ್ನೆಗಳೂ ಮೂಡಿದವು.
ಒಂದಿನ ಗೋಪಾಲ ಕೇಶ ಮುಂಡನ ಮಾಡಿಕೊಂಡು ಮನೆಯಂಗಳದಲ್ಲಿ ತಿರುಗಾಡುವದು ಕಂಡು ಬಂದಾಗ ಆ ವೃದ್ಧ ಇಹಲೋಕ ತ್ಯಜಿಸಿರುವದು ಖಾತ್ರಿಯಾಯಿತು. ಹುಟ್ಟು ಆಕಸ್ಮಿಕ ಸಾವು ಖಚಿತ ಇದು ಜಗದ ನಿಯಮ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಅನ್ನುವ ಬೇಸರ ಮೂಡಿಸಿತು. ಆದರೆ ಕುರ್ಚಿ ಕುತೂಹಲ ಮಾತ್ರ ಹಾಗೇ ಮುಂದುವರೆಯಿತು.
ಅತ ತೀರ ಹೋದ ನಂತರ ಆತನ ಮನೆಗೆ ಮಾತಾನಾಡಿಸಲು ಬರುವವರ ಸಂಖ್ಯೆ ಹೆಚ್ಚಾಯಿತು. ಬೀಗರುನೆಂಟರು, ಪರಿಚಯಸ್ಥರು ಬಂದು ಹೋಗುತಿದ್ದರು. ಮನೆಗೆ ಜನ ಬರೋದ್ರಿಂದ ಗೋಪಾಲ ಬಟ್ಟೆ ಅಂಗಡಿ ಬಂದ ಮಾಡಿ ಕೆಲವು ದಿನ ಮನೆಯಲ್ಲೇ ಇರುತೊಡಗಿದ.
ನಿಮ್ಮಪ್ಪ ತೀರಿ ಹೋದ ಮೇಲೆ ಮನೆ ಭಣ ಭಣ ಅಂತಿದೆ. ಇನ್ನೂ ಸ್ವಲ್ಪ ಬದುಕಿದ್ದರೆ ಛೊಲೊ ಆಗ್ತಿತ್ತು ಅಂತ ಎಲ್ಲರೂ ಹಳಾಳಿಸಿದರು.
ಅವನ ಆಯುಷ್ಯ ಅಷ್ಟೇ ಇತ್ತು, ಅದು ಯಾರ ಕೈಯಾಗಿನ ಮಾತು ಆತ ತನ್ನ ಎಲ್ಲ ಕರ್ತವ್ಯ ಮಾಡಿ ಮುಗಿಸಿದ್ದಾನೆ ಅವನೇ ಛೊಲೊ ಇಷ್ಟು ವರ್ಷ ಬದುಕಿದ್ದ. ಈಗಿನ ಕಾಲದಲ್ಲಿ ಅವನ ಆಯುಷ್ಯ ಯಾರಿಗೆ ಸಿಗ್ತಾದೆ ಅಂತ ಕೆಲವರು ಸಮಜಾಯಿಷಿ ನೀಡಿದರು. ”ನಿಮ್ಮಪ್ಪನ ಕುರ್ಚಿ ಕಾಣಸ್ತಿಲ್ಲವಲ್ಲ ಅದು ಯಾವಾಗಲೂ ಅಂಗಳದಲ್ಲೇ ಇರುತಿತ್ತು” ಅಂತ ಸುಮಾರು ಜನ ಪ್ರಶ್ನಿಸಿದರು. ಅದು ನಮ್ಮ ಅಂಗಡಿಯಲ್ಲಿ ಕೆಲಸಾ ಮಾಡುವ ಹುಡಗ ಮಲ್ಲೇಶನಿಗೆ ಕೊಟ್ಟುಬಿಟ್ಟೆ ಅಂತ ಗೋಪಾಲ ಹೇಳಿದಾಗ
“ಅಯ್ಯೋ ಅದನ್ಯಾಕೆ ಕೊಟ್ಟೆ ಅಂತಹ ಕುರ್ಚಿ ಈಗ ಎಲ್ಲೂ ಸಿಗೋದಿಲ್ಲ ,ಅಂತಹ ಕರಕುಶಲ ಕುರ್ಚಿಗೆ ಇಂದು ಬೆಲೆ ಕಟ್ಟಲು ಸಾಧ್ಯವೇ ಇಲ್ಲ” ಅಂತ ಸುಮಾರು ಜನ ಗೋಪಾಲನಿಗೆ ಪ್ರಶ್ನಿಸುತಿದ್ದರು.
“ನನಗೂ ಆ ಕುರ್ಚಿ ಕೊಡುವ ಮನಸ್ಸಿರಲಿಲ್ಲ, ಆದರೆ ಏನ್ಮಾಡಲಿ ಅಪ್ಪ ತೀರಿ ಹೋದ ಮೇಲೆ ಆ ಖಾಲಿ ಕುರ್ಚಿ ನೋಡಿ ನನ್ನ ಮನಸ್ಸು ತಳಮಳವಾಯಿತು. ಅದು ಮನೆಯಲ್ಲಿದ್ದರೆ ಅಪ್ಪನ ನೆನಪು ಪದೇ ಪದೇ ಕಾಡಿ ನೋವು ಕೊಡುತ್ತದೆ ಅಂತ ಹೀಗೆ ಮಾಡಿದೆ” ಅಂತ ಹೇಳಿದಾಗ ಮೌನವಾಗಿ ತಲೆಯಾಡಿಸಿದ್ದರು.
ಕ್ರಮೇಣ ದಿನಗಳು ಉರುಳಿದಂತೆ ಆತನ ನೆನಪು ದೂರಾಗತೊಡಗಿತು. ಗೋಪಾಲ ಪುನಃ ಮೊದಲಿನಂತೆ ತನ್ನ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡ. ಸ್ವಲ್ಪ ದಿನದ ನಂತರ ಮಕ್ಕಳು ಓದು ಮುಗಿಸಿ ವಾಪಸ್ಸಾದರು. ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.
“ತಾತನ ಕುರ್ಚಿ ಎಲ್ಲಿ ? ಅಂತ ಅವರು ಬಂದ ಕೂಡಲೇ ಪ್ರಶ್ನಿಸಿದಾಗ ಅವರಿಗೂ ಗೋಪಾಲ ಕುರ್ಚಿಯ ವಾಸ್ತವ ಹೇಳಿದ. ಅಪ್ಪನ ಮಾತು ಇವರಿಗೆ ಬೇಸರ ಮೂಡಿಸಿ ಅದನ್ನು ಯಾಕೆ ಕೊಟ್ಟೆ? ಕೊಡಬಾರದಿತ್ತು. ಆ ಕುರ್ಚಿ ನೋಡಿ ತಾತನ ಕುರ್ಚಿ ಅಂತ ನಮಗೂ ಖುಷಿಯಾಗುತಿತ್ತು ಅದು ನಮ್ಮ ಮನೆಗೆ ಭಾರವಾಗುತಿತ್ತೇ ? ” ಅಂತ ಪ್ರಶ್ನಿಸಿದಾಗ ಮಕ್ಕಳ ಮಾತು ಗೋಪಾಲನಿಗೆ ಯೋಚಿಸುವಂತೆ ಮಾಡಿತು.
“ನನಗೂ ಅಪ್ಪನಂತೆ ಒಂದಿನ ವಯಸ್ಸಾಗುತ್ತದೆ ಆಗ ವ್ಯಾಪಾರ ಮುಂದುವರೆಸಲು ತೊಂದರೆಯಾಗಬಹುದು. ವ್ಯಾಪಾರವೇ ನಮ್ಮ ಮನೆತನದ ಪ್ರಮುಖ ಉದ್ಯೋಗ. ಮಕ್ಕಳಿಗೆ ಈಗಿನಿಂದಲೇ ವ್ಯಾಪಾರದ ಬಗ್ಗೆ ತಿಳುವಳಿಕೆ ಮೂಡಿಸಬೇಕು, ಅಂತ ಗೋಪಾಲ ತಾನು ಬೇರೆ ಕಡೆ ಹೋದಾಗಲೆಲ್ಲ ಮಕ್ಕಳಿಗೆ ಅಂಗಡಿಯಲ್ಲಿ ಕೂಡಿಸಿ ವ್ಯಾಪಾರದ ಬಗ್ಗೆ ತಿಳುವಳಿಕೆ ಮೂಡಿಸತೊಡಗಿದ.
ಒಂದೆರಡು ವರ್ಷ ಹಾಗೇ ಕಳೆದು ಹೋದವು. ಅಂದು ರಮೇಶ್ ಅಂಗಡಿಯಿಂದ ಮನೆಗೆ ಬರುವಾಗ ಒಂದು ಕುರ್ಚಿ ತೆಗೆದುಕೊಂಡು ಬಂದ ಅದು ಥೇಟ ತಾತನ ಕುರ್ಚಿಯಂತೆ ಕಾಣುತಿತ್ತು.
ಆ ಕುರ್ಚಿ ನೋಡಿ ಎಲ್ಲರೂ ಆಶ್ಚರ್ಯ ಚಕಿತರಾದರು. ಇದು ಎಲ್ಲಿಂದ ತೆಗೆದುಕೊಂಡು ಬಂದೆ ಥೇಟ್ ನಿಮ್ಮ ತಾತನ ಕುರ್ಚಿಯಂತೆ ಇದೆ ಅಂತ ಪ್ರಶ್ನಿಸಿದಾಗ ಇದನ್ನು ಹತ್ತು ಸಾವಿರ ಕೊಟ್ಟು ಖರೀದಿಸಿ ತಂದೆ ಅಂತ ಉತ್ತರಿಸಿದ . ರೊಕ್ಕ ಹೋದರೂ ಪರವಾಗಿಲ್ಲ ಇದು ತಂದಿದ್ದು ಛೊಲೊ ಮಾಡಿದೆ ನಮಗೂ ಖುಷಿಯಾಯಿತು. ಕಳೆದುಕೊಂಡ ವಸ್ತುವೇ ಸಿಕ್ಕಂತಾಯಿತು. ಅಂತ ಎಲ್ಲರೂ ಪ್ರಶಂಸಿಸಿ ಖುಷಿ ಹೊರಹಾಕಿದರು.
ಅದನ್ನು ಮೊದಲಿನ ಜಾಗದಲ್ಲೇ ಹಾಕಿ ಗೋಪಾಲ ಕುರ್ಚಿಯ ಮೇಲೆ ಕುಳಿತುಕೊಂಡು ಹ್ಞಾಂ ಇದು ಅಪ್ಪನ ಕುರ್ಚಿಯಂತೆ ಇದೆ ಯಾವುದೂ ಬದಲಿಲ್ಲ ಅಂತ ಹೇಳಿ ಮುಗ್ಳನಗೆ ಬೀರಿದ. ನೀವು ಈ ಕುರ್ಚಿ ಮೇಲೆ ಕುಳಿತು ಥೇಟ ಮಾವನಂತೆ ಕಾಣಸ್ತಿದ್ದೀರಿ ಅಂತ ಹೆಂಡತಿ ವರ್ಣನೆ ಮಾಡಿದಾಗ ಗೋಪಾಲ ಮತ್ತಷ್ಟು ಉಬ್ಬಿ ಹೋದ. ಅಪ್ಪ ನಿಜವಾಗಿಯೂ ತಾತನಂತೆ ಕಾಣಸ್ತಿದ್ದಾರೆ ಅಂತ ಮಕ್ಕಳು ಕೂಡ ಖುಷಿ ಹೊರಹಾಕಿ ದನಿಗೂಡಿಸಿದರು. ನಾನು ಒಂದಿನ ನಿಮ್ಮ ತಾತನಂತೆ ಆಗುತ್ತೇನೆ ಆಗ ನಿಮ್ಮ ಮಕ್ಕಳು ತಾತನ ಕುರ್ಚಿ ಅಂತ ಹೆಮ್ಮೆ ಪಡುತ್ತಾರೆ ಅಂತ ಗೋಪಾಲ ಹಾಸ್ಯ ಚಟಾಕಿ ಹಾರಿಸಿದ. ಆತನ ಮಾತು ಎಲ್ಲರಿಗೂ ನಗೆಗಡಲಲ್ಲಿ ಮುಳುಗಿಸಿತು.
ಆ ಸಮಯ ಅಲ್ಲೇ ನಿಂತಿದ್ದ ಮಲ್ಲೇಶನ ಮನಸ್ಸಿನಲ್ಲಿ ಒಂದು ರೀತಿಯ ಗೊಂದಲ ಮೂಡಿಸಿತು. ಇಂತಹ ಖುಷಿ ಸಮಯದಲ್ಲಿ ಈ ಕುರ್ಚಿ ರಹಸ್ಯ ಬಿಚ್ಚಿಟ್ಟರೆ ಎಲ್ಲರಿಗೂ ಬೇಸರ ತರಿಸಬಹುದು. ಇದು ಅವರದೇ ಹಳೆಯ ಕುರ್ಚಿ ಅಂತ ಹೇಗೆ ಹೇಳಲಿ? ಇದನ್ನು ನಾನೇ ಸೆಕೆಂಡ ಹ್ಯಾಂಡ ವಸ್ತು ಮಾರುವ ಅಂಗಡಿಗೆ ಮಾರಾಟ ಮಾಡಿದ್ದೆ ಅಂತ ಯೋಚಿಸಿ ಮುಗ್ಳನಗೆ ಬೀರುತ್ತಾ ಈ ವಿಷಯ ಗೊತ್ತಾಗೋದು ಬೇಡ ಗೊತ್ತಾದರೆ ನನ್ನ ಕೆಲಸಕ್ಕೆ ಕುತ್ತು ಅಂತ ಮೆಲ್ಲಗೆ ಅಲ್ಲಿಂದ ಜಾಗಾ ಖಾಲಿ ಮಾಡಿ ಹೊರಟು ಹೋದ .!!
-ಶರಣಗೌಡ ಬಿ ಪಾಟೀಲ ತಿಳಗೂಳ, ಕಲಬುರಗಿ.
ವಿಶೇಷವಾದ ಕುರ್ಚಿ, ಅದರೊಂದಿಗೆ ಬೆಸೆದುಕೊಂಡ ತಾತನ ನೆನಪು, ಅದು ಸ್ವಸ್ಥಾನ ಸೇರಿದ ಬಗೆ ಎಲ್ಲವೂ ಖುಷಿ ಕೊಟ್ಟಿತು…ಕಥೆಯ ನಿರೂಪಣೆ ಸಹಜವಾಗಿ ಮೂಡಿಬಂದಿದೆ.
ಪುಟ್ಟ..ಚೌಕಟ್ಟಿನ ಲ್ಲಿ..ಅಡಗಿ..ಸೊಗಸಾದ..ನಿರೂಪಣೆಯ.. ಕಥೆ.. ಧನ್ಯವಾದಗಳು ..ಸಾರ್.
ಚೆನ್ನಾಗಿದೆ
ನಿರೂಪಣೆ ಸಹಜವಾಗಿದೆ.
ಸುಲಲಿತವಾಗಿ ಓದಿಸಿಕೊಂಡ ಮನಮುಟ್ಟುವ ಕಥೆ. ಅಭಿನಂದನೆಗಳು.