.
ಸುಮಾರು ಮೂವತ್ತು ಮೂವತ್ತೈದು ವರುಷಗಳ ಹಿಂದಿನ ಕಥೆಯಿದು …
.
ಅದೊಂದು ಶಾಲೆ,ಮುಳಿ (ಒಂದು ರೀತಿಯ ಹುಲ್ಲು) ಹಾಸಿದ ಶಾಲೆ, ಅಧ್ಯಾಪಕರು ಪಾಠ ಮಾಡುತ್ತಿರುವಾಗ ಮೇಲಿನಿಂದ ಕೆಲವೊಮ್ಮೆ ಕೇಳಿಸುವ ಚಿಕ್ಕ ಸದ್ದು .. !!! ಬೇರೇನಲ್ಲ .. ಬಿದಿರ (ಮೊಳೆ) ಕಂಬದ ಒಳಗೆ ಮನೆ ಮಾಡಿ ಹಾಯಾಗಿರುತ್ತಿದ್ದ ಮೂಷಿಕ ಕುಟುಂಬಕ್ಕೆ ಕೇರೆ ಹಾವಿನ ಆಗಮನ ..
ಹೆದರಿ ಅತ್ತಿತ್ತ ಓಡುತ್ತಿರುವ ಮೂಷಿಕ ಕುಟುಂಬ .. ಕೇರೆ ಹಾವಿಗೇನು ಗೊತ್ತು .. ಕೆಳಗೆ ವಿಧ್ಯಾರ್ಥಿಗಳೂ ಇದ್ದಾರೆ .. ನಾನೆಂದರೆ ಇವರಿಗೂ ಭಯ ಎನುವ ಸತ್ಯ .. ಒಂದೋ ಎರಡೋ ನಿಮಿಷ ಮೌನವಾಗಿ ಕೊನೆಗೆ ಪಾಠ ಮುಂದುವರಿಸುತ್ತಿದ್ದ ಅಧ್ಯಾಪಕರು .. ಆದರೆ ಮನಸ್ಸು ಪೂರಾ ಮೇಲ್ಚಾವಣಿಯತ್ತ .. ಎಷ್ಟು ಇಲಿಯನ್ನು ಹಿಡಿದಿರಬಹುದು ..?ಕಾಣೆಯಾದ ಕೇರೆ ಹಾವು ಇನ್ನೂ ಬರಬಹುದೇ … ?ಬಾಲ್ಯವೆಂದರೆ ಹೀಗೆ .. ಅನೇಕ ವಿಷಯಗಳ ಬಗ್ಗೆ ಕುತೂಹಲ .. ಜಿಜ್ಞಾಸೆ …
.
ಶಾಲೆಯಿಂದ ಹೊರಗಡೆ ಇಣುಕಿ ನೋಡಿದರೆ ಕೆಳಗಡೆ ಕುಂಜಿಮ್ಮ ಬ್ಯಾರ್ದಿಯ (ಬ್ಯಾರ್ದಿ ಅಂದರೆ ಮುಸ್ಲಿಂ ಮಹಿಳೆ) ಮುಳಿ ಹಾಸಿದ ಮನೆ .. ಮಕ್ಕಳಿಗೆ ನೀರು ಕುಡಿಯ ಬೇಕಾದರೆ ಕುಂಜಿಮ್ಮ ಬ್ಯಾರ್ದಿ ಕರುಣೆ ತೋರಿಸಬೇಕು . ಆನೆಕಾಲು ರೋಗದಿಂದ ಬಳಲುತ್ತಿದ್ದ ಆ ವಿಧವೆ.. ವಿಧ್ಯಾರ್ಥಿಗಳಿಗೆ ಅಚ್ಚು ಮೆಚ್ಚು .. ಅವರಿಗೂ ಕೂಡಾ ಅಷ್ಟೇ .. ಆ ಬ್ಯಾರ್ದಿಯವರ ಮನೆಯ ಬೇಲಿಯಲ್ಲಿ ಒಂದು ಬಳ್ಳಿ .. ಅದರಲ್ಲಿ ತುಂಬಾ ಕಾಯಿಗಳು .. ಯಾವುದು ಗೊತ್ತೇ .. ಗುಲಗಂಜಿ .. ಬಳ್ಳಿಯಿಂದ ಬೇರ್ಪಡಿಸಿ ಚಡ್ಡಿಯ ಜೇಬಿನಲ್ಲಿ ತುರುಕಿಸುವುದು ರೂಢಿ. ಅದಕ್ಕೆ ಕಾರಣವೂ ಇದೆ. .
ಮಕ್ಕಳ ನಡುವೆ ಒಂದು ನಂಬಿಕೆ ….90 % ಕೆಂಪು ಬಣ್ಣದಿಂದ ಆವೃತವಾಗಿರುವ ಗುಲಗಂಜಿ ಬೀಜ. ಕೇವಲ 10 % ಮಾತ್ರ ಕಪ್ಪು ಬಣ್ಣ .. ಯಾಕೆ ಗೊತ್ತೇ .. ಮೊದಲು ಗುಲಗಂಜಿಯ ಬಣ್ಣ ಕಪ್ಪಾಗಿಯೇ ಇದ್ದಿತ್ತಂತೆ … ಕೆಂಪು ಬಣ್ಣ ಯಾವತ್ತು ಇಡೀ ಬೀಜವನ್ನು ಆವರಿಸುತ್ತದೋ … ಅಂದು ಪ್ರಳಯ .. ಅಂದರೆ ಕೇವಲ ಕೆಲವೇ ವರ್ಷಗಳು ಬಾಕಿ ಅಷ್ಟೇ .. ದಿನ ಬೆಳಗಾದರೆ ತೆಗೆದಿಟ್ಟ ಗುಲಗಂಜಿಯನ್ನು ತೆಗೆದು ಭಯ ಮಿಶ್ರಿತ ಕುತೂಹಲದಲ್ಲಿ ನೋಡುವ ಎಳೆ ಮನಸ್ಸು .. ಸದ್ಯ .. ಇನ್ನೂ ಪೂರಾ ಬಣ್ಣ ಕೆಂಪಾಗಿಲ್ಲ .. !!!
ಶಾಲೆಯ ಪಕ್ಕದಲ್ಲಿ ಚಿಕ್ಕ ಮೈದಾನ .. ಮೇಲ್ಗಡೆ ಗುಡ್ಡೆ .. ಗುಡ್ಡೆಯ ಬದಿಯಲ್ಲಿ ಮಂಜಟ್ಟಿ ಮರ. ಮರದಿಂದ ಉದುರಿ ಬೀಳುವ ಕೆಂಪು ಬಣ್ಣದ ಬೀಜಗಳು (ಕೆಂಪುಕಾಯಿಗಳನ್ನು ಚೆನ್ನೆಮಣೆ ಆಟದಲ್ಲಿ ಉಪಯೋಗಿಸುತ್ತಾರೆ ಆದ್ದರಿಂದ ‘ಚೆನ್ನೆಕಾಯಿ’ ಎಂಬ ಹೆಸರೂ ಇದೆ . ಇಂಗ್ಲೀಷ್ ನಲ್ಲಿ Lucky red seeds ಎನ್ನುತ್ತಾರೆ) ಕಲ್ಲಿನಲ್ಲಿ ಅದನ್ನು ಗುದ್ದಿ ಪುಡಿಮಾಡಿದಾಗ ತೊಗಟೆಯ ಒಳಗೆ ಸಿಗುವ ಹಳದಿ ಬೀಜಕ್ಕೆ ಒಂಥರಾ ರುಚಿ .. ಆದರೆ ಮನೆಗೆ ಬಂದು ತಿನ್ನೋ ಹಾಗಿಲ್ಲ . ಪಿತ್ತ ಜಾಸ್ತಿ ಆಗುತ್ತೆ ಎಂದು ತಿನ್ನೋಕ್ಕೆ ಬಿಡುತ್ತಿರಲಿಲ್ಲ . .
ಅಂದ ಹಾಗೆ ಈ ಮಂಜಟ್ಟಿ ಕಾಯಿ/ಬೀಜದ ಬಗ್ಗೆ ಒಂದು ಐತಿಹ್ಯವಿದೆ .. ದೂರದ ಕೇರಳದ ತ್ರಿಶೂರ್ ನಲ್ಲಿ ಗುರುವಾಯೂರ್ ಕ್ಷೇತ್ರವಿದೆ .. ಅಲ್ಲಿ ಅಂಗಳದಲ್ಲಿ ಇಂದೂ ಮಂಜಟ್ಟಿ ಮರಗಳಿವೆ .. ಇದರ ಬಗ್ಗೆ ಪ್ರಚಲಿತವಾಗಿರುವ ಒಂದು ಕಥೆ ಹೇಳುತ್ತೇನೆ .. .
ಆ ಊರಿನಲ್ಲಿ ಒಬ್ಬರು ಶ್ರೀ ಕೃಷ್ಣನ ಭಕ್ತೆ .. ಹಣ್ಣು ಮುದುಕಿ.ತೀರಾ ಬಡತನದಲ್ಲಿದ್ದ ಈ ಅಜ್ಜಿ ಕಾಣಿಕೆ ಕೊಡಲೆಂದು ತುಂಬಾ ಮಂಜಟ್ಟಿ ಬೀಜವನ್ನು ಶೇಖರಿಸಿ ಇಟ್ಟಿದ್ದಳು .. ಆದರೆ ಕಾಣಿಕೆ ಕೊಡಲೆಂದು ಅಲ್ಲಿಗೆ ತೆರಳಿದ ಆ ಭಕ್ತೆಯನ್ನು ಅಲ್ಲಿನ ಜನರು ಅವಮಾನಿಸಿ ಚೀಲದಲ್ಲಿದ್ದ ಬೀಜವನ್ನು ದೇವಳದ ಅಂಗಳದಲ್ಲಿ ಎಸೆದರು ..ಅಜ್ಜಿ ನೋವಿನಿಂದ ಅಲ್ಲೇ ಕುಳಿತು ರೋಧಿಸುತ್ತಿದ್ದಳು. .
ಅಂದೇ ಅಲ್ಲಿಗೆ ರಾಜ ಬರುವವನಿದ್ದನು.. ಗಜವೇರಿ ಬಂದ ರಾಜ .. ಕ್ಷೇತ್ರ ತಲುಪುತ್ತಿದ್ದಂತೆ ರಾಜನ ಆನೆ ಮದವೇರಿ ಇಡೀ ಪರಿಸರವನ್ನು ನಾಶಮಾಡಲು ತೊಡಗಿತಂತೆ .. ಆತಂಕಗೊಂಡ ರಾಜ ಶ್ರೀ ಕೃಷ್ಣನಲ್ಲಿ ಪರಿಹಾರ ಕೇಳುತ್ತಾನೆ ..
ಆಗ ಅಶರೀರವಾಣಿಯೊಂದು ಕೇಳಿಸುತ್ತದೆ ..ಎಲ್ಲಿ ಆ ಭಕ್ತೆ .. ಯಾಕೆ ನನ್ನ ಇಷ್ಟ ಕಾಣಿಕೆ ಮಂಜಟ್ಟಿಯನ್ನು ಎಸೆಯಲಾಯಿತು .. ?
ನಂತರ ಸೇರಿದ ಭಕ್ತರು ಹಾಗೂ ರಾಜನ ಸೇವಕರು ಸೇರಿ ಚಲ್ಲಾಪಿಲ್ಲಿಯಾಗಿದ್ದ ಬೀಜವನ್ನು ಒಟ್ಟು ಸೇರಿಸಿದರು .. ನಂತರವೇ ಮದವೇರಿದ ಆನೆ ಯಥಾಸ್ಥಿತಿಗೆ ತಲುಪಿದ್ದು ..ಇದು ಇತಿಹಾಸ ..ಎಲ್ಲಿಂದಲೋ ಪ್ರಾರಂಭಿಸಿ ಎಲ್ಲಿಗೋ ತಲುಪಿದೆ .. ಕ್ಷಮೆಯಿರಲಿ ..
.
ನಾನು ನನ್ನ ಅನುಭವಗಳನ್ನು ಮುಂದುವರಿಸುತ್ತೇನೆ .. ಆ ದಿನಗಳಲ್ಲಿ ಗುಡ್ದೆಗಾಡು ಪ್ರದೇಶದಲ್ಲಿ ತುಂಬಾ ವಿಧದ ಕಾಯಿಗಳು ಇರುತ್ತಿದ್ದುವು . ಇಂದೂ ಇರಬಹುದು ಆದರೂ ಇಂದಿನ ಮಕ್ಕಳಿಗೆ ಇದರ ಬಗ್ಗೆ ಹೆಚ್ಚಿನ ಅರಿವು ಅಥವಾ ಕುತೂಹಲ ಇರಲಿಕ್ಕೆ ಖಂಡಿತಾ ಸಾಧ್ಯವಿಲ್ಲ. ಹಣ್ಣು /ಕಾಯಿಗಳಲ್ಲಿ ಕುಂಟಲ ಹಣ್ಣು (blue berry), ಮಣಿ ಮುಂಡಲ, ಪುಚ್ಚೆ ಹಣ್ಣು, ಮಡಿಕೆ ಹಣ್ಣು, ಮುಳ್ಳು ಹಣ್ಣು .. (ಹೆಸರುಗಳು ಎಲ್ಲವೂ ಗ್ಯಾಮ್ಯ ಭಾಷೆಯಲ್ಲಿದೆ) ಮುಂತಾದ ಹಣ್ಣು ಗಳನ್ನೂ ಹೆಸರಿಸಬಹುದು. ಶಾಲೆಬಿಟ್ಟು ಬರುವಾಗ ಗುಡ್ಡ ಹತ್ತಿ ಬಾಯಿ ಚಪ್ಪರಿಸಿ ಬರುವ ದಿನಗಳು ಇದ್ದುವಲ್ಲಾ .. ಆಹಾ .. ಎಂತಹ ಸುಂದರವಾಗಿತ್ತು..
ಕುಂಟಲ ಮತ್ತು ನೇರಳೆ ಹಣ್ಣು ತಿಂದು ಮನೆಗೆ ಬಂದರೆ .. ಬೈಗುಳ .. ನಾಲಿಗೆಯೆಲ್ಲಾ ನೇರಳೆ ಬಣ್ಣಕ್ಕೆ ತಿರುಗುತ್ತಿತ್ತು .. ಆ ಬಣ್ಣವನ್ನು ಇಲ್ಲವಾಗಿಸಲು ಯಾವುದೋ ಕಾಡು ಗಿಡದ ಎಲೆಗಳನ್ನು ಜಗಿದು ತಿನ್ನುತ್ತಿದ್ದ ದಿನಗಳು.
.
ಅಂದು ರೋಗವೂ ಇರಲಿಲ್ಲ … ಡಾಕ್ಟರರೂ ನೊಣ ಓಡಿಸುತ್ತಿದ್ದರು … ಮಾನವನು ನಾಗರಿಕನಾದಂತೆ ಸೌಕರ್ಯಗಳೂ ಹೆಚ್ಚಾಯಿತು ..
ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತನೋ ಅಷ್ಟೇ ರೋಗಗಳೂ ಬರಲಾರಂಭಿಸಿದುವು …
.
ಬಿಳಿಬಣ್ಣದ ಅಂಗಿ .. ಟೈ .. ಶೂ .. ಧರಿಸಿ ಎಕ್ಸೆಕ್ಯೂಟಿವ್ ತರ ಶಾಲೆಗೆ ಹೋಗುವ ಇಂದಿನ ಮಕ್ಕಳು .. ಚಪ್ಪಲಿಯಿಲ್ಲದೆ ಸಿಕ್ಕ ಅಂಗಿ ಚಡ್ಡಿ ಹಾಕಿ ಓಡಿ ಶಾಲೆ ಸೇರುತ್ತಿದ್ದ ಆ ನಮ್ಮ ಕಾಲದ ಮಕ್ಕಳು ..ನಾಲ್ಕು ಗೋಡೆಗಳ ಮಧ್ಯೆ ಇದ್ದ ಕೊಠಡಿ ಅಲ್ಲ,ಇಡೀ ಪರಿಸರವೇ ನಮಗೆ ಪಾಠಶಾಲೆಯಾಗಿತ್ತು .. !!!
.
– ಕೆ. ಎ. ಎಂ. ಅನ್ಸಾರಿ ಮೂಡಂಬೈಲು.
.





ನೆನಪುಗಳನ್ನು ಕೆಲ ವರ್ಷ ಹಿಂದಕ್ಕೋಡಿಸಿತು ಬರಹ.. ಚೆನ್ನೆ ಬೀಜಗಳ ಆಟ ಅದೆಷ್ಟು ಮೋಡಿ ಮಾಡಿತ್ತೆಂದರೆ ಇಂದಿಗೂ ಚೆನ್ನೆ ಬೀಜಗಳು ಉದುರಿದ್ದರೆ ಹೆಕ್ಕಿ ಪೇರಿಸಿಡುತ್ತೇನೆ!
ಬಾಲ್ಯದ ಆಶಾಲಾದಿನಗಳು ನೆನಪಿಸಿದ ನಿಮಗೆ ಧನ್ಯವಾದಗಳು .
ಧನ್ಯವಾದಗಳು ತಮಗೂ ….