ನೀವು ಅಡಿಗೆ ಕೆಲಸ ಮಾಡ್ತೀರಾ?
ಮುಂಜಾನೆಯ ವಾಕಿಂಗಿಗೆಂದು ಗೇಟು ದಾಟಿದರೆ ಇಂಥದೇ, ಪಾರ್ಕ್, ಮೈದಾನ, ರಸ್ತೆ ಎಂದೇನೂ ಇಲ್ಲ. ಮುಖ್ಯ ರಸ್ತೆ, ಅಡ್ಡರಸ್ತೆ, ಅಡ್ಡಾದಿಡ್ಡಿ ರಸ್ತೆ, ಅಡ್ಡಾಡ್ಡ ರಸ್ತೆ, ಕಿರು ರಸ್ತೆ, ಕಳ್ಳರು ಓಡಿ ತಪ್ಪಿಸಿಕೊಳ್ಳುವ ತಿರುವು ಮುರುವಿನ ಹಾದಿ, ಓಣಿ ಓಣಿ ಹಾದು, ಗಲ್ಲಿ ಗಲ್ಲಿ ಬಿದ್ದು, ವಠಾರದ ರಸ್ತೆ, ಕೊಳಚೆ ಪ್ರದೇಶದ ಆಸುಪಾಸಿನ ರಸ್ತೆ, ಎಲ್ಲವೂ ಎಲ್ಲವೂ ನನ್ನ ವಾಕಿಂಗಿಗೆ ರಾಜಮಾರ್ಗವೆ. ಒಟ್ಟಿನಲ್ಲಿ,
ಪದವು ಚಿತ್ತ ಎಳೆದತ್ತ
ಪಾಯ ಹೊತ್ತೆಡೆಗೆ ಕಾಯ
‘ನಿಮ್ಮನ್ನು ಎಲ್ಲೋ ನೋಡ್ದಂಗಿದೆ. ನೀವು ಅಡಿಗೆ ಕೆಲಸಕ್ಕೆ ಹೋಗ್ತೀರಾ??’ ಎಡಕ್ಕೆ ಒಂದು ಮೂವತ್ತು ಡಿಗ್ರಿ, ಬಲಕ್ಕೆ ಮೂವತ್ತು ಡಿಗ್ರಿ ಲೋಲಕದಂತೆ ತೂಗಾಡ್ತಾ ಕಷ್ಟಪಟ್ಟು ಹೆಜ್ಜೆ ಹಾಕುತ್ತಾ ಎದುರಿಂದ ಬರುತ್ತಿದ್ದ ಸುಮಾರು 68-70 ರ ಆಸುಪಾಸಿನ
ಸ್ಥೂಲಕಾಯದ ಹೆಂಗಸೊಬ್ಬರು ಗತ್ತಿನಿಂದ ಪ್ರಶ್ನಿಸಿದಾಗ, ಯಾರಿಗೆ ಕೇಳುತ್ತಿದ್ದಾರೆ ಎಂದು ಅಕ್ಕ ಪಕ್ಕ ಹಿಂದೆ ಎಲ್ಲಾ ಕಡೆ ಗರಗರ ತಿರುಗಿ ತಿರುಗಿ ನೋಡಿದೆ. ನನ್ನನ್ನು ಬಿಟ್ಟು ಮತ್ಯಾರೂ ಕಾಣಲಿಲ್ಲ.
‘ನಿಮಗೇ ಕೇಳಿದ್ದು. ನೀವು ಅಡುಗೆ ಕೆಲಸ ಮಾಡ್ಕೊಂಡಿದೀರಾ??’ ಎಂದು ನನ್ನನ್ನೇ ಸ್ವಲ್ಪ ಅಹಂಕಾರದಿಂದ ಪ್ರಶ್ನಿಸಿದರು.
ತಬ್ಬಿಬ್ಬಾದರೂ ತಮಾಷೆ ಎನಿಸಿ, ‘ಹೌದು’ ಎಂದೆ.
”ಎಷ್ಟು ಮನೆಲಿ ಮಾಡ್ತೀರಾ?”
‘ಒಂದೇ ಮನೆಲಿ’
”ಒಂದೇ ಮನೆಲಿ ಮಾಡೋ ಅಡುಗೆ ಕೆಲಸದಿಂದ ನಿಮ್ಮ ಹೊಟ್ಟೆಬಟ್ಟೆಗೆ ಸಾಲುತ್ತಾ?”
‘ಹೂಂ. ಈ ವಯಸ್ನಲ್ಲಿ ಇನ್ನೆಷ್ಟ್ ಮನೆ ಅಡುಗೆ ಮಾಡೋಕಾಗುತ್ತೆ?’
”ಹಾಗನ್ಬೇಡಿ. ವಯಸ್ಸಾಗಿದ್ರೂ ನೀವಿನ್ನೂ ಕಡಿದ್ರೆ ಮೂರಾಳಾಗೋ ಅಷ್ಟು ಗಟ್ಯಾಗಿದೀರಿ. ನಾಲ್ಕು ಮನೆ ಅಡಿಗೆನೂ ನಿಭಾಯಿಸೊ ಶಕ್ತಿ ಇದೆ ನಿಮಗೆ”
ಆಹಾ! ಇವರ ಉಪಮೆಯೇ?! ನನ್ನನ್ಯಾಕ್ ಕಡಿದು ಮೂರಾಳು ಮಾಡಬೇಕು ಎಂದು ಉಕ್ಕಿ ಬಂದ ನಗುವನ್ನು
ಅದುಮಿಕೊಂಡು ನುಡಿದೆ, ‘ಇರಬೌದು. ಆದ್ರೆ ಸಾಕು ಅಂತ ಒಂದೇ ಮನೆ ಕೆಲ್ಸ ಮಾಡೋದು’
”ನಿಮ್ಮನ್ನೆಲ್ಲೋ ನೋಡ್ದ್ಹಂಗಿದೆ. ಎಷ್ಟ್ ಜನಕ್ಕೆ ಅಡಿಗೆ ಮಾಡ್ಬೇಕು?”
‘ಇಬ್ಬರಿಗೆ ಅಷ್ಟೆ. ತೀರ ಅಪರೂಪಕ್ಕೆ ಮನೆಗೆ ಯಾರಾದ್ರೂ ಬಂದ್ರೆ ಆಗ ಒಂದಿಷ್ಟು ಹೆಚ್ಗೆ ಕೆಲಸ ಆಗುತ್ತೆ ಅಷ್ಟೆ’
”ಅಡಿಗೆ ಮಾಡೋರ ಮನೆಲಿ ಯಾರ್ಯಾರಿದಾರೆ?” ಅಡೆ ತಡೆಯಿಲ್ಲದೆ ಪ್ರಶ್ನೆಗಳು ಪುಂಖಾನುಪುಂಖವಾಗಿ ನುಗ್ಗಿಬರುತ್ತಿದ್ದವು.
‘ತಾಯಿ ಮಗ ಇಬ್ರೇ. ಇನ್ನೊಬ್ಬ ಬೇರೆ ಊರಲ್ಲಿದಾನೆ.’
”ಸೊಸೆ ಬಂದಿಲ್ವೋ ಅಥವಾ ಜಗಳ ಕಾಯ್ಕೊಂಡು ತೌರು ಮನೆಗೆ ಹೋಗಿ ಕುಕ್ಕರಿಸಿದಾಳೋ?”
(ಕರ್ಮವೇ ಎಂದು ತಲೆ ಚೆಚ್ಚಿಕೊಳ್ಳುವಂತಾಯ್ತು).
‘ಪಾಪ ಮನೆ ಯಜಮಾನಿ ವಿಪರೀತ ಹಣ್ಣಾಗಿ ತೀರ ಸೋತಿದಾರೇಂತ ಕಾಣುತ್ತೆ?’
”ಹಾಗೇನಿಲ್ಲ. ಗಟ್ಟಿಮುಟ್ಟಾಗೇ ಇದಾರೆ”
ನನ್ನ ಈ ಮಾತು ಕೇಳಿದ್ದೇ ಆಕೆ ಸರ್ರನೆ ರೇಗುತ್ತಾ, ”ಗಟ್ಯಾಗಿದ್ರೆ ತಾವೇ ಅಡುಗೆ ಮಾಡೋಕೆ ಮತ್ತೇನಂತೆ ದಾಡಿ. ಈ ದುಡ್ಡಿರೋರ್ಗೆಲ್ಲ ಇದೇ ಸೊಕ್ಕು ನೋಡಿ. ತಮ್ಮ ಮನೆಲಿ ಅಡ್ಗ್ಯೋರಿದಾರೇಂತ ಎಲ್ರೆದ್ರುಗೆ ಜಂಭ ಕೊಚ್ಕೊಬೇಕಲ್ಲಾ……
ಅದಕ್ಕೇ.. ಈ ಥರ ದುಡ್ಡಿನ ಧಿಮಾಕು. ಸರೀ…., ಎರಡೆರಡು ಹೊತ್ತೂ ಹೋಗಿ ಬಿಸಿ ಬಿಸಿಯಾಗಿ ಮಾಡಿಟ್ಟು ಬರ್ಬೇಕೇನೋ ಪಾಪ?”
‘ಇಲ್ಲ. ಬೆಳಿಗ್ಗೆ 11 ಕ್ಕೆಲ್ಲ ತಿಂಡಿ ಮತ್ತು ಎರಡೂ ಹೊತ್ತಿಗಾಗೋ ಅಷ್ಟು ಅಡುಗೆ ಎರಡೂ ಮಾಡಿಡೋದು ಅಷ್ಟೆ’
‘‘ನಿಮ್ಮನ್ನೆಲ್ಲೋ ನೋಡ್ದಂಗಿದೆ. ಅವ್ರ ಮನೆಲಿ ಏನೇನು ತಿಂಡಿ ಅಡುಗೆ ಮಾಡ್ತೀರ?”
‘ಮನೆಯೋರು ಏನು ಮಾಡೀಂತಾರೊ ಅದೆಲ್ಲ’
”ಆಂ! ಈ ಕಾಲ್ದೋರು ಬಾಯ್ಬಾಬಿಟ್ಕೊಂಡು ತಿಂತಾರಲ್ಲಾ ಅದೇನು ಪಿಜ್ಜಾ, ಪಾನಿಪೂರಿ, ನೂಡಲ್ಸೂ ಫ್ರೈ಼ಡ್ ರೈಸೂ ಏನೇನೂ ಸುಂಟಿ ಸುಡುಗಾಡೂ ಅದನ್ನೂ ಮಾಡ್ತೀರಾ??!!”
‘ಹೂಂ’
”ಪರವಾಗಿಲ್ವೇ ಎಲ್ಲಾ ಕಲ್ತ್ಕೊಂಡಿದೀರ” ಬೆರಗಿನ ಮೆಚ್ಚುಗೆಯ ಶಹಬಾಸ್ಗಿರಿ.
‘ಅಡುಗೆ ಮಾಡೊಕೆ ಹೊರಟ್ಮೇಲೆ ಎಲ್ಲಾನೂ ಕಲೀಲೇ ಬೇಕು. ಇಲ್ದಿದ್ರೆ ಮನೆಯೋರಿಗೆ ಬೀದಿ ತಿಂಡಿ, ಹೋಟೆಲ್ ಚಪಲ ಜಾಸ್ತಿ ಆಗುತ್ತಲ್ವಾ?’
”ಸರಿಯಾಗಿ ಹೇಳಿದ್ರಿ. ಈಗ ನಮ್ಮನೆಲೆ ನೋಡಿ. ನಾನು ಮಾಡೋ ಅಡುಗೆ ಹಳೆ ಕಾಲದ್ದಾಗೋಯ್ತಂತೆ. ಅದು ಯಾರ್ಗೂ ಹಿಡಿಸೊಲ್ವಂತೆ. ನನ್ನ ಸೊಸೆ ಮಿಟಕಲಾಡಿಗೆ ತಾನೂ ಕೆಲಸ ಮಾಡಿ ಸಂಪಾದಿಸ್ತೀನಿ ಅನ್ನೊ ಕೊಬ್ಬು ಅಷ್ಟಿಷ್ಟಲ್ಲ. ಆ ಸುಂದರಾಂಗಿಗೆ ಕನ್ನಡಿ ಮುಂದೆ ನಿಂತ್ಕೊಳೋಕೆ ಎಷ್ಟು ಗಂಟೆ ಇದ್ರೂ ಸಾಲ್ದು. ಅಡುಗೆ ಮಾಡೊಕೆ ಟೈಮಿಲ್ವಂತೆ. ಅಡುಗೆ ಕೆಲಸಾಂದ್ರೆ ಬೇಜಾರಂತೆ. ದಿನಕ್ಕೆ ನಾಕು ಸಲ ಸುಡುಗಾಡು ಟೊಮಾಟೊನೋ ಸುಗ್ಗಿನೋ ಏನೋ ಅವ್ನಿಂದ ಏನೇನೂ ತರುಸ್ಕೊತಾಳೆ. ನನ್ ಮಗ ಕಮಕ್ ಕಿಮಕ್ ಅನ್ನೊಲ್ಲ. ಹೆಂಡ್ತಿ ಗುಲಾಮ ಆಗಿದಾನೆರೀ ಹೆಂಡ್ತಿ ಗುಲಾಮ ಆಗಿದಾನೆ.
ನಾನೇನಾದ್ರೂ ಗೊಣಗಿದ್ರೆ. ‘ಇದು ನಿನ್ ಕಾಲ ಅಲ್ಲಮ್ಮಾ. ಇದನ್ನೆಲ್ಲ ಇಷ್ಟೇ ರುಚಿಯಾಗಿ ನೀ ಮಾಡಿ ಹಾಕ್ತೀಯ ಹೇಳು. ಆಗೊಲ್ಲ ಅಲ್ವಾ. ಸುಮ್ನಿರು’ ಅಂತ ಬಾಯ್ಮುಚ್ಚಿಸ್ತಾನೆ. ಕಾಲ ತೀರ ಕೆಟ್ಹೋಯ್ತು. ನನಗೊಬ್ಬಳಿಗೇ ಬೇಯಿಸ್ಕೊ ಬೇಕು. ಅವರಿಗೆ ತರುಸೋವಾಗ ನಂಗೂ ತರಿಸಿದ್ರೆ ಬೇಡಾಂತೀನಾ. ಮನೆಲಿ ಸೊಸೆ ಅಂತ ಇದ್ದೂ ನಾನು ಈ ವಯಸ್ನಲ್ಲಿ ಒಬ್ಳಿಗೇ ಬೇಯಿಸ್ಕೊಬೇಕಾ? ಅವರೂ ಅರ್ಥ ಮಾಡ್ಕೊಬೇಕಲ್ವಾ?? ಮನೆ ಕಸ ಎತ್ಕೊಂಡೋಗೋಕೆ ಬರೋನು ನಮ್ಮನೇಲಿ ಎಸೆಯೋ ಅಡುಗೆ ತಿಂಡಿ ಪಾರ್ಸೆಲ್ಗಳ ಖಾಲಿ ಡಬ್ಬಿ ರಾಶಿ ರಾಶಿ ನೋಡಿ “ಏನ್ರಮಾ ನಿಮ್ಮನೆಲಿ ಅಡುಗೆ ಮಾಡೊ ಪಾತ್ರೇನೆಲ್ಲ ಹಳೆ ಪಾತ್ರೆಯೋನ್ಗೆ ಹಾಕಿಬಿಟ್ಟಿದೀರಾ?'” ಅಂತಾ ಗೇಲಿ ಮಾಡ್ತಾನೆ. ನಂಗೆಷ್ಟು ಅವಮಾನ ಅನ್ಸುತ್ತೆ ಗೊತ್ತಾ? ಆದ್ರೂ ಕಾಲ ತೀರ ಕೆಟ್ಹೋಯ್ತು. ನಾವೆಲ್ಲ ಹೀಗಿರಲಿಲ್ಲಪ್ಪ. ಅತ್ತೆ ಮಾವ ಗಂಡ ಅಂತ ಹೆದರ್ಕೊಂಡು ನಡೀತಿದ್ವಿ” ಎಂದು ಒಂದೇ ಗುಕ್ಕಿಗೆ ಒದರಿ
‘ಉಶ್ಶಪ್ಪಾ’ ಎಂದು ಉಸಿರೆಳೆದು ಅಲ್ಲೇ ಕಟ್ಟೆ ಮೇಲೆ ಕುಕ್ಕರಿಸಿದಳು ಆ ಮಹಾತಾಯಿ.
ನನಗೂ ಕಾಲೆಳೆದತ್ತ ಸುತ್ತಿ ಸುತ್ತಿ ಸಾಕಾಗಿತ್ತು. ಹಾಗೇ ನಾನು ಕುಳಿತುಕೊಂಡರೆ ಆಕೆಯ ನೋಟ! ಅಬ್ಬಾ! ಸಂಬಳ ತಗೊಂಡು ಕೆಲಸ ಮಾಡೋರು, ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಸಾಮರ್ಥ್ಯವಿರುವವರ ಸಮಸಮಕ್ಕೆ ಕುಳಿತುಕೊಳ್ಳುವುದೇ ಎಂದು ಅಸಮಾಧಾನದಿಂದ ಚುಚ್ಚುವಂತೆ…
‘‘ನಿಮ್ಮನ್ನೆಲ್ಲೋ ನೋಡ್ದಂಗಿದೆ” ಪೂಜೆಗಳಲ್ಲಿ ‘ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ’ ಎಂದು ಹೇಳುವಂತೆ ‘ನಿಮ್ಮನ್ನೆಲ್ಲೊ ನೋಡಿದೀನಿ. ನಿಮ್ಮನ್ನೆಲ್ಲೊ ನೋಡಿದೀನಿ’ ಎಂಬ ಮಧ್ಯಾಲಾಪ ನಡೀತಾನೇ ಇತ್ತು.
”ವಯಸ್ಸಾಯ್ತಲ್ವಾ? ಹಾಳಾದ್ದು ಎಲ್ಲಿ ನೋಡಿದೀನೀಂತ ನೆನಪೇ ಆಗ್ತಿಲ್ಲ” ಎಂದೂ ಅಲವತ್ತುಕೊಳ್ತಾ, ಎಷ್ಟ್ ಮನೆಲಿ ಕೆಲಸ ಮಾಡ್ತೀರ? ಮತ್ತೆ ಮುಂದುವರೆಯಿತು ನನ್ನ ಇತಿವೃತ್ತದ ವಿಚಾರಣೆ. ಧ್ವನಿಯಲ್ಲಿ ಸ್ವಲ್ಪ ತಿರಸ್ಕಾರ ಉಪೇಕ್ಷೆ.
‘ಮೊದಲಿಂದ ನಾನು ಒಂದೇ ಮನೆಲಿ ಅಡುಗೆ ಕೆಲ್ಸ ಮಾಡೋದು’
”ಎಷ್ಟ್ ವರ್ಷದಿಂದ ಮಾಡ್ತಿದೀರ?”
‘ನಾನು ಮದುವೆ ಆಗಿ ಬಂದಾಗಿನಿಂದ’
”ಹೌದೇ?!! ಪಾಪ. ಯಜಮಾನ್ರಿಗೆ ಸರಿಯಾದ ಕೆಲಸ ಸಂಪಾದನೆ ಇರದೆ ಬಡತನ ಇದ್ರೆ ಹೆಂಗಸರ ಪಾಡು ಇಷ್ಟೇ ತಾನೇ? ಆಗಿನ್ನೂ ನಿಮಗೆ ಚಿಕ್ಕವಯಸ್ಸು ಅಲ್ವೇ? ಒಂದ್ ನಾಲ್ಕೈದು ಮನೆಲಾದ್ರೂ ಅಡುಗೆ ಕೆಲಸ ಒಪ್ಕೊಬೇಕಾಗಿತ್ತು. ನಿಮ್ಮ ಯಜಮಾನ್ರಿಗೂ ಇನ್ನೊಂದಿಷ್ಟು ಸಹಾಯ ಆಗ್ತಿತ್ತಲ್ಲಾ??.” ಧಾರಾಳವಾಗಿ ಬಂತು ಬಿಟ್ಟಿ ಸಲಹೆ.
‘ಹಾಗೆಲ್ಲ ಜಾಸ್ತಿ ಮನೆಲಿ ನಾನು ಅಡುಗೆ ಮಾಡೋದು ಅವ್ರಿಗೆ ಇಷ್ಟ ಇರಲಿಲ್ಲ’ ಎಂಬ ನನ್ನ ಮಾತು ಕೇಳಿದ್ದೇ ಮತ್ತೆ ಸರ್ರನೆ ರೇಗುತ್ತಾ,
”ಇದೇ ನೋಡಿ ಗಂಡಸ್ರ ಕೊಬ್ಬು. ತನಗೆ ನೆಟ್ಗೆ ದುಡಿಯೋಕೆ ಆಗ್ದಿದ್ರೂ ಹೆಂಡ್ತೀಗೆ ಬೇಲಿ. ಹೇಗೂ ಎಲ್ಲಾ ತರಹದ ಅಡುಗೇನು ಮಾಡ್ತೀನಿ ಅಂದ್ರಲ್ಲ. ನನ್ನ ಮಗ ಸೊಸೇನ ಕೇಳಿ ನೋಡ್ತೀನಿ. ಒಳ್ಳೆ ಸಂಬಳಾನೂ ಕೊಡಿಸ್ತೀನಿ. ನಮ್ಮನೆಲೇ ಗೊಮಾಟೊ ಸುಗ್ಗಿಯೋರ ತರಹ ಅಡುಗೆ ಮಾಡ್ತಿರಾ??”
ಈಕೆಯ ಊಹೆ ಎಲ್ಲೀ ತನಕ ಹೋಗ್ತಿದೆ??!! ಇನ್ನು ಸಾಕು ತಮಾಷೆ ನೋಡಿದ್ದು ಅನಿಸಿ,’ಮ್ಯಾಡಂ, ನಾನು ಅಡುಗೆ ಮಾಡೋದು ನಮ್ಮನೆಲಿ ಮಾತ್ರ. ನಿಮಗೆ ನಾನು ಬೇರೆಯೋರ ಮನೆಲಿ ಅಡಿಗೆ ಮಾಡೋಳ ತರಹ ಕಾಣಿಸ್ತೀನಾ…???‘ ಎಂದೆ.
ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸದ ಆಕೆ ಒಂದು ಕ್ಷಣ ತಬ್ಬಿಬ್ಬಾಗಿ ಮತ್ತೆ ಪೆದ್ದು ಪೆದ್ದಾಗಿ ಬೆಬ್ಬೆಬ್ಬೇ ಎಂದು ನಗುತ್ತಾ ”ಅಯ್ಯೋ! ಅಯ್ಯೋ! ನಾನೆಲ್ಲಿ ಹಾಗೆ ಹೇಳಿದೆ.ನಿಮ್ಮ ಮುಖದಲ್ಲಿ ಸಾಕ್ಷಾತ್ ಬ್ಯಾಂಕ್ ಮ್ಯಾನೇಜರ್ ಖಳೆ ಇದೆ” ಎಂದರು.
‘ಹೌದಾ? ಇಷ್ಟೊತ್ತೂ ಅಡುಗೆಯವಳು ಅಂತಾನೆ ತಿರಸ್ಕಾರದಿಂದ ಮಾತಾಡಿಸಿದ್ರಿ. ಅದೇನು? ಎಲ್ಲಾ ಬಿಟ್ಟು ನನ್ನ ಮುಖದಲ್ಲಿ ಈಗ ಬ್ಯಾಂಕ್ ಮ್ಯಾನೆಜರ್ ಖಳೆ ಬಂದ್ಬಿಡ್ತು?’ ಎಂದೆ ನಗುತ್ತಾ.
”ನನ್ನ ಹಾಳು ಬುದ್ಧಿಗೆ ಮಂಕು ಕವಿದಿತ್ತು. ನಿಮ್ಮ ಮುಖದಲ್ಲಿ ಇಂಜಿನಿಯರ್ ,ಡಾಕ್ಟ್ರು ಖಳೇನೂ ಇದೆ. ನಿಮ್ಮನ್ನೆಲ್ಲೋ ನೋಡಿದೀನಿ. ತುಂಬಾ ಸಲ ನೋಡಿದೀನಿ. ಹಾಳಾದ್ದು ನೆನಪಿಗೆ ಬರವಲ್ದು. ತಪ್ಪು ತಿಳೀಬೇಡಿ. ನಿಮ್ಮ ಹೆಸರು….??” ಎಂದು ಅನುಮಾನಿಸುತ್ತಾ ಕೇಳಿದರು.
ಪರವಾಗಿಲ್ವೇ ನನ್ನ ಮುಖದಲ್ಲಿ ಮಲ್ಟಿಪಲ್ ಖಳೆ ಕಂಡಿದಾರೆ ಈಕೆ !! ‘ಶಹಬಾಸ್’ ಎಂದುಕೊಳ್ಳುವಾಗ ಅದ್ಯಾಕೋ ‘ಸಿಕ್ಕಿದ್ರೆ ಜುಟ್ಟು, ಇಲ್ದಿದ್ರೆ ಕಾಲು’ ಎಂಬ ಗಾದೆ ನೆನಪಾಗಿ ನಗು ಬಂತು.
ನನ್ನ ಹೆಸರು ಹೇಳಿದೆ.
”ಪೂರ್ತಿ ಹೆಸರು???”
ಪೂರ್ತಿ ಹೆಸರು ಕೇಳಿದ ಕೂಡಲೇ…..ಕುಳಿತಲ್ಲಿಂದಲೇ ದಬಕ್ಕನೆ ಬಾಗಿ ನನ್ನ ಕೈಗಳನ್ನು ಹಿಡಿದು ಕೊಂಡು, ”ನಾನೊಂದು ಪೆದ್ದುಮುಂಡೆದು. ಮಂಕು ದಿಣ್ಣೆ. ನನ್ನ ಬುದ್ಧಿಗೆ ಏನು ಪೆಕ್ರತನಾ ಬಡಿದಿತ್ತೋ. ಅಯ್ಯೋ ದೇವ್ರೇ, ನೀವು ಸಾಕ್ಷಾತ್ ಸರಸ್ವತಿ ಪುತ್ರಿ. ಚಂದನ ಟಿವಿಯಲ್ಲಿ ಬಹಳ ಸಲ ನಿಮ್ಮ ಇಂಟರ್ವ್ಯೂ ನೋಡಿದೀನಿ….. ಬೆಂಗಳೂರು ಆಕಾಶವಾಣಿಲೂ ಕೇಳಿದೀನಿ………… …..Sorry sorry. ಕ್ಷಮಿಸ್ಬಿಡಿ. ನಾ ಮಾಡಿದ್ ತಪ್ಪನ್ನು ಹೊಟ್ಟೆಗ್ಹಾಕ್ಕೊಂಬಿಡಿ. ಮನಸ್ನಲ್ಲಿ ಇಟ್ಕೊಬೇಡಿ ಎಂದು ತಮ್ಮ ಕೆನ್ನೆಕೆನ್ನೆ ಬಡಿದುಕೊಳ್ತಾ, ನಮ್ಮನೆ ಇಲ್ಲೇ ಹತ್ತಿರ್ದಲ್ಲಿದೆ. ಬನ್ನಿ. ಬನ್ನಿ ದಯವಿಟ್ಟು ಬನ್ನಿ”ಎಂದು ಕೈ ಕೈ ಹಿಡಿದು ಬೇಡಿಕೊಂಡರು.
ಆಕೆಯ ಹೊಗಳಿಕೆಯ ಧಾರೆಯಿಂದ ವಿಪರೀತ ಮುಜುಗರವಾಗಿ ಇನ್ನೂ ಹೆಚ್ಚಿನ ಹೊನ್ನ ಬಲೆಯೊಳಗೆ ಸಿಕ್ಕಿ ಹಾಕಿಕೊಳ್ಳುವ ಮುಂಚೆ ಬೇಗ ಆಕೆಯ ಕೈಯಿಂದ ತಪ್ಪಿಸಿಕೊಳ್ಳಲು,
’11 ಗಂಟೆಯೊಳಗೆ ಅಡುಗೆ ತಿಂಡಿ ಮಾಡಿ ಮುಗಿಸ್ಬೇಕಲ್ವಾ? ಹೊತ್ತಾದ್ರೆ ಮನೆಯೋರು ಸಿಟ್ಟಾಗ್ತಾರೆ. ಸಂಬಳ ಕೂಡ ಕಟ್ ಮಾಡ್ಬಹುದು.‘ ಎಂದು ನಗುತ್ತಾ ಬೇಗಬೇಗನೆ ಅಲ್ಲಿಂದ ಓಡು ನಡಿಗೆಯಲ್ಲಿ ಜಾರಿಕೊಂಡೆ.
– ರತ್ನ
Nice article. ಲಘು ಹಾಸ್ಯ ಮಿಶ್ರಿತ.
ತೆಳು…ಹಾಸ್ಯ..ಹೊಕ್ಕಾದ. ಲೇಖನ ವಾದರೂ…ವ್ಯಕ್ತಿ ಗಳ. ಆತುರದ ಸ್ವಭಾವ… ಅಂತರಂಗದ. ತಳಮಳ…ಅನಾವರಣ ಗೊಂಡು..ಮುದಗೊಂಡಿತು…
ಆತುರ ಬುದ್ಧಿಯಿಂದ ಅನಾಹುತ!! ಲಘು ಹಾಸ್ಯಮಿಶ್ರಿತ ಲೇಖನ ಇಷ್ಟವಾಯ್ತು.
ಹಾಸ್ಯ ಮಿಶ್ರಿತವಾದರೂ ಮನುಷ್ಯ ಸ್ವಭಾವದ ಅನಾವರಣದೊಂದು ಪ್ರಸಂಗದ ಚಂದದ ಬರಹ